ಸೆಪ್ಟೆಂಬರ್ 18ಕ್ಕೆ ಕನ್ನಡದ ಸ್ಫುರದ್ರೂಪಿ ನಟ ವಿಷ್ಣುವರ್ಧನ್ 75 ವರ್ಷಗಳನ್ನು ಪೂರೈಸಲಿದ್ದಾರೆ. 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ಕೊನೆಯವರೆಗೂ ಕನ್ನಡಿಗರನ್ನು ರಂಜಿಸುತ್ತಲೇ ಸಾಗಿದರು. ಚಿತ್ರಗಳಿಗೆ, ಪಾತ್ರಗಳಿಗೆ ಪಕ್ಕಾದರು. ಪ್ರತಿಭೆಯಿಂದ ಪುಟಿದೆದ್ದರು. ಕನ್ನಡಿಗರ ಹೃದಯದಲ್ಲಿ ನೆಲೆಯಾದರು...
ಮುಂದುವರೆದ ಭಾಗ…
ತೊಂಬತ್ತರ ದಶಕದಲ್ಲಿ ವಿಷ್ಣುವರ್ಧನ್ ಅವರ ಯಶಸ್ಸಿನ ಗ್ರಾಫ್ ಮತ್ತಷ್ಟು ಏರುತ್ತಲೇ ಹೋಯಿತು. ಆಕ್ಷನ್ ಚಿತ್ರಗಳ ಜೊತೆಗೆ ಭಾವತೀವ್ರತೆಯ ಪಾತ್ರಗಳಲ್ಲೂ ಪ್ರೇಕ್ಷಕರನ್ನು ಸೆಳೆಯುವ ಅವರ ನಟನೆ ಮುಂದುವರೆಯಿತು. ಈ ದಶಕದಲ್ಲಿ ಬಿಡುಗಡೆಯಾದ ಮುತ್ತಿನಹಾರ, ವೀರಪ್ಪ ನಾಯಕ ಚಿತ್ರಗಳಲ್ಲಿ ದೇಶಪ್ರೇಮಿಯಾಗಿ ವಿಜೃಂಭಿಸಿದರೆ, ಲಯನ್ ಜಗಪತಿ ರಾವ್ ಚಿತ್ರದಲ್ಲಿ ಕಿಡಿ ಕಾರುವ ಪಾತ್ರದಲ್ಲಿ ಮಿಂಚಿದರು. ಮತ್ತೆ ಹಾಡಿತು ಕೋಗಿಲೆ, ಹರಕೆಯ ಕುರಿ, ರಾಯರು ಬಂದರು ಮಾವನಮನೆಗೆ, ಹಾಲುಂಡ ತವರು, ಲಾಲಿ, ಸೂರ್ಯವಂಶ, ಹಿಮಪಾತ ಚಿತ್ರಗಳಲ್ಲಿನ ಸಂಯಮಪೂರ್ಣ ಅಭಿನಯ ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಅವರ ಸಾಹಸಮಯ ಚಿತ್ರಗಳಿಗೆ ಹೊಸ ಆಯಾಮ ನೀಡಿದ ನಿಷ್ಕರ್ಷ ಸಹ ಇದೇ ದಶಕದ ಚಿತ್ರ. ಅವರ ಸಾಹಸ ಸಿಂಹ ಇಮೇಜನ್ನು ಮೆಚ್ಚಿದ ಅಭಿಮಾನಿ ಬಳಗಕ್ಕೆ ರವಿವರ್ಮ, ಸಂಘರ್ಷ, ನಿಷ್ಕರ್ಷ, ನನ್ನ ಶತ್ರು ಚಿತ್ರಗಳು ನಿರಾಶೆಯುಂಟುಮಾಡಲಿಲ್ಲ. ಇದೇ ದಶಕದಲ್ಲಿ ‘ಕೌರವರ್’ ಮಲಯಾಳಂ ಚಿತ್ರದಲ್ಲಿ ನಟ ಮಮ್ಮೂಟಿ ಅವರ ಜೊತೆ ತೆರೆಯನ್ನು ಹಂಚಿಕೊಂಡು ಆ ಭಾಷೆಯ ಪ್ರೇಕ್ಷಕರ ಮನಗೆಲ್ಲವುದರಲ್ಲಿ ಸಫಲರಾದರು.
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ಹೊಸ ಮಿಲೆನಿಯಂನ ಆರಂಭದ ಹನ್ನೊಂದು ವರ್ಷಗಳಲ್ಲಿ ಬಿಡುಗಡೆಯಾದ ಅವರ ನಟನೆಯ ಚಿತ್ರಗಳು ಒಟ್ಟು 29. ಅವುಗಳಲ್ಲಿ ಐದು ಚಿತ್ರಗಳಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. ಉಳಿದ 24 ಚಿತ್ರಗಳಲ್ಲಿ ನಾಯಕ ನಟರಾಗಿ ಕಂಡ ಅಭೂತಪೂರ್ವ ಯಶಸ್ಸು ಅವರ ವೃತ್ತಿ ಬದುಕಿನ ಸುವರ್ಣ ಅಧ್ಯಾಯ. ಒಟ್ಟು 24 ಚಿತ್ರಗಳಲ್ಲಿ ಮೂರು ಗಳಿಕೆಯಲ್ಲಿ ಸೋಲು ಕಂಡರೆ (ದೀಪಾವಳಿ, ರಾಜಾ ನರಸಿಂಹ ಮತ್ತು ಸ್ಕೂಲ್ ಮಾಸ್ಟರ್). ಹುಟ್ಟುಹಾಕಿದ ನಿರೀಕ್ಷೆಯನ್ನು ಹುಸಿಗೊಳಿಸಿ ಸಾಧಾರಣ ಗಳಿಕೆ ಕಂಡ ಚಿತ್ರಗಳು ಏಳು(ಹೃದಯವಂತ, ಕದಂಬ, ಜ್ಯೇಷ್ಠ, ಸಿರಿವಂತ, ಏಕದಂತ, ಮಾತಾಡ್ ಮಾತಾಡ್ ಮಲ್ಲಿಗೆ, ನಂ ಯಜಮಾನ್ರು). ಇನ್ನುಳಿದ ಹದಿನಾಲ್ಕು ಚಿತ್ರಗಳು ಹಣ ಗಳಿಸುವುದರಲ್ಲಿ ಸ್ಪರ್ಧೆ ಹೂಡಿದವು. ನೂರು ದಿನ ಪ್ರದರ್ಶನ, ಬೆಳ್ಳಿ ಹಬ್ಬ, ವರ್ಷವಿಡೀ ಪ್ರದರ್ಶನ ಅಪರೂಪವಾಗಿದ್ದ ಕಾಲದಲ್ಲಿ ಈ ಚಿತ್ರಗಳು ಬಹು ಕೇಂದ್ರಗಳಲ್ಲಿ ದೀರ್ಘಕಾಲ ಓಡಿ ಚಿತ್ರೋದ್ಯಮಕ್ಕೆ ಸಂಭ್ರಮವನ್ನು ಮರಳಿ ತಂದವು. ಮಿಲೆನಿಯಂ ದಶಕದ ಆರಂಭದಲ್ಲಿ ತೆರೆಕಂಡ ಸೂರಪ್ಪ(2000) ಚಿತ್ರವು ಗಳಿಕೆಯಲ್ಲಿ ದೊಡ್ಡ ಯಶಸ್ಸು ಕಂಡರೆ ವರ್ಷಾಂತ್ಯದಲ್ಲಿ ಬಿಡುಗಡೆಯಾದ ‘ಯಜಮಾನ’ ದಾಖಲೆ ಸೃಷ್ಟಿಸಿತು. ಇದೇ ಯಶಸ್ಸು ದಿಗ್ಗಜರು, ಕೋಟಿಗೊಬ್ಬ(2001); ಪರ್ವ, ಜಮೀನ್ದಾರ, ಸಿಂಹಾದ್ರಿಯ ಸಿಂಹ(2002) ಮುಂದುವರೆಯಿತು. ಅನಂತರ ಬಿಡುಗಡೆಯಾದ ಆಪ್ತಮಿತ್ರ(2003) ಆವರೆಗಿನ ಚಿತ್ರಗಳ ದಾಖಲೆಯನ್ನು ಮುರಿಯುವುದು ಮಾತ್ರವಲ್ಲ ಹಲವು ಕೇಂದ್ರಗಳಲ್ಲಿ ಬೆಳ್ಳಿ ಹಬ್ಬ ಆಚರಿಸಿ, ಕೆಲವೆಡೆ ವರ್ಷಪೂರ್ತಿ ಪ್ರದರ್ಶನ ಪೂರೈಸಿ ದಾಖಲೆ ನಿರ್ಮಿಸಿತು. ನಿರ್ಮಾಪಕರಾಗಿ ಸೋಲಿನ ನಿರಾಶೆಯಲ್ಲಿದ್ದ ದ್ವಾರಕೀಶ್ ಅವರನ್ನು ಮತ್ತೆ ಎತ್ತಿ ನಿಲ್ಲಿಸಿತು. ಆಪ್ತಮಿತ್ರದ ಯಶಸ್ಸಿನ ಹಿಂದೆಯೇ ಬಿಡುಗಡೆಯಾದ ವರ್ಷ(2004), ವಿಷ್ಣುಸೇನಾ, ನೀನೆಲ್ಲೋ ನಾನೆಲ್ಲೋ(2005), ಈ ಬಂಧನ(2006), ಬಳ್ಳಾರಿ ನಾಗ(2009) ಸಹ ಗಳಿಕೆಯಲ್ಲಿ ದೊಡ್ಡ ಯಶಸ್ಸು ಕಂಡವು. ವಿಷ್ಣುವರ್ಧನ್ ಅವರ ನಿಧನಾನಂತರ ಬಿಡುಗಡೆಯಾದ ಆಪ್ತರಕ್ಷಕ(2010) ಸಹ ಸೂಪರ್ ಹಿಟ್ ಚಿತ್ರವಾಗಿ ಅನೇಕ ಕೇಂದ್ರಗಳಲ್ಲಿ ರಜತೋತ್ಸವ ಆಚರಿಸಿತು.
ಹೀಗೆ ರಸಿಕರನ್ನು ರಂಜಿಸಿದ ನಾಂದಿಗೀತೆ ಮತ್ತು ಹಂಸಗೀತೆಯಂತೆ ವಿಷ್ಣುವರ್ಧನ್ ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಮತ್ತು ಕೊನೆಯ ಚಿತ್ರಗಳೆರಡೂ ರಜತೋತ್ಸವ ಆಚರಿಸಿಕೊಂಡು ಅವರ ವೃತ್ತಿ ಬದುಕಿಗೊಂದು ಅರ್ಥಪೂರ್ಣವಾದ ಗೌರವವನ್ನು ಸಲ್ಲಿಸಿದವು.

ವಿಷ್ಣುವರ್ಧನ್ ಅವರ ಚಿತ್ರಜೀವನದ ಯಶಸ್ಸಿನ ಹಿನ್ನೆಲೆಯಲ್ಲಿ ಜನಮಾನಸದಲ್ಲಿ ಮಾಸದ ಪಾತ್ರಗಳನ್ನು ರೂಪಿಸಿದ ಹಲವು ನಿರ್ದೇಶಕರ ಪಾಲೂ ಇದೆ. ಈ ನಿರ್ದೇಶಕರು ಅವರ ಅಭಿನಯ ಕೌಶಲ್ಯಕ್ಕೆ ಸಾಣೆ ಹಿಡಿದು, ವೈವಿಧ್ಯಮಯ ಪಾತ್ರಗಳನ್ನು ಜೀವಿಸುವಂತೆ ಮಾಡಿ, ಕಾಲಕಾಲಕ್ಕೆ ಅಗತ್ಯವಾದ ತಿರುವು ನೀಡಿದ ಕಾರಣ ವಿಷ್ಣುವರ್ಧನ್ ಅವರ ಕಲಾಬದುಕು ನಿಂತ ನೀರಾಗಲಿಲ್ಲ. ಅವರ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿದ ಪುಟ್ಟಣ್ಣ ಅವರು ನಾಗರಹಾವು ಚಿತ್ರದ ನಂತರ ಮತ್ತೆಂದೂ ಜೊತೆಯಾಗಲಿಲ್ಲ. ಮೊದಲ ಚಿತ್ರದ ನಂತರ ಶಕ್ತ ಪಾತ್ರಗಳ ಕೊರತೆ ಎದುರಿಸುತ್ತಿದ್ದ ವಿಷ್ಣುವರ್ಧನ್ ಅವರಿಗೆ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಗ್ರಾಮೀಣ ಕುಪಿತ ಯುವಕ ಗುಳ್ಳನ ಪಾತ್ರ ನೀಡಿ ಸಿದ್ಧಲಿಂಗಯ್ಯ ಅವರು ಮತ್ತೆ ವೃತ್ತಿ ಬದುಕನ್ನು ಹಳಿಗೆ ತಂದರು.
ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಆರಂಭದಲ್ಲಿ ಜೊತೆಯಾದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್(ಬಾಬು) ಅವರು ಒಟ್ಟು ಏಳು ಚಿತ್ರಗಳಲ್ಲಿ ಜೊತೆಯಾದರು. ನಾಗಕನ್ಯೆ(1974) ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ಬಾಬು ಅವರು ವಿಷ್ಣುವರ್ಧನ್ ಅವರಿಗೆ ಏಳು ಚಿತ್ರಗಳಲ್ಲಿಯೂ ಅಭಿನಯಕ್ಕೆ ಸವಾಲಾದ ವೈವಿಧ್ಯ ಪಾತ್ರಗಳನ್ನೇ ನೀಡಿದರು. ತಮ್ಮ ಎರಡನೇ ಚಿತ್ರ ನಾಗರಹೊಳೆ(1975) ಮಕ್ಕಳ ಚಿತ್ರದಲ್ಲಿ ಕ್ಯಾಪ್ಟನ್ ಕುಮಾರ್ ಪಾತ್ರವನ್ನು ಅವರಿಗಾಗಿಯೇ ವಿಶೇಷವಾಗಿ ರೂಪಿಸಿದ್ದರು. ಸಾಹಸ ಸಿಂಹ ಇಮೇಜಿನಲ್ಲಿ ಬಂಧಿಯಾಗಿದ್ದ ವಿಷ್ಣುವರ್ಧನ್ ಬಂಧನ(1984) ಚಿತ್ರದ ತ್ಯಾಗಮಯಿ ಡಾ. ಹರೀಶ್ ದುರಂತ ಪಾತ್ರದಲ್ಲಿ ಸ್ಮರಣೀಯ ಅಭಿನಯವನ್ನು ನೀಡಿದರು. ಅಪಾರ ನಿರೀಕ್ಷೆ ಮತ್ತು ಭಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಮುತ್ತಿನಹಾರ(1990) ನಿರೀಕ್ಷಿಸಿದ ಯಶಸ್ಸು ಸಾಧಿಸದೇ ಹೋದರೂ ಭಾರತೀಯ ಯೋಧ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತೊಮ್ಮೆ ಪ್ರೇಕ್ಷಕರ ಮನಸೂರೆಗೊಂಡರು.
ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ

ಸಹನಟರಾಗಿ ಮನೆಬೆಳಗಿದ ಸೊಸೆ(1973) ಚಿತ್ರದಲ್ಲಿ ಮೊದಲಬಾರಿಗೆ ತೆರೆ ಹಂಚಿಕೊಂಡ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿಯು ಮುಂದೆ ಸಹನಟರಾಗಿ ಮತ್ತು ದ್ವಾರಕೀಶ್ ನಿರ್ಮಾಣದ ಚಿತ್ರಗಳಲ್ಲಿ ನಾಯಕರಾಗಿ (ಹಲವು ಮುನಿಸು, ವಿವಾದಗಳ ನಡುವೆಯೂ) ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ಯಶಸ್ಸಿನ ಹೊಸ ಅಧ್ಯಾಯವೊಂದನ್ನು ಬರೆದರು. ಇವರಿಬ್ಬರ ಯಶಸ್ಸಿನಲ್ಲಿ ನಿರ್ದೇಶಕ ಎಚ್.ಆರ್. ಭಾರ್ಗವ ಅವರನ್ನು ಪ್ರಸ್ತಾಪಿಸದೆ ಅಧ್ಯಾಯ ಪೂರ್ಣವಾಗದು. ಕಳ್ಳ ಕುಳ್ಳ(1974) ಚಿತ್ರದ ಮೂಲಕ ಈ ಜೋಡಿ ಯಶಸ್ವೀ ಕಾಮಿಡಿ ಥ್ರಿಲ್ಲರ್ ಪ್ರಕಾರವನ್ನು ಉದ್ಘಾಟಿಸಿದ ನಂತರ ದ್ವಾರಕೀಶ್ ತಮ್ಮ ನಿರ್ಮಾಣದಲ್ಲಿ ಅದೇ ಪ್ರಕಾರವನ್ನು ಕಿಟ್ಟು ಪುಟ್ಟು(1977), ಸಿಂಗಾಪುರದಲ್ಲಿ ರಾಜಾ ಕುಳ್ಳ(1978) ಚಿತ್ರದಲ್ಲಿ ಮುಂದುವರೆಸಿದರು. ಗುರು ಶಿಷ್ಯರು(1981) ಚಿತ್ರದ ಪ್ರಚಂಡ ಯಶಸ್ಸು ವಿಷ್ಣುವರ್ಧನ್ ಅವರಿಗೆ ತಾರಾ ಇಮೇಜೊಂದನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಯಿತು. ಆ ನಂತರ ಈ ಜೋಡಿ ಒಡೆಯುತ್ತಾ, ಒಂದಾಗುತ್ತಾ ಹಾಸ್ಯ, ಕೌಟುಂಬಿಕ ಮತ್ತು ಭಾವನಾ ಪ್ರಧಾನವಾದ ಎಂಟು ಚಿತ್ರಗಳಲ್ಲಿ ಪಾಲ್ಗೊಂಡಿತು. ಮನೆಮನೆ ಕತೆ, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು, ನೀ ಬರೆದ ಕಾದಂಬರಿ, ನೀ ತಂದ ಕಾಣಿಕೆ, ರಾಯರು ಬಂದರು ಮಾವನ ಮನೆಗೆ, ಆಪ್ತ ಮಿತ್ರ- ಹೀಗೆ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಜೊತೆಯಾದರು.
ವಿಷ್ಣುವರ್ಧನ್ ಅವರಿಗೆ ಆಕ್ಷನ್ ಹೀರೋ ಪಟ್ಟವನ್ನು ಗಟ್ಟಿಯಾಗಿ ಕಟ್ಟಿದವರು ನಿರ್ದೇಶಕ ಜೋ ಸೈಮನ್. ಅವರಿಗೂ ಮುನ್ನ ನಿರ್ದೇಶಕ ಕೆ.ಎಸ್.ಆರ್. ದಾಸ್ ಅವರು ಕಳ್ಳ ಕುಳ್ಳ, ನಂತರ ಬಂಗಾರದ ಗುಡಿ, ಸಹೋದರರ ಸವಾಲ್ ಮತ್ತು ಕಿಲಾಡಿ ಕಿಟ್ಟು ಚಿತ್ರಗಳಲ್ಲಿ ಅವರಿಗೆ ಸಾಹಸಿ ನಾಯಕನ ಪಾತ್ರಗಳ ಚಿತ್ರಗಳನ್ನು ರೂಪಿಸಿದ್ದರು. ಮುಂದೆ ಖೈದಿಯಂಥ ಪ್ರಚಂಡ ಯಶಸ್ಸಿನ ಚಿತ್ರವನ್ನೂ ನೀಡಿದರು. ಆದರೆ ಸಿಂಹ ಜೋಡಿ(1980) ಚಿತ್ರದಿಂದ ಜೊತೆಯಾದ ಜೋ ಸೈಮನ್ ಅವರು ವಿಷ್ಣುವರ್ಧನ್ ಅವರ ಸಾಹಸ ನಾಯಕನ ಪಾತ್ರವನ್ನು ಬಹು ಎಚ್ಚರಿಕೆಯಿಂದ ಕಡೆದರು. ವಿಷ್ಣುವರ್ಧನ್ ಅವರ ವ್ಯಕ್ತಿತ್ವದ ಭಾಗವೆನ್ನುವಷ್ಟರ ಮಟ್ಟಿಗೆ ಹೊಸ ಶೈಲಿಯ ಸಾಹಸ ದೃಶ್ಯಗಳನ್ನು ಸಾಹಸ ಸಿಂಹ(1981) ಚಿತ್ರದಲ್ಲಿ ಅಳವಡಿಸಿ ಜನಪ್ರಿಯಗೊಳಿಸಿದರು. ಮುಂದೆ ಇವರು ಸೃಷ್ಟಿಸಿದ ಇಮೇಜನ್ನೇ ಆಧಾರವಾಗಿಟ್ಟುಕೊಂಡು ಅನೇಕ ಚಿತ್ರಗಳು ನಿರ್ಮಾಣಗೊಂಡವು. ಇದೇ ಸಾಹಸ ಪಾತ್ರವನ್ನು ಸುನೀಲ್ ಕುಮಾರ್ ದೇಸಾಯಿ ಅವರು ನಿಷ್ಕರ್ಷ ಚಿತ್ರದಲ್ಲಿ ಮತ್ತೊಂದು ಆಯಾಮಕ್ಕೆ ಕೊಂಡೊಯ್ದರು. ಬ್ಯಾಂಕ್ ದರೋಡೆಯೊಂದರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಕಮ್ಯಾಂಡೋ ಅಜಯ್ ಕುಮಾರ್ ಪಾತ್ರದ ಸಹಜ ನಟನೆ ಅನ್ಯಭಾಷಾ ಚಿತ್ರರಂಗವೂ ಶ್ಲಾಘಿಸಿತು.
ಒಂದೆಡೆ ಸೇಡು, ಸಾಹಸ, ಲೆಕ್ಕ ಚುಕ್ತಾ ಮಾಡುವ ಪಾತ್ರಗಳೆ ಅರಸಿ ಬರುತ್ತಿದ್ದ ಕಾಲದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಸಾಮರ್ಥ್ಯದ ಹೊಸ ಮಗ್ಗಲುಗಳನ್ನು ಪರಿಚಯಿಸಿದವರು ನಿರ್ದೇಶಕ ದಿನೇಶ್ ಬಾಬು. ಸುಪ್ರಬಾತ(1988) ಅವರ ಜೋಡಿಯ ಮೊದಲ ಚಿತ್ರ. ಉಗ್ಗುವಿಕೆಯಿಂದ ಕೀಳರಿಮೆ ಅನುಭವಿಸಿ ಒಂಟಿಯಾಗಿ ಇರಲು ಬಯಸುವ ಅಂತರ್ಮುಖಿ ವಿಜಯಕುಮಾರ್ ಮತ್ತು ಮೂಕಿ ಹೇಮಾ ನಡುವಣ ನವಿರು ಸಂಬಂಧದ ಚಿತ್ರದ ಅವರ ಅಭಿನಯ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿತು. ಮುಂದೆ ಈ ಜೋಡಿ ಲಾಲಿ, ನಿಶ್ಶಬ್ದ, ಬಳ್ಳಾರಿ ನಾಗ ಚಿತ್ರದ ಯಶಸ್ಸಿನಲ್ಲಿ ಪಾಲ್ಗೊಂಡಿತು. ಹಾಗೆಯೇ ಎಚ್.ಆರ್. ಭಾರ್ಗವ (ಮತ್ತೆ ಹಾಡಿತು ಕೋಗಿಲೆ), ಡಿ. ರಾಜೇಂದ್ರ ಬಾಬು(ಹಾಲುಂಡ ತವರು), ಎಸ್. ನಾರಾಯಣ್(ವೀರಪ್ಪ ನಾಯಕ), ಪಿ.ವಾಸು(ಹೃದಯವಂತ, ಆಪ್ತಮಿತ್ರ, ಆಪ್ತ ರಕ್ಷಕ) ಅವರು ವಿಷ್ಣುವರ್ಧನ್ ಅವರ ವೃತ್ತಿಬದುಕಿನ ಮುಖ್ಯ ಚಿತ್ರಗಳು ರೂಪುಗೊಳ್ಳಲು ಜೊತೆಯಾದವರು.
ವಿಷ್ಣುವರ್ಧನ್ ಅವರು ಬಹುಭಾಷಾ ತಾರೆ ಎನ್. ಭಾರತಿ ಅವರನ್ನು 1975ರಲ್ಲಿ ವಿವಾಹವಾದರು. ಭಾರತೀಯ ಚಲನಚಿತ್ರರಂಗದ ಅನ್ಯೋನ್ಯ ಕಲಾವಿದ ದಂಪತಿಯಾಗಿ ಅವರು ಪ್ರಸಿದ್ಧರು. ಭಾರತಿ ಅವರಂತೆಯೇ ಗಾಯನದಲ್ಲೂ ಪರಿಶ್ರಮವಿದ್ದ ಅವರು ಭಾರತಿ ಅವರೊಡನೆ ನಾಗರಹೊಳೆ ಚಿತ್ರದಲ್ಲಿ ‘ಈ ನೋಟಕೆ, ಮೈ ಮಾಟಕೆ’ ಯುಗಳ ಗೀತೆಯನ್ನು ಹಾಡುವ ಮೂಲಕ ಗಾಯನ ಕ್ಷೇತ್ರವನ್ನೂ ಪ್ರವೇಶಿಸಿ 26 ಚಿತ್ರಗೀತೆಗಳನ್ನು ಹಾಡಿದ್ದಾರೆ. ಅವರು ಹಾಡಿರುವ ‘ಮಡಿಲಲ್ಲಿ ಮಗುವಾಗಿ ನಾನು'(ಕಿಲಾಡಿ ಕಿಟ್ಟು), ‘ತುತ್ತು ಅನ್ನ ತಿನ್ನೋಕೆ'(ಜಿಮ್ಮಿಗಲ್ಲು), ‘ನಗುವುದೇ ಸ್ವರ್ಗ'(ನಾಗ ಕಾಳ ಭೈರವ), ‘ಕನ್ನಡವೇ ನಮ್ಮಮ್ಮ'(ಮೋಜುಗಾರ ಸೊಗಸುಗಾರ) ಮೊದಲಾದ ಗೀತೆಗಳು ರಸಿಕರ ಎದೆಯಲ್ಲಿ ನೆಲೆಯಾಗಿವೆ.
ವಿಷ್ಣುವರ್ಧನ್ ಅವರ ವೃತ್ತಿ ಜೀವನದುದ್ದಕ್ಕೂ ಸಹಕಲಾವಿದರ ಸ್ಪರ್ಧೆಯ ಸವಾಲುಗಳನ್ನು ಎದುರಿಸಿಯೇ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದು ವಿಶೇಷ. ಆರಂಭದ ಅವಧಿಯಲ್ಲಿ ತಮ್ಮದೇ ಪೀಳಿಗೆಯವರಾದ ಶ್ರೀನಾಥ್, ಲೋಕೇಶ್, ಅನಂತ್‌ನಾಗ್, ಅಂಬರೀಷ್, ಶಂಕರ್ ನಾಗ್ ಅವರೊಡನೆ ಸ್ಪರ್ಧಿಸಿ ಮುಂಚೂಣಿಯಲ್ಲಿದ್ದರು. ನಂತರದ ಪೀಳಿಗೆಯ ರಮೇಶ್, ರವಿಚಂದ್ರನ್, ಶಿವರಾಜ್‌ಕುಮಾರ್, ದೇವರಾಜ್, ಉಪೇಂದ್ರ ಅವರೊಡನೆ ಸಹ ಅವರ ಜನಪ್ರಿಯತೆಯ ಹೊಳಪು ತಗ್ಗಲಿಲ್ಲ. ಇತ್ತೀಚಿನ ಹೊಸ ತಲೆಮಾರಿನ ನಟರ ನಡುವೆಯೂ ಅವರ ಯಶಸ್ಸು ಅಬಾಧಿತವಾಗಿ ಮುಂದುವರೆದಿತ್ತು. 2009ರ ಡಿಸೆಂಬರ್ 30ರಲ್ಲಿ ಸಂಭವಿಸಿದ ಅನಿರೀಕ್ಷಿತ ಮರಣ ಕನ್ನಡ ಚಿತ್ರೋದ್ಯಮಕ್ಕೆ ಅಪ್ಪಳಿಸಿದ ಬರಸಿಡಿಲು. 1972ರಿಂದ 2009ರ ಅಂತ್ಯದವರೆಗಿನ ವೃತ್ತಿಬದುಕಿನಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದ ಅವರು 205 ಕನ್ನಡ, 6 ತಮಿಳು, 4 ಹಿಂದಿ ಮತ್ತು ತಲಾ 2 ತೆಲಗು ಮತ್ತು ಮಲಯಾಳಂ ಭಾಷೆಯಲ್ಲಿ ನಟಿಸಿದ್ದಾರೆ. ನಾಯಕ ನಟರಾಗಿ ಅವರು ಅತ್ಯಂತ ಹೆಚ್ಚು ರೀಮೇಕ್ ಚಿತ್ರಗಳಲ್ಲಿ ಅಭಿನಯಿಸಿರುವುದು ಸಹ ಒಂದು ದಾಖಲೆ. ವಿಶೇಷವೆಂದರೆ ಬಹುತೇಕ ರೀಮೇಕ್ ಚಿತ್ರಗಳು ಗಳಿಕೆಯಲ್ಲಿ ಯಶಸ್ಸು ಕಂಡದ್ದು ಮಾತ್ರವಲ್ಲ, ಹಲವು ಚಿತ್ರಗಳು ಮೂಲ ಚಿತ್ರಗಳಿಗಿಂತಲೂ ಗಳಿಕೆಯಲ್ಲಿ ದಾಖಲೆ ಸ್ಥಾಪಿಸಿರುವುದು(ಉದಾ: ಗುರು ಶಿಷ್ಯರು, ಯಜಮಾನ, ವರ್ಷ, ಇತ್ಯಾದಿ). ಕೊನೆ ಕೊನೆಯಲ್ಲಿ ರೀಮೇಕ್ ಪ್ರಭಾವ ಎಷ್ಟಿತ್ತೆಂದರೆ 2000ರಿಂದ 2010ರವರೆಗೆ ಅವರು ನಾಯಕನಟರಾಗಿ ಅಭಿನಯಿಸಿ ಬಿಡುಗಡೆಯಾದ 25 ಚಿತ್ರಗಳಲ್ಲಿ 15 ಚಿತ್ರಗಳು ಪರಭಾಷೆಯ ಚಿತ್ರಗಳನ್ನು ಆಧರಿಸಿದ್ದವು. ಅದರಲ್ಲೂ 2004ರಿಂದ 2006ರ ಆರಂಭದವರೆಗೆ ಅವರ ಏಳು ರೀಮೇಕ್ ಚಿತ್ರಗಳು ಸತತವಾಗಿ ಬಿಡುಗಡೆಯಾಗಿದ್ದವು.

ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ
ವಿಷ್ಣುವರ್ಧನ್ ಅವರ ಅಭಿನಯ ಪ್ರತಿಭೆಗೆ ಅನೇಕ ಪ್ರಶಸ್ತಿಗಳು, ಪುರಸ್ಕಾರ, ಗೌರವಗಳು ಸಂದಿವೆ. ಏಳು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಆರು ಬಾರಿ ಫಿಲಂ ಫೇರ್ ಪ್ರಶಸ್ತಿ ಗಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಡಾ. ರಾಜ್‌ಕುಮಾರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಹಿರಿಯ ಕಲಾವಿದರಿಗೆ ನೀಡಲು ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದೆ. ಮೈಸೂರಿನ ಬಳಿ ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸಿದೆ. ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರಿಡಲಾಗಿದೆ. ವಿಷ್ಣುವರ್ಧನ್ ಅವರ ಸಿನೆಮಾ ಪಯಣ ಕೇವಲ ಅವರ ವ್ಯಕ್ತಿಗತ ಯಶಸ್ಸಿನ ರೇಖೆ ಮಾತ್ರವಲ್ಲ; ಕನ್ನಡ ಚಲನಚಿತ್ರರಂಗದ ನಾಲ್ಕು ದಶಕಗಳ ವಿಕಾಸಪಥದ ಒಂದು ಭಾಗ ಸಹ. ಹಲವು ಬಗೆಯ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ಅವರ ಚಿತ್ರಗಳು ಮುಂದಿನ ಜನಾಂಗವನ್ನೂ ರಂಜಿಸುತ್ತಾ ಸಾಗಲಿವೆ.
ಇದನ್ನು ಓದಿದ್ದೀರಾ?: ವಿಷ್ಣುವರ್ಧನ್ @75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ

ಡಾ. ಕೆ. ಪುಟ್ಟಸ್ವಾಮಿ
ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.