ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಆರು ವರ್ಷದ ಆ ಹುಡುಗ, ಕಲ್ಲುಮುಳ್ಳಿನ ಏರುತಗ್ಗಿನ ಊರ ಕಾಲುದಾರಿ ನಡೆದು ಸೋತಿದ್ದಾನೆ. ಆತನ ತಲೆಯ ಮೇಲೊಂದು ಬಾಳೆಯ ಕಂದು- ಹೊರಲಾರದ ಹೊರೆಯದು ಅವನಿಗೆ. ಹೊತ್ತು ಕುತ್ತಿಗೆ ಸೋತಾಗ ಅದನ್ನು ಬಲಹೆಗಲ ಮೇಲೇರಿಸುವನು. ಅನಂತರ ಎಡ ಹೆಗಲ ಮೇಲೆ, ಅಲ್ಲಿಯೂ ನೋವಾದಾಗ ಬಲ ಕಂಕುಳಲ್ಲಿಟ್ಟು ಕೈಗಳಿಂದಾಧರಿಸಿ ಹಿಡಿದುಕೊಳ್ಳುವನು. ಬಳಿಕದು ಎಡ ಕಂಕುಳಿಗೆ ಹೋಗುವುದು. ಅಲ್ಲಿಂದ ತಿರುಗಿ ತಲೆಯ ಮೇಲೆ. ಹೀಗೆ ಬಡವನಿಗೆ ಹಣದ ಚರಿಗೆ ಸಿಕ್ಕಿದರೆ ಹೇಗೋ ಛಲದಿಂದ ಹೊತ್ತು ಮನೆಯಕಡೆ ಸಾಗುವಂತೆ, ಆ ಆರು ವರುಷದ ಬಳಕೆಯೂ ತೋರದ ಹರಕಂಗಿಯ ಕೌಪೀನದ ಬಾಲಕನು ಬಾಳೆಯ ಕಂದನ್ನು ಹೊತ್ತು ಕಾಲೆಳೆದು ಮುಂದೆ ಸಾಗುತ್ತಿದ್ದಾನೆ ಮನೆ ಹಾದಿ ಹಿಡಿದು. ಇನ್ನೂ ಎರಡು ಮೂರು ಗಳಿಗೆ ನಡೆಯಬೇಕು. ಆದರೆ ಈಗಾಗಲೇ ತೀರ ದಣಿದು ಸುಣ್ಣವಾಗಿದ್ದಾನೆ. ಹಣೆ, ಕುತ್ತಿಗೆ, ಎದೆಯೆಲ್ಲ ಬೆವರು; ಮೋರೆ ಕೆಂಪೇರಿ ಕನಲಿದೆ. ಆದರೂ ಆ ಬಾಳೆಯ ಕಂದನ್ನು ತೆಗೆದತ್ತ ಬಿಸುಡಲಾರ. ಮಾತ್ರವಲ್ಲ, ಬಿಗುವಾಗಿ ಹಿಡಿದರೆ ಅದೆಲ್ಲಿ ಜಜ್ಜಿಹೋಗುವುದೋ, ಸಡಿಲವಾಗಿ ಕೈಗೊಟ್ಟರೆ ಅದೆಲ್ಲಿ ಜಾರಿಬಿದ್ದು ಸುಳಿ ಮುರಿದು ನುಜ್ಜುಗುಜ್ಜಾಗುವುದೋ ಎಂದು ಬೆದರಿ ಬಹು ಜಾಗರೂಕತೆಯಿಂದ ಹೊರುತ್ತಿದ್ದಾನೆ ಅದನ್ನು. ಹೆತ್ತಬ್ಬೆ ತನ್ನ ಮಗುವನ್ನು ಅಷ್ಟು ಜತನದಿಂದ ಹಿಡಿದುಕೊಳ್ಳುವಳೋ ಎಂದು ಸಂಶಯ ಬರಬೇಕು ನೋಡುವವರಿಗೆ.
”ಹೀಗೆ ಹಿಂದೆ ಬಿದ್ದರೆ ಹೇಗೆ ಮನೆ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೆ? ಬೇಡಾ ಬೇಡಾ ಎಂದರೆ ಕೇಳದೆ ಹೊತ್ತೆ! ಯಾವ ಕರ್ಮಕ್ಕೆ ಅದು! ತೆಗೆದತ್ತ ಒಗೆದು, ಬೇಗ ಮುಂದೆ ಬಂದೀ ಆಯಿತು! ಇಲ್ಲವಾದರೆ ನಾನೇ ಎಳೆದು ಬಿಸಾಡುತ್ತೇನೆ, ನೋಡು!” ಎಂದು ಗದರಿಸುತ್ತಾಳೆ ಮುಂದೆ ಸಾಗುತ್ತಿರುವ ಅವನ ತಾಯಿ. ಅವಳಾದರೂ ಆ ಕಂದನ್ನು ತೆಗೆದುಕೊಳ್ಳಬಾರದೇ ಎಂದರೆ ಅವಳಿಗೊಂದು ಹೊರೆ ಬೇರೆಯೇ ಇದೆ. ಸುಮಾರು ಮೂರು ವರುಷದ ಮಗು! ಬಡ ತೌರಿಗೆ ಸೋಣೇ ತಿಂಗಳ ಬಿದ್ದಿಗೆ ಹೋಗಿ, ಹೊಕ್ಕ ಬಡಮನೆಗೆ ಹಿಂತಿರುಗಿ ಬರುತ್ತಿರುವವಳು ಅವಳು. ಅವಳ ತಾಯಿ ಕೊಟ್ಟ ನಾಲ್ಕು ಹಳೆಯ ಸೌತೆಯಕಾಯಿ, ಒಂದರೆ ಸೇರು ಅವಡೆ, ಒಂದು ತುಂಡು ಮರಸಣಿಗೆ, ಹರುವೆಯ ದಡಿ, ಕೆಸುವಿನ ಕಾಲು ಇತ್ಯಾದಿಗಳ ಒಂದು ಕಟ್ಟು ಬಲಗೈ ತುದಿಯಿಂದ ತೂಗಿ ತೂಗಿ ಕೈ ತುಂಡಾಗುವಂತಾಗಿದೆ. ಎಡ ಕಂಕುಳಲ್ಲಿದೆ ಆ ಮಗು- ನಡೆಯಲಿಕ್ಕೆ ಸಣ್ಣದು, ಹೊರಲಿಕ್ಕೆ ದೊಡ್ಡದು!
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ತಾಯಿಯ ಗದರಿಕೆಯನ್ನು ಕೇಳಿ ಅವಳೆಲ್ಲಾದರೂ ಆ ಕಂದನ್ನು ಎಳೆದು ಬಿಸಾಡುವಳೋ ಎಂದು ಅವಳ ಹಿಂದೆಯೇ ಓಡಿಯೋಡಿ ನಡೆಯುತ್ತಿದ್ದ ನಾಲ್ಕು ವರ್ಷದ, ಹರಕು ಪಾವಡೆಯ, ಕಾಡಿಗೆಗಣ್ಣಿನ ಹುಡುಗಿಯೊಂದು ಅಣ್ಣನ ಕೈಯಿಂದ ಅದನ್ನು ತೆಗೆದುಕೊಂಡು ಅವನು ಮಾಡಿದಂತೆ ತಲೆ, ಹೆಗಲು, ಕೈ ಕಂಕುಳಗಳನ್ನೆಲ್ಲ ಉಪಯೋಗಿಸಿ ಹೆಣಗಾಡಿ ಅಂತೂ ಸ್ವಲ್ಪ ದೂರ ತಂದಿತು. ಅಷ್ಟರಲ್ಲಿ ತುಸು ಸುಧಾರಿಸಿಕೊಂಡ ಅಣ್ಣನು ತಿರುಗಿ ತಲೆಗೊಟ್ಟ ಆ ಕಂದಿಗೆ. ಹೀಗೆ ಅಣ್ಣ ಸೋತಾಗ ತಂಗಿ, ತಂಗಿ ಸೋತಾಗ ಅಣ್ಣ, ಎಂದು ಹಾಗೂ ಹೀಗೂ ಆ ಕಂದು ಬಂದಿಳಿಯಿತು ಅವರ ಗುಡಿಸಲ ಬಾಗಿಲಲ್ಲಿ.
ಅದೊಂದು ರಸಬಾಳೆಯ ಕಂದು. ಅವರಜ್ಜಿಯ ಮನೆಯಲ್ಲಿ ರಸಬಾಳೆಯ ಚಿಕ್ಕದೊಂದು ಗೊನೆ ಬಲಿದಿತ್ತು. ಮೊಮ್ಮಕ್ಕಳು ಬರುವಾಗ ಹಣ್ಣಾಗಲೆಂದು ಆ ಮುದುಕಿ ಅದನ್ನು ಕಡಿಸಿ ತೂಗಿಸಿದ್ದಳು. ಆದರೆ ಇವರು ಅಜ್ಜಿಯ ಮನೆ ಸೇರುವುದಕ್ಕೆ ಎರಡು ದಿನ ಮುಂಚಿತವಾಗಿಯೇ ಅದು ಚೆನ್ನಾಗಿ ಮಾಗಿತ್ತು. ರಸಬಾಳೆಯ ಹಣ್ಣಲ್ಲವೆ? ಮಾಗಿದ ಮೇಲೆ ಗೊನೆಯಲ್ಲಿ ನಿಲ್ಲಲಿಲ್ಲ; ಮಗನ ಮಕ್ಕಳು ತಿನ್ನದೆಯೂ ಕೇಳಲಿಲ್ಲ. ಆದರೂ ಆ ಮುದುಕಿಯು ನಾಲ್ಕು ಹಣ್ಣುಗಳನ್ನು ಎಲ್ಲೋ ಮಡಕೆಯೊಳಗೆ ಅಡಗಿಸಿಟ್ಟಿದ್ದು, ತುಂಬ ತಿಂದಿದ್ದ ಆ ಮಕ್ಕಳ ಕಣ್ಣುತಪ್ಪಿಸಿ ಈ ಮೊಮ್ಮಕ್ಕಳಿಗೆ ಕೊಟ್ಟಳು. ಊರ ಜಾತ್ರೆಯಲ್ಲಿ ಅಂಗಡಿಯೆದುರು ತೂಗಿಸಿದ್ದ ಬಾಳೆಯ ಗೊನೆಗಳನ್ನು ಈ ಮಕ್ಕಳು ಕಂಡಿದ್ದರಲ್ಲದೆ ತಿಂದು ನೋಡಿದವರಲ್ಲ. ಜಾತ್ರೆಗೆ ಹೋದಲ್ಲಿ ಒಂದೆರಡು ಮಂಡಕ್ಕಿಯುಂಡೆ ಚಕ್ಕುಲಿಗಳಿಗಿಂತ ಹೆಚ್ಚಿನದೇನನ್ನೂ ಕೊಂಡುಕೊಡಲಾರದಷ್ಟು ಕಡುಬಡತನ ಆ ಮಕ್ಕಳ ತಂದೆ ತೌಡನಿಗೆ. ಆದುದರಿಂದ ಹಣ್ಣುಹಣ್ಣಾದ ಆ ಬಾಳೆಯ ಹಣ್ಣು ಅಮೃತಪ್ರಾಶನದಂತಾಯಿತು ಅವರಿಗೆ. ಅಜ್ಜಿಯ ಬಳಿ ಕುಳಿತು ಅದರ ಕತೆ ಕೇಳಿದರು. ಅಜ್ಜಿಯು ಹೇಳಿದಳು. ಆ ಉದ್ದದ ಕತೆಯನ್ನು ಗಿಡ್ಡಾಗಿ ಹೇಳುವುದಾದರೆ- ಒಂದು ವರುಷದ ಹಿಂದೆ ಅವರ ಮಾವನೊಂದು ರಸಬಾಳೆಯ ಕಂದನ್ನು ತಂದು ನೆಟ್ಟಿದ್ದ. ಅದು ಗೊನೆ ಹಾಕಿತ್ತು. ಆದರೆ ಆ ಗೊನೆ ಬೇಗ ಹಣ್ಣಾಯಿತು; ಇವರು ಬಂದುದು ತಡವಾಯಿತು. ಈಗ ಆ ಬಾಳೆಯ ನಾಲ್ಕು ಕಂದುಗಳಿವೆ. ಅವೂ ಬೆಳೆದು ಗೊನೆ ಹಾಕುವುವು. ಆಗ ಒಂದು ಗೊನೆಯನ್ನೇ ಅವರಿಗೆ ಅವಳು ಕಳುಹಿಸಿಕೊಡುವಳು… ಇದನ್ನು ಕೇಳಿದ ಆ ಮಕ್ಕಳಲ್ಲಿ ಒಂದು ಯೋಚನೆ ಮಿಂಚಿತು- ತಾವೂ ಅಲ್ಲಿಂದ ಒಂದು ಕಂದನ್ನು ಕೊಂಡುಹೋಗಿ ತಮ್ಮ ಮನೆಯೆದುರು ಮೋರೆ ತೊಳೆವಲ್ಲಿ ನೆಟ್ಟರಾಗದೆ? ಎಂದು. ಎರಡು ಮೂರು ದಿನ ಅದೇ ಹಂಬಲ ಅವರಿಗೆ. ಕೊನೆಗೆ ಮಾವನು ಅವರಿಗೊಂದು ಕಂದು ಕೊಡುತ್ತೇನೆಂದಾಗ ಅವರಿಗಾದ ಆ ಆನಂದ! ಬರೆದು ಬಣ್ಣಿಸಲಾದೀತೆ? ಮುಂದೇನಾಯಿತೆಂಬುದು ಗೊತ್ತೇ ಇದೆಯಲ್ಲ?

ತಮ್ಮ ಗುಡಿಸಲು ಸೇರಿದ ಆ ಮಕ್ಕಳು- ಬೂದ ತುಕ್ರಿಯರು- ಮರುದಿನ ಬೆಳಗ್ಗೆ ಎಲ್ಲರಿಗಿಂತ ಮೊದಲು ಎಚ್ಚತ್ತು ತೌಡನನ್ನು ಬೇಡಿ ಕಾಡಿ ಅದನ್ನು ನೆಡಿಸಿದರು. ತೌಡನು ದಿನಗೂಲಿ ಮಾಡಿ ಸಂಸಾರ ಹೊರುವ ಕಡುಬಡವ. ಆದರೆ ಇರಲಿಕ್ಕೊಂದು ಮಾಡು ಬೇಕಲ್ಲ? ಅದಕ್ಕಾಗಿ ಕೋಟೆಮನೆ ನಾಗಪ್ಪನವರ ನಾಲ್ಕಾರು ಚೋಕು ತೆಂಗಿನ ಪಾಳು ತೋಟದ ಆ ಗುಡಿಸಲಲ್ಲಿ ಇದ್ದ. ಅದಕ್ಕೂ ಆರು ರೂಪಾಯಿ ಗೇಣಿಕೊಟ್ಟು ಗುಡಿಸಲು ಚಾವಣಿ ಮಾಡಿಕೊಳ್ಳಬೇಕಿತ್ತು. ಮೇಲಾಗಿ ಧನಿಯರ ಬಿಟ್ಟಿ ಬೇಗಾರಿಯೆಂತೂ ಇದ್ದದ್ದೇ. ಆ ಜಾಗದಲ್ಲಿ ಏನಾದರೂ ಬಾಳೆ ತರಕಾರಿಗಳನ್ನು ಬೆಳೆಯಿಸಬಹುದೆಂದರೆ ತೌಡನ ಪಾಳುತೋಟವು ನೆರೆಹೊರೆಯ ಆಢ್ಯರ ಆಕಳುಗಳ ಆಹಾರಕ್ಷೇತ್ರ. ಅವನ್ನು ಹಾಗೆಲ್ಲ ಬಿಟ್ಟುಬಿಡಬಾರದೆಂದು ಹೇಳುವ ಅಥವಾ ಹೊಡೆದೋಡಿಸುವ ಎದೆಗಾರಿಕೆಯು ಬಡ ತೌಡನಿಗೆಲ್ಲಿಂದ? ನಾಳೆ ಅವರಲ್ಲಿಯೇ ದುಡಿದು ಎರಡು ಸೇರಕ್ಕಿಯ ಪಥ್ಯ ತರಬೇಕಲ್ಲ ಅವನಿಗೆ? ಅಲ್ಲದೆ ಆಢ್ಯರ ಅವಕೃಪೆಗೆ ಈಡಾಗಿ ಬಡವನು ಅವರೆಡೆಯಲ್ಲಿ ದಿನ ದೂಡಲಾಪನೆ? ಅದರಿಂದಾಗಿ ತೌಡನಾವುದನ್ನೂ ನೆಡುತ್ತಿದ್ದಿಲ್ಲ. ಆದರೆ ಈಗ ಈ ಮಕ್ಕಳ ಕಾಟಕ್ಕಾಗಿ ನೆಟ್ಟ. ನೆಟ್ಟಮೇಲೆ ಕಾಪಾಡಿಕೊಡದಿದ್ದರೆ ಇವರ ಅನುದಿನದ ಗೋಳಾಟ ಅವನು ಮನೆ ಹೊಕ್ಕಾಗಲೆಲ್ಲ ತಪ್ಪುವಂತಿದ್ದಿಲ್ಲ. ಆದುದರಿಂದ ಒಲೆಯೊಟ್ಟುವ ಅನಿವಾರ್ಯ ಅವಶ್ಯಕತೆಗಾಗಿ ಕೂಡಿಟ್ಟ ಕೊತ್ತಳಿಗೆಗಳನ್ನು ಆ ಕಂದಿನ ಸುತ್ತ ನೆಟ್ಟು ಗಟ್ಟಿಮುಟ್ಟಿನ ಬೇಲಿ ಮಾಡಿದ. ಅಷ್ಟಾದ ಮೇಲೆಯೇ ಆ ಮಕ್ಕಳು ಅಂದು ಗಂಜಿಯೂಟಕ್ಕೆ ಒಳಗೆ ಹೋದುದು.
*
ಅಂದಿನಿಂದ ಬೂದ-ತುಕ್ರಿಯರು ಹೊತ್ತಾರೆ ಎದ್ದು ಕಣ್ಣೀರಸೊರಸಿಕೊಳ್ಳುತ್ತ ಹೋಗಿ ಮೊದಲು ನೋಡುವುದು ಆ ಕಂದನ್ನು. ದಿನದಲ್ಲಿ ಅದನ್ನೆಷ್ಟು ಸಲ ನೋಡುತ್ತಿದ್ದರೋ ಲೆಕ್ಕವಿಟ್ಟವರಾರು? ಮೂಸಂಜೆಗೆ ಗುಡಿಸಲು ಸೇರುವ ಮೊದಲೊಮ್ಮೆ ಅದನ್ನು ನೋಡಿಕೊಂಡು ಬರದಿದ್ದರೆ ಅವರಿಗೆ ನಿದ್ದೆ ಹತ್ತದು. ಹೀಗೆ ಅವರು ದಿನ-ದಿನ ನೋಡು-ನೋಡುತ್ತಿದ್ದಂತೆ, ಅದರ ಬುಡದಲ್ಲಿ ಹೋಗಿ ನಿಂತು ಅದರ ಬೆಳವಣಿಗೆಯ ಕುರಿತು ಮಾತುಕತೆಯಾಡುತ್ತಿದ್ದಂತೆ, ಆ ಕಂದು ಸುಳಿಸುಳಿಯಾಗಿ ಬೆಳೆಬೆಳೆದು ಬಾಳೆಯ ಮರವಾಯಿತು. ಬೇಸಿಗೆಯು ಬಂದಾಗ ಬೂದ-ತುಕ್ರಿಯರಿಗೆ ಕುಡಿಕೆ ಹಿಡಿದು ಕೆರೆಯಿಂದ ನೀರು ಹೊತ್ತು ಬಾಳೆಯ ಬುಡಕ್ಕೆ ಸುರಿದಷ್ಟು ಸಾಲದು. ಅದರಿಂದಾಗಿ ಆ ಮಕ್ಕಳ ಮೈಯಿಂದೆಷ್ಟು ಬೆವರು ಸುರಿದಿತ್ತೋ ಅಳೆದವರಾರು?
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಬೇಸಿಗೆಯು ಹೋಗಿ ಮುಂಗಾರು ಮಳೆಯ ಮೋಡವೆದ್ದಿದ್ದ ಅದೊಂದು ರಾತ್ರೆ ಬೂದನೆದ್ದು ಅಳತೊಡಗಿದ- ”ಅಯ್ಯೋ ಗಾಳೀ! ಗಾಳೀ! ನಮ್ಮ ಬಾಳೆ ಮುರಿದುಬಿದ್ದರೆ!” ಎಂದು ಬಿಕ್ಕಿ ಬಿಕ್ಕಿ ಕೂಗಿದ. ತೌಡನೆದ್ದುಹೋಗಿ ಅದಕ್ಕೆ ಸುತ್ತಲೂ ನಾಲ್ಕು ಕೊತ್ತಳಿಗೆಗಳನ್ನು ಊತಕೊಟ್ಟು ಕಟ್ಟಿ ತೋರಿಸಿ ಸಮಾಧಾನಗೊಳಿಸಿದಮೇಲೆ ಹುಡುಗನು ಹೋಗಿ ತಿರುಗಿ ನಿದ್ದೆ ಮಾಡಿದ.
ಒಂದು ದಿನ ತುಕ್ರಿಯು ಬಾಳೆಯ ಬುಡದಲ್ಲಿ ನಿಂತು ಕುಣಿಕುಣಿದು ”ಅಣ್ಣಾ! ಅಣ್ಣಾ!” ಎಂದು ಕೂಗಿದಳು. ಬೂದನು ಓಡಿಹೋಗಿ ನೋಡುತ್ತಾನೆ, ಬಾಳೆಯ ತುದಿಯಲ್ಲಿ ಹೂವಿನ ಮೂತಿ! ದಿನ ಹೋದಂತೆ ಹೂವು ಹೊರಬಂತು; ಬೆರಳು ಬಿಟ್ಟಿತು, ಬೆರಳುಗಳು ಬಲಿಬಲಿತು ತೋರಕಾಯಿಗಳಾದವು. ಬೂದ-ತುಕ್ರಿಯರೊಂದಿಗೆ ಚಿಕ್ಕ ದೂಮನೂ ಹೋಗಿ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದ. ಅದು ಹಣ್ಣಾದಾಗ ಅವನಿಗೂ ಪಾಲ ಕೊಡುವುದಾಗಿ ಅಕ್ಕ ಅಣ್ಣಂದಿರು ಹೇಳುತ್ತಿದ್ದರು. ಅವರು ಹೊತ್ತುತಂದ ಕಂದು; ಅವರಪ್ಪ ನೆಟ್ಟ ಕಂದು; ಅವರು ನೀರೆರೆದು ಬೆಳೆಯಿಸಿದ ಕಂದು; ಅದು ಬಿಟ್ಟ ಗೊನೆಯು ಅವರದು. ಅದು ಹಣ್ಣಾದಾಗ ಅದನ್ನೆಲ್ಲರಿಗೆ ಪಾಲು ಮಾಡಿ ಹಂಚುವವರೂ ಅವರೇ. ಅವರಜ್ಜಿಗೂ ಒಂದು ಪಾಲಿದೆ ಅದರಲ್ಲಿ.
*
“ತೌಡಾ, ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡುವುದೊ? ಅದೇನು ನಿನ್ನ ವರ್ಗದ ತೋಟವೆಂದು ತಿಳಿದೆಯಾ?” ಎಂದು ಗುಡುಗುಡಿಸಿ ನುಡಿದರು ನಾಗಪ್ಪಯ್ಯ. ತೌಡನು ಅವರ ಮೋರೆ ನೋಡದೆ ಕತ್ತು ತಗ್ಗಿಸಿಕೊಂಡೇ ದೀನತೆಯ ಬೀಳುದನಿಯಲ್ಲಿ “ಈ ಮಳೆಗಾಲದ ಬರಗಾಲ ಸಾಗಲಿ! ಕಬ್ಬು ಹೂಡುವ ಆಲಿಯ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ತೀರಿಸುತ್ತೇನೆ” ಎಂದ. ಧನಿಯರು ಏನೇನೋ ಸಿಟ್ಟುಮಾತಾಡಿ ಕೊನೆಗೆ, ”ಯಾವಾಗ ಕೇಳಿದರೂ ಇಂದಿಲ್ಲ ಮುಂದೆ ಎಂದೆನ್ನುವ ನಿನ್ನ ರೋಗ ಇದ್ದೇ ಇದೆ! ಆಗಲಿ, ಆಲಿಯ ಕಾಲದವರೆಗೂ ಕಾದು ಬಿಡುತ್ತೇನೆ” ಎಂದು ಸಮಾಧಾನಕ್ಕೆ ಬಂದು, ”ಆಗ ತೋಟದತ್ತಕಡೆಯಿಂದ ಬರುತಿದ್ದಾಗ ಆ ಬಾಳೆಯ ಗೊನೆಯನ್ನು ನೋಡಿದೆ. ನಾಡದು ಹುಣ್ಣಿಮೆ ನಮ್ಮಲ್ಲೊಂದು ಸತ್ಯನಾರಾಯಣ. ನಾಳೆಯೇ ಅದನ್ನು ಕಡಿದಿಟ್ಟರೆ ಅಂದಿಗೆ ಹಣ್ಣಾದೀತು. ಹುಣ್ಣಿಮೆಯ ಬೆಳಿಗ್ಗೆ ತಂದು ಕೊಟ್ಟುಬಿಡು! ತಿಳಿಯಿತೇ?” ಎಂದರು. ತೌಡನಿಗೆ ಸಿಡಿಲು ಬಡಿದಂತಾಯಿತು! ಅವನೇನು ಹೇಳಿಯಾನು? ಮೌನವಾಗಿದ್ದ. ”ಏನು ಹೇಳಿದ್ದು ಕೇಳಿತೇ?” ಎಂದರು. ತುಸು ಬಿರುಸಿನ ದನಿಯಲ್ಲಿ ಧನಿಯರು. ತೌಡನು ಅಂಜುತ್ತಂಜುತ್ತ ನಾಲಿಗೆ ತಡವರಿಸುತ್ತ, “ಮಕ್ಕಳು ಬಹಳ ಆಶೆಯಿಂದ ಬೆಳೆಸಿದ್ದು. ಕೆಳಗಿನ ಒಂದೆರಡು ಸಣ್ಣ ಹಣಿಗೆಯಾದರೂ ಆ ಮಕ್ಕಳಿಗೆ…” ಎನ್ನುವಷ್ಟರಲ್ಲೇ ಧನಿಯರು, ”ಮಕ್ಕಳಿಗೆ ರಸಬಾಳೆ ಹಣ್ಣೋ, ಮಣ್ಣೋ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈ ಸುಖ ಕೊಡುತ್ತಾನೆ ಸತ್ಯನಾರಾಯಣ! ಮಕ್ಕಳಿಗಿಟ್ಟುಕೊಂಡು ದೇವರಿಗೆ ಕೊಡೋದೇ? ಹೀಗೆಲ್ಲ ಮಾಡೋದ್ರಿಂದ್ಲೇ ನಿತ್ಯ ದರಿದ್ರ ತಪ್ಪೋದಿಲ್ಲ ನಿಮಗೆಲ್ಲ!” ಎನ್ನುತ್ತ ತಿರುಗಿ ಕೆಂಪೇರತೊಡಗಿದರು.
*
ತೌಡನು ಗುಡಿಸಲಿಗೆ ಬಂದ. ನಡೆದ ಸಂಗತಿಯನ್ನೆಲ್ಲ ಹೆಂಡತಿ ದೆಯ್ಯಿಗೆ ಗುಟ್ಟಾಗಿ ಹೇಳಿದ. ಅವಳು ”ಅಯ್ಯೋ ದೇವರೇ, ಮಕ್ಕಳು ಒಂದು ವರ್ಷದಿಂದ ಬೆವರು ಸುರಿದು ನೀರೆರೆದು ಹಣ್ಣು ತಿಂದೇವೆಂದು ಆಶೆ ಮಾಡಿ ಮಾಡಿ ಕಡೆಗೆ….” ಎನ್ನುವಷ್ಟರಲ್ಲೇ ಅವಳಿಗೆ ಕಣ್ಣೀರು ಬಂತು. ಕುತ್ತಿಗೆ ಬಿಗಿಯಿತು. ಮಾತು ಮುಂದುವರಿಯದಂತಾಯಿತು. ಆದರೇನು ಮಾಡುವುದು? ಹಣ್ಣಿನ ಗೊನೆಯು ಹುಣ್ಣಿಮೆಯ ದಿನ ಧನಿಯರ ಅಂಗಳವೇರಲೇಬೇಕು! ತೌಡನು ಗೊನೆಯನ್ನು ಕಡಿದ. ಮಕ್ಕಳು ಸಂತೋಷದಿಂದ ಕುಣಿದಾಡಿದುವು. ಹಲವು ಪ್ರಶ್ನೆಗಳನ್ನು ಕೇಳಿದುವು. ”ನೀವೆಲ್ಲ ರಗಳೆ ಮಾಡಬೇಡಿರಿ ನೋಡೋಣ” ಎಂದೊಂದೇ ಮಾತಿನಿಂದ ತನ್ನ ರಗಳೆಯನ್ನು ನುಂಗಿಕೊಳ್ಳುತ್ತ ಅವರ ಬಾಯಿ ಕಟ್ಟಿಸಿ, ಗೊನೆಯನ್ನು ಒಳಗೆ ತೂಗಹಾಕಿ ಹರಕು ಬಟ್ಟೆ ಸುತ್ತಿದ. ಮಕ್ಕಳು ದಿನದಿನವೂ ಅದು ಹಣ್ಣಾಯಿತೋ ಎಂದು ಹಲವು ಹದಿನೆಂಟು ಸಲ ಎಡೆಯಿದ್ದಲ್ಲಿ ಇಣಿಕಿ ನೋಡುತ್ತಿದ್ದವು. ಹುಣ್ಣಿಮೆಗೆರಡು ದಿನ ಮುಂಚೆ ಬಟ್ಟೆಯ ಹರುಕಿನಡೆಯಲ್ಲಿ ಕಾಯಿಯೊಂದು ಅರಸಿನ ಬಣ್ಣ ತಾಳಿದುದನ್ನು ಬೂದ ಕಂಡು ಹಿರಿಹಿರಿ ಹಿಗ್ಗಿ ತಂದೆಯ ಬಳಿಗೋಡಿ ಹೇಳಿದ. ”ಇಲ್ಲ ಅದಿನ್ನೂ ಚೆನ್ನಾಗಿ ಹಣ್ಣಾಗಿಲ್ಲ. ನೀವು ನಡುನಡುವೆ ಹೀಗೆಲ್ಲ ರಗಳೆ ಮಾಡಿದರೆ ನಾನದನ್ನು ತೆಗೆದು ತೋಡಿಗೆ ಬಿಸಾಡುತ್ತೇನೆ” ಎಂದು ತೌಡನೆಂದುದೇ ತಡ, ಮಕ್ಕಳು ಬೆದರಿ ಮೌನವಾದರು.

ಹುಣ್ಣಿಮೆಯ ದಿನ ಹೊತ್ತಾರೆ ಮಕ್ಕಳೆದ್ದು ನೋಡುತ್ತಾರೆ. ಬಾಳೆಯ ಗೊನೆಯೂ ಇಲ್ಲ! ತಂದೆಯೂ ಇಲ್ಲ! ಗೋಳೋ ಗೋಳು ಮೂರು ಮಕ್ಕಳದು! ದೆಯ್ಯಿಯು ಅವರನ್ನು ಸಮಾಧಾನಗೊಳಿಸುವುದಕ್ಕೆ ಏನೇನೋ ಕಾಳಬೆಕ್ಕು ತಿಂದುಹೋದ ಕತೆ ಹೇಳಿದಳು. ಅದನ್ನು ಕೇಳಿ ಚಿಕ್ಕ ದೂಮನು, ”ಅ-ಆ-ಆ-ಆ ಕಾಲ ಬೆಬ್ಬೆಬ್ಬೆಕ್ಕೂ ಸ-ಸ-ಸತ್ತೇ ಒ-ಒ-ಓಗ್ಲ್ಯೀ!” ಎಂದರೂ, ಬೂದ ತುಕ್ರಿಯರು ಅಂತಹ ಕತೆಯನ್ನು ನಂಬಿ ಸಮಾಧಾನವಾಗುವಂತಿದ್ದಿಲ್ಲ. ಕೊನೆಗೆ ದೆಯ್ಯಿಯು “ಅದನ್ನು ಧನಿಯರಲ್ಲಿಗೆ ಅಪ್ಪ ಕೊಂಡುಹೋದರು. ಅಲ್ಲಿ ಸತ್ನಾರ್ಣದೇವ್ರಿಗೆ ಅದು ಬೇಕಂತೆ!” ಎಂದಳು. “ದೇವ್ರು ಅದನ್ನು ತಿನ್ನುತ್ತಾರೆಯೇ?” ಎಂದು ಬೂದನ ಪ್ರಶ್ನೆ. “ದೇವ್ರಿಗೆ ಅಷ್ಟೂ ಬೇಕಿತ್ತೆ? ನಮಗೆ ಎರಡೆರಡು-ಒಂದೊಂದು ಆದರೂ ಇರಬಾರದಾಗಿತ್ತೆ?” ಎಂದು ತುಕ್ರಿಯ ತರ್ಕ. “ಹೋಗಲಿ, ಆ ಆಲೋಚನೆ ಬಿಡಿ, ಅದರ ಎರಡು ಮೂರು ಕಂದುಗಳಿವೆ. ಯಾವುದಾದರೊಂದು ಬೇಗನೆ ದೊಡ್ಡದಾಗಿ ಗೊನೆ ಹಾಕೀತು. ಅದು ಪೂರಾ ನಿಮಗೇ” ಎನ್ನುತ್ತ ಮಕ್ಕಳ ಆ ಅಳುಮೋರೆಯನ್ನು ನೋಡಲಾರದೆ ಒಳಗೆ ಹೋಗಿಬಿಟ್ಟಳು ತಾಯಿ. ಆದರೆ ಆ ಮಕ್ಕಳು ಮನೆಯಲ್ಲಿ ಏನೋ ಮಹಾವಿಪತ್ತು ಸಂಭವಿಸಿದ್ದಂತೆ ತಲೆಗೊಂದು ಕೈಗೊಟ್ಟು ಜೋಲುಮೋರೆ ಹಾಕಿ ಕಣ್ಣೀರೊರೆಸಿಕೊಳ್ಳುತ್ತ ಜಗಲಿಯಲ್ಲಿ ಕುಳಿತಿದ್ದುವು. ತುಸು ಹೊತ್ತಾದ ಮೇಲೆ ಅದೇನು ಯೋಚನೆ ಹೊಳೆಯಿತೋ ಆ ಬೂದನಿಗೆ- ನೋಡಿ, ಅವನು ಅಂಗಳಕ್ಕೆ ಹಾರಿದ! “ತುಕ್ರೀ, ಬಾ” ಎನ್ನುತ್ತ ಬಾಳೆಯ ಕಂದುಗಳಿರುವೆಡೆಗೆ ಧಾವಿಸುತ್ತಿದ್ದಾನೆ, ತುಕ್ರಿಯೂ ಓಡಿಸೇರಿದ್ದಾಳೆ. ನೋಡಿ, ಬೂದನು ಆ ಕಂದುಗಳನ್ನು ಒಂದೊಂದಾಗಿ ಹಿಡಿಹಿಡಿದು ಬಗ್ಗಿಸಿ, ತಿರುತಿರುವಿ ಮುರಿಯುತ್ತ, “ಇ ಇ ಇ ಇ ಇವು ಗೊನೆ ಹಾಕೋದೂ ಬೇಡ! ಆ ಆ ಆ ಆ ಸತ್ ನಾರ್ಣಾ ತಿ ತಿ ತ್ತಿನ್ನೋದೂ ಬೇಡ!” ಎನ್ನುತ್ತ ಅವನ್ನೆಲ್ಲ ಸೀಳಿ ಸೀಳಿ ಮುರಿಮುರಿದುಹಾಕಿ ಅಲ್ಲೆಲ್ಲ ಕೆಸರೇಳುವಂತೆ ಅವುಗಳ ಮೇಲೆ ತಕತಕ ಕುಣಿಯುತ್ತಿದ್ದಾನೆ, ತುಕ್ರಿಯೂ ಕುಣಿಯುತ್ತಿದ್ದಾಳೆ! ಅದೇನು ಆವೇಶ! ಅದೆಂತಹ ದೃಶ್ಯ!
(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ನಂದಾದೀಪ’, ಕಿರಿಯರ ಪ್ರಪಂಚ, ಉಡುಪಿ, 1938)

ಕೊರಡ್ಕಲ್ಲರ ‘ಧನಿಯರ ಸತ್ಯನಾರಾಯಣ’
ದಕ್ಷಿಣ ಕನ್ನಡ ಜಿಲ್ಲೆಯ ಹೊರಗೆ ಅಷ್ಟೊಂದು ಪರಿಚಿತವಲ್ಲದ ಕತೆಗಾರರ ಹೆಸರುಗಳಲ್ಲಿ ದಿ. ಕೊರಡ್ಕಲ್ ಶ್ರೀನಿವಾಸರಾಯರದೂ (1895-1948) ಒಂದು. ಇವರ “ನಂದಾದೀಪ” (1938) ಮತ್ತು “ಪ್ರೇಮಪ್ರವಾಹ” (1958) ಎಂಬ ಎರಡು ಕಥಾಸಂಗ್ರಹಗಳು ಪ್ರಕಟವಾಗಿವೆ. ಎರಡರಲ್ಲೂ ಸೇರಿ ಹದಿನಾರು ಕತೆಗಳಿವೆ. ಇವುಗಳನ್ನು ಹೊರತುಪಡಿಸಿ ಒಂದು ಕತೆ “ಮಧುವನ” (1935)ದಲ್ಲೂ, ಇನ್ನೊಂದು “ಕಂಡೂ ಕಾಣದ ನೋಟಗಳು” (1941) ಸಂಕಲನದಲ್ಲೂ ಬಂದಿವೆ. ಸಂಗ್ರಹ ರೂಪದಲ್ಲಿ 1938ರಷ್ಟು ತಡವಾಗಿ ಪ್ರಕಟವಾದರೂ ಆ ಮೊದಲೇ ಅವರ ಅನೇಕ ಕತೆಗಳು ಆ ಜಿಲ್ಲೆಯ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನರ ಗಮನವನ್ನು ಸೆಳೆದಿದ್ದವೆಂಬುದಾಗಿ “ಮಧುವನ”ದ ಸಂಪಾದಕರ ಪರಿಚಯದಿಂದ ತಿಳಿದುಬರುತ್ತದೆ. ಸಂಗ್ರಹರೂಪದಲ್ಲಿ ಬಾರದ ಅವರ ಇನ್ನೂ ಅನೇಕ ಕತೆಗಳು ಪತ್ರಿಕೆಗಳಲ್ಲಿಯೇ ಉಳಿದಿರಬೇಕು. ಇವರು ಕತೆಗಳನ್ನು ಬರೆಯಲು ಆರಂಭಿಸಿದ್ದು ಎಂದಿನಿಂದ, ಮೊದಲು ಪ್ರಕಟವಾದದ್ದು ಯಾವಾಗ- ಮೊದಲಾದ ವಿವರಗಳೆಲ್ಲ ಬೆಳಕಿಗೆ ಬರುವದು ಆವಶ್ಯಕವಾಗಿದೆ. (ಈ ಲೇಖಕರ ಬಗ್ಗೆ ನನ್ನ ಗಮನ ಸೆಳೆದು, ”ನಂದಾದೀಪ” ಸಂಕಲನವನ್ನು ಕಳಿಸಿಕೊಟ್ಟು ಉಪಕರಿಸಿದವರು ಗೆಳೆಯ ಶೇಖರ ಇಡ್ಯ ಅವರು.)
ಈ ಎಲ್ಲ ಅಂಕಿ-ಸಂಖ್ಯೆಗಳನ್ನು ಕೂಡಿಸುವದರ ಮುಖ್ಯ ಉದ್ದೇಶವೆಂದರೆ, ನಮ್ಮ ಸಾಹಿತ್ಯದ ಇತಿಹಾಸದ ಹಲವಾರು ದಾಖಲೆಗಳನ್ನು ಇನ್ನುಮೇಲಾದರೂ ಸರಿಪಡಿಸಿ ಇಟ್ಟುಕೊಳ್ಳಬೇಕಾಗಿದೆ. ಉದಾಹರಣೆಗೆ, ಕನ್ನಡದಲ್ಲಿ ಪ್ರಗತಿಶೀಲ ಚಳವಳಿ ಆರಂಭವಾಗಿ ದಲಿತರ ಶೋಷಣೆ, ಶ್ರೀಮಂತರ ಹೃದಯಹೀನತೆ, ಯಾರೋ ದುಡಿದಿದ್ದರ ಫಲವನ್ನು ಇನ್ನಾರೋ ಅನುಭವಿಸುವ ಸಾಮಾಜಿಕ ಅನ್ಯಾಯ (ಒಟ್ಟಿನಲ್ಲಿ ವರ್ಗಸಂಘರ್ಷ) ಮುಂತಾದ ವಿಷಯಗಳನ್ನು ಕುರಿತು ಕತೆಗಳು ಬರತೊಡಗಿದ್ದು 1943ರ ನಂತರ, ಪ್ರಗತಿಶೀಲ ಚಳವಳಿ ಆರಂಭವಾದ ಮೇಲೆ. (ನವೋದಯದ ಅನೇಕ ಕತೆಗಾರರೂ ಬಡತನವನ್ನು ಕುರಿತು ಬರೆದಿದ್ದಾರೆ. ಬಡವರಲ್ಲೂ ಇರುವ ಒಳ್ಳೆಯತನ, ಘನತೆಗಳ ಮೇಲೆ ಅವರ ಲಕ್ಷ್ಯವಿತ್ತು. ಬಡತನದ ದಾರುಣತೆಯ ಕಲ್ಪನೆಯೂ ಅವರಿಗಿತ್ತು. ಆದರೆ ಬಡತನದ ಚಿತ್ರಣದಲ್ಲಿ ವರ್ಗಪ್ರಜ್ಞೆಯ ಪರಿಕಲ್ಪನೆ ಅವರಿಗಿರಲಿಲ್ಲ. ಅದನ್ನು ಮೊದಲು ಪರಿಚಯಿಸಿದವರು. ಪ್ರಗತಿಶೀಲರು. ಆದರೆ ಕೊರಡ್ಕಲ್ ಶ್ರೀನಿವಾಸರಾಯರ ಅನೇಕ ಕತೆಗಳಲ್ಲಿ ಈ ವಸ್ತು ಮತ್ತು ಪ್ರಜ್ಞೆ ಬಹಳ ಮುಂಚೆಯೇ ಕಾಣಿಸಿಕೊಂಡಿರುವದು ಮಹತ್ವದ ವಿಷಯವಾಗಿದೆ. ತಮ್ಮ ಕೆಲವು ಕತೆಗಳಲ್ಲಿ ಅವರು ಸಾಮಾಜಿಕ ಅನಿಷ್ಟಗಳನ್ನು ಕುರಿತು ಬರೆದಿದ್ದಾರೆ. ಆದರೆ ಈ ಅನಿಷ್ಟಗಳಿಗೆ ಅವರು ಸೂಚಿಸುವ ಪರಿಹಾರ ಮಾತ್ರ ಸಾಂಪ್ರದಾಯಿಕವಾದವು. ಈಗಿರುವ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕೆಂಬ ಆಗ್ರಹ ಅವರ ಕತೆಗಳ ಧಾಟಿಯಲ್ಲಿ ಕಾಣುವದಿಲ್ಲ. ಪ್ರಗತಿಶೀಲರ ಆಕ್ರೋಶವೂ ಇವುಗಳಲ್ಲಿಲ್ಲ. ಬದಲಾಗಿ ಈಗಿರುವ ವ್ಯವಸ್ಥೆಯಲ್ಲೇ ಹೆಚ್ಚಿನ ಹೃದಯವಂತಿಕೆಯಿಂದ ಸಮಸ್ಯೆಗಳನ್ನು ಬಿಡಿಸಬಹುದೆಂದು ಅವರು ಭಾವಿಸುತ್ತಾರೆ. ಈ ಪರಿಹಾರಗಳು ಸರಳವಾಗಿವೆ ಎಂಬುದನ್ನಾಗಲಿ ಇದರಿಂದ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಅನ್ಯಾಯ ಸಮಗ್ರವಾಗಿ ತೊಲಗುವದಿಲ್ಲವೆಂಬುದನ್ನಾಗಲಿ ಒತ್ತಿ ಹೇಳಬೇಕಾಗಿಲ್ಲ.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?
ಆದರೆ ಈ ಸಾಂಪ್ರದಾಯಿಕ ಸರಳ ದೃಷ್ಟಿಕೋನದಿಂದ ‘ಧನಿಯರ ಸತ್ಯನಾರಾಯಣ’ ಬಹಳಷ್ಟು ಭಿನ್ನವಾಗಿದೆ. ಇಲ್ಲಿ ಸಮಸ್ಯೆಗೆ ಸರಳ ಪರಿಹಾರವೇನೂ ಸೂಚಿತವಾಗಿಲ್ಲ. ಬದಲಾಗಿ ಸಾಮಾಜಿಕ ಅನ್ಯಾಯವೊಂದರ ಹೃದಯ ಕಲಕುವ ಚಿತ್ರವೊಂದನ್ನು ಅದರ ಉತ್ಕಟ ಸ್ಥಿತಿಯಲ್ಲಿ ತೋರಿಸಿ ಅದರ ಹಿಂದಿನ ಅನ್ಯಾಯದ ಮೇಲೆ ಬೆಳಕು ಚೆಲ್ಲಲಾಗಿದೆ.
ಪ್ರಗತಿಶೀಲ ಕತೆಗಳಲ್ಲಿಯಂತೆ ಇಲ್ಲಿಯೂ ಕೂಡ ಹೃದಯಹೀನ ಶ್ರೀಮಂತಿಕೆ ಮತ್ತು ಮುಗ್ಧ ಬಡತನಗಳ ನಡುವಿನ ವೈದೃಶ್ಯವೇ ಇದೆ. ಆದರೆ ಈ ವೈದೃಶ್ಯ ಸಾಕಷ್ಟು ಸೂಕ್ಷ್ಮವಾಗಿದ್ದು, ಸಂಯಮದ ಬರವಣಿಗೆಯ ಮೂಲಕ ತನ್ನ ಉದ್ದಿಷ್ಟ ಪರಿಣಾಮವನ್ನು ಸಾಧಿಸಿಕೊಳ್ಳುವ ರೀತಿ ಗಮನ ಸೆಳೆಯುತ್ತದೆ.
ಆರಂಭದಿಂದಲೂ ಕತೆ ಇಬ್ಬರು ಚಿಕ್ಕಮಕ್ಕಳು ಕಷ್ಟಪಟ್ಟು ಬಾಳೆಯ ಕಂದನ್ನು ದೂರದಿಂದ ಹೊತ್ತು ತಂದು ಹಚ್ಚಿ ಬೆಳೆಸಿದ್ದನ್ನು ವಿವರವಾಗಿ ಹೇಳುತ್ತ ಹೋಗುತ್ತದೆ. ಮಕ್ಕಳ ಲಕ್ಷ್ಯವೆಲ್ಲ ಮೊದಲಿನಿಂದಲೂ ಆ ಕಂದು ಬೆಳೆದು ದೊಡ್ಡದಾಗಿ ಗೊನೆಬಿಟ್ಟು ಕೊಡುವ ಹಣ್ಣಿನ ರುಚಿಯ ಮೇಲೆಯೇ ಕೇಂದ್ರೀಕೃತವಾಗಿದೆ. ಅಜ್ಜಿಯ ಮನೆಯಲ್ಲಿ ತಿಂದ ಒಂದೆರಡು ಹಣ್ಣುಗಳ ರುಚಿಯೇ ಅವರ ಮನಸ್ಸಿನಲ್ಲಿ ನೆಟ್ಟಿದೆ. ಅಂಥದೊಂದು ಬಾಳೆಯ ಗಿಡವನ್ನು ತಾವೂ ಹಚ್ಚಿ ಬೆಳೆಸಿ ಹಣ್ಣು ಪಡೆಯಬೇಕೆಂಬ ಆಶೆಯ ಉತ್ಕಟತೆಯನ್ನು ಕತೆಯ ಒಂದೊಂದು ವಿವರವೂ ಗಟ್ಟಿಗೊಳಿಸುತ್ತ ಹೋಗುತ್ತದೆ. ಅಜ್ಜಿಯ ಮನೆಯಿಂದ ಬೂದ-ತುಕ್ರಿಯರು ಹೊರಲಾರದ ಕಂದನ್ನು ಹೊತ್ತು ತರುವದು, ತಂದೆ-ತಾಯಿಗಳನ್ನು ಕಾಡಿ ಬೇಡಿ ಹಚ್ಚಿ ಬೆಳೆಸುವದು, ದಿನಾಲು ನೀರು ಹಾಕುವದು, ಮಳೆಗಾಳಿಗೆ ಮುರಿದೀತೆಂದು ನಿದ್ದೆಯಲ್ಲೂ ಆತಂಕಪಡುವದು, ಅದು ಬೆಳೆದಂತೆಲ್ಲ ಸಂಭ್ರಮಗೊಳ್ಳುವದು, ಹೂವು ಹೊಡೆ ಹಿರಿದು ಬೆರಳುಗಳಾಗಿ ಕಾಯಾಗುವ ಹಂತಹಂತದಲ್ಲೂ ಅವರ ನಿರೀಕ್ಷೆ ಸಡಗರಗಳು, ಕಾಯಿ ಮಾಗುವಾಗಿನ ಆತುರ, ತಮ್ಮ ದುಡಿಮೆ ಫಲಕೊಟ್ಟಿತೆಂಬ ಸಂತೋಷ- ಎಲ್ಲಾ ಅವರ ಆಶೆಯ ಉತ್ಕಟತೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಅಂತೆಯೇ ದೇವರ ಪೂಜೆಯ ನೆವದಲ್ಲಿ ಅವರಿಗೆ ಒಂದು ಹಣ್ಣನ್ನೂ ಬಿಡದೆ ಇಡಿಯ ಗೊನೆಯನ್ನೇ ಧನಿಯರು ತರಿಸಿಕೊಂಡಾಗ ಆಗುವ ನಿರಾಶೆಯ ಆಳ ಅಷ್ಟೇ ತೀವ್ರವಾಗಿ ತಟ್ಟುತ್ತದೆ.
ಈ ಬಾಳೆಯ ವ್ಯವಸಾಯದಲ್ಲಿ ಮೂರು ಬಗೆಯ ದೃಷ್ಟಿಕೋನಗಳು ಕಾಣುತ್ತವೆ: ತಾವು ದುಡಿದು ಬೆಳೆದದ್ದೆಲ್ಲ ತಮಗೇ ಎಂದುಕೊಂಡು ನ್ಯಾಯವಾಗಿಯೇ ಅದರ ಫಲವನ್ನು ನಿರೀಕ್ಷಿಸುವ ಚಿಕ್ಕಮಕ್ಕಳ ಮುಗ್ಧ ಉತ್ಸಾಹದ ದೃಷ್ಟಿಕೋನ ಒಂದು ಕಡೆ; ಮಕ್ಕಳ ಉತ್ಸಾಹದಲ್ಲಿ ಅಷ್ಟಾಗಿ ಪಾಲುಗೊಳ್ಳದಿದ್ದರೂ ಅವರ ಆಶೆಯನ್ನು ಮುರಿಯಲಾರದೆ ಅವರಿಗೆ ಸಹಾಯ ಮಾಡುವ, ಆದರೆ ಈ ಜಗತ್ತಿನ ನ್ಯಾಯವೇನೆಂದು ಅರ್ಥಮಾಡಿಕೊಳ್ಳಬಲ್ಲ ಮಕ್ಕಳ ತಂದೆ-ತಾಯಿಗಳದು ಇನ್ನೊಂದು ಕಡೆ; ತನ್ನ ನೆಲದಲ್ಲಿ ಬೆಳೆದದ್ದೆಲ್ಲ ತನ್ನದೇ ಎಂದು ಸರಳವಾಗಿ ಹಕ್ಕು ಸಾಧಿಸಿಕೊಳ್ಳುವ ಧನಿಯದು ಮತ್ತೊಂದು ಕಡೆ.
ಅಷ್ಟು ಆಶೆಯಿಂದ ಬೆಳೆಸಿದ್ದ ಬಾಳೆಯ ಗಿಡ ಧನಿಯರ ಸತ್ಯನಾರಾಯಣನ ಪೂಜೆಗೆಂದು ಹೋದಾಗ ಅದಕ್ಕೆ ಹುಟ್ಟುವ ಪ್ರತಿಭಟನೆಯಲ್ಲೂ ಹಲವು ಸ್ತರಗಳನ್ನು ಕಾಣಬಹುದಾಗಿದೆ. ನಿಜಸ್ಥಿತಿಯನ್ನು ಹೇಳಲಾರದೆ, ಕಾಡುಬೆಕ್ಕೊಂದು ತೆಗೆದುಕೊಂಡು ಹೋಯಿತೆಂದು ತಾಯಿ ಹೇಳಿದಾಗ ಆ ಬೆಕ್ಕನ್ನು ಶಪಿಸುವ ತೀರ ಚಿಕ್ಕ ಮಗು ದೂಮನದು ಗುರಿಗೆ ತೀರಾ ದೂರವಾದ ಪ್ರತಿಭಟನೆ. ತಮಗೆ ಒಂದೂ ಹಣ್ಣು ಬಿಡದೆ ಎಲ್ಲಾ ತಾನೇ ತಿನ್ನಬಯಸುವ ಸತ್ಯನಾರಾಯಣನನ್ನು ಶಪಿಸುವ ತುಸು ದೊಡ್ಡಮಕ್ಕಳದು ಇನ್ನಷ್ಟು ಸಮೀಪದ ಪ್ರತಿಭಟನೆ. ಅನ್ಯಾಯದ ತೀವ್ರತೆ ಈ ಮಕ್ಕಳಿಗೆ ತಾಗುವಷ್ಟು ತೀವ್ರವಾಗಿ ಅವರ ತಂದೆ-ತಾಯಿಗಳಿಗೆ ತಾಗುವದಿಲ್ಲ. ಅವರದು ಈ ಅನ್ಯಾಯಕ್ಕೆ ಆಗಲೇ ಒಗ್ಗಿಹೋಗಿ ಜಡವಾದ ಮನಸ್ಸು. ಮಕ್ಕಳಿಗೆ ಇದರಿಂದಾಗಿ ಆಗುವ ತೀವ್ರ ನಿರಾಶೆಯ ಕಲ್ಪನೆ ಇಬ್ಬರಿಗೂ ಇದೆ. ಅದರಿಂದ ಅವರಿಗೆ ದುಃಖವೂ ಆಗುತ್ತದೆ. ಆ ಗೊನೆಯಿಂದ ಒಂದೆರಡು ಹಣಿಗೆಗಳನ್ನಾದರೂ ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ಆದರೆ ಅವರಲ್ಲಿ ಪ್ರತ್ಯಕ್ಷ ಪ್ರತಿಭಟನೆಯೇನೂ ಇಲ್ಲ. ಧನಿಯರಂತೂ ಒಂದು ವ್ಯವಸ್ಥೆಯ ನಿಷ್ಠುರ ಪ್ರತಿನಿಧಿ. ತಾವು ಬೆಳೆದ ಗೊನೆಯಿಂದ ಒಂದರೆಡು ಹಣಿಗೆಗಳನ್ನು ಉಳಿಸಿಕೊಳ್ಳಬೇಕೆನ್ನುವ ಬಡವರ ಆಸೆ ಕೂಡ ಅವರಿಗೆ ದೇವರಿಗೆ ಮಾಡಿದ ಪಾಪವಾಗಿ ಕಾಣುತ್ತದೆ. ದೇವರ ಭಯ ತೋರಿಸಿ ಎಲ್ಲವನ್ನೂ ತಾವೇ ಕಸಿದುಕೊಳ್ಳುತ್ತಾರೆ.
ಕಥೆಯ ಕೊನೆಯಂತೂ ಬಹಳ ಮಾರ್ಮಿಕವಾಗಿದೆ. ತನ್ನ ಅನಿರೀಕ್ಷಿತತೆಯಿಂದಾಗಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿದೆ. ಅನ್ಯಾಯದ ವಿರುದ್ಧ ಸಂಚಿತವಾದ ನೋವು ರೋಷಗಳೆಲ್ಲ ಒಮ್ಮೆಲೆ ಸ್ಫೋಟಗೊಂಡಂತೆ ಪ್ರಕಟವಾಗುವ ಇಲ್ಲಿಯ ರೀತಿ ನಮ್ಮ ಪ್ರಗತಿಶೀಲ ಕತೆಗಳಲ್ಲಿಯ ಬಂಡಾಯಕ್ಕಿಂತ ಬಹಳ ಭಿನ್ನವಾದುದು, ಮತ್ತು ಅರ್ಥಪೂರ್ಣವಾದುದು. ಇದು ಗುರಿತಪ್ಪಿದ ಬಂಡಾಯವೆಂದು ತೋರಬಹುದಾದರೂ ಒಂದು ಅಸಹಾಯ ಸ್ಥಿತಿಯಲ್ಲಿ ಅತ್ಯಂತ ಸಹಜವಾದ, ಅಷ್ಟೇ ಹೃದಯಸ್ಪರ್ಶಿಯಾದ ಅಭಿವ್ಯಕ್ತಿಯಾಗಿ ಕಾಣುತ್ತದೆ. ಸಾಮಾಜಿಕ ಅನ್ಯಾಯ ಅಪರಿಹಾರ್ಯವಾದ ಸಂದರ್ಭದಲ್ಲಿ ಹತಾಶೆಯಿಂದ ಹುಟ್ಟುವ ರೊಚ್ಚಿನಿಂದಾಗಬಹುದಾದ ವಿನಾಶಕಾರೀ ಪರಿಣಾಮಗಳ ಕಡೆಗೆ ಇದು ಗಮನ ಸೆಳೆಯುತ್ತದೆ.
ಕಥೆ ಇಷ್ಟು ಪರಿಣಾಮಕಾರಿಯಾಗಿರುವುದು ಮತ್ತು ಆಪ್ತವಾಗುವದಕ್ಕೆ ಇಲ್ಲಿ ಅನ್ಯಾಯಕ್ಕೊಳಗಾಗಿರುವ ಪಾತ್ರಗಳು ಚಿಕ್ಕಮಕ್ಕಳಾಗಿರುವದು ಒಂದು ವಿಶೇಷ ಕಾರಣವಾಗಿದೆ. ಪ್ರಗತಿಶೀಲ ಕತೆಗಳಲ್ಲಿ ಅನ್ಯಾಯಕ್ಕೊಳಗಾಗುವ ಪಕ್ಷ ಯಾವಾಗಲೂ ಅಸಹಾಯ ಸಜ್ಜನರದು, ಮುಗ್ಧ ಬಡವರದು. ಇದು ಎಷ್ಟೋ ಸಲ ಉದ್ದೇಶಪೂರ್ವಕವೆನಿಸಿ ಕೃತಕವಾಗಿಬಿಡುತ್ತದೆ. ಆದರೆ ಇಲ್ಲಿ ಅನ್ಯಾಯಕ್ಕೊಳಗಾದವರು ಮಕ್ಕಳಾಗಿರುವದರಿಂದ ಅವರ ಪಕ್ಷದ ನಿಷ್ಪಾಪ ಮುಗ್ಧತೆ ಸಹಜವಾಗಿ ಸ್ಥಾಪಿತವಾಗಿಬಿಡುತ್ತದೆ. ಅದೇ ಕಾರಣಕ್ಕಾಗಿಯೇ ಅನಿವಾರ್ಯವಾದ ಅಸಹಾಯಕತೆ, ಅನಿಯಂತ್ರಿತವಾದ ರೋಷಗಳು ತಮ್ಮ ಉತ್ಕಟ ಸ್ಥಿತಿಯಲ್ಲಿ ಪ್ರಕಟವಾಗಲು ಸಾಧ್ಯವಾಗಿದೆ. ಅದೇ, ಮಕ್ಕಳ ಸ್ಥಳದಲ್ಲಿ ದೊಡ್ಡವರನ್ನಿಟ್ಟರೆ ಅವೇ ಕ್ರಿಯೆ-ಪ್ರತಿಕ್ರಿಯೆಗಳು ಬಾಲಿಶವೆನಿಸಿಬಿಡುತ್ತವೆ, ಕತೆಯ ಕೊನೆಯ ಬಂಡಾಯ ಅಪ್ರಬುದ್ಧವಾಗಿಬಿಡುತ್ತದೆ. ಇಲ್ಲಿ ಮಕ್ಕಳ ಮುಗ್ಧ ದೃಷ್ಟಿಕೋನಕ್ಕೆ ಪೂರಕವಾಗಿ ಅವರ ತಂದೆ-ತಾಯಿಗಳ ದೃಷ್ಟಿಕೋನವೂ ಸೇರಿರುವುದರಿಂದ ಒಟ್ಟು ದೃಷ್ಟಿಕೋನಕ್ಕೆ ಸಂಕೀರ್ಣತೆ ಬಂದಿದೆ. ಸಂವಿಧಾನದ ಅಗತ್ಯವನ್ನು ಅರ್ಥಮಾಡಿಕೊಳ್ಳುವದರಲ್ಲಿ ಮತ್ತು ಸಮಸ್ಯೆಯ ಪರಿಣಾಮಕಾರೀ ಚಿತ್ರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾತ್ರಗಳನ್ನು ಆಯ್ದುಕೊಳ್ಳುವುದರಲ್ಲಿ ಕತೆಗಾರರು ಸಾಕಷ್ಟು ಜಾಣ್ಮೆ ತೋರಿಸಿದ್ದಾರೆ. ಹಾಗೆಯೇ ಸಮಸ್ಯೆಯನ್ನು ಮಾನವೀಯ ಸಂದರ್ಭದ ಮೂಲಕ ಗುರುತಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ಮೇಲುನೋಟಕ್ಕೆ ಕೇವಲ ಚಿಕ್ಕಮಕ್ಕಳ ಸಂಬಂಧದಲ್ಲಿ ನಡೆದ ಒಂದು ಸಣ್ಣ ಘಟನೆಯಂತೆ ಕಂಡರೂ, ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿಯ ಅನ್ಯಾಯವೊಂದರ ವ್ಯಾಪಕತೆಯನ್ನು ಧ್ವನಿಸುವ ಮೂಲಕ ಈ ಕತೆ ಇಂದಿನ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ.
ಕೊರಡ್ಕಲ್ಲರ ಉಳಿದ ಕತೆಗಳು ಈ ಮಟ್ಟದಲ್ಲಿಲ್ಲ.*
*ಈ ಕತೆ ಪ್ರಕಟವಾದ ಮೇಲೆ, ಈ ಕತೆಗೂ ‘ವಾಳ್ಳಕ್ಕುಳಂ’ ಎಂಬ ಹೆಸರಿನ ತಮಿಳು ಕಥನಕವನಕ್ಕೂ ಇರುವ ಸಾಮ್ಯವನ್ನು ಕೆ.ವಿ. ನಾರಾಯಣ ಅವರು ನನ್ನ ಗಮನಕ್ಕೆ ತಂದರು. ಆದರೆ ಇವುಗಳ ನಡುವಿನ ಸಂಬಂಧವನ್ನಾಗಲಿ, ಅವುಗಳ ಪ್ರಕಟಣೆಯ ವರ್ಷಗಳನ್ನಾಗಲಿ ಪರೀಕ್ಷಿಸಲು ನನಗೆ ಸಾಧ್ಯವಾಗಲಿಲ್ಲ. ಆದರೆ ಈಚೆಗೆ ಪ್ರಕಟವಾಗಿರುವ ಬೆಸಗರಹಳ್ಳಿ ರಾಮಣ್ಣ ಅವರ ‘ಚೆಲುವನ ಪರಂಗಿ ಗಿಡಗಳು’ ಎಂಬ ಕತೆಗೂ ಕೊರಡ್ಕಲ್ಲರ ಕತೆಗೂ ಇರುವ ಸಾಮ್ಯ ಮಾತ್ರ ಸ್ಪಷ್ಟವಾಗಿಯೇ ಇದೆ. ಈಚಿನ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಈ ಕತೆಗೆ ವಿಶೇಷ ಮಹತ್ವ ಬಂದಂತಾಗಿದೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)