ಕೋಮು ಹಿಂಸಾಚಾರ ನಡೆಯುವ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿ, ಅಲ್ಲಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಶಕಗಳಿಂದ ಹಾಸುಕೊಕ್ಕಿರುವ ಕಾನ್ಸ್‌ಟೇಬಲ್‌ಗಳು ಮತ್ತು ಇತರ ಕೆಳ ಮಟ್ಟದ ಅಧಿಕಾರಿಗಳನ್ನು ಬದಲಾವಣೆ ಮಾಡದಿದ್ದರೆ ಯಾವುದೇ ಪ್ರಯೋಜನ ಇಲ್ಲ ಎಂದು ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಹೇಳಿದ್ದಾರೆ.
‘ಯಾವ ಬೆಲೆ ತೆತ್ತಾದರೂ ಕೋಮು ಹಿಂಸೆ ತಡೆಯೋಣ’ ಘೋಷಣೆಯೊಂದಿಗೆ ಬೆಂಗಳೂರಿನ ಆಶೀರ್ವಾದ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಗೂ ತಲ ಮಟ್ಟದ ಪೊಲೀಸ್ ಅಧಿಕಾರಿಗಳು ಪೊಲೀಸ್ ಇಲಾಖೆಯ ಆಧಾರಸ್ತಂಬವಾಗಿದ್ದಾರೆ. ಕೋಮು ಹಿಂಸಾಚಾರ ತಡೆಯುವ ಶಕ್ತಿ ಅವರಿಗೆ ಇದೆ. ಹಿಂಸಾಚಾರದ ಕಿಚ್ಚು ಹಬ್ಬಿಸುವ ಶಕ್ತಿಯೂ ಅವರಲ್ಲಿ ಇರುತ್ತದೆ. ಪೊಲೀಸ್ ಠಾಣೆಗಳಲ್ಲಿ ಕೆಲವು ಪೊಲೀಸರು ಹತ್ತು, ಇಪ್ಪತ್ತು ವರ್ಷಗಳಿಂದ ಬೀಡು ಬಿಟ್ಟಿದ್ದಾರೆ. ವರ್ಗಾವಣೆ ಎಂದರೆ ಏನು ಎಂದೇ ಕೆಲವರಿಗೆ ಗೊತ್ತಿರುವುದಿಲ್ಲ. ಕೋಮು ಹಿಂಸಾಚಾರ ತಡೆಗೆ ಒಂದೇ ಠಾಣೆಯಲ್ಲಿ ಹತ್ತಾರು ವರ್ಷದಿಂದ ಬೀಡುಬಿಟ್ಟಿರುವ ಪೊಲೀಸರನ್ನು ವರ್ಗಾವಣೆ ಮಾಡುವುದು ಅತ್ಯಗತ್ಯವಾಗಿದೆ. ಇದನ್ನು ಕರಾವಳಿ ಜಿಲ್ಲೆಯಲ್ಲಿ ಸರಕಾರ ಕೂಡಲೇ ಮಾಡಬೇಕು ಎಂದು ಅವರು ಹೇಳಿದರು.
ಕಮಿಷನರ್, ಎಸ್ಪಿ, ಡಿಸಿಪಿ ಮೊದಲಾದ ಉನ್ನತ ಅಧಿಕಾರಿಗಳು ಎರಡು, ಮೂರು ವರ್ಷ ಇದ್ದು ಹೋಗುತ್ತಾರೆ. ಆದರೆ ತಲ ಮಟ್ಟದ ಪೊಲೀಸರು ಒಂದೇ ಠಾಣೆಯಲ್ಲಿ ಒಂದೆರಡು ದಶಕ ಇರುವುದರಿಂದ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕೋಮು ಹಿಂಸಾಚಾರದ ಅಪಾಯವೂ ಹೆಚ್ಚಿರುತ್ತದೆ. ಹಾಗಾಗಿ ತಲ ಮಟ್ಟದ ಪೊಲೀಸರನ್ನು ಬದಲಾವಣೆ ಮಾಡುವ ಕೆಲಸ ಸರಕಾರ ಆಗಾಗ ಮಾಡಬೇಕು. ಕರಾವಳಿ ಜಿಲ್ಲೆಯಲ್ಲಿ ಈ ಕೆಲಸ ತರ್ತಾಗಿ ನಡೆಯಬೇಕಾದ ಕೆಲಸವಾಗಿದೆ ಎಂದು ಅವರು ತಿಳಿಸಿದರು.
ಕೋಮು ಗಲಭೆ ಮತ್ತು ಕಸ್ಟಡಿ ಸಾವು ಪೊಲೀಸ್ ಇಲಾಖೆಗೆ ಗಲ್ಲು ಶಿಕ್ಷಿ ಇದ್ದಂತೆ. ಇದು ನಡೆಯದಂತೆ ಪೊಲೀಸ್ ಇಲಾಖೆ ಶಪಥ ಮಾಡಿರುತ್ತದೆ. ಕೋಮು ಹಿಂಸಾಚಾರ ನಡೆದರೆ ಪೊಲೀಸ್ ಇಲಾಖೆ ತತ್ತರಿಸಿ ಹೋಗುತ್ತದೆ. ಅದಕ್ಕಾಗಿ ಪೊಲೀಸ್ ಇಲಾಖೆ ಮೊದಲು ಸಮಾಜದ ವಿಶ್ವಾಸ ಗಳಿಸುವ ಕಾರ್ಯ ಮಾಡಬೇಕು. ಯಾವುದೇ ಪೊಲೀಸ್ ಧಾರ್ಮಿಕ ಗುರುತನ್ನು ಹೊಂದಿರಬಾರದು. ಪೊಲೀಸ್ ಠಾಣೆಯಲ್ಲಿ ಯಾವುದೇ ಧಾರ್ಮಿಕ ಗುರುತು ಇರಬಾದರು ಎಂದು ಇಲಾಖೆಯ ನಿಯಮ ಇದೆ. ಆದರೆ ಮಠ ಮಂದಿರಗಳಲ್ಲಿ ಇರುವುದಕ್ಕಿಂತ ಹೆಚ್ಚಿನ ದೇವರ ಫೋಟೊಗಳು ಪೊಲೀಸ್ ಠಾಣೆಯಲ್ಲಿ ತುಂಬಿಕೊಂಡಿದೆ ಎಂದು ಅವರು ಹೇಳಿದರು.
ದಸರಾ ಆಯುದ್ಧ ಪೂಜೆ ಸಂದರ್ಭ ಉಡುಪಿಯ ಕಾಪು ಪೊಲೀಸ್ ಠಾಣೆಯ ಎಲ್ಲಾ ಪೊಲೀಸರು ಕೇಸರಿ ಶಾಲು ಹಾಕಿ ಫೋಟೊ ವೀಡಿಯೋ ಶೂಟ್ ಮಾಡಿದ್ದಾರೆ. ಇದರ ಬಗ್ಗೆ ಸರಕಾರನೂ ಮಾತಾಡಿಲ್ಲ. ಸಮಾಜದ ಪ್ರಜ್ಞಾವಂತ ಜನರೂ ಪ್ರತಿಭಟಿಸಿಲ್ಲ. ಹೀಗಾದರೆ ಪೊಲೀಸ್ ಇಲಾಖೆ ಮೇಲೆ ಸರ್ವ ಸಮಾಜಕ್ಕೆ ವಿಶ್ವಾಸ ಮೂಡುವುದು ಹೇಗೆ. ಪೊಲೀಸ್ ಇಲಾಖೆಯ ಸುಧಾರಣೆ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು. ಇಂಟಲಿಜೆನ್ಸ್ ಬ್ಯೂರೊ ಎಂಬುದು ಪೊಲೀಸ್ ಇಲಾಖೆಯ ದೊಡ್ಡ ಶಕ್ತಿ. ಮುಖ್ಯಮಂತ್ರಿಯ ಆಧೀನದಲ್ಲೇ ಈ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಪ್ರಪಂಚದ ಎಲ್ಲಾ ಆಗು ಹೋಗುಗಳ ಬಗ್ಗೆ ಇದರ ಅಧಿಕಾರಿಗಳ ತಲೆಯಲ್ಲಿ ಇರಬೇಕು. ಸಮಾಜದಲ್ಲಿ ಯಾವೊಂದು ಘಟನೆ ನಡೆಯುವ ಮೊದಲೇ ಅದರ ಮಾಹಿತಿ ಪಡೆಯುವ ಕೌಶಲ್ಯ ಅವರಿಗೆ ಇರಬೇಕು. ಆದರೆ ಪ್ರಸಕ್ತ ಈ ಇಲಾಖೆ ಆಡಳಿತ ಪಕ್ಷ ಮತ್ತು ಮುಖ್ಯಮಂತ್ರಿಗೆ ವಿರುದ್ಧವಾಗಿ ಇರುವ ವಿಚಾರವನ್ನು ಮಾತ್ರ ಸಂಗ್ರಹಿಸುವ, ತಲುಪಿಸುವ ಇಲಾಖೆಯಾಗಿ ಮಾರ್ಪಟ್ಟಿದೆ. ಕೋಮು ಹಿಂಸಾಚಾರ ತಡೆಯುವ ವಿಚಾರದಲ್ಲಿ ಆ ಇಲಾಖೆ ತುಂಬಾ ದೂರು ಉಳಿದು ಬಿಟ್ಟಿದೆ ಎಂದು ಅವರು ಹೇಳಿದರು.
ಹಲವು ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೂ ಇದು ಸಾಮ್ಯತೆಯಿದೆ.