ಸಂದರ್ಶನ | ಜ್ಞಾನದ ಕಟ್ಟುವಿಕೆ, ಪಸರಿಸುವಿಕೆ ಎರಡೂ ಪರಿಣಾಮಕಾರಿಯಾಗಿ ಕನ್ನಡದಲ್ಲಿ ಆಗಬೇಕಾಗಿದೆ: ವಸಂತ ಶೆಟ್ಟಿ

Date:

Advertisements

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆ ಇಂಗ್ಲಿಷ್‌ ಮಾಧ್ಯಮವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2025-26 ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ. 75 ವಿದ್ಯಾರ್ಥಿಗಳಿಗಿಂತ ಹೆಚ್ಚಿಗೆ ಇರುವ 1419 ಶಾಲೆಗಳು ಈ ನಿರ್ಧಾರದ ಭಾಗವಾಗಿದೆ. ಈ ವರ್ಷದ ಬಜೆಟ್‌ಲ್ಲಿ ರಾಜ್ಯದ 2000 ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶುರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಅದರಂತೆ ಪ್ರತಿ ಜಿಲ್ಲೆಗಳಿಂದ ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿತ್ತು. ಈ ವರ್ಷದಲ್ಲಿ ಸರ್ಕಾರವು 500 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು (ಸರ್ಕಾರಿ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ವಸತಿ ಶಾಲೆ) ಮತ್ತು ಮುಂದಿನ ಮೂರು ವರ್ಷಗಳಲ್ಲಿ ಇದೇ ಮಾದರಿಯ 3000 ಶಾಲೆಗಳನ್ನು ಪ್ರಾರಂಭಿಸಲು ಉತ್ಸುಕವಾಗಿದೆ.

ಇದರ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಈ ನಿರ್ಧಾರವನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ. ಮಗುವಿಗೆ ಪರಿಸರ ಭಾಷೆ ಮತ್ತು ತಾಯ್ನುಡಿಯಾದ ಕನ್ನಡದಲ್ಲಿ ಎಳೆಯದರಿಂದ ಗುಣಮಟ್ಟ ಶಿಕ್ಷಣ ದೊರಕಬೇಕು. ಆಗ ಮಾತ್ರ ಮಗುವಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯ ಬರುತ್ತಿರುವಾಗ ಉದ್ಯಮಿ ಮತ್ತು ಅಂಕಣಕಾರರಾದ ವಸಂತ ಶೆಟ್ಟಿಯವರು ಈ ದಿನ.ಕಾಂ ಗೆ ನೀಡಿದ ಸಂದರ್ಶನ ಇಲ್ಲಿದೆ.

ಪ್ರಶ್ನೆ: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಪಾಠ ಮಾಡುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈ ಸರ್ಕಾರದಲ್ಲಿ ದೂರದೃಷ್ಟಿಯುಳ್ಳವರು ಇಲ್ಲ. ಸರ್ಕಾರಕ್ಕೆ ನಿಜವಾಗಿಯು ಶಿಕ್ಷಣದ ಬಗ್ಗೆ ಕಾಳಜಿ ಇದ್ದಲ್ಲಿ ಕೆಲವು ಮೂಲಭೂತ ವಿಷಯಗಳನ್ನ ಅರ್ಥೈಸಿಕೊಳ್ಳಬೇಕು. ಅದೇನೆಂದರೆ ಮನಶಾಸ್ತ್ರಜ್ಞರು, ವಿಜ್ಞಾನಿಗಳು, ವಿಶ್ವಸಂಸ್ಥೆ ಮಗುವಿನ ಕಲಿಕೆಯ ಪ್ರಕ್ರಿಯೆಯ ಬಗ್ಗೆ ಏನು ಹೇಳುತ್ತಾರೆಂದು. ಮಗುವಿನ ಕಲಿಕೆಯ ಪ್ರಕ್ರಿಯೆಯು ಮೊದಲು ಮನೆಯಿಂದ ಶುರುವಾಗಿ ನಂತರ ಅಂಗಳದಲ್ಲಿ, ತದನಂತರ ಶಾಲೆಯಲ್ಲಿ ಮುಂದುವರೆಯುತ್ತದೆ. ಮೊದಲ ಮತ್ತು ಎರಡನೆಯ ಹಂತದಲ್ಲಿ ಮಗುವಿನ ಭಾಷೆಯೆ (ಕನ್ನಡ) ಇದೆ. ಬೆಂಗಳೂರಿನ ಕೆಲವು “ಗೇಟೆಡ್‌ ಕಮ್ಯೂನಿಟಿ” ಹೊರತುಪಡಿಸಿದರೆ ಕರ್ನಾಟಕದ ಉಳಿದೆಲ್ಲ ಕಡೆ ಇದೆ ರೀತಿಯ ವಾತಾವರಣವಿದೆ. ಆದ್ದರಿಂದ ಶಾಲೆಯ ಹಂತದಲ್ಲಿ ಮಗುವಿಗೆ ಸಹಜ ಕಲಿಕೆಯಾಗಲು ಶಿಕ್ಷಣವನ್ನ ಮುಂದುವರೆದ ಭಾಗವಾಗಿ ಕನ್ನಡದಲ್ಲಿ ಕೊಡಬೇಕಾಗಿದೆ. ಫಿನ್ಲ್ಯಾಂಡ್‌ ದೇಶದ ಶಿಕ್ಷಣವನ್ನ ಅತ್ಯುತ್ತಮವೆಂದು ಪರಿಗಣಿಸುವ ಅಮೆರಿಕ ಮುಂತಾದ ದೇಶಗಳು ಅಲ್ಲಿ ಹೋಗಿ ಅಧ್ಯಾಯನ ನಡೆಸುತ್ತವೆ. ಆ ದೇಶದಲ್ಲಿ ಶಿಕ್ಷಣವನ್ನ ಫಿನ್ಲಿಷ್‌ ಭಾಷೆಯಲ್ಲಿ ನೀಡಲಾಗುತ್ತಿದೆ. ಆದ್ದರಿಂದ ನಮ್ಮಲ್ಲೂ ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವದ ಕುರಿತು ವೈಜ್ಞಾನಿಕವಾದ ಜನಜಾಗೃತಿ ಮೂಡಿಸಬೇಕಾಗಿದೆ. ಇವತ್ತು ಸರ್ಕಾರ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್‌ ಮಾಧ್ಯಮ ಶುರು ಮಾಡಲು ಹೊರಟಿರುವುದು ಅಗತ್ಯವೆಂದು ನನಗನಿಸುವುದಿಲ್ಲ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಕ್ಷದ ರಾಜಕಾರಣಿಗಳ ಮಾಲಿಕತ್ವದಲ್ಲಿ ಇದೆ ಮತ್ತು ಇದಕ್ಕೆ ವಾಣಿಜ್ಯ ಆಯಾಮವಿರುವ ಕಾರಣ ಮೇಲಿನ ವಿಚಾರವಾಗಿ ಪರಿಹಾರ ಕಂಡುಕೊಳ್ಳಲು ಯಾರಿಗೂ ಹೆಚ್ಚು ಆಸಕ್ತಿ ಇಲ್ಲ.

ಪ್ರಶ್ನೆ: ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಮರ್ಪಕವಾಗಿ ಕಲಿಸಿಕೊಡಲು ಏಕೆ ಸಾಧ್ಯವಾಗುತ್ತಿಲ್ಲ ?

ಮಗು ಯಾವುದೆ ಹೊಸ ಭಾಷೆಯನ್ನ ಕಲಿಯಬೇಕಾದರೆ ಮೊದಲು ಆ ಭಾಷೆ ಮಗುವಿನ ಕಿವಿಯ ಮೇಲೆ ಬೀಳಬೇಕು ಆಗ ಮಗು ಮಾತನಾಡಲು ಪ್ರಯತ್ನಪಡುತ್ತದೆ. ನಂತರ ಆ ಭಾಷೆಯು ಮಗುವಿಗೆ ಕಾಣಬೇಕು, ತದನಂತರ ಮಗುವಿಗೆ ಬರೆಯಲು ಕಲಿಸಿಕೊಡಬೇಕು. ಇದುಮಗುವಿಗೆ ಒಂದು ಭಾಷೆಯನ್ನ ಕಲಿಸಿಕೊಡಲು ಇರಬೇಕಾದ ಕ್ರಮ. ಆದರೆ ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಅನ್ನು ಮೊದಲು ಬರೆಯಲು ಕಲಿಸಿಕೊಡುತ್ತಿದ್ದಾರೆ. ಕೇಳಿಸಿಕೊಡುವುದಕ್ಕೆ ಹೆಚ್ಚಿನ ಒತ್ತು ಕೊಡದೆ ಇರುವುದರಿಂದ ಮಕ್ಕಳಿಗೆ ಇಂಗ್ಲಿಷ್‌ ಭಾಷೆಯನ್ನ ಕಲಿಸಿಕೊಡಲು ಎಡುವುತ್ತಿದ್ದಾರೆ. ಈಗ ಇಂಗ್ಲಿಷ್‌ ಮಾಧ್ಯಮ ಶುರು ಮಾಡುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಇಂಗ್ಲಿಷ್ ಭಾಷೆಯನ್ನು ತಂತ್ರಜ್ಞಾನದ ಉಪಕರಣಗಳನ್ನ ಬಳಸಿಕೊಂಡು ಕಲಿಸಿಕೊಡಲು ಪ್ರಯತ್ನ ಮಾಡಿದರೆ ಅದು ಯಶಸ್ವಿ ಆದೀತು. ಇವತ್ತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸರ್ಕಾರ ಜನರ ಒತ್ತಾಯದ ಮೇರೆಗೆ ಮಾಡಿದ್ದೇವೆ ಎಂದು ಹೇಳಿ ಸಮರ್ಥಿಕೊಳ್ಳುತ್ತದೆ. ಹಾಗೆ ಇದರ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕರ ಒತ್ತಡ ಇದ್ದ ಹಾಗೆ ಕಾಣುತ್ತದೆ. ಅವರಿಗೆ ಎಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿ ಹೋಗಿ ತಮ್ಮ ಕೆಲಸ ಕೈತಪ್ಪಿ ಹೋಗುತ್ತದೊ ಅನ್ನೋ ಆತಂಕವಿದೆ. ಆದ್ದರಿಂದ ಅವರಿಗೆ ಈ ಎರಡು ಭಾಷೆ ಮಾಧ್ಯಮ ಇದ್ದಲ್ಲಿ ತಮ್ಮ ಕೆಲಸಕ್ಕೆ ಯಾವ ಆಪತ್ತೂ ಬರುವುದಿಲ್ಲ ಎಂಬ ಭಾವನೆ ಮನೆ ಮಾಡಿದೆ. ಯಾವಾಗಲೂ ಎಲ್ಲರ ಹಿತಾಸಕ್ತಿಯು ಒಂದು ತೀರಕ್ಕೆ ಬಂದು ತಲುಪಬೇಕು. ಆದರೆ ಇಲ್ಲಿ“ಹಿತಾಸಕ್ತಿಯ ಸಂಘರ್ಷವಿದೆ”. ಇದರಿಂದ ಪರಿಹಾರವೆನ್ನುವುದು ದೂರದ ಮಾತಾಗಿದೆ.

ಪ್ರಶ್ನೆ: ಸರ್ಕಾರಿ ಕನ್ನಡ ಮಾಧ್ಯಮಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಭವಿಷ್ಯ ಹೇಗಿದೆ? ಉದ್ಯೋಗ ಅವಕಾಶಗಳು ಹೇಗಿವೆ? ಇಂದು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿ ಯಾವ ಸವಾಲನ್ನ ಎದುರಿಸುತ್ತಿದ್ದಾರೆ?

ಸರ್ಕಾರದ ಅನುದಾನದಿಂದ ನಡೆಸಲಾಗುತ್ತಿರುವ ಗುಣಮಟ್ಟದ ಶಾಲೆಗಳು ಕೆಲವು ಕಡೆ ಇದೆ. ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕುಸಿತವಾಗಿರುವ ಕಾರಣ ಮಕ್ಕಳು ನಿಜ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಕರಿಗೆ ಹೊಸ ವಿಷಯಗಳ ಬಗೆ ತಿಳಿಸಿಕೊಡುವ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆದಂತೆಲ್ಲ ಬಹುತೇಕರು ಶಿಕ್ಷಕ ವೃತ್ತಿಗಿಂತ ಸಾಫ್ಟವೇರ್‌ ವೃತ್ತಿಯನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೇವೆ ಮತ್ತು ಪಾಠ ಮಾಡುವ ಮನೋಭಾವವಿದ್ದ ಅನೇಕರು ಶಿಕ್ಷಣ ಕ್ಷೇತ್ರದಿಂದ ಹೊರ ಹೋಗಿರುವ ಕಾರಣ ಈಗ ಶಿಕ್ಷಕರಾಗುತ್ತಿರುವವರಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಹಾಗೇ ಇವತ್ತು ಕನ್ನಡದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸರಿಯಾದ ವ್ಯವಸ್ಥೆ ಮತ್ತು ಮುಖ್ಯ ಅನುಕೂಲಗಳಿಲ್ಲ. ಕನ್ನಡ ಮಾಧ್ಯಮದಲ್ಲಿ ಪಿಯುಸಿ ಹಂತದಲ್ಲಿ ವಿಜ್ಞಾನ ಕಲಿಸಿಕೊಡಲು ಪ್ರಯತ್ನಗಳು ನಡೆದಿವೆ. ಆದರೆ ಅದು ಯಶಸ್ವಿ ಆಗಿಲ್ಲ. ಕಾರಣ ಪಿಯುಸಿ ಆದ ಮೇಲೆ ಮುಂದೆ ಕನ್ನಡದಲ್ಲಿ ವಿದ್ಯಾಭ್ಯಾಸ ನಡೆಸಲು ಯಾವುದೇ ವ್ಯವಸ್ಥೆ ಇಲ್ಲ. “ನೀಟ್‌” ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಕನ್ನಡ ಮಾಧ್ಯಮದಲ್ಲಿ ಓದಲು ಬಯಸುವರಿಗೆ ಅಗತ್ಯ ಪಠ್ಯಪುಸ್ತಕಗಳಿಲ್ಲ. ಈ ಎಲ್ಲಾ ಅಂಶಗಳನ್ನು ಬದಿಗಿರಿಸಿ “ಹರಕೆ ಕುರಿ” ತರ ಮಕ್ಕಳಿಗೆ ಕನ್ನಡದಲ್ಲಿ ಪಿಯುಸಿ ಮಾಡು ಎಂದು ಯಾವ ಪಾಲಕರು ಸೂಚಿಸುವುದಿಲ್ಲ.

ಪ್ರಶ್ನೆ: ಕೆಲವು ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ಅದರ ಮಾದರಿಯಂತೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲು ಸಾಧ್ಯವಿಲ್ಲವೇ?

ಒಂದು ಖಾಸಗಿ ಶಾಲೆಗಳಲ್ಲಿ ಎದುರಾಗುವ ಸವಾಲುಗಳನ್ನ ಪರಿಹರಿಸಲು ಅಲ್ಲಿ ಒಂದು ಅಚ್ಚುಕಟ್ಟಾದ ವ್ಯವಸ್ಥೆ ಇರುತ್ತದೆ. ಆದರೆ ಸರ್ಕಾರ ಸಾವಿರಾರು ಸಂಖ್ಯೆಯ ಶಾಲೆಗಳನ್ನು ನಿರ್ವಹಿಸಬೇಕಾಗಿರುತ್ತದೆ. ಅಷ್ಟು ಶಾಲೆಗಳನ್ನು ನಿರ್ವಹಿಸುವ ಮತ್ತು ಅಲ್ಲಿನ ವಿವಿಧ ಸಮಸ್ಯೆಗಳನ್ನ ಪರಿಹರಿಸುವ ಮತ್ತು ಅಗತ್ಯಗಳನ್ನು ಪೂರೈಸುವ ಜವಬ್ದಾರಿ ಮತ್ತು ಉತ್ತರದಾಯಿತ್ವವನ್ನ ತೆಗೆದುಕೊಳ್ಳಲು ಯಾರು ಸಿದ್ಧರಿಲ್ಲ. ಹಾಗೆ ಮತ್ತೊಂದು ಮುಖ್ಯ ಸಂಗತಿ ಏನೆಂದರೆ ಶಿಕ್ಷಣ ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಕಾಳಜಿಯಿರುವವರನ್ನ ಶಿಕ್ಷಣ ಮಂತ್ರಿ ಮಾಡಬೇಕೇ ಹೊರತು ಯಾರಿಗೊ ಕೊಟ್ಟರಾಯ್ತು ಅನ್ನೊ ಉಡಾಫೆ ಇರಬಾರದು.

ಪ್ರಶ್ನೆ: ಈಗಿನ ಪರಿಸ್ಥಿತಿಯನ್ನು ಗಮವಿಸಿದರೆ ಕನ್ನಡ ಮಾಧ್ಯಮದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯ ಓದಿ, ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾದಾಗ ಹೊಸ ಪರಿಭಾಷೆಗಳಿಂದ ಸಮಸ್ಯೆಯಾಗುವುದಿಲ್ಲವೇ? ಅಥವ ಕನ್ನಡ ಮಾಧ್ಯಮದಲ್ಲಿ ಓದುವಾಗಲೇ ಇಂಗ್ಲಿಷ್‌ ಪರಿಭಾಷೆ ಬಳಸಿಕೊಳ್ಳುವುದು ಒಳ್ಳೆಯದು ಅಲ್ವ? ಯಾವ ರೀತಿಯಲ್ಲಿ ಈ ಒಂದು ಸವಾಲನ್ನು ಎದುರಿಸಬೇಕು?

ಈ ಪ್ರಶ್ನೆಗೆ ದೂರದ ಮತ್ತು ಹತ್ತಿರದ ಎರಡು ನೆಲೆಯ ಉತ್ತರಗಳಿವೆ. ದೂರದ ನೆಲೆಯ ಉತ್ತರವೇನೆಂದರೆ, ಕನ್ನಡ ಮಾಧ್ಯಮದ ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕದಲ್ಲಿ ಹೆಚ್ಚು ಕಷ್ಟಕರವಾದ ಕನ್ನಡವಲ್ಲದ ಪದಗಳನ್ನು ಬಳಸಲಾಗಿದೆ. ಈ ಪದಗಳನ್ನು ಯಾಕೆ ಸೇರಿಸಲಾಗಿದೆ ಎಂಬುದಕ್ಕೆ ಯಾರ ಬಳಿಯು ಉತ್ತರವಿಲ್ಲ. ಪಠ್ಯಪುಸ್ತಕ ರಚನೆ ಮಾಡಿದವರ್ಯಾರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿಲ್ಲ ಅನ್ನೋದು ನನ್ನ ನಂಬಿಕೆ. ಓದಿಸುತ್ತಿದ್ದರೆ ಅದರ ಕಷ್ಟ ಅವರ ಅರಿವಿಗೆ ನಿಲುಕುತ್ತದೆ. ಆದ್ದರಿಂದ ಕನ್ನಡದ್ದೇ ಆದ ಪಾರಿಭಾಷಿಕ ಪದಗಳನ್ನು ಕಟ್ಟಬೇಕಾಗಿದೆ. ಇದಕ್ಕೆ ಸಮುದಾಯ ಮಟ್ಟದಲ್ಲಿ ಎಲ್ಲರೂ ಪಾಲ್ಗೊಂಡು ಶ್ರಮ ಹಾಕಬೇಕಿದೆ. ಹತ್ತಿರದ ನೆಲೆಯ ಉತ್ತರವೇನೆಂದರೆ, ಈಗಾಗಲೇ ಬಳಸಲಾಗುತ್ತಿರುವ ಪಾರಿಭಾಷಿಕ ಪದಗಳ ಪಕ್ಕದಲ್ಲಿ ಇಂಗ್ಲಿಷಿನ ಅರ್ಥವನ್ನು ಸೇರಿಸಬಹುದು ಅಥವ ರೆಫರೆನ್ಸ್‌ ಪುಸ್ತಕ ಇಲ್ಲವೇ ಇಂಗ್ಲಿಷ್‌ ಮಾಧ್ಯಮದ ಗಣಿತ ಮತ್ತು ವಿಜ್ಞಾನ ಪುಸ್ತವನ್ನ ಹೆಚ್ಚುವರಿಯಾಗಿ ಕೊಡಬಹುದು. ಆಗ ಮಕ್ಕಳಿಗೆ ಇಂಗ್ಲಿಷಿನ ಪಾರಿಭಾಷಿಕ ಪದಗಳ ಪರಿಚಯವಾಗುತ್ತದೆ.

ಪ್ರಶ್ನೆ: ಕನ್ನಡ ಮಾಧ್ಯಮದಲ್ಲಿ ಓದಿದ ಪೋಷಕರೇ ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮದಲ್ಲಿ ಓದಿಸಲು ಹಿಂಜರಿಯುವಂತಹ ಪರಿಸ್ಥಿತಿಯಿದೆ? ಈ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು, ಸುಧಾರಿಸಲು ಸಾಧ್ಯವೇ ಇಲ್ಲ ಎನ್ನುವಂತೆ ಸಮಾಜ ಮತ್ತು ರಾಜಕೀಯ ವಲಯ ಮಾತಾಡುತ್ತಿರುವುದರ ಕುರಿತು ಏನು ಹೇಳುವಿರಿ?

ಇದೊಂದು ಆಳವಾದ ಸಮಸ್ಯೆ, ಇದಕ್ಕೆ ಪರಿಹಾರವಾಗಿ ನಾವು ಗುಣಮಟ್ಟದ ಮಾದರಿ ಕನ್ನಡ ಮಾಧ್ಯಮ ಶಾಲೆಗಳನ್ನ ಕಟ್ಟಿ ತೋರಿಸಬೇಕಾಗಿದೆ. ಅದರಲ್ಲು ವಿಶೇಷವಾಗಿ ನಗರ ಪ್ರದೇಶದಲ್ಲಿ ಈ ಕೆಲಸ ಮಾಡಬೇಕಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳಿ, ಧಾರವಾಡ ಮುಂತಾದ ದೊಡ್ಡ ನಗರಗಳಲ್ಲಿ ಯಶಸ್ವಿ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಕಿದೆ. ಸಮಾಜದಲ್ಲಿ ಅಭಿಪ್ರಾಯ ರೂಪಿಸುವ ಸಾಮಾರ್ಥ್ಯವಿರುವ, ಬೌದ್ಧಿಕ ಸಾಮರ್ಥ್ಯ ಉಳ್ಳವರಾದ ಮಧ್ಯಮ ವರ್ಗದವರು ಕನ್ನಡ ಮಾಧ್ಯಮದಿಂದ ದೂರ ಉಳಿದರೆ ಈ ಶಾಲೆಗಳು ಪುನಶ್ಚೇತನವಾಗದು. ಆದ್ದರಿಂದ ಈ ವರ್ಗದವರು ತಮ್ಮ ಮಕ್ಕಳನ್ನು ಸೇರಿಸುವಂತೆ ಈ ಶಾಲೆಗಳನ್ನ ಕಟ್ಟಬೇಕಿದೆ. ಮೈಸೂರಿನ “ಅರಿವು” ಶಾಲೆ ಇದಕ್ಕೆ ಸೂಕ್ತ ಉದಾಹರಣೆ. ಜನಾರ್ಧನ್‌ ಎಂಬುವರು ಇನ್ಪೋಸಿಸ್‌ನ ಸಾಫ್ಟ್‌ವೇರ್‌ ಕೆಲಸ ಬಿಟ್ಟು, ಸಹಕಾರ ಚಳವಳಿಯಂತೆ ಈ ಶಾಲೆಯನ್ನು ಆರಂಭಿಸಿದರು. ಹತ್ತನೆ ತರಗತಿಯ ತನಕ ಶಿಕ್ಷಣ ಕೊಡುವ ಈ ಶಾಲೆಯಲ್ಲಿ ಎಲ್ಲಾ ಬಗೆಯ ಕಲಿಕೆಯಿದೆ. ಸಂಗೀತ, ಕಂಪ್ಯೂಟರ್‌ ಶಿಕ್ಷಣ, ವಿಜ್ಞಾನ ಪ್ರಯೋಗ, ಜಾನಪದ ಕುಣಿತ ಮುಂತಾದ ಎಲ್ಲಾ ರಂಗಗಳಲ್ಲೂ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇದೊಂದು ಯಶಸ್ವಿ ಮಾದರಿ ಶಾಲೆಯಾಗಿ ನಮ್ಮ ಕಣ್ಮುಂದೆ ನಿಂತಿದೆ. ಈ ತರಹದ ನಾಲ್ಕೈದು ಶಾಲೆಗಳು ಬೆಂಗಳೂರಿನಂತ ನಗರ ಪ್ರದೇಶದಲ್ಲಿ ಶುರುವಾಗಬೇಕಿದೆ.

ಪ್ರಶ್ನೆ: ಕನ್ನಡ ಮಾಧ್ಯಮವನ್ನು ವಿಶ್ವದರ್ಜೆಗೆ ಏರಿಸಲು ಸಾಧ್ಯವಿಲ್ಲವೇ? ಜಗತ್ತಿನ ಬೇಡಿಕೆ ತಕ್ಕಂತೆ ಕನ್ನಡವನ್ನು ಶಿಕ್ಷಣದಲ್ಲಿ ರೂಪಂತರಿಸೋದಕ್ಕೆ ಅದರ ಪ್ರಸ್ತುತತೆಯನ್ನ ಕಾಪಾಡಿಕೊಳ್ಳೋದಕ್ಕೆ ಆಗುವುದಿಲ್ಲವೇ?

ಇಪ್ಪತೊಂದನೆ ಶತಮಾನದ ಟ್ರೆಂಡ್‌ಗಳನ್ನ ಗಮನಿಸಿದರೆ ಜಗತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಜೆನೆಟಿಕ್ಸ್‌ಗೆ ಸಂಬಂಧಿಸಿದ, ಮನುಷ್ಯನ ಜೀವಿತಾವಧಿಯನ್ನ ಹೆಚ್ಚಿಸುವಲ್ಲಿ, ಕಾಯಿಲೆಗಳನ್ನ ನಿವಾರಿಸುವಲ್ಲಿ ಮತ್ತು ಆಳವಾದ ಅಧ್ಯಯನ ಮಾಡುವುದರಲ್ಲಿ ಎಷ್ಟು ಮುಂದುವರೆದಿದೆ ಅಂತ ತಿಳಿಯುತ್ತದೆ. ಹಾಗೆ ಇವತ್ತು ಹವಮಾನ ವೈಪರಿತ್ಯವು ಕೂಡ ಜಗತ್ತನ್ನು ಪೀಡಿಸುತ್ತಿದೆ. ಇದರಿಂದ ಅಂತಾರಾಷ್ಟ್ರಿಯ ಮಟ್ಟದ ರಾಜಕೀಯ ವ್ಯವಸ್ಥೆಯಲ್ಲು ನಿರಂತರ ಬದಲಾವಣೆ ಸಂಭವಿಸುತ್ತಿದೆ. ಈ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ಮೂಲಭೂತವಾಗಿ ಬೇಕಿರುವುದು ಆಳವಾದ ಕಲಿಕೆ. ಆದ್ದರಿಂದ ನಮ್ಮ ರಾಜ್ಯದಲ್ಲಿ ಈ ಆಳವಾದ ಕಲಿಕೆಯನ್ನ ನಾವು ಕನ್ನಡದಲ್ಲಿ ನೀಡಬೇಕಾಗಿದೆ. ಇದನ್ನ ಬಿಟ್ಟು ಬೇರೆ ಆಯ್ಕೆಗಳಿಲ್ಲ. ಇವತ್ತು ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದಂತಹ ದೇಶಗಳಾದ ಜಪಾನ್‌, ಇಟಲಿ, ದಕ್ಷಿಣ ಮತ್ತು ಉತ್ತರ ಕೋರಿಯಾದಲ್ಲಿ ಜನಸಂಖ್ಯೆ ಹೆರುವ ಪ್ರಮಾಣ(fertility replacement rate) ಸಮತೋಲನದ ಮಟ್ಟಕ್ಕಿಂತ ಕುಸಿದಿದೆ. ಆದ್ದರಿಂದ ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಬೇಕಿರುವುದು ಯುವ ಸಮುದಾಯ ಹೆಚ್ಚಿರುವ ದೇಶವಾದ ಭಾರತದಿಂದ. ಆದರೆ ಇವತ್ತು ಪ್ರಚಲಿತದಲ್ಲಿ ಇರುವ ಬಾಯಿಪಾಠದ ಕಲಿಕೆಯಿಂದ ನಾವುಗಳು ಬೇರೆ ದೇಶಗಳಿಗೆ ಸೇವೆ ಮಾಡಲು ಬೇಕಿರುವ ಕನಿಷ್ಠ ಕೌಶಲ್ಯವನ್ನಷ್ಟೇ ಕಲಿಯುತ್ತಿದ್ದೆವೆಯೇ ವಿನಃ ಆಳವಾಗಿ ನಾವೇ ಏನನ್ನೂ ಅನ್ವೇಷಣೆ ಮಾಡುತ್ತಿಲ್ಲ. ಕರ್ನಾಟಕದ ಮಟ್ಟದಲ್ಲಿ ಜ್ಞಾನದ ಕಟ್ಟುವಿಕೆ ಮತ್ತು ಪಸರಿಸುವಿಕೆ ಎರಡು ಪರಿಣಾಮಕಾರಿಯಾಗಿ ಆಗಬೇಕಿದ್ದರೆ ಅದು ಕನ್ನಡದಲ್ಲಿ ಆಗಬೇಕಾಗಿದೆ.

ಇಷ್ಟೊಂದು ಒಳ್ಳೆಯ ಯುವ ಜನಸಂಖ್ಯೆ ಇಟ್ಟುಕೊಂಡು ಕೋರಿಯಾ, ಜಪಾನಿನಂತೆ ನಾವು ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದರೆ ಯುವಕರನ್ನು ಕೈಹಿಡಿದುಕೊಂಡು ಹೋಗುವ ಸಮರ್ಪಕ ಕಲಿಕಾ ವ್ಯವಸ್ಥೆ ಕನ್ನಡದಲ್ಲಿ ಇಲ್ಲ ಅಂತಾನೇ ಅರ್ಥ. ಇದರಿಂದ ವಿಜ್ಞಾನ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧಿಸುವ ಸಾಮರ್ಥ್ಯವಿರುವವರು “ಆವರೇಜ್‌ ಪರ್ಫಾರ್ಮರ್”‌ ಆಗಿಬಿಟ್ಟಿದ್ದಾರೆ. ನಮ್ಮಲ್ಲಿನ ಈ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲೋ ಶೇಕಡ ಹತ್ತರಷ್ಟು ಜನರ ಕೈಯಲ್ಲಿ ಮಾತ್ರ ಮೇಲೇರಲು ಸಾಧ್ಯವಾಗುತ್ತಿದೆಯೇ ವಿನಃ ಶೇಕಡ ತೊಂಬತ್ತರಷ್ಟು ಜನರಿಂದ ಸಾಧ್ಯವಾಗುತ್ತಿಲ್ಲ ಎಂಬುದು ಇವತ್ತಿನ ದೊಡ್ಡ ದುರಂತ.

charan
ಚರಣ್ ಗೌಡ ಬಿ ಕೆ
+ posts

ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಚರಣ್ ಗೌಡ ಬಿ ಕೆ
ಚರಣ್ ಗೌಡ ಬಿ ಕೆ
ಬಿ ಎ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ, ಎರಡನೆ ವರ್ಷ, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಬೆಂಗಳೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೈರಪ್ಪ ಮತ್ತು ಕುತರ್ಕದ ಉರುಳು

ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ...

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ....

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ...

Download Eedina App Android / iOS

X