ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್, ಬ್ರೇಕ್ ಫೇಲಾಗಿ ಚಾಲಕನ ನಿಯಂತ್ರಣ ತಪ್ಪಿ ಶಾಲೆಯ ಕಾಂಪೌಂಡ್ ಮತ್ತು ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಬಳಿಯಲ್ಲಿ ನಡೆದಿದೆ.
ಅಲ್ಲದೆ, ಬಸ್‌ನಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದ ಅಮೃತ್ರಾಜ್ (34) ಮೃತ ವ್ಯಕ್ತಿ.
ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಸಕಲೇಶಪುರದ ಬಾಗೆ ಗ್ರಾಮಕ್ಕೆ ತಲುಪುತ್ತಿದ್ದಂತೆ ಬಸ್‌ನ ಆ್ಯಕ್ಸಲ್ ತುಂಡಾಗಿ ರಸ್ತೆ ಪಕ್ಕದ ಜಮೀನಿಗೆ ನುಗ್ಗಿ ಮನೆಗೆ ಡಿಕ್ಕಿಹೊಡೆದು, ಜೆಎಸ್ಎಸ್ ಶಾಲೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬಸ್‌ನ ಕಿಟಕಿ ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕ ಅಮೃತರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನಿನಲ್ಲಿದ್ದ ಮನೆಗೂ ಬಸ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತ್ತೊಂದು ವಿದ್ಯಾಸಂಸ್ಥೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ!
ಬಸ್ ಶಾಲಾ ಕೌಂಪಡ್‌ಗೂ ಢಿಕ್ಕಿ ಹೊಡೆದಿದ್ದು, ಶಾಲೆಯ ಕಟ್ಟಡಕ್ಕೆ ಹಾನಿಯಾಗಿದೆ. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.