ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ನಡೆದ ಹೃದಯ ಕಲುಕುವ ಘಟನೆ ಊರನ್ನೇ ಶೋಕಸಾಗರಕ್ಕೆ ತಳ್ಳಿದೆ. ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿದ್ದಾರ
ಎಸ್.ಎಲ್.ಸಿ. ಓದುತ್ತಿದ್ದ ಸತೀಶ ಬಾಗನ್ನವರ (16) ಅವರಿಗೆ ಹೃದಯಾಘಾತ ಉಂಟಾಗಿ ಅಸ್ವಸ್ಥರಾಗಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಊರಿನಲ್ಲಿ ಹರಡಿತು.
ಈ ಸುದ್ದಿಯನ್ನು ಕೇಳಿದ ಅಣ್ಣ ಬಸವರಾಜ ಬಾಗನ್ನವರ (24) ತೀವ್ರ ಆಘಾತಕ್ಕೆ ಒಳಗಾಗಿ ಅಚಾನಕ್ ಕುಸಿದು ಬಿದ್ದರು. ಅವರನ್ನು ಕೂಡ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸತೀಶ ಮೃತಪಟ್ಟಿದ್ದಾನೆ ಎಂಬ ಸುದ್ದಿ ಕೇಳಿಬಂದಿತು. ಅದೇ ಕ್ಷಣದಲ್ಲಿ ಬಸವರಾಜಗೂ ಹೃದಯಾಘಾತ ಉಂಟಾಗಿ ಪ್ರಾಣ ಕಳೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಪತಿ ಮತ್ತು ಮೈದುನ ಇಬ್ಬರ ಸಾವಿನ ಸುದ್ದಿ ಕೇಳಿ ಬಸವರಾಜ ಅವರ ಪತ್ನಿ ಪವಿತ್ರಾ (20) ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲೆಯಾಗಿದ್ದಾರೆ. ಆಕೆ ತುಂಬು ಗರ್ಭಿಣಿಯಾಗಿದ್ದು, ಈಗ ಚೇತರಿಕೆ ಕಾಣುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಬ್ಬರು ಗಂಡು ಮಕ್ಕಳ ಕಣ್ಮುಂದೆ ಸಾವನ್ನಪ್ಪಿದ ಪರಿಣಾಮ ತಂದೆ–ತಾಯಿ ಶೋಕದ ಸಾಗರದಲ್ಲಿ ಮುಳುಗಿದ್ದಾರೆ. ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಸತೀಶ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಬಸವರಾಜ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಸಹೋದರರ ಅಕಾಲಿಕ ಮರಣದಿಂದ ಕಪರಟ್ಟಿ ಗ್ರಾಮದಲ್ಲಿ ಅಳಲು, ಶೋಕ, ನಂಬಲಾರದ ವಾತಾವರಣ ನಿರ್ಮಾಣವಾಗಿದೆ.