ಇಂದು ನರಸಿಂಹರಾಜು ಜನ್ಮದಿನ. ಅವರಂಥ ನಟರು ಒಂದು ಪ್ರಾದೇಶಿಕ ಭಾಷೆಯ ನಟರಲ್ಲ. ಜಾಗತಿಕ ಕಲಾವಿದ ಸಮೂಹಕ್ಕೆ ಸೇರಿದವರು. ಜಗತ್ತಿನ ಸಮುದಾಯವನ್ನು ರಂಜಿಸಿದ ಚಾರ್ಲಿ ಚಾಪ್ಲಿನ್, ಬಸ್ಟರ್ನ್ ಕೀಟನ್‌ರವರ ಸಾಲಿನಲ್ಲಿ ನಿಲ್ಲಬಲ್ಲ ಕಲಾವಿದರು...
1954ರಲ್ಲಿ ತೆರೆ ಕಂಡ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಆರಂಭವಾದ ನರಸಿಂಹರಾಜು ಅವರ ‘ನಗೆ’ ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಅವ್ಯಾಹತವಾಗಿ ಆವರಿಸಿಕೊಂಡಿತ್ತು. ಅಕ್ಷರಶಃ ಅದು ನರಸಿಂಹರಾಜು ಯುಗವಾಗಿತ್ತು. 1954ರಿಂದ 1967ರವರೆಗೆ ತಯಾರಾದ 168 ಚಿತ್ರಗಳಲ್ಲಿ ನರಸಿಂಹರಾಜು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅದೂ ಈ ಅವಧಿಯಲ್ಲಿ ಯಶಸ್ಸು ಕಂಡ ಎಲ್ಲ ಚಿತ್ರಗಳಲ್ಲೂ ನರಸಿಂಹರಾಜು ಅಭಿನಯಿಸಿದ್ದು ವಿಶೇಷ.
ತಿಪಟೂರು ರಾಮರಾಜು ನರಸಿಂಹರಾಜು ಸಹ ರಂಗಭೂಮಿಯಿಂದ ಬಂದವರು. ಚಿಕ್ಕವಯಸ್ಸಿನಿಂದಲೇ ರಂಗಭೂಮಿಯ ಗೀಳು ಹಿಡಿಸಿಕೊಂಡಿದ್ದ ಅವರು ಸಿ.ಬಿ. ಮಲ್ಲಪ್ಪನವರ ಚಂದ್ರಮೌಳೇಶ್ವರ ನಾಟಕ ಮಂಡಳಿಯಲ್ಲಿ ಬಾಲಪಾತ್ರಗಳನ್ನು ವಹಿಸುವ ಮೂಲಕ ಕಲಾ ಜಗತ್ತನ್ನು ಪ್ರವೇಶಿಸಿದರು. 1954ರಲ್ಲಿ ‘ಬೇಡರ ಕಣ್ಣಪ್ಪ’ ತೆರೆಕಾಣುವವರೆಗೆ ಹಲವಾರು ನಾಟಕ ಸಂಸ್ಥೆಗಳಲ್ಲಿ ಕಲಾವಿದರಾಗಿ ಜನಪ್ರಿಯತೆ ಗಳಿಸಿದ್ದ ನರಸಿಂಹರಾಜು ಒಮ್ಮೆ ಚಿತ್ರರಂಗ ಪ್ರವೇಶಿಸಿದ ನಂತರ ಹಿಂದಿರುಗಿ ನೋಡಲಿಲ್ಲ. ‘ಬೇಡರ ಕಣ್ಣಪ್ಪ’ ಚಿತ್ರದ ದುಷ್ಟ ಪೂಜಾರಿಯ ಸಜ್ಜನ ಮಗ ‘ಕಾಶಿ’ ಪಾತ್ರದಲ್ಲಿ ನಕ್ಕು ನಗಿಸಿದ ಅವರು ಕನ್ನಡದ ಮೊದಲ ಸ್ಟಾರ್ ನಗೆನಟರಾದರು. ಮುಂದೆ ಸದಾರಮೆಯ ಆದಿಮೂರ್ತಿ ಪಾತ್ರ ಅವರ ಸ್ಥಾನವನ್ನು ಭದ್ರಪಡಿಸಿತು. ಅವರನ್ನು ನಗೆನಟ ಎಂದು ಕರೆಯುವುದು ತಪ್ಪಾದೀತು. ಅವರೊಬ್ಬ ಪೂರ್ಣ ಕಲಾವಿದ. ಅವರು ನಿರ್ವಹಿಸಿದ ಪ್ರತಿ ಪಾತ್ರಕ್ಕೂ ಸಹಜತೆಯನ್ನು ತಂದರು. ಜೀವಂತಿಕೆಯನ್ನು ತುಂಬಿದರು. ಯಾವುದೇ ಪಾತ್ರ ವಹಿಸಿದರೂ ಅಲ್ಲಿ ನಗೆಯೇ ಪ್ರಧಾನವಾಗಿರುತ್ತಿತ್ತು. ಅದಕ್ಕೆ ಅವರ ಮುಖಭಾವ- ಆ ಪೆದ್ದು ಮೋರೆ, ಅಸಹಾಯಕತೆ ಸೂಸುವ ಕಣ್ಣು, ಅದನ್ನು ಮೀರಿಯೂ ಸಾಹಸಕ್ಕೆಳೆಸುವ ಮನಸ್ಥಿತಿ, ಪೇಚಾಟದ ಮೂಲಕ ಸೃಷ್ಟಿಸುವ ನಗೆ, ವಿಷಾದ-ಪೂರಕವಾಗಿತ್ತು.
ಇದನ್ನು ಓದಿದ್ದೀರಾ?: ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಯಾವ ಪಾತ್ರವೇ ಆಗಲಿ ಅದನ್ನೊಂದು ವಿಭಿನ್ನ ಅನುಭವವಾಗಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಹಾಸ್ಯ ಎನ್ನುವುದು ಅಶ್ಲೀಲತೆಯ ಮಡಿಲಲ್ಲಿ ಬಿದ್ದು ಒದ್ದಾಡುವ ಯುಗಕ್ಕಿಂತ ಭಿನ್ನವಾದ ಅವಧಿಯಲ್ಲಿ ಅವರು ಬದುಕಿದ್ದರು. ಒಬ್ಬ ನಟ ಅದರಲ್ಲೂ ಹಾಸ್ಯನಟ ಸುದೀರ್ಘವಾಗಿ ಜನಪ್ರಿಯತೆ ಉಳಿಸಿಕೊಳ್ಳುವುದು ಕಷ್ಟ. ಒಂದು- ಚಿತ್ರದಿಂದ ಚಿತ್ರಕ್ಕೆ ಪ್ರೇಕ್ಷಕ ಹೆಚ್ಚಿಸಿಕೊಳ್ಳುವ ನಿರೀಕ್ಷೆಯನ್ನು ಆತ ಸರಿತೂಗಿಸಬೇಕಾದ ಅನಿವಾರ್ಯತೆ. ಮತ್ತೊಂದು- ಅಭಿನಯದಲ್ಲಿನ ಏಕತಾನತೆಯನ್ನು ಮುರಿಯುವ ಸವಾಲು. ಇವೆರಡನ್ನೂ ನರಸಿಂಹರಾಜು ಸಮರ್ಥವಾಗಿ ಎದುರಿಸಿದರು. ಅವರಿಗೆ ಸುಂದರವದನದ ವರದಾನವಿರದಿದ್ದರೂ, ಕನ್ನಡಿಗರ ಹೃದಯವನ್ನು ಸೂರೆಗೊಂಡರು. ಬಳುಕುವ ದೇಹ, ಮಿಂಚಿನ ಕಣ್ಣು ಮತ್ತು ವಿಶಿಷ್ಟವಾದ ಸಂಭಾಷಣಾ ಶೈಲಿಯಿಂದ ಪ್ರತಿ ಪಾತ್ರವೂ ಭಿನ್ನವಾಗಿರುವಂತೆ ನೋಡಿಕೊಂಡರು. ಈಗಲೂ ಎಲ್ಲ ವಯೋಮಾನದ ಚಿತ್ರರಸಿಕರಿಗೆ ನರಸಿಂಹರಾಜು ಅವರ ಹಾಸ್ಯ ಸನ್ನಿವೇಶಗಳು ಮನರಂಜನೆಯ ಶಾಶ್ವತ ಸಾಧನಗಳಾಗಿವೆ.
ನರಸಿಂಹರಾಜು ಅವರಂಥ ನಟರು ಒಂದು ಪ್ರಾದೇಶಿಕ ಭಾಷೆಯ ನಟರಲ್ಲ. ಅವರು ಜಾಗತಿಕ ಕಲಾವಿದ ಸಮೂಹಕ್ಕೆ ಸೇರಿದವರು. ಅವರು ಒಂದು ಪ್ರಾದೇಶಿಕ ಭಾಷೆಯ ನಟರಾಗಿದ್ದರು ಎಂಬ ಅಂಶವನ್ನು ಹೊರತುಪಡಿಸಿದರೆ, ಜಗತ್ತಿನ ಸಮುದಾಯವನ್ನು ರಂಜಿಸಿದ ಚಾರ್ಲಿ ಚಾಪ್ಲಿನ್, ಬಸ್ಟರ್ನ್ ಕೀಟನ್‌ರವರ ಸಾಲಿನಲ್ಲಿ ನಿಲ್ಲಬಲ್ಲ ಕಲಾವಿದರಾಗಿದ್ದರು. ಹಾಗೆಯೇ ನಾಗೇಶ್, ಮಹಮೂದ್ ಅವರಿಗೂ ಅನ್ವಯವಾಗುವ ಮಾತಿದು. ಈಗಿನ ಯಾವೊಬ್ಬ ಕಲಾವಿದನೂ ಕನಸನ್ನು ಸಹ ಕಾಣಲಾಗದಷ್ಟು ಗಾಢವಾದ ಹಾಸ್ಯಪ್ರಜ್ಞೆ ಅವರಲ್ಲಿತ್ತು. ಅವರಿಗೆ ಅರ್ಹವಾಗಿ ಸಲ್ಲಬೇಕಾದ ರಾಷ್ಟ್ರಮನ್ನಣೆ ದಕ್ಕಲಿಲ್ಲ. ಭಾರತೀಯ ಚಿತ್ರರಂಗ ಇತಿಹಾಸ ನರಸಿಂಹರಾಜು, ಬಾಲಣ್ಣ, ತಾಯ್‌ನಾಗೇಶ್‌ರವರಂಥವರನ್ನು ಉಲ್ಲೇಖಿಸದಿದ್ದರೆ ಅದೊಂದು ಅಪೂರ್ಣ ದಾಖಲೆಯಷ್ಟೆ!
ಬಾಲಕೃಷ್ಣ ಅವರಿಗೆ ದೊರೆತಷ್ಟು ವೈವಿಧ್ಯ ಪಾತ್ರಗಳು ನರಸಿಂಹರಾಜು ಅವರಿಗೆ ದೊರೆಯಲಿಲ್ಲ, ನಿಜ. ಅವರನ್ನು ಪ್ರೇಕ್ಷಕ ವರ್ಗ ಮತ್ತು ನಿರ್ದೇಶಕರು ಒಂದು ನಿರ್ದಿಷ್ಟ ಪಾತ್ರಕ್ರಮಕ್ಕೆ ಅಳವಡಿಸಿಬಿಟ್ಟಿದ್ದರು. ಕನ್ನಡದಲ್ಲಿ ಒಂದು ಚೌಕಟ್ಟಿಗೆ ಹೊಂದಿಸುವ ನಟನ ಇಮೇಜು ನರಸಿಂಹರಾಜು ಅವರಿಂದಲೇ ಆರಂಭವಾಯಿತೇನೋ ಎನಿಸುತ್ತದೆ. ಯಾಕೆಂದರೆ ಅವರು ತಮ್ಮ ಸಮಕಾಲೀನ ನಾಯಕ ನಟರುಗಳಿಗಿಂತ ಅಪಾರ ಬೇಡಿಕೆಯ ನಟರಾಗಿದ್ದರು. ನರಸಿಂಹರಾಜು ಅವರ ಕಾಲ್‌ಷೀಟ್ ಗ್ಯಾರಂಟಿಯಾದ ನಂತರ ನಾಯಕ-ನಾಯಕಿಯರ ತಲಾಶ್ ನಡೆಯುತ್ತಿತ್ತೆಂಬ ಪ್ರತೀತಿಯೂ ಇದೆ. ಹಾಗಾಗಿ ಅತ್ತೆ ಅಥವಾ ಮಾವನಿಂದ ತಿರಸ್ಕಾರಕ್ಕೊಳಗಾಗುವ ಅಳಿಯ, ಹೆಣ್ಣೊಂದನ್ನು ಒಲಿಸಿಕೊಳ್ಳಲು ಪೇಚಾಡುವ ಯುವಕ, ನಾಯಕ ನಟನ ಸಾಹಸಗಳಲ್ಲಿ ಭಾಗಿಯಾಗುತ್ತಾ ಪೇಚಿನ ಪ್ರಸಂಗಗಳನ್ನು ಸೃಷ್ಟಿಸುವ ಅಮಾಯಕ, ಸಿನಿಮಾದ ಪರಾಕಾಷ್ಠೆಯ ಘಟ್ಟದಲ್ಲಿ ನಾಯಕನಿಗೆ ಅನಿರೀಕ್ಷಿತ ವಿಧಾನಗಳ ಮೂಲಕ ನೆರವಾಗುವ ಸ್ನೇಹಿತ -ಹೀಗೆ ಕೆಲವು ಸಿದ್ಧಮಾದರಿಯ ಪಾತ್ರಗಳೇ ಅವರಿಗೆ ಹೆಚ್ಚಾಗಿ ದೊರೆಯುತ್ತಿದ್ದವು. ಆದರೆ ತಮ್ಮ ವಿಶಿಷ್ಟ ಅಭಿನಯದಿಂದಲೇ ಅವರು ಪಾತ್ರಗಳ ಏಕತಾನತೆಯನ್ನು ಮುರಿಯುತ್ತಿದ್ದರು.
ಒಂದು ಡೈಲಾಗು, ಒಂದು ಪೆದ್ದು ಭಾವ, ಅಸಹಾಯಕತೆಯನ್ನು ತೋಡಿಕೊಳ್ಳುವ ವಿಧಾನದಿಂದಲೇ ಅವರು ದೃಶ್ಯದಲ್ಲಿ ಅಪೂರ್ವ ಬದಲಾವಣೆ ತರುತ್ತಿದ್ದರು. ಈ ಏಕತಾನತೆಯ ಪಾತ್ರಗಳ ನಡುವೆಯೂ ಅವರು ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ‘ಬೊಹಿಮಿಯನ್’ ಗುಣದ, ಸುಖವನ್ನು ಮೊಗೆಮೊಗೆದು ಕುಡಿವ ಪಾತ್ರದಲ್ಲಿ, ‘ನಾಡಿನ ಭಾಗ್ಯ’ ಚಿತ್ರದ ನ್ಯಾಯಾಲಯದಲ್ಲಿ ಸೋತು ಸುಣ್ಣವಾಗಿ ತನ್ನ ಇಡೀ ಸಂಸಾರಕ್ಕೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವ ರೈತನ ಪಾತ್ರದಲ್ಲಿ, ವರದಕ್ಷಿಣೆಯ ದೆಸೆಯಿಂದ ಸೋದರಿಯ ಮದುವೆಗೆ ಬವಣೆ ಪಡುವ ಪಾತ್ರದಲ್ಲಿ ನರಸಿಂಹರಾಜು ಅವರು ನೀಡಿರುವ ಅಭಿನಯ ಅವರೆಂಥ ಮಟ್ಟದ ನಟ ಎಂಬುದಕ್ಕೆ ಪುರಾವೆ ದೊರೆಯುತ್ತದೆ. ಆದರೆ ಕನ್ನಡದ ನಿರ್ದೇಶಕರು ಸವೆದ ಜಾಡಿನಲ್ಲಿಯೇ ಅವರನ್ನು ಮುನ್ನಡೆಸಿದ ಕಾರಣ ಅವರ ಸಂಪೂರ್ಣ ಪ್ರತಿಭೆ ಪ್ರೇಕ್ಷಕರಿಗೆ ಪರಿಚಯವಾಗಲೇ ಇಲ್ಲ.
ಎಪ್ಪತ್ತರ ದಶಕದ ಉತ್ತರಾರ್ಧದಿಂದ ಕನ್ನಡದ ಹಾಸ್ಯದ ಟ್ರಾಕು ಕಂಡುಕೊಂಡ ಬದಲಾವಣೆ, ನರಸಿಂಹರಾಜು ಅವರಿಗಾದ ಪುತ್ರವಿಯೋಗ, ದ್ವಾರಕೀಶ್, ಎಂ.ಎಸ್. ಸತ್ಯು ಮುಂತಾದವರ ಆಗಮನ, ಮುಖ್ಯವಾಗಿ ನಾಯಕ ನಟರೇ ಹಾಸ್ಯ ದೃಶ್ಯಗಳನ್ನು ನಿಭಾಯಿಸುವಂಥ ಚಿತ್ರಕತೆ, ದಿನೇಶ್‌ರಂಥ ನಟರೂ ಹಾಸ್ಯ ನಟರಾಗಿ ಪರಿವರ್ತನೆಗೊಂಡ ವಿದ್ಯಮಾನ- ಇವೆಲ್ಲವುಗಳಿಂದ ನರಸಿಂಹರಾಜು ಅವರ ಅಭಿನಯಿಸುವ ಚಿತ್ರಗಳಲ್ಲಿ ಇಳಿಮುಖ ಕಂಡಿತು. ಆದರೂ ಚಿತ್ರಗಳಲ್ಲಿ ಅವರ ಒಂದು ಸಂಭಾಷಣೆ ಕೇಳಲು ಒಂದು ಮುಖಭಾವ ನೋಡಲು ಕನ್ನಡ ಪ್ರೇಕ್ಷಕರು ಕೊನೆಯವರೆಗೂ ಕಾತರರಾಗಿದ್ದರು.
ಅವರ ಹಾಸ್ಯ ಸನ್ನಿವೇಶಗಳನ್ನು ಎತ್ತಿ ಎತ್ತಿ ಓದುಗರ ಮುಂದಿಡುವುದು ಕಷ್ಟವೇನಲ್ಲ. ಅವರು ಕೊನೆಯ ದಿನಗಳಲ್ಲಿ ಅಭಿನಯಿಸಿದ ‘ಕಸ್ತೂರಿ ನಿವಾಸ’ ಚಿತ್ರದ ಒಂದು ಸಣ್ಣ ಸನ್ನಿವೇಶವನ್ನು ಮಾತ್ರ ಇಲ್ಲಿ ನೆನೆಯುತ್ತೇನೆ. ಭೋಜರಾಜಯ್ಯನ ಮಗಳು ಕಮುಲು ಕನ್ನಡಿಯ ಮುಂದೆ ಕುಳಿತು ಕೆಲಸದಾಕೆಯನ್ನು ‘ಪ್ರೇಮಾ… ಪ್ರೇಮಾ’ ಎಂದು ಕರೆಯುತ್ತಾಳೆ. ಮಾವನ ಮನೆಯಲ್ಲಿ ಕೆಲಸ ಮಾಡುವ ಅಳಿಯ ಸಂಪತ್ತು (ನರಸಿಂಹರಾಜು) ಕೊಠಡಿಗೆ ಬಂದು ಉತ್ತರಿಸುತ್ತಾನೆ. ”ಪ್ರೇಮ ಮನೆಯಲ್ಲಿಲ್ಲ, ಇವತ್ತು ರಜ. ನಾನಿದ್ದೀನಿ ‘ಪ್ರೇಮಿ’! ಏನಾಗಬೇಕು?” ಇಡೀ ಸನ್ನಿವೇಶವನ್ನೆ ನಗೆಗಡಲಲ್ಲಿ ಮುಳುಗಿಸಿಬಿಡುವಷ್ಟು ಸಶಕ್ತವಾಗಿ ನರಸಿಂಹರಾಜು ಅವರು ‘ಪ್ರೇಮ’ ‘ಪ್ರೇಮಿ’ ಎಂಬ ಎರಡು ಪದಗಳನ್ನು ನಿಭಾಯಿಸುವ ರೀತಿಗೆ ಅವರೇ ಸಾಟಿ.

‘ಬೇಡರ ಕಣ್ಣಪ್ಪ’ ಚಿತ್ರದಿಂದ ಪ್ರೇಕ್ಷಕರು ಬಾಯಿ ಮುಚ್ಚಿಕೊಳ್ಳಲು ಅವಕಾಶ ನೀಡದಂತೆ ನಗಿಸಿದ ನರಸಿಂಹರಾಜು ಅವರ ತಮಗಿಂತ ಹಿಂದೆ ತೆರೆಗೆ ಪ್ರವೇಶಿಸಿದ ಬಾಲಣ್ಣನವರ ಜೋಡಿಯಾಗಿ ಕನ್ನಡದ ರಂಜನೆಯ ಲೋಕವನ್ನು ವಿಸ್ತರಿಸಿದ್ದು ಈಗ ಇತಿಹಾಸ. ಸುಮಾರು ಮೂರು ದಶಕಗಳ ಕಾಲ ಈ ಜೋಡಿ ಅವ್ಯಾಹತವಾಗಿ ಕನ್ನಡ ಚಿತ್ರರಸಿಕರನ್ನು ಮೋಡಿ ಹಾಕಿ ಥಿಯೇಟರ್‌ಗೆ ಎಳೆ ತಂದರು. ಒಬ್ಬರು ಮತ್ತೊಬ್ಬರನ್ನೂ ಎಂದು ಅನುಕರಿಸಲಿಲ್ಲ. ಇಬ್ಬರದೂ ತಮ್ಮದೇ ಆದ ಸ್ವಂತ ಶೈಲಿಯಿಂದ ಪರಸ್ಪರ ಪೋಷಿಸಿ ಬೆಳೆದರು. ಪಾತ್ರ, ಸನ್ನಿವೇಶ ಮತ್ತು ಸಂಭಾಷಣೆಯನ್ನು ಸಮರ್ಥವಾಗಿ ಅರ್ಥೈಸಿಕೊಂಡು ಅಭಿನಯಿಸಿ ಗೆದ್ದರು.
ಇಬ್ಬರಿಗೂ ಸಮಾನವಾದ ಕೆಲವು ಅಂಶಗಳಿದ್ದವು. ಬಾಲಣ್ಣ ಅಭಿಮಾನ ಸ್ಟುಡಿಯೋ ಸ್ಥಾಪಿಸುವ ಮೊದಲು ‘ಕಲಿತರೂ ಹೆಣ್ಣೆ’ ಚಿತ್ರ ನಿರ್ಮಿಸಿದ್ದರು. ನರಸಿಂಹರಾಜು ಅವರೂ ಸಹ ‘ಪ್ರೊಫೆಸರ್ ಹುಚ್ಚೂರಾಯ’ ನಿರ್ಮಿಸಿ ಕನ್ನಡದ ಶುದ್ಧ ಮನರಂಜನಾತ್ಮಕ ಮತ್ತು ಅರ್ಥಪೂರ್ಣ ಚಿತ್ರಗಳ ಪರಂಪರೆಯನ್ನು ಮುಂದುವರೆಸಿದರು. ಜನಮೆಚ್ಚಿ ನಗುವಂಥ ಚಿತ್ರಗಳನ್ನು ಮಾಡುವ ಅದಮ್ಯ ಹಂಬಲ ಇಬ್ಬರಲ್ಲೂ ಇತ್ತು. ಇಬ್ಬರೂ ‘ರಣಧೀರ ಕಂಠೀರವ’ ಚಿತ್ರದ ನಿರ್ಮಾಣ ಕೈಜೋಡಿಸಿದ್ದನ್ನು ಮರೆಯುವಂತಿಲ್ಲ.
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ಕನ್ನಡ ಚಲನಚಿತ್ರರಂಗದ ಹಲವು ಮೊದಲ ದಾಖಲೆಗಳನ್ನು ಸೃಷ್ಟಿಸಿದ ನಟ, ನಿರ್ಮಾಪಕ. ಕನ್ನಡದ ಅಪಾರ ಬೇಡಿಕೆಯ ನಟ. ಇವರೇ ಕನ್ನಡದ ಮೊದಲ ಶತ ಚಿತ್ರ ನಟ. ಸದಭಿರುಚಿಯ ಹಾಸ್ಯಕ್ಕೆ ಮತ್ತೊಂದು ಹೆಸರಾದ ನರಸಿಂಹರಾಜು ಅವರು ವಿಲಕ್ಷಣ ಸಂದರ್ಭಗಳಿರಲಿ, ಗೊಂದಲ, ಗೋಜಲು ಸನ್ನಿವೇಶಗಳೇ ಇರಲಿ, ತಮ್ಮ ಪೆಚ್ಚು ಮೋರೆಯ ಆಂಗಿಕ ವಿನ್ಯಾಸ, ಧ್ವನಿ, ಮಾತಿನ ವರಸೆ, ಸಮಯಕ್ಕೆ ತಕ್ಕ ಸಂಭಾಷಣೆ ಮೂಲಕ ರುಚಿಶುದ್ಧ ಹಾಸ್ಯ ಉಣಬಡಿಸಿದ ಅಪರೂಪದ ಕಲಾವಿದ.
(ಕೃಪೆ: ಸಿನಿಮಾಯಾನ, ಲೇ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ ಪ್ರಕಾಶನ, ಸಂ: 94488 04905)