ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬಾಕಿ ಉಳಿಸಿಕೊಂಡಿರುವ ಸಾವಿರಾರು ಪೋಡಿ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಬೇಕೆಂದು ತಾಲೂಕು ಕಚೇರಿ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ನೇಗಿಲು ನೊಗ ಹೊತ್ತು, ಟಮಟೆ ಬಾರಿಸುವ ಮೂಲಕ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಲಾಗಿದೆ. “ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವ ಕಂದಾಯ ಸಚಿವರು ಆಸಕ್ತಿ ತೋರಿದ್ದು, ಇದಕ್ಕೆ ಪೂರಕವಾದ ಕೆಲಸ ಅಧಿಕಾರಿಗಳು ಮಾಡುತ್ತಿಲ್ಲ. ಪೋಡಿ ಪ್ರಕರಣ ಮುಕ್ತಗೊಳಿಸುವ ಬಗ್ಗೆ 2018ರಲ್ಲಿ ಸರಕಾರ 22 ಪುಟದ ಸುತ್ತೋಲೆ ಹೊರಡಿಸಿ ವಿವರಿಸಿದೆ. ಈ ಸುತೋಲೆ ಬಗ್ಗೆ ಸರ್ವೇ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಇದರಿಂದ ಎಡಿಎಲ್‌ಆರ್ ಇಲಾಖೆಯ ತಕರಾರು ಲಾಗಿನ್‌ನಲ್ಲಿ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ರೈತರ ಜಮೀನು, ಪರಿಹಾರ ಕಂಡುಕೊಳ್ಳದೇ ಬಾಕಿ ಉಳಿದಿದೆ” ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥಗೌಡ ಮಾತಾಡಿದರು.
ರಾಜ್ಯದಲ್ಲಿಯೇ ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚು ಪೋಡು ಪ್ರಕರಣ ಬಾಕಿ ಉಳಿದಿದೆ. ಫಾರಂ ನಂ50 ಮತ್ತು 53 ಯಲ್ಲಿ ಅರ್ಜಿ ಸಲ್ಲಿಸಿದ ರೈತರ ಜಮೀನಿನ ಪೋಡು ಪ್ರಕರಣ ಕೂಡಲೇ ಇತ್ಯರ್ಥಪಡಿಸಬೇಕು. ಆದಿವಾಸಿ ರೈತರನ್ನು ಒಕ್ಕಲೆಬ್ಬಿಸಬಾರದು. ಪೋಡಿ ಪ್ರಕರಣದ ಬಗ್ಗೆ ಎಡಿಎಲ್‌ಆರ್ ಅಧಿಕಾರಿ ಸ್ಥಳಕ್ಕೆ ಆಗಮಿಸಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ ಎಂದು ಜಿಲ್ಲಾಧ್ಯಕ್ಷ ಉದ್ದೇಗೌಡ ಮಾತಾಡಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕೆಎಸ್‌ಆರ್‌ಟಿಸಿ ಬಸ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗೆ ಡಿಕ್ಕಿ
ಈ ಕುರಿತು ತಹಸೀಲ್ದಾರ್ ಎಸ್.ಅಶ್ವಿನಿ ಮನವಿ ಸ್ವೀಕರಿಸಿ ಮಾತನಾಡಿ, ಈ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರಾದ ವನಶ್ರೀಗೌಡ, ರಘು ಬಿಳ್ಳೂರು, ಚಂದ್ರೇಗೌಡ ಕೆಲ್ಲೂರು, ಚಂದ್ರೇಗೌಡ ಕುಂದೂರು, ಎನ್.ಎಲ್.ಸುಂದ್ರೇಶ್, ರಮೇಶ್ ದಾರದಹಳ್ಳಿ, ಮಂಜುನಾಥ್ ಹೊನ್ನಕೊಯ್ದು, ಮೀನಾಕ್ಷಮ್ಮ, ಶಕುಂತಲಾ, ನಾಗೇಶ್ ಹೊಸಳ್ಳಿ, ಲಕ್ಷ್ಮಣ್‌ಗೌಡ ಬಡವನದಿಣ್ಣೆ, ರವಿ ಬಿಳ್ಳೂರು, ಐ.ಬಿ.ಗೋಪಾಲಗೌಡ, ರಘು ಬಿಳ್ಳೂರು, ಜಯರಾಂಗೌಡ ಅಬಚೂರ್ ಹಾಗೂ ಇನ್ನಿತರರಿದ್ದರು.