ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಕಂದೀಲಿನ ಬತ್ತಿಯನ್ನು ಏರಿಸುವಾಗ ಚೆನ್ನೂನ ಕೈ ನಡುಗಿತು. ಪಿಶವಿಯೊಳಗಿನ ಪುಸ್ತಕಗಳನ್ನೂ ಪಾಟಿಯನ್ನೂ ಹೊರತೆಗೆದು ಚಾಪೆಯ ಮೇಲೆ ಹರವಿ, ಕಾಲುಗಳನ್ನು ಹಿಂದಕ್ಕೆ ಚಾಚಿ, ಒಂದು ದಪ್ಪ ಪುಸ್ತಕದ ಮೇಲೆ ಮೊಣಕೈಯೂರಿ, ತನ್ನ ಪ್ರೀತಿಯ ಇತಿಹಾಸದ ಪುಸ್ತಕ ತೆರೆದು ಮುಂದಿಟ್ಟು, ಕಂದೀಲಿನ ಸೆರೆಯಲ್ಲಿ ಉರಿಯುತ್ತಿದ್ದ ಚಿಕ್ಕ ದೀಪವನ್ನು ನೋಡತೊಡಗಿದ. ನೋಡ ನೋಡುತ್ತ ಅವನ ಕೈ ಮರಳಿ ಕಂದೀಲಿನತ್ತ ಸಾರಿ ದೀಪವನ್ನು ತೀರ ಸಣ್ಣದಾಗಿಸಿತು. ಥೂ, ದೀಪ ಒಮ್ಮೆಲೆ ನಂದಿಹೋದರೆ- ಅಡಿಗೆಯ ಮನೆಯಲ್ಲಿ ಬಹುಶಃ ಇನ್ನೂ ಅಳುತ್ತ ಕುಳಿತ ಅವ್ವನನ್ನು ಕರೆಯಬೇಕಾದೀತಲ್ಲ ಎಂದು ಹೆದರಿ ಭಡಕ್ಕನೆ ಬತ್ತಿ ಏರಿಸಿದ. ಹಾಗೆ ಏರಿಸಿದೊಡನೆ ದೀಪ ಫಕ್ ಫಕ್ ಭಕ್ ಎನ್ನತೊಡಗಿತು. ಚೆನ್ನೂನಿಗೆ ದಿಗ್ಭ್ರಮೆ; ಅವನ ಎದೆಯಲ್ಲಿ ಏನೋ ಡಬಡಬ ಬಡಿದಂತಾಗಿ, ಒಮ್ಮೆಲೆ ತುದಿಗುಂಡೆಯ ಮೇಲೆ ಕುಳಿತು, ಬತ್ತಿಯನ್ನು ಸಾವಕಾಶವಾಗಿ ಕೆಳಗಿಳಿಸಿದ. ದೀಪ ಮೊದಲಿಗಿಂತ ಸ್ವಲ್ಪ ಮಂದವಾಗಿ ಉರಿಯತೊಡಗಿತು. ‘ಅವ್ವಾ, ಕಂದೀಲಿನ್ಯಾಗ ಎಣ್ಣೆ ತೀರ್‍ತಾ ಬಂತು’ ಎಂದು ಒದರಬೇಕೆಂದು ಮಾಡಿದರೂ ಧ್ವನಿ ಹೊರಡಲಿಲ್ಲ.

ಹೋ ಹೋ ಹೋ ಹೋ ಹೋ- ಅಪ್ಪನ ಏಳು ಮಜಲಿನ ನಗೆ! ‘ಚೆನ್ನೂ, ಹೋಗು, ಅಭ್ಯಾಸ ಮಾಡಹೋಗ್, ಹಂಗೇನ ನನ್ನ ನುಂಗುವರ್‍ಹಾಂಗ ನೋಡ್ತಿದಿ? ನಿನ್ನವ್ವನ್ನ ನಾಯೇನೂ ಕೊಲ್ಲೋದಿಲ್ಲೇಳು’ ಎಂದು ಸ್ವಲ್ಪ ಹೊತ್ತಿನ ಕೆಳಗೆ ಗುಡುಗಿದ ಅಪ್ಪ ಹೊರಗಿನ ಕಟ್ಟೆಯ ಮೇಲೆ ಕಿರಾಣಿ ಅಂಗಡಿಯ ಶೀನಪ್ಪನ ಜೊತೆಗೆ ಹರಟೆ ಕೊಚ್ಚುತ್ತ ನಗುತ್ತಿದ್ದ. ಅವ್ವನನ್ನು ಅಳಿಸಿ ಅವನನ್ನೂ ಬೆದರಿಸಿ, ಈಗ ಹೊರಗೆ ಏನೂ ಆಗದವನಂತೆ ಮಜವಾಗಿ ನಗುತ್ತಿದ್ದ ಅಪ್ಪ!

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

ಚೆನ್ನೂನಿಗೆ ಮನೆಯಲ್ಲಿ ಅವ್ವ ಅಪ್ಪರ ಹೊರತಾಗಿ ಯಾರೂ ಇಲ್ಲವಲ್ಲ ಎಂದು ಮೊದಲಿನಿಂದಲೂ ಕೊರಗು. ಭಟ್ಟರ ಬಾಳ್ಯಾ, ಪ್ರಭೂ, ಪಾಂಡ್ಯಾ ಅವರೆಲ್ಲ ಎಷ್ಟು ಲಕ್ಕಿ! ಅವರಿಗೆ ಅಕ್ಕ-ಅಣ್ಣ-ತಮ್ಮ-ತಂಗಿ ಎಲ್ಲ ಇದ್ದಾರೆ. ಕನಿಷ್ಠ ಒಬ್ಬ ತಮ್ಮ ಅಥವಾ ಒಬ್ಬ ತಂಗಿ ಇದ್ದಿದ್ದರೆ ಚೆನ್ನೂನಿಗೆ ಯಾವ ತೊಂದರೆಯೂ ಇರುತ್ತಿರಲಿಲ್ಲ; ಆಮೇಲೆ ಅವ್ವ-ಅಪ್ಪ ಹೇಗಿದ್ದರೂ ಏನು ಮಾಡಿದರೂ ಅಡ್ಡಿಯಿದ್ದಿಲ್ಲ; ಅವರು ಬೇಕಾದರೆ ಜಗಳಾಡಲಿ, ಹಣೆಗೆ ಗಂಟಿಕ್ಕಿ ಒಬ್ಬರಿಗೊಬ್ಬರು ದುರುದುರು ನೋಡಲಿ, ಬೇಕಾದರೆ ರಾತ್ರಿ ಗುಣು-ಗುಣು ಮಾತಾಡಲಿ, ನಡುನಡುವೆ ನಗಲಿ- ಅವರು ಹೇಗಿದ್ದರೂ ಅವರಷ್ಟಕ್ಕೆ ಅವರು, ತನ್ನ ತಮ್ಮ ತಂಗಿಯರೊಡನೆ ತನ್ನಷ್ಟಕ್ಕೆ ತಾನು! ನಡುಮನೆಯ ಮೂಲೆಯಲ್ಲಿ ತಬ್ಬಲಿಯಾಗಿ ಕುಳಿತ ತೊಟ್ಟಿಲದತ್ತ ಚೆನ್ನೂ ಕಣ್ಣು ಹರಿಸಿದ. ನಾಲ್ಕು ತಿಂಗಳ ಹಿಂದೆಯೇ, ಆ ತೊಟ್ಟಿಲಲ್ಲಿ ಆಡಬೇಕಾದ ಅವನ ತಮ್ಮನೋ ತಂಗಿಯೋ ತಾಯಿಯ ಹೊಟ್ಟೆಯಿಂದ ಲಗೂನೆ ಹೊರಬಂದು ದೇವರ ಕಡೆಗೆ, ಅಂತೂ ಮಣ್ಣಿನಲ್ಲಿ ಹೋಗಿಬಿಟ್ಟಿತ್ತು. ಅವ್ವ ಮುಳು ಮುಳು ಇಡೀ ದಿನ ಅತ್ತಿದ್ದಳು. ಚೆನ್ನೂನಿಗೂ ಗಂಟಲು ಬಿಗಿದು ಬಹಳ ಬಹಳ ಅಳು ಬಂದಿತ್ತು. ಅಪ್ಪ ಬಂದು, ‘ಯಾಕೆ ಅಳ್ತಿಯೋ? ಹೋದರೆ ಹೋತಪಾ! ಅವಕ್ಕೇನು ಬೇಕಾದಷ್ಟು ಆಗ್ತಾವ ಬೇಕಂದರೆ!’ ಎಂದು ನಗುತ್ತ ಹೇಳಿದ್ದ. ಚೆನ್ನೂ ಏನೂ ತಿಳಿಯದೆ ಕಂಗೆಟ್ಟು ಅಳುವನ್ನು ನಿಲ್ಲಿಸಿದ್ದ.

ಮತ್ತೆ- ಹೋ ಹೋ ಹೋ ಹೋ! ಇಷ್ಟರಲ್ಲಿ ಅಪ್ಪ ಒಳಗೆ ಬರಲಾರ, ‘ಚೆನ್ನ್ಯಾ, ಅಭ್ಯಾಸ ಮಾಡೋದು ಬಿಟ್ಟು ಎಲ್ಲಿ ಹೋದಿ? ಮತ್ತೆ ಅವ್ವನ ಮಗ್ಗಲದಾಗ ಕೂತು ಅವಳ ಕಣ್ಣೀರು ಕುಡ್ಯಾಕ ಹೋದೇನು?’ ಎಂದು ಅನ್ನಲಾರ ಎಂಬ ಧೈರ್ಯದಿಂದ ಪುಸ್ತಕ ಮುಚ್ಚಿದ. ಅವ್ವ ಪಾಪ ಇನ್ನೂ ಅಳುತ್ತಿದ್ದಾಳೋ ಅಥವಾ ಸುಮ್ಮನೆ ಬೆಂಕಿಯ ಮುಂದೆ ಕುಳಿತು ರಂಡಿ ಕುಂದಾಳ ಬಗ್ಗೆ ವಿಚಾರ ಮಾಡುತ್ತಿದ್ದಾಳೋ ನೋಡಬೇಕು ಎಂದೆನಿಸಿತು.

ಇದನ್ನು ಓದಿದ್ದೀರಾ?: ಶಂಕರ ಮೊಕಾಶಿ ಪುಣೇಕರ ಅವರ ಕತೆ | ಬಿಲಾಸಖಾನ

ಇಂದಿನ ಅವ್ವ-ಅಪ್ಪರ ಜಗಳ ಸ್ವಲ್ಪ ವಿಚಿತ್ರವಾಗಿತ್ತು. ಅಡಿಗೆಮನೆಯ ಕಿಟಕಿಯ ಮರೆಯಲ್ಲಿ ನಿಂತು ಸ್ವಲ್ಪ ಕೇಳಿದ್ದರಿಂದ ಅವನ ಮುಂದೆ ಸಹಸಾ ಮಾತಾಡದಂಥ ಮಾತುಗಳು ಕೇಳಸಿಕ್ಕಿದ್ದವು. ‘ಇತ್ತಿತ್ತಲಾಗಿ ನೀವು ಅಲ್ಲಿ ಹೋಗೋದು ಬಹಳ ಆಗೇತಿ ಅಂತೀನಿ… ಊರಿಗೆಲ್ಲಾ ಗೊತ್ತಾಗೇದ. ಹುಲ್ಲಿನ ಮನಿ ಶಂಕರಿ ಹಾಲು ಕೊಡಾಕ ಹೋದಾಗ ನೀವೇನೊ…’ ‘ಸಾಕು ಬಿಡು, ನಿಂದೂ ಏನಾದರೊಂದು… ಹಾಂಗ ಸ್ವಲ್ಪ ಮಾತಾಡಿದರ, ನಗಚ್ಯಾಟಿಕೆ ಮಾಡಿದರ ತಪ್ಪೇನು? -ಈಗ ಬ್ಯಾರೆ ನಾ ಅಲ್ಲಿ ಹೋಗೋದಿಲ್ಲಲ್ಲ…’ ‘ಅಬ್ಬಬ್ಬ ನಿಮ್ಮ ನಗಜಾಟಕೀನ? ನಂಗೊತ್ತಿಲ್ಲೇನು ನಿಮ್ಮ ನಗಚಾಟಕೀ ರೀತಿ? ಅದನ್ನೆಲ್ಲಾ ಒಯ್ದು ಯಾವುದಾದರೂ ಒಂದು ಕೂಸಿನ ಮುಂದ ಹೇಳಿರಿ… ಅದಕ್ಕೇನು ಲಗ್ನಾ ಇಲ್ಲದ ಖಾಲಿ ಕೂತಿರ್ತದ ರಂಡಿ. ಗಂಡಸಂದರ ಆ ಅಂತ ಹಸಿದು ನೋಡ್ತದ ಸುಟ್ಟಮಾರೀ ಹರೇಮಿ, ರೂಪ ಒಂದು ಚಲೋ ಐತಿ, ಗುಣ? -ಅದರ ನಿಮಗೆ ಮೊದಲ ಬುದ್ದಿ ಇರಬಾರದೇನು? ನೀವ್ಯಾಕ ಅವಳ ಕೂಡ ನಾಚಿಕೆ ಮರ್ಯಾದೆ ಬಿಟ್ಟು…’ ಅಪ್ಪನಿಗೆ ಭಯಂಕರ ಸಿಟ್ಟು ಬಂದಿತ್ತು: ‘ಬಾಯಿ ಮುಚ್ಚು, ಹೊಲಸ ರಂಡೆ! ಇಲ್ಲದ್ದೇನಾದರೊಂದು ಬಡಬಡಿಸ ಬೇಡ-ಹುಚ್ಚುಚ್ಚಾರ.’ ‘ಬಾಯಿ ಮುಚ್ಚಾಕೇನು ನಾ ಹಾದಿಮ್ಯಾಲ ಬಿದ್ದ ಹೆಣ್ಣೇನು? ನಿಮ್ಮ ಕೈ ಹಿಡಿದ ಹೆಂಡತಿ ನಾನು.’ ‘ಬಿಟ್ಟು ಬಿಡು ಅದೆಲ್ಲ ಮಿಜಾಸಕಿ. ಇಲ್ಲಿ ನೋಡು, ಚಂದ್ರೀ, ನಾ ನನಗೆ ಬೇಕಾದ ಹಾಂಗ ಮಾಡಾಂವಾ, ಬೇಕಾದಲ್ಲಿ ಹೋಗಾಂವಾ! ನೀ ಯಾರ ಕೇಳಾಕ? ಸುಮ್ನ ನಿನ್ನ ಕೆಲಸ ನೀ ಮಾಡ್ತಾ ಮನ್ಯಾಗ ಬಿದ್ದೀರು. ಯಾಕ ಬೇಕು ಗಂಡಸರ ಪಂಚೇತಿ? ನಾಯೇನ ನಿನಗ ಹಾದೀ ಮ್ಯಾಲ ಒಗದಿಲ್ಲಲ್ಲಾ-ಆತು ಮತ್ತ, ನಾಯೇನ ನಿನ್ನ ಮಾನಾ ಕಳೆದಿಲ್ಲ, ಕಳ್ಳೋದಿಲ್ಲ, ಆತs? ನಿನ್ನ ಪುಣ್ಯಾ ಅಂತ ತಿಳಕೋ…’ ಅವ್ವನ ಅಳು ಸುರುವಾಗಿತ್ತು. ಅವಳ ಕಣ್ಣೀರಿನಿಂದ ಒದ್ದೆಯಾದ ದಪ್ಪದಪ್ಪ ಮಾತು ಚೆನ್ನೂನಿಗೆ ಪೂರ್ಣ ತಿಳಿಯಲಿಲ್ಲ. ‘ಅವಳಿಗೂ ಏನೋ ಜ್ವರ ಅಂತ-ಹೋಗರಿ, ಅಲ್ಲೇ ಕೂಡ್ರಿ ಅವಳ ಶುಶ್ರೂಷಾ ಮಾಡ್ತಾ. ಮನೀಗರೆ ಯಾಕ ಬರ್‍ತೀರಿ?…’ ಮತ್ತೇನಂದಳೋ ಅವ್ವ? ಮುಂದೆ ಚೆನ್ನೂನಿಗೆ ಕೇಳಿದ್ದು ತಾಟು ಧಪ್ಪೆಂದು ಕೆಳಗೆ ಅಪ್ಪಳಿಸಿದ ಸಪ್ಪಳ, ಅಧಿಕ ಅವ್ವನ ಬಿಕ್ಕು ತುಂಬಿದ ಅಳುವು. ಚೆನ್ನೂ ಒಮ್ಮೆಲೆ ದಿಕ್ಕು ತೋಚದೆ ಅಡಿಗೆ ಮನೆಯಲ್ಲಿ ಹೋಗಿ ಅಪ್ಪನನ್ನು ದುರು ದುರು ನೋಡಿದ್ದ ಹೆದರಿಕೆಯಿಂದ, ಕಣ್ಣೀರಿನಿಂದ ಕುರುಡಾದ ಕಣ್ಣುಗಳಿಂದ!… ಅಪ್ಪ ಅವನನ್ನು ಹೆದರಿಸಿ ಅಭ್ಯಾಸಕ್ಕೆ ಕಳಿಸಿದ್ದ. ಚೆನ್ನೂ ಮಾತ್ರ ಒಂದೇ ಕ್ಷಣದಲ್ಲಿ ಗುಣಾಕಾರ-ಭಾಗಾಕಾರ ಮಾಡಿ ಅವ್ವ ಅಪ್ಪರ ಜಗಳದ ಕಾರಣ ಊಹಿಸಿದ್ದ- ಕುಂದಾತಾಯಿ! ಯಾಕಂದರೆ ಆ ವಿಷಯ ಎಲ್ಲರಕ್ಕಿಂತ ಮುಂಚೆ ಗೊತ್ತಾದದ್ದು ಚೆನ್ನೂನಿಗೇ…

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ಅವ್ವನೊಡನೆ ಏನಾದರೊಂದು ಮಾತನಾಡಿ ರಮಿಸಬೇಕೆಂದು ಉದ್ದೇಶದಿಂದ ಚೆನ್ನೂ ಎದ್ದು ಅಡಿಗೆಮನೆಯತ್ತ ಹೆಜ್ಜೆ ಇಟ್ಟ. ಅಷ್ಟರಲ್ಲಿ ಹೊರಗೆ ಅಪ್ಪನ ನಗೆ ಒಮ್ಮೆಲೆ ನಿಂತಿತು. ಮತ್ಯಾರೋ ಬಂದು ಸ್ವಲ್ಪ ಗಂಭೀರ ಧ್ವನಿಯಲ್ಲಿ ಏನೋ ಹೇಳುತ್ತಿದ್ದಾರೆ ಎಂದೆನಿಸಿ ಕುತೂಹಲದಿಂದ ಹೊರಳಿ, ಹೊರಗಿನ ಕಟ್ಟೆಯ ಬಾಗಿಲಿನತ್ತ ಹೋಗಿ ಮರೆಯಲ್ಲಿ ನಿಂತು ಕೇಳತೊಡಗಿದ.

“ಬಿಳಗಿ ಡಾಕ್ಟರ ಬಂದು ಹೋದ. ಎರಡು ಇಂಜಕ್ಷನ್ ಕೊಟ್ಟ. ಆದರ ಜ್ವರ ಇಳಿಯೋ ಚಿಹ್ನಾನೇ ಕಾಣಿಸವಲ್ತು.” ಕಾಮತ ಮಾಮಾ ಹೇಳುತ್ತಿದ್ದ.

”ಎನಂತಾರೆ ಡಾಕ್ಟರರು?” ಅಪ್ಪನ ಧ್ವನಿಯಲ್ಲಿ ಒಂದು ಸ್ಪೆಷಲ್ ಆಸ್ಥೆ ಮೂಡಿತ್ತು.

ಆ ಆಸ್ಥೆಯ ಗುಟ್ಟು ಚೆನ್ನೂನಿಗೆ ಗೊತ್ತಿಲ್ಲವೆ? ಹೋ, ಹಾಗೆ ನೋಡಿದರೆ ಅವನಿಗೇ ಮೊದಲು ಗೊತ್ತಾದದ್ದಲ್ಲವೇ? ಇದೇ ಬಾಗಿಲಮರೆಯಿಂದ ಆತ, ದಿನಾಲು ಅಪ್ಪ ಕಟ್ಟೆಯ ಮೇಲೆ ಕುಳಿತು ಮುಂದಿನ ಮನೆಯ ಕಾಮತರ ಕುಂದಾತಾಯಿಯ ಕಡೆಗೆ ನೋಡುತ್ತಿದ್ದುದನ್ನೂ, ನೋಡಿ ನಗುತ್ತಿದ್ದುದನ್ನೂ, ಅವಳೂ ನಕ್ಕಿದ್ದನ್ನೂ ಎಷ್ಟೋ ಸಲ ನೋಡಿದ್ದ: ನೋಡಿ ನಡುಗಿದ್ದ; ಕಿವಿ ಬೆಂಕಿಯಾದಂತೆ, ಹೃದಯ ಸಿಡಿದಂತೆ, ತಲೆತಿರುಗಿದಂತೆ ಅನಿಸಿದರೂ ಕಣ್ಣು ಪಿಳಕಿಸದೆ ನೋಡಿದ್ದ. ಒಂದು ಸಲ ಅವ್ವ ಬಂದು ಅವನ ಕಿವಿ ಎಳೆದು ಒಳಗೆ ಕರೆದೊಯ್ದು, ‘ಹಾಂಗೇನು ತುಡುಗನಂತೆ ನೋಡ್ತಾ ಇದ್ದ್ಯೋ, ಚೆನ್ನ್ಯಾ?’ ಎಂದು ಬೆದರಿಸಿದ್ದಳು. ಅವನ ಬಾಯಿಂದ ಮಾತೇ ಬಂದಿರಲಿಲ್ಲ. ತನಗೆ ಗೊತ್ತಾದೊಡನೆ ಅವ್ವನಿಗೆ ಹೇಳಿಬಿಟ್ಟಿದ್ದರೆ ಬಹುಶಃ ಇಷ್ಟು ದೀರ್ಘಕ್ಕೆ ಹೋಗುತ್ತಿರಲಿಲ್ಲವೇನೋ…

“ಡಾಕ್ಟರನಿಗೂ ತಿಳಿಯದಂತಾಗಿದೆ. ನಾಳೆ ಹೇಳ್ತಾನಂತೆ ಎಂಥ ಜ್ವರ ಅನ್ನೋದು…” ಕಾಮತ ಮಾಮಾನ ಧ್ವನಿ ತೀರಾ ಸಣ್ಣದಾಗಿದೆ…

ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಚೆನ್ನೂನ ಹೃದಯ ಯಾಕೋ ಉಕ್ಕಿ ಬಂತು. ಕಾಮತಮಾಮಾ ಅಂದರೆ ಚೆನ್ನೂನ ಮಿತ್ರರಿದ್ದಂತೆ. ದೇಶಪಾಂಡೆಯವರ ಮನೆಯಲ್ಲಿ ಕಾರಕೂನಕೀ ಕೆಲಸ ಮಾಡಿ ದಿನಾಲು ಮನೆಗೆ ಬಂದನಂತರ ಚೆನ್ನೂನೊಂದಿಗೆ ಚಿನ್ನಾಟ ಇದ್ದದ್ದೇ. ‘ಏ ಚಿನ್ನಾ, ಹೇಳು- ಸಿ.ಎ.ಎಲ್.ಎಲ್.ಇ.ಡಿ. ಕ್ಯಾಲೆಡ್ಡೋ ಸ್ಕಾಲೆಡ್ಡೋ? ಎಫ್.ಏ.ಟಿ. ಫ್ಯಾಟ್, ಎಚ್.ಇ.ಆರ್. ಹರ್ ಹೌದೊ? ಎಫ್.ಎ.ಟಿ., ಎಚ್.ಇ.ಆರ್-ಇದರ ಉಚ್ಚಾರ ಹೇಳು. ಕಾಮತ ಮಾಮಾನಿಂದ ಕಲಿತ ಇಂಥ ಎಷ್ಟೋ ಮಜವಾದ ಪುಟ್ಟಕತೆ, ಒಗಟ, ಲೆಕ್ಕಗಳನ್ನು ಸಾಲೆಯಲ್ಲಿ ಹುಡುಗರಿಗೆ ಹೇಳಿ ಶಾಣ್ಯಾ ಅನಿಸಿಕೊಂಡಿದ್ದ… ಬಹುಶಃ ಕಾಮತ ಮಾಮಾನಿಗೆ ಎಂದಿನಂತೆ ರೊಕ್ಕದ ಅಡಚಣೆಯಾಗಿರಬೇಕು, ಯಾಕಂದರೆ ಹಾಗೆ ಅಡಚಣೆಯಾದಾಗಲೆಲ್ಲ ಚೆನ್ನೂನ ಅಪ್ಪನೇ ಅವನಿಗೆ ಆಧಾರ: ‘ಏ ಸಾವಕಾರs, ಒಂದು ಹತ್ತು ರೂಪಾಯಿ ಕೊಡು, ಬಹಳ ಹರಕತ್ತಾಗೇದ’ ಎಂದು ಎಷ್ಟೋ ಸಲ ಅವನು ಅಪ್ಪನ ಕಡೆ ಕೇಳಿದ್ದುಂಟು. ಅಪ್ಪನೂ ನಗ್ತಾ, ‘ಸುರುವಾತೇನು ಮತ್ತೆ ನಿನ್ನ ಗಾನಾ-ಐದು ಕೊಡು, ಹತ್ತು ಕೊಡು, ಐವತ್ತು ಕೊಡು ಅಂತ. ದಿನಾ ದಿನಾ ಕೊಡಲಿಕ್ಕೆ ನಾಯೇನ ರೊಕ್ಕದ ಗಿಡಾ ಹಚ್ಚೇನೇನು ಮನ್ಯಾಗ? ಅದೇನಿಲ್ಲ, ಹಿಂದಿನದೆಲ್ಲ ಕೊಟ್ಟ ನಂತರ ನಿನಗ ಮತ್ತೆ ಕೊಡೋದು’ ಎಂದು ಹೇಳಿದರೂ ಹತ್ತು ರೂಪಾಯಿ ಕೊಡೋದೇನೂ ಬಿಡತಿದ್ದಿಲ್ಲ. ಅಪ್ಪನ ಈ ನಡತೆ ಚೆನ್ನೂನಿಗೆ ಎಂದೂ ತಿಳಿದಿಲ್ಲ: ಬಯ್ಯುವದು, ಕೊಡೋದಿಲ್ಲ ಅನ್ನುವದು, ಕೊನೆಗೆ ಕೊಡುವದು…

ಹೊರಗೆ, ಚೆನ್ನೂ ಎಣಿಸಿದಂತೆ ಕಾಮತ ಮಾಮಾ ಅಪ್ಪನಿಗೆ ರೊಕ್ಕ ಕೇಳಲಿಲ್ಲ. ಏನೋ ಒಂದು ಬಗೆಯ ವಿಚಿತ್ರ ಮೂಕತನ ಕಾಮತ ಮಾಮಾನನ್ನು ಆವರಿಸಿತ್ತು. ಮುಂದೆ ಮಾತು ಮುಂದುವರಿಸಿದವನು ಅಪ್ಪ:

“ಕುಂದಾ ಹೀಂಗ ಒಮ್ಮಿಂದೊಮ್ಮೆಲೆ ಸೀಕಾದ್ದರಿಂದ ಮನ್ಯಾಗ ಬಹಳ ತ್ರಾಸಾಗಿರಬೇಕು. ಬಾಳಾಬಾಯಿನ್ನ ಕರೆಸೀರೇನು?”

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

“ಹೂಂ”

ಚೆನ್ನೂನಿಗೆ ಕಾಮತಮಾಮಾನ ತಂಗಿ ಬಾಳಾಬಾಯಿಯೆಂದರೆ ಬಹಳ ಪ್ರೀತಿ. ನಾಳೆ ಅವಳ ಹತ್ತಿರ ಹೋಗಿ ಹರಟೆ ಹೊಡೆಯಬೇಕು, ಕತೆ ಹೇಳಿಸಿಕೊಳ್ಳಬೇಕು. ಅವಳ ಮಗ ಜಗೂ ಬಂದಿದ್ದರೆ ಅವನೊಡನೆ ತುಂಬ ಆಡಬೇಕು; ಕುಂದಾತಾಯಿ ನೆಟ್ಟಗಾದರೆ ಅವಳೊಡನೆ… ಚೆನ್ನೂನಿಗೆ ಅವ್ವನ ಮಾತು ನೆನಪಾದುವು: ‘ಕಾಮತ ಏನು ಮನ್ಯಾಗ ಮಾಡಾವರು ಯಾರೂ ಇಲ್ಲಂತ, ಮಗಳ ಹೀಂಗ ಮನ್ಯಾಗ ಇಟಗೊಂಡು ಕೂತಾನ… ಲಗ್ನಾ ಇಲ್ಲದ ಖಾಲೀ ಕೂತಿರ್‍ತದ, ಗಂಡಸಂದರ ಆ ಅಂತ ಹಸದ ನೋಡ್ತದ ಸುಟ್ಟ ಮಾರೀ ಹರೇಮಿ…’ ಕುಂದಾತಾಯಿ ಅಪ್ಪನ ಮೇಲೆ ಏನೋ ಭಯಂಕರ ಜಾದೂ ಮಾಡಿದ್ದಾಳೆ ಎಂಬ ಕಲ್ಪನೆ ಚೆನ್ನೂನಿಗಿತ್ತು. ಒಂದು ಸಲ ಮಧ್ಯಾಹ್ನ-ಆ ದಿನ ಚೆನ್ನೂನಿಗೆ ರಜೆ; ಅಪ್ಪ ಗಿರಣಿಯಿಂದ ಬಂದು ಊಟ ಮಾಡಿ ಹೊರಗೆ ಕುಳಿತಿದ್ದ; ಚೆನ್ನೂ ಕದದ ಮರೆಯಿಂದ ನೋಡುತ್ತಿದ್ದ ಎಂದಿನಂತೆ ನಗೆಗಳ ವಿನಿಮಯವಾದ ನಂತರ ಅಪ್ಪ ಮಂತ್ರಮುಗ್ಧನಾದಂತೆ ನೇರವಾಗಿ ಕಾಮತರ ಮನೆಗೆ ಹೋಗಿದ್ದ. ಚೆನ್ನೂನಿಗೆ ತುಂಬ ಹೆದರಿಕೆಯಾಗಿತ್ತು- ಅಪ್ಪ ಕಾಮತಮಾಮಾನ ಕೈಯಲ್ಲಿ ಸಿಕ್ಕುಬಿದ್ದರೆ, ಓಣಿಯಲ್ಲಿಯ ಜನ ಬಂದು ಅಪ್ಪನನ್ನು ಹಿಡಿದು ಹೊಡೆದರೆ, ಜೇಲಿಗೆ ಹಾಕಿದರೆ- ಎಂದು. ಒಂದು ತಾಸಾದರೂ ಅಪ್ಪ ಒಳಗೇ! ಮುಂದೆ ಕಾಮತಮಾಮಾ ಮನೆಯಲ್ಲಿ ಕಾಲಿಟ್ಟುದನ್ನು ನೋಡಿ ಚೆನ್ನೂ ಗದಗದ ನಡುಗಿದ್ದ. ಆದರೆ ಆ ಮನೆಯಿಂದ ಬಂದ ನಗೆಯ ತೆರೆಗಳು ಚೆನ್ನೂನ ಮನಸ್ಸಿಗೆ ನೆಮ್ಮದಿ ತಂದಿದ್ದರೂ ವಿಚಿತ್ರವೆನಿಸಿದ್ದವು. ಸ್ವಲ್ಪ ಹೊತ್ತಿನ ಮೇಲೆ ಅಪ್ಪ ಕೈಯಲ್ಲಿ ಮರಾಠಿ ಪತ್ರಿಕೆಯೊಂದನ್ನು- ಅದನ್ನು ತರಲೇ ಹೋದವರಂತೆ- ಹಿಡಿದುಕೊಂಡು ಬಂದು ಚೆನ್ನೂನಿಗೆ ಆರ್ಡರ್ ಕೊಟ್ಟಿದ್ದ: ‘ಚೆನ್ನೂ, ಲಗೂ ಒಳಗೆ ಹೋಗಿ ಚಹಾ ಮಾಡಿಸಿಕೊಂಡು ಬಾ…’ ಇಂದು ಅವ್ವ ಹೇಳಿದ್ದೇ ಖರೇ; ಕುಂದಾತಾಯಿ ರಂಡೆ! ಹೌದು ಆ ರಂಡೀ ಕೂಡ ಇನ್ನು ಯಾವ ಆಟವನ್ನೂ ಆಡಬಾರದು, ಹಸಿದ ಆ ಹರೇಮಿಯ ಕೂಡ ಮಾತಾಡಲೂ ಬಾರದು ಎಂದು ನಿರ್ಧರಿಸಿದ.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

“ನಡೀ, ಕಾಮತ, ನಾ ಬರ್ತಿನಿ ನೋಡಲಿಕ್ಕೆ-” ಅಪ್ಪ ಗಡಿಬಿಡಿಯಿಂದ ಹೋದ.

ಚೆನ್ನೂನಿಗೆ ಅಪ್ಪನ ನಾಚಿಗೆಗೇಡಿತನದ ಬಗ್ಗೆ ತಿರಸ್ಕಾರ ಬಂತು. ಇಂದೇ ರಾತ್ರಿ ಅವ್ವ ಅಪ್ಪನಿಗೆ ಚೆನ್ನಾಗಿ ಬಯ್ದು ಹೇಳಿದರೂ ಮರಳಿ ಅಪ್ಪ ಏನೂ ಆಗದವರಂತೆ, ಏನು ಮಾಡಿದರೂ ನಾಯಿಯ ಬಾಲ ಡೊಂಕೆಂಬಂತೆ, ರಂಡಿ ಕುಂದಾಳನ್ನು ನೋಡಲು ಹೋದನಲ್ಲ! ಅಪ್ಪ ಸಣ್ಣವನಿದ್ದು ತಾನು ದೊಡ್ಡವನಿದ್ದಿದ್ದರೆ ಆತನನ್ನು ಚೆನ್ನಾಗಿ ಛಡಿಯಿಂದ ಥಳಿಸುತ್ತಿದ್ದೆ ಎಂದು ಅನಿಸಿಹೋಯಿತು ಚೆನ್ನೂನಿಗೆ. ಕೂಡಲೇ ಹೋಗಿ ಅವ್ವನಿಗೆ ಹೇಳಬೇಕು ಎಂದು ದುಡುದುಡು ಒಳಗೆ ಹೋಗಿ ಒದರಿದ, “ಅವ್ವಾ, ಅವ್ವಾ…”

”ಏನಪ್ಪಾ ಚೆನ್ನೂ?”

ಅವಳ ಮಾತಿನಲ್ಲಿಯ ಔದಾಸೀನ್ಯ ನೋಡಿ ಚೆನ್ನೂನ ಉತ್ಸಾಹ ಕರಗಿತು. ಅವನು ಸುಮ್ಮನಿದ್ದುದನ್ನು ನೋಡಿ ಅವ್ವ ಕೇಳಿದಳು, “ಯಾಕೋ, ಇಷ್ಟು ಲಗೂ ನಿದ್ದಿ ಬಂತೇನು?”

ಚೆನ್ನೂನ ನಾಲಿಗೆ ತಡವರಿಸಿತು. “ಅವ್ವಾ, ಕುಂದಾತಾಯಿಗೆ ಏನಾಗೇತಿ? ಡಾಕ್ಟರರು ಎರಡು ಇಂಜಕ್ಷನ್ ಕೊಟ್ಟಾರಂತ-ಎರಡು.”

“ಏನಾಗೇತೋ ಏನ ಮಣ್ಣೋ! ನಿನಗೂ ಇಲ್ಲದ ಉಪದ್ವ್ಯಾಪ ಬೇಕು, ಹೋಗು, ಅಭ್ಯಾಸ ಮಾಡಹೋಗು.”

“ಅವ್ವಾ, ನನಗ ತಿನಿಸು ಏನಾದರೂ…” ಚೆನ್ನೂ ಏನಾದರೂ ಕೇಳಬೇಕೆಂದು ಕೇಳಿದ.

“ಹೂಂ! ಅದರ ಸಲುವಾಗಿ ಬಂದೇನು? ನಂಗೊತ್ತು… ಈಗ ಅಭ್ಯಾಸ ಮಾಡಿ ಮಲಕ್ಕೋ. ನಾಳೆ ಏನಾದರೂ ಮಾಡಿಕೊಡ್ತೇನೆ-ಹಾಂ? ಇಂದು ನನ್ನ ತಲೀ ನೋಯಲಿಕ್ಕೆ ಹತ್ತೇದ… ಇಲ್ನೋಡು, ಚೆನ್ನೂ, ಅವರು ತಾಟು ಒಗದು ಊಟಾ ಅರ್ಧಾಕ್ಕೆ ಬಿಟ್ಟು ಹೋದರಂತ ಯಾರ ಮುಂದೂ ಹೇಳಬ್ಯಾಡಾ- ಹಾಂ?”

“ಹೂಂ,” ಅವ್ವ ಬಹಳ ದೊಡ್ಡ ಮನಸ್ಸಿನವಳು ಎಂದೆನಿಸಿತು ಚೆನ್ನೂನಿಗೆ. ಅವ್ವನ ಮೃದು ಸ್ವರದಲ್ಲಿ ಪ್ರೋತ್ಸಾಹನೆ ಸಿಕ್ಕಿತವನಿಗೆ- “ಅವ್ವಾ, ಯಾಕ ತಾಟ ಒಗದರು ಹಂಗ?” ಬೇಕಂತಲೇ ಕೇಳಿದ.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

”ನಿನಗ್ಯಾಕ ಬೇಕೋ ದೊಡ್ಡವರ ಪಂಚೇತಿ? ಸಿಟ್ಟು ಬಂತು ಅಂತ ಒಗೆದರು.”

ಅಪ್ಪನ ಬಗ್ಗೆ ತುಂಬಿದ ಅವ್ವನ ಸಿಟ್ಟು ಈಗ ಇಳಿದದ್ದನ್ನು ನೋಡಿ ಚೆನ್ನೂನಿಗೆ ಆಶ್ಚರ್ಯವಾಯಿತು. ಹಾಗಾದರೆ ಅವ್ವನಿಗೆ ತಾನು ಹೇಳಲಿಕ್ಕೆ ಬಂದದ್ದನ್ನು ಹೇಳಲಡ್ಡಿಯಿಲ್ಲ ಎಂದೆನಿಸಿತು.

“ಅವ್ವಾ, ಅಪ್ಪ ಕಾಮತರ ಮನೀಗೆ ಕುಂದಾತಾಯಿಯನ್ನು ನೋಡಲಿಕ್ಕೆ ಹೋದರು,” ಎಂದು ಉತ್ಸಾಹದಿಂದ ಹೇಳಿದ.

“ಮತ್ತೆ ಹೋದರ! ಮುಗೀತು. ನಾ ಇನ್ನ ಸುಡುಗಾಡಿಗೆ ಹೋಗೋದು ಒಂದು ದಾರಿ…”

“ಅವ್ವಾ!” ಚೆನ್ನೂ ಕೂಗಿದ.

“ಚೆನ್ನೂ, ಮಲಕ್ಕೊ ನಡಿ ಸುಮ್ಮ. ನಾ ಹಾಸಿಗಿ ಹಾಕಿ ಕೊಡ್ತೇನೆ ನಡಿ.”

ಸುಡಗಾಡು! ಚೆನ್ನೂ ಗದಗದ ನಡುಗಿದ. ಆ ರಂಡಿ ಕುಂದಾಳೇ ಸುಡುಗಾಡಿಗೆ ಹೋದರೆ ಚಲೋ! ಅದೇ ವಿಚಾರದಲ್ಲಿ ಚೆನ್ನೂ ಹಾಸಿಗೆಯಲ್ಲಿ ಉರುಳಿ ಚಾದರು ಹೊದ್ದುಕೊಂಡ. ಮೂಲೆಯಲ್ಲಿ ಹರವಿದ ಪುಸ್ತಕಗಳನ್ನು ತೆಗೆದಿಡದಿದ್ದರೆ ಅಪ್ಪ ಬಯ್ಯುವ-ಬಯ್ಯಲಿ ಬೇಕಾದರೆ, ಎಂದು ಮುಸುಕು ಹಾಕಿದ. ಅವ್ವ ಅಡಿಗೆ ಮನೆಯಲ್ಲಿಯ ಕೆಲಸ ಮುಗಿಸಿ ಬರುವ ತನಕ ದೇವರನ್ನು ಪ್ರಾರ್ಥಿಸಬೇಕು ಎಂದುಕೊಂಡ.

‘ದೇವಾ, ಅವಳನ್ನು ಸುಡುಗಾಡಿಗೆ ಕಳಿಸು, ನನ್ನ ತಾಯಿಯನ್ನು ರಕ್ಷಿಸು. ತಂದೆಯವರಿಗೆ ಬುದ್ದಿಯನ್ನು ದಯಪಾಲಿಸು. ನನಗೆ- ನನಗೆ ಮತ್ತೇನೂ ಬೇಡ…’

ಹಾಗೆ ಪ್ರಾರ್ಥಿಸಿದ್ದೇ ತಡ ಅವನಿಗೆ ಭಯಂಕರ ಭೀತಿಯುಂಟಾಯಿತು. ಥಪ್ಪನೆ ಅವಳು ಸತ್ತರೆ? ಛೇ, ಹಾಗಾಗಲಿಕ್ಕಿಲ್ಲ. ಬರೇ ಜ್ವರ ಬಂದರೆ ಯಾರಾದರೂ ಸಾಯುವರೆ? ಮೇಲಾಗಿ ಡಾಕ್ಟರರು ಎರಡು ಇಂಜಕ್ಷನ್ ಕೊಟ್ಟಿದ್ದಾರೆ. ಸರ್ವಥಾ ಶಕ್ಯವಿಲ್ಲ. ಹಾಗೆಲ್ಲ ದೇವರಿಗೆ ಪ್ರಾರ್ಥಿಸಿದೊಡನೆ ಜನ ಸಾಯುವಂತಿದ್ದರೆ, ಇಲ್ಲಿಯ ತನಕ ಎಷ್ಟೋ ಜನರು ಸಾಯಬೇಕಿತ್ತು; ಅವನ ವೈರಿ ಆ ಹಲಕಟ್ ಮ್ಹಾದ್ಯಾ ಸಾಯಬೇಕಿತ್ತು; ಶಹಾಣೆ ಮಾಸ್ತರ ಸಾಯಬೇಕಿತ್ತು; ಅವನ ಮೇಲೆ ಯಾವಾಗಲೂ ವರ್ಚಸ್ಸು ತೋರಿಸುವ ದೂರದ ಕಾಕಾ ಶಂಕರಣ್ಣ ಸಾಯಬೇಕಿತ್ತು… ಪಾಪ, ಕುಂದಾತಾಯಿ ಸಾಯದೆ, ಅವಳ ಲಗ್ನ ಬೇಗ ಆಗಿ ಊರು ಬಿಟ್ಟು ಹೋದರೆ- ಅದೂ ಅಡ್ಡಿಯಿಲ್ಲ. ಅಪ್ಪ ಉಳಿಯುವ, ಅವ್ವನಿಗೆ ಸಮಾಧಾನ. ಚೆನ್ನೂ ತನ್ನ ಪ್ರಾರ್ಥನೆ ಬದಲಿಸಿದ: ‘ದೇವಾ, ಅವಳನ್ನು ಕೊಲ್ಲಬೇಡ, ಪ್ಲೀಜ್, ಅವಳನ್ನು ನೆಟ್ಟಗೆ ಮಾಡಿ ಬೇಗ ಎಲ್ಲಿಯಾದರೂ ದೂರ-ಹಾಂ, ಮುಂಬಯಿಗೆ ಒಯ್ದು ಬಿಡು, ಒಯ್ದು ಲಗ್ನ ಮಾಡಿಬಿಡು…’

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ಅವ್ವ ಬಂದು ಬದಿಗೆ ಒರಗಿದಾಗ ಚೆನ್ನೂ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದ.

“ಅವ್ವಾ, ಕುಂದಾತಾಯಿಗೆ ಬಹಳ ಸೀರಿಯಸ್ಸೇನು?”

”ಇರಬೇಕು.”

“ಅಪ್ಪ ಬಂದಿಲ್ಲ ಇನ್ನೂ?”

“ಅವರಿಗೇನು ಗಂಡಸರು- ಬರಲಿ ಬೇಕಾದಾಗ.”

ಚೆನ್ನೂ ನಿದ್ದೆಯಿಂದ ಒಮ್ಮೆಲೆ ಎಚ್ಚೆತ್ತ. ಏನೇನೋ ಕನಸು: ಅಪ್ಪ ಕುಂದಾತಾಯಿಯನ್ನು ಲಗ್ನವಾದಂತೆ- ಮುಂಬಯಿಗೆ ಇಬ್ಬರೂ ಓಡಿಹೋದಂತೆ- ಅವ್ವ ಅಪ್ಪನ ಬತ್ತದ ಗಿರಣಿಯಲ್ಲಿ ಸಿಕ್ಕು- ಅದೆಲ್ಲ ಕನಸು ಎಂದು ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡ. ಕನಸು ಒಮ್ಮೊಮ್ಮೆ ಖರೆಯಾಗುವವಂತೆ! ಅಪ್ಪ ಪರಜಾತಿಯ ಆ ಕುಂದಾತಾಯಿಯ ಕೂಡ ಓಡಿಹೋದರೆ-ಚೆನ್ನೂನೇ ಅವ್ವನನ್ನು ರಕ್ಷಿಸಬೇಕು. ಅವನೇ ಬತ್ತದ ಗಿರಣಿಯ ಕೆಲಸ ನೋಡಿಕೊಳ್ಳಬೇಕು. ರಾಮೂ ಮೆಕ್ಯಾನಿಕ್ ಇದ್ದಾಗ, ಭೀಮನಂಥ ತನ್ನ ಎಲ್ಲಾ ಮಾತು ಕೇಳುವ ನೌಕರನಿದ್ದಾಗ ಅದು ಕಠಿಣವಾಗಲಾರದು. ಆಮೇಲೆ ಕುಂದಾತಾಯಿಯೆಂದರೆ ಅವನ ಮಲತಾಯಿ! ಮಲತಾಯಿಯಾಗಿ ಬಂದರೆ ಬರಲಿ ತಿರುಗಿ ಊರಿಗೆ- ಅವಳ ಜೀವ ತೆಗೆದುಕೊಳ್ಳದೆ ಆತ ಬಿಡಲಾರ…

“ಅವ್ವಾ!”

“ಏನೋ, ಚೆನ್ನೂ? ಕನಸು ಗಿನಸು ಬಿತ್ತೇನು?”

“ಹೌದು, ಗಿರಣ್ಯಾಗ ನೀ ಸಿಕ್ಹಾಂಗ-” ಮುಂದ ಹೇಳಲಿಕ್ಕಾಗದೆ ಚೆನ್ನೂನಿಗೆ ಅಳು ಬಂತು.

“ಹಾಂಗೆಲ್ಲಾ ವಿಚಾರ ಮಾಡಬಾರದು ಚೆನ್ನೂ… ಹೆದರಬೇಡಪ್ಪಾ- ಹೆದರಬೇಡ, ಕನಸಂದರ ಎಲ್ಲಾ ಸುಳ್ಳ-ಪಳ್ಳ-ಹಾಂ?” ಎಂದು ಅವ್ವ ಚೆನ್ನೂನನ್ನು ಚಪ್ಪಡಿಸಿದಳು.

ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಸ್ವಲ್ಪ ಹೊತ್ತಿನಲ್ಲಿಯೇ ಚೆನ್ನೂ ಬೆಚ್ಚಗೆ ನಿದ್ದೆ ಹೋದ.

ಮುಂಜಾನೆ ಎದ್ದಾಗ ಹಾಸಿಗೆಯಲ್ಲಿ ಚೆನ್ನೂ ಒಬ್ಬನೇ ಇದ್ದ. ಅಪ್ಪನ ಹಾಸಿಗೆ ಹಾಗೇ ಇತ್ತು: ಆತ ಅಲ್ಲಿ ಮಲಗಿದಂತೆ ಕಾಣಲಿಲ್ಲ, ಯಾಕಂದರೆ ಚಾದರು ಮಡಿಚಿಟ್ಟಿದ್ದು ಹಾಗೇ ಇತ್ತು, ತಲೆದಿಂಬಿನ ಮೇಲೆ ತಲೆಯಿಟ್ಟ ಚಿಹ್ನವೇ ಇದ್ದಿಲ್ಲ. ಗಡಬಡಿಸಿ ಎದ್ದು ಅಡಿಗೆ ಮನೆಗೆ ಹೋಗಿ ಅವ್ವನಿಗೆ ಕೇಳಿದ,

“ಅವ್ವಾ, ಅಪ್ಪ ರಾತ್ರಿ ಮನೆಗೆ ಬಂದೇ ಇಲ್ಲೇನು?” ಅಪ್ಪ ಮನೆ ಬಿಟ್ಟು ಹೋಗಿರಬಹುದೇ ಎಂಬ ಹೆದರಿಕೆ ಅವನಿಗೆ.

“ಹಾಂಗ ಬಂದಿದ್ದರು-ರಾತ್ರಿ ಎರಡು ಮೂರರ ಸುಮಾರಿಗೆ. ತಿರುಗಿ ಅಲ್ಲೇ ಹೋಗ್ಯಾರ. ಕುಂದಾಳಿಗೆ ಬಹಳ ಸೀರಿಯಸ್ಸಂತೆ, ಲಗೂನ ಮಾರೀ ತೊಳಕೊಂಡು ಬಾ- ಹಾಲು ಕೊಡ್ತೀನಿ. ನಾನೂ ಸ್ವಲ್ಪ ಹೋಗಿ ನೋಡಿ ಬರ್‍ತೀನಿ, ಪಾಪ!”

ಅವ್ವನ ಈ ಹೊಸ ಸಹಾನುಭೂತಿಯ ಗುಟ್ಟು ಚೆನ್ನೂನಿಗೆ ತಿಳಿಯಲಿಲ್ಲ. ಅಪ್ಪನ ಮೇಲಿನ ಸಿಟ್ಟು ಹೀಗೆ ಒಮ್ಮೆಂದೊಮ್ಮೆಲೆ ಕಡಿಮೆಯಾದದ್ದರ ಕಾರಣ ಗೊತ್ತಾಗಲಿಲ್ಲ. ಹೋಗಲಿ- ಬೇಗ ಹಾಲು ಕುಡಿದು ತಾನೂ ಹೋಗಿ ಜಗೂನ ಜೊತೆಗೆ ಆಡಬೇಕು ಎಂದು ಬೇಗ ಬೇಗನೆ ಹಲ್ಲು ಉಜ್ಜ ತೊಡಗಿದ.

ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು

ಅಷ್ಟರಲ್ಲಿ ಅವ್ವ ಕರೆದಳು. ”ಚೆನ್ನೂ, ಚೆನ್ನೂ, ಜಗೂ ಬಂದಾನ ನೋಡು.”

ಬೇಗ ಬೇಗ ಮುಖ ತೊಳೆದುಕೊಂಡು ಪಂಚೆಯಿಂದ ಒರೆಸಿಕೊಳ್ಳುತ್ತ ಒಳಗೆ ಓಡಿದ, ”ಜಗೂ, ಯಾವಾಗ ಬಂದ್ಯೋ?” ಎಂದು ಕೇಳಿದ.

ಅಡಿಗೆ ಮನೆ ಬಾಗಿಲ ಹತ್ತಿರ ನಿಂತ ಜಗೂ ಉತ್ತರ ಕೊಡಲಿಲ್ಲ. ಆತನ ಮುಖ ಬಾಡಿ ಬೆಂಡಾಗಿತ್ತು.

”ಯಾಕೋ ಜಗೂ…?”

“ನಿಮ್ಮ ಅಪ್ಪಾ ಅವರು ನನಗಿಲ್ಲಿ ಕಳಿಸಿದರು” ಎಂದ ಜಗೂ.

“ಕುಂದಾತಾಯಿಗೆ ಹ್ಯಾಂಗದ ಅಂತ?” ಅವ್ವ ಸ್ವಲ್ಪ ಕಾತರದಿಂದಲೇ ಕೇಳಿದಳು.

“ಏನೋ ಖೋಲ್ಯಾಗೆಲ್ಲ ಜನರೇ ಜನರು…” ಜಗೂನ ಧ್ವನಿ ಭೀತಿಯಿಂದ ಅಸ್ಪಷ್ಟವಾಗಿತ್ತು.

“ಚೆನ್ನೂ, ಹಿಡಿ ಹಾಲು, ಜಗೂ, ನೀನೂ ಸ್ವಲ್ಪ ತಕೋ. ನಾ ಈಗ ಹೋಗಿ ಬರ್‍ತೀನಿ.”

ಜಗೂ ತೆಗೆದುಕೊಳ್ಳಲಿಲ್ಲ. ಚೆನ್ನೂ ಹಾಲಿನ ಪೇಲೆ ಹಿಡಿದು ಅಡಿಗೆ ಮನೆಯ ಹೊಸ್ತಿಲ ಮೇಲೆ ಕುಳಿತ. ಅವ್ವ ಜಗೂನಿಗೆ ತೆಗೆದುಕೊಳ್ಳಪ್ಪಾ ಎಂದು ಮನವೊಲಿಸುವಷ್ಟರಲ್ಲಿ ಅಪ್ಪ ಒಳಗೆ ಬಂದ.

“ಏನಾಯ್ತು?” ಅವ್ವ ಕಣ್ಣರಳಿಸಿ ಹೆದರುತ್ತ ಕೇಳಿದಳು.

“ಹೋದಳು” ಅಪ್ಪನ ಮುಖದಲ್ಲಿ ಯಾವ ಭಾವವೂ ಇದ್ದಿಲ್ಲ.

“ಅಯ್ಯೋ ಪಾಪ!”

“ನಂಗೊತ್ತಿತ್ತು ಹೋಗ್ತಾಳಂತ, ಡಾಕ್ಟರರಿಗೆ ತಿಳೀಲಿಲ್ಲ ಎಂಥ ಜ್ವರ ಅಂತ. ಅವರ ಯಾವ ಇಂಜಕ್ಷನ್ನೂ ನಾಟಲಿಲ್ಲ. ಜ್ವರ ನೋಡಿದರೆ ನಾಲ್ಕೂವರೆ-ಐದು. ಆ ಮ್ಯಾಲೆ ಒಮ್ಮೆ ಇಳೀಲಿಕ್ಕೆ ಹತ್ತಿದ ಕೂಡಲೆ ಬಹಳ ವ್ಯಾಳ್ಯಾ ಹಿಡಿಲಿಲ್ಲ.”

“ಅಯ್ಯೋ ಪಾಪ! ಎಂಥಾ ಚಲೋ ಬಂಗಾರದಂಥ ಹುಡುಗಿ! ಇನ್ನು ಹರೆಯದ ದಿನ-ಸಂಸಾರದಾಗಿಂದ ಹೀಂಗ ಏಕಾಏಕೀ ಎದ್ದು ಹೋಗಬೇಕಂದರ! ದೈವ, ನಶೀಬ. ರಾತ್ರಿನ ಹೋಗಿ ನಾ ನೋಡಿ ಬಂದಿದ್ದರ-” ಅವ್ವನ ಮುಖದಲ್ಲಿ ಕನಿಕರ ತುಂಬಿ ಸೂಸುತ್ತಿತ್ತು; ಕಣ್ಣು ಹನಿಗೂಡಿ ನೀರು ಉದುರತೊಡಗಿದವು; ಸೆರಗು ಕಣ್ಣಿಗೆ ಹೋಯಿತು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

“ಹೂಂ, ಅಳ್ತೀಯಾಕ? ಆದದ್ದೆಲ್ಲಾ ಒಳ್ಳೆಯದಕ್ಕೆ ಆಗ್ತದ ಅನ್ನಬೇಕು. ಕಾಮತ ಏನು ಅವಳ ಲಗ್ನಾ ಮಾಡ್ತಿದ್ದಿಲ್ಲಾ ಏನಿಲ್ಲಾ. ಅದಕ್ಕಿಂತ ಇದೇ ನೆಟ್ಟಗಾತು ಒಂದು ರೀತಿಯಿಂದ, ಲಗೂನೆ ಪಾರಾದಳು.” ಅಪ್ಪನ ಮುಖ ನಿರ್ವಿಕಾರವಾಗಿತ್ತು. ತುಟಿಯ ತುದಿಗೆ ಯಾಕೋ ಏನೋ ಒಂದು ನಗೆಯ ಎಳೆ ತಲೆದೋರಿತು

ಚೆನ್ನೂನ ಕೈಯಲ್ಲಿಯ ಹಾಲಿನ ಬಟ್ಟಲು ಅವನಿಗೆ ಗೊತ್ತಿಲ್ಲದಂತೆಯೇ ಕೆಳಗೆ ಬಿದ್ದಿತ್ತು. ಅವನ ಕಣ್ಣಿನಲ್ಲಿ ಶೂನ್ಯ ತುಂಬಿತ್ತು.

“ಏ ಮಂಗ್ಯಾ, ಹಾಲು ಚೆಲ್ಲಿದಿಯಲ್ಲೋ…” ಅಪ್ಪನ ಅರ್ಧ ಸಿಟ್ಟು, ಅರ್ಧ ಕನಿಕರದ ಧ್ವನಿ ಚೆನ್ನೂನನ್ನು ಎಬ್ಬಿಸಿತು.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಚೆನ್ನೂ ಹೊಸ್ತಿಲ ಮೇಲಿಂದ ಮಂಕು ಹಿಡಿದವನಂತೆ ಎದ್ದ-ಎದ್ದವನೇ ಕಣ್ಣೀರು ಒರೆಸುತ್ತ ನಿಂತಿದ್ದ ಅವ್ವನನ್ನು ಗಟ್ಟಿಯಾಗಿ ಅಪ್ಪಿದ. ಅವನ ಬಾಯಿಂದ ಬಂದ ಅಸ್ಪಷ್ಟ ಶಬ್ದ ಇಷ್ಟೆ-

“ಅವ್ವಾ-ನಾನ ನಾನ-“

”ಬಿದ್ದರ ಬಿತ್ತೇಳು, ನಾ ಒಂದು ಮಿನೀಟಿನ್ಯಾಗ ಸ್ವಚ್ಛ ಮಾಡ್ತೀನಿ… ನೀವಿಬ್ಬರೂ ಇಲ್ಲೇ ಆಡ್ರಿ, ನಾ ಹೋಗಿ ಬರ್‍ತೀನಿ,” ಅವ್ವ ಚೆನ್ನೂನನ್ನು ಸರಿಸಿ ಹೊರಗೆ ಹೋದಳು. ಅಪ್ಪ ಅವಳನ್ನು ಹಿಂಬಾಲಿಸಿದ.

ಚೆನ್ನೂ, ಮಿಕಿ ಮಿಕಿ ನೋಡುವ ಜಗೂನನ್ನು ಅಲ್ಲಿಯೇ ಬಿಟ್ಟು, ಹಿತ್ತಲಕಡೆ ಓಡಿದ.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

Shantinatha Desai1

ಡಾ. ಶಾಂತಿನಾಥ ದೇಸಾಯಿ(1927-1998): ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಹವಗಿಯಲ್ಲಿ ಜನಿಸಿದ ಶಾಂತಿನಾಥ ದೇಸಾಯಿ ಎಂ.ಎ.(ಇಂಗ್ಲಿಷ್) ಪಿಎಚ್.ಡಿ ಪದವೀಧರರು. ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗವನ್ನು ತಂದವರು. ಅವರು ಪ್ರಯೋಗಶೀಲತೆಯನ್ನು ಕನ್ನಡದ ಸಣ್ಣಕತೆ, ಪ್ರಬಂಧಗಳು, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿಯೂ ತೋರಿಸಿ ಸುಮಾರು ನಾಲ್ಕು ದಶಕಗಳಷ್ಟು ಕಾಲ ಕನ್ನಡದ ಮೇಲ್ಪಂಕ್ತಿಯ ಬರಹಗಾರರೆಂದು ಮಾನ್ಯತೆ ಪಡೆದವರು. ಪ್ರಕಟಿತ ಕೃತಿಗಳು: ಮಂಜುಗಡ್ಡೆ, ಕ್ಷಿತಿಜ, ದಂಡೆ, ರಾಕ್ಷಸ(ಕಥಾ ಸಂಕಲನಗಳು); ಮುಕ್ತಿ, ವಿಕ್ಷೇಪ, ಸೃಷ್ಟಿ, ಬೀಜ, ಅಂತರಾಳ(ಕಾದಂಬರಿಗಳು). ಕೆಲವು ಗ್ರಂಥಗಳನ್ನು ಇಂಗ್ಲಿಷ್‌ನಲ್ಲಿಯೂ ಸಂಪಾದಿಸಿದ್ದಾರೆ. ಅನೇಕ ವರ್ಷ ಶಿವಾಜಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ, ಮತ್ತು ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೊನೆಯ ಕಾದಂಬರಿ ‘ಓಂಣಮೋ’ ಬರೆದು ಮುಗಿಸುವಷ್ಟರಲ್ಲಿ ಸಾಹಿತ್ಯಕ್ಕೂ ಅವರ ಜೀವನಕ್ಕೂ ಅಂಟಿದ ನಂಟಿನ ಅವರ ಕತೆ ತೆರೆದಿಟ್ಟು ತೆರಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತರಾಸು ಅವರ ಕತೆ | ಇನ್ನೊಂದು ಮುಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X