ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ ಸ್ಥಳೀಯ ಯುವಕ ವಿಷ್ಣು ನಾಯ್ಕ ಅವರು ಪ್ರವಾಸಿಗರ ಕಳೆದುಹೋಗಿದ್ದ ಬ್ಯಾಗನ್ನು ಹಿಂದುರಿಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ದೇಗುಲದ ಬಳಿ ಸಿಕ್ಕಿದ್ದ ₹48,190 ನಗದು ಮತ್ತು ಇತರೆ ದಾಖಲೆಗಳಿರುವ ಬ್ಯಾಗ್ ಅನ್ನು ಯುವಕ ಯಾವುದೇ ಆಸೆಪಡೆದೆ ಪೊಲೀಸರಿಗೆ ಒಪ್ಪಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಏನಿದು ಘಟನೆ?
ದೇವಸ್ಥಾನಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಪ್ರವಾಸಿಗರು ಆಕಸ್ಮಿಕವಾಗಿ ತಮ್ಮ ಬ್ಯಾಗ್ ಅನ್ನು ದೇವಸ್ಥಾನದ ಆವರಣದಲ್ಲಿ ಕಳೆದುಕೊಂಡಿದ್ದರು. ಇದೇ ವೇಳೆ, ಗರಡಿಗಡ್ಡೆಯ ವಿಷ್ಣು ನಾಗಪ್ಪ ನಾಯ್ಕ ಅವರಿಗೆ ಈ ಬ್ಯಾಗ್ ಸಿಕ್ಕಿತು. ಯಾವುದೇ ವಿಳಂಬ ಮಾಡದೆ ಅವರು ತಕ್ಷಣವೇ ಬ್ಯಾಗ್ ಅನ್ನು ಮುರುಡೇಶ್ವರ ಪೊಲೀಸ್ ಠಾಣೆಗೆ ತಲುಪಿಸಿ, ತಮ್ಮ ಪ್ರಾಮಾಣಿಕತೆ ಮೆರೆದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ – ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ.
ಪೊಲೀಸರ ಮೂಲಕ ಹಸ್ತಾಂತರ ನಂತರ, ಪಿಎಸ್‌ಐ ಹನುಮಂತ ಬಿರಾದರ್ ಅವರ ಸಮ್ಮುಖದಲ್ಲಿ ಕಳೆದುಹೋದ ಬ್ಯಾಗ್ ಅನ್ನು ಅದರ ವಾರಸುದಾರರಾದ ಪ್ರವಾಸಿಗರಿಗೆ ಹಸ್ತಾಂತರಿಸಲಾಯಿತು. ಅಷ್ಟೊಂದು ದೊಡ್ಡ ಮೊತ್ತದ ನಗದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ ವಿಷ್ಣು ನಾಯ್ಕ ಅವರ ಕಾರ್ಯಕ್ಕೆ ಪ್ರವಾಸಿಗರು ಧನ್ಯವಾದ ಸಲ್ಲಿಸಿದರು. ಅಲ್ಲದೆ, ಪೊಲೀಸರು ಹಾಗೂ ಸಾರ್ವಜನಿಕರಿಂದಲೂ ವಿಷ್ಣು ನಾಯ್ಕ ಅವರ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.