ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಮ್ಮೂರ ಕಮ್ಮಾರ ವೀರಭದ್ರಾಚಾರಿ, ಒಳ್ಳೆ ಕಟ್ಟುಮಸ್ತಾದ ಆಳು. ಅವನಿಗೆ ಅನೇಕ ಬಗೆಯ ಕೆಲಸಗಳು ಬರುತ್ತಿದ್ದುದರಿಂದ ಅವನನ್ನು ನಾವು ಸರ್ವತಂತ್ರಸ್ವತಂತ್ರನೆನ್ನುತ್ತಿದ್ದೆವು. ಕಬ್ಬಿಣದ ಕೆಲಸ ಮಾಡುವುದರಲ್ಲಿ ಅವನು ಯಾವಾಗಲೂ ನಿಸ್ಸೀಮ. ಸಾಧಾರಣವಾಗಿ ಕಮ್ಮಾರರು ತಾವು ಕಬ್ಬಿಣವನ್ನು ಕಾಯಿಸುತ್ತಾ ಆ ಕಾದ ಕಬ್ಬಿಣವನ್ನು ಕೊಡತಿಯಿಂದ ಹೊಡೆಯಲು ಬೇರೆಯವರಿಗೆ ಗಂಟುಹಾಕುತ್ತಾರೆ. ಕೊಡತಿ ಭಾರವಾದುದರಿಂದ, ನಿಶ್ಯಕ್ತರೂ ಮೈಗಳ್ಳರೂ ಆದ ಕಮ್ಮಾರರು ಮಾಡುವ ಉಪಾಯ ಅದು. ಆದರೆ ನಮ್ಮೂರ ವೀರಭದ್ರಾಚಾರಿ ಎತ್ತಲಾರದ ಕೊಡತಿ ಯಾವುದೂ ಇಲ್ಲವೇ ಇಲ್ಲ. ಉಳಿದ ಬಡ ಆಳುಗಳು ಏದುತ್ತಾ ಕೊಡತಿಯ ಭಾರಕ್ಕೆ ತಾವೇ ಓಲಾಡುತ್ತಿರುವಾಗ ವೀರಭದ್ರಾಚಾರಿ, ಲೀಲಾಜಾಲವಾಗಿ ಒಂದೇ ಸಣ್ಣ ಕಡ್ಡಿಯನ್ನು ಎತ್ತುವಂತೆ ಕೊಡತಿಯನ್ನು ಎತ್ತಿ, ಕಾದ ಕಬ್ಬಿಣದ ಮೇಲೆ ಇಳಿಸುತ್ತಿದ್ದನು. ಆ ಏಟನ್ನು ತಾಳಲಾರದೆ, ಕಬ್ಬಿಣದಿಂದ ಸಿಡಿಯುತ್ತಿದ್ದ ಉರಿಯ ಹೊಟ್ಟು ಮತ್ತು ಕೆಂಡಗಳು, ಕತ್ತಿಗೆ ಕತ್ತಿ ಎದುರಾದಾಗ ಅವುಗಳ ತೀಕ್ಷ್ಣ ಅಲಗುಗಳಿಂದ ಹಾರುವ ರತ್ನಕಿಡಿಗಳಂತೆ ಕಾಣುತ್ತಿದ್ದವು. ಸಂಜೆಯ ಮಬ್ಬುಗತ್ತಲೆಯಲ್ಲಿ, ಕಮ್ಮಾರನ ಮನೆಯ ಮುಂದೆ ಕೆಲಸ ನಡೆಯುತ್ತಿರುವಾಗ, ಕತ್ತಲೆಯಲ್ಲಿ ರಾಮಬಾಣದಂತೆ ಹೊರಡುತ್ತಿದ್ದ ಹೂಬಾಣಗಳನ್ನೂ, ಕಿಡಿಗಳ ಪ್ರಸರಣವಿನ್ಯಾಸವನ್ನೂ ನೋಡಲು ಹಳ್ಳಿಯ ಹುಡುಗರೆಲ್ಲ ಕಮ್ಮಾರನ ಮನೆಯ ಮುಂದೆ ಸೇರುತ್ತಿದ್ದರು. ಹುಡುಗರಿಗೆ ಅಲ್ಲಿ ನಿತ್ಯವೂ ಬಾಣ ಬಿರಸುಗಳ ನಯನಮನೋಹರ ಪ್ರದರ್ಶನವೇ. ಆ ಮಬ್ಬು ಬೆಳಕಿನಲ್ಲಿ ಸೊಂಟದವರೆಗೆ ಮಾತ್ರ ಒಂದು ಚೌಕವನ್ನು ಸುತ್ತಿಕೊಂಡು, ಕಾದ ಕಬ್ಬಿಣದಿಂದ ಹಾರುತ್ತಿರುವ ಕಿಡಿಬಾಣಗಳು ತನ್ನ ಮೈಮೇಲೆಯೇ ಪುಷ್ಪ ವೃಷ್ಟಿ ಮಾಡುವುವೋ ಎಂಬಷ್ಟು ಅವುಗಳ ಹತ್ತಿರದಲ್ಲಿ ಕುಳಿತಿರುತ್ತಿದ್ದ ಅರೆಮೈಯ್ಯಿನ ಕಮ್ಮಾರ, ಬಾಲಕರಿಗೆ ಅಲ್ಲಾವುದ್ದೀನನ ಮಾಯಾದೀಪದ ಮಾಂತ್ರಿಕನಾಗಿ ತೋರುತ್ತಿದ್ದನು.
ಕಮ್ಮಾರ ವೀರಭದ್ರಾಚಾರಿ ಸರ್ವತಂತ್ರಸ್ವತಂತ್ರನೆಂದು ಹೇಳಿದೆ. ಅದು ಬಹಳ ದೊಡ್ಡ ಬಿರುದು. ಕರ್ಮಕುಶಲಿಯಾಗಿ ಕರ್ಮದಕ್ಷನಾದವನಿಗೆ, ನಾನಾ ಕರ್ಮಗಳನ್ನು ಕಲಿತವನಿಗೆ ಮಾತ್ರ ಕೊಡುವ ಬಿರುದು ಅದು. ಎಂತಹ ವೇದಾಂತಿಯಾದರೂ ಕರ್ಮಕುಶಲನಾಗಿರಬೇಕೆಂಬುದನ್ನು ತೋರಿಸುವುದಕ್ಕಾಗಿಯೇ ಎಂಬಂತೆ, ವೈರಾಗ್ಯ ಚಕ್ರವರ್ತಿಯೂ, ಕವಿತಾರ್ಕಿಕಸಿಂಹರೂ ಆದ ವೇದಾಂತದೇಶಿಕರಿಗೆ ಆ ಬಿರುದನ್ನು ಕೊಟ್ಟಿದ್ದಾರೆ. ಅವರಿಗೆ ಆ ಬಿರುದನ್ನು ಕೊಟ್ಟುದು ಒಂದು ಸಲ ಅವರು, ಅಳತೆಗೆ ಸರಿಯಾಗಿ ಪಾದರಕ್ಷೆಯನ್ನು ಹೊಲಿದು ಕಸಬುದಾರರಿಗೆ ಪಾಠ ಕಲಿಸಿದುದಕ್ಕಾಗಿಯಂತೆ. ವೇದಾಂತದೇಶಿಕರು ಮಾಡಿದುದರಲ್ಲಿ ಯಾವುದಕ್ಕೂ ಮತ್ತೊಬ್ಬರನ್ನು ಕಾಯಬಾರದೆಂಬ ತತ್ವವೂ ಅಡಕವಾಗಿತ್ತು. ಇದೇ ತತ್ವವನ್ನು ಅನುಸರಿಸಿಯೇ ಮಹಾತ್ಮ ಗಾಂಧಿಯವರೂ ನಮ್ಮ ಕಾರ್ಯಕ್ಕಾಗಿ ಇತರರನ್ನು ಅಪೇಕ್ಷಿಸಬಾರದೆಂದು ಹೇಳುತ್ತಿದ್ದರು. ಕಮ್ಮಾರ ವೀರಭದ್ರಾಚಾರಿಯದೂ ಅದೇ ತತ್ವ. ಆದರೆ ಅದೊಂದು ತತ್ವವೆಂಬುದು ಅವನಿಗೆ ತಿಳಿದಿರಲಿಲ್ಲ. ವೇದಾಂತದೇಶಿಕರ ಹೆಸರನ್ನಂತೂ ಅವನು ಎಂದಿಗೂ ಕೇಳಿರಲಿಲ್ಲ. ಆದರೆ ಪ್ರತಿಯೊಂದು ಕೆಲಸವನ್ನು ತಾನೇ ಮಾಡುವುದು ಅವನ ಸ್ವಭಾವವಾಗಿತ್ತು. ಇದೊಂದು ಒಳ್ಳೆ ಗುಣ, ತತ್ವ ಎಂದು ಯಾರಾದರೂ ಅವನಿಗೆ ಹೇಳಿದ್ದರೆ ಅದು ಅವನಿಗೆ ಅರ್ಥವಾಗುತ್ತಿರಲಿಲ್ಲ.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಬಾಚಿ ಹಿಡಿದುಕೊಂಡು ಅವನು ಮರ ಕೆತ್ತಲು ಪ್ರಾರಂಭಿಸಿದರೆ ಒಂದು ಆಳಿಗೆ ಎತ್ತಲು ಸಾಧ್ಯವಾಗದಂತಹ ದೊಡ್ಡ ದೊಡ್ಡ ಚೆಕ್ಕೆಗಳು ರಣಹದ್ದು ಹಾರಿದಂತೆ ದೂರ ಹಾರಿ ಬೀಳುತ್ತಿದ್ದುವು. ಮನೆಗಳನ್ನು ಕಟ್ಟುವುದರಲ್ಲಿಯೂ, ಆಯವನ್ನು ನಿರ್ಣಯಿಸುವುದರಲ್ಲಿಯೂ, ಮಣ್ಣಿನ ಗೋಡೆಗಳನ್ನು ಇಟ್ಟಿಗೆ ಗೋಡೆಗಳಂತೆ ನಿರ್ಣಯವಾಗಿ ಕಟ್ಟುವುದರಲ್ಲಿಯೂ, ಬಾಗಿಲವಾಡಗಳನ್ನು ಕೂಡಿಸುವುದರಲ್ಲಿಯೂ, ಕೀಲು ಚಿಲಕಗಳನ್ನು ಮಾಡುವುದರಲ್ಲಿಯೂ, ಮಹಡಿಗಳಿಗೆ ಹಲಗೆ ಸೇರ್ವೆ ಮಾಡುವುದರಲ್ಲಿಯೂ ನಮ್ಮ ಪ್ರಾಂತದಲ್ಲೆಲ್ಲಾ ವೀರಭದ್ರಾಚಾರಿ ಪ್ರಸಿದ್ಧನಾದನು. ಹತ್ತು ಜನ ಕಮ್ಮಾರರು, ಬಡಗಿಗಳು, ಮಣ್ಣುಗಾರೆ ಕೆಲಸಗಾರರ ಕಾರ್ಯವನ್ನೆಲ್ಲ ಅವನೊಬ್ಬನೇ ಮಾಡಿ, ನಮ್ಮ ಪ್ರಾಂತದಲ್ಲಿ ನೂರಾರು ಮನೆಗಳನ್ನು ಕಟ್ಟಿದನು. ನಮ್ಮ ಹಳ್ಳಿಗಳಲ್ಲಿ ಎಲ್ಲೆಲ್ಲಿ ನೋಡಿದರೂ ವೀರಭದ್ರಾಚಾರಿಯು ಕಟ್ಟಿದ ಮನೆಗಳೇ; ಆ ಮನೆಗಳ ಬಿಗಿಯನ್ನೂ ಆಯವನ್ನೂ ನೋಡಿದರೆ, ನೂರಾರು ವರ್ಷಗಳು ಆ ಮನೆಗಳಿಗೆ ಯಾವ ಅಪಾಯವೂ ಇಲ್ಲವೆಂದು ಯಾರಿಗಾದರೂ ಕಣ್ಣಿಗೇ ಕಾಣುತ್ತಿದ್ದಿತು.
ನಮ್ಮೂರ ಪೂಜಾರಿ ನರಸಿಂಹಯ್ಯನ ಮನೆಯನ್ನು ವೀರಭದ್ರಾಚಾರಿ ಕಟ್ಟಿದನಷ್ಟೆ, ಪಟ್ಟಣಗಳಲ್ಲಿದ್ದರೆ ಆ ಮನೆಗೆ ಅರವತ್ತು ಎಪ್ಪತ್ತು ಸಾವಿರ ಬೀಳುತ್ತಿತ್ತು. ಹಳ್ಳಿಯೇ ಆದರೂ, ನಮ್ಮ ಊರಿನಲ್ಲಿ ಆಗಿನ ಕಾಲದಲ್ಲಿಯೇ ಹತ್ತುಸಾವಿರ ರೂಪಾಯಿ ಬಿದ್ದಿತ್ತು. ಬೆಲೆಯ ದೃಷ್ಟಿಯಿಂದಲೂ ಉಪಯೋಗಿಸಿದ ಸಾಮಾನುಗಳ ಯೋಗ್ಯತೆಯಿಂದಲೂ ನರಸಿಂಹಯ್ಯನ ಮನೆಯೇ ವೀರಭದ್ರಾಚಾರಿ ಕಟ್ಟಿದ ಮನೆಗಳಲ್ಲೆಲ್ಲ ಶ್ರೇಷ್ಠವಾದುದು. ಹಿಂದೆ ನರಸಿಂಹಯ್ಯ ದೇವರ ಪೂಜೆ ಮಾಡುತ್ತಿದ್ದರೂ ವ್ಯವಸಾಯಗಾರನಾಗಿದ್ದುದರಿಂದ ಊರಿನ ಜೋಯಿಸರಿಗೆ ಪದ್ಧತಿಯಂತೆ ಒಂದು ಹೊರೆ ಹುಲ್ಲನ್ನು ಕೊಡುತ್ತಿದ್ದನು. ಅದು ಅನೇಕ ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈಚೆಗೆ ನರಸಿಂಹಯ್ಯ, ತಾನೇ ದೇವರ ಪೂಜಾರಿಯಾಗಿರುವಾಗ, ತಾನೂ ಜೋಯಿಸರಂತೆಯೇ ಮನುಷ್ಯ ಶಕ್ತಿಯನ್ನು ಮೀರಿದ ಶಕ್ತಿಯನ್ನು ಅವಲಂಬಿಸಿಕೊಂಡಿರುವಾಗ ಈ ಹುಲ್ಲಿನ ಕಾಣಿಕೆಯನ್ನು ಜೋಯಿಸರಿಗೆ ತಾನು ಕೊಡುವುದು ಅನಾವಶ್ಯಕವೆಂದು ಭಾವಿಸಿದನು. “ಜೋಯಿಸರದು ನಕ್ಷತ್ರ ಗ್ರಹಗಳ ಪೂಜೆ, ನನ್ನದು ಅವುಗಳಿಗಿಂತ ಹೆಚ್ಚಾದ ಆಂಜನೇಯನ ಪೂಜೆ, ನನ್ನದೇನು ಕಡಿಮೆ?” ಎಂದುಕೊಂಡನು. ಆ ವರುಷ ಜೋಯಿಸರು ಅವನ ಕಣಕ್ಕೆ ಹುಲ್ಲಿಗಾಗಿ ಬಂದಾಗ ಪೂಜಾರಿಯು, ”ಇನ್ನು ನನ್ನ ಮೇಲೆ ನಿಮ್ಮ ಗ್ರಹಗಳ ಆಟ ನಡೆಯುವುದಿಲ್ಲ. ನಿಮಗೆ ಗ್ರಹಗಳಿದ್ದರೆ ನನಗೆ ಆಂಜನೇಯ ಇದೆ, ಹೋಗಿ!” ಎಂದನು. ತನಗೆ ಕೊಡುವವರ ಸಂಖ್ಯೆ ದಿನದಿನಕ್ಕೆ ಕಡಿಮೆಯಾಗುತ್ತಲೇ ಹೋಗುತ್ತಿದ್ದುದರಿಂದ, ಜೋಯಿಸನಿಗೆ ಇದರಿಂದ ಆಶ್ಚರ್ಯವಾಗಲಿಲ್ಲ. ಅವನು ಮಾತನಾಡದೆ ಬಂದ ದಾರಿ ಹಿಡಿದು ಹೊರಟನು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಆದರೆ ಪೂಜಾರಿ ನರಸಿಂಹಯ್ಯ ಸ್ವಲ್ಪ ದಿನಗಳಲ್ಲಿಯೇ ಜೋಯಿಸರಲ್ಲಿಗೆ ಗೃಹಪ್ರವೇಶದ ದಿನವನ್ನು ಕೇಳಲು ಬರಬೇಕಾಯಿತು. ಹನುಮಂತರಾಯನನ್ನು ಎಷ್ಟೇ ಸ್ವಾಧೀನದಲ್ಲಿಟ್ಟುಕೊಂಡಿದ್ದರೂ, ಗ್ರಹಗಳ ಮತ್ತು ನಕ್ಷತ್ರಗಳ ಗತಿಯನ್ನು ಜೋಯಿಸನ ಕೈಯಿಂದ ಕಿತ್ತುಕೊಳ್ಳುವುದು ನರಸಿಂಹಯ್ಯನಿಗೆ ಸಾಧ್ಯವಾಗಲಿಲ್ಲ. ಜೋಯಿಸನಲ್ಲಿ ಹೋಗಲು ಪೂಜಾರಿ ನರಸಿಂಹಯ್ಯನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಅವನ ಹೆಂಡತಿ “ಹಿಂದಲಿಂದ ಬಂದ ಜೋಯಿಸರು. ಅವನ ಮಾತಿನಂತೆ ಗೃಹಪ್ರವೇಶ ನಡೆಸಿದವರಿಗೆಲ್ಲ ಒಳ್ಳೆಯದಾಗಿದೆ. ಅವರನ್ನೇ ದಿವಸ ಕೇಳಿ ಬನ್ನಿ” ಎಂದು ಬಲವಂತ ಮಾಡಿದಳು. ನರಸಿಂಹಯ್ಯ ”ಆ ಜೋಯಿಸನ ಮಾತೆಲ್ಲ ಬುರುಡೆ. ಆ ಗ್ರಹಗಳಿಗೂ ನಕ್ಷತ್ರಗಳಿಗೂ ಬೇರೆ ಕೆಲಸವಿಲ್ಲವೇ, ನನ್ನನ್ನೂ ನನ್ನ ಮನೆಯನ್ನೂ ಹುಡುಕಿಕೊಂಡು ತಿರುಗೋಕೆ?” ಎಂದುಕೊಂಡು ಜೋಯಿಸನಲ್ಲಿಗೆ ಹೋದನು. ಹೊಸಮನೆಗೆ ಯಾವತ್ತು ಹೋಗಬಹುದೆಂದು ನರಸಿ೦ಹಯ್ಯ ಕೇಳಿದುದಕ್ಕೆ ಜೋಯಿಸನು ”ಅದರ ಆಯ ನಿನ್ನ ಹೆಸರಿನ ಬಲಕ್ಕೆ ಸರಿಯಾಗಿಲ್ಲ. ನೀನು ಆ ಮನೆಯಲ್ಲಿ ವಾಸ ಮಾಡಿದರೆ ನಿನಗೆ ಏಳಿಗೆಯಿಲ್ಲ. ಪ್ರಬಲವಾದ ಶಾಂತಿ ಮಾಡಬೇಕು. ಖರ್ಚು ವಿಪರೀತವಾಗುತ್ತೆ. ಐವತ್ತು ರೂಪಾಯಿಗಳಿಗೆ ಕಡಮೆ ಆಗುವುದಿಲ್ಲ” ಎಂದುಬಿಟ್ಟನು. ಜೋಯಿಸನಿಗೆ ತನ್ನ ಮೇಲೆ ಅಸಮಾಧಾನವಿರುವುದು ನರಸಿಂಹಯ್ಯನಿಗೆ ತಿಳಿದಿದ್ದುದರಿಂದ ಅವನು “ನಿನ್ನ ಪುರಾಣ ಕೇಳೋಕಲ್ಲ ನಾನು ಇಲ್ಲಿ ಬಂದಿರೋದು. ನಿನ್ನ ಉಜರೇ ಇಲ್ಲದೆ ಗೃಹಪ್ರವೇಶ ಮಾಡಿಕೊಳ್ಳುತ್ತೇನೆ” ಎಂದು ಹೊರಟುಹೋದನು.
ಪೂಜಾರಿ ನರಸಿಂಹಯ್ಯ ಮನೆಗೆ ಬಂದವನೇ ಹೆಂಡತಿಯೊಂದಿಗೆ “ನಾನು ಮೊದಲೇ ಹೇಳಲಿಲ್ಲವೇ? ನನ್ನಿಂದ ಐವತ್ತು ರೂಪಾಯಿ ಕೀಳೋಕೆ ಜೋಯಿಸ ಹೊಂಚು ಹಾಕ್ತಿದಾನೆ. ಇದ್ಕೆಲ್ಲ ನಾನು ಬಗ್ಗತೇನೆಯೆ? ನಾಡದ್ದು ಹೊಸಮನೆಗೆ ಹೋಗುವುದೇ!” ಎಂದನು. ಅವನ ಹೆಂಡತಿ “ಎಲ್ಲಾದರೂ ಉಂಟೆ? ಇಷ್ಟೊಂದು ಖರ್ಚು ಮಾಡುವುದನ್ನು ಮಾಡಿಯಾದ ಮೇಲೆ, ಶಾಸ್ತ್ರವಿಲ್ಲದೆ ದನಗಳನ್ನು ಕೊಟ್ಟಿಗೆಗೆ ಕೂಡುವಂತೆ ಹೋಗಿ ಸೇರಿಕೊಂಡು ಬಿಡುವುದೆ? ಆಗದು, ಬದುಕಿ ಬಾಳೋ ಮನೆ. ಮಕ್ಕಳು ಮರಿಗೆ ಒಳ್ಳೆಯದಾಗಬೇಡವೆ? ನಮ್ಮ ಕಾಲವೇನೋ ಆಗಿಹೋಯಿತು. ಆದರೆ ಮಕ್ಕಳ ತಲೆಮೇಲೆ ಕಲ್ಲು ಎತ್ತಿಹಾಕಬೇಡಿ” ಎಂದಳು. ಹಳ್ಳಿಗಳಲ್ಲಿ ಯಾವ ಸಮಾಚಾರವೂ ಬಹುಬೇಗ ಹರಡುತ್ತದೆ. ಗೃಹಪ್ರವೇಶವೇ ಇಲ್ಲದೆ, ಶಾಂತಿ ಮಾಡದೆ ಕೆಟ್ಟ ಗ್ರಹದಲ್ಲಿ ಹೊಸಮನೆಗೆ ಸೇರುವ ಸುದ್ದಿ ತಿಳಿದು ಊರವರು “ಅವನ ಹಣದ ಕೊಬ್ಬು ಅವನನ್ನು ಹಾಗೆ ಆಡಿಸುತ್ತದೆ” ಎಂದರು. ಅದು ನರಸಿಂಹಯ್ಯನ ಕಿವಿಗೂ ಬಿತ್ತು. ಕೆಲವು ಹಿರಿಯರಾದ ಮಹಿಳೆಯರು ನರಸಿಂಹಯ್ಯನ ಮನೆಗೆ ಹೋಗಿ “ಇದೇನು ಕೇಡು?” ಎಂದು ಅವನ ಹೆಂಡತಿಯನ್ನು ಬೈದರು. ಕೊನೆಗೆ ವಿಧಿಯಿಲ್ಲದೆ ನರಸಿಂಹಯ್ಯ ಗೃಹಪ್ರವೇಶಕ್ಕೂ ಶಾಂತಿಗೂ ಒಪ್ಪಿದ, “ಆದರೆ ಜೋಯಿಸನಿಂದ ಮಾಡಿಸುವುದಿಲ್ಲ. ವೀರಭದ್ರಾಚಾರಿಯಿಂದಲೇ ಮಾಡಿಸುತ್ತೇನೆ” ಎಂದು ತೀರ್ಮಾನಿಸಿದ.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ನರಸಿಂಹಯ್ಯ ಹಾಗೆ ತೀರ್ಮಾನಿಸಲು ಒಂದು ಕಾರಣವಿತ್ತು. ಕಮ್ಮಾರ ವೀರಭದ್ರಾಚಾರಿ ಆಗಿಂದಾಗ್ಗೆ “ನನಗೂ ಜೋತಿಷ್ಯ ಬರುತ್ತೆ. ಮನೆಯನ್ನು ಕಟ್ಟುವವನಿಗೆ ಅದರೊಳಕ್ಕೆ ಹೋಗುವುದನ್ನು ಹೇಳುವುದಕ್ಕೆ ತಿಳಿಯುವುದಿಲ್ಲವೆ?” ಎನ್ನುತ್ತಿದ್ದನು. ವೀರಭದ್ರಾಚಾರಿ ಯಾವ ಕಾರ್ಯವನ್ನೂ ಮಾಡಬಲ್ಲನೆಂಬ ನಂಬಿಕೆ ನಮ್ಮೂರ ಇತರರಿಗೆ ಇದ್ದಂತೆ ನರಸಿಂಹಯ್ಯನಿಗೂ ಇದ್ದಿತು. ಅಲ್ಲದೆ ಜೋಯಿಸನ ಮುಖಭಂಗ ಮಾಡಲು ಸಿಕ್ಕಿದ ಈ ಅವಕಾಶವನ್ನು ಅವನು ಬಿಡಲು ಇಷ್ಟಪಡಲಿಲ್ಲ. ”ಈ ಜೋಯಿಸ ತನ್ನ ಕೋಳಿ ಕೂಗದಿದ್ದರೆ ಬೆಳಗೇ ಆಗುವುದಿಲ್ಲವೆಂದು ತಿಳಿದಿದ್ದಾನೆ” ಎಂದುಕೊಂಡನು ಅವನು. ಅದೇ ದಿನ ನರಸಿಂಹಯ್ಯ ವೀರಭದ್ರಾಚಾರಿಯನ್ನು ಕಂಡು ”ಗೃಹಪ್ರವೇಶ ಮುಹೂರ್ತ ನೀನೇ ನಿರ್ಣಯಿಸಿ ಕೊಡು” ಎಂದನು. ಸ್ವಲ್ಪ ಅನುಮಾನಿಸಿದ ನಂತರ ವೀರಭದ್ರಾಚಾರಿ ”ಆಗಲಿ” ಎಂದನು.
ವೀರಭದ್ರಾಚಾರಿಗೆ ಸ್ವಲ್ಪ ಮಟ್ಟಿಗೆ ಓದುವುದು ಬರುತ್ತಿತ್ತು. ಅವನು ಕೂಡಲೇ ಪಂಚಾಂಗ ತರಿಸಿ, ಹೇಗೋ ಒಂದು ದಿನವನ್ನು ಗೊತ್ತುಮಾಡಿದನು. ಅನಂತರ ಗೃಹಪ್ರವೇಶ ಸಂದರ್ಭಗಳಲ್ಲಿ ಜೋಯಿಸ ಹೇಗೆ ಹೇಗೆ ಮಾಡುತ್ತಾನೆ ಇವುಗಳನ್ನೆಲ್ಲ ಜ್ಞಾಪಿಸಿಕೊಂಡುದಲ್ಲದೆ, ಗೃಹಪ್ರವೇಶವಾಗಿದ್ದವರ ಮನೆಯ ಯಜಮಾನನಿಂದಲೂ ಸಂಗತಿಗಳನ್ನೆಲ್ಲ ತಿಳಿದುಕೊಂಡನು. ಹೂವು, ಹಣ್ಣು, ಎಲೆ, ಅಡಿಕೆ, ತೆಂಗಿನಕಾಯಿ, ಹೊಸಬಟ್ಟೆ, ಕಲಶಗಳು, ಬೇಯಿಸಿದ ಬಣ್ಣಬಣ್ಣದ ಅನ್ನ; ತನಗೆ ತನ್ನ ಹೆಂಡತಿಗೆ ಪಂಚೆ, ಸೀರೆ; ಕೊನೆಗೆ ಜೋಯಿಸ ಕೇಳಿದ ಶಾಂತಿಯ ವಿಷಯ ತಿಳಿದನಂತರ, ವೀರಭದ್ರಾಚಾರಿಯೂ ಶಾಂತಿಯ ಕಡೆಗೆ ನೂರು ರೂಪಾಯಿ ಬೇಕೆಂದು ಕೇಳಿದನು. ನರಸಿಂಹಯ್ಯ ಪೂಜಾರಿಗೆ ಒಳ್ಳೆಯ ಪೀಕಲಾಟಕ್ಕೆ ಬಂತು. ಆದರೆ ಅವನೇನೂ ಮಾಡುವಂತಿರಲಿಲ್ಲ. ಈ ಕೊನೆಯ ಗಳಿಗೆಯಲ್ಲಿ ಆಚಾರಿ ಕೈ ಕೊಟ್ಟುಬಿಟ್ಟರೆ ಮಾಡಿದ ಅಡಿಗೆಯೆಲ್ಲ ವ್ಯರ್ಥವಾಗಿ ಊರವರ ಮುಂದೆ ತನ್ನ ಮಾನ ಪೂರ್ತಾ ಹೋಗುವುದು ಮಾತ್ರವಲ್ಲದೆ ಜೋಯಿಸನ ತಲೆಯ ಮೇಲಿನ ಕೋಡು ಇನ್ನೂ ನಾಲ್ಕು ಬೆರಳು ಬೆಳೆಯುವುದೆಂಬ ಅಸೂಯೆಯಿಂದ ಅವನು ಆಚಾರಿ ಕೇಳಿದುದನ್ನೆಲ್ಲ ಕೊಟ್ಟುಬಿಟ್ಟನು. ಅವನ ಮುಖವು ಕೋಪದಿಂದ ಬೆಂಕಿ ಬೆಂಕಿಯಾಗಿತ್ತು. ಆಚಾರಿ ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿ, ಹೊಸ ರೇಶಿಮೆ ಅಂಚಿನ ಪಂಚೆಯುಟ್ಟುಕೊಂಡು, ಹೊಸ ಸೀರೆಯುಟ್ಟಿದ್ದ ಹೆಂಡತಿಯನ್ನು ಜತೆಯಲ್ಲಿ ಕೂಡಿಸಿಕೊಂಡು ಪೂಜಾರಿ ಅಯ್ಯನಿಂದ ಎಲೆ ಅಡಿಕೆ ತೆಗೆದುಕೊಂಡು ತನ್ನ ಮನೆಗೆ ಹೊರಟನು. ನವಧಾನ್ಯ, ಕಾಯಿಹಣ್ಣು, ಎರಡು ಆಳಿನ ಹೊರೆಯನ್ನು ಆಚಾರಿ, ಹೊಸ ಹೊಸ ಮಂಕರಿಗಳಲ್ಲಿ ಹಾಕಿಸಿ ಹೊರಿಸಿಕೊಂಡು ಮನೆಗೆ ನಡೆದನು. ಏಕಕಾಲದಲ್ಲಿ ನಾಲ್ಕು ತಿಂಗಳು ಕಷ್ಟಪಟ್ಟು ಮನೆ ಕಟ್ಟಿದುದಕ್ಕಿಂತ ಈ ಒಂದು ದಿನದ ಕಾರ್ಯದಲ್ಲಿಯೇ ಹೆಚ್ಚು ಸಂಪಾದನೆಯಾಯಿತೆಂದು ಅವನಿಗೂ ಪೂಜಾರಿ ಅಯ್ಯನಿಗೂ ಹೊಳೆಯಿತು. ಗೃಹಪ್ರವೇಶಕ್ಕೆ ನಮ್ಮೂರ ಜೋಯಿಸನಿಗೆ ಯಾರೂ ಅಷ್ಟೊಂದು ಮರ್ಯಾದೆ ಮಾಡಿರಲಿಲ್ಲ. ವೀರಭದ್ರಾಚಾರಿ ಗಂಧಾಕ್ಷತೆಗಳನ್ನು ಹಚ್ಚಿ ನೆತ್ತಿಗೆ ದುಂಡಾದ ಕುಂಕುಮದ ಬೊಟ್ಟನ್ನಿಟ್ಟುಕೊಂಡು ಪೂಜಾರಿಯಿಂದ ಉಡುಗೊರೆಯಾಗಿ ಸಂದಿದ್ದ ಹೊಸ ಪಂಚೆಯನ್ನುಟ್ಟು, ಕಟ್ಟುಮಸ್ತಾದ ಮೈಯನ್ನು ಬೆಳಗಿಸುತ್ತಾ ಹೆಂಡತಿಯೊಡನೆ ಮನೆಗೆ ಹೊರಟಾಗ, ಅವರಿಬ್ಬರೂ ಶಿವಪಾರ್ವತಿಯರಂತೆ ಕಂಡರು. ನಮ್ಮಊರವರು “ಭೇಷ್ ಇವನು ಹುಟ್ಟು ಜೋಯಿಸನಂತೆಯೇ ಕಾಣುತ್ತಾನೆ. ಯಾವುದಕ್ಕೂ ಸೈ” ಎಂದು ಮೆಚ್ಚಿಗೆ ಮಾತುಗಳನ್ನಾಡುತ್ತಾ ತಮ್ಮ ತಮ್ಮ ಮನೆಗಳಿಗೆ ಹೋದರು.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಆದರೆ ಈ ಸಂಗತಿಯಿಂದ ಆಚಾರಿಯ ಮನಸ್ಸಿನ ಮೇಲೆ ವಿಚಿತ್ರವಾದ ಪರಿಣಾಮವುಂಟಾಯಿತು. ಅವನ ಮುಂದೆ ಹೊಸ ಜಗತ್ತು, ಹೊಸ ಅವಕಾಶ, ಹೊಸ ಹುದ್ದೆ ತೆರೆದಂತಾಯಿತು. ಆ ಹುದ್ದೆ ಬಹು ಸುಲಭವಾಗಿಯೂ ಅವನಿಗೆ ತೋರಿತು. ”ಜೋಯಿಸನಾಗುವುದು ಆಚಾರಿಯಾಗುವುದಕ್ಕಿಂತ ಸುಲಭ. ಅದರಲ್ಲಿ ಹೆಚ್ಚು ಲಾಭವೂ ಇದೆ. ಗಾಂಭೀರ್ಯ, ಗೌರವ, ಘನತೆಯೂ ಇದೆ. ಕೆಲಸವೂ ಕಡಿಮೆ. ನಾನು ಮೂರು ತಿಂಗಳು ಮನೆ ಕಟ್ಟುವುದೂ ಒಂದೇ, ಒಂದು ದಿವಸ ಜೋಯಿಸನಾಗಿರುವುದೂ ಒಂದೇ” ಎಂದು ಅವನಿಗೆ ತೋರಿತು. ಈ ಹೊಸ ಉತ್ಸಾಹದಲ್ಲಿ ಅವನಿಗೆ ತಾನು ನಮ್ಮ ಪ್ರಾಂತದಲ್ಲಿ ಕಟ್ಟಿರುವ ಆ ನೂರಾರು ಮನೆಗಳೂ ತಾನಿಲ್ಲದಿದ್ದರೆ ಆಗುತ್ತಿರಲಿಲ್ಲವೆಂಬುದೂ, ಆ ಮನೆಗಳಲ್ಲಿ ಪ್ರತಿ ನಿತ್ಯ ತನ್ನ ಹೆಸರು ಎಲ್ಲರ ಬಾಯಲ್ಲೂ ಇರುವುದೂ ಮರತೇಹೋಯಿತು. “ತಾನು ಮನೆಯ ಕಂಬ, ಜೋಯಿಸ ಬರಿಯ ಮನೆಯ ಬಣ್ಣ” ಎಂಬುದು ಅವನಿಗೆ ಮರೆಯಿತು. ನಿಜವಾಗಿ ಜೋಯಿಸನಾಗುವ ಮರಳು ಮರೀಚಿಕೆ ಅವನ ಮನವನ್ನಾಕ್ರಮಿಸಿತು. ಮರುದಿನವೇ ಅವನು ಜ್ಯೋತಿಷ್ಯ ಚಿಂತಾಮಣಿ, ಆರೂಢ ಪ್ರಶ್ನಚಂದ್ರಿಕೆ, ವಿದ್ಯಾಗುರು ಮುಂತಾದ ಗ್ರಂಥಗಳನ್ನೆಲ್ಲ ತರಿಸಿ, ನಕ್ಷತ್ರಗಳನ್ನೆಲ್ಲ ಉರುಹಾಕತೊಡಗಿದನು. ಅವನ ಉಳಿ, ಗರಗಸ, ಕೈಚಾಚಿ, ಹತ್ತರಿ- ಒಂದೊಂದು ಆಯುಧವೂ ಒಂದೊಂದು ರಾಜ್ಯವನ್ನು ಕಟ್ಟಲು ಸಮರ್ಥವಾದುವು, ಉಪೇಕ್ಷಿತವಾಗಿ ತುಮುರು ಹಿಡಿದು ಮೂಲೆಗೆ ಬಿದ್ದು ಕೊರಗುತ್ತಿದ್ದವು. ಆಚಾರಿ ಉಪಯೋಗಿಸುತ್ತಿದ್ದಾಗ ಯೌವನದ ಉತ್ಸಾಹದ ಹೊಳಪಿನಲ್ಲಿ ಜ್ವಲಿಸುತ್ತಿದ್ದ ಆ ”ಹತ್ಯಾರು”ಗಳು ಅವನ ಔದಾಸೀನ್ಯಕ್ಕೆ ಪಾತ್ರವಾಗಿ, ನಿರ್ಮಾಲ್ಯವಾಗಿ ಮುಪ್ಪಡಿಸಿದಂತೆ ತೋರುತ್ತಿದ್ದವು. ಆಚಾರಿ ಮಾತ್ರ ಅವುಗಳ ಕಡೆ ನೋಡುವುದನ್ನೇ ಬಿಟ್ಟು ನಾಡೀಕೂಟ, ಗೃಹಮೈತ್ರಿಕೂಟ, ಗ್ರಹಕೂಟ, ದಶಾಭುಕ್ತಿ ಇವುಗಳನ್ನು ಪಟಕಿಸುತ್ತಿದ್ದನು.
ಅಲ್ಲಿಂದ ಮುಂದೆ ವೀರಭದ್ರಾಚಾರಿಯೇ ನಮ್ಮೂರ ಜೋಯಿಸನಾದನು. ಲಗ್ನ ಕಟ್ಟುವುದು, ಜಾತಕ ಬರೆಯುವುದು, ಗೃಹಪ್ರವೇಶ, ಶಮನ, ಮಾಟ, ಕಟ್ಟು, ಕವಣೆ ಯಾವುದಕ್ಕೂ ಜನ ಅವನಲ್ಲಿಗೆ ಬರತೊಡಗಿದರು. ಆಜಾರಿ ಏನೋ ಇದರಿಂದ ತನ್ನ ಘನತೆಯೂ, ಯೋಗ್ಯತೆಯೂ ಏರಿತೆಂದೇ ಭಾವಿಸಿದನು. ಮಾಮೂಲು ಜೋಯಿಸರಿಗೆ ಮೊದಲೇ ಕಡಿಮೆಯಾಗಿದ್ದ ಉದ್ಯೋಗ ಇನ್ನೂ ಕಡಿಮೆಯಾಯಿತು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಸ್ವಲ್ಪ ದಿನಗಳಲ್ಲಿಯೇ ವೀರಭದ್ರಾಚಾರಿಗೆ, ತನಗೂ ಉದ್ಯೋಗವಿಲ್ಲ ಎಂಬ ಭಾವನೆ ಬರತೊಡಗಿತು. ನಮ್ಮೂರಿನಲ್ಲಿ ಮನೆಗಳೆಲ್ಲ ಒಂದು ಕಡೆಯಿಂದ ಬೀಳತೊಡಗಿದ್ದುವು. ಪಿಳ್ಳೆಕಾಲು ಮುರಿದುಕೊಂಡರೆ ಸರಿಮಾಡುವವರಿಲ್ಲ. ಗುದ್ದಲಿ, ಪಿಕಾಶಿ, ಕುಡುಗೋಲು, ಕೊಡಲಿ ಯಾವುದನ್ನೂ ಹೆಣೆಯುವವರಿಲ್ಲ. ಗಾಡಿಪಟ್ಟೆ ಬಿಡುವವರಿಲ್ಲ. ನೇಗಿಲು ಇಕ್ಕುವವರಿಲ್ಲ. ಹಜಾಮನ ಕತ್ತಿ ಹತ್ತರಿ ಹಿಡಿದುಕೊಡುವವನು ಯಾರೂ ಇಲ್ಲ. ಹಳ್ಳಿಯಲ್ಲಿ ಬಡಗಿ ಕಮ್ಮಾರ ಎಲ್ಲವೂ ವೀರಭದ್ರಾಚಾರಿಯೇ ಆಗಿದ್ದುದರಿಂದ ಅವನು ಮಾಡುವ ಕೆಲಸವೆಲ್ಲ ನಿಂತುಹೋಗಿ, ಊರು ಖಿಲವಾಗತೊಡಗಿತು. ಗ್ರಾಮದವರು ಪ್ರತಿಯೊಂದು ಕಾರ್ಯಕ್ಕೂ ನೆರೆಯ ಗ್ರಾಮಕ್ಕೆ ಹೋಗಬೇಕಾಯಿತು. ಗೃಹ ಪ್ರವೇಶ ಮಾಡಿಸಲು ವೀರಭದ್ರಾಚಾರಿ ಕಾಯ್ದುಕೊಂಡು ಕುಳಿತಿದ್ದರೂ, ಒಂದಾದರೂ ಹೊಸಮನೆ ಏಳಲಿಲ್ಲ. ಬೇರೆ ಊರುಗಳಿಂದ ಕಮ್ಮಾರ ಬಡಗಿಗಳನ್ನು ತರುವುದು ಹಳ್ಳಿಯವರಿಗೆ ಸಾಧ್ಯವಿರಲಿಲ್ಲ. ಮೊದಲು ಒಬ್ಬ ಜೋಯಿಸ ಇದ್ದಲ್ಲಿ ಇಂದು ಇಬ್ಬರಾಗಿದ್ದರು. ಇಬ್ಬರಿಗೂ ಕೆಲಸವಿರಲಿಲ್ಲ. ಇಬ್ಬರೂ ಸೋಮಾರಿಗಳು, ಪರಾವಲಂಬಿಗಳು, ಸುಮ್ಮನೆ ಆಕಾಶ ನೋಡುವವರು. ವೀರಭದ್ರಾಚಾರಿಯಂತಹ ಒಬ್ಬನು ಇದ್ದರೆ, ನೂರಾರು ಮನೆಗಳು ವರ್ಷ ವರ್ಷವೂ ಎದ್ದು ಇನ್ನೂ ಇಂತಹ ನಾಲ್ಕಾರು ಮೈಗಳ್ಳ ಜೋಯಿಸರಿಗೆ ಕೆಲಸ ಸಿಕ್ಕುತ್ತಿತ್ತು. ಹಿಂದೆ ವೀರಭದ್ರಾಚಾರಿ, ವೀರಭದ್ರಾಚಾರಿಯೇ ಆಗಿದ್ದಾಗ ಅವನಿಗೆ ಒಂದು ಗಳಿಗೆಯೂ ವಿರಾಮವಿರಲಿಲ್ಲ. ಕೈತುಂಬ ಕೆಲಸ, ಬೆಳಗಿನಿಂದ ರಾತ್ರಿಯವರೆಗೆ ಒಂದೇ ಸಮನಾಗಿ ದುಡಿಯುತ್ತಿದ್ದನು. ಗಾಳಿಗೂ ಬಿಸಿಲಿಗೂ ಒಡ್ಡಿದ ಅವನ ಮೈ ಕಂಚಿನಂತೆ ಗಟ್ಟಿಯಾಗಿತ್ತು. ಮನಸೂ ಗಾಳಿಯಂತೆ ಹಗುರವಾಗಿತ್ತು. ಅವನು ಸೃಷ್ಟಿಕರ್ತನಾದ ಪರಮಾತ್ಮನ ಒಂದು ಸಣ್ಣ ನಕಲು ಆಗಿ ತೋರುತ್ತಿದ್ದನು. ಅವನಿಗೆ ಬರದ ಯಾವ ಕೆಲಸವೂ ಇರಲಿಲ್ಲ. ಆಗ ನಮ್ಮೂರಿನಲ್ಲಿ ಒಂದು ಮನೆಯ ಕಿಟಕಿಕದವೂ ಮುರಿದಿರಲಿಲ್ಲ. ಒಂದು ತೊಲೆಯೂ ಬಗ್ಗಿರಲಿಲ್ಲ. ಒಂದು ಕಂಬವೂ ಸೊಟ್ಟವಾಗಿರಲಿಲ್ಲ. ಅನ್ನದಲ್ಲಿ ಕಲ್ಲು ಇದ್ದರೆ ಹೇಗೆ ಸಹಿಸುವುದಿಲ್ಲವೋ ಹಾಗೆ, ವೀರಭದ್ರಾಚಾರಿ ಬೀಳುವ ಮನೆಗಳನ್ನು ಸಹಿಸುತ್ತಿರಲಿಲ್ಲ. ವಿಶ್ವಕರ್ಮನೆಂಬ ಹೆಸರು ಅವನಿಗೆ ಅನ್ವರ್ಥವಾಗಿತ್ತು. ಐವತ್ತು ವರ್ಷಗಳು ದುಡಿದಿದ್ದರೂ ಅವನಿಗೆ ವಯಸ್ಸಾದಂತೆ ಕಂಡಿರಲಿಲ್ಲ. ಆದರೆ ಈಚೆಗೆ ಎರಡೇ ವರುಷದಲ್ಲಿ ಅವನಿಗೆ ಹೊಟ್ಟೆ ದಪ್ಪವಾಗಿತ್ತು. ಮೈ ದಿಕ್ಕುಪಾಲಾಗಿ ಬೆಳೆದಿತ್ತು. ಮುಖದಲ್ಲಿ ಸೋಮಾರಿತನದ ವಿಕಾರಗಳೆಲ್ಲ ಕಾಣುತ್ತಿದ್ದವು. ಹಿಂದೆ ಒಂದಾದರೂ ಬಿಳಿಯ ಕೂದಲಿಲ್ಲದ ಅವನ ಮೀಸೆ, ಇಂದು ಪೂರ್ತಿ ಬಿಳಿದಾಗಿತ್ತು. “ಈ ಗ್ರಹಗಳ ಕಾಟದಿಂದ ನಮ್ಮ ಮನೆಗಳು ನಿರ್ಮೂಲವಾದುವು. ಈ ನಕ್ಷತ್ರಗಳನ್ನೆಲ್ಲ ನಾಶಮಾಡಬೇಕು” ಎಂದು ಜನ ಜ್ಯೋತಿಷ್ಯವನ್ನೇ ಬಯ್ಯತೊಡಗಿದರು. ಮನೆ ಒಳಗೆ ಹರಕಲು ರೇಷ್ಮೆ ಅರಿವೆ ಚೂರಿನಲ್ಲಿ ಜ್ಯೋತಿಷ್ಯ ಪುಸ್ತಕ, ಪಂಚಾಂಗ, ಕವಡೆ, ಸ್ಲೇಟುಗಳನ್ನು ಕಟ್ಟುತ್ತಾ ಬಿಚ್ಚುತ್ತಾ ಯಾರಾದರೂ ಜ್ಯೋತಿಷ್ಯ ಕೇಳಲು ಬರುತ್ತಾರೋ ಎಂದು ಕಿಟಕಿಯಿಂದ ನೋಡುತ್ತಾ ಕಾಯುತ್ತಿದ್ದ ವೀರಭದ್ರಾಚಾರಿ, ಇವೊಂದನ್ನೂ ಅರ್ಥಮಾಡಿಕೊಳ್ಳದೆ ಮೀಸೆ ತಿರುವುತ್ತಾ ಕುಳಿತಿದ್ದನು. ಹಿಂದೆ ಯಾವಾಗಲೂ ಜಾತ್ರೆಯಂತೆ ಜನಭರಿತವಾಗಿದ್ದ ಅವನ ಮನೆ, ಅವನು ಹೀಗೆ ನಿರುಪಯೋಗಿಯಾದುದರಿಂದ ನಿರ್ಜನವಾಗಿತ್ತು.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಎರಡು ವರ್ಷ ಕಳೆಯುವುದರೊಳಗಾಗಿ ವೀರಭದ್ರಾಚಾರಿಯ ಮನೆ ಇತರರ ಮನೆಗಳಂತೆ ಸೋರಲು ಪ್ರಾರಂಭಿಸಿತು. ಸೂರಿಗೆಲ್ಲ ಗೆದ್ದಲು ಹತ್ತಿತು. ಹೊಡೆಗಳೂ ಪಿಳ್ಳೆಕಾಲುಗಳೂ ಬಾಗಿ, ತಮ್ಮ ಜಾಗ ಬಿಟ್ಟು ನಾಲ್ಕಾರು ಮೊಳ ಆಚೆ ಕದಲಿದುವು. ಸೂರಿಗೆ ಹಾಕಿದ್ದ ಗಳುಗಳೆಲ್ಲ ಒಂದೊಂದಾಗಿ ನೆಲಕ್ಕೆ ಬೀಳತೊಡಗಿದುವು. ವೀರಭದ್ರಾಚಾರಿ ಜೋಯಿಸನಾಗುವುದಕ್ಕೆ ಮುಂಚೆ, ಮನೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ತತ್‌ಕ್ಷಣ ಉಳಿ ಬಾಚಿ ಹಿಡಿದುಕೊಂಡು, ಅದನ್ನು ಸರಿಮಾಡಿಬಿಡುತ್ತಿದ್ದನು. ಸೂರಿನ ಹೆಂಚುಗಳನ್ನು ಇಳಿಸುವುದೂ ಏರಿಸುವುದೂ ಆತನಿಗೆ ಲೀಲಾಜಾಲವಾಗಿತ್ತು. ಊರಿನ ಮನೆಗಳನ್ನೆಲ್ಲ ಸರಿಪಡಿಸುತ್ತಿದ್ದವನಿಗೆ ತನ್ನ ಮನೆ ಭಾರವೆ? ‘ಬೆಟ್ಟ ನುಂಗುವವನಿಗೆ ಕದ ಹಪ್ಪಳ.’ ಗಂಡನ ಈ ಉತ್ಸಾಹವನ್ನು ನೋಡಿ ಹೆಂಡತಿ ಸಹ ಮನೆಯನ್ನು ಸಾರಿಸಿ ಸುಣ್ಣಬಣ್ಣ ಮಾಡಿ ಒಳ್ಳೆ ಕನ್ನಡಿಯಂತೆ ಇಟ್ಟಿದ್ದಳು. ಆದರೆ ಈಚೆಗೆ ಆಚಾರಿ ನಕ್ಷತ್ರ, ಗ್ರಹ, ಆರೂಢ, ಪ್ರಶ್ನಚಂದ್ರಿಕೆ, ವಿದ್ಯಾಗುರುಗಳ ಬೆನ್ನುಹತ್ತಿ, ಉಳಿಬಾಚಿಗಳನ್ನು ಮೂಲೆಗೆ ಹಾಕಿದಮೇಲೆ, ಅವನ ಸ್ವಾಭಾವಿಕವಾದ ಕೈಕೆಲಸದ ಶಕ್ತಿ ಮರೆಯಾಯಿತು. ತನ್ನ ಮನೆ ಒಂದು ಕಡೆಯಿಂದ ಬೀಳುತ್ತಿದ್ದರೂ, ಹೆಳವನಾದವನು ತೆಂಗಿನ ಮರದ ಮೇಲಿನ ಕಾಯಿಗಳನ್ನು ನೋಡುವಂತೆ ಆಚಾರಿ ಸುಮ್ಮನೆ ಸೂರನ್ನೂ ಆಯುಧಗಳನ್ನೂ ನೋಡುತ್ತಿದ್ದನು. ಒಂದು ದಿನ ರಾತ್ರಿ ಬಹಳ ಜೋರಾದ ಮಳೆ ಬಂದಾಗ, ಸೂರಿನ ಹೆಂಚುಗಳೆಲ್ಲ ಜೊರ್‍ರೆಂದು ಕೆಳಕ್ಕೆ ಸರಿದು, ಮನೆ ಪೂರ್ತಿ ನೆಲಸಮವಾಯಿತು. ದೇವರ ದಯದಿಂದ ಯಾರಿಗೂ ಅಪಾಯವಾಗಲಿಲ್ಲ.
ತನ್ನ ಬಾಳಿನಲ್ಲಿ ನೂರಾರು ಮನೆಗಳನ್ನು ಕಟ್ಟಿದ್ದ ಆಚಾರಿಗೆ, ತನಗಾಗಿ ಹೊಸ ಮನೆಯೊಂದನ್ನು ಕಟ್ಟಿಕೊಳ್ಳುವುದು ಕಷ್ಟವಾಗಿರಬೇಕಾಗಿರಲಿಲ್ಲ. ಹಿಂದೆ ಜೋಯಿಸನಾಗುವುದಕ್ಕೆ ಮುಂಚೆ, ಅವನು ಎಷ್ಟೋ ಸಲ ತನ್ನ ಹಳೆಯ ಮನೆಯನ್ನು ಕೆಡವಿ ಹೊಸ ಮನೆಯೊಂದನ್ನು ಕಟ್ಟಿಕೊಳ್ಳಬೇಕೆಂದು ಯೋಚಿಸಿದ್ದನು. ಆದರೆ ಅದು ಅವನಿಗೆ ಬರಿಯ ಎಂಟು ಹತ್ತು ದಿನಗಳ ಕೆಲಸವಾಗಿ ತೋರಿದ್ದುದರಿಂದ “ಇದೇನು ಮಹಾ? ಸಣ್ಣ ಕೆಲಸ, ಯಾವತ್ತಿದ್ದರೂ ಮಾಡಿಕೊಳ್ಳಬಹುದೆಂದು” ಸುಮ್ಮನಾಗಿದ್ದನು. ಅಲ್ಲದೆ ಇತರರ ಮನೆಗಳನ್ನು ಕಟ್ಟುವುದರಲ್ಲಿ ತೊಡಗಿದ್ದ ಅವನಿಗೆ ಆಗ ಒಂದು ಗಳಿಗೆಯೂ ವಿರಾಮವಿರಲಿಲ್ಲ. ಆದರೆ ಈಗ ತನ್ನ ಮನೆ ಬಿದ್ದಮೇಲೆ, ಹೊಸ ಮನೆಯನ್ನು ಕಟ್ಟದೆ ಅವನಿಗೆ ನಿರ್ವಾಹವೇ ಇರಲಿಲ್ಲ. ಅವನು ಕಟ್ಟಲು ಪ್ರಾರಂಭಿಸಿದನು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ವೀರಭದ್ರಾಚಾರಿ, ತಾನೇ ಜೋಯಿಸನಾದುದರಿಂದ ಮನೆಗೆ ತಳಹದಿ ಹಾಕುವ ದಿನ, ಗುದ್ದಲಿ ಪೂಜೆಯ ಆಟಾಟೋಪವನ್ನೇ ಬಹಳ ಮಾಡಿದನು. ಊದುಕಡ್ಡಿ, ಕಾಯಿ, ಕುಂಕುಮ, ಬಣ್ಣದ ಅನ್ನ, ಹಣತೆಗಳ ರಂಗುರವಾಲ್ ಮಾಡಿದನು. ಊರಿನವರಿಗೆ, “ಎಷ್ಟು ಕಲ್ಪ ಕಳೆದರೂ ಅಲುಗಾಡದ ರೀತಿಯಲ್ಲಿ ಆಯ ಹಾಕಿದ್ದಾನೆ. ಅದಕ್ಕೆ ಇಷ್ಟು ಮಂತ್ರ ತಂತ್ರ!” ಎಂಬ ಭಾವನೆ ಬಂದಿತು. ಗುದ್ದಲಿ ಪೂಜೆಯಾದ ನಂತರ ತಳಪಾಯವನ್ನು ತೆಗೆಯಬೇಕಷ್ಟೆ. ಹಿಂದಲ ಕಾಲದಲ್ಲಾಗಿದ್ದರೆ ಆಚಾರಿ ತಾನೇ ಪಿಕಾಸಿ ಹಿಡಿದುಕೊಂಡು, ಇಬ್ಬರು ಮುವ್ವರು ಮುಯ್ಯಾಳುಗಳೊಂದಿಗೆ ಸೊಂಟದವರೆಗೆ ತಳಹದಿಯನ್ನು ಇಡಿದುಬಿಡುತ್ತಿದ್ದನು. ಇವನ ಸಹಾಯ ಊರಿನವರಿಗೆ ಬೇಕಾಗಿದ್ದುದರಿಂದ ಮುಯ್ಯಾಳುಗಳು ಬರುತ್ತಲೂ ಇದ್ದರು. ಆದರೆ ಈಗ ಆಚಾರಿ ಎಲ್ಲ ಕಾರ್ಯಗಳನ್ನೂ ಹಣಕೊಟ್ಟು ಆಳುಗಳ ಮೂಲಕವೇ ಮಾಡಿಸಬೇಕಾಗಿತ್ತು. ಪಿಕಾಸಿ ಗುದ್ದಲಿಗಳ ಕಾವು ಹೋದರೂ ಅದನ್ನು ಅವನು ಹಾಕಲಾರದವನಾಗಿದ್ದನು. ಮೂರು ದಿನಗಳಲ್ಲಿ ಆಗಬೇಕಾಗಿದ್ದ ತಳಹದಿ ಅಗೆಯುವುದು ಮುವತ್ತು ದಿನಗಳಾದರೂ ಮುಗಿಯಲಿಲ್ಲ. ಹಿಂದೆ ಮನೆಯ ಗೋಡೆಗಳನ್ನೆಲ್ಲ ತಾನೇ ಹಾಕುತ್ತಿದ್ದ ಆಚಾರಿ ಇಂದು ತನ್ನ ಮನೆ ಗೋಡೆಗಳನ್ನೇ ಗುತ್ತಿಗೆಗೆ ಹೊಲೆಯರಿಗೆ ಕೊಟ್ಟನು. ಕಂಚಿನಂತಹ ಗೋಡೆಗಳನ್ನು ಹಾಕಿ ಅಭ್ಯಾಸವಾಗಿದ್ದ ಅವನಿಗೆ, ಕೂಲಿ ಆಳುಗಳು ಮಣ್ಣನ್ನು ಸರಿಯಾಗಿ ಕಲಸದೆ ಸೊಟ್ಟಪಟ್ಟವಾಗಿ ಹಾಕಿದ ಗೋಡೆಗಳನ್ನು ಕಂಡು ಮೈ ಉರಿಯಿತು. ಹಾಗೂ ಹೀಗೂ ಗೋಡೆ ಎದ್ದಮೇಲೆ ಆಚಾರಿ, ಮನೆಯ ಮರಕೆಲಸವನ್ನೆಲ್ಲ ಒಬ್ಬ ಬಡಗಿಗೆ ಗುತ್ತಿಗೆಗೆ ಕೊಟ್ಟನು. ಆ ಬಡಗಿ ಅಷ್ಟು ಬುದ್ಧಿವಂತನಲ್ಲ. ಆದರೆ ಬಹಳ ದುರಾಶೆಯವ. ಅವನು ಕೆಲಸ ಪ್ರಾರಂಭಿಸುವುದಕ್ಕೆ ಮೊದಲೇ ಹಾಗೂ ಹೀಗೂ ತನಗೆ ಬರಬೇಕಾದ ಹಣವನ್ನೆಲ್ಲ ಆಚಾರಿಯಿಂದ ಎಳೆದೇ ಬಿಟ್ಟ. ಗೋಡೆಗಳು ಸೊಟ್ಟಪಟ್ಟಾಗಿ ನಿಂತವು. ಮನೆಯ ಸುತ್ತ ತೊಲೆಯಾಗುವ ಮರಗಳು ಬಿದ್ದಿದ್ದವು. ತಳಪಾಯ ಪ್ರಾರಂಭಿಸಿ ನಾಲ್ಕು ತಿಂಗಳ ಮೇಲಾಗಿತ್ತು. ಮಧ್ಯೆ ಒಂದು ಸಲ ಅಕಾಲದ ಮಳೆ ಬಂದು ಗೋಡೆ ಬಿರುಕು ಬಿಟ್ಟಿತ್ತು. ಮಳೆಗಾಲವು ಹತ್ತಿರವಾಗುತ್ತ ಬರುತ್ತಿದ್ದಿತು. ಅಷ್ಟರಲ್ಲಿ ಬಡಗಿ ಬಂದು ಮನೆ ಕಟ್ಟುವನೆಂದು ಊರಿನವರಿಗೆ ತೋರಲಿಲ್ಲ. ವೀರಭದ್ರಾಚಾರಿ ಕೋಪದಿಂದ ಹಿರಿಣ್ಯಕಶಪುವಿನಂತೆ ಎಲ್ಲರ ಮೇಲೂ ಸಿಡುಗುಟ್ಟುತ್ತಿದ್ದನು. ಹಿಂದೆ ಇಂತಹ ಮನೆಯನ್ನು ಅವನು ಒಂದೇ ತಿಂಗಳಿನಲ್ಲಿ ಕಟ್ಟಿ ಮುಗಿಸಿದ್ದನು. ಬಾಚಿ ಹಿಡಿದು ಅವನು ನಿಂತರೆ ಒಂದೇ ದಿನದಲ್ಲಿ ಒಂದು ಮನೆಗೆ ಬೇಕಾದ ತೊಲೆಗಳನ್ನೆಲ್ಲ ಕೆತ್ತಿ ಹಾಕುತ್ತಿದ್ದನು. ಮಧ್ಯೆ ಮಧ್ಯೆ ಒಂದೊಂದು ಸಲ ಆಸೆಯಿಂದ ಅವನ ದೃಷ್ಟಿ, ಮೂಲೆಯಲ್ಲಿ ಬಿದ್ದಿದ್ದ ಬಾಚಿ, ಗರಗಸ, ಉಳಿಗಳ ಕಡೆಗೆ ಹೋಗುವುದು. ಹಿಂದೆ ಕುಲುಮೆ ಕೆಲಸ ಮಾಡಿದ್ದಾಗ ಹಾಕಿಕೊಳ್ಳುತ್ತಿದ್ದ ಚಡ್ಡಿಯನ್ನು- ಅದು ಇನ್ನೂ ಗಟ್ಟಿಯಾಗಿದ್ದುದರಿಂದ ಬೀದಿಗೆ ಎಸೆಯಲು ಮನಸ್ಸು ಬಂದಿರಲಿಲ್ಲ- ಗೂಟಕ್ಕೆ ನೇತುಹಾಕಿದ್ದುದು ಅವನ ಕಣ್ಣಿಗೆ ಬಿತ್ತು. ಮಣ್ಣು, ಕಬ್ಬಿಣ, ಮರ- ಮೂರರ ಕೆಲಸ ಮಾಡುತ್ತಿದ್ದವನು ಅವನು. ಅವನ ದೃಷ್ಟಿ ನಿಧಾನವಾಗಿ ತನ್ನ ಕಂಬಿಯ ಪಂಚೆ, ಕವಡೆಗಳು, ಜ್ಯೋತಿಷ್ಯ ಪುಸ್ತಕಗಳ ಗಂಟು ಇವುಗಳ ಕಡೆಗೆ ಹಿಂತಿರುಗಿತು. ಗೃಹಪ್ರವೇಶಕ್ಕೆ ಯೋಗ್ಯವಾದ ದಿನವನ್ನು ಗೊತ್ತು ಮಾಡಲು ಅವನು ಜ್ಯೋತಿಷ್ಯ ಸರ್ವವಿಷಯಾಮೃತವನ್ನೂ, ಪಂಚಾಂಗವನ್ನೂ ಬಿಚ್ಚಿಕೊಂಡು, ಸ್ಲೇಟಿನ ಮೇಲೆ ಲೆಕ್ಕ ಹಾಕತೊಡಗಿದನು. ತಾನೇ ಜೋಯಿಸನಾದುದರಿಂದ ಸ್ವಲ್ಪವೂ ಹೆಚ್ಚು ಕಡಿಮೆಯಾಗದಂತೆ ಸರಿಯಾದ ಲಗ್ನವನ್ನು ಗೊತ್ತುಮಾಡುವುದು ಅವನ ಗುರಿಯಾಗಿತ್ತು.
ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ
ಲೆಕ್ಕದ ಗೊಂದಲದಲ್ಲಿ ಸಿಕ್ಕಿಕೊಂಡ ಆಚಾರಿಗೆ ಸಂಧ್ಯಾಕಾಲವಾದುದು ಗೊತ್ತಾಗಲೇ ಇಲ್ಲ. ಅವನ ಹೆಂಡತಿ ಒಳಕ್ಕೆ ಬಂದು, ”ನೀವು ಇಲ್ಲಿ ಗುಣಿಸ್ತಾ ಕೂತಿರಿ. ಮಳೆ ಬರೋಹಾಗಿದೆ. ನಾಲ್ಕು ಹನಿ ಹಾಕಿದರೂ ಸಾಕು. ಗೋಡೆ ಬೀಳುತ್ತೆ. ಆಮೇಲೆ ನಮಗೆ ಈ ಹುಲ್ಲು ಗುಡಿಸಲೇ ಎಂದೆಂದಿಗೂ,” ಎಂದಳು. ಮಳೆಯ ಹೆಸರನ್ನು ಕೇಳಿದ ಕೂಡಲೇ ಆಚಾರಿಗೆ ಚೇಳು ಕುಟಕಿದಂತಾಯಿತು. ಅವನು ಸರ್‍ರನೆ ಎದ್ದು ಬೀದಿಗೆ ಬಂದು ಅಂತರಿಕ್ಷದ ಕಡೆ ನೋಡಿದನು. ಕಪ್ಪು ಮೋಡಗಳು ಆನೆಗಳ ಹಿಂಡುಗಳಂತೆ ಒಂದರ ಮೇಲೊಂದು ನುಗ್ಗುತ್ತಿದ್ದುವು. ಗುಡುಗಿನ ಆರ್ಭಟವೂ, ಮಿಂಚಿನ ಹೊಳಪೂ ವಿಶೇಷವಾಗಿತ್ತು. ಆದರೆ ಮಿಂಚು ವಾಯವ್ಯ ದಿಕ್ಕಿನಲ್ಲಿ ಬೀಳುತ್ತಿದ್ದುದರಿಂದ ಪ್ರಾಯಶಃ ಅಂದು ಮಳೆ ಬರಲಾರದೆಂದೂ, ಅಂದು ತಪ್ಪಿದರೆ ಇನ್ನೂ ಆರು ಏಳು ದಿನ ಮಳೆ ಬರುವುದಿಲ್ಲವೆಂದೂ ಆಚಾರಿಗೆ ತಿಳಿಯಿತು.
ಮನೆಯ ಸುತ್ತ ಬಿದ್ದಿದ್ದ ತೊಲೆಗಾಗಿ ತಂದ ಮರಗಳು, ಬಿದಿರು, ಹಳೆಯ ಹೆಂಚು ಇವನ್ನೆಲ್ಲ ಅವನು ನೋಡಿದನು. ಅವು ದೈನ್ಯದಿಂದ, ”ನಾವೆಲ್ಲ ಇದ್ದೇವೆ, ನಮ್ಮನ್ನು ಸರಿಯಾಗಿ ಯೋಚಿಸುವವರಿಲ್ಲ” ಎಂದು ಬೇಡುವಂತೆ ಅವನಿಗೆ ತೋರಿತು. ಆ ವೇಳೆಗೆ ಆಕಾಶದಲ್ಲಿ ಮತ್ತೊಮ್ಮೆ ಗುಡುಗು ಆರ್ಭಟಿಸಿತು. ಆಚಾರಿಗೆ ಯಾವುದೋ ಒಂದು ಬಗೆಯ ಆವೇಶ ಬಂದಂತೆ ಆಯಿತು. ಅವನ ಮುಖದಲ್ಲಿ ಒಂದು ಬಗೆಯ ಹೊಸ ನಿಶ್ಚಯವೂ, ಚಟುವಟಿಕೆಯೂ ತೋರತೊಡಗಿದುವು. ಅವನ ನಡಿಗೆ ಹಗುರವಾಯಿತು. ಅವನು ಉಟ್ಟಿದ್ದ ಆ ಪಂಚೆ ಕಚ್ಚೆಯ ಕಂಬಿಪಂಚೆ ಅವನಿಗೆ ಸಂಕೋಲೆಯಂತೆ ತೋರಿತು. ಅವನು ಮಧುವನ್ನು ಹೀರಿದ ದುಂಬಿಯಂತೆ ಸರಸರನೆ ತನ್ನ ಗುಡಿಸಲೊಳಕ್ಕೆ ಬಂದನು. ಅವನ ನಡಿಗೆಯಲ್ಲಿ ಆ ವೇಗವನ್ನೂ, ಲಘುತ್ವವನ್ನೂ ಅವನ ಹೆಂಡತಿ ಕಂಡಿದ್ದುದು, ಅವನು ಜೋಯಿಸನಾಗುವುದಕ್ಕೆ ಮುಂಚೆ. ಅವಳು ಆಶ್ಚರ್ಯದಿಂದ ತನ್ನ ಕಡೆ ನೋಡುತ್ತಿದ್ದರೂ ಆಚಾರಿ, ಅವಳನ್ನು ಗಮನಿಸದೆ ನೆಟ್ಟಗೆ ಗೂಟದ ಬಳಿ ಹೋಗಿ ನಿಂತುಕೊಂಡು ತನ್ನ ಹಳೆಚಡ್ಡಿಯನ್ನು ಧರಿಸಿದನು. ಸೊಂಟದಿಂದ ಕೆಳಕ್ಕೆ ಸರಿದ ಕಂಬಿಪಂಚೆ ಅಲ್ಲಿಯೇ ಉಳಿಯಿತು. ಪಂಚಾಂಗ, ಆರೂಢ ಪ್ರಶ್ನಚಂದ್ರಿಕೆ, ಕವಡೆಗಳನ್ನು ಕಟ್ಟಿದ್ದ ಮಾಸಿದ ರೇಶಿಮೆಯ ಅರಿವೆಯ ಗಂಟುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗಿ ಎಸೆದನು. ಕಾಲುಮಣೆಯ ಮೇಲೆ ಕುಂಕುಮ, ಅರಿಶಿನದ ರಾಶಿ ಹುಯ್ದು ಜೋತಿಷ್ಯ ಹೇಳಲು ಅದರ ಮೇಲೆ ಇಟ್ಟಿದ್ದ ದೇವರ ಕಲಶವನ್ನು, ಕುಂಕುಮ ಸಹಿತವಾಗಿ ಕೈಯ್ಯಲ್ಲಿ ಕೆಳಕ್ಕೆ ನೂಕಿ ಬಿಟ್ಟನು. ಅವನ ಹೆಂಡತಿ ಇವನಿಗೆ ಹುಚ್ಚು ಹತ್ತಿದೆ ಎಂದು ಗಾಬರಿಯಿಂದ ನೋಡುತ್ತಿದ್ದಳು. ಆಚಾರಿ ಬಾಚಿಯನ್ನು ತೆಗೆದುಕೊಂಡು ಹೊರಕ್ಕೆ ಹೋದನು. ಅವನ ಹೆಂಡತಿ ”ಯಾಕೆ? ಯಾಕೆ?” ಎಂದುಕೊಂಡು ಅವನನ್ನೇ ಅನುಸರಿಸಿದಳು. ಆಚಾರಿ ಮಾತನಾಡದೆ ಆವೇಶಗೊಂಡವನಂತೆ ಬಾಚಿಯನ್ನು ಮಸೆದನು. ತುಮರು ಹಿಡಿದಿದ್ದ ಬಾಚಿ ಆ ಕತ್ತಲೆಯಲ್ಲಿ ಬೆಳ್ಳಿಯ ಗೆರೆಯಂತೆ ಹೊಳಪಾಗಿ ತೋರಿತು. ಮೊಡಗಳು ಚದುರಿ ಆಕಾಶದಲ್ಲಿ ಸುಮಾರಾಗಿ ನಕ್ಷತ್ರಗಳು ಕಾಣತೊಡಗಿದವು. ಪಂಚಾಂಗವನ್ನು ನೋಡಲು ಪ್ರಾರಂಭಿಸುವುದಕ್ಕೆ ಮುಂಚೆ, ಆಚಾರಿ ಇಷ್ಟು ಬೆಳಕಿನಲ್ಲಿಯೇ ಕೆಲಸ ಮಾಡುತ್ತಿದ್ದನು. ಆಗಲೂ ಆಚಾರಿ ಬಂದವನೇ ತೊಲೆಗಾಗಿ ಅಲ್ಲಿ ಬಂದು ಬಿದ್ದಿದ್ದ ಮರವನ್ನು ಕೆತ್ತಲು ಪ್ರಾರಂಭಿಸಿದನು. ಠಣಾರ್ ಠಣಾರ್ ಎಂದು ದಪ್ಪದಪ್ಪ ಚಕ್ಕೆಗಳು ಹಾರತೊಡಗಿದುವು. ಸದ್ದನ್ನು ಕೇಳಿ ಊರವರೆಲ್ಲಾ ಆಚಾರಿಯ ಮನೆಯ ಬಳಿಗೆ ಬಂದರು. ಆಚಾರಿಗೆ ಮೈಮೇಲೆ ಪ್ರಜ್ಞೆ ಇದ್ದಂತೆಯೇ ತೋರಲಿಲ್ಲ. ಅವನು ಆ ರಾತ್ರಿಯೆಲ್ಲ ಕೆಲಸ ಮಾಡುತ್ತಲೇ ಇದ್ದನು. ಬೆಳಗಾಗುವುದರೊಳಗಾಗಿ ಅಲ್ಲಿ ಬಿದ್ದಿದ್ದ ಎಲ್ಲ ತೊಲೆಗಳನ್ನೂ ಕೆತ್ತಿ ಸರಿಮಾಡಿದನು. ನಾಲ್ಕು ಗಾಡಿ ಚಕ್ಕೆ ಬಿತ್ತು. ಆ ರಾತ್ರಿಯೆಲ್ಲ ಊರಿನವರಿಗೆ ಸಂಭ್ರಮವೇ. “ಊರಿಗೆ ಬಂದಿದ್ದ ಶನಿ ತೊಲಗಿತು” ಎಂದು ಅವರು ಸಂತೋಷಪಟ್ಟರು. ನಿರ್ಜನವಾಗಿದ್ದ ಆಚಾರಿಯ ಗುಡಿಸಲ ಮುಂದೆ ಹಿಂದಲಂತೆ ಹಳೆ ಗಾಡಿಗಳೂ ನೇಗಿಲ ಗುಳಗಳೂ ಕುಲುಮೆ ತಿದಿ ಎಲ್ಲ ಬಂದು ಬಿದ್ದುವು. ಆಚಾರಿಯಿಂದ ತಮಗೆ ಕೆಲಸವಾಗಬೇಕಾಗಿದ್ದುದರಿಂದ ಊರವರೆಲ್ಲ ಬಂದು ಸೇರಿ, ನಾಲ್ಕೇ ದಿನಗಳಲ್ಲಿ ಹೆಟ್ಟಗೆ ಹೆಂಚು ಹೇರಿ ಆಚಾರಿಯ ಮನೆಯನ್ನು ಕಟ್ಟಿಬಿಟ್ಟರು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಆಚಾರಿಯ ಮನೆಯ ಮುಂದೆ ಕುಲುಮೆ ನಡೆಯುತ್ತಿರುವುದನ್ನೂ, ಆಚಾರಿಯ ಕೈಯಲ್ಲಿದ್ದ ಬಾಚಿಯನ್ನೂ ನೋಡಿ ಹಿಂದಲ ಮಾಮೂಲು ಜೋಯಿಸರು “ನನಗೆ ಎರಡು ವರ್ಷಗಳಿಂದ ಕೆಲಸವಿರಲಿಲ್ಲ. ಮನೆ ಕಟ್ಟುವವರೂ ಇಲ್ಲ, ಗೃಹಪ್ರವೇಶವೂ ಇಲ್ಲ. ಇನ್ನು ಆಚಾರಿಗೆ ಹಿಡಿದಿದ್ದ ಶನಿ ಬಿಡುಗಡೆ ಆಯಿತು. ಮನೆಗಳೂ ಏಳುತ್ತವೆ, ಗೃಹಪ್ರವೇಶವೂ ನಡೆಯುತ್ತದೆ” ಎಂದುಕೊಂಡು ಪಂಚಾಂಗ ಒದರಿ ಇಟ್ಟುಕೊಂಡರು.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)
