ಈದಿನ ಗ್ರೌಂಡ್‌ ರಿಪೋರ್ಟ್‌ | ಪ್ರವಾಹ ನಿಂತು ಹೋದ ಮೇಲೆ…..ಬದುಕೆಲ್ಲ ಬರಿದಾಗಿದೆ!

Date:

Advertisements

ಕಲಬುರಗಿ ಜಿಲ್ಲೆಯಲ್ಲಿ ಭೀಮಾ ನದಿಯ ಪ್ರವಾಹ ತಗ್ಗಿದೆ. ಇಷ್ಟು ದಿನ ಆರ್ಭಟಿಸಿದ ನದಿಗಳು ಮೌನವಾಗಿವೆ. ಜನ-ಜೀವನ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಪ್ರವಾಹ ಪೀಡಿತ-ಬಾಧಿತ ನದಿತೀರದ ಪ್ರದೇಶದ ಜನರ ಬದುಕು ಮೂರಾ ಬಟ್ಟೆಯಾಗಿದ್ದು, ಮುಂದಿನ ಜೀವನ ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.

ಭೀಮಾ ನದಿ ಉಕ್ಕಿ ಹರಿದರೆ ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕ ಕಾಡತೊಡಗುತ್ತದೆ. ನುಗ್ಗಿ ಬರುವ ನೀರು ಮನೆ-ಮಠಗಳಷ್ಟೇ ಅಲ್ಲದೆ ಬದುಕಿನ ಮೇಲೂ ಆರಲಾರದ ಗಾಯ ಮಾಡಿಬಿಡುತ್ತದೆ. ನೆರೆ ಕಡಿಮೆ ಆಗುವವರೆಗೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುವ ನಾವು ಮುರಿದ ಕನಸುಗಳೊಂದಿಗೆ ಶಿಥಿಲ ಮನೆಗಳಿಗೆ ಮರಳಿ ಕಾಲಿಡುವಂತಾಗಿದೆ. ನಾವು ಪ್ರವಾಹ ಭೀತಿಯಿಂದ ಮುಕ್ತಿ ಹೊಂದುವುದು ಯಾವಾಗ? ಎಂದು ನದಿತೀರದ ಪ್ರದೇಶದ ಜನರು ಜೋರಾಗಿ ಕೇಳುತ್ತಿದ್ದಾರೆ.

ʼಈದಿನʼ ತಂಡವು ಭೀಮಾ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತಿಗಿಳಿದಾಗ ಪ್ರವಾಹದಿಂದ ಮನೆ-ಮಠ ತೊರೆದು ಮತ್ತೆ ಮರಳಿ ಗೂಡಿಗೆ ಬಂದು ಬದುಕು ಮರು ರೂಪಿಸಿಕೊಳ್ಳಲು ಹರಸಾಹಸದಿಂದ ಸ್ವಚ್ಛತೆಯಲ್ಲಿ ತೊಡಗಿರುವ ಜನರ ಆಕ್ರೋಶದ ಕಟ್ಟೆ ಒಡೆದಿತು.

Advertisements

ಮನೆಯಲ್ಲಿ ಲಕ್ಷಾಂತರ ಹಣ, ಬೆಚ್ಚನೆ ಮನೆ, ಉಣ್ಣಲು ಅನ್ನವಿದ್ದರೂ ಪ್ರವಾಹದ ಭೀತಿಯಿಂದ ಅಂಗೈಲಿ ಜೀವ ಹಿಡಿದುಕೊಂಡು ಉಟ್ಟ ಬಟ್ಟೆಯಲ್ಲೇ ಮಕ್ಕಳನ್ನು ಒಡಲಲ್ಲಿ ಇಡುಕೊಂಡು ಕುಟುಂಬ ಸಮೇತ ಊರ ಹೊರಗಿನ ಕಾಳಜಿ ಕೇಂದ್ರಗಳಲ್ಲಿನ ಕತ್ತಲಲ್ಲಿ ಬದುಕು ಸವೆದು, ತುತ್ತು ಅನ್ನಕ್ಕಾಗಿ ಪರದಾಡಿ ಮರಳಿ ಗೂಡಿಗೆ ಬಂದು ಸೇರಿದ ಕುಟುಂಬಗಳ ಒಡಲಾಳದ ಸಂಕಟದ ಗಾಯ ಆರದಂತಿದೆ.

WhatsApp Image 2025 10 03 at 7.23.19 AM
ಪ್ರವಾಹದಿಂದ ಜಮೀನು ಜಲಾವೃತಗೊಂಡು ಸಂಪೂರ್ಣ ಸುಟ್ಟು ಹೋಗಿರುವ ಹತ್ತಿ

ಭೀಮಾ ನದಿಯ ಜಲಪ್ರವಾಹ, ಮಳೆ ಕಡಿಮೆಯಾಗುತ್ತಿದ್ದಂತೆ, ಕಲಬುರಗಿ ಜಿಲ್ಲೆಯ ಕಡಬೂರು, ಚಾಮನೂರು, ಹೊನಗುಂಟಾ, ಸರಡಗಿ, ಮಂದರವಾಡ, ಕೂಡಿ, ಕಟ್ಟಿಸಂಗಾವಿ, ಕೋಬಾಳ ಸೇರಿದಂತೆ ನದಿ ಪಾತ್ರದ ಹಲವು ಗ್ರಾಮಗಳ ಜನರು ಮುರಿದುಹೋದ ಜೀವನ ಸರಪಳಿಯನ್ನು ಮರು ಸ್ಥಾಪಿಸಿಕೊಳ್ಳಲು ಆರಂಭಿಸಿದ್ದಾರೆ.

ಭೀಮೆಯ ಅಬ್ಬರಕ್ಕೆ ತೊಯ್ದು ಹೋದ ಅಕ್ಕಿ, ಜೋಳ, ಆಧಾರ್‌ ಕಾರ್ಡ್‌, ಫ್ರಿಡ್ಜ್‌, ಒದ್ದೆಯಾದ ಬಟ್ಟೆ, ಧಾನ್ಯಗಳನ್ನು ಒಣಗಿಸುವುದು, ತಮ್ಮ ಮನೆಯೊಳಗೆ ಒಳಗೆ ಸಂಗ್ರಹವಾದ ನೀರು, ಮಣ್ಣನ್ನು ಗುಡಿಸುವುದು ಕಂಡು ಬಂತು. ಮನೆಯೊಳಗೆ ಹೊಕ್ಕಿದ ಪ್ರವಾಹದ ನೀರು ಖಾಲಿಯಾದರೂ ಸುತ್ತುವರಿದ ಕಸಕಡ್ಡಿ, ಗಬ್ಬು ವಾಸನೆಯಿಂದ ಹೊರಬರಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ. ಇದು ಅಲ್ಲಿನ ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುವ ಲಕ್ಷಣಗಳು ಕಂಡವು.

ಶಹಬಾದ್‌ ತಾಲ್ಲೂಕಿನ ಹೊನಗುಂಟಾ ಗ್ರಾಮದ ವಿಜಯಲಕ್ಷ್ಮಿ ಅವರಿಗೆ ಇಬ್ಬರು ಪುಟ್ಟ ಮಕ್ಕಳು, ಇನ್ನೇನು ಭೀಮಾ ನದಿ ಪ್ರವಾಹ ಬಂದು ಮನೆಗಳಿಗೆ ವೇಗವಾಗಿ ನುಗ್ಗುತ್ತೆ ಎಂದು ಗೊತ್ತಾದರೂ ಮನೆಯಲ್ಲಿನ ಕಾಗದ ಪತ್ರಗಳು, ಬಟ್ಟೆ-ಬರೆ, ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಮಯ ಸಿಗಲಿಲ್ಲ. ರಾಶಿ ಮಾಡಿ ಮನೆಗಳಲ್ಲಿ ಸಂಗ್ರಹಿಸಲಾದ ಉದ್ದು, ಹೆಸರುಕಾಳುಗಳಿಂದ ತುಂಬಿದ ಚೀಲ ಎಲ್ಲವೂ ತೊರೆದು ಸದ್ಯಕ್ಕೆ ʼಜೀವ ಉಳಿದರೆ ಸಾಕಪ್ಪಾʼ ಎಂದು ಮನೆ ಮಾಳಿಗೆ ಹತ್ತಿ ಕುಳಿತುಬಿಟ್ಟರು.

ʼಮನೆಯೊಳಗೆ ಹೊಕ್ಕಿದ ಎದೆಯೆತ್ತರ ನೀರು ಎರಡು ದಿನಗಳಾದರೂ ಇಳಿಯಲಿಲ್ಲ, ಮೂರು ದಿನ ವಿದ್ಯುತ್‌ ಕಡಿತವಾಗಿ ಕತ್ತಲಲ್ಲೇ ಬೇರೆಯವರು ತಂದುಕೊಟ್ಟ ಊಟ ಮಾಡಿ ದಿನ ಕಳೆದೆವು. ಹಿಂದೆಂದೂ ಕಾಣದ ಈ ಭಯಾನಕ ದುರಂತದಲ್ಲಿ ಗ್ರಾಮದ ಅನೇಕ ಮನೆಗಳು ಮುಳುಗಿ ಬದುಕು ಬರ್ಬಾದ್‌ ಆಗಿದೆ. ಸದ್ಯ ಶುದ್ಧ ಕುಡಿಯುವ ನೀರು ಅಭಾವ ತತ್ವಾರ ನಡೆದಿದೆ. ಸತತ ಮಳೆ ಹಾಗೂ ಪ್ರವಾಹದಿಂದ ಬಹಳ ಸಂಕಷ್ಟದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ದಸರಾ ಹಬ್ಬ ಆಚರಣೆ ಹೇಗೆ? ಸರ್ಕಾರ ಒಂದಿಷ್ಟು ಪರಿಹಾರ ನೀಡಿದರೆ ಬದುಕು ಸುಧಾರಿಸಿಕೊಳ್ಳಬಹುದುʼ ಎಂದು ನೀರಲ್ಲಿ ತೊಯ್ದ ಧಾನ್ಯ ಚಾವಣಿ ಮೇಲೆ ಒಣಗಿಸುತ್ತ ಅಳಲು ತೋಡಿಕೊಂಡರು.

WhatsApp Image 2025 10 03 at 7.24.43 AM
ಶಹಾಬಾದ್‌ ತಾಲ್ಲೂಕಿನ ಹೊನಗುಂಟಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಟ್ಯಾಂಕರ್‌ ಮೂಲಕ ಸರಬರಾಜು ಮಾಡುತ್ತಿರುವುದು

ಸತತ ಮಳೆ ಹಾಗೂ ಭೀಮಾ ಪ್ರವಾಹ ಭೀತಿ ತಗ್ಗಿದೆಯಾದರೂ, ಜನ-ಜೀವನದ ಮೇಲಾಗಿರುವ ಘಾಸಿ ವಾಸಿಯಾಗುವಲ್ಲಿ ವರುಷಗಳೇ ಉರುಳಬಹುದು. ಪ್ರತಿ ಬಾರಿ ಪ್ರವಾಹ ಅಪ್ಪಳಿಸಿದಾಗ ಇವರ ಪರಿಸ್ಥಿತಿ ಶೋಚನೀಯವಾಗಿದೆ. ʼನಮ್ಮನ್ನು ಎಲ್ಲಿಗಾದರೂ ಸ್ಥಳಾಂತರಿಸಿ ನೆಮ್ಮದಿಯಾಗಿ ಬದುಕಲು ಬಿಡಿʼ ಎಂದು ಎಪ್ಪತ್ತರ ಆಸುಪಾಸಿನ ನಿಂಗಮ್ಮ ಶಾಬಾದಿ ಎರಡೂ ಕೈಜೋಡಿಸಿ ನಮ್ಮನ್ನು ಮನೆಗೆ ಕರೆದೊಯ್ದು ಹಾಳಾದ ದವಸ-ಧಾನ್ಯ, ಕಾಗದ ಪತ್ರಗಳನ್ನು ತೋರಿಸಿ ಅಂಗಲಾಚಿದರು.

ನೆರೆ ಬಂದಾಗ ಕರೆಯದೇ ಬರುವ ರಾಜಕಾರಣಿಗಳು ʼನಿಮ್ಗೆ ಬೇರೆ ಕಡೆ ಸ್ಥಳಾಂತರ ಮಾಡ್ತೀವಿ, ಮನೀ ಕೊಡ್ತೀವಿʼ ಎಂದೆಲ್ಲ ಹೇಳಿ ನಂಬಿಸ್ತಾರೆ. ಇಲ್ಲಿಯವರೆಗೆ ಅನೇಕ ಬಾರಿ ನೆರೆ ಬಂದು ಬದುಕು ಬೀದಿಗೆ ಬಂದಿದೆ. ಆದರೂ ನಮ್ಮ ನೋವು ಮಾತ್ರ ಯಾರೊಬ್ಬರಿಗೂ ಅರ್ಥವಾಗಲ್ಲ. ಹೇಗೂ ಅರ್ಧ ಜಿಂದಗಿ ಕಳದೀವಿ, ಕೊನೆಗೆ ಈ ನರಕಯಾತನೆ ಅನುಭವಿಸುತ್ತ ಇದೇ ಗೋಳಾಟದಲ್ಲಿ ಸಾಯ್ತೀವಿ. ನಂಗೇ ಯಾರೂ ಇಲ್ಲ, ಮಗ ಬೆಂಗಳೂರಿನಲ್ಲಿ ಇರ್ತಾನೆ, ಒಬ್ಳೆ ಇರ್ತೀನಿ, ಇದ್ದ ಅಕ್ಕಿ, ಬೇಳೆ, ಹಿಟ್ಟು ಎಲ್ಲವೂ ತೊಯ್ದು ಹಾಳಾಗಿದೆ. ಕೂಲಿ ಮಾಡುವಷ್ಟು ಮೈಯಲ್ಲಿ ಶಕ್ತಿಯಿಲ್ಲ. ಉಪವಾಸ ಇರಬೇಕಾದ ಪರಿಸ್ಥಿತಿ ಬಂದೊದಗಿದೆ. ಯಾರಿಗಾದರೂ ಹೇಳಿ ಸಹಾಯ ಮಾಡ್ಸಿ, ನಿಮ್ಗೆ ಪುಣ್ಯ ಬರುತ್ತೆʼ ಎನ್ನುತ್ತ ಸೆರಗಿನಿಂದ ಕಣ್ಣೀರು ಒರೆಸಿಕೊಂಡರು.

ʼರಾತ್ರೋರಾತ್ರಿ ಮನೆಯೊಳಗೆ ನೀರು ಹೊಕ್ಕಿತು, ಹಂಗೇ ಮಾಳಿಗೆ ಮ್ಯಾಲೆ ಹತ್ತಿ ಕುಂತಿವಿ, ಯಾರೊಬ್ರೂ ಕೇಳೋಕೆ ಬಂದಿಲ್ಲ. ಆಮೇಲೆ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಹೋಗಿ ಉಳಿದೆವು. ಅಲ್ಲಿ ಊಟ, ನೀರು ಏನೂ ಇರಲಿಲ್ಲ. ಊರಿನ ಗೌಡುರ್‌ ಬಳಿ ಹೋಗಿ ಜಗಳ ಮಾಡಿದ ಮೇಲೆ ನಾಲ್ಕು ಚೀಲ ಅಕ್ಕಿ ಕಳಿಸಿದ್ರು. ನಂತರ ಕೇಳಿದ್ರೆ ಕೇಸ್‌ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರು. ಮನೆಯಲ್ಲಿನ ತೊಗರಿ, ಅಕ್ಕಿ, ಜೋಳ, ಐದು ಚೀಲ ರಸಗೊಬ್ಬರ ಸೇರಿ ಕಾಗದ ಪತ್ರಗಳೆಲ್ಲವೂ ನೀರುಪಾಲಾಗಿದೆʼ ಎಂದು ರೈತ ದೀಪಣ್ಣ ಎಂಬುವವರು ತಮ್ಮ ಒಡಲ ಸಂಕಟ ಬಿಚ್ಚಿಟ್ಟರು.

ʼಕೃಷಿ ಮಾಡಲು ಎಷ್ಟು ಖರ್ಚು ಮಾಡಿದ್ರಿ ಅಂತ ಕೇಳಿದಾಗ, ʼನನಗೆ ಇರೋದೆ ಒಂದು ಎಕರೆ, ಪ್ರತಿ ಎಕರೆಗೆ ₹25 ಸಾವಿರದಂತೆ ಒಟ್ಟು 16 ಎಕರೆ ಜಮೀನು ಲಾವಣಿಗೆ ಪಡೆದು ಹತ್ತಿ ಬೆಳೆದಿದ್ದೆ. ಈಗ ಎಲ್ಲವೂ ಜಲಾವೃತಗೊಂಡು ಸುಟ್ಟು ಹೋಗಿದೆ. ಈಗ ಬೆಳೆ ಮುಖ ನೋಡೋಕೆ ಆಗ್ತಿಲ್ಲ. ಲಕ್ಷಾಂತರ ದುಡ್ಡು, ಬೆವರು ಎಲ್ಲವೂ ಭೀಮಾರ್ಪಣೆಯಾಗಿದೆʼ ಎಂದರು.

ʼಸರ್ಕಾರ ಬೆಳೆ ಹಾನಿ ಪರಿಹಾರ ಕೊಡಬಹುದು. ಆದರೆ, ನಾವು ಲಾವಣಿಗೆ ಪಡೆದ ಜಮೀನಿನ ಮಾಲೀಕನಿಗೆ ಪಾಹಣಿ ಮೂಲಕ ಪರಿಹಾರ ಹೋಗುತ್ತದೆ. ನಮಗೆ ನಯಾ ಪೈಸೆ ಬರಲ್ಲ. ಸಾಲ-ಶೂಲ ಮಾಡಿ ಬಂಡವಾಳ ಹಾಕಿದ ಹಣವೂ ಬರಲಿಲ್ಲ ಅಂದ್ರೆ ಹಗ್ಗಕ್ಕೆ ಕೊರಳೊಡ್ಡಿ ಸಾಯುವುದೇ ಉಳಿದಿದೆ ಎಂದು ಆಕ್ರೋಶ ಹೊರಹಾಕಿದ ಅವರು ʼಅಧಿಕಾರಸ್ಥರು ನಮ್ಮ ಗೋಳು ಕೇಳಲು ಸಿದ್ಧರಿಲ್ಲ, ಪ್ರವಾಹ ಬಂದಾಗ ಮಾತ್ರ ಬಂದು ಭರವಸೆ ಕೊಟ್ಟು ಹೋದವರು ಪುನಃ ಇತ್ತ ತಿರುಗಿಯೂ ನೋಡಲ್ಲ. ನಮಗೂ ಪರಿಹಾರ ಒದಗಿಸಿದರೆ ಬದುಕಿಗೆ ಆಸರೆಯಾಗುತ್ತದೆʼ ಎಂದು ಆಗ್ರಹಿಸಿದರು.

WhatsApp Image 2025 10 03 at 7.23.20 AM
ಪ್ರವಾಹ ನೀರು ಮನೆಯೊಳಗೆ ಹೊಕ್ಕಿ ಮನೆಯಲ್ಲಿರುವ ಅಕ್ಕಿ,ಜೋಳ, ಕಾಗದ ಪತ್ರ, ಮಕ್ಕಳ-ಮೊಮ್ಮಕ್ಕಳ ಫೋಟೊ ತೋರಿಸುತ್ತಿರುವು ನಿಂಗಮ್ಮ

ಪ್ರವಾಹಕ್ಕೆ ಒಳಗಾದ ಭೀಮಾ ತೀರದ ಮತ್ತೊಂದು ಗ್ರಾಮಕ್ಕೆ ಭೇಟಿ ನೀಡಲು ಹೊರಟಾಗ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮರದ ಕೆಳಗೆ ಕುಳಿತಿದ್ರು. ʼಏನ್ರೀ ಪ್ರವಾಹ ಬಂದು ಬೆಳೆ ಎಲ್ಲ ಹಾಳಾಯ್ತುʼ ಅಂತ ಮಾತಿಗೆಳೆದೆ. ಅಯ್ಯೋ ಅದೇನು ಕಥೆ ಕೇಳ್ತೀರಿ, ʼಜೋರು ಮಳೆ ಬಂದಾಗಲೇ ಬೆಳೆ ಹೋಯ್ತು, ಹೊಳೆ ಬಂದಾಗ ಬದುಕು ಬರಡಾಯ್ತುʼ, ಮುಂದಿನ ಬೆಳೆ ಬರುವ ಯಾವ ಭರವಸೆಯೂ ಇಲ್ಲ. ಸರ್ಕಾರ ಕೊಡುವ ಅಲ್ಪ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಬರ-ನೆರೆ ಏನೇ ಆದರೂ ಪೆಟ್ಟು ಬೀಳುವುದು ರೈತನಿಗೆ. ಆದರೆ, ಆಡಳಿತ ನಡೆಸುವ ಯಾವ ಸರ್ಕಾರಗಳು ರೈತರ ಕೈಹಿಡಿದು ಮೇಲೆತ್ತುವ ಕೆಲಸ ಮಾಡುವುದಿಲ್ಲʼ ಎಂದು ಅಸಹಾಯಕತೆ ಹೇಳತೊಡಗಿದರು.

ನಿರಂತರ ಮಳೆ, ಪ್ರವಾಹದಿಂದ ಬೆಳೆಯೊಂದಿಗೆ ಬದುಕು ಬರಿದಾಗಿದೆ. ಸರ್ಕಾರದ ಮುಖ್ಯಮಂತ್ರಿ, ಸಚಿವರು ಪರಿಹಾರ ಕೊಡ್ತೀವಿ ಅಂತ ಭರವಸೆ ಕೊಡುತ್ತಲೇ ಇದ್ದಾರೆ. ರಾಜ್ಯ ಸರ್ಕಾರದಿಂದ ಕೊಡಬೇಕಾದ ಪರಿಹಾರ ಶೀಘ್ರದಲ್ಲಿ ನೀಡಬೇಕು. ಇನ್ನು ಮನೆ. ಆಸ್ತಿ-ಪಾಸ್ತಿ ಕಳೆದುಕೊಂಡು ಜೀವನ ನಡೆಸಲು ಸಾಕಷ್ಟು ಸಂಕಷ್ಟ ಅನುಭವಿಸುವ ಕುಟುಂಬಗಳಿಗೆ ಎಷ್ಟು ಪರಿಹಾರ? ಯಾವಾಗ ಕೊಡ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕೊಟ್ಟರೂ ಆ ಪರಿಹಾರ ಯಾವಾಗ ಕೈ ಸೇರುತ್ತದೆ ಎಂದು ಸಂತ್ರಸ್ತರು ಕಾದು ನೋಡುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಳೆ ಹಾನಿ | ಪ್ರತಿ ಹೆಕ್ಟೇರ್‌ಗೆ ಹೆಚ್ಚುವರಿ ₹8,500 ಪರಿಹಾರ : ಸಿಎಂ ಸಿದ್ದರಾಮಯ್ಯ

ʼಪ್ರವಾಹದಿಂದ ಮನೆ ಹಾನಿಯಾದ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕೂಡಲೇ ಸಮೀಕ್ಷೆ ಮಾಡಿ ಸರಕಾರದ ಮಾರ್ಗ ಸೂಚಿಯನ್ವಯ ಪರಿಹಾರ ವಿತರಿಸಲು ಸೂಕ್ತ ಕ್ರಮ ಕೈಕೊಳ್ಳುವುದು ಹಾಗೂ ಪ್ರವಾಹದಿಂದ ಸಾರ್ವಜನಿಕರು ಮಹತ್ವದ ದಾಖಲೆಗಳಾದ ಪಡಿತರ ಚೀಟಿ, ಪಹಾಣಿ ಪತ್ರಿಕೆ ಇತ್ಯಾದಿ ದಾಖಲೆಗಳನ್ನು ಕಳೆದುಕೊಂಡಲ್ಲಿ ಕೂಡಲೇ ದಾಖಲೆಗಳನ್ನು ಒದಗಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳ ಮೀಸಲಾತಿ | ಎಐಸಿಸಿ ಹಸ್ತಕ್ಷೇಪಕ್ಕೆ ಹೆಚ್ಚಿದ ಆಗ್ರಹ, ದೆಹಲಿ ಬಿಡದಿರಲು ಅಲೆಮಾರಿ ಸಂಸತ್ತು ತೀರ್ಮಾನ

ಒಳ ಮೀಸಲಾತಿ ವಿತರಣೆಯಲ್ಲಿ ಕರ್ನಾಟಕದ ಅಸ್ಪೃಶ್ಯ ದಲಿತ ಅಲೆಮಾರಿ ಸಮುದಾಯಗಳಿಗೆ ಆಗಿರುವ...

ಗುಬ್ಬಿ | ಎಂ ಎಚ್.ಪಟ್ಟಣ ಗ್ರಾಪಂ ನಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಂ. ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ...

ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತ ಅವಮಾನಿಸಿದ ಮೋದಿ: ಬಿ ಕೆ ಹರಿಪ್ರಸಾದ್‌ ಕಿಡಿ

ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ...

ವಿಜಯನಗರ | ಭಾರತ ಸ್ವಾವಲಂಬಿಯಾಗಲು ಗೃಹ ಕೈಗಾರಿಕೆಗಳು ಮುಂಚೂಣಿಗೆ ಬರಬೇಕು: ಡಾ. ವೀರೇಶ ಬಡಿಗೇರ

ವರ್ಣ, ವರ್ಗ, ಲಿಂಗರಹಿತ ಸಮಾಜ ಸ್ಥಾಪನೆಯು ಗಾಂಧಿಯ ಕನಸಾಗಿತ್ತು. ಸ್ವದೇಶಿ ಚಳವಳಿ,...

Download Eedina App Android / iOS

X