- ಪಾಕಿಸ್ತಾನದ ಹಲವು ನಗರಗಳಲ್ಲಿ ಪ್ರತಿಭಟನೆ; 144 ಸೆಕ್ಷನ್ ಜಾರಿ
- ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಪಿಟಿಐ ಪಕ್ಷದ ನಾಯಕರು
ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಬಂಧನವಾಗಿರುವ ಹಿನ್ನೆಲೆ ಪಾಕಿಸ್ತಾನದ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಇಸ್ಲಾಮಾಬಾದ್ ಸೇರಿದಂತೆ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ಸೇನಾ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
70 ವರ್ಷ ವಯಸ್ಸಿನ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಅರೆಸೇನಾ ಪಡೆ ಮಂಗಳವಾರ ಬಂಧಿಸಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ ಇಮ್ರಾನ್ ಖಾನ್ ನೂರಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಇಮ್ರಾನ್ ಖಾನ್ ಬಂಧನದ ಸುದ್ದಿ ವೈರಲ್ ಆಗುತ್ತಿದ್ದಂತೆ ದೇಶದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಬೆಂಬಲಿಗರು ದೊಣ್ಣೆ ಮತ್ತು ಮಾರಕಾಸ್ತ್ರಗಳೊಂದಿಗೆ ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್ ಸೇರಿದಂತೆ ಭದ್ರತಾ ಸಂಸ್ಥೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಪಿಟಿಐ ಪಕ್ಷದ ನಾಯಕರು ಬುಧವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರು.
ಪಂಜಾಬ್, ಬಲೂಚಿಸ್ತಾನ್ ಮತ್ತು ಖೈಬರ್-ಪಖ್ತುಂಖ್ವಾ ಪ್ರದೇಶಗಳ ಪ್ರಮುಖ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದರೂ ಪ್ರತಿಭಟನಾಕಾರರು ಅದನ್ನು ಲೆಕ್ಕಿಸಿಲ್ಲ. ಹಾಗಾಗಿ ಲಾಹೋರ್, ಪೇಶಾವರ, ಕ್ವೆಟ್ಟಾ, ಕರಾಚಿ ಮತ್ತು ರಾವಲ್‌ಪಿಂಡಿಯಲ್ಲಿ ಹಿಂಸಾಚಾರ ಹಾಗೂ ವಿಧ್ವಂಸಕ ಘಟನೆಗಳು ವರದಿಯಾಗಿವೆ.
ಪಿಟಿಐ ಕಾರ್ಯಕರ್ತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಕಾನೂನು ಜಾರಿ ಸಂಸ್ಥೆಗಳೊಂದಿಗಿನ ಘರ್ಷಣೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಮತ್ತು ವಾಹನಗಳಿಗೆ ಹಾನಿ ಉಂಟಾಗಿದೆ.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಎರಡು ದಿನಗಳಿಂದ ನಡೆಯುತ್ತಿರುವ ಘರ್ಷಣೆಯಿಂದಾಗಿ ಪಾಕಿಸ್ತಾನದ ರಾಷ್ಟ್ರೀಯ ಖಜಾನೆಗೆ ಅಂದಾಜು 50 ಶತಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಇಮ್ರಾನ್ ಖಾನ್ ಅವರನ್ನು ಮತ್ತಷ್ಟು ದಿನ ತಮ್ಮ ವಶಕ್ಕೆ ನೀಡುವಂತೆ ಕೋರಲು ಬುಧವಾರ ನ್ಯಾಯಾಲಯದ ಮುಂದೆ ಎನ್‌ಎಬಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.
ಭದ್ರತಾ ದೃಷ್ಟಿಯಿಂದ ಪ್ರಕರಣದ ವಿಚಾರಣೆಯನ್ನು ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಬದಲಿಗೆ ರಾಜಧಾನಿಯ ಭಾರೀ ಭದ್ರತೆಯ ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ನಡೆಸಲಾಗುವುದು ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಆಯುಕ್ತರ ಕಚೇರಿಯು ಸುತ್ತೋಲೆಯ ಮೂಲಕ ಪೊಲೀಸ್ ಲೈನ್‌ಗಳನ್ನು ತಾತ್ಕಾಲಿಕ ನ್ಯಾಯಾಲಯ ಎಂದು ಗೊತ್ತುಪಡಿಸಿದೆ.
ಇಮ್ರಾನ್ ಖಾನ್ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಆ ಪ್ರದೇಶದಲ್ಲಿ ಸಂಬಂಧಿತ ವ್ಯಕ್ತಿಗಳು ಮತ್ತು ವಕೀಲರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.