ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಋಷಿ ವಿಶ್ವಾಮಿತ್ರನು ನಂದನವನದ ಒಂದು ಮೂಲೆಯಲ್ಲಿ, ಕಲ್ಪವೃಕ್ಷದಿಂದ ಸ್ವಲ್ಪ ದೂರವಾಗಿದ್ದು ಅನಾಮಧೇಯವಾಗಿದ್ದ ಮರವೊಂದರ ನೆರಳಿನಲ್ಲಿ ಹಿಂದಕ್ಕೂ ಮುಂದಕ್ಕೂ ಶತಪಥ ತಿರುಗುತ್ತಿದ್ದನು. ನಿಯತೇಂದ್ರಿಯನಾಗಿದ್ದರೂ ಕೂಡ ಬಯಸಿದೊಡನೆ ಬಯಕೆಗಳನ್ನೆಲ್ಲ ನೀಡುವಂತಹ ಮರದ ನೆರಳಿನಲ್ಲಿರುವುದು ಅಪಾಯಕರವೆಂದು ಅವನಿಗೆ ಅನುಭವದಿಂದ ಗೊತ್ತಾಗಿತ್ತು. ಮನಸ್ಸಿನಲ್ಲಿ ಮಿಂಚುವ ಭಾವಚಿಂತಾಪೇಕ್ಷೆಗಳೆಲ್ಲ- ಒಳ್ಳೆಯದು, ಕೆಟ್ಟದ್ದು, ಅನುಕೂಲವಾದದ್ದು, ಪ್ರತಿಕೂಲವಾದದ್ದು- ವಾಸ್ತವವಾಗುವುದಾದರೆ ಗತಿ? ರಾಜರ್ಷಿಯ ಪಟ್ಟದಿಂದ ಬ್ರಹ್ಮರ್ಷಿಯ ಪಟ್ಟಕ್ಕೆ ಏರಿದ್ದರೂ ಆತನು ತನ್ನ ಚಿತ್ತದ ಸಾತ್ವಿಕತೆಯ ವಿಷಯದಲ್ಲಿ ಅತಿ ವಿಶ್ವಾಸವಿಟ್ಟುಕೊಳ್ಳುವಷ್ಟು ಅಹಂಕಾರಿಯಾಗಿರಲಿಲ್ಲ.
ವಿಶ್ವಾಮಿತ್ರನ ಮನಸ್ಸು ಗಂಭೀರ ಚಿಂತಾಮಗ್ನವಾಗಿತ್ತು; ಹಾಗೂ ಕಿಂಚಿದುದ್ವಿಗ್ನವಾಗಿತ್ತು. ದೂರದಲ್ಲಿ ಅಮೋದ ಪ್ರಮೋದಗಳಲ್ಲಿ ಅದ್ದಿ ಮೆರೆಯುತ್ತಿದ್ದ ದೇವವಿಲಾಸಿಗಳೂ ವಿಲಾಸಿನಿಯರೂ ಯಾವ ಕಾರಣಕ್ಕಾಗಿಯೇ ಗಹಗಹಿಸಿ ನಕ್ಕಾಗೊಮ್ಮೆ ಋಷಿ ತಲೆಯೆತ್ತಿ ನೋಡಿದನು. ಹುಬ್ಬುಗಂಟು ಹಾಕಿ, ತುಟಿ ಕಚ್ಚಿಕೊಂಡು ಕ್ರುದ್ಧನಾದನು: ಕೋಟ್ಯಂತರ ಕಾಮನಬಿಲ್ಲುಗಳು ರಾಸಲೀಲೆಯಲ್ಲಿ ತೊಡಗಿದ್ದಂತೆ, ಮೆಲುಗಾಳಿಗೆ ತಲೆದೂಗಿ ಶೋಭಿಸುತ್ತಿದ್ದು ಕಂಪಿಡಿದು ಹೂವು ತುಂಬಿದ್ದ ತರುಲತೆಗಳ ಮಧ್ಯೆ ರಂಭೆ, ಊರ್ವಶಿ, ತಿಲೋತ್ತಮೆ, ಘೃತಾಚಿ, ಮೇನಕೆ ಮೊದಲಾದ ಅಚ್ಚರಸಿಯರೊಡನೆ ಕರಾಲಿಂಗನ ವಿನ್ಯಾಸದಿಂದ ನರ್ತಿಸಿ ಹಾಡುತ್ತಿದ್ದ ಇಂದ್ರಾದಿ ದೇವತೆಗಳನ್ನು ನೋಡಿ ಸಂಯಮಿಯೂ ವೈರಾಗಿಯೂ ಆಗಿದ್ದ ವಿಶ್ವಾಮಿತ್ರನಿಗೆ ಕನಲಿಕೆಯಾಯಿತು. ಆ ಕನಲಿಕೆಯಲ್ಲಿ ಕರುಬಿನ ನೆರಳೂ ಇದ್ದಿರಬಹುದು. ಅದರಲ್ಲಿಯೂ ಮೇನಕೆಯನ್ನು ನೋಡಿ ಮಹಾ ರೋಷವುಂಟಾಯಿತು, ವಿಶ್ವವರಿಯುವಂತೆ ತನ್ನನ್ನು ಅಪಮಾನಕ್ಕೆ ಗುರಿಮಾಡಿದ್ದಳಲ್ಲಾ ಎಂದು! ಆದರೂ ಋಷಿ ಶಪಿಸಲಿಲ್ಲ. ಅಮೃತಪಾನದಿಂದ ಮದೋನ್ಮತ್ತರಾಗಿ ಶೀಲತೆಯನ್ನು ಮೀರಿ ವರ್ತಿಸುತ್ತಿದ್ದ ಸ್ವರ್ಗ ನಿವಾಸಿಗಳನ್ನು ಜುಗುಪ್ಸೆಯಿಂದ ಕಾಣುತ್ತಾ ಮತ್ತೆ ತಲೆ ಬಗ್ಗಿಸಿ ಶತಪಥ ತಿರುಗತೊಡಗಿದ್ದನು.
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
“ಏನು ಸ್ವರ್ಗವೊ ಏನೊ? ಪಡಖಾನೆಗಿಂತಲೂ ಕಡೆಯಾಗಿ ಹೋಗಿದೆ! ನರಕದಲ್ಲಿಯಾದರೂ ಯಾತನೆಯ ಗಾಂಭೀರ್ಯವಿರುತ್ತದೆ. ಇಲ್ಲಿಯ ಲಘುತ್ವಕ್ಕೊ ಇತಿಯಿಲ್ಲ, ಮಿತಿಯಿಲ್ಲ. ತಿಂದುಂಡು ಮೆರೆಯುವುದು, ತಪಸ್ವಿಗಳನ್ನು ಕೆಡಿಸುವುದು, ದಾನವರೊಡನೆ ಕಾದು ಸೋತೋಡಿ ತ್ರಿಮೂರ್ತಿಗಳನ್ನು ಮರೆಹೋಗುವುದು- ಈ ಮಹತ್ಕಾರ್ಯಗಳಲ್ಲಿಯೆ ಇವರ ಬಾಳೆಲ್ಲ ಪರ್ಯವಸಾನವಾಗುತ್ತದೆ- ಅದೂ ಕೂಡ ಇಲ್ಲ; ಚಿರಂಜೀವಿಗಳಿಗೆ ಪರ್ಯವಸಾನವೆಲ್ಲಿಂದ?”
ಇಂತು ಋಷಿ ಆಲೋಚಿಸಿ ಕನಿಕರದಿಂದ ಕಿರುನಗೆ ನಗುತ್ತಿದ್ದಾಗಲೆ ಆ ದೇವಾಪ್ಸರೆಯರ ನೃತ್ಯವನ್ನೂ ಮೀರಿ ಆ ಅಮರ ಗಾನದ ಘೋಷವನ್ನೂ ಮೀರಿ ಸುದೀರ್ಘವಾದ ಅತಿ ಕ್ಲೇಶಯುತವಾದ ಎದೆಯದುರಿಸುವಂತಹ ನರಳುದನಿಯೊಂದು ನಂದನದ ನೆಲವನ್ನೆ ಬಿರಿದು ಮೂಡಿತೊ ಎಂಬಂತೆ ಕೇಳಿಬಂದಿತು!
ಋಷಿ ಸಿಡಿಲೆರಗಿದವನಂತೆ ಬೆಚ್ಚಿಬಿದ್ದು ಬಾಯ್ದೆರೆದು ನಡುಗಿ ನಿಂತು ”ಮತ್ತೆ? ಅದೇ ನರಳುದನಿ!” ಎಂದು ನಿಡುಸುಯ್ದನು.
ಆ ನರಳುದನಿ ಮಜಾ ಮಾಡುತ್ತಿದ್ದ ದೇವತೆಗಳಿಗೆ ಒಂದಿನಿತೂ ಕೇಳಿಸಿರಲಿಲ್ಲ. ಅವರ ಮಾನರಹಿತ ಪಾನಲೀಲೆ ನಿರಾತಂಕವಾಗಿ ಸಾಗಿತ್ತು!
ಆ ನರಳುದನಿ ವಿಶ್ವಾಮಿತ್ರನನ್ನು ಬಹು ದಿನಗಳಿಂದಲೂ ಹಿಂಬಾಲಿಸುತ್ತಿತ್ತು. ಎಲ್ಲಿರಲಿ, ಎಷ್ಟು ಹೊತ್ತಾಗಿರಲಿ, ಏನೇ ಮಾಡುತ್ತಿರಲಿ, ಅದು ಹಠಾತ್ತಾಗಿ ಕಿವಿಗೆ ಬಿದ್ದು ಸ್ಥಿತಪ್ರಜ್ಞನನ್ನೂ ಅಸ್ಥಿರವಾಗಿ ಮಾಡುತ್ತಿತ್ತು. ಕೈಲಾಸಕ್ಕೆ ಹೋಗಿದ್ದಾಗ ಅಲ್ಲಿಯೂ ಕೇಳಿಸಿತ್ತು. ಹಾಗೆಯೇ ವೈಕುಂಠದಲ್ಲಿ; ಹಾಗೆಯ ಸತ್ಯಲೋಕದಲ್ಲಿ. ನರಕಕ್ಕೆ ಸಂಚಾರಾರ್ಥವಾಗಿ ಹೋಗಿದ್ದಾಗಲೂ ಅಲ್ಲಿಯ ಗೋಳಾಟವನ್ನು ಮೀರಿ ಕೇಳಿಸಿತ್ತು. ರಹಸ್ಯವಾದ ಅನಿರ್ದಿಷ್ಟವಾದ ಆ ಆರ್ತನಾದ.
ವಿಶ್ವಾಮಿತ್ರನು ಅದರ ಮೂಲವನ್ನು ಅರಿಯಲು ಪ್ರಯತ್ನ ಮಾಡಿದ್ದರೂ ಫಲಕಾರಿಯಾಗಿರಲಿಲ್ಲ. ವೈಕುಂಠದಲ್ಲಿ ವಸಿಷ್ಠನನ್ನು ವಿಚಾರಿಸಿದಾಗ ಅವನು ತನಗೆ ಆ ನರಳು ಕೇಳಿಸುತ್ತಿಲ್ಲವೆಂದೂ, ಅದು ವಿಶ್ವಾಮಿತ್ರನ ಮನೋಭ್ರಾಂತಿ ಜನ್ಯವಾಗಿರಬೇಕೆಂದೂ ಹೇಳಿ, ಅದರ ಪರಿಹಾರ್ಥವಾಗಿ ಒಂದು ಯಜ್ಞವನ್ನು ನೆರವೇರಿಸುವಂತೆ ಬುದ್ಧಿ ಹೇಳಿದನು. ಆದರೆ ವಿಶ್ವಾಮಿತ್ರನಿಗೆ ಹಳೆಯ ಕಂದಾಚಾರಗಳಲ್ಲಿ ನಂಬುಗೆ ತಪ್ಪಿಹೋಗಿತ್ತಾದ್ದರಿಂದ ವಸಿಷ್ಠನ ಗೊಡ್ಡು ಬುದ್ಧಿವಾದಕ್ಕೆ ಶರಣಾಗಿರಲಿಲ್ಲ.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ವಿಶ್ವಾಮಿತ್ರನು ಆಲೋಚಿಸುತ್ತಾ ತಲೆಯೆತ್ತಿ ನೋಡಿದಾಗ ಪರಶುರಾಮನು ತಾನಿದ್ದಲ್ಲಿಗೆ ಬರುತ್ತಿದ್ದುದನ್ನು ಕಂಡನು. ರೇಣುಕಾತನಯನ ಮುಖದಲ್ಲಿಯೂ ಮೋಡ ಕವಿದಂತಿತ್ತು. ಅವಸರವಾಗಿ ಬಳಿಗೆ ಬಂದನು.
“ಕುಶಿಕತನಯಾ, ನಿನಗೊಂದು ನರಳುದನಿ ಕೇಳಿಸಿತೆ?” ಎಂದು ವಿಶ್ವಾಮಿತ್ರನ ಹೆಗಲಮೇಲೆ ಬಲಗೈಯಿಟ್ಟು ಪ್ರಶ್ನಿಸಿದನು.
ವಿಶ್ವಾಮಿತ್ರನು ಪರಶುರಾಮನಿಗೆ ತನಗೆ ಅದುವರೆಗೆ ಆಗಿದ್ದ ಅನುಭವಗಳನ್ನೆಲ್ಲಾ ಹೇಳಿದನು. ಪರಶುರಾಮನೂ ತನಗೂ ಅದೇ ಅನುಭವಗಳಾದುದನ್ನು ತಿಳಿಸಿ, ಅದಕ್ಕೆ ಕಾರಣವನ್ನು ತಿಳಿಯಲು ತ್ರಿಭುವನ ಸಂಚಾರಕ್ಕೆ ಹೊರಟಿರುವುದಾಗಿಯೂ ಹೇಳಿದನು.
ಅವರು ಮಾತನಾಡುತ್ತಿದ್ದಾಗಲೆ ಮತ್ತೆ ದೇವಾಪ್ಸರೆಯರ ಆನಂದ ನಿನಾದಗಳನ್ನೆಲ್ಲಾ ನುಂಗಿ ಮೀರಿ ಆ ನರಳು, ನೆತ್ತರು ಹೆಪ್ಪುಗಟ್ಟುವಂತೆ, ಕೇಳಿಸಿತು. ಋಷಿಗಳಿಬ್ಬರೂ ದಿಗ್ಭ್ರಾಂತರಾಗಿ ಗದಗದನೆ ನಡುಗುತ್ತಾ ನಿಂತರು! ಯಾವನಾದರೊಬ್ಬನನ್ನು ಮುಳ್ಳಿನ ಹಾಸಗೆಯ ಮೇಲೆ ಅಂಗಾತನೆ ಮಲಗಿಸಿ, ಎದೆಯ ಮೇಲೆ ಹೆಬ್ಬಂಡೆಯನ್ನು ಬಹುಕಾಲದವರೆಗೂ ಹೇರಿ, ಮಣಭಾರದ ಸುತ್ತಿಗೆಯಿಂದ ಬೀಸಿ ಬೀಸಿ ಹೊಡೆದರೆ, ಅವನು ಹೇಗೆ ನರಳಬಹುದೋ ಹಾಗಿದ್ದಿತು ಆ ಬೀಭತ್ಸಕರವಾದ ನರಳು!
ವಿಶ್ವಾಮಿತ್ರ ಪರಶುರಾಮರ ಕಾಲುಗಳ ನಡುಕವಿನ್ನೂ ಇಳಿದಿರಲಿಲ್ಲ. ಅಷ್ಟರಲ್ಲಿ ನಾರದನೂ ಲೋಕಾಭಿರಾಮವಾಗಿ ಹರಿಕೀರ್ತನೆ ಮಾಡುತ್ತಾ ಆ ಮಾರ್ಗವಾಗಿ ವೈಕುಂಠದ ಕಡೆಗೆ ಹೋಗುತ್ತಿದ್ದನು. ಋಷಿಗಳಿಬ್ಬರೂ ಬೇಗ ಬೇಗನೆ ತ್ರಿಲೋಕ ಸಂಚಾರಿಯ ಬಳಿಗೆ ನಡೆದು ತಮ್ಮ ಅನುಭವದ ಕಾರಣದ ವಿಚಾರವಾಗಿ ಪ್ರಶ್ನಿಸಿದರು. ನಾರದನ ಮುಖದಲ್ಲಿ ಕಿರುನಗೆಯೂ ಮಿಂಚಿತು; ಕಣ್ಣುಗಳಲ್ಲಿ ನೀರೂ ಸುರಿದವು. ಆ ಪರಸ್ಪರ ವಿರುದ್ಧ ಭಾವದ ಘಟನೆಗಳನ್ನು ಕಂಡು ವಿಶ್ವಾಮಿತ್ರ ಪರಶುರಾಮರು ಬೆಕ್ಕಸಪಡುತ್ತಿರಲು “ಆ ನರಳುದನಿ ಬಹುಕಾಲದಿಂದಲೂ ನನಗೆ ಕೇಳಿಸುತ್ತಿದೆ! ಕೇಳಿದಾಗಲೆಲ್ಲ ನನ್ನೆದೆ ನಡುಗುತ್ತದೆ! ಜೀವ ಹಿಂಡಿದಂತಾಗುತ್ತದೆ. ಅದಕ್ಕೆ ಕಾರಣ ನನಗೂ ಸರಿಯಾಗಿ ಗೊತ್ತಿಲ್ಲ. ಅದು ಬರುವುದಂತೂ ಭೂಲೋಕದಿಂದ ಎಂಬುದು ಚೆನ್ನಾಗಿ ಗೊತ್ತು” ಎಂದೊರೆದು ದೇವರ್ಷಿ ಗಾನಗೈಯುತ್ತ ಹೊರಟುಹೋದನು. ಬ್ರಹ್ಮರ್ಷಿಗಳಿಬ್ಬರೂ ಭೂಲೋಕದ ಕಡೆಗೆ ವೇಗವಾಗಿ ಸಾಗಿದರು.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಭೂಮಿಯನ್ನು ಸಮೀಪಿಸುತ್ತಿದ್ದಾಗಲೆ ವಿಶ್ವಾಮಿತ್ರ ಪರಶುರಾಮರಿಬ್ಬರೂ ದಂಗುಬಡಿದು ಹೋದರು. ಗುರುತಿಸಲಸಾಧ್ಯವಾಗುವಷ್ಟು ವ್ಯತ್ಯಾಸ ಕಂಡುಬಂದಿತು. ಹಿಂದೆ ಅವರಿದ್ದ ಕಾಲದ ಭೂಮಿಗೂ ಈಗಿನ ಕಾಲದ ಭೂಮಿಗೂ, ನಾಗರಿಕತೆ ಮತ್ತು ಸಂಸ್ಕೃತಿಗಳೊಡನೆ ಅವುಗಳನ್ನು ಕ್ಷಣಮಾತ್ರದಲ್ಲಿ ಬೇಕಾದರೂ ಹಾಳುಮಾಡಿ ಬಿಡುವ ಅನಾಗರಿಕತೆ ಮತ್ತು ಅಸಂಸ್ಕೃತಿಗಳೂ, ಜೀವವನ್ನು ಸಂರಕ್ಷಿಸುವ ವೈದ್ಯ ವಿದ್ಯೆಯೊಡನೆ ರೋಗಕಾರಿಗಳಾದ ದುಷ್ಟ ಪದ್ಧತಿಗಳೂ, ಸಿರಿಯೊಡನೆ ಬಡತನವೂ, ರೈಲು, ಮೋಟಾರು, ವಿಮಾನ, ಅಲೆಯಂಚಿ, ವಿದ್ಯುಚ್ಛಕ್ತಿ, ಬಂದೂಕ, ಬಾಂಬು, ಕಾಗದ, ಮುದ್ರಾಯಂತ್ರ, ಇತ್ಯಾದಿ ಇತ್ಯಾದಿ ಇತ್ಯಾದಿಗಳನ್ನು ಕಾಣುತ್ತಾ ಹೊಗಳುತ್ತಾ ವಿಮರ್ಶಿಸುತ್ತಾ ನವೀನ ನರವೇಷದಿಂದ ದೊಡ್ಡ ನಗರವೊಂದಕ್ಕೆ ಬಂದಿಳಿದರು.
ಯಂತ್ರ ವಾಹನಗಳ ಸಂಚಾರ, ಮನುಷ್ಯರ ಓಡಾಟ, ವ್ಯಾಪಾರದ ಗಲಿಬಿಲಿ, ಹೋಟೆಲುಗಳ ನೂಕು ನುಗ್ಗಲು, ವಿದ್ಯುಚ್ಛಕ್ತಿಯ ತಂತಿಗಳ ಹಾಸುಹೊಕ್ಕು ಮತ್ತು ಕಂಬಗಳ ಕಿಕ್ಕಿರಿತ, ಚಿತ್ರ-ವಿಚಿತ್ರ ಪ್ರಕಟನೆಗಳ ಪ್ರದರ್ಶನ, ಮದ್ಯಪಾನನಿರೋಧದ ಆಫೀಸಿನ ಹಿಂದುಗಡೆ ಸೇಂದಿಯಂಗಡಿ, ಪೊಲೀಸು ಠಾಣೆಯ ಹಿಂಭಾಗದ ಮನೆಯ ಉಪ್ಪರಿಗೆಯಲ್ಲಿ ಜೂಜಿನಮನೆ, ಗಲ್ಲಿಯಲ್ಲಿ ಯಾರೂ ಅಸಹ್ಯ ಮಾಡಬಾರದು ಎಂದು ಬರೆದಿದ್ದ ಬೋರ್ಡಿನ ಕೆಳಗೇ ಸಹಿಸಲಸಾಧ್ಯವಾದ ದುರ್ಗಂಧ, ಸಿನಿಮಾ, ನಾಟಕಶಾಲೆ, ಕಾರಖಾನೆ, ಸ್ಕೂಲು, ಕಲಾಶಾಲೆ, ಇತ್ಯಾದಿ ಇತ್ಯಾದಿಗಳನ್ನೆಲ್ಲಾ ಆಶ್ಚರ್ಯ ಕುತೂಹಲ ಜುಗುಪ್ಸೆ ಮತ್ತು ಹರ್ಷಗಳಿಂದ ಸಮೀಕ್ಷಿಸುತ್ತಾ ನರಳುದನಿಗೆ ಮೂಲವಾದ ಕಾರಣವನ್ನರಸಿದರು.
ಅರಸುತ್ತಾ ಒಂದು ದೇವಾಲಯಕ್ಕೆ ಹೋದರು. ಅಲ್ಲಿ ಪೂಜಾರಿ, ಗುಡಿಯಲ್ಲಿ ದೇವರಿಲ್ಲವೆಂಬ ದೃಢ ನಂಬಿಕೆಯಿಂದ ಕುಳಿತು, ಪೂಜೆಗೆ ಬಂದಿದ್ದವರಿಂದ ಹಣ ಸುಲಿಯುತ್ತಿದ್ದುದನ್ನೂ, ಅಲ್ಲಿಗೆ ಬಂದಿದ್ದ ಭಕ್ತರ ವ್ಯಾಪಾರ ಬುದ್ಧಿಯನ್ನೂ ನೋಡಿ ಋಷಿಗಳಿಬ್ಬರಿಗೂ ನಗು ಬಂದಿತು.
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ವಿಶ್ವಾಮಿತ್ರನು ಪರಶುರಾಮನನ್ನು ಕುರಿತು “ರೇಣುಕಾತನಯಾ, ನೋಡಿದೆಯಾ, ಈ ಪುರೋಹಿತ ವರ್ಗದವರು ಅಂದಿದ್ದಂತೆಯೆ ಇಂದೂ ಇದ್ದಾರಲ್ಲಾ! ಪ್ರಪಂಚ ಇಷ್ಟು ಬದಲಾಯಿಸಿದ್ದರೂ ಅವರು ಮಾತ್ರ ‘ಸ್ಥಾಣುರಚಲೋಯಂ’ ಆಗಿಬಿಟ್ಟಿದ್ದಾರೆ” ಎಂದನು.
ಪರಶುರಾಮನು ”ಪಾಪ, ಪುರೋಹಿತರೇನು ಮಾಡಿಯಾರು? ಆಗಿನ ಕಾಲದ ದೊರೆಗಳಿಗನುಗುಣವಾಗಿ ಆಗಿನ ಪುರೋಹಿತರಿದ್ದರು; ಈಗಿನ ಕಾಲದ ದೊರೆಗಳಿಗನುಸಾರವಾಗಿ ಈಗಿನ ಪುರೋಹಿತರಿದ್ದಾರೆ” ಎಂದು ಕ್ಷತ್ರಿಯರ ಮೇಲೆಯೆ ದೂರನ್ನು ಹೊರಿಸಿದನು.
ಇನ್ನೊಂದು ಕಡೆ ಒಂದು ಮಂದಿರದಲ್ಲಿ ಜನರು ಕಿಕ್ಕಿರಿದಿದ್ದುದನ್ನು ಕಂಡು, ಅಲ್ಲಿಗೆ ಹೋಗಿ ನೋಡಲಾಗಿ, ಹರಿಕಥೆಯಾಗುತ್ತಿತ್ತು. ಆ ದಾಸನು ಭಗವಂತನ ಕರುಣೆಯನ್ನು ಕುರಿತು ಕೇಳುತ್ತಿದ್ದವರ ಕಣ್ಣುಗಳಲ್ಲಿ ನೀರು ಬರುವಂತೆ ಮಾಡುತ್ತಿದ್ದನು. ಋಷಿಗಳಿಬ್ಬರೂ ತುಸು ಹೊತ್ತು ಕೇಳುತ್ತಾ ನಿಂತಿದ್ದರು. ಅಷ್ಟರಲ್ಲಿಯೆ ಆ ದಾಸನು ತಪಸ್ಸಿನ ಮಹಿಮೆಯನ್ನು ಕುರಿತು ಹೇಳುತ್ತಾ ಪರಶುರಾಮ ವಿಶ್ವಾಮಿತ್ರರ ಕಥೆಗಳನ್ನು ಪ್ರಾರಂಭಿಸಿಬಿಟ್ಟನು. ತಮಗೇ ಅಷ್ಟು ನೂತನವಾಗಿದ್ದ ಆ ಕಥೆಗಳನ್ನು ಋಷಿಗಳಿಬ್ಬರೂ ಬಾಯಿಬಿಟ್ಟುಕೊಂಡು ಕೇಳಿದರು. ಅವರ ಮಹಿಮೆ ಅವರಿಗೇ ಗೊತ್ತಿರಲಿಲ್ಲ!
ಪರಶುರಾಮನು ”ಆ ದಾಸನು ಯಾವ ವಿಶ್ವಾಮಿತ್ರನನ್ನು ಕುರಿತು ಮಾತನಾಡುತ್ತಿರುವುದು, ಕುಶಿಕತನಯಾ?” ಎಂದು ನಗುತ್ತಾ ಕೇಳಿದನು.
ವಿಶ್ವಾಮಿತ್ರನು ”ಅವನು ನನ್ನನ್ನಾಗಲಿ ನಿನ್ನನ್ನಾಗಲಿ ಕುರಿತು ಮಾತಾಡುತ್ತಿಲ್ಲ, ಪುರಾಣ ಹೇಳುತ್ತಿದ್ದಾನೆ!” ಎಂದನು.
ಮತ್ತೊಂದೆಡೆ ದೊಡ್ಡದೊಂಡು ಸಭೆ ಸೇರಿದ್ದಿತು. ಬಾಗಿಲಲ್ಲಿ ಬಣ್ಣದ ಬಟ್ಟೆಯ ಬಿಚ್ಚುಗತ್ತಿಯ ಸಿಪಾಯಿಗಳು ನಿಂತಿದ್ದರು. ಜರಿಯ ಪೇಟದ, ಕ್ಯಾಪಿನ, ಹ್ಯಾಟಿನ, ಬೂಟ್ಸಿನ, ನಿಲುವಂಗಿಯ, ಕುಳ್ಳಂಗಿಯ, ತರತರದ ವೇಷದವರು ಅಲ್ಲಿಗೆ ಹೋಗುತ್ತಿದ್ದುದನ್ನು ಕಂಡು ಋಷಿಗಳಿಬ್ಬರೂ ಅವರಂತೆಯೆ ಕಾಣಿಸಿಕೊಂಡು ಒಳಗೆ ಹೋದರು. ಎಲ್ಲರೂ ಸುಪ್ರಹೃಷ್ಟರಾಗಿ ಸಾಲಂಕೃತರಾಗಿ ಸಂತೃಪ್ತರಾಗಿ ಒಬ್ಬರನ್ನೊಬ್ಬರು ಹಸ್ತಲಾಘವಗಳಿಂದ ಪ್ರಶಂಸಿಸುತ್ತಾ ಪೀಠಗಳನ್ನು ಅಲಂಕರಿಸಿದ ಮೇಲೆ ನರ್ತಕಿಯೊಬ್ಬಳು ರಂಗಕ್ಕೆ ಬಂದು ಕುಣಿಯಲಾರಂಭಿಸಿದಳು. ಋಷಿಗಳಿಬ್ಬರೂ ಕಾರಣಗಳನ್ನು ಕಲ್ಪಿಸಿಕೊಂಡು ಅಲ್ಲಿಂದೆದ್ದು ಹೊರಗೆ ಹೋದರು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಎಲ್ಲೆಲ್ಲಿಗೆ ಹೋದರೂ ನರಳುದನಿಯ ವಿಚಾರವಾಗಿ ಯಾರೊಬ್ಬರೂ ಮಾತಾಡುತ್ತಿರಲಿಲ್ಲ. ಯಾರಿಗೂ ಅದು ಕೇಳಿಸುತ್ತಿದ್ದಂತೆಯೇ ತೋರಲಿಲ್ಲ. ಕೆಲವೆಡೆಗಳಲ್ಲಿ ಸನ್ನಿವೇಶಗಳು ಹೇಗಿದ್ದುವೆಂದರೆ, ಋಷಿಗಳಿಬ್ಬರಿಗೂ ತಾವು ಭೂಮಿಗೆ ಬಂದಿದ್ದ ಉದ್ದೇಶವೇ ಮರೆತು ಹೋಗುವಂತಿತ್ತು.
ನಗರದಲ್ಲಿ ಹುಡುಕಿ ಹುಡುಕಿ ಸಾಕಾಗಿ ಅಲ್ಲಿಂದ ಹೊರಗೆ ಹೊರಟರು. ಪಟ್ಟಣದ ಅಟ್ಟಹಾಸದ ಮಹಾ ನಿನಾದವು ಕಿವಿಮರೆಯಾದೊಡನೆ ಆ ಭೀಕರವಾದ ನರಳುದನಿ ಮತ್ತೆ ಸ್ಪಷ್ಟವಾಗಿ ಕೇಳಿಸತೊಡಗಿ, ಅವರಿಬ್ಬರೂ ತಲ್ಲಣಿಸಿದರು. ಮುಂದುವರಿದರು. ಮುಂದುವರಿದಂತೆಲ್ಲಾ ಅದು ಇನ್ನೂ ಸಮೀಪಗತವಾಯಿತು. ಅರಣ್ಯ ಪ್ರಾಂತವೂ ಪ್ರಾರಂಭವಾಗಿ ಅದರಲ್ಲಿ ಬಹುದೂರ ನಡೆದರು. ಅದೂ ನಿರ್ಜನವಾಗಿತ್ತು. ಮನುಷ್ಯವಾಸದ ಗುರುತು ಎಲ್ಲಿಯೂ ಕಾಣಬರಲಿಲ್ಲ. ಬರಬರುತ್ತಾ ಕಾಡು ಇನ್ನೂ ದಟ್ಟವಾಗಿ ಬೆಟ್ಟವೇರಿ ಇಳಿದಿತ್ತು. ಬೆಟ್ಟದ ನೆತ್ತಿಗೆ ಸೇರಿದೊಡನೆ ಕೆಳಗಡೆಯ ಕಣಿವೆಯಿಂದ ಕೇಳಿ ಬಂದಂತಾಯಿತು- ಆ ಅತ್ಯಂತ ಯಾತನಾಕ್ಲಿಷ್ಟವಾದ ಆರ್ತನಾದ. ಋಷಿಗಳಿಬ್ಬರೂ ಮಹಾ ಭೀತಿಯಿಂದ ಒಬ್ಬರನ್ನೊಬ್ಬರು ಹಿಡಿದುಕೊಂಡು ಕಣಿವೆಗಿಳಿದರು.
ಅಲ್ಲಿದ್ದ ಒಂದು ಸಣ್ಣ ಗದ್ದೆಯ ಕೋಗಿನ ತುದಿಯಲ್ಲಿ ಒಂದು ಹುಲ್ಲು ಜೋಪಡಿ ಕಣ್ಣಿಗೆ ಬಿದ್ದಿತು. ಆ ಗುಡಿಸಿಲಿನಿಂದ ಬರುತ್ತಿತ್ತು- ಸತ್ಯಲೋಕ ಕೈಲಾಸ ವೈಕುಂಠಗಳವರೆಗೂ ಏರಿ ವಿಶ್ವವ್ಯಾಪಿಯಾಗಿದ್ದ ಆ ಭಯಂಕರವಾದ ನರಳುದನಿ! ಋಷಿಗಳು ಸಾಮಾನ್ಯ ಮನುಷ್ಯವೇಷದಿಂದ ಅಲ್ಲಿಗೆ ನಡೆದರು.
ಗುಡಿಸಿಲಿನ ಹೊರಗಡೆ ಮನುಷ್ಯರಾರೂ ಕಾಣಿಸಲಿಲ್ಲ. ಬೂದಿಗುಡ್ಡೆಯಲ್ಲಿ ಮಲಗಿದ್ದ ಒಂದು ಬಡಕಲು ನಾಯಿ ಮಾತ್ರ ಒಂದೆರಡು ಸೊಲ್ಲು ಕೂಗಿ ದಣಿದು ತಟಸ್ಥವಾಯಿತು. ಒಂದು ಹೇಂಟೆ ತನ್ನ ಹೂಮರಿಗಳೊಡನೆ ಕೊಳಚೆಯಲ್ಲಿ ಕೆಸರು ಕೆದರುತ್ತಿತ್ತು. ಸುತ್ತಲೂ ಅನಂತಾರಣ್ಯಗಳು ಗಗನಚುಂಬಿಗಳಾಗಿದ್ದ ಗಿರಿಶ್ರೇಣಿಗಳನ್ನಡರಿ ಭೀಮವಾಗಿದ್ದು ನೀರವತೆಯನ್ನೂ ಏಕಾಂತತೆಯನ್ನೂ ಹೆಚ್ಚಿಸುತ್ತಿದ್ದವು. ಬಿಸಿಲು ಬೆಂಕಿಮಳೆಗರೆಯುತ್ತಿತ್ತು. ಆ ನೀರವತೆಯಲ್ಲಿ ಒಳಗಡೆಯಿಂದ ಕೇಳಿಬರುತ್ತಿದ್ದ ನರಳು ಭೀಷ್ಮವಾಗಿತ್ತು.
ವಿಶ್ವಾಮಿತ್ರನು ಗುಡಿಸಲಿಗೆ ಸುತ್ತವರಿದಿದ್ದ ತಟ್ಟಿಯ ಗೋಡೆಯ ಕಂಡಿಯಲ್ಲಿ ಇಣಿಕಿ ಒಳಗೆ ನೋಡಿ, ಪರಶುರಾಮನಿಗೂ ಹಾಗೆಯೆ ಮಾಡುವಂತೆ ಸನ್ನೆ ಮಾಡಿದನು.
ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ
ಗುಡಿಸಿಲಿನ ಒಳಗಡೆ ಮಬ್ಬುಗತ್ತಲೆ ಕವಿದಿತ್ತು, ಸರ್ವತ್ರವೂ ಹೊಗೆ ಹಿಡಿದು ಕರಿಬಲೆ ನೇತುಬಿದ್ದು ಕರ್‍ರಗಾಗಿತ್ತು. ಹಾರೆ, ಗುದ್ದಲಿ, ಹೆಡಗೆ, ಕುಕ್ಕೆ, ಮಡಕೆ, ನೇಗಿಲು, ಕತ್ತಿ- ಇತ್ಯಾದಿ ಬೇಸಾಯದ ಉಪಕರಣಗಳು ಅಲ್ಲಲ್ಲಿ ಅಸ್ತವ್ಯಸ್ತವಾಗಿ ಚೆದರಿ ಬಿದ್ದಿದ್ದುವು. ನಿರ್ಜೀವವಾದ ಕಸಕಡ್ಡಿಗಳೂ ಸಜೀವವಾದ ನೊಣಗಳೂ ಸ್ವರಾಜ್ಯ ಸಂಪಾದನೆ ಮಾಡಿದಂತಿತ್ತು. ಮಧ್ಯೆ ಹಾಸಿದ್ದ ಕಂಬಳಿಯ ಮೇಲೆ ಕೊಳೆ ಹಿಡಿದ ಸೊಂಟದ ಪಂಚೆಯ ವಿನಾ ಸಂಪೂರ್ಣವಾಗಿ ನಗ್ನನಾಗಿದ್ದ ರೈತನೊಬ್ಬನು ಅಂಗಾತನೆ ಮಲಗಿ ಎದೆಯನ್ನು ಎರಡು ಕೈಗಳಿಂದಲೂ ಒತ್ತಿಕೊಳ್ಳುತ್ತಾ ಘೋರವಾಗಿ ನರಳುತ್ತಿದ್ದನು. ಆ ನರಕಯಾತನೆಗೆ ಅವನ ಕರಿಮೊರಡು ಮೈ, ತಲೆ ಮಾತ್ರ ಬಂಡೆಯಡಿ ಸಿಕ್ಕಿದ ಹಾವಿನಂತೆ, ಒದ್ದಾಡಿಕೊಳ್ಳುತ್ತಿತ್ತು. ಋಷಿಗಳಿಬ್ಬರೂ ನೋಡುತ್ತಿದ್ದ ಹಾಗೆಯೆ ಮುದ್ದೆ ಮುದ್ದೆಯಾದ ನೆತ್ತರು ಬುಗ್ಗಿ ಬುಗ್ಗೆಯಾಗಿ ಚಿಮ್ಮಿ ಅವನ ಬಾಯಿಂದ ಕೆಂಪಗೆ ಹೊರಬಿದ್ದು ನೆಲವನ್ನು ತೊಯ್ಸಿತು! ಆ ರೈತನ ಪಕ್ಕದಲ್ಲಿ ಚಿಂದಿ ಚಿಂದಿಯಾದ ಕೊಳಕಲು ಸೀರೆಯನ್ನು ಮಾನ ಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಉಟ್ಟುಕೊಂಡು, ಬಡಕಲಾಗಿದ್ದ ಅವನ ಹೆಂಡತಿ ತಲೆಯ ಮೇಲೆ ಕೈಹೊತ್ತು ಕುಳಿತು ಕಣ್ಣೀರು ಸುರಿಸುತ್ತಿದ್ದಳು. ಆ ಹೆಂಗಸಿನ ಹಿಂದೆ ಕೂದಲು ಕೆದರಿ ವಿಕಾರವಾಗಿದ್ದ, ಬತ್ತಲೆಯಾಗಿ ಹೊಟ್ಟೆ ಡೊಳ್ಳಾಗಿ ಮೈ ಸಣಕಲಾಗಿದ್ದ ನಾಲ್ಕೈದು ವರ್ಷದ ಹುಡುಗಿಯೊಬ್ಬಳು ನೆಲದ ಮೇಲೆ ಒರಗಿ ಮೂರ್ಛೆ ಹೋಗಿರುವಂತೆ ನಿದ್ದೆಮಾಡುತ್ತಿದ್ದಳು.
ಋಷಿಗಳಿಬ್ಬರಿಗೂ ಎದೆ ಬೆಂದು, ಕಣ್ಣುಗಳಿಂದ ಬಿಸಿಯಾದ ನೀರು ಹರಿಯತೊಡಗಿತು- ಆ ಮಹಾನಗರದಲ್ಲಿ ತಾವು ನೋಡಿದ್ದ ಭೋಗದ ದೃಶ್ಯಗಳನ್ನು ನೆನೆದಾಗಲಂತೂ, ಮುನಿಸೂ ಮನದಲ್ಲಿ ಕಿಡಿಯಾಡಿತು. ಬೇಗನೆ ತಟ್ಟಿಯ ಬಾಗಿಲನ್ನು ಮೆಲ್ಲನೆ ದಬ್ಬಿ, ತೆರೆದು, ನಿಲುವಿಗೆ ತಲೆ ತಾಗದಂತೆ ಬಗ್ಗಿ, ಒಳಗೆ ದಾಟಿದರು.
ಅವರಿಬ್ಬರೂ ಸಾಮಾನ್ಯ ಮಾನವ ವೇಷಧಾರಿಗಳಾಗಿದ್ದರೂ ರೈತನ ಹೆಂಡತಿ ಅವರನ್ನು ಕಂಡೊಡನೆ ಚೀತ್ಕಾರ ಮಾಡಿ, ಕೈ ಜೋಡಿಸಿಕೊಂಡು “ದಮ್ಮಯ್ಯ, ನಿಮ್ಮ ಕಾಲಿಗೆ ಬೀಳ್ತಿನಿ. ಈಗ ದುಡ್ಡಿಲ್ಲ. ನನ್ನ ಗಂಡನಿಗೆ ಕಾಯಿಲೆ ಗುಣವಾದ ಕೂಡಲೆ ಸಾಲ ಮಾಡಿಯಾದರೂ ತಂದು ಕೊಡ್ತಾರೆ! ಕೂಸನ್ನು ನೋಡಿಯಾದರೂ ಕನಿಕರ ತೋರಿಸಿ!” ಎಂದು ರೋದಿಸತೊಡಗಿದಳು.
ತಾವು ಕಂದಾಯಕ್ಕೆ ಬಂದ ಸರಕಾರಿ ಅಧಿಕಾರಿಗಳೂ ಅಲ್ಲ, ಪಠಾಣರೂ ಅಲ್ಲ, ಸಾಹುಕಾರನ ವಸೂಲಿಯ ಸಾಬರೂ ಅಲ್ಲ, ಪರದೇಶದ ಪ್ರಯಾಣಿಕರು, ಎಂದು ಕಷ್ಟಪಟ್ಟು ತಿಳಿಸಿದ ಮೇಲೆ, ಆ ಹೆಂಗಸು ಋಷಿಗಳ ಪಾದಕ್ಕೆ ಬಿದ್ದು ತನ್ನ ಕಷ್ಟವನ್ನು ಹೇಳಿಕೊಂಡಳು.
“ಏನು ಕಾಯಿಲೆ ನಿನ್ನ ಗಂಡನಿಗೆ?”
“ಏನು ಕಾಯಿಲೆಯೊ ಆ ಭಗವಂತನಿಗೇ ಗೊತ್ತು.”
“ಎಷ್ಟು ದಿನಗಳಿಂದ?”
“ಬಹಳ ಕಾಲದಿಂದಲೂ ಇದೆ. ಒಂದು ಸಾರಿ ಕಡಿಮೆಯಾದರೆ ಮತ್ತೊಂದು ಸಾರಿ ಹೆಚ್ಚಾಗುತ್ತದೆ. ಯಾರಿಗೆ ತೋರಿಸಿದರೂ ಇಂಥಾ ಕಾಯಿಲೆಯೆಂದು ಅರ್ಥವಾಗುವುದಿಲ್ಲ. ಇದ್ದಕ್ಕಿದ್ದ ಹಾಗೆ ಎದೆಯ ಮೇಲೆ ಯಾರೋ ಕೂತುಕೊಂಡಂತೆ ಆಗಿ ಭಾರ ಹೆಚ್ಚಾಗುತ್ತದೆ. ಕೀಲುಕೀಲುಗಳಲ್ಲಿ ಕಬ್ಬಿಣ ಕಾಸಿ ಹೊಯ್ದಂತೆ ನೋವು ಪ್ರಾರಂಭವಾಗುತ್ತದೆ. ಆಗಾಗ್ಗೆ ಹೆಂಟೆ ಹೆಂಟೆಯಾಗಿ ರಕ್ತ ಕಾರುತ್ತದೆ. ವೈದ್ಯರಾಯಿತು, ಜೋಯಿಸರಾಯಿತು; ದೇವರಾಯಿತು, ದಿಂಡರಾಯಿತು. ಸ್ವಾಮಿ, ಭಗವಂತ ಕೂಡ ನಮ್ಮನ್ನು ಕೈ ಬಿಟ್ಟಿದ್ದಾನೆ” ಎಂದು ಹೆಂಗಸು ಬಿಕ್ಕಿ ಬಿಕ್ಕಿ ಅತ್ತಳು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
“ಇಲ್ಲ, ಭಗವಂತ ಕೈ ಬಿಟ್ಟಿಲ್ಲ. ಸಮಾಧಾನ ಮಾಡಿಕೊ. ನಮ್ಮ ಕೈಲಾದುದನ್ನು ಮಾಡುತ್ತೇವೆ-” ಎಂದು ಋಷಿಗಳಿಬ್ಬರೂ ರೋಗಿಯನ್ನು ಪರೀಕ್ಷಿಸಿದರು.
ಹೃದಯ, ಶ್ವಾಸಕೋಶ, ಜಠರ, ಕರುಳು, ಮಿದುಳು- ಮೊದಲಾದ ಸರ್ವಾವಯವಗಳನ್ನೂ ಚೆನ್ನಾಗಿ ಪರೀಕ್ಷಿಸಿದರು. ಎಲ್ಲಿಯೂ ಒಂದು ತಿಲಮಾತ್ರವಾದರೂ ದೋಷವಾಗಲಿ ರೋಗದ ಕಾರಣ ಚಿಹ್ನೆಯಾಗಲಿ ಗೋಚರಿಸಲಿಲ್ಲ. ರೋಗಿ ಯಾವ ಪ್ರಶ್ನೆಗೂ ಉತ್ತರ ಕೊಡುವ ಸ್ಥಿತಿಯಲ್ಲಿರಲಿಲ್ಲ. ಎದೆಯ ಮೇಲೆ ಕೈಯಿಟ್ಟಾಗ ಮಾತ್ರ ಹುಣ್ಣು ಮುಟ್ಟಿದಂತೆ ಮುಖವನ್ನು ಸಿಂಡರಿಸಿ ಮತ್ತೂ ಹೆಚ್ಚಾಗಿ ನರಳುತ್ತಿದ್ದನು.
ಋಷಿಗಳು ಕಂಗಾಲಾದರು. ಬ್ರಹ್ಮವಿದ್ಯೆಗಿಂತಲೂ ಅತಿ ರಹಸ್ಯವಾಗಿತ್ತು ಆ ರೈತನ ಕಾಯಿಲೆ! ಏನಾದರಾಗಲಿ ಎಂದು, ಅಲ್ಲಿಗೆ ಹತ್ತಿರವಾಗಿದ್ದ ಒಂದು ಊರಿನಿಂದ ಸರ್ಕಾರಿ ಡಾಕ್ಟರನ್ನು ಕರೆತಂದರು. ಅವನು ಮೋಟಾರು ಗಾಡಿ ಹೋಗದ ಹಳ್ಳಿಗೆ ಖಂಡಿತ ಬರಲಾಗುವುದಿಲ್ಲ ಎಂದಿದ್ದರೂ ಋಷಿಯ ಕೈಯಲ್ಲಿದ್ದ ಚಿನ್ನದ ನಾಣ್ಯಗಳನ್ನು ಕಂಡ ಮೇಲೆ ಮೂಗುದಾರ ಹಾಕಿದ ಗೂಳಿ ತಂಟೆ ಮಾಡದೆ ಹಿಂಬಾಲಿಸುವಂತೆ ಬಂದುಬಿಟ್ಟನು.
ಆದರೆ ಅವನು ರೋಗಿಯ ಬಳಿಗೆ ಬಂದೊಡನೆಯೆ ರೋಗಿಗೆ ಎದೆ ಭಾರ ಹೆಚ್ಚಿ ನರಳುವುದೂ ನೆತ್ತರು ಕಾರುವುದೂ ಹೆಚ್ಚಾಯಿತು. ಡಾಕ್ಟರು ಬೇಗಬೇಗ ಪರೀಕ್ಷೆ ನಡೆಸಿ, ರೋಗದ ಲಕ್ಷಣ ತನಗೇನೂ ಗೊತ್ತಾಗದಿದ್ದರೂ ದೊಡ್ಡದೊಂದು ಲ್ಯಾಟಿನ್ ಹೆಸರನ್ನು ಹೇಳಿ, ಬಣ್ಣದ ನೀರನ್ನು ಔಷಧಿಯಾಗಿ ಕೊಟ್ಟುಹೋದನು. ಅವನು ದೂರ ದೂರ ಹೋದ ಹಾಗೆಲ್ಲಾ ರೋಗಿ ಮೊದಲಿದ್ದ ಸ್ಥಿತಿಗೆ ಬಂದನು.
ಆ ಹೆಂಗಸಿಗೆ ಡಾಕ್ಟರಲ್ಲಿ ಸ್ವಲ್ಪವೂ ನಂಬುಗೆ ಇರಲಿಲ್ಲ. ಪುರೋಹಿತರನ್ನು ಕರೆಯಿಸಬೇಕೆಂದು ಸೂಚಿಸಿದಳು. ಏಕೆಂದರೆ, ಯಾವುದೊ ರಣ ಪಿಶಾಚಿಯ ಚೇಷ್ಟೆಯೇ ಗಂಡನ ರೋಗಕ್ಕೆ ಕಾರಣವೆಂದು ಆಕೆ ನಿಸ್ಸಂದೇಹವಾಗಿ ನಂಬಿದ್ದಳು.
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ವಿಶ್ವಾಮಿತ್ರನು ಒಪ್ಪದಿದ್ದರೂ ಪರಶುರಾಮನು “ನೋಡಿಬಿಡೋಣ” ಎಂದು ಭಟ್ಟರನ್ನೂ ಕರೆಸಿದನು. ಅವನಿಗೂ ರೋಗಕ್ಕೆ ಕಾರಣ ಸ್ವಲ್ಪವೂ ತಿಳಿಯದಿದ್ದರೂ ಒಂದು ಪಿಶಾಚಿಯ ಹೆಸರನ್ನು ಹೇಳಿ, ಅದಕ್ಕೆ ಮಾಯಾಮಂತ್ರ ಮಾಡಿ ತಡೆಗಟ್ಟಿದ್ದೇನೆ ಎಂದು ಹೇಳಿ, ಚಿನ್ನದ ನಾಣ್ಯಗಳನ್ನು ದಕ್ಷಿಣೆ ತೆಗೆದುಕೊಂಡು ತೃಪ್ತನಾಗಿ ಹೋದನು.
ವಿಶ್ವಾಮಿತ್ರನು ಪರಶುರಾಮನನ್ನು ಕುರಿತು “ಈ ಪುರೋಹಿತರ ಗುಂಪೆಲ್ಲವೂ ಒಂದೇ! ಸುಲಿಗೆ!! ಸುಲಿಗೆ!!! ಈ ಹಿಂದೆ ಆ ವಸಿಷ್ಠ ಸುಲಿದ ಹಾಗೆಯೆ ಇಂದು ಈ ಭಟ್ಟನೂ ಸುಲಿಯುತ್ತಿದ್ದಾನೆ! ಅವನಂತೂ ರಘುವಂಶಕ್ಕೆ ಶನಿ ಹಿಡಿದ ಹಾಗೆ ಹಿಡಿದುಬಿಟ್ಟಿದ್ದ! ಇಕ್ಷ್ವಾಕು, ರಘು, ದಿಲೀಪ, ದಶರಥ, ರಾಮ- ಎಲ್ಲರನ್ನೂ ಜೀವ ಹಿಂಡಿಬಿಟ್ಟ ಪೌರೋಹಿತ್ಯ ಮಾಡಿ!… ನಾನು ಹೇಳಲಿಲ್ಲವೆ ನಿನಗೆ, ಪುರೋಹಿತರನ್ನು ಕರೆಸುವುದು ಬೇಡ ಎಂದು” ಎಂದು ಹೇಳಿದನು.
ಋಷಿಗಳಿಬ್ಬರೂ ಆ ಗುಡಿಸಲಲ್ಲಿಯೇ ಇದ್ದುಕೊಂಡು ರೈತನ ರಹಸ್ಯ ರೋಗಕ್ಕೆ ಕಾರಣವನ್ನೂ ಔಷಧಿಯನ್ನೂ ಕಂಡುಹಿಡಿಯಲು ಪ್ರಯತ್ನಿಸಿದರು, ಎಲ್ಲ ನಿಷ್ಪಲವಾಯಿತು.
ಚಿನ್ನದ ನಾಣ್ಯಗಳನ್ನು ಯಥೇಚ್ಛವಾಗಿ ನೀಡುವವರು ಆ ಗುಡಿಸಲಿನಲ್ಲಿ ಇಳಿದುಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದಮೇಲೆ, ಸುತ್ತಮುತ್ತಲಿದ್ದ ಊರಿನವರಿಗೂ ಅಧಿಕಾರಿಗಳಿಗೂ ರೈತನ ಯೋಗಕ್ಷೇಮದ ಚಿಂತೆ ಹೆಚ್ಚಾಗಿ, ಅದುವರೆಗೆ ಅಲ್ಲಿಗೆ ಕಾಲಿಡದಿದ್ದವರೆಲ್ಲರೂ ಬಂದು ಬಂದು ವಿಚಾರಿಸಿಕೊಂಡು ಹೋಗತೊಡಗಿದರು.
ಅಧಿಕಾರಿಗಳು ಬಂದಾಗಲೂ, ಡಾಕ್ಟರೂ ಪುರೋಹಿತರೂ ಬಂದಾಗ ಆಗಿದ್ದಂತೆ ರೈತನ ಎದೆನೋವು ಇಮ್ಮಡಿಯಾಗುತ್ತಿತ್ತು.
ಕೆಲವು ದಿನಗಳಾದ ಮೇಲೆ ಒಂದು ದಿನ ವಿಚಾರವು ಧ್ಯಾನ ಮಾಡುತ್ತಿದ್ದ ವಿಶ್ವಾಮಿತ್ರನಿಗೆ ಹೊಳೆಯಿತು- ಆ ರೋಗದ ರಹಸ್ಯವನ್ನು ತಿಳಿಯುವುದಕ್ಕೆ ದೇವವೈದ್ಯನಾದ ಧನ್ವಂತರಿಗೆ ಹೇಳಿಕಳುಹಿದರು. ಧನ್ವಂತರಿ ಸಾಮಾನ್ಯ ವೈದ್ಯನ ವೇಷಧಾರಣೆ ಮಾಡಿ ಶೀಘ್ರವಾಗಿ ಅಲ್ಲಿಗೆ ಬಂದನು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ರೈತನ ಎದೆನೋವಿನ ಗೋಳನ್ನು ನೋಡಿ, ನೆತ್ತರು ಹೆಪ್ಪುಗಡಿಸುವ ಆ ನರಳುದನಿಯನ್ನು ಕೇಳಿ, ಕಕ್ಕಾಬಿಕ್ಕಿಯಾದನು. ಆದರೂ ಉತ್ತರಕ್ಷಣದಲ್ಲಿ ತಾನು ವೈದ್ಯನೆಂಬುದನ್ನು ನೆನಪಿಗೆ ತಂದುಕೊಂಡು ಧೈರ್ಯತಾಳಿ ರೋಗಿಯ ದೇಹಪರೀಕ್ಷೆಗೆ ಕೈಯಿಟ್ಟನು.
ವಿಶ್ವಾಮಿತ್ರ ಪರಶುರಾಮರೂ ರೈತನ ಹೆಂಡತಿಯಂತೆಯೆ ಕಾತರ ಹೃದಯರಾಗಿ ತುಟಿದೆರೆಯದೆ ನಿಂತು ನೋಡುತ್ತಿದ್ದರು! ರೋಗಿಯ ನರಳುಗಳ ನಡುವೆ ಆ ನಿರೀಕ್ಷೆಯ ನಿಶ್ಯಬ್ದದಲ್ಲಿ ಅವರು ಉಸಿರಾಡುವುದೂ ಕೇಳಿಸುತ್ತಿತ್ತು. ಬಹಳ ಕಾಲ ಪರೀಕ್ಷೆ ನಡೆಸಿದ ತರುವಾಯ ಧನ್ವಂತರಿ ಋಷಿಗಳ ಕಡೆಗೆ ವ್ಯಂಗ್ಯಪೂರ್ಣವಾಗಿ ದೃಷ್ಟಿಸಿದನು. ರೈತನ ಹೆಂಡತಿ ಆ ದೃಷ್ಟಿಯಲ್ಲಿದ್ದ ನಿರಾಶೆಯನ್ನು ಕಂಡು ನೀರವವಾಗಿ ಅಳಲಾರಂಭಿಸಿದಳು.
ರೈತನ ಹೆಂಡತಿಯ ದೃಷ್ಟಿಗೆ ಮಾತ್ರ ಧನ್ವಂತರಿ ನೋಡುತ್ತಿದ್ದ ಹಾಗೆ ಕಾಣಿಸುತ್ತಿದ್ದಿತೆ ಹೊರತು ನಿಜವಾಗಿಯೂ ದೇವವೈದ್ಯನೂ ಋಷಿಗಳೂ ಸಂಭಾಷಿಸುತ್ತಿದ್ದರು.
ಧನ್ವಂತರಿ ಹೇಳಿದನು “ಇದು ದೈಹಿಕ ರೋಗವಲ್ಲ.”
ಪರಶುರಾಮನು “ಆತ್ಮದ್ದೇನು?” ಎಂದು ಕೇಳಿದನು.
ಧನ್ವಂತರಿ ತಲೆಯಲ್ಲಾಡಿಸಿ ‘ಅದೂ ಅಲ್ಲ’ ಎಂಬುದಾಗಿ ಸೂಚಿಸಿದನು.
“ಹಾಗಾದರೆ?” ಎಂದು ವಿಶ್ವಾಮಿತ್ರನು ಬೆರಗಾದನು.
ಧನ್ವಂತರಿ ಹೇಳಿದನು: “ದೇಹದ ರೋಗವಾಗಿದ್ದರೆ ದೇಹದಲ್ಲಿ ಇರಬೇಕಾಗಿತ್ತು. ಆದರೆ ನಾನು ಚೆನ್ನಾಗಿ ಪರೀಕ್ಷಿಸಿದ್ದೇನೆ; ಅಲ್ಲಿ ಎಲ್ಲಿಯೂ ಇಲ್ಲ. ಆತ್ಮದ್ದಾಗಿದ್ದರೆ ಪಾಪರೂಪದಿಂದ ತೋರಬೇಕಾಗಿತ್ತು. ಆದರೆ ಈ ಸರಳ ಸಾಮಾನ್ಯ ಜೀವನದ ರೈತನಿಗೆ ಆ ರೋಗ ಇನ್ನೂ ತಗುಲಿಲ್ಲ. ಆದ್ದರಿಂದ” ಎಂದು ಹೇಳುತ್ತಾ ಜೇಬಿನಿಂದ ಒಂದು ದಿವ್ಯ ಯಂತ್ರವನ್ನು ಹೊರಕ್ಕೆ ತೆಗೆದು ತೋರಿ (ಅದು ರೈತನ ಹೆಂಡತಿಗೆ ಅಗೋಚರವಾಗಿತ್ತು) “ಇದರಿಂದ ನೋಡಿದರೆ ರಹಸ್ಯವೇನಿದ್ದರೂ ಗೊತ್ತಾಗುತ್ತದೆ” ಎಂದು ರೋಗಿಗೆ ತುಸು ದೂರವಾಗಿ ನಿಂತು ಆ ದಿವ್ಯಯಂತ್ರದ ಮೂಲಕ ಸಮೀಕ್ಷಿಸಲಾರಂಭಿಸಿದನು.
ವಿಶ್ವಾಮಿತ್ರ ಪರಶುರಾಮರು ನಿಂತು ನೋಡುತ್ತಿದ್ದ ಹಾಗೆಯೆ ದಿವ್ಯ ಯಂತ್ರದಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಧನ್ವಂತರಿಯ ವದನ ಕೆಂಪೇರಿತು. ವಕ್ಷಸ್ಥಲ ಉಸುರಿನ ಜೋರಾಟದಿಂದ ಮೇಲಕ್ಕೂ ಕೆಳಕ್ಕೂ ಹಾರತೊಡಗಿತು. ಕಣ್ಣುಗಳಿಂದ ನೀರು ಉಕ್ಕಿ ಹನಿಹನಿಯಾಗಿ ಕೆನ್ನೆಗಳ ಮೇಲೆ ಉರುಳಿ ನೆಲಕ್ಕೆ ಬಿದ್ದು ಹೀರಿಹೋದವು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
”ಅಯ್ಯೋ ಪಾಪಿಗಳೇ!” ಎಂದು ಧನ್ವಂತರಿ ಆನೆ ಘೀಳಿಡುವಂತೆ ಕೂಗಿದನು. ಆದರೆ ಮನುಷ್ಯಮಾತ್ರದವಳಾಗಿದ್ದ ರೈತನ ಹೆಂಡತಿಗೆ ಅವನು ಕೆಮ್ಮಿದಂತೆ ಮಾತ್ರ ಕೇಳಿಸಿತ್ತು!
ಋಷಿಗಳಿಬ್ಬರೂ ಬೆಚ್ಚಿಬಿದ್ದು “ಏನು? ಏನು? ಏನಾಯ್ತು? ಏನಾಯ್ತು?” ಎಂದು ಧನ್ವಂತರಿಯ ಬಳಿಗೆ ಓಡಿದರು.
ಧನ್ವಂತರಿ ಮಾತಾಡದೆ ಯಂತ್ರವನ್ನು ಋಷಿಗಳ ಕಡೆಗೆ ನೀಡಿದನು. ಋಷಿಗಳಿಬ್ಬರೂ ಯಂತ್ರದಲ್ಲಿ ಕಣ್ಣಿಟ್ಟು ನೋಡತೊಡಗಿದರು; ನೋಡಿ ಬೆಚ್ಚಿಬಿದ್ದರು!
ರೈತನ ಎದೆಯಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾ ಪರ್ವತಾಕಾರವಾಗಿ ನಿಂತಿತ್ತು. ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣ ಅದರ ನೆತ್ತಿಯಲ್ಲಿ ರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಆಮೋದ ಪ್ರಮೋದವನಗಳೂ ಕರ್ಮಸೌಧಗಳೂ ಕಾರ್ಖಾನೆಗಳೂ ರಾಜಪ್ರಾಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಯಿಂದ ಮೆರೆಯುತ್ತಿವೆ!
“ಅಯ್ಯೋ, ಅಯ್ಯೋ, ಅಯ್ಯೋ! ಇವನು ಇದುವರೆಗೆ ಸಾಯದೆ ಬದುಕಿದ್ದುದೆ ಹೆಚ್ಚಳವಪ್ಪ! ಗೋವರ್ಧನ ಪರ್ವತವನ್ನು ಹೊತ್ತ ಕೃಷ್ಣನು ಕೂಡ ನುಚ್ಚು ನೂರಾಗುತ್ತಿದ್ದನಲ್ಲಾ- ಈ ರಾಜ್ಯದ ಭಾರ ಅವನ ಎದೆಯ ಮೇಲೆ ಬಿದ್ದಿದ್ದರೆ!’ ಎಂದು ಪರಶುರಾಮನು ಕೂಗಿಕೊಂಡನು.
ವಿಶ್ವಾಮಿತ್ರನು ರೋಷದಿಂದ ಹಲ್ಲು ಕಡಿಯುತ್ತಾ, ”ಜಾಮದಗ್ನಿ, ನೀನಂದು ಆಳುವವರನ್ನೆಲ್ಲಾ ನಿರ್ನಾಮ ಮಾಡಿ, ಸಮತಾಪ್ರಚಾರಕ್ಕೆ ಜೀವಮಾನವನ್ನೆಲ್ಲಾ ತೆತ್ತುದು ವ್ಯರ್ಥವಾಯಿತು!” ಎಂದನು.
”ಎದೆಯ ಮೇಲಿರುವ ರಾಜ್ಯದ ಭಾರವನ್ನು ತೆಗೆದು ಹಾಕಿದರೆ ಕಾಯಿಲೆ ಸರಿಹೋಗುತ್ತದೆ” ಎಂದನು ಧನ್ವಂತರಿ.
“ಲೋಕವೆಲ್ಲ ನಿರ್ನಿಯಮವಾಗಿ ಅರಾಜಕವಾಗಿ ಅವ್ಯವಸ್ಥೆಯಾದರೆ?”
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಧನ್ವಂತರಿ ಸ್ವಲ್ಪ ಮುನಿದು ಕಣ್ಣು ಕೆಂಪಗೆ ಮಾಡಿ ”ನಿಮಗೆ ಬುದ್ದಿಯಿಲ್ಲ! ಮೊದಲು ರೋಗ ನಿವಾರಣೆಯಾಗಲಿ! ಆಮೇಲೆ ದೃಢಕಾಯನಾಗುವ ಅವನೇ ಕೆಳಗೆ ಬಿದ್ದ ‘ರಾಜ್ಯದ ಭಾರ’ವನ್ನು ಎದೆಯ ಮೇಲೆ ಹಾಕಿಸಿಕೊಳ್ಳುವುದಕ್ಕೆ ಬದಲಾಗಿ, ಹೆಗಲ ಮೇಲೆ ಹೊತ್ತು, ‘ರಾಜ್ಯಭಾರ’ವನ್ನು ವಹಿಸಿ ನಿರ್ವಹಿಸುತ್ತಾನೆ!” ಎಂದು ಗದರಿಸಿದನು.
ಒಡನೆಯೆ ವಿಶ್ವಾಮಿತ್ರನು ಗೂಳಿಯಂತೆ ಹೂಂಕರಿಸಿದನು. ಆ ಹೂಂಕಾರದಿಂದ ಮಹಾಭಯಂಕರವಾಗಿದ್ದ ಕ್ರಾಂತಿ ಭೂತಗಳು ಮೈದೋರಿ ನಿಂತು ತಲೆಬಾಗಿ ಕೈಮುಗಿದು ಬೆಸನೇನೆಂದು ಬೇಡಿದವು.
“ಹೋಗಿ, ಆ ರೈತನ ಎದೆಯ ಮೇಲಿರುವ ಭಾರವನ್ನೆಲ್ಲಾ ನೆಲಕ್ಕುರುಳಿಸಿ” ಎಂದು ಗರ್ಜಿಸಿ ಕೈ ಬೀಸಿದನು.
ಒಡನೆಯೆ ರಾಜ್ಯದಲ್ಲಿ ಸಿಡಿಲು ಮಳೆ ಬಿರುಗಾಳಿ ಭೂಕಂಪಗಳು ತೋರಿ ಉತ್ಪಾತವಾಯಿತು. ನೋಡುತ್ತಿದ್ದಂತೆ, ರಾಜವೇಶ್ಮ ಉರುಳಿತು; ದೇವಾಲಯದ ಗೋಪುರಗಳೂ ಮಹಾರವದಿಂದ ಕೆಳಗೆ ಬಿದ್ದುವು…
ರೈತನ ನರಳುವಿಕೆ ಕ್ರಮೇಣ ಕಡಿಮೆಯಾಗುವಂತೆ ತೋರಿತು. ಶ್ವಾಸೋಚ್ಛ್ವಾಸ ಸಹಜವಾಗತೊಡಗಿತು. ಕಣ್ಣಿನಲ್ಲಿ ಸಂತೋಷದ ಬೆಳಕೂ ಮಿಂಚಿತು… ಮತ್ತೆ… ತುಸು ಹೊತ್ತಿನಲ್ಲಿಯೆ, ನೋಡುತ್ತಿದ್ದವರಿಗೆ ಆಶ್ಚರ್ಯವಾಗುವಂತೆ, ನಗುಮೊಗವಾಗಿ ಮೇಲೆದ್ದು ನಿಂತು, ಕೈಮುಗಿದನು ಋಷಿಗಳಿಗೆ!
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಅದ್ಭುತ ಪರಿಕಲ್ಪನೆ. ಸೊಗಸಾದ ಕಲಾತ್ಮಕ ಕ್ರಾಂತಿ ಪರಿಭಾಷೆ.