ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಅ೦ಚೆಯ ಪೇದೆ ‘ಮನಿಯಾರ್ಡರ್, ಸಾರ್’ ಎಂದು ಕೂಗಿದುದು ಅವನಿಗೆ ಕೇಳಿಸಲಿಲ್ಲ. ಅವನ ಮನಸ್ಸು ಬಿಚ್ಚಿದ ಕಾಗದದ ಸುರುಳಿಯಾಗಿತ್ತು. ಮನೆಯಲ್ಲಿ ಹೆಂಡತಿಯಿಲ್ಲ; ಹೃದಯದೊಳಗೆ ನಲಿವಿಲ್ಲ. ವ್ಯಾಜ್ಯದ ಕಟ್ಟುಗಳನ್ನು ಮೇಜಿನ ಮೇಲೆ ಹರಡಿಕೊಂಡೇ ಅವನು ಯೋಚನೆಯ ವ್ಯೂಹದೊಳಗೆ ಸಿಕ್ಕಿದ್ದ. ‘ಹಾಳು ಕೆಲಸ. ಇದಕ್ಕೆಂದಿಗೆ ಕೊನೆ?’ ಎಂದು ಬೇಸರದ ಒಳದನಿ ಕೂಗಿ ಕೇಳುತ್ತಿತ್ತು. ‘ವ್ಯಾಜ್ಯ, ವ್ಯಾಜ್ಯ, ವ್ಯಾಜ್ಯ…’ ಈ ವ್ಯಾಜ್ಯಗಳಿಗೆ ಮುಕ್ತಾಯವೇ ಇಲ್ಲವೆ? ಬೆಳಗಾಯಿತೆಂದರೆ ಕೋರ್ಟು, ಕಚೇರಿ ಈ ವ್ಯವಹಾರಗಳಲ್ಲೇ ಜೋಕಾಲಿಯಾಡುವುದೆಂದರೆ ಬದುಕಿಗೆ ಯಾವ ಸೊಗಸು? ಎಂದು ಆಂತರ್ಯ ತರ್ಕದ ತುರಿಮಣೆಯ ಮೇಲೆ ಗಾಸಿಗೊಂಡಿತ್ತು.
ಮನಿಯಾರ್ಡರ್, ಸಾರ್-
ನಾಲ್ಕು ಮೊಳ ಭೂಮಿ… ನಾಲ್ವೇ ನಾಲ್ಕು ಮೊಳ ಭೂಮಿಗಾಗಿ ಎಂಥೆಂಥ ಕಲಹಗಳು, ಎಂಥೆಂಥ ಅಕೃತ್ಯಗಳು ನಡೆಯುತ್ತವೆ! ಮಾನವನ ಸುಗುಣಗಳು ಕರಗಿಹೋಗಿ ಸ್ವಾರ್ಥದ ಹುಚ್ಚುಕಳ್ಳಿ ತನಗೆ ತಾನಾಗಿ ಬೆಳೆಯುತ್ತದೆ… ಸ್ವಾರ್ಥ! ಭೂಮಿಯ ಹಂಬಲ!!… ನ್ಯಾಯಾಲಯಕ್ಕೆ ಬರುವ ವ್ಯಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆ ಭೂಮಿಗೇ ಸಂಬಂಧಪಟ್ಟವು… ಭೂಮಿ-ಭೂಮಿ-ಭೂಮಿ… ಎಂಥ ಹುಚ್ಚು?
‘ಮನಿಯಾರ್ಡರ್, ಸಾರ್-‘
ಈಗಲೀಗ ಪೇದೆಯ ಸ್ವರ ಸ್ಪಷ್ಟವಾಗಿ ಕೇಳಬಂದಿತು. ಕುಳಿತಲ್ಲಿಯೇ ಬಾಗಿದ ಬೆನ್ನು ನೇರವಾಯಿತು. ಮನಿಯಾರ್ಡರ್!… ಎಲ್ಲಿಂದ ಬಂದಿದೆ ಈ ಮನಿಯಾರ್ಡರ್?
ಎದ್ದು ಹೋಗಿ ಬಾಗಿಲನ್ನು ತೆರೆದ. ಮುಖವನ್ನು ಅಂಟವಾಳದ ಕಾಯಿಯ ಹಾಗೆ ಸೊಟ್ಟಗೆ ಮಾಡಿಕೊಂಡು ಅಂಚೆಪೇದೆ ಮನಿಯಾರ್ಡರ್ ಫಾರ್ಮನ್ನು ಮುಂದೆ ಹಿಡಿಯುತ್ತ “ಅಮ್ಮಾವರು ಇದ್ದಾರೆಯೇ, ಸಾರ್?” ಎಂದ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಸೋಜಿಗದ ತೆರೆಯ ಮೇಲೆ ನಡೆದಂತಾಯಿತು. ನನ್ನ ಹೆಂಡತಿಗೆ ಮನಿಯಾರ್ಡರ್- ಅವಳಿಗೆಲ್ಲಿಂದ ಬಂದಿದೆ?
”ಇಲ್ಲವೇ, ಸಾರ್”
”ಇಲ್ಲ ಅವರು ತೌರಿಗೆ ಹೋಗಿದಾರೆ.”
“ಯಾವಾಗ ಬರ್‍ತಾರೆ, ಸಾರ್?”
“ನಾಳೆ ಬರ್ತೀನಿ ಅಂತ ಪತ್ರ ಬರೆದಿದಾರಪ್ಪ.”
“ಬರುವುದು ಖಂಡಿತವೇ, ಸಾರ್?”
”ಬಹುಶಃ ತಪ್ಪಲಾರರು.”
“ಹಾಗಿದ್ದರೆ ಇದನ್ನು ನಾಡಿದ್ದು ತರ್‍ತೇನೆ, ಸಾರ್.”
”ಆಗಲಿ” ಎಂದವನು, ಪೇದೆ ನಾಲ್ಕು ಹೆಜ್ಜೆ ಹೋಗುವುದರೊಳಗೆ, ಏನೋ ಯೋಚಿಸಿಕೊಂಡು, ಚಪ್ಪಾಳೆ ತಟ್ಟಿ, “ಪೋಸ್ಟ್‌ಮನ್-” ಎಂದು ಕರೆದ. ಪೇದೆ ಮುಖವನ್ನು ಮತ್ತೂ ಕಸಿವಿಸಿ ಮಾಡಿಕೊಂಡೇ ಬಂದ. “ಎಲ್ಲಯ್ಯಾ- ಆ ಮನಿಯಾರ್ಡರ್ ಫಾರಮ್ಮನ್ನ ಇಲ್ಲಿ ಕೊಡು. ಅದು ಎಲ್ಲಿಂದ ಬಂದಿದೆ ಅಂತ ಓದಿ ನೋಡಿಕೊಳ್ತೇನೆ.” ಪೇದೆ ಫಾರಂನ್ನು ಬೇಸರದಿಂದಲೇ ತೆಗೆದುಕೊಟ್ಟ. ಸೂಕ್ಷ್ಮವಾಗಿ ಫಾರ್ಮಿನ ಅಕ್ಷರಗಳ ಮೇಲೆ ಅವನ ದೃಷ್ಟಿ ಓಡಾಡಿತು. ಒಡನೆಯೇ ಅವನಿಗೆ ವಿಚಿತ್ರವೆನಿಸಿತು. ತನ್ನ ಹೆಂಡತಿಗೆ ಮನಿಯಾರ್ಡರ್ ಬಂದಿದೆ, ಎಂದು ಮೊದಲೇ ಅವನಿಗೆ ಆಶ್ಚರ್ಯವಾಗಿತ್ತು. ಆ ಮನಿಯಾರ್ಡರ್ ಎಲ್ಲಿಂದ, ಏತಕ್ಕಾಗಿ ಬಂದಿದೆ ಎಂದು ತಿಳಿದ ಮೇಲಂತೂ ಅವನು ಮೂಕನಾದ. ಸೋಜಿಗದ ಅಲೆ ಅವನನ್ನು ತನ್ನ ಮೇಲೆ ನಿಲ್ಲಿಸಿ, ಎತ್ತರ, ಎತ್ತರ ಎತ್ತಿಕೊಂಡು ಹೋಗಿ ಶಿಖರಾಗ್ರಕ್ಕೇ ಎಸೆದಂತಾಯಿತು-
ಹೆಂಡತಿಗೆ ಮನಿಯಾರ್ಡರ್ ಬಂದಿದೆ. ಇನ್ನೂರು ರೂಪಾಯಿಗಳಷ್ಟು ಭಾರಿ ಮೊಬಲಗು, ಅದೂ ಅವಳು ಬರೆದ ಒಂದು ಕಥೆಗಾಗಿ!!
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಪೇದೆ ಹೊರಟು ಹೋಗಿ ಎಷ್ಟೋ ವೇಳೆ ಕಳೆದಮೇಲೂ ಆತ ಹಾಗೆಯೇ ಸ್ತಂಭೀಭೂತನಾಗಿ ನಿಂತಿದ್ದ… ಒಂದು ಕಥೆಗೆ ಇನ್ನೂರು ರೂಪಾಯಿ… ಅದೂ ಕನ್ನಡ ಭಾಷೆಯಲ್ಲಿ. ತಾನು ಕೋರ್ಟಿನಲ್ಲಿ ಐದು ಕೇಸುಗಳನ್ನು ನಡೆಸಿದರೂ ಅಷ್ಟು ಹಣ ಗಳಿಕೆಯಾಗದು… ಕಾಲ ಸಹಜವಾಗಿಯೂ ಅತಿ ತೀವ್ರಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ತಾಯಿಯಿಲ್ಲದ ತಬ್ಬಲಿ, ಅದನ್ನು ಕೇಳುವವರೇ ಇಲ್ಲ. ಒಂದು ಸಾವಿರ ಪ್ರತಿಗಳು ಖರ್ಜಾಗಬೇಕಾದರೆ ಏಳೆಂಟು ವರ್ಷ. ಆದರೆ ಇಂದು? ನಾಲೈದು ಸಾವಿರ ಪ್ರತಿಗಳನ್ನು ಅಚ್ಚು ಹಾಕುವ ಸಾಹಸವನ್ನು ಕನ್ನಡ ಪ್ರಕಟನಕಾರರು ಮಾಡುತ್ತಿದಾರಂತೆ. ಅಷ್ಟು ಪ್ರತಿಗಳೂ ಹೆಚ್ಚೆಂದರೆ ಎರಡು ವರ್ಷಗಳಲ್ಲಿ ಪೂರ್ತಿಯಾಗಿ ಮಾರಾಟವಾಗುತ್ತವಂತೆ… ಹಿಂದೆಯೂ ಕಥಾಸ್ಪರ್ಧೆಗಳು ನಡೆಯುತ್ತಿದ್ದವು. ಅವುಗಳ ಪ್ರಥಮ ಬಹುಮಾನ ಉಪಚಾರದ ಬೆನ್ನು ತಟ್ಟುವ ಮಾತು. ಆದರೆ ಈಗ ನಡೆಯುವ ಕಥಾಸ್ಪರ್ಧೆಗಳು ನೂರಾರು ರೂಪಾಯಿಗಳ ಬಹುಮಾನವನ್ನು ಕೊಡುವ ಯೋಗ್ಯತೆ ಪಡೆದಿವೆ.
ಯಾರೋ ಕಕ್ಷಿಗಾರರು ಬಂದರು. ಅವರುಗಳ ಅಹವಾಲು ಕೇಳಿ ತಿಳಿದುಕೊಂಡು, ಅವರಿಗೆ ಆಡಬೇಕಾದ ಮಾತು ಆಡಿ, ಅವರನ್ನು ಕಳಿಸಿಕೊಟ್ಟು, ಬಾಕಿಯಾಗಿದ್ದ ಇನ್ನೂ ಕೆಲವು ರೆಕಾರ್ಡುಗಳನ್ನು ಪರಿಶೀಲಿಸಿ, ಊಟಕ್ಕೆದ್ದ. ಹೋಟೆಲಿನ ಊಟ ಏಕೋ ರುಚಿಸಲಿಲ್ಲ. ಪ್ರಾಯಶಃ ಮಾರನೆಯ ದಿನವೇ ಬರಲಿದ್ದ ನಲ್ಲೆಯ ಆಗಮನ ಇದಕ್ಕೆ ಕಾರಣವಿರಬಹುದು. ಅಂತೂ ಹೇಗೋ ಊಟದ ಶಾಸ್ತ್ರ ಮುಗಿಸಿ ಕೋಣೆಗೆ ನಡೆದ. ಆ ದಿನ ಕೋರ್ಟಿಗೆ ರಜವಿದ್ದುದರಿಂದ ವಿರಾಮ, ಮುಗಿಯದ ರಸ್ತೆಯಾಗಿತ್ತು. ಹೋಗಿ ಮಂಚದ ಮೇಲೆ ಉರುಳಿಕೊಂಡ. ಮತ್ತೊಮ್ಮೆ ಕೆಲಸವಿಲ್ಲದ ಮನಸ್ಸು ಆಲೋಚನೆಯ ಸರೋವರದಲ್ಲಿ ಈಜತೊಡಗಿತು… ತನ್ನ ಹೆಂಡತಿಗೆ ಬಹುಮಾನ! ಕಥಾಸ್ಪರ್ಧೆಯಲ್ಲಿ ಅವಳು ಬರೆದ ಒಂದು ಕಥೆಗೆ ಪ್ರಥಮ ಸ್ಥಾನ!!… ಅವನ ಹೃದಯ ಮುದಗೊಂಡು ಅರಳಿದ ಹೂವಾಯಿತು. ಚಿತ್ತ ನೆನಪಿನ ಕುದುರೆಯೇರಿ ಹೊರಟಿತು… ಹಿಂದೆ ವಿವಾಹದ ತರುಣದಲ್ಲಿ, ಅವರಿಬ್ಬರ ನಡುವೆಯೂ ನಡೆದ ಒಂದು ಸಂಗತಿಯ ಸ್ಮೃತಿ ಹಠಾತ್ತನೆ ಜಾಗ್ರತವಾಯಿತು-
ಒಂದು ಮಧ್ಯಾಹ್ನ- ಹೀಗೇ ಕೋರ್ಟಿಗೆ ರಜವಿದ್ದ ಒಂದು ದಿನ ಮಧ್ಯಾಹ್ನ. ಭೋಜನ ಮುಗಿಸಿ ತಾನು ನಿದ್ದೆಹೋಗಿದ್ದ. ಮಗ್ಗಲು ಸೇರಿದ್ದ ತನ್ನಾಕೆಯೂ ತನ್ನಂತೆ ನಿದ್ದೆ ಮಾಡುವಳೆಂದು ಯೋಚಿಸಿದ್ದ. ಆದರೆ ನಿದ್ದೆಯ ಆಲಿಂಗನದಿಂದ ಮುಕ್ತನಾಗಿ ಎದ್ದಾಗ ಮಡದಿ ಪಕ್ಕದಲ್ಲಿಲ್ಲದುದನ್ನು ಕಂಡು ಚಕಿತನಾದ. ನಿಶ್ಯಬ್ದವಾಗಿ ಎದ್ದು ಮನೆಯನ್ನೆಲ್ಲಾ ಅರಸಿದ. ಅವಳು ತನ್ನ ಕೋಣೆಯಲ್ಲಿ ಏನನ್ನೋ ಬರೆಯುವುದರಲ್ಲಿ ತಲ್ಲೀನಳಾಗಿದ್ದಳು. ಅವನ ವಿಸ್ಮಯಕ್ಕೆ ಉಪ್ಪರಿಗೆ ಬಂದಂತಾಯಿತು. ನಿದ್ದೆ ಮಾಡದೆ ಅವಳು ಏನನ್ನು ಬರೆಯುತ್ತಿರಬಹುದು?… ತಂದೆಗೋ, ಅಣ್ಣನಿಗೋ ಪತ್ರ ಬರೆಯುತ್ತಿರಬಹುದೇ?
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಅವನು ಕೆಮ್ಮಿದ ಸದ್ದು ಕೇಳಿ ಅವಳು ಹೊರಳಿ ನೋಡಿದಳು. ಭಾವಸಮಾಧಿಯಿಂದ ಎಚ್ಚೆತ್ತವರಂತೆ ಇತ್ತು ಅವಳ ನೋಟ. ಸಮೀಪಕ್ಕೆ ಹೋಗಿ, ”ನೀನೆಲ್ಲಿ ಹೊರಟು ಹೋದೆಯೋ ಎಂತ ದಿಗಿಲಾಗಿತ್ತು” ಎಂದು ನಕ್ಕ. ಅವಳ ಕಣ್ಣುಗಳೂ ನಗುತ್ತಿದ್ದವು.
“ನೀವೂ ಸರಿ. ನಾನೆಲ್ಲಿ ಹೋಗ್ತೇನೆ?”
”ಅದೇನು ಬರೀತಾ ಇದೀಯೆ? -ಪತ್ರವೋ?”
”ಹೌದು. ಪ್ರೇಮಪತ್ರ” ಎನ್ನುತ್ತ ತುಂಟತನವನ್ನು ಕುಡಿಗಣ್ಣಿನಿಂದ ಚೆಲ್ಲಿದಳು.
“ಪ್ರೇಮಪತ್ರ!… ಯಾರಿಗೆ ಎಂತ ಕೇಳಬಹುದೆ?” ಅವನೂ ಚೆಲ್ಲಾಟವಾಡುತ್ತಿದ್ದ. ಅದಕ್ಕುತ್ತರವಾಗಿ, ಬಲಹಸ್ತದ ಬೆರಳುಗಳನ್ನು ಮೋಹಕವಾಗಿ ತಿರುವುತ್ತ, ಸಾಭಿನಯಪೂರ್ವಕ ಅವಳು,
“ಯಾ-ರಿ-ಗೊ…” ಎಂದಳು. ಅದರೊಡನೆ ಕಂಡೂ ಕಾಣದಂತೆ ನಕ್ಕಾಗ ಅವಳ ಶರೀರ ಸುಳಿಗಾಳಿಗೆ ಬಳಕುವ ತಾವರೆಯ ದಂಟಿನಂತೆ ಅಲುಗಾಡಿತು.
ಅವಳ ಹುಡುಗಾಟಿಕೆ ಅವನಿಗೆ ಯಾವಾಗಲೂ ಪ್ರಿಯವಾದುದು. ಅದಕ್ಕೆ ಉಚಿತವಾದ ಪ್ರತಿಫಲಕೊಟ್ಟು, ಏನು ಬರೆದಿರಬಹುದೆಂದು ಮೇಜಿನ ಮೇಲೆ ಬಾಗಿ ನೋಡಿದ.
“ಏನಿದು?… ಪ್ರೇಮಪತ್ರ-ಸಣ್ಣ ಕಥೆ… ಓ ಕಥೆ ಬರೀತಾ ಇದೀಯೋ! ಯಾವಾಗಿನಿಂದ ಹಿಡೀತು ಈ ಗೀಳು ನಿನಗೆ?”
“ಯಾಕ್ರೀ ಗೀಳು ಅಂತೀರಾ? ಕಥೆ ಬರೆಯೋದು ಗೀಳೆ?”
”ಒಂದು ಅರ್ಥದಲ್ಲಿ ಅದು ಗೀಳೇ?”
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
“ಹೇಗೆ?”
“ಕಥೆ ಎಂದರೆ ಕಗ್ಗ, ಅದರಿಂದ ಯಾರಿಗೆ ಪ್ರಯೋಜನ?”
“ಪ್ರಯೋಜನವಾಗುವುದಾದರೆ ಒಂದು ಕೆಲಸ ಮಾಡಬೇಕು, ಇಲ್ಲದಿದ್ದರೆ ಕೂಡದು ಎಂತಲೋ ನಿಮ್ಮ ಅಭಿಪ್ರಾಯ?”
“ಹೌದು, ನಿಷ್ಪ್ರಯೋಜಕ ಕಾರ್ಯದಲ್ಲಿ ನನಗೆ ಆಸಕ್ತಿಯಿಲ್ಲ.”
“ಭೇಷ್, ಭೇಷ್. ವಕೀಲಿವೃತ್ತಿಗೆ ಯುಕ್ತವಾದ ರೀತೀಲಿ ಮಾತು ಆಡ್ತಾ ಇದ್ದೀರ, ಪರವಾಗಿಲ್ಲ.”
“ನೋಡಿದೆಯಾ. ನನ್ನ ಮಾತನ್ನ ನೀನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಕಥೆಗೂ ಜೀವನಕ್ಕೂ ನಿಕಟ ಸಂಬಂಧ ಬೇಡವೆ. ನೀನೇ ಹೇಳು. ವಿಪುಲವಾಗಿ ಈಗ ಪ್ರಕಟವಾಗ್ತಾ ಇರುವ ಕಥೆಗಳು ಕನ್ನಡ ಜನಪದದ ಬದುಕಿನ ಕೊಂಚವನ್ನಾದರೂ ಮುಟ್ಟಿವೆಯೇ… ಅದಕ್ಕಾಗಿ ಅಷ್ಟು ಕಠೋರವಾಗಿ ನುಡಿದೆ. ಅಷ್ಟೆ… ನನ್ನ ರಾಣಿ ಕಥೆ ಬರೀತಾಳೆ ಅಂದರೆ ನನಗೆ ಸಂತೋಷವಲ್ಲವೆ? ನಿನಗೆ ನಿಜ ಹೇಳಬೇಕಾದರೆ ನಾನು ಹೆಮ್ಮೆಯಿಂದ ಹಿಗ್ಗಿ ಹೋಗಿದೇನೆ.”
ಅವನ ರಾಣಿಯೂ ಆ ಮಾತು ಕೇಳಿ ಹಿಗ್ಗಿಹೋದಳು.
“ಆದರೆ ನನ್ನ ರಾಣಿಯೂ ಇತರರಂತೆ ಕಗ್ಗ ಬರೆದರೆ ನನಗೆ ಪ್ರಿಯವಾಗದು. ಬಾಳನ್ನು ಕಣ್ಣು ತೆರೆದು ನೋಡಿ, ವಿವೇಚಿಸಿ, ಅರ್ಥಮಾಡಿಕೊಂಡು ಬರೆಯಬೇಕು. ಆಗ-ಕಥೆ ಜೊಳ್ಳಾಗುವುದಿಲ್ಲ; ನಾದವಿಲ್ಲದ ಕೊಳಲಾಗುವುದಿಲ್ಲ- ಎಂತ ನನ್ನ ಭಾವನೆ.”
“ನವಾಬರ ಆಜ್ಞೆಯನ್ನು ಪಾಲಿಸಲು ಪ್ರಯತ್ನಿಸುತ್ತೇನೆ” ಎನ್ನುವಾಗ ಅವಳ ಮೇಲ್ದುಟಿಯ ಅಂಚು ಹುಸಿನಗೆಯಿಂದ ಬಿಲ್ಲಿನಂತೆ ಮೇಲೆದ್ದು ಬಾಗಿತು.
-ಈ ಸಂಗತಿ ನಡೆದಮೇಲೆ ವಕೀಲಿವೃತ್ತಿ ಅವನ ಕಾಲವನ್ನೂ ಬುದ್ಧಿಯನ್ನೂ ಪೂರ್ಣವಾಗಿ ಉಪಯೋಗಿಸಿಕೊಂಡಿತ್ತು. ಹೆಂಡತಿ ಬರೆಯುತ್ತಿದ್ದಾಳೆಯೇ? ಏನನ್ನು ಕುರಿತು ಬರೆಯುತ್ತಿದ್ದಾಳೆ? ಅವಳು ಬರೆಯುತ್ತಿರುವ ಕಥೆಗಳಲ್ಲಿ ಏನಾದರೂ ನಾವೀನ್ಯತೆ ಮತ್ತು ಸತ್ತ್ವಗಳು ಅಡಕವಾಗಿವೆಯೇ? ಎಂದು ವಿಚಾರ ಮಾಡಿ ಅರಿಯಲು ಅವನಿಗೆ ಬಿಡುವೇ ಸಿಗಲಿಲ್ಲ…
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ಯೋಚಿಸುತ್ತ ಯೋಚಿಸುತ್ತ, ಅವನು ಒಂದು ಮಗ್ಗಲಿನಿಂದ ಇನ್ನೊಂದು ಮಗ್ಗಲಿಗೆ ಹೊರಳಿದ. ಏನು ಮಾಡಿದರೂ ನಿದ್ದೆಬಾರದು. ಕೊನೆಗೆ ಬೇಸತ್ತು ಯಾವುದಾದರೊಂದು ಪುಸ್ತಕವನ್ನೋದುವುದೆಂದು ಎದ್ದು ಹೋಗಿ ಪುಸ್ತಕದ ಕಪಾಟಿಗೆ ಕೈಯಿಟ್ಟು ತನಗೆ ಪ್ರಿಯನಾದ ಜಿನ್ ಕ್ರಿಸ್‌ಟೋಫ್ ಕಾದಂಬರಿಯನ್ನು ತೆಗೆದುಕೊಂಡು ಹತ್ತಿರವೇ ಇದ್ದ ವಿರಾಮ ಕುರ್ಚಿಯ ಮೇಲೆ ಕುಳಿತ. ಆ ಹೊತ್ತಗೆಯ ಹಾಳೆಗಳನ್ನು ಮಗುಚಿದಾಗ ಒಳಗೆ ಮಡಿಸಿಟ್ಟ ಕೆಲವು ಹಾಳೆಗಳು ಕಂಡವು. ಕುತೂಹಲದಿಂದ ಆ ಹಾಳೆಗಳನ್ನು ಬಿಚ್ಚಿ ನೋಡಿದ. ಅವು ತನ್ನ ಹೆಂಡತಿ ಬರೆದ ಕಥೆಯ ಮನುಸ್ಕೃತಿಯಾಗಿತ್ತು. ಕಥೆಯ ಹೆಸರು: “ನಾಲ್ಕು ಮೊಳ ಭೂಮಿ.”
ಸಿಳ್ಳುಹಾಕಿ ಅವಳ ಕಥೆಯನ್ನು ಓದಲಾರಂಭಿಸಿದ-
ವೈಶಾಖದ ಸುಡುಬಿಸಿಲಲ್ಲಿ ಕಥಕ್ಕಳಿ. ಅದರ ರಿಂಗಣಗುಣಿತಕ್ಕೆ ಮರದ ಎಲೆಗಳು ಹಸುರು ಹಣ್ಣಾಗುತ್ತಿವೆ. ಆ ಹೊತ್ತಿನಲ್ಲಿ ಕಾಳಿಂಗಯ್ಯ ಶಿರಬಾಗಿ ಉಳುತ್ತಿದ್ದಾನೆ. ಪಕ್ಕದಲ್ಲೇ ಅವನನ್ನು ಅನುಸರಿಸಿ ಹೆಜ್ಜೆ ಹಾಕುವ ಅವನ ವಾಮನ ನೆರಳು. ಆ ಬೆಳಕಿನ ಝಳಕ್ಕೆ ಕಣ್ಣು ಕತ್ತಲಾಗುವುದು. ದೇಹಕ್ಕಂತೂ ಬೆವರಿನ ಕಾವೇರೀಸ್ನಾನ.
ನೇಗಿಲು ನಿಧಾನವಾಗಿ- ಆದರೆ ದೃಢವಾಗಿ- ಭೂಮಿಗೆ ‘ತೆರೆ’ಯ ಬೈತಲೆಗಳನ್ನು ತೆಗೆಯುತ್ತ ಸಾಗಿದೆ. ನೇಗಿಲ ನೊಗಕ್ಕೆ ಕಟ್ಟಿದ ಬಿಳಿ ಬಣ್ಣದ ಎತ್ತುಗಳು, ಅವನ ಕಪ್ಪು ದೇಹ, ಆ ದೇಹಕ್ಕೆ ಸುತ್ತಿದ ಬಿಳಿಯ ತುಂಡು ಪಂಚೆ, ‘ಪೇಟ.’ ಹಿಂಬದಿಗಿದ್ದ ಗುಡ್ಡದ ಸಾಲಿನ ಮಂಕು ನೀಲಿ-ಹಸುರಿನ ಹಿನ್ನೆಲೆಯಲ್ಲಿ ಆ ನೋಟವನ್ನು ದೂರದಿಂದ ನೋಡುವವರಿಗೆ, ಚಿತ್ರಪಟದಂತೆ-ಪಟದೊಳಗಿನ ಚಿತ್ರ ಚಲಿಸುವಂತೆ-ಅದು ತೋರುವುದು. ಆದರೆ ಆ ದೃಶ್ಯದ ಒಂದು ಅಂಶವಾಗಿದ್ದ ಕಾಳಿಂಗಯ್ಯನಿಗೆ ಮಾತ್ರ ಅದರ ಸೌಂದರ್ಯವನ್ನು ಸವಿಯುವುದು ಸಾಧ್ಯವಿರಲಿಲ್ಲ. ಅವನು ಕೇವಲ ಉಳುವ ಯಂತ್ರವಾಗಿದ್ದ. ಸೂರ್ಯನೇಳುವ ಮುನ್ನ ಎದ್ದು ‘ಆರು’ ಕಟ್ಟಿದನೆಂದರೆ ಹೊಲದಿಂದ ಅವನು ಮತ್ತೆ ಮನೆಗೆ ಮರಳುವುದು ಸಾಯಂಕಾಲವೇ!
ಕಾಳಿಂಗಯ್ಯ ಉಳುತ್ತಲೇ ಇದ್ದ. ಅವನ ಮನಸ್ಸು ಸಾಧಾರಣವಾಗಿ ನೀರಿಲ್ಲದ ಮಡಕೆಯಂತೆ ಬರಿದು. ಆದರೆ ಇಂದು ಮಾತ್ರ ಆ ಮಡಕೆಯಲ್ಲಿ ಚಿಂತೆಯ ಸಣ್ಣ ಕಲ್ಲೊಂದು ಬಿದ್ದಿದೆ. ಚಿಂತೆಗೆ ಕಾರಣ: ನಾಲ್ಕು ಮೊಳ ಭೂಮಿ.
ನಾಲ್ಕು ಮೊಳ ಭೂಮಿ!
ಕೇವಲ ನಾಲ್ಕೆ ನಾಲ್ಕು ಮೊಳ ಭೂಮಿ!!
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಕಾಳಿಂಗಯ್ಯನ ಮುದಿಗಣ್ಣುಗಳ ದೃಷ್ಟಿ ಯಾವುದೋ ಅವ್ಯಕ್ತ ಭೀತಿಯ ಆಗರವಾದಂತಿತ್ತು.
ತಾನು ಚಿಕ್ಕವನಾಗಿದ್ದಾಗ ಹರಿಕಥೆ ದಾಸನೊಬ್ಬ ನೆರೆಹಳ್ಳಿಯಲ್ಲಿ ಕಥೆ ಮಾಡುತ್ತಿದ್ದಾಗ ನುಡಿದಿದ್ದ: “ಭೂಮಿಗೆ ವಿಪರೀತವಾಗಿ ಆಸೆಪಡಬೇಡಿ. ಅದರ ದೆಸೆಯಿಂದಲೇ ಕುರುವಂಶ ನಿರ್ನಾಮವಾಯಿತು.”
ಅಹುದಲ್ಲವೆ? ಪಾಂಡವರ ಪರವಾಗಿ ಶ್ರೀಕೃಷ್ಣ ಪರಮಾತ್ಮ ಕೊನೆಗೆ ಐದೇ ಐದು ಗ್ರಾಮಗಳನ್ನು ಪಾಂಡವರಿಗೆ ಬಿಟ್ಟುಕೊಟ್ಟರೂ ರಾಜಿಮಾಡಿಸುವುದಾಗಿ ಆಶ್ವಾಸನೆ ಕೊಡಲಿಲ್ಲವೆ? ಆಗಲೂ ಅವಿವೇಕಿ ದುರ್ಯೋಧನ ಸೊಕ್ಕಿನಿಂದ ‘ಐದು ಗ್ರಾಮಗಳ ಮಾತು ಹಾಗಿರಲಿ, ಐದು ಹೆಜ್ಜೆ ಭೂಮಿಯನ್ನೂ ಸಹ ಪಾಂಡವರಿಗೆ ಕೊಡಲಾರೆ’ ಎಂದು ಹಟ ಹಿಡಿದು ಸರ್ವನಾಶ ಮಾಡಿಕೊಳ್ಳಲಿಲ್ಲವೆ?
ಹಾಗೆಯೇ ತನ್ನ ವರ್ತನೆಯೂ ಮುಂದಿನ ದಿನಗಳಲ್ಲಿ ಅವಿಚಾರದ ಜಾರುಬಂಡೆಯ ಮೇಲೆ ಹೆಜ್ಜೆಯಿಟ್ಟಿತ್ತು. ಹೌದು, ಕೇವಲ ನಾಲ್ಕು ಮೊಳ ಭೂಮಿಗಾಗಿ, ನಾಲ್ಕೆ ನಾಲ್ಕು ಮೊಳ ಭೂಮಿಗಾಗಿ.
ಕೌರವರ ಕಥೆಯೇನೋ ಎಂದೋ ಮುಗಿಯಿತು. ಆದರೆ ತನ್ನ ಕಥೆ? ಇದರ ಮುಕ್ತಾಯ ಹೇಗೋ? ತಾನು ಮಾಡಿದ ಯಃಕಶ್ಚಿತ್ ಕೆಲಸ ಯಾವ ದಂಡವನ್ನು ತೆಗೆದುಕೊಳ್ಳಲಿರುವುದೊ?
ಕಾಳಿಂಗಯ್ಯ ಉಳುತ್ತಲೇ ಇದ್ದ. ನೇಗಿಲು ಮುಂದುವರಿದಂತೆ ಭೂಮಿ ಬಾಯಿ ತೆರೆದಂತಾಗಿ ಎರಡೂ ಪಕ್ಕಕ್ಕೆ ಕೆಂಪು ಮಣ್ಣಿನ ರಾಶಿ ರಾಶಿ ಬೀಳುತ್ತ ಹೋಗುವುದು. ಅವನು ಅದನ್ನು ನೋಡುತ್ತಲೇ ನಡೆದಿದ್ದ. ಓ, ಕುಂಕುಮದಂತಹ ಆ ಮಣ್ಣು, ಅವನ ಕಣ್ಣಿಗೆ ಅದೆಷ್ಟು ಹಿತಕರ! ಅದನ್ನೇ ದಿಟ್ಟಿಸುತ್ತಿದ್ದಂತೆ, ಒಮ್ಮೊಮ್ಮೆ ತನ್ನ ಮನೆಯನ್ನೇ ಕೊನೆಗೆ ಲೋಕವನ್ನೇ ಅವನು ಮರೆಯುತ್ತಿದ್ದುದುಂಟು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ನಾಲ್ಕು ಮೊಳ ಭೂಮಿ! ಇನ್ನೊಬ್ಬನಿಗೆ ಸೇರಿದ ಭೂಮಿ. ಅದಕ್ಕೆ ತಾನು ಆಸೆಪಟ್ಟಿದ್ದ. ಇನ್ನೊಬ್ಬನ ಹೆಂಡತಿಗೆ ಆಸೆಪಟ್ಟಂತೆ (ಅಹಲ್ಯೆಗೆ ಆಸೆಪಟ್ಟ ಇಂದ್ರ)… ಪಕ್ಕದ ಭೂಮಿ ತೆಂಗಿನಮರದ ಹಟ್ಟಿ ದೇವಪ್ಪನದು. ಅದರಲ್ಲಿ ತಾನು ನಾಲ್ಕು ಮೊಳ ಭೂಮಿಯನ್ನು ಬಲಾತ್ಕಾರದಿಂದ, ಅಕ್ರಮವಾಗಿ ಉತ್ತು, ‘ಒತ್ತುವರಿ’ ಮಾಡಿಕೊಂಡಿದ್ದ. ದೇವಪ್ಪನಿಗಿದ್ದ ಜಮೀನೆಲ್ಲಾ ಒಟ್ಟು ಮೂರು ಎಕರೆ ಚಿಲ್ಲರೆ ಆಗುವುದು- ಹೆಚ್ಚು ಕಡಿಮೆ ತನ್ನ ಜಮೀನಿನಷ್ಟೇ. (ಇದು ಮೈಸೂರಿನ, ಕನ್ನಡ ದೇಶದ, ಭಾರತದ ಬಹುಸಂಖ್ಯೆಯ ರೈತರ ಜಮೀನಿನ ಕಥೆ) ಇಂಥ ಅಲ್ಪ ಜಮೀನಿನಲ್ಲೂ ಆದ ಈ ಆಕ್ರಮಣದಿಂದ ದೇವಪ್ಪ ದಿಕ್ಕುಗೆಟ್ಟ ನಾವಿಕನಂತಾದ. ಬೈಗಳ ಮಳೆ ಸುರಿಸಿದ. ಕೊನೆಗೆ ತಾಳಲಾರದೆ ಇಳಿಜಾರಿನಲ್ಲಿ ಬ್ರೇಕ್ ಕೆಟ್ಟುಹೋದ ಮೋಟಾರಿನಂತೆ ಜಗಳಕ್ಕೇ ಬಂದ. ಕೈಗೆ ಕೈ ಮಿಲಾಯಿಸಿತು (ಭೀಮ, ದುರ್ಯೋಧನರ ಕಾಳಗ). ಕಾಳಿಂಗಯ್ಯ ಭೀಮಕಾಯ. ಅವನಿಗೇ ಜಯ ಲಭಿಸಿತು. ದೇವಪ್ಪ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟ. ನಮ್ಮ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಯ ನ್ಯಾಯವೆಂದರೆ ಬಲಾಢ್ಯನ ಬಾಯಿಗೇ ಬೀಳುವ ದೋಸೆ. ನ್ಯಾಯ ಕಾಳಿಂಗನಂತೆಯೇ ಆಯಿತು. ಆದರೆ ಅದಕ್ಕೂ ಧೃತಿಗೆಡದೆ ದೇವಪ್ಪ ಅಮಲ್ದಾರರಿಗೆ ದೂರು ಕೊಟ್ಟ. ಮೋಜುಂದಾರರು ಅಳತೆಗೆ ಬಂದರು. ಹೊಲಕ್ಕೆ ಅಳತೆಗೆ ಹೋಗುವ ಮುನ್ನ ಕಾಳಿಂಗ ಮೋಜುಂದಾರ ದೇವರಿಗೆ ಮನೆಯಲ್ಲಿ ಉಪ್ಪಿಟ್ಟು ಕಾಫಿ ಪೂಜೆಮಾಡಿ ಐದು ರೂಪಾಯಿಯ ನೈವೇದ್ಯ ಮಾಡಿದ. ಈ ವಿಶೇಷ ಪೂಜೆಯಿಂದ ತೃಪ್ತರಾದ ಮೋಜುಂದಾರರು ಕಾಳಿಂಗಯ್ಯ ‘ಒತ್ತುವರಿ’ ಮಾಡಿದ್ದ ನಾಲ್ಕು ಮೊಳ ಭೂಮಿಯ ಪ್ರದೇಶವನ್ನು ಉದ್ದಕ್ಕೂ ಅಳತೆ ಮಾಡಿ, ಅವನ ಜಮೀನಿಗೆ ಸೇರಿಸಿ, ಕಲ್ಲು ನೆಡಿಸಿಬಿಟ್ಟರು.
ಕಾಳಿಂಗಯ್ಯ ಉಳುತ್ತಲೇ ಇದ್ದ. ಮೇಲೆ ಉರಿಯುವ ಸೂರ್ಯ; ಒಳಗೆ ಕುದಿಯುವ ವಿಷಾದದ ಲಾವಾರಸ-
ಕಲ್ಲು ನೆಡಿಸಿಬಿಟ್ಟರು. ದೇವಪ್ಪನ ಎದೆಗೆ ಗುರಿಯಿಟ್ಟು ಹೊಡೆದ ಶಿಲೆ. ದೇವಪ್ಪ ದಿಗ್ಭ್ರಾಂತನಾದ. ಸೂರ್ಯಚಂದ್ರರಷ್ಟೇ ಶಾಶ್ವತವೆಂದು ಅವನು ನಂಬಿದ್ದ ಭೂಪ್ರದೇಶ ಇನ್ನು ಅವನದಲ್ಲ. ದೇಶದ ಕಾನೂನು ಹಾಗೆ ಹೇಳಿಬಿಟ್ಟಿದೆ. ಮುಂದೇನು ಮಾಡುವುದು? ಬುದ್ಧಿ ಕುಂಠಿತವಾಗಿದೆ. ಎದುರಿಗೆ ವಿಸ್ತಾರವಾಗಿ ಹರಡಿರುವ ಶೂನ್ಯದ ಕಡಲು. ದೇವಪ್ಪ ಕೊರಗಿನಿಂದ ಹಾಸಿಗೆ ಹಿಡಿದ.
ಕಾಳಿಂಗಯ್ಯ ಉಳುತ್ತಲೇ ಇದ್ದ. ಅವನ ಕಾಲುಗಳು ಸಣ್ಣಗೆ ನಡುಗುತ್ತಿದ್ದವು-
…ಹಾಸಿಗೆ ಹಿಡಿದ. ಪುನಃ ಮೇಲೆ ಏಳಲೇ ಇಲ್ಲ…
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಕಾಳಿಂಗಯ್ಯನ ಕಾಲುಗಳೂ ಮೊಳೆ ಹೊಡೆದಂತಾಗಿ ಮುಂದೆ ಏಳಲೇ ಇಲ್ಲ. ಅವನ ನೇತ್ರಗಳು ಮಿಂಚು ಕಂಡಂತೆ ಮಂಜಾದವು. ತಲೆ ಗಿರಗಿರನೆ ಸುತ್ತುವ ಬುಗುರಿ-
”ನನ್ನ ನೆಲ ತೊಕ್ಕೊಂಬುಟ್ಟಿಯಾ?… ಆ ಮಟ್ಟಿಗೆ ನನ್ನ ರಕ್ತ ಸುರಿಸಿವ್ನಿ ಕಣೋ ಪಾಪಿ. ದೇವರು ನಿಂಗೆ ಏಳಿಗೆ ಕೊಟ್ಟಾನಾ?- ನನ್ನ ವಡವೇಗೆ ಅಪೇಕ್ಸೆ ಮಾಡಿ ನನ್ನ ಜೀವ ಕೊಂಡುಬಿಟ್ಟಿದ್ದೀಯೆ. ಇರಲಿ. ನನ್ನ ಮಗ ನಿಚ್ಚಯವಾಗಿ ಸೇಡು ತೀರಿಸಿಕೊತ್ತಾನೆ. ನೆಪ್ಪಿಡು. ರಕ್ತಕ್ಕೆ ರಕ್ತ ಕೆಡವಿ ನೆಲಾನ ಸಂಪಾದ್ನೆ ಮಾಡ್ತಾನೆ… ಹುಸಾರು, ಗೆದ್ದೆ ಅಂದಕೊಬ್ಯಾಡ. ನಿನ್ನ ಕತೆ ಮುಗಿದ ಹೊರತೂ ನನ್ನ ಕತೆ ಮುಗಿಯಾಕಿಲ್ಲ, ಗೊತ್ತಾಯಿತಾ?…”
ಸತ್ತ ದೇವಪ್ಪನ ಧ್ವನಿಯೇ ನಿಸ್ಸಂದೇಹವಾಗಿಯೂ. ಮುದುಕ ಕಾಳಿಂಗಯ್ಯ ಥರಥರನೆ ನಡುಗಲಾರಂಭಿಸಿದ. ಅವನ ಕಣ್ಣು ಹೆದರಿ ಹೆದರಿ ಪಕ್ಕದ ಹೊಲದಲ್ಲೇ ಉಳುತ್ತಿದ್ದ ದೇವಪ್ಪನ ಮಗನ ವಜ್ರಕಾಯವನ್ನು ನೋಡಿತು… “ನಾನು ಮುದುಕನಾದೆ, ಮಕ್ಕಳು ಇಲ್ಲ. ದೇವಪ್ಪನ ಮಗ ಈಗ ಬಲವಾಗಿದಾನೆ. ಅವನು ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತಾನೆ. ಆ ಜಮೀನನ್ನ ನಾನು ಮಾಡಿದ ಹಾಗೆ ಜುಲುಮೆಯಿಂದ ಉತ್ತು ತನ್ನ ವಶಪಡಿಸಿಕೊಳ್ತಾನೆ. ವಶಪಡಿಸಿಕೊಂಡೇ ಬುಡ್ತಾನೆ. ಸಕ್ತಿ ಇದ್ದೋನ ಕಾರ್ಯ. ಮುಗಿದು ಹೋಯ್ತು. ಎಲ್ಲಾ ಮುಗಿದುಹೋಯ್ತು… ಆ ಮೋಜುಂದಾರನಿಗೆ ಅನ್ಯಾಯವಾಗಿ ಐದು ರೂಪಾಯಿ ಕಳೆದೆನಲ್ಲಾ?… ಅಯ್ಯೋ, ಐದು ರೂಪಾಯಿ ಕಳೆದೆನಲ್ಲಾ?… ಅಯ್ಯೋ ಕೆಟ್ಟೆ, ಕೆಟ್ಟೆ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಕಾಳಿಂಗಯ್ಯ ತೂರಾಡಿ ತೂರಾಡಿ ಕೆಳಗೆ ಬಿದ್ದುದನ್ನು ಕಂಡು ದೇವಪ್ಪನ ಮಗ ‘ಆರು’ ನಿಲ್ಲಿಸಿ ಧಾವಿಸಿ ಬಂದ. ಕಾಳಿಂಗಯ್ಯನಿಗೆ ಪ್ರಜ್ಞೆ ಹೋದಂತಿತ್ತು. ಒಡನೆಯೇ ಕೆರೆಗೆ ಓಡಿ ಹೋಗಿ ನೀರು ತಂದು ಶುಶ್ರೂಷೆ ಮಾಡಿದ. ಸ್ವಲ್ಪ ಹೊತ್ತಿನ ಮೇಲೆ ಕಾಳಿಂಗಯ್ಯ ಕಣ್ಣು ತೆರೆದ. ದೇವಪ್ಪನ ಮಗನ ಮುಖವನ್ನು ಕಂಡು ಮೃತ್ಯು ದರ್ಶನವನ್ನು ಮಾಡಿದವನಂತಾದ (ಗರುಡನನ್ನು ನೋಡಿದ ಹಾವು). ಬಿಟ್ಟ ಕಣ್ಣು ಥಟ್ಟನೆ ಮುಚ್ಚಿಹೋಯಿತು. ಬಾಯಿ ದುರ್ಬಲವಾಗಿ ಆಡಿತು: “ನಾಕು ಮೊಳ ಭೂಮಿ ನಾಕೇ ನಾಕು ಮೊಳ ಭೂಮಿ… ಕೋಪ ಮಾಡಕೋ ಬ್ಯಾಡ. ಸಂಸಾರ ಸಾಕಕ್ಕೆ ಆ ಕೆಲಸ ಮಾಡಬುಟ್ಟೆ ಕನಪ್ಪಾ- ಸಂಸಾರ ಸಾಕಕ್ಕೆ…” ದೇವಪ್ಪನ ಮಗ ಏನೊಂದೂ ಅರ್ಥವಾಗದೆ ಮಿಕಿ ಮಿಕಿ ನೋಡುತ್ತಿದ್ದ. ಮುಚ್ಚಿದ ಕಣ್ಣು ತೆರೆಯಲೇ ಇಲ್ಲ.
-ಕತೆಯನ್ನು ಓದಿ ಲಾಯರು ತಲೆದೂಗಿದ. ಆದರೆ ಏನೋ ಅವನಿಗೆ ಸಂಶಯವಾಯಿತು. ಮನುಸ್ಕೃತಿ ಗಂಡಿನ ಕೈಬರಹದಂತಿತ್ತು. ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕೊನೆಯಲ್ಲಿ ಪುಟ್ಟದಾಗಿ ‘ಸಂಜೀವಿ’ ಎಂದು ಬರೆದಿತ್ತು. ಅದನ್ನು ಶಾಯಿಯಿಂದ ಚೆನ್ನಾಗಿ ಹೊಡೆದಿತ್ತು.
ಲಾಯರ ಸಂಶಯ ದೃಢವಾಯಿತು… ಸಂಜೀವ- ತನ್ನ ಹೆಂಡತಿಯ ಸೋದರಮಾವ. ಅವನು ಮೊನ್ನೆ ಮೊನ್ನೆ ಮೃತನಾದ. ಅವನು ಲಲಿತಳನ್ನು ಬಹುವಾಗಿ ಪ್ರೀತಿಸುತ್ತಿದ್ದನೆಂದು ಅವಳೇ ಆಗಾಗ ಹೇಳುತ್ತಿದ್ದಳು. ಹಾಗಾದರೆ ಅವನ ಕಥೆಗಳನ್ನೇ ತನ್ನ ಹೆಸರಿನಲ್ಲಿ ಪ್ರಕಟಿಸುತ್ತಿದ್ದಳೇ ಲಲಿತ?… ನಾಲ್ಕು ಮೊಳ ಭೂಮಿ! ಇದು ಅವನು ಬರೆದ ಕಥೆಯೇ?
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

