ʼಮುಸ್ಲಿಮರಿಗೆ ಭೂಮಿ ಹಕ್ಕು ನೀಡಿದ ಅಧಿಕಾರಿಯನ್ನು ನೇಣಿಗೇರಿಸುತ್ತೇನೆʼ ಎಂದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿಕೆ ಖಂಡಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ʼಮುಸ್ಲಿಂರ ವಿರುದ್ಧ ಹೇಳಿಕೆ ನೀಡಿದ ಬಂಡಿಸಿದ್ದೆಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕುʼ ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ಸದಸ್ಯ ಅಕ್ಬರ್ ಹುಸೇನ್ ನಾಗುಂಡಿ ಮಾತನಾಡಿ, ʼಸರಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಮುಸ್ಲಿಮರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಕೋರಿದ್ದರು. ಅದಕ್ಕೆ ಸರಕಾರಿ ಭೂಮಿಯನ್ನು ಸಾಬರ (ಮುಸ್ಲಿಮರ) ಹೆಸರಿಗೆ ಮಾಡಿದ್ರೆ, ಅಂತಹ ಅಧಿಕಾರಿಯನ್ನು ನೇಣಿಗೆ ಹಾಕುವುದು ಗ್ಯಾರಂಟಿ ಎಂದು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆದರಿಕೆ ಹಾಕಿದ್ದಾರೆʼ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುತ್ತಾ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷ. ಪಕ್ಷದಲ್ಲಿ ಆರ್‌ಎಸ್‌ಎಸ್ ಮನಸ್ಥಿತಿಯವರಿದ್ದಾರೆ. ಕೂಡಲೇ ಬಂಡಿಸಿದ್ದೆಗೌಡರ ಶಾಸಕನ ಸ್ಥಾನವನ್ನು ಅನರ್ಹಗೊಳಿಸಿ ಪಕ್ಷದಿಂದ ಉಚ್ಛಾಟಿಸಬೇಕುʼ ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಚರಂಡಿ ,ಬೋರವೆಲ್ ದುರಸ್ತಿಗೆ ಕೆ ಆರ್ ಎಸ್ ಆಗ್ರಹ
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮತೀನ್ ಅನ್ಸಾರಿ, ತೌಸೀಫ್ ಅಹ್ಮದ್, ಜಮಾತ್ ಇಸ್ಲಾಂ ಹಿಂದ್ ಮುಖಂಡ ಅಸೀಮುದ್ದೀನ್ ಅಖ್ತರ್, ಜಿಲ್ಲಾ ನಾಯಕರಾದ ಸೈಯದ್ ಇರ್ಫಾನ್, ಹಫೀಜ್ ಮೆಹಮೂದ್, ಅತೀಕ್ ಅಹ್ಮದ್, ಮುಷ್ತಾಕ್ ಅಹ್ಮದ್, ನಗರ ಅಧ್ಯಕ್ಷ ಮಿರ್ಜಾ ಹಸನ್ ಬೈಗ್ ಮತ್ತು ಅನೇಕರು ಉಪಸ್ಥಿತರಿದ್ದರು.