ಕನ್ನಡದ ಬಹುನಿರೀಕ್ಷಿತ ‘ಕಾಂತಾರ: ಎ ಲೆಜೆಂಡ್ ಚಾಪ್ಟರ್ 1’ ಚಿತ್ರವು ಕೆನಡಾದಲ್ಲಿ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ಎದುರಿಸಿದೆ. ಓಕ್‌ವಿಲ್‌ನ ಫಿಲ್ಮ್.ಕಾ ಚಿತ್ರಮಂದಿರವು ಕಳೆದ ವಾರ ನಡೆದ ಎರಡು ಪ್ರತ್ಯೇಕ ದಾಳಿಗಳ ನಂತರ ಈ ನಿರ್ಧಾರಕ್ಕೆ ಬಂದಿದೆ. ಸೆಪ್ಟೆಂಬರ್ 25ರಂದು ಬೆಳಗಿನ ಜಾವ ಅಪರಿಚಿತರು ಪೆಟ್ರೋಲ್ ಡಬ್ಬಿಗಳೊಂದಿಗೆ ಚಿತ್ರಮಂದಿರದ ಬಾಗಿಲಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಎರಡು ಕಾರುಗಳಲ್ಲಿ ಬಂದ ಆರೋಪಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕ್ಷಣಗಳು ದಾಖಲಾಗಿವೆ. ಬೆಂಕಿ ಹೊರಗಡೆಯಲ್ಲೇ ಸೀಮಿತವಾದರೂ, ಚಿತ್ರಮಂದಿರಕ್ಕೆ ಹಾನಿಯಾಗಿದೆ.
ಅದೇ ವೇಳೆ ಅಕ್ಟೋಬರ್ 2ರಂದು ಬೆಳಿಗ್ಗೆ ಮತ್ತೊಂದು ಭಯಾನಕ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿ ಚಿತ್ರಮಂದಿರದ ಬಾಗಿಲಿನತ್ತ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಕಪ್ಪು ಬಟ್ಟೆ ಧರಿಸಿದ್ದ, ದಪ್ಪ ಮೈಕಟ್ಟುಳ್ಳ ವ್ಯಕ್ತಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಘಟನೆಗಳೂ ನೇರವಾಗಿ ದಕ್ಷಿಣ ಏಷ್ಯಾ ಸಿನಿಮಾಗಳ ಪ್ರದರ್ಶನಕ್ಕೆ ಸಂಬಂಧಿತವಾಗಿವೆ ಎಂದು ಚಿತ್ರಮಂದಿರದ ಆಡಳಿತ ಮಂಡಳಿ ಹೇಳಿದೆ.
ಇದನ್ನು ಓದಿದ್ದೀರಾ? ಬಿಂಬ-ಬಿಂಬನ: ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಆತ್ಮಕತೆ
ಈ ಹಿನ್ನೆಲೆಯಲ್ಲಿ ಫಿಲ್ಮ್.ಕಾ ಚಿತ್ರ ಮಂದಿರವು ‘ಕಾಂತಾರ: ಎ ಲೆಜೆಂಡ್ ಚಾಪ್ಟರ್ 1’ ಹಾಗೂ ಪವನ್ ಕಲ್ಯಾಣ್ ನಟನೆಯ ದೆ ಕಾಲ್ ಇಮ್ ಒಜಿ ಚಿತ್ರಗಳ ಪ್ರದರ್ಶನವನ್ನು ಹಿಂಪಡೆಯುವುದಾಗಿ ಪ್ರಕಟಿಸಿದೆ. “ನಮ್ಮ ಸಮುದಾಯದ ಭದ್ರತೆ ಮುಖ್ಯವಾದ್ದರಿಂದ ತಾತ್ಕಾಲಿಕವಾಗಿ ಪ್ರದರ್ಶನ ನಿಲ್ಲಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಯಾರ್ಕ್ ಸಿನೆಮಾಸ್ ಕೂಡ ಭಾರತೀಯ ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸುವ ತೀರ್ಮಾನ ಕೈಗೊಂಡಿದೆ.
ಹಾಲ್ಟನ್ ಪೊಲೀಸರು ದಾಳಿಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಈ ಘಟನೆಗಳ ಹಿಂದೆ ಖಾಲಿಸ್ತಾನಿ ಅತಿರೇಕಿಗಳ ಕೈ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದಾಗ್ಯೂ, ಈವರೆಗೆ ಯಾವುದೇ ಅಧಿಕೃತ ದೃಢೀಕರಣ ದೊರೆತಿಲ್ಲ. ಈ ಬೆಳವಣಿಗೆಯಿಂದ ಕೆನಡಾದ ಕನ್ನಡಿಗರು ಹಾಗೂ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿದೆ.
ಅಕ್ಟೊಬರ್ 2 ರಂದು ಬಿಡುಗಡೆಯಾಗಿರುವ ಕಾಂತಾರ ಸಿನಿಮಾ ಮೂಲ ಕನ್ನಡ ಸೇರಿದಂತೆ ಹಲವು ಅವತರಣಿಕೆಗಳಲ್ಲಿ ತೆರೆಕಂಡಿದೆ