ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರೇಟಿಗಳು ಸೇರಿದಂತೆ ಹಲವರು ಬಂದು ತಮ್ಮ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ಮತ ಹಾಕಿದ ಬಳಿಕ ಮಾತನಾಡಿದ ಅವರು, “ನಾನು ಮತ ಹಾಕಿರುವ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಈ ಬಗ್ಗೆ ಯಾವುದೇ ಅನುಮಾನವೇ ಬೇಡ” ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.
“ಎಲ್ಲರೂ ತಪ್ಪದೇ ಮತದಾನ ಮಾಡಿ, ಈ ಹಿಂದೆ ಗೆದ್ದವರು ಕಳೆದ ಐದು ವರ್ಷದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ನೋಡಿ ಮತ ಹಾಕುತ್ತೇನೆ. ಈ ಬಗ್ಗೆ ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆಗೆ ವಿಚಾರಿಸಿ ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು” ಎಂದಿದ್ದಾರೆ.
“ಬೆಂಗಳೂರಿನಿಂದ ಉಡುಪಿಗೆ ಏ.25ರ ರಾತ್ರಿ ಹೊರಟು ಬಂದಿದ್ದೇನೆ. ನಾನು ಬೆಂಗಳೂರು ಸೇರಿ 18 ವರ್ಷ ಆಯಿತು. ಪ್ರತಿ ಬಾರಿ ಮತದಾನ ಮಾಡಲು ಉಡುಪಿಗೆ ಬರುತ್ತೇನೆ. ಮತದಾನ ನಮ್ಮ ಹಕ್ಕು ನಮ್ಮ ಜವಾಬ್ದಾರಿ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಾಹ್ನ 1 ಗಂಟೆವರೆಗೂ ರಾಜ್ಯದಲ್ಲಿ ಶೇ.38.23ರಷ್ಟು ಮತದಾನ
ಬೆಂಗಳೂರಿನಲ್ಲಿದ್ದ ನಟ ರಕ್ಷಿತ್ ಶೆಟ್ಟಿ ಮತದಾನಕ್ಕಾಗಿ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಿ ಶೆಟ್ಟಿ ಅವರೊಂದಿಗೆ ಉಡುಪಿಯ ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಸದ್ಯ ರಕ್ಷಿತ್ ಶೆಟ್ಟಿ ಅವರು ‘ರಿಚರ್ಡ್ ಆಂಟನಿ’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.