ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಗ್ರೀಸ್ ದೇಶದ ಅಸೀರಿಯ ನಾಡಿನಲ್ಲಿ ಮಲಯನೀ ತೀರದ ಪ್ರದೇಶದ ಆಡಳಿತವನ್ನು ಸಿಮ್ಮಸ್ ಎಂಬ ಬೇಡನು ಕೈಕೊಂಡಿದ್ದನು. ಬೇಟೆಯಲ್ಲಿ ಅವನಿಗೊಳ್ಳೆಯ ಹುರುಪು; ಒಳ್ಳೆಯ ಜಾಣ್ಮೆ. ಅವನು ಒಂದು ದಿನ ಬೇಟೆಗೆ ಹೋಗಿದ್ದನು. ಮನೆಯಲ್ಲಿ ಸಮ್ಮುರಮ್ಮನ್ ಒಬ್ಬಳೆ. ಆಕೆ ಆತನ ಸಾಕು ಮಗಳು, ಅಜ್ಜಿಯ ಮಗಳು.

ಸಮ್ಮುರಮ್ಮನ್ ಕಸಿ ಮಾಡಿದ ಒಳ್ಳೆಯ ನಳನಳಿಸುವ ಗುಲಾಬಿಯಂತೆ ಇದ್ದಳು. ಗುಲಾಬಿಗೆ ಚೆಂದ ಚೆಂದದ ಹೂಗಳರಳಿ ಒಪ್ಪುವಂತೆ, ಇದೀಗ ಆಕೆ ಅದೊಂದು ಕಂಪನ್ನೂ ಸುವರ್ಣದ ಪೆಂಪನ್ನೂ ಅರಳು ನಗೆಯ ಸೊಂಪನ್ನೂ ಸೂಸುವವಳಾಗಿದ್ದಳು. ಆಕೆಗೆ ಹದಿನಾರು ವರುಷಗಳು ತುಂಬಿ, ತುಂಬು ಚೆಲುವಿಕೆಯನ್ನು ಮೈಗೂಡಿಸಿಕೊಂಡ ಹಾಗೆ ತೋರುತ್ತದೆ. ತಂದೆ ಬೇಟೆಗೆ ಹೋದಾಗ, ಅವಳು ಒಳಗೆ ತನ್ನ ಕೋಣೆಯಲ್ಲಿ ಹೂಮಾಲೆಯನ್ನು ಕಟ್ಟುವುದರಲ್ಲಿ ತೊಡಗಿದ್ದಳು.

”ಸಿಮ್ಮಸ್ ಅವರು ಇದ್ದಾರೆಯೋ?” ಹೊರಗಿನಿಂದ ಯಾರೊ ಕೇಳಿದರು.

“ಇಲ್ಲ, ಅಪ್ಪ ಮನೆಯಲ್ಲಿಲ್ಲ; ಬೇಟೆಗೆ ಹೋಗಿದ್ದಾನೆ” ಎಂದು ಸಮ್ಮುರಮ್ಮನ್ ಒಳಗಿನಿಂದಲೇ ಉತ್ತರ ಕೊಟ್ಟಳು.

ಸಿಮ್ಮಸ್‌ನನ್ನು ಕಾಣಬೇಕೆಂದು ಬಂದಿದ್ದ ನಿನೋಬಾ ಪ್ರಾಂತದ ನಾಯಕನಾದ ಓನಸ್‌ಗೆ ಈ ಮಾತುಗಳನ್ನು ಕೇಳಿ ಒಳ್ಳೆಯ ಸಂತೋಷವಾಯಿತು.

”ಕಬ್ಬಿಗಿಟ್ಟ ಹುಟ್ಟಿನಿಂದ ತಟಕುವ ಜೇನಿನಂತಹ ಮಾತುಗಳನ್ನು ಸೂಸುವವರನ್ನು ನಾನು ನೋಡಬಹುದೆ?”

“ಅದೇನಂತಹ ಅಪರೂಪ?”

ಸೌಂದರ್ಯಜಲದ ಬುಗ್ಗೆಯಂತೆ ಅವಳು ಅವನ ಮುಂದೆ ಬಂದು ನಿಂತಳು. ಅವನು ಅದನ್ನು ಕಣ್ಣಿಂದ ಕುಡಿದು ತನ್ನ ಹೃದಯವನ್ನು ಮೀಯಿಸಿದನು. ವೀರ ಓನಸ್‌ನ ಭವ್ಯಮೂರ್ತಿಯ ಕಡೆ ಸಮ್ಮುರಮ್ಮನ್ ನೋಟವನ್ನು ಬೀರಿದಳು. ಎರಡೂ ನೋಟಗಳ ಕೂಟದಲ್ಲಿ ಮಧುರ ಪ್ರೇಮಗೀತವೊಂದು ಹರಿಯಿತು; ಇಬ್ಬರ ಮನವನ್ನೂ ಸೆಳೆಯಿತು. ಓನಸ್ ಸುಳ್ಳುಸುಳ್ಳೇ ಏನೋ ಮಾತು ಬೆಳೆಸಲೆಳಸಿದನು. ಅಷ್ಟರಲ್ಲಿ ಅವಳು ಗೃಹಸ್ಥ ಧರ್ಮಕ್ಕೆ ತಕ್ಕ ರೀತಿಯಲ್ಲಿ ವಿನಯದಿಂದ ಆತನನ್ನು ಒಳಕ್ಕೆ ಬರಮಾಡಿಕೊಂಡಳು.

ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ

”ವೀರರೆ, ತಾವು ನಿಂದಿರುವುದು ನನಗೆ ಮಾತಿನಲ್ಲಿ ಮರೆಯದು. ಒಳಗೆ ಆಸನದಲ್ಲಿ ದಯವಿಟ್ಟು ಕುಳಿತುಕೊಳ್ಳಿರಿ. ವೆಗ್ಗಳವಾಗಿ ಮಾತಾಡಬಹುದು. ಮೊದಲು ತಾವು ಯಾರೆಂಬುದನ್ನು ನಾನು ತಿಳಿಯಬಹುದಲ್ಲವೆ?”

ಇಬ್ಬರೂ ಒಳಗೆ ಹೋಗಿ ಆಸನದಲ್ಲಿ ಕುಳಿತುಕೊಂಡರು. ಬಳಿಕ ಓನಸ್ “ನನ್ನನ್ನು ಓನಸ್‌ನೆಂದು ಕರೆಯುತ್ತಾರೆ” ಎಂದ.

“ಓ, ಕ್ಷಮಿಸಿರಿ; ತಮ್ಮನ್ನು ಕೇಳಿಬಲ್ಲೆ. ಮೂರ್ತಿಯ ಪರಿಚಯವಿಲ್ಲದೆ ತೊಂದರೆಪಡಿಸಬೇಕಾಯಿತು. ಭಾಗ್ಯಶಾಲಿಗಳಾದ ನಿನೋಬಾ ನಾಯಕರ ಯಶೋಗೀತವನ್ನು ಸಾವಿರ ನಾಲಗೆಗಳು ಸಾವಿರ ಬಾರಿ ನನ್ನ ಕಿವಿಗೆರೆದಿವೆ.”

“ನನ್ನ ಹೆಸರು ತಮ್ಮ ಚೆಂದುಟಿಗಳನ್ನು ಅದುರಿಸಿದ ಈ ದಿನವೆ ಭಾಗ್ಯಶಾಲಿ.”

”ಓ, ಹೆಚ್ಚಾಯ್ತು. ಈ ಹೊಗಳಿಕೆಯಲ್ಲಿ ಬೆಳಗುವುದು ನನ್ನ ಗುಣವಲ್ಲ; ಓನಸ್‌ ಸೌಜನ್ಯ.”

“ಹೋ ಹೋ, ಇದ್ದುದನ್ನು ಇಲ್ಲವೆಂಬ ಹುಸಿ ಮಾತಿನಿಂದ ಸಮ್ಮುರಮ್ಮನ್ ತಮ್ಮ ಸೌಜನ್ಯವನ್ನು ಬೆಳಗುತ್ತಿದ್ದಾರೆ. ದೇವಕನ್ಯೆಯಂತಿರುವ ತಮ್ಮನ್ನು ನಾನು ಅರಿತುಕೊಳ್ಳಲು ಬಯಸಲೆ?”

“ನಾನು ಸಿಮ್ಮಸ್‌ನ ಮಗಳು.”

“ಅಷ್ಟನ್ನು ನಾನು ಬಲ್ಲೆ.”

“ನಮ್ಮ ತಂದೆ ಹಿಂದಕ್ಕೆ ಒಂದು ದಿನ ಬೇಟೆಗೆ ಹೋಗಿದ್ದನಂತೆ; ಮಲಯನೀ ನದಿಯ ದಂಡೆಯಲ್ಲಿ ಆತನಿಗೆ ನಾನು ಸಿಕ್ಕೆನಂತೆ. ಆಗ ನಾನು ಹಸುಗೂಸು. ನನ್ನನ್ನು ತಂದು ಅಕ್ಕರತೆಯಿಂದ ಜೋಪಾನ ಮಾಡಿದನು.”

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಓನಸ್ ಕುತೂಹಲದಿಂದ ಸಮ್ಮುರಮ್ಮನಿನ ಮೊಗವನ್ನು ನೋಡಿದನು. ಅವಳು ಮರಳಿ ಮಾತಿಗೆ ತೊಡಗಿದಳು:

“ಹೊಳೆಯ ದಡದ ಪ್ರದೇಶವು ಒಳ್ಳೆಯ ರಮ್ಯವನವಾಗಿದೆ. ಅಲ್ಲಿಗೆ ಗಂಧರ್ವ ಕುಮಾರನೊಬ್ಬನು ಬಂದು ತಪವನ್ನು ತಪಿಸುತ್ತಿದ್ದನು. ಅವನ ಹೆಸರು ನಿಬೊ. ಒಂದು ದಿನ ನೈನಾ ಎಂಬ ನಾಗ ಕನ್ಯೆಯೊಬ್ಬಳು ನೀರಾಟಕ್ಕೆಂದು ಆ ಹೊಳೆಗೇ ಬಂದಳು. ಗಂಧರ್ವ ಕುಮಾರನು ಆ ಸುಂದರಿಯನ್ನು ಕಂಡು ಮೋಹಿತನಾದನು. ಪರಸ್ಪರರು ಅನುರಕ್ತರಾಗಿ ವನವಿಹಾರ ಮಾಡಿದರು. ಹೀಗಿರಲು ನೈನಾ ಬಸಿರಾದಳು. ಅವಳನ್ನು ಕಂಡು ನಿಬೋ “ಮಹಾರಾಣಿಯಾಗುವಂತಹ ಮಗುವನ್ನು ಪಡೆಯುವೆ” ಎಂದು ಹರಸಿದನು. ಮುಂದೆ ಅವನು ಪುನಃ ತಪವನ್ನಾಚರಿಸಲು ಮತ್ತೆಲ್ಲಿಗೋ ಹೊರಟು ಹೋದನು. ನೈನಾ ಕೆಲ ದಿನ ಅಲ್ಲಿಯೇ ಇದ್ದು ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಅವಳಿಗೆ ತಮ್ಮೂರಿಗೆ ಹೋಗುವ ಮನಸ್ಸಾಯಿತು. ಮರದಡಿಯಲ್ಲಿ ಒಂದು ಹೂವಿನ ಹೊರಸನ್ನು ರಚಿಸಿದಳು. ಕೂಸನ್ನು ಅದರ ಮೇಲಿಟ್ಟಳು; ಒಂದು ತೊಟ್ಟು ಕಣ್ಣೀರನ್ನು ಬಿಟ್ಟಳು. ‘ಮಗೂ, ಪ್ರಿಯನು ಹೇಳಿದ್ದಾನೆ, ನೀನು ಮಹಾರಾಣಿಯಾಗುವೆ. ದೀರ್ಘಾಯುಷಿಯಾಗುವೆ. ನಾನು ನಿಶ್ಚಿಂತೆಯಾಗಿ ಹೋಗುವೆ’ ಎಂದು ನುಡಿದು ಮಗುವಿನ ಕಡೆಗೆ ನೋಡುತ್ತ ನೋಡುತ್ತ ಹೋಗಿಬಿಟ್ಟಳು…”

ಸುರಸುಂದರಿ1 1

”ಆ ಮಗುವೆ ನೀನು?”

“ಹಾಂ”

ಸಮ್ಮುರಮ್ಮನ್ ದೇವಕನ್ಯೆಯೆಂಬುದನ್ನು ತಿಳಿದು ಓನಸ್‌ಗೆ ತುಂಬ ಸಮಾಧಾನವಾಯಿತು. ಆದರೆ ಕೂಸಿಗೆ ಒದಗಿದ ವಿಪತ್ತಿಗಾಗಿ ಮಮ್ಮಲ ಮರುಗಿದನು.

ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ

”ಓನಸ್, ಆ ಮರದಲ್ಲಿ ವಾಸಿಸಿದ್ದ ಹಕ್ಕಿಗಳು ಕೋಮಲ ಹೃದಯದವು. ನನ್ನನ್ನು ಕಕ್ಕುಲತೆಯಿಂದ ಜೋಪಾನ ಮಾಡಿದವು. ನನ್ನ ಮೃದುಲವಾದ ಮೈಯನ್ನು ಬಿಸಿಲಿನ ಬಿಸಿ ತಾಗಬಾರದೆಂದು ತಳಿರುಗಳಿಂದ ನೆಳಲು ಮಾಡಿ ಪೊರೆದವು; ಹೂಗಳ ಮಕರಂದವನ್ನು ತಂದು ನನ್ನ ತುಟಿಯ ಮೇಲಿಟ್ಟು ಬೆಳೆಸಿದವು. ಕೆಲವು ದಿನಗಳು ಕಳೆದ ಬಳಿಕ ನನ್ನ ಈ ತಂದೆ ನನ್ನನ್ನು ತನ್ನ ಅಂತಃಕರಣದ ಛತ್ರದಲ್ಲಿ ತಂದಿಟ್ಟುಕೊಂಡು ಸಾಕಿದನು.”

‘ಮೊದಲೆ ದೇವಶರೀರ, ಮೇಲೆ ತಳಿರಿನ ನೆಳಲಿನಲ್ಲಿ ಮಕರಂದದಿಂದ ಬೆಳೆದುದು’ ಎಂದು ಅವಳನ್ನು ಮತ್ತೆ ಮತ್ತೆ ನೋಡಿ ಓನಸ್ ತಲೆದೂಗಿದನು. ಅವನ ಮುಖದ ಮೇಲೆ ಮೆಚ್ಚಿನ ಕಳೆ ತೇಲುವುದನ್ನು ಕಂಡು ಸಮ್ಮುರಮ್ಮನಿನ ಹೃದಯಕ್ಕೆ ನಲವೇರಿತು. ಓನಸ್ ಅವಳನ್ನು ಬಹಳ ಹೊತ್ತು ದಿಟ್ಟಿಸುತ್ತಿರಲು, ಅವಳ ಮೈಯೊಂದಿಗೆ ಒಂದಾಗಿಹೋಗಿದ್ದ ಅವಳ ಕೈಯೊಳಗಿನ ಮಾಲೆ, ಈಗ ಆತನಿಗೆ ಕಾಣಿಸಿಕೊಂಡಿತು. ಅದು ಅವನ ಮಾತಿಗೆ ಅನುವು ಮಾಡಿಕೊಟ್ಟಿತು.

“ಸಮ್ಮುರಮ್ಮನ್, ಈ ಮಾಲೆಯನ್ನು ಯಾರಿಗಾಗಿ ಕಟ್ಟುತ್ತೀ?”

“ನನಗಾಗಿ.”

”ನಿನಗಾಗಿ! ಧರಿಸಿದರೆ ಮೈಬಣ್ಣದಲ್ಲಿ ಕಾಣದ ಮಾಲೆಯನ್ನು ಧರಿಸಲಿಕ್ಕಿಲ್ಲ ನೀನು-ಅದಕ್ಕೆ ಕೇಳಿದೆ.”

“ಹಾಗಾದರೆ ಬೇಡ, ಮತ್ತೊಬ್ಬರಿಗೆ ಹಾಕಿ, ಅವರು ಹೇಗೆ ಚೆಂದ ಕಾಣುತ್ತಾರೆ ಎಂಬುದನ್ನು ಕಣ್ಣಾರೆ ನೋಡಬೇಕೆಂದು ಆಸೆ” ಎಂದು ಸಮ್ಮುರಮ್ಮನ್ ಕಣ್ಣಿಂದ ನಗೆಮುಗುಳನ್ನು ಚೆಲ್ಲಿದಳು. ಅವು ನೇರವಾಗಿ ಓನಸ್‌ನ ಹೃದಯದ ಮೇಲೆಯೆ ಬಿದ್ದವು.

”ಅಂತಹ ಭಾಗ್ಯಶಾಲಿ ಯಾರು?” ಎಂದು ಓನಸ್ ತನ್ನ ಪ್ರೇಮಮಯವಾದ ಕಣ್ಣುಗಳಲ್ಲಿ ಕುತೂಹಲವನ್ನು ಸೂಸಿದನು. ‘ಓನಸ್’ ಅಥವಾ ‘ನೀನೆ’ ಎಂದು ಉತ್ತರ ಬಂದೀತೆಂದು ಆತುರನಾಗಿ ಕುಳಿತನು. ಅವನ ಪಂಚೇಂದ್ರಿಯಗಳ ಅರಿವೆಲ್ಲವೂ ಕಿವಿಯೊಂದರಲ್ಲಿ ಒಟ್ಟುಗೂಡಿತ್ತು. ಸಮ್ಮುರಮ್ಮನಿನ ಮೊಗದಲ್ಲಿ ಸುಳಿದ ಒನಪು ಒಯ್ಯಾರಗಳು ಆತನಿಗೆ ಕಾಣಲಿಲ್ಲ; ನಾಚಿಕೆ ಮರುಕಗಳು ಕಾಣಲಿಲ್ಲ. ಅವಳು ಏನೂ ಹೇಳಲಿಲ್ಲ. ಅವನು ಹಾಗೆಯೆ ವಿಚಾರಮಗ್ನನಾಗಿಯೇ ಇದ್ದನು. ಅವಳು ಕುಳಿತಲ್ಲಿಂದ ಎದ್ದಳು. ಅವನು ನೋಡಲಿಲ್ಲ. ಅವಳು ಮಾತನಾಡದೆ ಮೆಲ್ಲನೆ ಅವನೆಡೆಗೆ ನಡೆದುಬಂದಳು. ಅವನಿಗೆ ತಿಳಿಯಲಿಲ್ಲ. ಅವನು ಮನಸ್ಸಿನಲ್ಲಿಯೆ ಹಾಗೆ ಹೀಗೆ ಉತ್ತರವನ್ನು ಕೇಳುತ್ತ ಅಂತಹ ಇಂತಹ ಚಿತ್ರಗಳನ್ನು ಚಿತ್ರಿಸಿ ನೋಡಿಕೊಳ್ಳುತ್ತಿದ್ದನು.

ಅವಳು ಮಾಲೆಯನ್ನು ಅವನ ಕೊರಳಿಗೆ ಹಾಕಿ, ಅವನ ಬಲಗೈಯನ್ನು ಹಿಡಿದು ಕುಲುಕಿ “ಏನು ಓನಸ್” ಎಂದಳು. ಓನಸ್ ಬೆಚ್ಚಿಬಿದ್ದನು.

“ಸಮ್ಮುರಮ್ಮನ್ ಇದೇನು!”

”ಅದೇನು ವಿಚಾರ ಎಂದೆ.”

“ಇದೇನು ಆಚಾರ ಎಂದೆ.”

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ

“ಇದೇನು ಪ್ರಶ್ನೆಗೆ ಪ್ರಶ್ನೆ; ಮುಂಚೆ ನನ್ನ ಪ್ರಶ್ನೆಗೆ ಉತ್ತರ ಕೊಡು. ಅದೇನು ವಿಚಾರ?”

“ಅದೇ ವಿಚಾರ; ಆ ಭಾಗ್ಯಶಾಲಿ ಯಾರು?”

“ಯಾರು?” ಎನ್ನುತ್ತ ಸಮ್ಮುರಮ್ಮನ್ ಅವನ ಕೈಯನ್ನು ಪುನಃ ಕುಲುಕಿದಳು.

ಆ ಪ್ರೇಮಬಂಧನವಿನ್ನೂ ಹಾಗೆಯೇ ಇದ್ದಿತು. ಬೇಟೆಗೆ ಹೋಗಿದ್ದ ಸಿಮ್ಮಸ್ ತಿರುಗಿಬಂದಳು. ಅದೇನೋ ಹೇಳುವರಲ್ಲ- ‘ಮಿಯಾ ಬೀಬೀ ರಾಜೀ, ತೋ ಕ್ಯಾ ಕರೇಗಾ ಕಾಜಿ?’ ಎಲ್ಲವನ್ನೂ ಅರಿತು ಸಿಮ್ಮಸ್‌ಗೆ ಸಂತೋಷವಾಯಿತು. ಅವನು ಆ ಪ್ರೇಮಿಯುಗಲವನ್ನು ಹರಸಿದನು.

*

ಅಸೀರಿಯದ ಸಾಮ್ರಾಟನ ಒಡೋಲಗದಲ್ಲಿ ನೆರೆದ ಬಂಟರು ಬಲ್ಬಟರೆಲ್ಲ ಅಳುಕಿ ಒಲ್ಲೆವೆಂದು ಹಿಂಜರಿದ ಸಾಹಸದ ಕಾರ್ಯಕ್ಕೆ ಓನಸ್ ವೀಳ್ಯವನ್ನೆತ್ತಿದನು. ನೆರೆಯ ಬಕ್ಟ್ರಿಯ ನಾಡಿನ ಬಲಿಷ್ಠನಾದ ರಾಜನನ್ನು ಹಣಿದು ರಾಜ್ಯವನ್ನು ಗೆಲ್ಲುವುದು ಅಂತಿಂತಹ ಕೆಲಸವಲ್ಲ. ಅದಕ್ಕೆ ಓನಸ್ ಪಣ ಮಾಡಿದನು. ನಮ್ಮ ನಾಡಿನಲ್ಲಿ ಇಂತಹ ವೀರ ಇವನಾದರೂ ಇರುವನಲ್ಲ ಎಂದು ಸಾಮ್ರಾಟ್ ನೈನಸ್ ಹೆಮ್ಮೆಯಿಂದ ಸಮಾಧಾನಪಟ್ಟನು. ಓನಸ್‌ನ ಹಿಂದೆ ಕದನಕಣಕ್ಕೆ ನುಗ್ಗಲು ದೊಡ್ಡದೊಂದು ದಂಡು ಹುರುಪಿನಿಂದ ಅಣಿಯಾಯಿತು.

ದೇವಕುಮಾರಿಯಾದ ಸಮ್ಮುರಮ್ಮನ್ ಗಂಡನ ವೀರೋಚಿತವಾದ ಪಣಕ್ಕಾಗಿ ಅಭಿಮಾನದಿಂದ ಹರುಷಿಸಿದಳು. ಅವಳು ಬೀಳ್ಕೊಳ್ಳಲು ಮನೆಗೆ ಬಂದ ಓನಸ್‌ನನ್ನು ಉಲ್ಲಾಸದಿಂದ ಇದಿರುಗೊಂಡಳು. ರುಚಿರುಚಿಯಾದ ಊಟದಿಂದ, ನಗೆಗೂಡಿದ ಮೆಲುನುಡಿಗಳಿಂದ ಅವಳು ಸತ್ಕರಿಸಿದುದು ಆತನಿಗೆ ಒಳ್ಳೇ ಸೇರಿತು.

“ಪ್ರಿಯೆ, ನಾನು ಹೋಗಿಬರುವೆನು.”

“ಪ್ರಿಯ, ಇಂತಹ ಪ್ರಸಂಗವು ವೀರಪತ್ನಿಗೆ ಒಂದು ಹಬ್ಬವಿದ್ದಂತೆ. ತಮ್ಮ ಹೋರಾಟವನ್ನು ಕಣ್ಣಾರೆ ನೋಡುವ ಬಯಕೆ ನನಗೆ.”

”ಸಮುರಮ್ಮನ್, ಈ ಮಾತುಗಳು ನನಗೆ ತುಂಬಾ ಹುರುಪುಗೊಡುತ್ತಿವೆ. ಆದರೆ ಕರ್ಕಶವಾದ ರಣಭೂಮಿಗೆ ನಿನ್ನನ್ನು ಬಾ ಎನ್ನಲಾರದಲ್ಲ ನನ್ನ ನಾಲಗೆ. ನೀನು ಇಲ್ಲಿದ್ದು ದೇವರನ್ನು ಪ್ರಾರ್ಥಿಸು: ಓನಸ್ಸಿಗೆ ಗೆಲವಾಗಲಿ; ವಿಜಯಿಯನ್ನು ಮಂಗಲವಾದ್ಯಗಳೊಂದಿಗೆ ಬರಮಾಡಿಕೊಳ್ಳುವ ದಿನ ನನಗೆ ಬೇಗ ಬರಲಿ ಎಂದು.”

”ಓನಸ್, ಬೇಡ. ಈ ಪ್ರಾರ್ಥನೆಯನ್ನು ನಾನು ಅಲ್ಲಿಯೇ ಮಾಡುವೆನು. ಕದನವನ್ನು ಕಂಡಂಜುವ ಅಳ್ಳೆದೆಯವಳೆಂದು ನನ್ನನ್ನು ತಿಳಿಯಬೇಡ.”

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ಓನಸ್ ನನಗೆ ತಕ್ಕವಳು ಈಕೆ ಎಂದುಕೊಂಡ. ಅವಳನ್ನು ಅಪ್ಪಿಕೊಂಡು “ನಿನ್ನ ಮನವನ್ನು ಮುರಿಯಲಾರೆ ಸುರಸುಂದರಿ; ಆಗಲಿ” ಎಂದ. ಅವಳೂ ಅವನೊಂದಿಗೆ ಕಾಳಗಕ್ಕೆ ಹೋದಳು.

ಬಕ್ಟ್ರಿಯಾದ ರಾಜನೊಡನೆ ಕಾಳಗವಾಯಿತು. ಎಷ್ಟೋ ದಿನಗಳಾದರೂ ಅವನು ಮಣಿಯಲಿಲ್ಲ. ಸುಮ್ಮುರಮ್ಮನ್ ಗುಪ್ತಚಾರಳಾಗಿದ್ದು ಓನಸ್‌ಗೆ ಒಂದು ಹಂಚಿಕೆಯನ್ನು ಹೇಳಿಕೊಟ್ಟಳು. ಅದರಂತೆ ಸಮರವು ಒಳ್ಳೆಯ ನಿಕರವಾಗಿ ನಡೆಯಲು, ಅದರಲ್ಲಿ ಬಕ್ಟ್ರಿಯದ ರಾಜನು ಹತನಾದನು. ಜಯಶ್ರೀ ಓನಸ್‌ಗೆ ಒಲಿದಳು. ಆ ರಾಜ್ಯವು ಅಸೀರಿಯದ ಸಾಮ್ರಾಟನ ಆಳಿಕೆಗೆ ಸೇರಿತು.

ಸಾಮ್ರಾಟ್ ನೈನಸ್ ಗೆಲುವಿನ ಹಬ್ಬವನ್ನು ಹಮ್ಮಿದನು. ಒಡೋಲಗದಲ್ಲಿ ಮಂಡಲಿಕರು, ನಾಯಕರು, ವೀರರು ಎಲ್ಲರೂ ಸೇರಿದರು. ಅಂದಿನ ಓಲಗದಲ್ಲಿ ವಿಜಯಿಗಳಿಗೆ ಸನ್ಮಾನವಾಗತಕ್ಕುದು. ಆಗ ನೈನಸ್ ಸಿಂಹಾಸನದಿಂದ ಎದ್ದು ನಿಂತು ಹೇಳಿದನು:

“ಈಗಿನ ಕಡುತರವಾದ ಸಮರವನ್ನು ಗೆಲಿದು ಓನಸ್ ನಮ್ಮನಾಡಿಗೆ ಕೀರ್ತಿ ತಂದಿದ್ದಾನೆ. ಇವನ ವಿಜಯಕ್ಕೆ ಇವನ ಹೆಂಡತಿಯಾದ ಸಮ್ಮುರಮ್ಮನಿನ ಯುಕ್ತಿಯೆ ಕಾರಣವಾಗಿರುವುದೆಂದು ತಿಳಿದು ಬಂದಿದೆ. ಆ ವೀರ ನಾರಿಗೆ ಸಾಮ್ರಾಜ್ಯವೇ ಧನ್ಯವಾದಗಳನ್ನರ್ಪಿಸುತ್ತಿದೆ. ಇಂದಿನ ವೀರಸಭೆಯಲ್ಲಿ ಅಗ್ರಸನ್ಮಾನವು ಅವಳಿಗೆ ಸಲ್ಲತಕ್ಕುದಾಗಿದೆ. ಅವಳು ಬಂದು ಈ ಬಳುವಳಿಯನ್ನು ನನ್ನಿಂದ ಕೈಯಾರೆ ಕೈಕೊಳ್ಳಲಿ.”

ಸುರಸುಂದರಿ2 1

ಮರುಚಣದಲ್ಲಿ ಆ ಸುರಸುಂದರಿ ಸಾಮ್ರಾಟನ ರತ್ನಸಿಂಹಾಸನದ ಪಕ್ಕದಲ್ಲಿ ಮಿಂಚಿನಂತೆ ಬಂದು ನಿಂತಳು. ಆ ಬೆಳಕು ಸಭಿಕರೆಲ್ಲರ ಚಿತ್ತವನ್ನು ಅತ್ತ ಸೆಳೆಯಿತು.

“ಸಾಮ್ರಾಟರು ಗುಡ್ಡ ಮಾಡಿ ಹೇಳಿದುದರಲ್ಲಿ ನನ್ನ ಸೇವೆ ಕಡ್ಡಿಯಾಗಿ ಮಾತ್ರ ಇದ್ದೀತು. ನಾನೀ ಉಡುಗೊರೆಯನ್ನು-ಸನ್ಮಾನವೆಂತಲ್ಲ, ಸಾಮ್ರಾಟರ ಗುಣಗ್ರಾಹಕತೆಯ ಕುರುಹೆಂದು ತೆಗೆದುಕೊಳ್ಳುತ್ತೇನೆ. ಸಾಮ್ರಾಟರಿಗೆ ಜಯವಾಗಲಿ!” ಎಂದು ಸಮ್ಮುರಮ್ಮನ್ ಸಭಯವಿನಯದಿಂದ ನುಡಿದಳು.

ಅವಳ ರೂಪರಾಶಿಗೆ ಮನಸೋತುಹೋಗಿದ್ದನು ನೈನಸ್, ಮಣಿಹಾರವನ್ನು ತನ್ನ ಕೈಯಿಂದಲೆ ಅವಳ ಕೊರಳಿಗೆ ತೊಡಿಸಿದನು; ಜರದ ರೇಶಿಮೆಯ ಹಚ್ಚಡಗಳ ಉಡುಗೊರೆಯನ್ನು ಕೊಟ್ಟನು. ಅವಳು ಕೃತಜ್ಞತೆಯಿಂದ ಸಾಮ್ರಾಟನಿಗೆ ಬಾಗಿ ಗಂಭೀರಗತಿಯಿಂದ ಹೊರಟು ಹೋದಳು. ಓನಸ್‌ಗೆ, ಪಡವಳರಿಗೆ, ಬಂಟರಿಗೆ ತಕ್ಕ ರೀತಿಯಲ್ಲಿ ಸನ್ಮಾನಗಳು ಆ ಬಳಿಕ ಸಂದವು. ಉತ್ಸವದ ಕೊನೆಯಲ್ಲಿ ಸಾಮ್ರಾಟನು ಆ ಸುರಸುಂದರಿಯನ್ನು ಮತ್ತೆ ಹೊಗಳಿದನು:

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

“ಸಮ್ಮುರಮ್ಮನ್ ನಮ್ಮ ಒಬ್ಬ ವೀರಾಗ್ರಣಿ ನಾಯಕನ ಹೆಂಡತಿಯಾಗಿದ್ದಾಳೆ. ಆದರೂ ಅವಳು ಸಾಮ್ರಾಜ್ಞಿಯ ಯೋಗ್ಯತೆಯುಳ್ಳವಳಾಗಿದ್ದಾಳೆ.”

ಈ ಮಾತು ಸಮ್ಮುರಮ್ಮನಿನ ಮನಸ್ಸಿನಲ್ಲಿ ಒಳ್ಳೆಯ ನಿಚ್ಚಳವಾಗಿ ಮೂಡಿತು. ತನ್ನ ಹೆತ್ತ ತಂದೆಯ ಆಳದಲ್ಲಿ ಮುಳುಗಿದ್ದ ಹರಕೆ ತೇಲಿ ಬಂದು ಆ ಮಾತಿನ ಒತ್ತಿಗೆ ನಿಂತಿತು. ಅವಳು ಅವೆರಡನ್ನೂ ಮತ್ತೆ ಮತ್ತೆ ಓದಿಕೊಂಡಳು. ಅವಳ ವಿಚಾರದಲ್ಲಿ ಕ್ರಾಂತಿಯ ತೆರೆಗಳೆದ್ದವು.

ತನಗೆ ಗೆಲುವು ತಂದುದಕ್ಕಾಗಿ ಓನಸ್ ಸಮ್ಮುರಮ್ಮನ್‌ಗೆ ಬಹಳವಾಗಿ ಒಲಿದನು. ಅವಳ ಹೆಗ್ಗಳಿಕೆಯನ್ನು ತುಂಬಿದ ವೀರಸಭೆಯಲ್ಲಿ ಸಾಮ್ರಾಟನು ಬಾಯ್ತುಂಬ ನುಡಿದುದಕ್ಕಾಗಿ ಅವನಿಗೆ ಅಭಿಮಾನವೆನಿಸಿತು. ಸಂತೋಷವು ಹೊಟ್ಟೆಯಲ್ಲಿ ಹಿಡಿಸಲಾರದಷ್ಟಾಯಿತು. ಅವನು ತನ್ನ ಪ್ರಿಯತಮೆಯೊಂದಿಗೆ ತನ್ನ ಬಿಡಾರಕ್ಕೆ ತೆರಳಿದನು. ದಾರಿಯಲ್ಲಿ ತಾನು ಅವಳನ್ನು ಪ್ರೀತಿಯಿಂದ ಮಾತಾಡಿಸಿದಾಗ ಅವಳು ಸರಿಯಾಗಿ ಮಾತಾಡಲಿಲ್ಲ. ಓನಸ್ “ಅತಿ ಸಂತೋಷದ ಉನ್ಮಾದ” ಎಂದುಕೊಂಡನು.

ಸಾಮ್ರಾಟನು ಎಲ್ಲ ವೀರರಿಗೆ ಅವರವರ ಊರಿಗೆ ಹೋಗಲು ಹೇಳಿದನು. ಓನಸ್‌ಗೆ ಅಪ್ಪಣೆ ದೊರೆಯಲಿಲ್ಲ. ”ನೀನೂ ನಿನ್ನ ಹೆಂಡತಿಯೂ ಕಾಳಗದಲ್ಲಿ ಬಹಳವಾಗಿ ದಣಿದಿದ್ದೀರಿ. ನಾಲ್ಕು ದಿನ ಇದ್ದು ಹೋಗಬೇಕು” ಎಂದು ಸಾಮ್ರಾಟನು ಹೇಳಿಕಳಿಸಿದನು. ಅವರಿಗೆ ಬೇಕಾದ ಸರಬರಾಯಿಯ ಏರ್ಪಾಡು ಆಯಿತು.

ಸಮ್ಮುರಮ್ಮನ್ ಮೊದಲಿನಷ್ಟು ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಆದರೂ ಅವಳು ಓನಸ್‌ಗೆ ಪ್ರೀತಿಯನ್ನು ತೋರ್ಪಡಿಸದೆ ಇರಲಿಲ್ಲ. ಮಾತುಗಳು ಬುದ್ಧಿಪೂರ್ವಕವಾಗಿ ಆಡುತ್ತಿದ್ದಂತೆ ಇದ್ದವು. ಏಕೆಂದರೆ ಈಗವಳು ಬಹಳವಾಗಿ ಬೀಗಿದ್ದಳು: ‘ವೀರಸಭೆಯಲ್ಲಿ ನನಗೆ ಸಾಮ್ರಾಟರಿಂದ ಅಗ್ರ ಬಹುಮಾನ; ಓನಸ್‌ಗಿಂತ ನನಗೆ ಹೆಚ್ಚಿನ ಮಾನ; ಅಲ್ಲ, ಸಾಮ್ರಾಜ್ಞಿಯ ಯೋಗ್ಯತೆ ನನ್ನದು!’ ಸಮ್ಮುರಮ್ಮನ್ ಸಭೆಯಲ್ಲಿ ತಾನು ಕಂಡ ಸಾಮ್ರಾಟನ ಮುಖಚರ್ಯೆಯನ್ನು ನೆನೆದು, ಅದರ ಇಂಗಿತವನ್ನು ತಿಳಿದುಕೊಳ್ಳಲು ಹವಣಿಸುತ್ತಲಿದ್ದಳು. ಆತನ ಮಾತಿಗೆ ಅರ್ಥ ಮಾಡಿಕೊಳ್ಳುತ್ತಲಿದ್ದಳು. ತಮ್ಮನ್ನು ಸಾಮ್ರಾಟನು ನಾಲ್ಕು ದಿನ ನಿಲ್ಲಿಸಿಕೊಂಡುದರಿಂದ ಅವಳ ವಿಚಾರವು ಒಂದು ನಿಶ್ಚಿತ ಅರ್ಥಕ್ಕೆ ಬರುತ್ತಲಿತ್ತು: ‘ತಂದೆಯ ಹರಕೆಯಂತೆ ಮಹಾರಾಜ್ಞಿಯಾಗುವ ಸುಯೋಗವು ಈಗಲೇ ಬರಬಾರದೇಕೆ?’

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ಅಂದೆಯೆ ಸಾಮ್ರಾಟನಿಂದ ಒಂದು ಓಲೆ ಓನಸ್‌ಗೆ ಬಂದಿತು. ಅದು ಊರಿಗೆ ಹೊರಡುವುದಕ್ಕೆ ಅಪ್ಪಣೆಯಾಗಿರಲಿಲ್ಲ.

“ಓನಸ್, ನೀನು ನನ್ನ ಒಳ್ಳೆಯ ವೀರನಾಯಕನಾಗಿರುವೆ. ಮೊನ್ನೆಯ ನಿನ್ನ ವಿಜಯವು ನನಗೆ ಅಪೂರ್ವ ಲಾಭವನ್ನು ತಂದಿದೆ. ನೀನು ಸಾಮ್ರಾಜ್ಯದ ಸೇನಾಪತಿಯಾಗುವಷ್ಟು ಬಲ್ಲಿದನು. ಆದರೆ ಅದಕ್ಕಾಗಿ ನೀನು ಸ್ವಲ್ಪ ತ್ಯಾಗ ಮಾಡಬೇಕು: ನನಗೆ ಕಾಣಿಕೆ ಕೊಡಬೇಕು, ನಿನ್ನ ಸಮ್ಮುರಮ್ಮನನ್ನು!”

ಓನಸ್‌ನ ಮುಖವು ವಿಷಾದದಿಂದ ವಿವರ್ಣವಾಯಿತು. ಅವನು ತಿರಸ್ಕಾರದಿಂದ ಕಾಣದ ದೃಷ್ಟಿಯಿಂದ ಓಲೆಯನ್ನು ಕ್ಷಣ ಹೊತ್ತು ನೋಡಿದನು; ರೋಷದಿಂದ ಹರಿದು ಚೆಲ್ಲಿದನು.

ಅದೇ ಹೊತ್ತಿಗೆ ಅಲ್ಲಿ ಊಳಿಗಕ್ಕಿದ್ದ ತೊತ್ತು ಒಂದು ಓಲೆಯನ್ನು ಸಮ್ಮುರಮ್ಮನ್ಗೆ ತಂದು ಕೊಟ್ಟಳು. ಅದು ಸಾಮ್ರಾಟನ ಓಲೆಯೆಂದು ಅರಳಿದ ಮೊಗದವಳಾಗಿ ಒಡೆದಳು:

“ಸಮ್ಮುರಮ್ಮನ್, ನೀನು ನನಗೆ ರಾಜ್ಯವನ್ನು ಗೆಲಿದುಕೊಟ್ಟೆ. ಸನ್ಮಾನವನ್ನು ತೆಗೆದುಕೊಳ್ಳಲೆಂದು ಬಂದ ನೀನು ಉಡುಗೊರೆಯೊಂದಿಗೆ ನನ್ನ ಹೃದಯವನ್ನು ಕದ್ದೊಯ್ದೆ. ನಾನು ಮಾಡಿದ ಸನ್ಮಾನ ಕಡಿಮೆಯಾಯಿತೆಂಬುದು ನಿಜ. ಅದಕ್ಕೇ ನೀನು ಹೀಗೆ ಮಾಡಿದೆಯೇನೋ. ನಿಜವಾಗಿಯೂ ನೀನು ಸಾಮ್ರಾಜ್ಞಿಯಾಗಲು ತಕ್ಕವಳು. ನೀನಿಂದು ಮನಸ್ಸು ಮಾಡಿದರೆ, ನಿನ್ನ ತಂದೆಯ ಹರಕೆಯನ್ನು ಈ ಕ್ಷಣದಲ್ಲಿ ಕೈಗೂಡಿಸಿಕೊಳ್ಳಬಲ್ಲೆ.”

”ಪ್ರಿಯೆ, ಸಮ್ಮುರಮ್ಮನ್” ಎನ್ನುತ್ತ ಓನಸ್ ಆತುರದಿಂದ ಅಲ್ಲಿಗೆ ಧಾವಿಸಿ ಬಂದನು. ಸಂತೋಷದಲ್ಲಿ ಮೈಮರೆತಿದ್ದ ಅವಳು ಒಮ್ಮೆಲೆ ಎಚ್ಚತ್ತು “ಏಕೆ ಓನಸ್?” ಎಂದಳು.

”ನಾವೀಗಲೆ ಹೊರಡಬೇಕು”.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

”ಅದೇನು, ಸಾಮ್ರಾಟನ ಆಜ್ಞೆಯಾಯಿತೆ ಈಗಲೆ?”

”ಆದಂತೆಯೆ; ನಾವಿನ್ನು ಒಂದು ಕ್ಷಣವೂ ಇಲ್ಲಿ ನಿಲ್ಲುವುದು ಬೇಡ.”

“ಅಂತಹದೇನು ಓನಸ್?”

“ಇದ್ದರೆ ದೊಡ್ಡ ಅಪಾಯವಿದೆ, ಸಮ್ಮುರಮ್ಮನ್.”

“ಹೋಗುವುದೆಲ್ಲಿ?”

“ಎಲ್ಲಿಯಾದರೂ ಈ ರಾಜ್ಯವನ್ನು ಬಿಟ್ಟು ಹೋಗಬೇಕು. ನನ್ನ ಗೆಲುವಿನ ಪರಿಣಾಮವು ವಿಪರೀತವಾಯಿತು. ಅರಸನು ಹುಚ್ಚನಾಗಿದ್ದಾನೆ.”

“ಏನೆಂದೆ ಓನಸ್? ನಿನಗೆ ಹುಚ್ಚಿಲ್ಲವಷ್ಟೆ!”

“ಇಲ್ಲ, ಬೇಗ ಹೊರಡು.”

”ಸಾಮ್ರಾಟನನ್ನು ಕಾಣದೆ ಹೋಗುವುದು ಒಳಿತಲ್ಲ.”

“ಅದೇ ಒಳಿತು. ಅವನಿಂದಲೆ ಕೇಡುಂಟು.”

“ನೀನು ಬಿಡು ಓನಸ್, ನಾನು ಹೋಗಿ ಬರುತ್ತೇನೆ.”

“ನಿನಗೂ ಅಪಾಯ, ಹೋಗಬೇಡ ಸಮ್ಮುರಮ್ಮನ್.”

“ಮೊನ್ನೆ ಸನ್ಮಾನಿಸಿದವನಿಂದ ಇಂದು ಕೇಡು! ಎಂದೂ ಆಗಲಾರದು.”

“ಆ ಸನ್ಮಾನದಿಂದಲೆ ಅವನು ಹುಚ್ಚನಾಗಿದ್ದಾನೆ; ಸಮ್ಮುರಮ್ಮನ್, ಸಾಮ್ರಾಟನು ನಿನ್ನನ್ನು ಪ್ರೀತಿಸುತ್ತಾನಂತೆ. ಆದುದರಿಂದಲೆ ನಾವು ಈ ರಾಜ್ಯವನ್ನು ಬಿಟ್ಟು ಹೋಗಬೇಕು. ಪ್ರಿಯೆ, ನಾನು ಕದನಕ್ಕಾಗಿ ವೀಳ್ಯವೆತ್ತಿದುದು ಕುತ್ತಕ್ಕೆ ಆವುತನ ಕೊಟ್ಟಂತಾಯಿತು.”

“ಸಾಮ್ರಾಟನು ನನ್ನನ್ನು ಪ್ರೀತಿಸುವನು!” ಸ್ವಲ್ಪ ತಡೆದು ಸಮ್ಮುರಮ್ಮನ್ ನುಡಿದಳು. “ನಾನು ಹೇಳಿದ ನನ್ನ ಕತೆ ನೆನಪಿಲ್ಲವೆ ನಿನಗೆ? ನನ್ನ ತಂದೆಯ ಹರಕೆಯನ್ನು ನೆನೆಸಿಕೋ ಓನಸ್.”

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

ಮಾತುಗಳು ಹೃದಯವನ್ನು ತಾಗಿದಾಗ ಅವನಿಗೆ ಬೆಣಚುಗಲ್ಲಿಂದ ಕೊರೆದಂತಾಯಿತು. ‘ನಾನು ಇವಳನ್ನು ಯುದ್ಧಕ್ಕೆ ಸಂಗಡ ಕರೆದುಕೊಂಡು ಬರಬಾರದಾಗಿತ್ತು. ಇವಳ ಸಲಹೆಯಂತೆ ನಾನು ಗೆಲ್ಲಬಾರದಾಗಿತ್ತು. ಹಾಳು ವಿಜಯೋತ್ಸವದಲ್ಲಾದ ಇವಳ ಸನ್ಮಾನಕ್ಕಾಗಿ ಎಷ್ಟು ಹೆಮ್ಮೆಪಟ್ಟೆ ನಾನು. ನಾನು ಹುಚ್ಚನೇ ಅಹುದೋ ಏನೊ!’

“ಸಮ್ಮುರಮ್ಮನ್, ಸಾಮ್ರಾಟನ ಪ್ರೇಮವನ್ನು ಒಪ್ಪುಗೊಳ್ಳುವೆಯಾ? ಸಮ್ಮುರಮ್ಮನ್…!”

”ಅಹುದಲ್ಲವೆ ಮತ್ತೆ, ದೈವಘಟನೆಯ ಹಾಗಿರುವುದು: ನಾನು ಮಹಾರಾಣಿಯಾಗಬೇಕೆಂದು.”

“ನನ್ನನ್ನು ನಿಜವಾಗಿಯೂ ಪ್ರೇಮಿಸಲಿಲ್ಲವೆ ನೀನು?”

“ನಿಜವಾಗಿ, ಚೆನ್ನಾಗಿ ಪ್ರೀತಿಸಿದೆನಲ್ಲ ಓನಸ್.”

”ಇನ್ನೂ ಪ್ರೀತಿಸಲಾರೆಯಾ ನನ್ನ ಸಮ್ಮುರಮ್ಮನ್?”

“ಪ್ರೀತಿಸದೇನು? ನಾನು ಸಾಮ್ರಾಜ್ಞಿಯಾದರೆ ನಿಜವಾಗಿಯೂ ನಿನಗೆ ಹೆಚ್ಚಿನ ಪದವಿ ಬಂದೀತು.”

“ಸಮ್ಮುರಮ್ಮನ್ ಬೇಕು ನನಗೆ; ಯಾವ ಪದವಿಯೂ ಯಾವ ರಾಜ್ಯವೂ ಬೇಡ. ನೀನು ಬೇಕು; ಕೀರ್ತಿ ಬೇಕು. ಸಮ್ಮುರಮ್ಮನ್-ಸಮ್ಮುರಮ್ಮನ್, ನಿನ್ನ ಪ್ರೇಮವನ್ನು ಎಷ್ಟು ನಂಬಿದ್ದೆನಲ್ಲ ನಾನು! ನೀನು ನನ್ನನ್ನು ತೊರೆಯಬೇಡ. ನಿನ್ನ ಪ್ರಿಯನನ್ನು ಓಲಯಿಸು.”

“ಪ್ರಿಯನನ್ನಲ್ಲದೆ ಅಪ್ರಿಯನನ್ನು ಓಲಯಿಸಲೆ, ಓನಸ್?”

“ನನ್ನನ್ನು ಯಾವ ತಪ್ಪಿಗಾಗಿ ತೊರೆಯುವೆ ಸಮ್ಮುರಮ್ಮನ್? ನನ್ನ ಪ್ರೇಮದಲ್ಲಿ ಕೊರತೆಯನ್ನು ಏನು ಕಂಡೆ ಸಮ್ಮುರಮ್ಮನ್?”

“ಪ್ರೇಮದಲ್ಲಿ ಕೊರತೆಯಿಲ್ಲ ಓನಸ್; ಕ್ಷಮಿಸು, ಪ್ರೇಮದ ಫಲದಲ್ಲಿ ಕೊರತೆಯಿದೆ. ನೀನೊಬ್ಬ ನಾಯಕನಾಗಿರುವುದೆ ತಪ್ಪು. ನಿನ್ನ ಪ್ರೇಮವು ನನ್ನ ತಂದೆಯ ಹರಕೆಯನ್ನು ಹಣ್ಣಿಸಲಾರದು.”

ಗಂಭೀರವಾದ ಈ ನಿಚ್ಚಳವಾದ ಅವಳ ನುಡಿಗಳು ಓನಸ್‌ನ ಆಸೆಯನ್ನು ಕಮರಿಸಿದವು. ಅವನು ಬಹಳ ನಿರ್ವಿಣ್ಣನಾದನು. “ಸಮ್ಮುರಮ್ಮನ್, ನಿನ್ನನ್ನಗಲಿ ನಾನು ಉಳಿಯಲಾರೆನು. ನಿನ್ನನ್ನು ಹೆರವರಿಗೆ ನೀಡಿ ಅಪಕೀರ್ತಿಗೆ ಗುರಿಯಾಗಿ ನಾನು ಬದುಕಲಾರೆನು. ನನ್ನನ್ನು ಸಲಹು, ಪ್ರಿಯ ಸಮ್ಮುರಮ್ಮನ್!” ಎಂದನು.

ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್

“ಹಾಗನ್ನದಿರು ಓನಸ್. ನಾನು ಅಪ್ರಿಯನನ್ನು ಪ್ರೀತಿಸಲೊಲ್ಲೆನು.”

“ಸುರಸುಂದರಿ, ಮಾನವರಿಗಿಂತ ಹೆಚ್ಚಿನವರೆಂದು ಸುರರ ಅಗ್ಗಳಿಕೆ. ಹೀನಮಾನವರಂತೆ ಚಂಚಲ ಚಿತ್ತಳಾಗದಿರು. ಮಾದರಿಯಾದ ಪ್ರೇಮಧರ್ಮವನ್ನು ಪಾಲಿಸು. ಕರುಣಾಮಯವಾದ ದೈವೀಹೃದಯವನ್ನು ತೋರಿಸು. ಹರಿಗಡಿಯದ ಪ್ರೇಮರಸಪ್ರವಾಹದಲ್ಲಿಯೂ ಬತ್ತದ ಕರುಣಾರಸದ ತೊರೆಯಲ್ಲಿಯೂ ನನ್ನನ್ನು ಮೀಯಿಸು, ನನ್ನನ್ನು ಉಳಿಸು. ನನ್ನ ಕೀರ್ತಿಯನ್ನು ಉಳಿಸು.”

ಅವಳ ಹೃದಯವೆಲ್ಲ ಮಹತ್ವಾಕಾಂಕ್ಷೆಯಿಂದ ತುಂಬಿದ್ದಿತು. ಯಾವ ಮಾತೂ ಅದಕ್ಕೆ ಹತ್ತದೆ ಜಾರಿ ಹೋದವು. ಆಕೆ ಅವನಿಗಾಗಿ ಮರುಗಲಿಲ್ಲ; ಅವಳ ಅಳಿವು-ಉಳಿವುಗಳ ಗೊಡವೆ ಅವಳಿಗೆ ಬೇಕಾಗಿರಲಿಲ್ಲ; ಕೇವಲ ಪ್ರೇಮಕ್ಕಾಗಿ ಅವನೊಂದಿಗೆ ಅಂಡಲೆಯುವುದು ಅವಳಿಗೆ ಬೇಕಾಗಿರಲಿಲ್ಲ. ಮಹಾರಾಣಿಯಾಗುವುದು ಬೇಕು. ಅದರ ಮುಂದೆ ಯಾವುದನ್ನೂ ಅವಳು ಲೆಕ್ಕಿಸಲಿಲ್ಲ.

ಅವಳ ಪತ್ರಕ್ಕೆ ಸಾಮ್ರಾಟನ ಉತ್ತರವೂ ಬಂದಿತು. “ಸಮ್ಮುರಮ್ಮನ್, ನಿನ್ನ ಒಲವಿನಿಂದ ಕೃತಕೃತ್ಯನಾದೆನು. ಇಂದಿನಿಂದ ನೀನು ಸಾಮ್ರಾಜ್ಞಿಯಾಗಿರುವೆ. ನಿನ್ನನ್ನು ಹಿಡಿಯುವ ಅಧಿಕಾರವು ಇನ್ನಾರಿಗಿದೆ?”

“ಓನಸ್, ನೋಡು ನಾನು ಸಮಾಜ್ಞಿಯಾಗಿರುವೆನು. ನನ್ನನ್ನು ತಡೆಯದಿರು” ಎಂದು ಸಮ್ಮುರಮ್ಮನ್ ಹೊರಡಲು ಅನುವಾದಳು.

“ಹೋಗು ಸಮ್ಮುರಮ್ಮನ್, ಸುರಸುಂದರಿಯ ತೊಗಲನ್ನು ತೊಟ್ಟ ಅಸುರಹೃದಯವೆ ಹೋಗು. ಹಾಲುಮಾತಿನ ವಿಷಹೃದಯವೆ ಹೋಗು, ನಿನ್ನ ನಾಣಿಲಿತನಕ್ಕೆ ದೇವತೆಗಳು ನಾಚಿದರು ಹೋಗು. ನಿನ್ನ ಪ್ರೇಮಾಮೃತದ ಶರಧಿಯಲ್ಲಿ ಈಸಾಡುವ ಹುಚ್ಚಿ ಸಾಮ್ರಾಟನನ್ನಾದರೂ ಕಚ್ಚದಿರು ಹೋಗು, ನಾಗಿಣಿ. ನನಗೊದಗುವ ಅಪಕೀರ್ತಿಗಾಗಿ, ನಿನ್ನ ಅಸುರಹೃದಯಕ್ಕೆ, ನಿನ್ನ ನಾಣಿಲಿತನಕ್ಕೆ, ನಿನ್ನ ದೂಷಿತ ಪ್ರೇಮಕ್ಕೆ ಕೊಡುವ ನನ್ನ ಬಲಿಯನ್ನು ತೆಗೆದುಕೊಂಡು ಹೋಗು.”

ಓನಸ್ ಕಠಾರಿಯಿಂದ ತನ್ನೆದೆಯನ್ನು ಇರಿದುಕೊಂಡನು; ನೆಲಕ್ಕುರುಳಿದನು. ಸಾಮ್ರಾಜ್ಞಿ ಅವನ ಎದೆಯ ಮೇಲಿಂದ ನಡೆದುಹೋದಳು; ಅವನ ಹರಿಯುವ ನೆತ್ತರನ್ನು ದಾಟಿ ಹೋದಳು.

*

“ನೈನಸ್, ಓ ಪ್ರಿಯ ನೈನಸ್, ಬಂದೆ, ಇಗೊ ಬಂದೆ.”

ಸಮ್ಮುರಮ್ಮನ್ ಸಾಮ್ರಾಟನ ಅರಮನೆಯೊಳಕ್ಕೆ ಪ್ರೇಮಸುಧೆಯನ್ನು ಹರಿಸುತ್ತ ಬಂದಳು. ಆತುರನಾದ ಸಾಮ್ರಾಟನು ಅದನ್ನು ಕುಡಿದು ಹುಚ್ಚನಾದನು. ಅವಳು ನಕ್ಕ ಪ್ರೇಮದ ನಗೆ ಮಾಟದ ಬೂದಿಯಂತೆ ಅರಮನೆಯನ್ನೆಲ್ಲ ಪಸರಿಸಿತು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

“ದೀನದಾಸನಿಗೆ ಒಲಿದು ಬಂದ ಸುರಸುಂದರಿ, ನೀನು ನನ್ನ ಹೃದಯೇಶ್ವರಿಯಾಗಿ ಆಳು ಬಾ,” ಎಂದು ನೈನಸ್ ಅವಳನ್ನು ಮುಗ್ಧ ವಚನಗಳಿಂದ ಬರಮಾಡಿಕೊಂಡನು. ಅವನು ಆಕೆಯ ಪ್ರೇಮದ ಅನುನೀತನಾಗಿ ಅವಳನ್ನು ಹೆಚ್ಚುಹೆಚ್ಚಾಗಿ ಒಲಿಸಲು ಆರಾಧನೆಯಲ್ಲಿ ತತ್ಪರನಾದನು. ಹಾಲಿನ ಕೊಳದಲ್ಲಿ ಬೆಳೆದ ಬೆಳುದಾವರೆಯ ಹೂಗಳಿಂದ ಮಾಡಿದಂತಿರುವ ಅಂಗದ ಸುರಸುಂದರಿ, ಅಮೃತದಲ್ಲಿ ಅದ್ದಿದ ಕಲ್ಪವೃಕ್ಷದ ಹಣ್ಣಿನ ಸವಿಯನ್ನು ಬೆರೆಸಿದಂತಿರುವ ಮಾತಿನ ಸುರಸುಂದರಿ ಎಂದು ನೈನಸ್ ಅವಳನ್ನು ಕೊಂಡಾಡಿದನು. ಸಮ್ಮುರಮ್ಮನ್ ಪ್ರೇಮವು ಹೃದಯದಿಂದ ಮೇರೆವರಿದು ಬಂತೆಂಬಂತೆ ತನ್ನ ನಳಿದೋಳುಗಳನ್ನು ಅವನ ಕೊರಳಿಗೆ ತೊಡಿಸಿ, “ಸಾಕು ನೈನಸ್” ಎಂದು ಆತನ ಬಾಯನ್ನು ಮುಚ್ಚಿದಳು- ತನ್ನ ಮೃದುಮಧುರ ಚೆಂದುಟಿಗಳಿಂದ.

ಸಮ್ಮುರಮ್ಮನಿನ ಮೋಹರಸದಿಂದ ಹುಚ್ಚನಾದ ಸಾಮ್ರಾಟನು ಸುರಾಪಾನದಿಂದ ಮೈಮರೆತಿದ್ದನು. ಸಮ್ಮುರಮ್ಮನ್ ಮುತ್ತಿನ ಪುತ್ಥಳಿಯಂತೆ ಸುಳಿಸುಳಿದು ಬಂದು ಅವನ ಪಕ್ಕದಲ್ಲಿ ಕುಳಿತಳು. ಕುಳಿತು,

“ನಲ್ಲ, ನೀನು ತೋರುವ ಪ್ರೇಮಕ್ಕೆ ಪ್ರತಿಯಾಗಿ ನಾನು ತಕ್ಕಂತೆ ಆರಾಧನೆಯನ್ನು ಇದುವರೆಗೆ ಸಲ್ಲಿಸದೆ ಹೋದೆನಲ್ಲ. ಅದಕ್ಕಾಗಿ ನೀನು ಬೇಸತ್ತಿಲ್ಲವಷ್ಟೆ?” ಎಂದಳು.

“ಏನೆಂದೆ ಪ್ರಿಯಕರೆ, ಇದಕ್ಕಿಂತಲೂ ಹೆಚ್ಚಿನ ಒಂದಾದರೂ ಆರಾಧನೆಯಿರುವುದೆಂದು ನಾನು ಅರಿಯೆನಲ್ಲ.”

“ಇಂದು ಅಂತಹ ಒಂದು ಹೊಸ ಪರಿಯಲ್ಲಿ ಆರಾಧಿಸಬೇಕೆಂದು ನನ್ನಾಸೆ. ಅಪ್ಪಣೆಯೆ?”

”ಅಂತಹ ಒದಗಿಬಂದ ಭಾಗ್ಯವನ್ನು ಒಲ್ಲೆನೆನ್ನುವ ಮರುಳ ಉಂಟೆ?”

ಸುರಸುಂದರಿ3 1

ಅವಳು ನರ್ತನ ಸೇವೆಯನ್ನು ಸಲ್ಲಿಸಿದಳು. ಮನ್ಮಥನ ಒರೆಯಚ್ಚಿದ ಕತ್ತಿಯಂತೆ ತೋಳನ್ನು ತಿರುವಿ ಕುಣಿದಳು. ತನ್ನ ಬೆರಳುಗಳು ಎತ್ತೆತ್ತ ಮಿಡಿನಾಗರಗಳಾಡಿದಂತೆ ಚಲಿಸುವವೊ ಅತ್ತತ್ತ ಸಾಮ್ರಾಟನ ಕಣ್ಣುಗಳನ್ನು ಎಳೆದಾಡಿ ಕುಣಿದಳು. ಇನಿಯನನ್ನು ಅಪ್ಪುವಳೊ ಎಂಬ ಹಾಗೆ ಇದಿರಾಗಿ ಬಂದು ಕುಣಿದಳು. ಸಮ್ಮೋಹನ ಜಲಧಿಯ ಸುಳಿಯೊ ಎಂಬ ಹಾಗೆ ಸುಳಿದಾಡಿ ಕುಣಿದಳು. ಕೊನೆಯಲ್ಲಿ ಸಾಮ್ರಾಟನ ಕೈಯನ್ನು ಹಿಡಿದು ಮುಂಗೈಗೆ ಮುತ್ತಿಟ್ಟು ಅವನ ಚಿತ್ತವನ್ನು ಚಿಗುರಿಸಿದಳು. “ನನ್ನ ಇನಿಯಳಿಗೆ ಇದೂ ಬರುತ್ತದೆ” ಎಂದು ಅವನೆಂದುಕೊಂಡ.

”ಚೆನ್ನು ಚೆನ್ನು, ಸಮ್ಮುರಮ್ಮನ್, ಮೆಚ್ಚಿದೆ. ಏನು ಪ್ರತಿಫಲವನ್ನು ಕೊಡಲಿ?”

“ಅದನ್ನು ನಾನು ಆಶಿಸುವವಳಲ್ಲ ನಲ್ಲ.”

“ಕೊಳ್ಳಲೇಬೇಕು ಮೋಹಿನಿ-ನನ್ನ ಮನಸ್ಸಿನ ತೃಪ್ತಿಗಾಗಿ.”

“ಹಾಗಾದರೆ, ನಿನಗೆ ರಾಜಕಾರ್ಯದಿಂದ ಸ್ವಲ್ಪ ವಿರಾಮಸುಖವನ್ನು ಕಲ್ಪಿಸಬೇಕೆಂದು ನನ್ನ ಮನೀಷೆ. ಐದು ದಿನ ಸಾಕು-ಸಾಮ್ರಾಜ್ಯವನ್ನು ನಾನು ಆಳಬಹುದೋ?”

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

”ಸಮ್ಮುರಮ್ಮನ್, ಅಂತಹ ತಕ್ಕುಮೆಯುಳ್ಳವಳೆಂದೇ ನಿನಗೆ ಒಲಿಯಲಿಲ್ಲವೆ ನಾನು? ನಿನ್ನ ಜಾಣ್ಮೆ ನನಗೆ ಸಂತೋಷವನ್ನೇ ತರುವುದು.”

*

ಒಂದು ದಿನದಲ್ಲಿಯೆ ಮಂತ್ರಿಮಂಡಲವು ಅವಳ ಅಧೀನವಾಯಿತು-ಅವಳ ಮೃದುಲ ಮಂಜುಲ ಚತುರೋಕ್ತಿಗೆ; ಅವಳ ಸುಕೋಮಲವಾದ ಅಂಗದ ಧೀರಗಂಭೀರವಾದ ಠೀವಿಗೆ ರಾಜ್ಯಸೂತ್ರಗಳನ್ನು ಸಮ್ಮುರಮ್ಮನ್ ಸಲೀಲವಾಗಿ ಕೈಗೆ ತೆಗೆದುಕೊಂಡಳು. ಐದು ದಿನ ಅಸೀರಿಯ ಬಕ್ಟ್ರಿಯಗಳ ಭಾಗ್ಯವಿಧಾತೃವಾಕೆಯೆ.

ಐದನೆಯ ದಿನ, ಅಂದು ಸಮ್ಮುರಮ್ಮನ್ ಕೈಯೊಳಗಿನ ರಾಜದಂಡವನ್ನು ಕೆಳಗಿಡುವ ದಿನದ ಮುನ್ನಾದಿನ. ಅಂದು ಅವಳು ಒಂದು ದೊಡ್ಡ ಉತ್ಸವವನ್ನು ಜರುಗಿಸಿದಳು. ಅವಳ ಅಪ್ಪಣೆಯ ಮೇರೆಗೆ ಊರಿನಲ್ಲೆಲ್ಲ ಸಿಂಗಾರ ಸಡಗರಗಳು ನಡೆದಿದ್ದವು.

ಅಂದು ಎಲ್ಲೆಲ್ಲಿ ನೋಡಿದರೂ ಸಡಗರವೋ ಸಡಗರ. ಸಡಗರಕ್ಕೆ ಎಡೆಗೊಡದಿದ್ದುದು ಒಂದೇ ಒಂದು -ಸಮ್ಮುರಮ್ಮನಿನ ಹೃದಯ. ಅವಳ ಮನವು ರಾಜದಂಡವನ್ನು ಹೇಗೆ ಕೆಳಗಿಡಲಿ ಎನ್ನುತ್ತಿತ್ತು. “ತಂದೆಯ ಹರಕೆ ಇಷ್ಟಕ್ಕೆ ಕೈಗೂಡಿದಂತಾಯಿತೆ? ನಾನು ಐದು ದಿನಗಳ ಮಹಾರಾಣಿಯೆ? ಚಿಃ, ಬೇಡ- ಈ ಸಿಂಹಾಸನದಿಂದ ಇಳಿಯುವುದು ಇಂದೆಯೇ ಬೇಡ.”

“ನೈನಸ್ ಸಾಮ್ರಾಟ, ಅವನು ಈ ರಾಜ್ಯಕ್ಕೆ ಅಧಿಕಾರಿ. ಅವನಿರುವವರೆಗೆ ಅವನೆ ಆಳತಕ್ಕವನು!”

“ನಾನು ಸಾಮ್ರಾಟನ ಹೆಂಡತಿ; ಆದುದರಿಂದ ಸಾಮ್ರಾಜ್ಞಿ. ಸಾಮ್ರಾಟನ ಹೆಂಡತಿ ಸಾಮ್ರಾಜ್ಞಿ-ಹೆಂಡತಿ ಸಾಮ್ರಾಜ್ಞಿ. ನಿಜವಾಗಿ ನಾನು ಐದೇ ದಿನ ಸಾಮ್ರಾಜ್ಞಿ!”

”ನಾನು ಹೆಂಡತಿ ಸಾಮ್ರಾಜ್ಞಿ; ಆತನಿರುವತನಕ ನಾನು ಸಾಮ್ರಾಜ್ಞಿಯಲ್ಲ. ಅವನೊಂದು ಕಂಟಕ!”

ಉತ್ಸವದ ಸಂದರ್ಭದಲ್ಲಿ ನೈನಸ್ ಕಳ್ಳು ಕುಡಿದು ಆನಂದದಲ್ಲಿ ಮೈಮರೆತಿದ್ದನು. ಭೂಮಿಯನ್ನು ರಾತ್ರಿ ಆವರಿಸಿತು. ಸಮುರಮ್ಮನ್ ಅವನೆದೆಗೆ ನಲ್ನೋಟವನ್ನು ನಾಟಿಸುತ್ತ ಅವನ ಕೋಣೆಗೆ ಹೋದಳು. ಅವನು ದಿಂಗನೆದ್ದು ಎದುರಿಗೆ ಬಂದನು-ಅವಳನ್ನಪ್ಪಲು ತೋಳು ನೀಡಿಕೊಂಡು. ಅವಳು ಅವನನ್ನು ಹಾಗೆ ನೆಲಕ್ಕೆ ಮಲಗಿಸಿ ಅವನ ಸೊಂಟದಲ್ಲಿಯ ಕಠಾರಿಯನ್ನೆ ಅವನ ಪಕ್ಕದಲ್ಲಿ ಬಲವಾಗಿ ನೆಟ್ಟಳು.

ನೈನಸ್ ಚೀರಿದನು. ಸಮ್ಮುರಮ್ಮನ್ ಭರ್‍ರನೆ ಬಾಗಿಲಿಗೆ ಬಂದು ಅವನಿಗಿಂತ ಗಟ್ಟಿಯಾಗಿ ಚೀರಿದಳು.

”ಓ, ಸಹಾಯಕ್ಕೆ ಬನ್ನಿ, ಹಾಯ್ ಪ್ರಾಣೇಶ್ವರ!” ಹೊರಗಿದ್ದ ಆಳುಗಳು ಓಡಿಬಂದರು. ನೆರೆಯಲ್ಲಿದ್ದ ಮುಖ್ಯಾಮಾತ್ಯನು ಬಂದನು. ನೈನಸ್ ಸತ್ತುಹೋಗಿದ್ದನು.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

”ಅಯ್ಯೋ, ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೆಯಲ್ಲ, ಐದು ದಿನದ ರಾಜ್ಯಾಧಿಕಾರವನ್ನು ಕೊಡಲೂ ಊಹೂ ಎನ್ನಲಿಲ್ಲವಲ್ಲ. ಹಾಯ್ ನಿನ್ನನ್ನು ಕಳೆದುಕೊಂಡೆ. ಈ ಹಾಳು ಉತ್ಸವವನ್ನು ಹೂಡಿ ನಾನೇಕೆ ಮಿತಿಮೀರಿ ಕುಡಿಯುವಂತೆ ಮಾಡಿದೆನೊ!” ಎಂದು ತನ್ನ ಪ್ರಿಯನ ಮರಣಕ್ಕಾಗಿ ಸಮ್ಮುರಮ್ಮನ್ ಗೋಳಿಟ್ಟಳು.

*

“ಇತಿಮಿತಿಯಿಲ್ಲದೆ ಕುಡಿದು ನೈನಸ್ ಸತ್ತನು-ಜೋಲಿ ಹೋಗಿ ಬಿದ್ದು ತನ್ನ ಸೊಂಟದಲ್ಲಿಯ ಕಠಾರಿ ತನಗೇ ನಟ್ಟು. ಸಮ್ಮುರಮ್ಮನ್ ಧಾವಿಸಿ ಹೋಗಿ ಹಿಡಿಯುವುದರೊಳಗಾಗಿ ಬಿದ್ದೇಬಿಟ್ಟನು” ಎಂದು ಸುದ್ದಿ.

ಇಂದಿನಿಂದ ಸಮ್ಮುರಮ್ಮನ್ ಸಾಮ್ರಾಜ್ಞಿ.

(ಕೃಪೆ:ಮಲ್ಲಿಗೆ ಮಾಸಪತ್ರಿಕೆ; ‘ಬೆಳಕಿನ ಕತ್ತಲೆ’, ಪ್ರತಿಭಾ ಮುದ್ರಣಾಲಯ, ಧಾರವಾಡ, 1942)

ಮೇವುಂಡಿ ಮಲ್ಲಾರಿ 1

ಮೇವುಂಡಿ ಮಲ್ಲಾರಿಯವರ ‘ಸುರಸುಂದರಿ’

ದಿವಂಗತ ಮೇವುಂಡಿ ಮಲ್ಲಾರಿಯವರು (1907-1975) ಕನ್ನಡ ಸಾಹಿತ್ಯದ ಒಂದು ದುರ್ದೆವೀ ಉದಾಹರಣೆ. ಬರೆಯುವ ಸಾಮರ್ಥ್ಯವಿದ್ದೂ ಅದನ್ನವರು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬರೆದದ್ದನ್ನು ಜನ ಸರಿಯಾಗಿ ಗುರುತಿಸಲಿಲ್ಲ. ಅವರ ವಿಶಿಷ್ಟವಾದ ಶಿಶುಸಾಹಿತ್ಯಕ್ಕೆ ಕೂಡ ಸಿಗಬೇಕಾದಷ್ಟು ಮನ್ನಣೆ ಸಿಕ್ಕಲಿಲ್ಲ. ಇನ್ನುಳಿದ ಬರವಣಿಗೆಯಂತೂ ಯಾರ ಗಮನವನ್ನೂ ಸೆಳೆದಂತೆ ಕಾಣುವುದಿಲ್ಲ. ಒಂದಿಲ್ಲ ಒಂದು ಬಗೆಯ ನಿರಂತರ ಶೋಷಣೆಗೆ ಒಳಗಾಗಿ ಅವರ ಸೃಜನಶೀಲತೆ ಬಾಡಿಹೋಯಿತು.

‘ಜಯಕರ್ನಾಟಕ’ದ ಕಾಲದಲ್ಲಿ ಮೇವುಂಡಿಯವರು ಕಥೆ-ಕವನಗಳನ್ನು ಬರೆಯಲು ಆರಂಭಿಸಿದಂತೆ ಕಾಣುತ್ತದೆ. ಗೆಳೆಯರ ಗುಂಪಿನ ಪರಿಸರ ಅನೇಕರ ಸೃಜನಶೀಲತೆಯನ್ನು ಎಚ್ಚರಿಸಿ ಹೊರಗೆಡಹಿದ ಕಾಲ ಅದು. ಗುಂಪಿನ ಸಂಪರ್ಕದಲ್ಲಿ ಬಂದ ಮೇವುಂಡಿಯವರೂ ಬರೆಯುವ ಹುರುಪು ಪಡೆದಿರಬೇಕು. ಅವರ ಹೆಚ್ಚಿನ ಕಥೆ-ಕವನಗಳು ‘ಜಯಕರ್ನಾಟಕ’, ‘ಪ್ರತಿಭೆ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು.

ಅವರು ಬರೆದಿರುವ ಕಥೆಗಳ ಒಟ್ಟು ಸಂಖ್ಯೆ ಎಷ್ಟೆಂದು ಗೊತ್ತಾಗುವುದಿಲ್ಲ. ‘ಬೆಳಕಿನ ಕತ್ತಲೆ’ ಎಂಬ ಅವರ ಹತ್ತು ಕತೆಗಳ ಸಂಕಲನವೊಂದು ಪ್ರಕಟವಾಗಿದೆ (1942). ಈ ಸಂಕಲನ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಜನಪ್ರಿಯ ಪುಸ್ತಕ ಮಾಲೆಯಲ್ಲಿ ಮತ್ತೆ ಮುದ್ರಣಗೊಂಡಿದೆ (1990). ‘ಇದು ನನ್ನದಲ್ಲ’, ‘ಮೂರು ಬಾರಿ’ ಮುಂತಾದ ಇನ್ನೊಂದೆರಡು ಕತೆಗಳು ಪ್ರತ್ಯೇಕವಾಗಿ ಚಿಕ್ಕ ಪುಸ್ತಿಕೆಗಳ ರೂಪದಲ್ಲಿ ಪ್ರಕಟವಾಗಿವೆ. ಆದರೆ ‘ಯುಗಧರ್ಮ ಹಾಗೂ ಸಾಹಿತ್ಯ ದರ್ಶನ’ದಲ್ಲಿ ಕುರ್ತಕೋಟಿಯವರು ಬರೆದಿರುವ ಒಂದೆರಡು ಮಾತುಗಳನ್ನು ಬಿಟ್ಟರೆ ಮೇವುಂಡಿಯವರನ್ನು ಕತೆಗಾರರೆಂದು ಯಾರೂ ಗುರುತಿಸಿಲ್ಲ. ಯಾವ ಆ್ಯಂಥಾಲಜಿಯಲ್ಲೂ ಅವರ ಕಥೆಗಳು ಸೇರಿಕೊಂಡಿಲ್ಲ.

ಮೈನರ್‌ ಲೇಖಕರಲ್ಲಿ ಸಾಮಾನ್ಯವಾಗಿ ಕಾಣುವಂತೆ ಮೇವುಂಡಿಯವರ ಕತೆಗಳೆಲ್ಲ ವೈವಿಧ್ಯಪೂರ್ಣವಾಗಿವೆ. ವಸ್ತು ಮತ್ತು ಶೈಲಿ ಎರಡರಲ್ಲೂ ಈ ಮಾತನ್ನು ಗುರುತಿಸಬಹುದು. ಅವರ ಕತೆಗಳು ಒಂದರ ಹಾಗೆ ಇನ್ನೊಂದಿಲ್ಲ. ಇವೆಲ್ಲ ಒಬ್ಬನೇ ಲೇಖಕನ ಕಥೆಗಳೆಂದು ಗುರುತಿಸಲು ಸಾಧ್ಯವಾಗುವಂತಹ ಕೇಂದ್ರ ಕಾಳಜಿಯಾಗಲಿ, ವ್ಯಕ್ತಿತ್ವದ ಛಾಪಾಗಲಿ ಇಲ್ಲಿ ಕಾಣುವುದಿಲ್ಲ. ಆದರೆ ಕತೆಗಳಲ್ಲಿ ವಿಶಿಷ್ಟವಾದ ಲವಲವಿಕೆ ಇದೆ. ಸಿದ್ದಮಾರ್ಗದಿಂದ ಭಿನ್ನವಾದ ಬರವಣಿಗೆಯ ಹೊಸ ಹಾದಿಗಳನ್ನು ಹುಡುಕುವ ಪ್ರಯೋಗಶೀಲತೆಯೂ ಇದೆ. ಈ ದೃಷ್ಟಿಯಿಂದ ‘ಬೆಳಕಿನ ಕತ್ತಲೆ’, ‘ಮಾತಾಡುವ ದೇವರು’, ‘ಸುರಸುಂದರಿ’, ‘ಲೈಮ್ ವಾಟರ್’, ‘ಇದು ನನ್ನದಲ್ಲ’, ಮೊದಲಾದ ಕಥೆಗಳು ವಸ್ತು, ಭಾಷೆ, ತಂತ್ರಗಳ ನಾವೀನ್ಯದ ಮೂಲಕ ಗಮನ ಸೆಳೆಯುತ್ತವೆ. ಮುಖ್ಯವಾಗಿ ಮೇವುಂಡಿಯವರ ಮಾತಿನ ವಿಶಿಷ್ಟ ತಿರುವು, ತಿಳಿ ವ್ಯಂಗ್ಯಗಳಿಂದ ಈ ಕತೆಗಳಿಗೆ ಹೊಸ ರುಚಿ ಬಂದಿದೆ ಎನ್ನಬಹುದು.

‘ಸುರಸುಂದರಿ’ ಮೇವುಂಡಿಯವರ ಉಳಿದ ಕಥೆಗಳಿಗಿಂತ ಭಿನ್ನವಾದ ಕಥೆ. ಅಧಿಕಾರದ ರಾಕ್ಷಸೀ ಮಹತ್ವಾಕಾಂಕ್ಷೆಯನ್ನು ಹೊಂದಿದ ಹೆಣ್ಣೂಬ್ಬಳು ಹೇಗೆ ತನಗೆ ಅನುಕೂಲವಾದವರನ್ನೆಲ್ಲ ಒಲಿಸಿಕೊಂಡು, ಅವರ ಮೂಲಕ ಅಧಿಕಾರದ ಹಂತಹಂತಗಳನ್ನು ಏರುತ್ತ, ಈ ಏರಿಕೆಯಲ್ಲಿ ಏಣಿಯಾದವರನ್ನು ಅವರ ಕೆಲಸ ಮುಗಿಯುತ್ತಲೇ ನಿರ್ದಯವಾಗಿ ನೂಕುತ್ತ ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುತ್ತಾಳೆಂಬುದನ್ನು ಕಥೆ ಸರಳವಾಗಿ ಹೇಳುತ್ತದೆ. ಸಮ್ಮುರಮ್ಮನಳ ಮೋಹಕ ಮಾತುಗಾರಿಕೆ, ನಯವಂಚನೆ, ಕೆಲಸ ಮುಗಿದವರನ್ನು ನಿರುದ್ವಿಗ್ನವಾಗಿ ನಿರ್ದಯವಾಗಿ ಕೈಬಿಡುವ ರೀತಿ, ಮಹತ್ವಾಕಾಂಕ್ಷೆಯನ್ನು ಏಕೈಕ ಗುರಿಯಾಗಿ ಬೆನ್ನಟ್ಟಿ ಸಾಧಿಸುವ ರೀತಿ ಇತ್ಯಾದಿಗಳೆಲ್ಲ ಕಥೆಯಲ್ಲಿ ಪರಿಣಾಮಕಾರಿಯಾಗಿ ಬಂದಿವೆ.

ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ

ಕಥೆಯ ಅರ್ಥ ಸ್ಪಷ್ಟವಾಗಿದೆ, ವಾಚ್ಯವೂ ಆಗಿದೆ. ಸಂಭಾಷಣೆಗಳು ನಾಟಕೀಯವಾಗಿವೆ. ಆದರೆ ಈ ಸ್ಪಷ್ಟತೆ, ನಾಟಕೀಯತೆಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡು ಅದನ್ನು ಕಥನತಂತ್ರದ ಭಾಗವಾಗಿ ಮಾಡಿಕೊಂಡಿರುವುದರಲ್ಲಿ ಈ ಕಥೆಯ ಜಾಣ್ಮೆ ಇದೆ.

ಉದಾಹರಣೆಗೆ, ಕಥೆಯ ಪರಿಸರವನ್ನು ಕಾಲ-ದೇಶ-ಭಾಷೆಗಳ ದೃಷ್ಟಿಯಿಂದ ಬಹಳ ದೂರಕ್ಕೆ ಒಯ್ದಿರುವುದನ್ನು ಗಮನಿಸಬಹುದು. ಕಥೆ ಯಾವುದೊ ಪ್ರಾಚೀನ ಕಾಲದಲ್ಲಿ ನಡೆದಂತೆ ಹೇಳಲಾಗಿದೆ. ಅದರ ಸ್ಥಳವನ್ನು ಅಪರಿಚಿತವಾದ ಗ್ರೀಸ್ ದೇಶಕ್ಕೆ ಒಯ್ಯಲಾಗಿದೆ. ಅದರಲ್ಲಿ ಗಂಧರ್ವ-ನಾಗಕನೈಯರ ಪ್ರಸಂಗವನ್ನು ಸೇರಿಸಿ ಜಾನಪದ ವಾತಾವರಣವನ್ನು ಸೃಷ್ಟಿಸಲಾಗಿದೆ. ಸಂಭಾಷಣೆಗಳಲ್ಲಿಯ ನಾಟಕೀಯತೆ, ಅಲಂಕಾರಮಯವಾದ ಚಮತ್ಕಾರದ ಭಾಷೆಗಳು ಒಟ್ಟು ಕಥೆಗೆ ಪ್ರಾಚೀನ ಕಾವ್ಯಗಳ ಮೆರುಗು ಕೊಟ್ಟಿವೆ. ಇವೆಲ್ಲವಕ್ಕೆ ಹೊಂದುವಂತೆ ನಿರೂಪಣೆ ಕೂಡ ಸಾಂಪ್ರದಾಯಿಕ ಜಾನಪದ ರೀತಿಯಲ್ಲಿದೆ. ಇವೆಲ್ಲವುಗಳ ಮುಖ್ಯ ಉದ್ದೇಶ ಕಥೆಗೆ ರೂಪಕಕಥೆಯ, ಅನ್ನೋಕ್ತಿಯ ಸ್ವರೂಪವನ್ನು ಕೊಡುವದಾಗಿದೆ. ಎಂದರೆ ಕಥೆಯು ನಿರೂಪಿಸಹೊರಟಿರುವ ವಸ್ತುವಿನ ಸಾರ್ವತ್ರಿಕ ಸ್ವರೂಪವನ್ನು ಎತ್ತಿ ತೋರಿಸುವ ಹವಣಿಕೆ ಇಲ್ಲಿ ಕಾಣುತ್ತದೆ. ಇಂದಿನ ವರ್ತಮಾನದ ವಿದ್ಯಮಾನಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಇದು ಅನಾದಿಕಾಲದಿಂದಲೂ ನಡೆದು ಬಂದ ಕಥೆ ಎಂಬುದನ್ನು ಸೂಚಿಸುವ ರೀತಿ ಇದು.

ಆದರೆ ಕಥೆ ಇಂದಿನ ವರ್ತಮಾನವನ್ನು ಸೂಚಿಸುವ ರೀತಿಯನ್ನು ನೋಡಿ. 1942ಕ್ಕಿಂತ ಹಿಂದೆಯೇ ಈ ಕಥೆಯನ್ನು ಬರೆದ ಕಾಲಕ್ಕೆ ಇಂದಿನ ನಮ್ಮ ದೇಶದ ರಾಜಕೀಯ ಬೆಳವಣಿಗೆಗಳಲ್ಲಿ ಯಾವುದನ್ನೂ ಊಹಿಸುವುದು ಸಾಧ್ಯವಿರಲಿಲ್ಲ. ಆದರೆ ಈ ಕಥೆಯನ್ನು ಈಗ ಓದಿದಾಗ ನಮ್ಮ ಕಣ್ಣೆದುರಿನ ರಾಜಕೀಯ ಮಹತ್ವಾಕಾಂಕ್ಷೆಯ ನಿರ್ಲಜ್ಜ ಕಥೆಗಳನ್ನೇ ಓದಿದಂತಾಗುತ್ತದೆ. ಈ ಕಥೆಯ ಮುಖ್ಯ ಪಾತ್ರ ಹೆಣ್ಣಾಗಿರುವುದು ಕೇವಲ ಆಕಸ್ಮಿಕವಾಗಿದ್ದರೂ ಇಂದಿನ ಸಂದರ್ಭದಲ್ಲಿ ಈ ವಿವರಕ್ಕೆ ಬರುವ ಅರ್ಥವನ್ನು ನೆನೆದುಕೊಂಡರೆ ಆಶ್ಚರ್ಯವಾಗುತ್ತದೆ. ಮೇವುಂಡಿಯವರು ಇಂದಿನ ಕಥೆಯನ್ನೇ ರೂಪಕವಾಗಿ, ಅಲೆಗರಿಯಾಗಿ ಮರೆಮಾಚಿ ಹೇಳಿರುವಂತೆ ಭಾಸವಾಗುತ್ತದೆ. ಸಮ್ಮುರಮ್ಮನ್ ನಮಗೆ ದೂರದವಳಾಗಿ ಉಳಿಯುವುದಿಲ್ಲ. ಆಕೆಯ ಮಹಾತ್ವಾಕಾಂಕ್ಷೆಯ ಈಡೇರಿಕೆಯಲ್ಲಿ ರಾಜಕೀಯ ಆತ್ಮಹತ್ಯೆ ಮಾಡಿಕೊಂಡ, ಇಲ್ಲದೆ ಆಹುತಿಯಾದ ನಮ್ಮ ರಾಜಕೀಯ ನಾಯಕರ ಸಾಲು ಸಾಲೇ ಕಣ್ಣೆದುರು ನಿಲ್ಲುತ್ತದೆ. ಇದನ್ನು ಹಿಂದಿನ ಸಾಹಿತ್ಯಕ್ಕೆ ಭವಿಷ್ಯದ ಬೆಳವಣಿಗೆಗಳು ಕೊಡಬಹುದಾದ ಹೊಸ ಅರ್ಥಕ್ಕೆ ಒಂದು ಕುತೂಹಲಕರವಾದ ಉದಾಹರಣೆ ಎಂದು ನೋಡಬಹುದು. ಈ ಅರ್ಥ ಮೂಲಕಥೆಯಲ್ಲಿ ಇರಲಿಲ್ಲವೆಂದೇನೂ ಅಲ್ಲ, ಆದರೆ, ಆ ಅರ್ಥವನ್ನು ಇಂದಿನ ಬೆಳವಣಿಗೆಗಳು ಹೊಸ ತುರ್ತಿನಿಂದ ಬೆಳಕಿಗೆ ತಂದಿವೆ. ಇದರಿಂದಾಗಿ ಕಥೆಯ ರೂಪಕ ಸ್ವರೂಪ ಇನ್ನಷ್ಟು ಗಟ್ಟಿಯಾಗಿದೆ.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ತರಾಸು ಅವರ ಕತೆ | ಇನ್ನೊಂದು ಮುಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X