ಭೈರಪ್ಪ ಮತ್ತು ಕುತರ್ಕದ ಉರುಳು

Date:

Advertisements
ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ ಸಹಾನುಭೂತಿಯೇ ಇಲ್ಲದಾತ ಯಾವುದೇ ಸೃಷ್ಟಿಕ್ರಿಯೆಯಲ್ಲಿ ಹೇಗೆ ತೊಡಗಲು ಸಾಧ್ಯ? ಮಾನವಪ್ರೇಮವೇ ಎಲ್ಲ ಕಲೆಯ ತಳಹದಿಯಲ್ಲವೇ?... ಇತ್ತೀಚೆಗೆ ಇಲ್ಲವಾದ ಎಸ್.ಎಲ್. ಭೈರಪ್ಪನವರ ಕುರಿತ ಬರೆಹ

ಹೀಗೊಂದು ಕಥೆ:

ಪ್ರಾಚೀನ ಚೀನಾದಲ್ಲಿ ತರ್ಕಶಾಸ್ತ್ರ ಕಲಿಸುವ ಗುರುಗಳಿದ್ದರಂತೆ- ಈ ಕಾಲದ ವಕೀಲರನ್ನು ತಯಾರು ಮಾಡುವ ಶಾಲೆಗಳಿದ್ದಂತೆ. ಒಮ್ಮೆ ಅಲ್ಲಿಗೆ ಒಬ್ಬ ವಿದ್ಯಾರ್ಥಿ ಬಂದ. ಗುರುಗಳಲ್ಲಿ ಕೇಳಿಕೊಂಡ- ‘ಗುರುಗಳೇ ನನ್ನ ಬಳಿ ಹಣವಿಲ್ಲ. ನೀವು ನನಗೆ ವಿದ್ಯೆ ಕೊಡಿ, ನಾನು ಇಲ್ಲಿ ಕಲಿತು ಹೊರಹೋಗಿ ಕೈಗೆತ್ತಿಕೊಳ್ಳುವ ಮೊದಲ ಮೊಕದ್ದಮೆಯಲ್ಲಿ ನಾನು ಗೆದ್ದರೆ, ಆ ಮೊಕದ್ದಮೆಯ ಪೂರ್ತಿ ಶುಲ್ಕ ನಿಮಗೆ ಕೊಡುತ್ತೇನೆ. ಅದೇ ನನ್ನ ದಕ್ಷಿಣೆ. ನಾನು ಸೋತರೆ ಮಾತ್ರ ನಾನೇನೂ ಕೊಡಬೇಕಿಲ್ಲ, ಒಪ್ಪಿಕೊಳ್ಳಿ ಗುರುಗಳೇ’ ಎಂದು ಮನವಿ ಮಾಡಿಕೊಂಡ. ಗುರುಗಳು ಒಪ್ಪಿದರು. ಯಾಕೆಂದರೆ ಆತ ವಕೀಲನಾಗಿ ಮುಂದುವರೆಯಬೇಕಾದರೆ ಮೊದಲ ಮೊಕದ್ದಮೆ ಗೆಲ್ಲಲೇಬೇಕು; ಇಲ್ಲವಾದರೆ ಅವನಿಗೆ ಭವಿಷ್ಯವಿರುವುದಿಲ್ಲ ಎಂದು ಅವರಿಗೆ ಗೊತ್ತಿತ್ತು.

ಸರಿ, ಗುರುಗಳು ಅವನಿಗೆ ತಮ್ಮ ವಿದ್ಯೆಯನ್ನೆಲ್ಲ ಧಾರೆಯೆರೆದರು. ಬೀಳ್ಕೊಟ್ಟರು.

Advertisements

ಅಲ್ಲಿಂದ ಹೊರ ಬಂದ ಶಿಷ್ಯ ಎಷ್ಟು ಕಾಲವಾದರೂ, ಯಾವುದೇ ಮೊಕದ್ದಮೆ ಕೈಗೆತ್ತಿಕೊಳ್ಳಲೇ ಇಲ್ಲ! ಗುರುಗಳಿಗೆ ಅರ್ಥವಾಯಿತು. ಇವನು ನನ್ನ ಶುಲ್ಕ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡುತ್ತಿದ್ದಾನೆ ಎಂದು ಮನಗಂಡು ದೊರೆಯ ಬಳಿ ದೂರು ಒಯ್ದರು. ದೊರೆ ಗುರುವಿನ ದೂರು ಆಲಿಸಿದ. ಶಿಷ್ಯನಿಗೆ ಬುಲಾವ್ ಹೋಯಿತು. ನ್ಯಾಯದಾನಕ್ಕಾಗಿ ವಿಚಾರಣೆ ಆರಂಭವಾಯಿತು. ಮೊದಲು ಗುರು ತನ್ನ ವಾದ ಮುಂದಿಟ್ಟ.

‘ಈ ಮೊಕದ್ದಮೆಯಲ್ಲಿ ದೊರೆ ಏನೇ ತೀರ್ಪು ಕೊಟ್ಟರೂ, ನಾನೇ ಗೆದ್ದಂತೆ. ಯಾಕೆಂದರೆ ತೀರ್ಪು ಶಿಷ್ಯನ ಪರ ಬಂದರೆ ಶಿಷ್ಯ ತನ್ನ ಮೊದಲ ಮೊಕದ್ದಮೆ ಗೆದ್ದಂತಾಗುತ್ತದೆ; ಆಗ ಕರಾರಿನಂತೆ ದುಡ್ಡು ಕೊಡಬೇಕಾಗುತ್ತದೆ. ಅಥವಾ ನನ್ನ ಪರ ತೀರ್ಪು ಬಂದರೆ- ಆಗಲೂ ತೀರ್ಪಿನ ಪ್ರಕಾರವೇ ನನಗೆ ದುಡ್ಡು ಕೊಡಬೇಕಾಗುತ್ತದೆ. ಅಂದರೆ ಎರಡೂ ವಿಧದಲ್ಲಿ ನನ್ನ ದುಡ್ಡು ನನಗೆ ಸಲ್ಲಲೇಬೇಕಾಗುತ್ತದೆ…’

ಇದಾದ ಮೇಲೆ ಶಿಷ್ಯ ತನ್ನ ವಾದ ಮಂಡಿಸಿದ: ‘ದೊರೆ ನನ್ನ ಪರ ತೀರ್ಪು ಕೊಟ್ಟರೆ, ತಾನು ದುಡ್ಡು ಕೊಡಬೇಕಾಗಿಲ್ಲ ಎಂದರ್ಥ. ಇಲ್ಲ, ಗುರುವಿನ ಪರ ತೀರ್ಪು ಕೊಟ್ಟರೆ, ಆಗ ನಾನು ನನ್ನ ಮೊದಲನೇ ಮೊಕದ್ದಮೆಯಲ್ಲಿ ಸೋತೆ ಎಂದರ್ಥ, ಆಗಲೂ ಕರಾರಿನಂತೆ ನಾನು ದುಡ್ಡು ಕೊಡಬೇಕಾಗಿಲ್ಲ…’

SLB ok

ಇದನ್ನು ಬಿಡಿಸಿ ನ್ಯಾಯ ಕೊಡುವುದು ಹೇಗೆ?

ಈ ಕಗ್ಗಂಟಿನ ಕಥೆ ಹೇಳಿದವರು ಎಸ್.ಎಲ್. ಭೈರಪ್ಪ. ನಾನಾಗ ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ. ನಾನು ಭಾಗವಹಿಸಿದ್ದ ಒಂದು ಅಂತರಶಾಲಾ ಚರ್ಚಾಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಭೈರಪ್ಪ ಈ ಕಥೆ ಹೇಳಿದಾಗ ನಾನು ಬೆರಗಾಗಿಬಿಟ್ಟೆ. ಎಂಥ ‘ಶಾಣ್ಯಾ’ ಕಥೆ!… ಭೈರಪ್ಪನವರು ಆಗ ಬೇರೇನು ಮಾತನಾಡಿದರೋ ನೆನಪಿಲ್ಲ. ಆದರೆ ಈ ಕಥೆ ಮಾತ್ರ ಆಗಿನಿಂದ ನನ್ನ ತಲೆಯಲ್ಲಿ ಉಳಿದುಬಿಟ್ಟಿತು.

ಇದನ್ನು ಓದಿದ್ದೀರಾ?: ಭೈರಪ್ಪ- ‘ಗೃಹಭಂಗ’ ದಿಂದ ‘ಉತ್ತರಕಾಂಡ’ದವರೆಗೆ

ಮುಂದಕ್ಕೆ ನಾನು ಅನೇಕ ಬಾರಿ ಗೆಳೆಯರ ಮುಂದೆಲ್ಲ ಈ ಕತೆಯನ್ನು ಹೇಳಿದ್ದಿದೆ. ಆದರೆ ಇಂಥ ಕುತರ್ಕದ ಉರುಳು ಹೇಗೆಲ್ಲ ಕೊರಳಿಗೆ ಸುತ್ತಿಕೊಳ್ಳಬಹುದೆಂಬ ಕಲ್ಪನೆ ನನಗಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಾಯವೂ ಅದಲ್ಲ…

ಇರಲಿ, ನಾನು ಭೈರಪ್ಪನವರನ್ನು ಮುಖತಃ ಕಂಡಿದ್ದು ಅದೇ ಮೊದಲು. ಆ ವೇಳೆಗಾಗಲೇ ಅವರು ಲೇಖಕರಾಗಿ ಪ್ರಸಿದ್ಧರು. ಮುಂದಕ್ಕೆ ಬೆರಳೆಣಿಕೆ ಬಾರಿ ಕೆಲವು ಸಭೆ ಸಮಾರಂಭಗಳಲ್ಲಿ ಅವರನ್ನು ನೋಡಿದ್ದಿದೆ. ಆದರೆ ಎಂದೂ ನನಗೆ ಅವರ ಪರಿಚಯವಾಗಲಿಲ್ಲ. ಅವರ ಹಲವಾರು ಕಾದಂಬರಿಗಳನ್ನು ನಾನು ಓದಿದ್ದೇನೆ. ನಾನು ಬಲ್ಲ ಎಲ್ಲರೂ ಅವರ ‘ಗೃಹಭಂಗ’ ಕಾದಂಬರಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಆದರೆ ನನಗೇಕೋ, ಇಪ್ಪತ್ತು ಪುಟದ ಮೇಲೆ ಆ ಕೃತಿಯ ಓದು ಸಾಗಲಿಲ್ಲ.

ಆದರೆ ಭೈರಪ್ಪನವರ ‘ಪರ್ವ’ ನನ್ನನ್ನು ಗಾಢವಾಗಿ ಸೆಳೆದ ಕೃತಿ. ಅದ್ಭುತ ಎನ್ನಬಹುದಾದ ಕಥಾ ಸಂವಿಧಾನ, ಆ ವಿವರಗಳು… ಎಲ್ಲವೂ ನನ್ನನ್ನು ಮೋಹಪರವಶಗೊಳಿಸಿದವು. ನಿಜ, ಅದರ ಬಗ್ಗೆ ನನ್ನ ತಕರಾರುಗಳು ಆಗಲೂ ಇದ್ದವು, ಈಗಲೂ ಇವೆ: ಅದರಲ್ಲಿ ಎಲ್ಲಕ್ಕಿಂತ ಮೂಲಭೂತವಾದದ್ದು- ಮಹಾಭಾರತದ ರಮ್ಯ ಪೌರಾಣಿಕ ಧ್ವನಿಪೂರ್ಣ ಆವರಣವನ್ನು ಕಿತ್ತು ಹಾಕಿ ಎಲ್ಲವನ್ನೂ ಶುಷ್ಕ ಕುತರ್ಕದ ಮಾನುಷ ವಲಯಕ್ಕೆ ಇಳಿಸಿದ ಕೂಡಲೇ ವ್ಯಾಸನ ಲೋಕೋತ್ತರ ಯಕ್ಷಿಣಿ ಮಾಯವಾಗಿಹೋಯಿತು. ಅದೇ ಕುತರ್ಕದ ಉರುಳು!!

‘ಪರ್ವ’ದ ಬಗ್ಗೆ ಅನಂತಮೂರ್ತಿಯವರು ಒಂದು ಒಳ್ಳೆಯ ಮಾತು ಹೇಳಿದ್ದರು: ‘ಭೈರಪ್ಪನವರ ಪರ್ವ ಎರಡೋ ಮೂರೋ ಸಾವಿರ ವರ್ಷ ಹಿಂದೆ ನಡೆದ ಕಥೆ. ಆದರೆ ವ್ಯಾಸನ ಮಹಾಭಾರತ ಇಂದಿಗೂ ನಡೆಯುತ್ತಿರುವ ಕಥೆ…!’

ಇನ್ನು, ಏಕಲವ್ಯನ ವಿಷಯದಲ್ಲಿ ಬ್ರಾಹ್ಮಣ ಗುರು ದ್ರೋಣಾಚಾರ್ಯನನ್ನು ನಿರ್ದೋಷಿಯಾಗಿ ಬಿಂಬಿಸಲೆಂದೇ ಭೈರಪ್ಪ ಪರ್ವ ಕಾದಂಬರಿ ಬರೆದರೇ ಎಂಬ ಅನುಮಾನವೂ ಹುಟ್ಟುವಂತಿದೆ… ಅಷ್ಟೆಲ್ಲ ಆದರೂ, ಪರ್ವ ಈಗಲೂ ಕನ್ನಡದ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದು.

*

ನನ್ನ ಹಿರಿಯ ಮಿತ್ರ ಜೆಸುನಾ ಒಮ್ಮೆ ಫೋನ್ ಮಾಡಿದರು. ಭೈರಪ್ಪನವರದೊಂದು ಹೊಸ ಕಾದಂಬರಿ ಬರುತ್ತಿದೆ; ಆದರೆ ಅದಿನ್ನೂ ಮುದ್ರಣವಾಗಿ ಹೊರಬರುವ ಮೊದಲೇ, ಡಿ.ಎಚ್. ಶಂಕರಮೂರ್ತಿಯವರೂ ಸೇರಿದಂತೆ ಹಲವಾರು ಬಿಜೆಪಿ ಮುಖಂಡರ ಕೈಯಲ್ಲಿ ಆ ಕಾದಂಬರಿಯ ಅಧ್ಯಾಯಗಳು ಓಡಾಡುತ್ತಿವೆ ಎಂದರು! ನನಗೆ ಕುತೂಹಲ ಕೆದರಿತು. ‘ಅದೇನೋ ಮುಸ್ಲಿಂ ಇತಿಹಾಸ’ ಎಂದ ಜೆಸುನಾ, ತಾವೂ ಮೊದಲೇ ಒಂದು ಪ್ರತಿ ಕಾದಿರಿಸಿರುವುದಾಗಿಯೂ ತಿಳಿಸಿದರು. ಕಾದಂಬರಿ ಮಾರುಕಟ್ಟೆಗೆ ಬಂದ ದಿನವೇ, ಅವರು ಓದುವ ಮುನ್ನವೇ ಅದನ್ನು ತಂದು ನನ್ನ ಕೈಗೆ ಕೊಟ್ಟರು. ‘ಆವರಣ’ ನನ್ನ ಕೈ ಸೇರಿದ್ದು ಹೀಗೆ. ಕೂಡಲೇ ಒಂದೇ ಸಮ ಓದಿದೆ. ಓದಿದ ಕೂಡಲೇ ಉಸಿರು ಕಟ್ಟಿದಂತಾಯಿತು. ಹೇಗೆ ಸಾಧ್ಯ? ಕನ್ನಡದ ಅತ್ಯಂತ ಪ್ರಮುಖ ಜನಪ್ರಿಯ ಬರಹಗಾರರಲ್ಲೊಬ್ಬರಾದ ಭೈರಪ್ಪನಂಥವರು ದ್ವೇಷವನ್ನೇ ಕಾದಂಬರಿಯ ಜೀವಾಳವಾಗಿರಿಸಿಕೊಂಡು ಇಷ್ಟು ನಗ್ನವಾಗಿ ಬರೆಯಲು ಸಾಧ್ಯವೇ? ದ್ವೇಷ ಹರಡುವುದನ್ನೇ ಪರಮ ಗುರಿಯಾಗಿಸಿಕೊಂಡು ಬರೆದದ್ದನ್ನು ಸೃಜನಶೀಲ ಕೃತಿ ಎಂದು ಕರೆದುಕೊಳ್ಳಲು ಸಾಧ್ಯವೇ? ಒಟ್ಟಿನಲ್ಲಿ ಅದೇ- ಕುತರ್ಕದ ಉರುಳನ್ನು ಎಲ್ಲರ ಕೊರಳಿಗೆ ಸುತ್ತುವ ದುಸ್ಸಾಹಸ!…

ನಾನು ಕದಡಿಹೋದೆ.

ಒಡನೆಯೇ ಆಗ ‘ಅಗ್ನಿ’ ವಾರಪತ್ರಿಕೆ ಸಂಪಾದಕರಾಗಿದ್ದ ಬಸವರಾಜು ಮೇಗಲಕೇರಿಯವರಿಗೆ ಫೋನ್ ಮಾಡಿ ‘ಹೀಗಿದೆ, ಯಾರಾದರೂ ಆವರಣದ ಬಗ್ಗೆ ಬರೆದರೆ ಒಳ್ಳೆಯದು’ ಎಂದೆ. ಅವರು ಕೇಳಬೇಕಾ? ‘ನೀವೇ ಬರೀರಿ’ ಅಂದರು. ಸರಿ. ಅಗ್ನಿ ಪತ್ರಿಕೆಗೆ ‘ಚಡ್ಡಿಗಳ ಪಠ್ಯಪುಸ್ತಕ’ ಎಂಬ ಹೆಸರಿನಲ್ಲಿ ಸಾಕಷ್ಟು ದೀರ್ಘವಾದ ವಿಶ್ಲೇಷಣೆ ಬರೆದೆ. ಆ ಬರಹ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಅದನ್ನು ಓದಿದ ಕೋಟಿಗಾನಹಳ್ಳಿ ರಾಮಯ್ಯ ‘ಇದನ್ನೇ ಇನ್ನಷ್ಟು ವಿಸ್ತಾರವಾಗಿ ಬರಿ, ಒಂದು ಕಿರುಹೊತ್ತಗೆಯಾಗಿ ಪ್ರಕಟಿಸೋಣ’ ಎಂದರು. ಆ ನಡುವೆ ಒಮ್ಮೆ ಪೂರ್ಣಚಂದ್ರ ತೇಜಸ್ವಿಯವರು ಫೋನಿನಲ್ಲಿ ಸಿಕ್ಕು ‘ಅಗ್ನಿ’ ಲೇಖನವನ್ನು ಮೆಚ್ಚಿ ಮಾತಾಡಿದರು. ಜೊತೆಗೆ ‘ಶಂಕ್ರ, ನಾವು ಹಿಂದೂ ಮೂಲಭೂತವಾದಿಗಳ ಬಗ್ಗೆ ನಿಷ್ಠುರವಾಗಿರುವಂತೆ, ಮುಸ್ಲಿಂ ಮತಾಂಧರನ್ನೂ ಖಂಡಿಸಬೇಕು’ ಎಂದರು. ‘ಹೌದು ಸರ್’ ಅಂದೆ. ‘ಇನ್ನೇನು ಅಗ್ನಿ ಲೇಖನವೇ ಕಿರುಹೊತ್ತಗೆಯಾಗಿ ಬರುತ್ತಿದೆ’ ಅಂದಾಗ ‘ನನಗೂ ಕಳಿಸಿಕೊಡಿ’ ಅಂದರು. ಆದರೆ ಆ ಕಿರುಹೊತ್ತಗೆ- ‘ಆವರಣ ಅನಾವರಣ’- ‘ಆದಿಮ ಪ್ರಕಾಶನ’ದ ಮೊದಲ ಪ್ರಕಟಣೆಯಾಗಿ ಹೊರಬರುವ ವೇಳೆಗೆ ತೇಜಸ್ವಿ ನಮ್ಮನ್ನು ತೊರೆದು ಹೋಗಿಬಿಟ್ಟಿದ್ದರು.                      

ಅತ್ತ ‘ಅನಾವರಣ’ದ ಬಿಡುಗಡೆಯೇ ಒಂದು ವಿವಾದಾತ್ಮಕ ವಿದ್ಯಮಾನವಾಗಿಹೋಯಿತು. ಆ ಸಮಾರಂಭ ಒಟ್ಟಾರೆ ಕನ್ನಡ ಸಾಹಿತ್ಯ ಲೋಕದ ಪ್ರತಿಭಟನಾ ಧ್ವನಿಯಾಗಿ ಹೊಮ್ಮಬೇಕೆಂದು ಆಸೆಪಟ್ಟ ಪ್ರೊ. ಗೋವಿಂದಯ್ಯ ಎಲ್ಲ ಪ್ರಮುಖ ಲೇಖಕರನ್ನು ಆಹ್ವಾನಿಸಬೇಕೆಂದು ರಾಮಯ್ಯನಿಗೆ ತಾಕೀತು ಮಾಡಿದರು. ಅದರಂತೆ ಯು.ಆರ್. ಅನಂತಮೂರ್ತಿ, ದೇವನೂರ ಮಹಾದೇವ ಸಭೆಗೆ ಬಂದರು. ಕಾಮರೂಪಿ ಕೂಡ ಬಂದರು. ಚಂದ್ರಶೇಖರ ಕಂಬಾರರು ದಿಲ್ಲಿಗೆ ಹೋಗಿದ್ದರಿಂದ ಬರಲಾಗಲಿಲ್ಲ. ಕುಂ. ವೀರಭದ್ರಪ್ಪ ಮಗನ ಸಿಇಟಿ ಪರೀಕ್ಷೆ ಕಾರಣಕ್ಕೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದರು…

c6579507 e156 4911 bcb1

ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಯು.ಆರ್. ಅನಂತಮೂರ್ತಿಯವರು ಹೇಳಿದ್ದಿಷ್ಟೇ: ‘ಭೈರಪ್ಪ ಒಬ್ಬ ಚರ್ಚಾಪಟುವೇ ಹೊರತು ಕಾದಂಬರಿಕಾರರಲ್ಲ’.

ಆ ಕಿರುಹೊತ್ತಗೆಯಲ್ಲಿ ನಾನೂ ಅದನ್ನೇ ಬರೆದಿದ್ದೆ:

ಸಾವಿರಾರು ವರ್ಷಗಳ ಆಕಾರಹೀನ ದಾಖಲೆಗಳಲ್ಲಿ ತಮಗೆ ಬೇಕಾದ್ದನ್ನು ಹೆಕ್ಕಿಕೊಂಡು ಯಾವ ತೀರ್ಮಾನಕ್ಕೆ ಬೇಕಾದರೂ ಪುರಾವೆಗಳನ್ನು ಗುಡ್ಡೆ ಹಾಕಿ ವಾದಿಸಲು ಸಾಧ್ಯವಿರುವಾಗ, ಇತಿಹಾಸ ರಚನೆಯೂ ಕಥೆ ಕಾದಂಬರಿಗಳಂತೆಯೇ ಕಾಲ್ಪನಿಕ ಸೃಷ್ಟಿಯ ರೂಪ ತಾಳುವುದು ಆಶ್ಚರ್ಯವಲ್ಲ. ಅದಕ್ಕೇ, ಇಸ್ಲಾಂ ಮೂಲಭೂತವಾದವಾಗಲೀ, ಹಿಂದೂ ಮೂಲಭೂತವಾದವಾಗಲೀ, ಯಾವ ಧರ್ಮಾಂಧತೆಯೂ ಮನೋವಿಕಾರವೇ ಎಂದು ಅರಿತವರಾರೂ, ಭೈರಪ್ಪನವರ ಹಾಗೆ ಒಂದರ ಪಕ್ಷ ವಹಿಸಿ ಚಂಡಿ ಹಿಡಿದು ಕೂರುವುದಿಲ್ಲ. ಹಾಗಾದರೆ, ಭೈರಪ್ಪ ಹಾಗೇಕೆ ಮಾಡುತ್ತಿದ್ದಾರೆ ಎಂದು ಕೇಳಿದರೆ, ಅವರ ಉದ್ದೇಶಗಳತ್ತ ಕಣ್ಣು ನೆಟ್ಟು ನೋಡಬೇಕಾಗುತ್ತದೆ…

ಇದನ್ನು ಓದಿದ್ದೀರಾ?: ಹೆಣ ಮುಂದಿಟ್ಟುಕೊಂಡು ಹಣ ಮಾಡುವ ಪತ್ರಿಕೋದ್ಯಮದ ಒಂದು ಸ್ಯಾಂಪಲ್

ಯಾವುದೇ ಗಂಭೀರ ಬರಹಗಾರ ಮನುಷ್ಯನ ಅಸ್ತಿತ್ವದ ಮೂಲ ತಾಕಲಾಟಗಳನ್ನು ಹಿಡಿಯಲೆತ್ನಿಸುತ್ತಾನೆ. ದುರಂತವೆಂದರೆ ಭೈರಪ್ಪನವರ ಕಣ್ಣಿಗೆ ಮನುಷ್ಯರೇ ಕಾಣಿಸುವುದಿಲ್ಲ! ಇವರ ಕಣ್ಣಲ್ಲಿ ಎಲ್ಲರೂ ಜಾತಿ ಧರ್ಮದ ಕಾಲಾಳುಗಳು ಮಾತ್ರ.

ಪರ ವಿರೋಧಿ ಪಾಳೆಯಗಳನ್ನು ಸೃಷ್ಟಿಸಿಕೊಂಡು ‘ನನ್ನ ವಾದವನ್ನು ಮಂಡಿಸಿ, ಎದುರಾಳಿಗಳ ವಾದವನ್ನು ಖಂಡಿಸಿ, ಸಭೆಗೆ ವಂದಿಸಿ, ವಿರಮಿಸುವ’ ಹೈಸ್ಕೂಲ್ ಚರ್ಚಾಪಟುವಿನಂತೆ ವಾದಗಳನ್ನು, ಸಮರ್ಥನೆಗಳನ್ನು ಗುಡ್ಡೆ ಹಾಕುತ್ತ ಕೂರುವ ಭೈರಪ್ಪನವರನ್ನು ಸಾಹಿತಿ ಎಂದು ಒಪ್ಪುವುದೇ ಕಷ್ಟ. ಹೆಚ್ಚೆಂದರೆ ಕರ್ಮಠ ಮತಪ್ರಚಾರಕ ಅನ್ನಬಹುದೇನೋ!…

ಆದರೆ ಆಗ ‘ವಿಜಯ ಕರ್ನಾಟಕ’ದ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರಿಗೆ ಅನಂತಮೂರ್ತಿಯವರ ಆ ಹೇಳಿಕೆಯೇ ಸಾಕಾಯಿತು! ಅದನ್ನೇ ತಿರುಚಿ ‘ಭೈರಪ್ಪ ಒಬ್ಬ ಕಾದಂಬರಿಕಾರರೇ ಅಲ್ಲ’ ಎಂಬುದಷ್ಟನ್ನೇ ಹೆಡಿಂಗ್ ಮಾಡಿ ವಿವಾದದ ಕಿಡಿ ಹೊತ್ತಿಸಿದರು. ಭಟ್ಟರ ಈ ಕಿತಾಪತಿ, ಎಸ್ಸೆಮ್ಮೆಸ್ ಆಂದೋಲನವಾಗಿ ಬೆಳೆದು ಜ್ವಾಲೆಯಾಯಿತು. ಸ್ವಲ್ಪ ದಿನಕ್ಕೆ ಅನಂತಮೂರ್ತಿಯವರಿಗೆ ಬೆದರಿಕೆ ಕರೆಗಳೂ ಬರತೊಡಗಿದವು. ಆ ಬೆದರಿಕೆ ಮೇರೆ ಮೀರಿದಾಗ, ಸ್ವತಃ ಅನಂತಮೂರ್ತಿ ತುಸು ಆತಂಕಕ್ಕೊಳಗಾಗಿದ್ದು ನಿಜ. ಆಗ ಮೈಸೂರಿನ ಪ್ರೊ. ಗೋವಿಂದಯ್ಯ ಮತ್ತು ನಾನು ಒಮ್ಮೆ ಅವರ ಮನೆಗೇ ಹೋಗಿ, ಧೈರ್ಯ ಹೇಳಿ ಬಂದೆವು. ಎರಡು ತಿಂಗಳವರೆಗೆ ಈ ವಿವಾದ ಉರಿಯುತ್ತಲೇ ಇತ್ತು. ನಂತರ ಕ್ರಮೇಣ ತಣ್ಣಗಾಯಿತು.

ಇಲ್ಲಿ ಮೂಲ ಪ್ರಶ್ನೆ ಅದೇ: ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ ಸಹಾನುಭೂತಿಯೇ ಇಲ್ಲದಾತ ಯಾವುದೇ ಸೃಷ್ಟಿಕ್ರಿಯೆಯಲ್ಲಿ ಹೇಗೆ ತೊಡಗಲು ಸಾಧ್ಯ? ಮಾನವಪ್ರೇಮವೇ ಎಲ್ಲ ಕಲೆಯ ತಳಹದಿಯಲ್ಲವೇ?…

‘ಆವರಣ’ವನ್ನು ಭೈರಪ್ಪನವರು ಬರೆಯಲು ಆರಂಭಿಸಿದ್ದು 2004ರಲ್ಲಿ ಎಂದು ನಮೂದಿಸಿದ್ದಾರೆ. ಮುಂಚೆಯೂ ಅವರ ಬರಹದಲ್ಲಿ ಕೋಮುವಾದಿ ಎಳೆಗಳು ಹಾಸುಹೊಕ್ಕಾಗಿದ್ದರೂ, ಇಂಥ ನಿರ್ಲಜ್ಜೆ ಹಾಗೂ ರಾಜಾರೋಷವಾಗಿ ವಿಷ ಕಕ್ಕುವ ಪ್ರವೃತ್ತಿಯನ್ನು ಅವರು ಕೂಡ ಹಿಂದೆ ತೋರಿಸಿದ್ದಿಲ್ಲ. ಈಗ ಇದ್ದಕ್ಕಿದ್ದಂತೆ ಇಂಥ ಬತ್ತಲೆ ದ್ವೇಷ ಉಕ್ಕೇರಿದ್ದಕ್ಕೆ ಕಾರಣವೇನು?

ಓದುಗರಿಗೆ ನೆನಪಿದೆ: ಗುಜರಾತಿನಲ್ಲಿ ಸರ್ಕಾರಿ ಪ್ರಾಯೋಜಿತ ಹಿಂಸಾಚಾರದಲ್ಲಿ ಸುಮಾರು ಎರಡು ಸಾವಿರ ಮುಸ್ಲಿಮರ ಮಾರಣಹೋಮವಾದದ್ದು 2002ರಲ್ಲಿ. ಹೀಗೆಯೇ 1984ರಲ್ಲಿ ಇಂದಿರಾಗಾಂಧಿ ಹತ್ಯೆಯಾದಾಗಲೂ ಸರ್ಕಾರಿ ಪ್ರಾಯೋಜಿತ ನರಮೇಧ ನಡೆದಿತ್ತು. ಆ ಬಾರಿ ಬಲಿಯಾದವರು ಸಿಕ್ಖರು. ಆದರೆ ಭೈರಪ್ಪನವರ ಆರೆಸ್ಸೆಸ್ ಮನೋಧರ್ಮಕ್ಕೆ ಸಿಕ್ಖರ ಹತ್ಯೆ ಮುಖ್ಯವಾಗಿರಲಿಲ್ಲ. ಇದೀಗ ಮುಸ್ಲಿಮರ ನರಮೇಧಕ್ಕೆ ರಾಜಕೀಯ ಮುಂದಾಳತ್ವ ಸಿಕ್ಕಿದ್ದು ಅವರೊಳಗಿನ ವಿಷ ಉಕ್ಕಿ ಹರಿಯಲು ಕಾರಣವಾಯಿತೇ? ನಮ್ಮ ದೇಶದಲ್ಲಿ ಮುಸ್ಲಿಮರ ನರಮೇಧಕ್ಕೆ ಬಹುಸಂಖ್ಯಾತರ ಸಮ್ಮತಿಯಿದೆ, ಭೂಮಿಕೆ ಹದವಾಗಿದೆ ಎಂಬ ಆತ್ಮವಿಶ್ವಾಸ ಅವರಲ್ಲಿ ಉಬ್ಬಿಬಿಟ್ಟಿತೇ? ಇನ್ನಷ್ಟು ನರಮೇಧಗಳು ನಡೆಯಲಿ ಎಂಬುದೇ ‘ಆವರಣ’ದ ಸುಪ್ತ ಆಶಯವೇ?

Bhyrappa1

ಉತ್ತರ ಹೇಳಲು ಅವರಂತೂ ಈಗಿಲ್ಲ. ಆದರೆ ಆ ಕೆಲಸ ಮಾಡಲು ಅವರ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ ಭೈರಪ್ಪನವರ ಕೋಮುವಾದಿ ನಂಜೇ ಆಪ್ಯಾಯಮಾನವಾಗಿದೆ ಎಂಬುದರಲ್ಲೇ ಪ್ರಸಕ್ತ ಭಾರತೀಯ ರಾಜಕೀಯ ನಕಾಶೆಯ ರೂಪುರೇಷೆ ಅಡಗಿದೆ.

*

ಆವರಣದ ಗದ್ದಲ ತಗ್ಗಿ ಒಂದು ವರ್ಷದ ಮೇಲೆ ಕಳೆಯಿತು.

ಒಂದು ಬೆಳಗ್ಗೆ ಡಾ. ಚಂದ್ರಶೇಖರ ಕಂಬಾರರು ಫೋನ್ ಮಾಡಿದರು- ‘ಈವತ್ತಿನ ವಿಜಯ ಕರ್ನಾಟಕ ನೋಡಿದಿರಾ?’

ಆ ವೇಳೆಗಾಗಲೇ ಇನ್ನೊಬ್ಬ ಗೆಳೆಯರು ಫೋನ್ ಮಾಡಿದ್ದರಿಂದಾಗಿ ಅಂದಿನ ವಿಜಯ ಕರ್ನಾಟಕ ತರಿಸಿ ಓದಿದ್ದೆ. (ಇಲ್ಲವಾದರೆ ನಾನು ವಿಜಯ ಕರ್ನಾಟಕ ಓದುವ ತಪ್ಪು ಮಾಡುವುದಿಲ್ಲ). ‘ಆವರಣ’ದಲ್ಲಿ ಮುಸ್ಲಿಮರನ್ನು ಬಲಿ ಹಾಕಿದ್ದ ಭೈರಪ್ಪನವರ ಕಣ್ಣು ಇದೀಗ ಕ್ರೈಸ್ತರ ಮೇಲೆ ಬಿದ್ದಿತ್ತು! ‘ಇಂಥ ಘಟನೆ ಯಾವ ದೇಶದಲ್ಲಿ ನಡೆದೀತು?’ ಎಂಬ ಅವರ ಮತಾಂತರ ವಿರೋಧಿ/ ಕ್ರೈಸ್ತ ವಿರೋಧಿ ದೀರ್ಘ ಬರಹ ಅಂದಿನ ಮುಖಪುಟದಲ್ಲಿ ಅರ್ಧ ಪುಟ ಆವರಿಸಿ, ಒಳಪುಟಗಳಲ್ಲಿ ಇನ್ನರ್ಧ ಪುಟ ಹಬ್ಬಿಕೊಂಡಿತ್ತು.

ಕಂಬಾರರಿಗೆ ‘ಓದಿದೆ ಸರ್’ ಅಂದೆ. ಕಂಬಾರರು ‘ಮತ್ತೇನು ಮಾಡ್ತಿದೀರಿ? ಏನೂ ಬರೆಯಲ್ವಾ?’ ಎಂದು ಕೇಳಿದರು. ನಾನು ತುಸು ಹಿಂಜರಿದೆ. ‘ಇವನೇನಪ್ಪ, ಮಾತೆತ್ತಿದರೆ ಭೈರಪ್ಪನವರ ವಿರುದ್ಧ ಎಗರಿ ಹೋಗುತ್ತಾನೆ’ ಎಂದು ಯಾರಾದರೂ ಹಂಗಿಸುವುದು ನನಗೆ ಬೇಡವಾಗಿತ್ತು. ಬೇರೆ ಯಾರಾದರೂ ಯಾಕೆ ಪ್ರತಿಕ್ರಿಯೆ ಕೊಡಬಾರದು ಎಂದು ಒಳಗೊಳಗೇ ತಪ್ಪಿಸಿಕೊಳ್ಳುವ ಹವಣಿಕೆಯಲ್ಲಿದ್ದೆ. ಆದರೆ ಅದೇನೂ ಹೇಳಹೋಗದೆ ‘ಯೋಚನೆ ಮಾಡ್ತಿದೀನಿ ಸರ್’ ಅಂದೆ. ಕಂಬಾರರು ಅದೆಲ್ಲ ಕೇಳುವ ಮನಸ್ಥಿತಿಯಲ್ಲಿರಲಿಲ್ಲ, ಸುಮ್ಮನೆ ‘ಬರೀರಿ’ ಅಂದರು!

ಆಯಿತು. ಬರೆದೆ. ‘ಮತಾಂತರ ಯಾಕೆ ತಪ್ಪು? ದಯವಿಟ್ಟು ಹೇಳಿ’ ಎಂಬ- ಅಷ್ಟೇ ದೀರ್ಘವಾದ ಲೇಖನವನ್ನು ನಾನೇ ಖುದ್ದಾಗಿ ಒಯ್ದು ವಿಶ್ವೇಶ್ವರ ಭಟ್ಟರ ಕೈಗಿತ್ತು ಬಂದೆ. ಮರುದಿನವೇ ಪತ್ರಿಕೆಯಲ್ಲಿ ಒಂದು ಇಡೀ ಪುಟದ ಆ ಲೇಖನ ಅಚ್ಚೂ ಆಯಿತು.

ಭೈರಪ್ಪನವರು ಯಾವ ಅಂಕಿ ಅಂಶದ ಆಧಾರವೂ ಇಲ್ಲದೆ ಸುಖಾಸುಮ್ಮನೆ ‘ಪ್ರತಿ ದಿನ ಐದು ಸಾವಿರ ಮತಾಂತರಗಳು ನಡೆಯುತ್ತಿದ್ದಾವೆ; ಎಲ್ಲ ಕ್ರೈಸ್ತ ಮಿಷನರಿಗಳ ಕರಾಮತ್ತು’ ಎಂದು ಬರೆದಿದ್ದರು. ನಾನು ಅದಕ್ಕೆ ಉತ್ತರವಾಗಿ ಬರೆದಿದ್ದು:

…ಆದರೆ ಇವರ‍್ಯಾರೂ ಮತಾಂತರ ಯಾಕೆ ತಪ್ಪು ಎಂದು ಬಿಡಿಸಿ ಹೇಳುವ ಗೋಜಿಗೇ ಹೋಗಿಲ್ಲ! ಇವರು ಹಾಕುತ್ತಿರುವ ಬೊಬ್ಬೆ ನೋಡಿದರೆ ಇಡೀ ಭಾರತವೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಆಮಿಷಕ್ಕೆ ಬಲಿಯಾಗಿ ಧರ್ಮಾಂತರ ಮಾಡಲು ತುದಿಗಾಲಲ್ಲಿ ನಿಂತಿದೆಯೇನೋ ಅಂದುಕೊಳ್ಳಬೇಕು! ನಮ್ಮ ದೇಶದಲ್ಲಿ ಬೆಂಡಿಗೇರಿ, ಕಂಬಾಲಪಲ್ಲಿಗಳು (ದಲಿತರ ಮೇಲೆ ಊಹಾತೀತ ದೌರ್ಜನ್ಯ ಘಟಿಸಿದ ಪ್ರಸಂಗಗಳು) ಪ್ರತಿನಿತ್ಯದ ವಿದ್ಯಮಾನಗಳಾದರೂ ನಮ್ಮ ಜನ ತಲತಲಾಂತರದ ನಿರಂತರ ಅವಮಾನವನ್ನು ಸಹಿಸಿಕೊಂಡಾದರೂ ಸ್ವಧರ್ಮದಲ್ಲಿ ಉಳಿದು ಬಂದಿದ್ದಾರೆ. ಅಂಬೇಡ್ಕರ್ ”ಭಾರತಕ್ಕೆ ಸ್ವರಾಜ್ಯ ಎಷ್ಟು ಅಗತ್ಯವೋ, ಅಸ್ಪೃಶ್ಯರಿಗೆ ಮತಾಂತರ ಅಷ್ಟೇ ಅಗತ್ಯ” ಎಂದು ಬೋಧಿಸಿದಾಗ್ಯೂ, ಇಲ್ಲಿನ ದಲಿತ ವರ್ಗಗಳು ವಿಚಲಿತರಾಗಲಿಲ್ಲ. ಇಲ್ಲದಿದ್ದರೆ ಇಷ್ಟು ಕಾಲದಲ್ಲಿ ಅರ್ಧಕ್ಕರ್ಧ ಜನ ಹಿಂದೂಧರ್ಮ ತೊರೆದು ಹೋಗಿರಬೇಕಿತ್ತು. ಇದುವರೆಗೆ ಜಾತಿ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಚಕಾರ ಎತ್ತದ ಧಾರ್ಮಿಕ ಮುಖಂಡರು ಹಾಗೂ ಹಿಂದೂತ್ವವಾದಿಗಳು ಈಗ ಮತಾಂತರದ ವಿರುದ್ಧ ಹುಯಿಲೆಬ್ಬಿಸುತ್ತಾರೆಂದರೆ ಏನರ್ಥ? ಜಾತಿ, ಅಸ್ಪೃಶ್ಯತೆಯಂಥ ಅನ್ಯಾಯಗಳು ನಿರಂತರವಾಗಿ, ಶಾಶ್ವತವಾಗಿ ಉಳಿದಿರಬೇಕು ಎಂಬುದೇ ಅವರ ಒಳಾಸೆ ಎಂದರ್ಥ!…

ಹಾಗೆ ನೋಡಿದರೆ, ಭಾರತದ ಧಾರ್ಮಿಕ ಚರಿತ್ರೆಯೇ ಮತಾಂತರಗಳ ಚರಿತ್ರೆ. ಇಲ್ಲಿ ಹೊಸ ಹೊಸದಾಗಿ ಹುಟ್ಟಿದ ಎಲ್ಲ ಧಾರ್ಮಿಕ ಪಂಥಗಳೂ- ಬೌದ್ಧ, ಜೈನ, ಸಿಖ್, ವೀರಶೈವ… ಜನ್ಮ ತಳೆದಿದ್ದೇ ಮತಾಂತರಗಳ ಮೂಲಕ. ಅಂಬೇಡ್ಕರ್- ‘ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಘೋಷಿಸಿಯೇ ಸಹಸ್ರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮವನ್ನು ಅಪ್ಪಿಕೊಂಡರು. ಆದರೆ ಈ ಎಲ್ಲ ಧರ್ಮಪಂಥಗಳೂ ಹುಟ್ಟಿದ್ದು ಹಿಂದೂ ಸಮಾಜದಲ್ಲಿ ಹಾಸುಹೊಕ್ಕಾದ ಜಾತಿ ತಾರತಮ್ಯಕ್ಕೆ ಪ್ರತಿಭಟನೆಯಾಗಿ ಎಂಬುದು ಭೈರಪ್ಪನವರ ಗಂಟಲಲ್ಲಿ ಇಳಿಯಲಿಕ್ಕಿಲ್ಲ! ಮತಾಂತರ ದೇಶದ್ರೋಹ ಅನ್ನುವುದಾದರೆ- ಮಹಾವೀರ, ಬುದ್ಧ, ಬಸವಣ್ಣ, ಅಂಬೇಡ್ಕರ್- ಇವರೆಲ್ಲರೂ ಮಹಾನ್ ದೇಶದ್ರೋಹಿಗಳೇ!

ಇದನ್ನು ಓದಿದ್ದೀರಾ?: ಲಂಕೇಶರು ಕಟ್ಟಿದ ಗೋಡೆಯಲ್ಲಿ ಬಿರುಕು ಮೂಡಿಸಿದ ‘ಗೃಹಭಂಗ’

ಆದರೆ ಅವರೆಲ್ಲ ಯಾಕೆ ಹೀಗೆ ‘ದೇಶದ್ರೋಹಿ’ಗಳಾದರು? ಉತ್ತರವಾಗಿ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಹೊಸ್ತಿಲಲ್ಲಿ ಅಂಬೇಡ್ಕರ್ (ತಮ್ಮ ಸುಪ್ರಸಿದ್ಧ ಮತಾಂತರ ಯಾಕೆ? ಎಂಬ ವ್ಯಾಖ್ಯಾನದಲ್ಲಿ) ಮಾಡಿದ ವಿಶ್ಲೇಷಣೆಯನ್ನು ಗಮನಿಸಬೇಕು:

”ನೀವು (ಅಸ್ಪೃಶ್ಯರು) ಸವರ್ಣೀಯರೊಡನೆ ಸರಿಸಮಾನವಾಗಿ ವರ್ತಿಸಿದ ಮಾತ್ರಕ್ಕೇ ಅವರಿಗೆ ಅವಮಾನವಾಗುತ್ತದೆ. ಅಸ್ಪೃಶ್ಯತೆಯೆನ್ನುವುದು ಅಲ್ಪಕಾಲಿಕವಾದ ಅಥವಾ ತಾತ್ಕಾಲಿಕವಾದ ಸ್ಥಿತಿಯಲ್ಲ, ಶಾಶ್ವತವಾದದ್ದು. ನೇರವಾಗಿ ಹೇಳುವುದಾದರೆ, ಹಿಂದೂಗಳು ಮತ್ತು ಅಸ್ಪೃಶ್ಯರ ನಡುವಣ ಸಂಘರ್ಷವೇ ಶಾಶ್ವತವಾದದ್ದು. ಹಿಂದೂ ಸವರ್ಣೀಯರ ನಂಬಿಕೆಯಂತೆ ನಿಮ್ಮನ್ನು ಸಮಾಜದ ಕನಿಷ್ಠತಮ ಸ್ಥಾನದಲ್ಲಿ ಇರಿಸಿರುವ ಧರ್ಮವೇ ನಿರಂತರವಾದದ್ದು. ಆ ಕಾರಣ, ಈ ಸಂಘರ್ಷವೂ ನಿರಂತರವಾದದ್ದು. ಇದರಲ್ಲಿ ಕಾಲ, ಸಂದರ್ಭಕ್ಕನುಗುಣವಾದ ಯಾವ ಮಾರ್ಪಾಡೂ ಸಾಧ್ಯವಿಲ್ಲ. ಇಂದು ನೀವು ಅತ್ಯಂತ ಕೆಳಸ್ಥಾನದಲ್ಲಿದ್ದೀರಿ ಮತ್ತು ಎಂದೆಂದಿಗೂ ಅದೇ ಕೆಳಸ್ಥಾನದಲ್ಲೇ ಉಳಿಯುತ್ತೀರಿ. ಅಂದರೆ, ಹಿಂದೂಗಳು- ಅಸ್ಪೃಶ್ಯರ ಸಂಘರ್ಷವೂ ಅವಿರತವಾಗಿ ಉಳಿದೇ ಉಳಿಯುತ್ತದೆ…

”…ಹಿಂದೂಧರ್ಮದಲ್ಲಿ ವ್ಯಕ್ತಿಗೆ ಯಾವುದೇ ಸ್ಥಾನವಿಲ್ಲ. ಹಿಂದೂಧರ್ಮ ರಚನೆಗೆ ವರ್ಗ ಕಲ್ಪನೆಯೇ ಆಧಾರ. ಒಬ್ಬ ವ್ಯಕ್ತಿ ಇನ್ನೊಬ್ಬನೊಡನೆ ಹೇಗೆ ವರ್ತಿಸಬೇಕೆಂದು ಹಿಂದೂಧರ್ಮ ಹೇಳಿಕೊಡುವುದಿಲ್ಲ… ಒಬ್ಬ ವ್ಯಕ್ತಿಯ ಉನ್ನತಿಗೆ ಮೂರು ಅಂಶಗಳು ಬೇಕು- ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ್ಯ. ಈ ಮೂರರಲ್ಲಿ ಯಾವುದಾದರೂ ಒಂದು ಹಿಂದೂಧರ್ಮದಲ್ಲಿ ಸಿಕ್ಕುವುದೆಂದು ನಿಮ್ಮ ಅನುಭವದಿಂದ ಹೇಳಬಲ್ಲಿರಾ?…”

prajavani 2025 09 24 dyi9310m Byrappa
ಎಸ್.ಎಲ್. ಭೈರಪ್ಪ

ಅಂಬೇಡ್ಕರ್ ಅಂದು ಎತ್ತಿದ ಪ್ರಶ್ನೆಗಳ ಗಹನತೆ ಮತ್ತು ಮಹತ್ವ ಇಂದಿಗೂ ತಗ್ಗಿಲ್ಲ ಅನ್ನುವುದರಲ್ಲೇ ಹಿಂದೂ ಸಮಾಜದ ನಿರಂತರ ದುರಂತದ ಬೇರುಗಳಿವೆ. ಅದಕ್ಕೇ ಮತ್ತೆ ಕೇಳುತ್ತೇನೆ- ಭಾರತ ಸಂವಿಧಾನವೇ ಮುಕ್ತ ಧಾರ್ಮಿಕ ಸ್ವಾತಂತ್ರ್ಯ ನೀಡಿರುವಾಗ, ಮತಾಂತರವನ್ನು ಯಾವ ಆಧಾರದ ಮೇಲೆ ತಪ್ಪು ಅನ್ನುತ್ತೀರಿ? ದಯವಿಟ್ಟು ವಿವರಿಸಿ…

ಇದಕ್ಕೂ ಭೈರಪ್ಪನವರ ಉತ್ತರವೇನೋ ತಿಳಿಯಲಿಲ್ಲ. ಆದರೆ ಪೇಜಾವರ ಶ್ರೀಗಳು ಮಾತ್ರ ತಾವು- ದಲಿತರೂ ಸೇರಿದಂತೆ ಎಲ್ಲರಿಗೂ ದೀಕ್ಷೆ ಕೊಡಲು ಸಿದ್ಧವೆಂದು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟರು! ಅದು ಯಾವ ದೀಕ್ಷೆಯೋ ಸ್ಪಷ್ಟವಾಗಲಿಲ್ಲ. ಜೊತೆಗೆ ಅವರಿಂದ ಯಾರಾದರೂ ದೀಕ್ಷೆ ಪಡೆದರೋ, ಅದೂ ಬಹಿರಂಗವಾಗಲಿಲ್ಲ…

ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
+ posts

ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ. ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಲಂಕೇಶರ 'ಮುಟ್ಟಿಸಿಕೊಂಡವರು' ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ 'ಮಾನಸೋಲ್ಲಾಸ' ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. 'ಉಲ್ಟಾ ಪಲ್ಟಾ' ಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಅರಸು ಯುಗ, ಚಂಚಲೆ, ರೂಢಿ, ಉಸಾಬರಿ, ಫೂಲನ್ ದೇವಿ, ಮಾಯಾಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ. ಪ್ರಜಾವಾಣಿ, ಮುಂಗಾರು, ಸುದ್ದಿ ಸಂಗಾತಿ, ಲಂಕೇಶ್ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಲಂಕೇಶರ 'ಮುಟ್ಟಿಸಿಕೊಂಡವರು' ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ 'ಮಾನಸೋಲ್ಲಾಸ' ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. 'ಉಲ್ಟಾ ಪಲ್ಟಾ' ಚಿತ್ರ ಜನಪ್ರಿಯತೆಯನ್ನೂ ತಂದುಕೊಟ್ಟಿದೆ. ಅರಸು ಯುಗ, ಚಂಚಲೆ, ರೂಢಿ, ಉಸಾಬರಿ, ಫೂಲನ್ ದೇವಿ, ಮಾಯಾಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಾಹ್ಮಣ್ಯದ ಜನರು ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಾರೆ?

ಸಮೀಕ್ಷೆಯಿಂದ ಲಿಂಗಾಯತ ಹಾಗೂ ಒಕ್ಕಲಿಗರು ಒಳಗೊಂಡಂತೆ ಎಲ್ಲಾ ಅಹಿಂದ ವರ್ಗಗಳ ಸಾಮಾಜಿಕ,...

ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?

ಕರ್ನಾಟಕ ಲೇಖಕಿಯರ ಸಂಘದಿಂದ ಕೆಟ್ಟ ಸುದ್ದಿಯೊಂದು ಬಂದಿದೆ. ಸಂಘದ ಅಧ್ಯಕ್ಷೆ ಡಾ...

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ....

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ...

Download Eedina App Android / iOS

X