ಕಥೆಗಾರನನ್ನು ರೂಪಿಸಿದ ಮಾಂತ್ರಿಕ ಮೊಗಳ್ಳಿ

Date:

Advertisements
ಮೊಗಳ್ಳಿ ದಲಿತರಾಗಿರಬಹುದು. ಅವರು ಬರೆದ ಕಥೆಗಳು ದಲಿತಲೋಕದ್ದೇ ಆಗಿರಬಹುದು. ಈ ಕಾರಣಗಳಿಂದ ಮೊಗಳ್ಳಿ ಅವರನ್ನು ದಲಿತ ಲೇಖಕ, ದಲಿತ ಕಥೆಗಾರ ಎಂದು ಕರೆಯುವುದು ಘೋರ ಅನ್ಯಾಯದಂತೆ ಕಾಣುತ್ತದೆ.

ಮೊಗಳ್ಳಿಯವರ ಸಾವಿನ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಗೆಳೆಯರಿಗೆ ಫೋನ್ ಮಾಡಿದಾಗ ಅವರು ಆರು ತಿಂಗಳಿನಿಂದ ಗಂಭೀರ ಅನಾರೋಗ್ಯದಿಂದ ನರಳುತ್ತಿದ್ದರೆಂಬ ವಿಷಯ ತಿಳಿಯಿತು.

ಮೊಗಳ್ಳಿ ಮತ್ತು ನನ್ನ ಮೊಟ್ಟಮೊದಲ ಭೇಟಿ ಒಬ್ಬರು ಗಣ್ಯರು ಮಾತು ತಪ್ಪಿದ ಕಾರಣಕ್ಕಾಗಿ ನಡೆಯಿತು.

ಇದು ಸುಮಾರು ಇಪ್ಪತ್ಮೂರು ವರ್ಷಗಳ ಹಿಂದಿನ ಕಥೆ…

Advertisements

ಪದವಿ ನಂತರ ಸುಮಾರು ಒಂದು ದಶಕದ ಕಾಲ ಬೆಂಗಳೂರಿನಲ್ಲಿದ್ದ ನಾನು ವಾಪಸು ಊರಿಗೆ ಮರಳಿದೆ. ಅಲ್ಲಿನ ಜನಚಳವಳಿಗಳಲ್ಲಿ ಭಾಗವಹಿಸುತ್ತ ಕೈಮಗ್ಗದ ವಸ್ತ್ರ ಇತ್ಯಾದಿ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳ ಮಾರಾಟಮಳಿಗೆಯೊಂದನ್ನು ಆರಂಭಿಸಿದೆ. ಬೆಂಗಳೂರಿನಲ್ಲಿದ್ದಾಗ ತಮ್ಮ ಪತ್ರಿಕೆಗೆ ಅಂಕಣವೊಂದನ್ನು ಬರೆಯಲು ನಮ್ಮೂರು ತೀರ್ಥಹಳ್ಳಿಯಿಂದ ಪ್ರಕಟವಾಗುತ್ತಿದ್ದ ‘ವಿನೂತನ ಮಾತುಕತೆ’ ಪತ್ರಿಕೆಯ ಸಂಪಾದಕರಾದ ನೆಂಪೆ ದೇವರಾಜ್ ಅವರು ಸೂಚಿಸಿದ ಮೇರೆಗೆ ‘ಶ್ ಬೆಂಗಳೂರ್!!’ ಎಂಬ ಅಂಕಣ ಬರೆಯುತ್ತಿದ್ದೆ. ಬೆಂಗಳೂರಿನಿಂದ ಊರಿಗೆ ವಾಪಸಾಗುತ್ತಿದ್ದಂತೆ ಸಹಜವಾಗಿಯೇ ಆ ಅಂಕಣ ನಿಲ್ಲಿಸಿದೆ. ಇಲ್ಲಿ ಪ್ರಕಟವಾದ ಆಯ್ದ ಅಂಕಣಗಳನ್ನು ಕೂಡಿಸಿ ‘ನಮ್ಮ ನಾಡು’ ಪ್ರಕಾಶನದ ಮೂಲಕ ‘ಬೆಚ್ಚಿ ಬೀಳಿಸಿದ ಬೆಂಗಳೂರು’ ಹೆಸರಿನಲ್ಲಿ ಪ್ರಕಟಿಸಲಾಯಿತು. ಇದಕ್ಕೆ ರಹಮತ್ ತರೀಕೆರೆ ಅವರು ಮುನ್ನುಡಿ ಬರೆದುಕೊಟ್ಟರು. ಹಿರಿಯ ಸ್ನೇಹಿತರಾದ ಬಿಳಿದಾಳೆ ಈಶ ಅವರು ನಂತರ ಅಗ್ನಿ ಪತ್ರಿಕೆಯಲ್ಲಿ ಈ ಪುಸ್ತಕದ ಬಗ್ಗೆ ಬರೆದ ಲೇಖನದಲ್ಲಿ ”ಈ ಪುಸ್ತಕಕ್ಕೆ ರಹಮತ್ ತರೀಕೆರೆ ಅವರ ಮುನ್ನುಡಿಯ ‘ಬಂಪರ್ ಲಾಟರಿ’ ಹೊಡೆದಿದೆ” ಎಂದು ಬರೆದಿದ್ದರು!

‘ಬೆಚ್ಚಿ ಬೀಳಿಸಿದ ಬೆಂಗಳೂರು’ ಪುಸ್ತಕವನ್ನು ನಮ್ಮೂರಿನ ಲೇಖಕರಾದ ಯು.ಆರ್.ಅನಂತಮೂರ್ತಿ ಅವರಿಂದ ಬಿಡುಗಡೆಗೊಳಿಸಬೇಕು ಎಂಬುದು ನನ್ನ ಆ ದಿನಗಳ ಬಯಕೆಯಾಗಿತ್ತು. ಲಂಕೇಶ್, ತೇಜಸ್ವಿ ಬರೆಹಗಳಂತೆ ಅನಂತಮೂರ್ತಿ ಅವರ ಬರೆಹಗಳೂ ನನ್ನ ಬೌದ್ಧಿಕತೆಗೆ ಕಸುವು ತುಂಬಿದವಗಳಾಗಿದ್ದವು. ಅನಂತಮೂರ್ತಿ ಅವರನ್ನು ಹುಡುಕಿಕೊಂಡು ಬೆಂಗಳೂರಿನ ಅವರ ಡಾಲರ್‍ಸ್ ಕಾಲನಿಯ ಮನೆಗೆ ಹೋಗಿ ಪುಸ್ತಕ ನೀಡಿ ನನ್ನ ಬಯಕೆಯನ್ನು ತಿಳಿಸಿದೆ. ‘ಖಂಡಿತ ನಾನೇ ಬಂದು ಬಿಡುಗಡೆಗೊಳಿಸುತ್ತೇನೆ, ಆದರೆ ಸದ್ಯ ನಾನು ಇಂಗ್ಲೆಂಡಿಗೆ ಹೋಗುತ್ತಿದ್ದು, ಅಲ್ಲಿಂದ ಮರಳಿದ ಮೇಲೆ ಬರುತ್ತೇನೆ’ ಎಂದರು. ಆದರೆ ಆ ನಂತರ ತಿಂಗಳೆರಡಾದರೂ ಅವರನ್ನು ಸಂಪರ್ಕಿಸಿದರೂ ಅವರು ಬರುವ ಬಗ್ಗೆ ಖಚಿತಪಡಿಸಲಿಲ್ಲ. ಈ ನಡುವೆ ತೀರ್ಥಹಳ್ಳಿ ಸಮೀಪದ ಮಠವೊಂದು ಕೊಡುವ ಪ್ರಶಸ್ತಿ ಸ್ವೀಕರಿಸಲು ಬಂದು ಹೋದರು. ಇನ್ನು ಇವರನ್ನು ನಂಬಿದರೆ ಉಪಯೋಗವಿಲ್ಲ ಎಂದು ನೆಂಪೆ ದೇವರಾಜ್, ಶಿವಾನಂದ ಕರ್ಕಿಯವರೆಲ್ಲ ಚಿಂತಿಸಿ ಮೈಸೂರಿನಲ್ಲಿ ಅವರ ಸಹಪಾಠಿಯಾಗಿದ್ದ ಮೊಗಳ್ಳಿ ಗಣೇಶ್ ಅವರನ್ನು ಪುಸ್ತಕ ಬಿಡುಗಡೆಗೆ ಕರೆಸೋಣ ಎಂದು ನಿರ್ಧರಿಸಿದರು. ಇವರ ಕರೆಗೆ ಅವರು ಒಪ್ಪಿದರು.

ಇದನ್ನು ಓದಿದ್ದೀರಾ?: ಗತದ ಗೆಳೆಯ ಗಣೇಶ್

ಅದು 2002 ಇಸವಿ. ಬಿರುಬೇಸಿಗೆಯ ದಿನ.

ತೀರ್ಥಹಳ್ಳಿಯ ಕೊಪ್ಪ ಸರ್ಕಲ್ಲಿನ ಬಂಟರ ಭವನದಲ್ಲಿ ಕಾರ್ಯಕ್ರಮ. ಕಾರ್ಯಕ್ರಮದ ಅಧ್ಯಕ್ಷತೆ ನಮ್ಮೂರಿನವರೇ ಆದ ಜಸ್ಟೀಸ್ ಎನ್.ಡಿ.ವೆಂಕಟೇಶ್ ಅವರದು. ಕಾರ್ಯಕ್ರಮ ಆರಂಭವಾಯಿತು. ಮೊಗಳ್ಳಿಯವರು ಕರಾವಳಿಯಲ್ಲೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬರಬೇಕಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಮೊಗಳ್ಳಿ ಓಡೋಡಿ ಬಂದರು. ಪುಸ್ತಕ ಬಿಡುಗಡೆಗೊಳಿಸಿ ಮೊಗಳ್ಳಿ ಮಾತನಾಡಲು ನಿಂತರು. ಈ ಪುಸ್ತಕದ ಲೇಖಕ ನಾನೆಯೇ ಎಂದು ಪ್ರಶ್ನಿಸಿಕೊಳ್ಳುವಂತೆ ಮೊಗಳ್ಳಿ ಪ್ರೀತಿಯ ಮಳೆ ಸುರಿಸಿದರು. ತಮ್ಮ ಮುನ್ನುಡಿಯ ಮೂಲಕ ಮೊದಲು ಇಂತಹ ಪ್ರಶ್ನೆ ಮೂಡುವಂತೆ ರಹಮತ್ ತರೀಕೆರೆ ಸರ್ ಮಾಡಿದ್ದರು. ಮೊಗಳ್ಳಿ ಅವರು ಎಚ್.ಎಲ್ ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ ಪುಸ್ತಕಸರಣಿಯ ಇನ್ನೊಂದು ಪುಸ್ತಕದಂತೆ ಇದು ಭಾಸವಾಗುತ್ತದೆ ಎಂದರು. ನಾನು ಊರಿಗೆ ಮರಳಿದ್ದನ್ನು ಉಲ್ಲೇಖಿಸಿ ”ಇದು ನಿಜವಾದ ‘ಮರಳಿ ಮಣ್ಣಿಗೆ’, ‘ಊರಿಗೆ ಮರಳಿ ಹೊಗೆಸೊಪ್ಪು ಬೆಳೆಯುವ ಕಾರಂತರ ‘ಮರಳಿ ಮಣ್ಣಿಗೆ’ಯ ರಾಮನದ್ದಲ್ಲ” ಎಂದರು. ಪುಸ್ತಕದ ಒಂದೊಂದು ಅಂಕಣವನ್ನೂ ಉಲ್ಲೇಖಿಸಿ ಸುದೀರ್ಘ ಮಾತನಾಡಿದರು. ನಾನು ಅಂದು ಭೂಮಿ ಮೇಲೆಯೇ ಇರಲಿಲ್ಲ. ಕಾರ‍್ಯಕ್ರಮ ಮುಗಿದ ರಾತ್ರಿ ನಾವು ಗೆಳೆಯರೆಲ್ಲರೂ ಮೊಗಳ್ಳಿಯವರೊಂದಿಗೆ ಊಟಕ್ಕೆ ಕುಳಿತೆವು. ಆಗ ನನ್ನ ಕೆಲವು ಸ್ನೇಹಿತರು ‘ನೀವು ತುಂಬಾ ಹೊಗಳಿದಿರಿ’ ಎನಿಸುತ್ತದೆ ಎಂದರು. ‘ಇಲ್ಲ, ಇಲ್ಲ ನಾನು ಈ ಪುಸ್ತಕವನ್ನು ತುಂಬ ಇಷ್ಟಪಟ್ಟಿದ್ದೇನೆ, ಹಾಗೇ ಮಾತನಾಡಿದೆ’ ಎಂದರು.

ಮೊಗಳ್ಳಿಯವರು ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಪುಸ್ತಕದ ಒಂದು ಅಂಕಣಬರೆಹದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದರು. ‘ಶ್ರೀಮಂತ ಸ್ನೇಹಿತನೊಬ್ಬನ ನಿರ್ಗಮನ’ ಎನ್ನುವ ಶೀರ್ಷಿಕೆಯ ಈ ಅಂಕಣದಲ್ಲಿ ಕೂಲಿ ಕೆಲಸದೊಂದಿಗೆ ಸಣ್ಣದೊಂದು ಗುಡಿಯ ಅರ್ಚಕನೂ ಆಗಿದ್ದ ನನ್ನ ಅಪ್ಪಯ್ಯನ ಬಗ್ಗೆ ಬರೆದಿದ್ದೆ. ಇದು ಅಪ್ಪಯ್ಯ ತೀರಿಕೊಂಡಾಗ ಬರೆದಿದ್ದು. ರಾತ್ರಿ ಊಟ ಮಾಡುವಾಗ ಈ ಅಂಕಣದ ಬಗ್ಗೆ ಮತ್ತೆ ಪ್ರಸ್ತಾಪಿಸಿ, ಇದೊಂದು ಒಳ್ಳೆಯ ಕಥೆಯಾಗುವ ವಸ್ತು ಹೊಂದಿದೆ, ಕಥೆ ಬರೆಯಿರಿ ಎಂದರು. ಒಂದೆರೆಡು ವರ್ಷಗಳ ಅವಧಿಯಲ್ಲಿ ಈ ಬಗ್ಗೆ ಯೋಚಿಸಿ ಒಂದು ಕಥೆ ಬರೆದೆ. ‘ಬಾರಯ್ಯ ಬೆಳದಿಂಗಳೇ’ ಎಂಬ ಆ ಕಥೆ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು. ಇದೇ ಸ್ಪೂರ್ತಿಯಲ್ಲಿ ನಾನು ಹತ್ತಾರು ಕಥೆಗಳನ್ನು ಬರೆದೆ. ಕಥಾಸಂಕಲನವೂ ಪ್ರಕಟವಾಯಿತು. ಹಾಗೇ ನೋಡಿದರೆ ನಾನು ಕಾಲೇಜು ದಿನಗಳಲ್ಲಿಯೇ ಕಥೆ ಬರೆದಿದ್ದೆ. ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಕಥಾಸ್ಪರ್ಧೆಯಲ್ಲಿ ಅದಕ್ಕೆ ಬಹುಮಾನವೂ ಬಂದಿತ್ತು. ಆದರೆ ಮೊಗಳ್ಳಿಯವರು ಹೆಚ್ಚಿಸಿದ ಆತ್ಮವಿಶ್ವಾಸ ಬಹಳ ದೊಡ್ಡದು.

ಮತ್ತೆ ಮತ್ತೆ ಓದಬೇಕೆನಿಸುವ ಕಥೆಗಳನ್ನು ಮೊಗಳ್ಳಿ ಗಣೇಶ ಅವರು ನೀಡಿದ್ದಾರೆ. ಅವರ ಕೊನೆಯ ಕಥಾಸಂಕಲನ ‘ದೇವರ ದಾರಿ’ ಕೂಡ ಮೊಗಳ್ಳಿಯವರ ಮಾಂತ್ರಿಕತೆಯಿಂದ ಮೂಡಿಬಂದ ಕಥೆಗಳನ್ನು ಒಳಗೊಂಡಿವೆ. ಈ ಸಂಕಲನದಲ್ಲಿ ಒಟ್ಟು ಹತ್ತೊಂಬತ್ತು ಕಥೆಗಳಿವೆ.

ಬಡ ದಲಿತರ, ದಲಿತ ಹೆಣ್ಣುಮಕ್ಕಳ ಜೀವನಪ್ರೀತಿ, ಬದುಕಲಿಕ್ಕಾಗಿನ ನಿತ್ಯದ ಹೋರಾಟ, ಅವರ ಅಪಾರ ಚೈತನ್ಯ, ಕೆಚ್ಚು ಇವುಗಳನ್ನೆಲ್ಲ ಈ ಕಥೆಗಳು ತಾಯ್ತನದಲ್ಲಿ ನಿರೂಪಿಸುತ್ತವೆ. ಮನುಷ್ಯನ ಹಿಂಸಾರುಚಿಯ ತಹತಹಿಕೆಯನ್ನು, ಈ ತಹತಹಿಕೆ ಸೃಷ್ಟಿಸುವ ದಾರುಣತೆಯನ್ನು ಈ ಕಥೆಗಳು ಚಿತ್ರಿಸುತ್ತವೆ.

ದಲಿತರನ್ನು ದೈಹಿಕ ಹಿಂಸೆಯ ಮೂಲಕ, ಅವಮಾನಿಸುವ ಮಾನಸಿಕ ಹಿಂಸೆಯ ಮೂಲಕ, ಅವರ ಹೊಲ-ಗುಡಿಸಲುಗಳಿಗೆ ಬೆಂಕಿ ಹಚ್ಚಿ ಅವರ ಕುಲವನ್ನೇ ನಾಶ ಮಾಡುವ ಮೇಲ್ಜಾತಿಗಳ ಮೇರೆ ಮೀರಿದ ಕ್ರೌರ್ಯ ಇಲ್ಲಿನ ಕಥೆಗಳಲ್ಲಿ ಮತ್ತೆ ಮತ್ತೆ ಮರುಕಳಿಸುತ್ತ ಸಂವೇದನಾಶೀಲ ಓದುಗನನ್ನು ಅಸ್ವಸ್ಥಗೊಳಿಸುತ್ತವೆ. ಯಾವುದೋ ಕಾಲದಲ್ಲಿ ಊರಿನ ಜಲದೇವತೆಯಂತೆ ಮೆರೆದಿದ್ದ, ಆದರೆ ಈಗ ಪಾಳುಬಿದ್ದ, ಕೊಳಕು ಕೊಂಪೆಯಾಗಿದ್ದ ಕೊಳವನ್ನೂ ಅದರ ಸುತ್ತಮುತ್ತಲ ವಿಶಾಲ ಜಾಗವನ್ನು ಅದರ ಮಾಲೀಕನ ಉದಾರತೆಯಿಂದ ಪಡೆದ ಊರ ದಲಿತರು ಅದನ್ನು ಸುಸ್ಥಿತಿಗೆ ತಂದು ಬೆಳೆ ಬೆಳೆಯತೊಡಗಿದಾಗ ಅದನ್ನು ಸಹಿಸಿಕೊಳ್ಳಲಾಗದ ಮೇಲ್ಜಾತಿಗಳು ಆ ತೆನೆಭರಿತ ಹೊಲವನ್ನು ಬೆಂಕಿಯಿಟ್ಟು ನಾಶಪಡಿಸುವ ದುರಂತದ ‘ಜಾಂಬವತಿ ಕೊಳ’ ಕಥೆ, ದಲಿತರು ಸಂಗ್ರಹಿಸಿದ ಕಟಾವಿನ ನಂತರ ಅಳಿದುಳಿಯುವ ಕಾಳುಕಡಿಗಳಿಗೆ ಬೆಂಕಿ ಕೊಡುವ ‘ಅಕ್ಕಲು’ ಕಥೆ, ತನ್ನೂರ ಜಾತ್ರೆಗೆ ಬಂದಿರುವ ಬಳ್ಳಾರಿಯಲ್ಲಿರುವ ದಲಿತ ಯುವಕ ಪರಮೇಶನನ್ನು ಹಬ್ಬದೂಟಕ್ಕೆ ಕರೆದು ಅವಮಾನಿಸುವ ಹಳ್ಳಿಗೌಡನ ಕ್ರೌರ್ಯವನ್ನು ಕುರಿತ ‘ಸತ್ಕಾರ’ ಕಥೆಗಳಲ್ಲೆಲ್ಲ ಮೇಲ್ಜಾತಿಗಳು ದಲಿತರಿಗೆ ಎಸಗುವ ದೈಹಿಕ ಮತ್ತು ಮಾನಸಿಕ ಕ್ರೌರ್ಯ ಮುಖಕ್ಕೆ ರಾಚುತ್ತವೆ. 

ಆದರೆ ಕಥೆಗಾರ ಈ ಎಲ್ಲ ಹಿಂಸೆಗಳನ್ನು ಯಾವುದೇ ಒಂದು ವರ್ಗದ ವಿಕೃತಿಯಾಗಿ ನೋಡುವುದಿಲ್ಲ. ದಲಿತಲೋಕದಲ್ಲಿಯೂ ಹಿಂಸೆ ವಿವಿಧ ರೂಪಗಳಲ್ಲಿರುವುದನ್ನು ಈ ಕಥೆಗಳು ವಿಷಾದದಿಂದ ನಮ್ಮ ಮುಂದಿಡುತ್ತವೆ. ತನ್ನ ಗಂಡ ಎರಡನೇ ಮದುವೆಯಾಗುತ್ತಿದ್ದಾನೆ ಎಂಬುದನ್ನು ತಿಳಿದ ದಲಿತ ಹೆಣ್ಣೊಬ್ಬಳು ಅದನ್ನು ಪ್ರಶ್ನಿಸಲು ಹೊರಟಾಗ ಆಕೆಯನ್ನು ಅಮಾನುಷವಾಗಿ ಗಂಡ ಥಳಿಸುವುದೂ, ಇದನ್ನು ನೋಡಿಯೂ ಆತನ ಕ್ರೌರ್ಯದ ಅಟ್ಟಹಾಸಕ್ಕೆ ಬೆದರಿಯೋ, ಸ್ವಂತ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಈ ಹಿಂಸೆಯನ್ನು ನೋಡಿಯೂ ಕೇರಿಯ ಜನ ಸ್ಪಂದಿಸದಿರುವ ‘ದೇವರ ದಾರಿ’, ಜೂಜಿಗೆ ಬಿದ್ದ ಗಂಡ ಹೆಂಡತಿಯನ್ನು ಅಮಾನುಷವಾಗಿ ಹಿಂಸಿಸುವ ದಾರುಣ ಚಿತ್ರಗಳ ‘ಕತ್ತಲಿಗೆ ಕಿಚ್ಚು ಹಚ್ಚಿ’ ಕಥೆ, ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆ ಸಂದರ್ಭದ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಪ್ರಾಮಾಣಿಕವಾಗಿ ಹಣದ ಲೇವಾದೇವಿ ಮಾಡುವ ತನ್ನನ್ನು ತನ್ನದೇ ಕೇರಿಯ ಜನ ಹಿಂಸಿಸಿ ತನ್ನ ಬದುಕನ್ನು ನಾಶ ಮಾಡುವಾಗ ತನಗಾದ ಅನ್ಯಾಯವನ್ನು ನೇರ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕಂಡು ನಿವೇದಿಸಿಕೊಳ್ಳುವ ತಾತ, ಅರಸು ನೀಡಿದ ಸರ್ಕಾರಿ ಜಮೀನನ್ನು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಳ್ಳುವಾಗಲೇ ಅದನ್ನು ದೋಚುವ ಸಂಚುಗಳು (ತುರ್ತು ಪರಿಸ್ಥಿತಿ) ಈ ಮಾತುಗಳಿಗೆ ನಿದರ್ಶನ ಒದಗಿಸುತ್ತವೆ. 

ಮೇಲ್ಜಾತಿ ಗಂಡು ಮತ್ತು ದಲಿತ ಹೆಣ್ಣಿನ ನಡುವಿನ ದೈಹಿಕ ಸಂಬಂಧಗಳು ಎರಡೂ ಸಮುದಾಯಗಳ ಕೆಲವರ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಠೆಗಳ ಕಾರಣದಿಂದಾಗಿ ಎರಡೂ ಕುಟುಂಬಗಳನ್ನೂ ನರಳಿಸುವ ಮತ್ತು ದಾರುಣ ಅಂತ್ಯಕ್ಕೆ ದೂಡುವ ವಸ್ತುವುಳ್ಳ ‘ರುಕ್ಮಿಣಿ’ ಕಥೆ, ದಲಿತರನ್ನು ಅಮಾನುಷವಾಗಿ ನಡೆಸಿಕೊಂಡ ಗೌಡನ ಕುಟುಂಬವೇ ಕಾಲಾಂತರದಲ್ಲಿ ದಯನೀಯ ಸ್ಥಿತಿಗೆ ತಲುಪುವುದನ್ನು ಗತವನ್ನೂ ವರ್ತಮಾನವನ್ನೂ ಮುಖಾಮುಖಿಗೊಳಿಸುವ ವಿಶಿಷ್ಟ ತಂತ್ರವನ್ನು ಬಳಸಿ ಕರುಣೆಯಿಂದ ಚಿತ್ರಿಸುವ ‘ನಮ್ಮೂರ ಸಿದ್ದೇಗೌಡ’ ಕಥೆ, ‘ನಮ್ಮ ಕೇರಿಗೆ ಬಂದು ನೀರು ಕುಡಿದು ನಮ್ಮನ್ನು ಮುಟ್ಟಿಸಿಕೊಳ್ಳಿ’ ಎಂಬ ನೀರಧರಣಿ ಹಮ್ಮಿಕೊಳ್ಳುವ ಹಳ್ಳಿಯೊಂದರ ಹೊಲಗೇರಿ, ಅದನ್ನು ಬೆಂಬಲಿಸಿ ಹೋರಾಟಕ್ಕೆ ಬರುವ ದಲಿತ ಸಂಘರ್ಷ ಸಮಿತಿ, ಇಡೀ ದಿನ ಕಾದರೂ ನೀರು ಕುಡಿಯಲು ಯಾರೂ ಬಾರದಿದ್ದಾಗ ದುಷ್ಟನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಹುಚ್ಚಿಯಾದ ಅಯ್ನೋರ ಮಗಳು ಜಲಜಾಕ್ಷಿಯ ಪ್ರವೇಶವಾಗಿ ಅವಳಿಗೆ ಚಿಕಿತ್ಸೆ ಕೊಡಿಸಿ ಗುಣಪಡಿಸುವ ದಲಿತ ಸಂಘರ್ಷ ಸಮಿತಿಯ ಮುಖಂಡರು, ಆ ಮುಖಂಡರಲ್ಲಿಯೇ ಒಬ್ಬರು ಅವಳನ್ನು ಮದುವೆಯಾಗುವ ‘ನೀರಧರಣಿ’ ಕಥೆಗಳು ಮೊದಲಿಗೆ ಪ್ರಸ್ತಾಪಿಸದ ಕಥೆಗಳೊಂದಿಗೆ ಮತ್ತೆ ಮತ್ತೆ ಕಾಡುವ ಕಥೆಗಳಾಗಿವೆ.

ಮೊಗಳ್ಳಿಯವರು ಪುಸ್ತಕದ ತಮ್ಮ ಮಾತಿನಲ್ಲಿ ‘ನಾನು ಜಾಗತೀಕರಣದ ಪರ ಎಂಬ ಒಂದು ಬೀಸು ಅಭಿಪ್ರಾಯವಿದೆ. ಇರಬಹುದು, ಆದರೆ ಕಥೆ ಬರೆವಾಗ ನಾನು ಅದನ್ನು ಅನುಮಾನಿಸುತ್ತೇನೆ; ವೈಚಾರಿಕ ನಿರ್ವಚನದಲ್ಲಿ ಅದರ ಬಗ್ಗೆ ಉದಾರವಾಗಿರುತ್ತೇನೆ’ ಎಂದಿದ್ದಾರೆ. ಇಲ್ಲಿನ ಕಥೆಗಳನ್ನು ಓದಿದಾಗ ಈ ಕಥೆಗಳು ಜಾಗತೀಕರಣವನ್ನು ಕೇವಲ ಅನುಮಾನಿಸುತ್ತಿಲ್ಲ, ಕಟುವಾಗಿ ವಿರೋಧಿಸುತ್ತಿವೆ ಎಂಬುದು ಗಮನಕ್ಕೆ ಬರುತ್ತವೆ. ಈ ವಿರೋಧ ಮೊಗಳ್ಳಿಯವರು ತಮ್ಮ ಕಥೆಗಳಲ್ಲಿ ಕಟ್ಟಿಕೊಡುವ ಜೀವಂತ ಬದುಕಿನ ಮೂಲಕ ಹೊಮ್ಮುವುದರಿಂದ ವೈಚಾರಿಕ ನಿರ್ವಚನದಲ್ಲಿ ಮೊಗಳ್ಳಿ ಅವರ ಜಾಗತೀಕರಣದ ಪರವಾಗಿ ಇದ್ದಿರಬಹುದಾದ ನಿಲುವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇವು ಓದುಗನನ್ನು ತಟ್ಟುತ್ತವೆ. ‘ಅಕ್ಕಲು’ ಕಥೆಯು ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಜಾಗತೀಕರಣದ ಜತೆಗಾರ ಕೋಮುವಾದದ ಬಗ್ಗೆಯೂ ಕಥೆಗಾರನಿಗೆ ಆಕ್ರೋಶವಿದೆ. ‘ದೇವರ ಮರ’ ಮತ್ತು ‘ದೇಶದ್ರೋಹ’ ಕಥೆಗಳು ಕೋಮುವಾದ ಹರಡುವ ‘ಮುಸ್ಲಿಂ ವಿರೋಧ’ ಮತ್ತು ‘ಗೋಮಾಂಸ ಸೇವನೆಯ ವಿರೋಧ’ ವಿಚಾರ ಕುರಿತದದ್ದಾಗಿವೆ. ‘ದೇಶದ್ರೋಹ’ ಕಥೆ ದಟ್ಟವಿವರಗಳಿಂದ ಕೂಡಿ ಪರಿಣಾಮಕಾರಿಯಾಗಿದ್ದರೆ ‘ದೇವರ ಮರ’ ಕಥೆ ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿರುವ ವ್ಯವಸ್ಥಿತ ಹುನ್ನಾರಗಳ ಕುರಿತಂತೆ ಚಿಂತಿಸದೆ ಈ ಸಂಘರ್ಷವನ್ನು ಸರಳೀಕರಿಸಿ ನೋಡುತ್ತಿದೆ ಎನಿಸುತ್ತದೆ. ಕಥೆಯ ಅಂತ್ಯ ಜೀವಪರ ಕಥೆಗಾರನ ರಮ್ಯ ಕಲ್ಪನೆಯಂತಿದೆ.

ಮನುಕುಲವನ್ನು ತಾಯ್ತನದಲ್ಲಿ ಕಾಪಿಡುವ ಸಾಹಿತ್ಯರಚನೆಯಲ್ಲಿ ತೊಡಗಿರುವ ಲೇಖಕರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಮದ್ಯದ ವ್ಯಸನಕ್ಕೆ ಒಳಗಾಗಿ ಅಕಾಲಿಕವಾಗಿ ನಮ್ಮನ್ನು ಅಗಲುತ್ತಿರುವುದು ವಿಪರ್ಯಾಸದ ಸಂಗತಿ. ಡಿ.ಆರ್ ನಾಗರಾಜ್, ಆಲನಹಳ್ಳಿ ಕೃಷ್ಣ ಇವರೆಲ್ಲ ಹೀಗೆ ಬಹುಬೇಗ ನಮ್ಮಿಂದ ದೂರವಾದವರು. ಯುವಕವಿ ಲಕ್ಕೂರು ಸಿ ಆನಂದ ಇತ್ತೀಚಿನ ವರ್ಷಗಳಲ್ಲಿ ನಮ್ಮನ್ನು ಅಗಲಿದರು. ಈಗಲೂ ಮದ್ಯದ ವ್ಯಸನದಲ್ಲಿರುವ ಸಾಹಿತಿಗಳಿದ್ದಾರೆ. ದಮನಿತ ವರ್ಗದಿಂದ ಬಂದ ಸಾಹಿತಿಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅವರು ಇಂತಹ ದೌರ್ಬಲ್ಯಗಳಿಂದ ಕಣ್ಮರೆಯಾಗುವುದು ಸಂಕೀರ್ಣ ಕಾಲಘಟ್ಟದಲ್ಲಿರುವ ಈ ಸಮಾಜಕ್ಕೆ ಅವರು ಎಸಗುವ ವಂಚನೆಯಾಗುತ್ತದೆ. ಮೊಗಳ್ಳಿ ನನ್ನ ಪುಸ್ತಕ ಬಿಡುಗಡೆಗೆ ಎರಡು ದಶಕಗಳ ಹಿಂದೆ ಬಂದಾಗ ತಾನೀಗ ಕುಡಿಯುವುದನ್ನು ಬಿಟ್ಟಿದ್ದೇನೆ ಎಂದಿದ್ದರು. ಈಗ ನೋಡಿದರೆ ಮತ್ತೆ ಅದರ ಹಿಂದೆ ಬಿದ್ದು ನಮ್ಮಿಂದ ದೂರವಾಗಿದ್ದಾರೆ.

ಇದನ್ನು ಓದಿದ್ದೀರಾ?: ಹೊಗಳಿದರಷ್ಟೇ ಸಾಕೇ, ಜಾರ್ಜ್ ಮೌಲ್ಯಗಳನ್ನು ಜರ್ನಲಿಸಂಗೆ ಅಳವಡಿಸಿಕೊಳ್ಳಲೂಬೇಕೇ?

ಮೊಗಳ್ಳಿ ದಲಿತರಾಗಿರಬಹುದು. ಅವರು ಬರೆದ ಕಥೆಗಳೂ ದಲಿತಲೋಕದ್ದೇ ಆಗಿರಬಹುದು. ಈ ಕಾರಣಗಳಿಂದ ಮೊಗಳ್ಳಿ ಅವರನ್ನು ದಲಿತ ಲೇಖಕ, ದಲಿತ ಕಥೆಗಾರ ಎಂದು ಕರೆಯುವುದು ಘೋರ ಅನ್ಯಾಯದಂತೆ ಕಾಣುತ್ತದೆ. ಬಹಳ ಒಳ್ಳೆಯ ಕಥೆಗಾರರಾದ ದೇವನೂರು, ಮಂಜುನಾಥ ಲತಾರಂತಹ ಅನೇಕರು ಕೂಡ ಇಂತಹ ಅನ್ಯಾಯಕ್ಕೆ ಒಳಗಾಗಿದ್ದಾರೆ. ಹಾಗೆ ನೋಡಿದರೆ ನಾವು ಯಾರನ್ನು ‘ಬ್ರಾಹ್ಮಣ ಲೇಖಕ’, ‘ಲಿಂಗಾಯತ ಲೇಖಕ’ ಎಂದು ಕರೆಯುವುದಿಲ್ಲವೊ, ಅಂತಹ ಕೆಲವು ಸಾಹಿತಿಗಳ ಕಥೆ-ಕಾದಂಬರಿಗಳು ಈ ಸಾಹಿತಿಗಳು ಹುಟ್ಟಿದ ಜಾತಿಗಳ ಪರವಾದ ವಾದಮಂಡನೆಯಂತಿವೆ ಎಂಬುದನ್ನು ಗುರುತಿಸಲು ವಿಶೇಷವಾದ ವಿಮರ್ಶಾಪ್ರತಿಭೆಯ ಅಗತ್ಯವಿಲ್ಲ. ಆದರೆ ದೀರ್ಘ ಪರಂಪರೆಯಿಂದ ಅಗಾಧ ಅವಮಾನ, ಹಿಂಸೆಗೆ ಒಳಗಾದ ಸಮುದಾಯದ ಪ್ರತಿಭೆಗಳು ಪ್ರತೀಕಾರ, ಸ್ವಾನುಕಂಪಗಳಿಗೆ ಬದಲಾಗಿ ಇಡೀ ಮನುಕುಲವನ್ನು ತಾಯ್ತನದಲ್ಲಿ ನೋಡುತ್ತ, ದಲಿತನ ಕ್ರೌರ್ಯವನ್ನೂ, ಗೌಡನ ತಬ್ಬಲಿತನವನ್ನೂ ಗುರುತಿಸುವ ವಿವೇಕವನ್ನು ಕಾಯ್ದುಕೊಂಡು ಬರೆಯುತ್ತಿರುವುದು ಸಣ್ಣ ಸಂಗತಿಯಲ್ಲ. ಹಾಗಾಗಿ ಮೊಗಳ್ಳಿ ಅವರ ‘ದೇವರ ದಾರಿ’ ಸಂಕಲನದ ಕಥೆಗಳನ್ನೂ ಒಳಗೊಂಡಂತೆ ಅವರ ಕಥೆಗಳು ದಲಿತಲೋಕದಿಂದ ಮೂಡಿಬಂದ ಕಥೆಗಳಾದರೂ ಅವು ಕೇವಲ ದಲಿತರ ಕಥೆಗಳಲ್ಲ. ಇಡೀ ಮನುಕುಲದ ಕಥೆಗಳು.

ಮೊಗಳ್ಳಿಯವರ ಜವಾಬ್ದಾರಿ ಇನ್ನೂ ತುಂಬ ಇತ್ತು. ಆದರೆ ಅವರು ಬೇಜವಾಬ್ದಾರಿಯಿಂದ ನಿರ್ಗಮಿಸಿದ್ದಾರೆ. ಆದರೆ ಅವರ ಕಥೆಗಳು ಕನ್ನಡ ಸಾಹಿತ್ಯಲೋಕದಲ್ಲಿ ಯಾವಾಗಲೂ ಮಿನುಗುತ್ತಿರುತ್ತವೆ. ಜಾತಿ ಅಹಮ್ಮಿನ ಕೋಟೆಯಲ್ಲಿ ನರಳುತ್ತಿರುವವರ ರೋಗವನ್ನೂ ಗುಣಪಡಿಸುತ್ತಿರುತ್ತವೆ.

1417716 531606640266610 1974048228 o
ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿ | ಬರದ ನಾಡಿನಲ್ಲೂ ಹಸಿರು ಚಿಗುರಿಸಿದ ಸರ್ಕಾರಿ ಶಾಲೆ

ಬರದ ನಾಡು ಎನಿಸಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಭೀಮಾ ನದಿಯ...

ದಾವಣಗೆರೆ | ವೈದಿಕ, ಅಧಿಕಾರಶಾಹಿಗಳಿಂದ ವಿಜ್ಞಾನ, ವೈಚಾರಿಕತೆ ನಿರಾಕರಿಸುವ ಯತ್ನ: ಡಾ. ಜಿ ರಾಮಕೃಷ್ಣ

"ಹಸು ಆಮ್ಲಜನಕ ಉಸಿರಾಡಿ ಆಮ್ಲಜನಕವನ್ನೇ ಹೊರಬಿಡುತ್ತದೆ ಎನ್ನುವ ಅವೈಜ್ಞಾನಿಕ ಮಿಥ್ಯ ಹರಡಲಾಗುತ್ತಿದೆ....

ʼಶರಾವತಿ ಪಂಪ್ಡ್ ಸ್ಟೋರೇಜ್ʼ: ಪರಿಸರವಾದಿಗಳು ವಿರೋಧಿಸುತ್ತಿರುವುದೇಕೆ?

ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶರಾವತಿ...

ಗತದ ಗೆಳೆಯ ಗಣೇಶ್

ಅಕ್ಟೋಬರ್ 5ರಂದು ಇಲ್ಲವಾದ ಕತೆಗಾರ ಮೊಗಳ್ಳಿ ಗಣೇಶ್‌ಗೆ, ಸಮಕಾಲೀನ ಬರಹಗಾರರು ಸಮನಾಗಿ...

Download Eedina App Android / iOS

X