ಫುಟ್ಬಾಲ್ ಆಡುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಿದ ಪರಿಣಾಮ 22 ಮಕ್ಕಳು ಸೇರಿದಂತೆ ಒಟ್ಟು 27 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸೊಮಾಲಿಯಾದ ಕೊರಿಯೊಲಿ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಷಾಬೆಲ್ಲೆ ಪ್ರದೇಶದ ಮುರಾಲೆ ಗ್ರಾಮದ ಫುಟ್ಬಾಲ್ ಮೈದಾನದಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದಾಗ ನೆಲಬಾಂಬ್ ಸ್ಫೋಟಿಸಿದ ಪರಿಣಾಮ ದುರಂತ ಸಂಭವಿಸಿದೆ ಎಂದು ಕ್ರೋಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಇಬ್ಬರು ಗಾಯಾಳುಗಳು ಮೃತಪಟ್ಟಿದ್ಧಾರೆ ಎಂದು ಅಹ್ಮದ್ ಹೇಳಿದ್ದಾರೆ. ಮೃತ ಮಕ್ಕಳೆಲ್ಲರೂ 10 ರಿಂದ 15 ವರ್ಷದೊಳಗಿನ ಹುಡುಗರಾಗಿದ್ದು, ಇವರ ಮೃತದೇಹಗಳನ್ನು ಕ್ಯೂರೊಲೆನಲ್ಲಿರುವ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಹೋಟೆಲ್ ಮೇಲೆ ಉಗ್ರರ ದಾಳಿ; ಒಂಬತ್ತು ಮಂದಿ ಸಾವು
ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿರುವ ಪರ್ಲ್ ಬೀಚ್ ಹೋಟೆಲ್ ಮೇಲೆ ಅಲ್ ಶಬಾಬ್ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಸೈನಿಕರು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ.
ಹೋಟೆಲ್ನಿಂದ 84 ಜನರನ್ನು ಭದ್ರತಾ ಪಡೆಗಳು ರಕ್ಷಿಸಿವೆ. ಅಲ್–ಕೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅಲ್-ಶಬಾಬ್ ದಾಳಿಯ ಹೊಣೆ ಹೊತ್ತಿಕೊಂಡಿದೆ.