ಗಾಜಾದ ಮಾನವ ಹತ್ಯೆ ಖಂಡಿಸಿ ಪ್ಯಾಲೆಸ್ತೇನ್ ಗೆ ಬೆಂಬಲಿಸಿ ಎಡಪಕ್ಷಗಳಿಂದ ದಾವಣಗೆರೆಯಲ್ಲಿ ರಾಷ್ಟ್ರೀಯ ಸೌಹಾರ್ಧತಾ ದಿನ ಆಚರಿಸಲಾಯಿತು. ಈ ವೇಳೆ “ದೇಶ ದೇಶಗಳ ಮಧ್ಯೆ ನಡೆಯುವ ಯುದ್ಧಗಳ ಹಿಂದೆ ಲಾಭದ ಕುತಂತ್ರ ಅಡಗಿದೆ” ಎಂದು ದಾವಣಗೆರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಎಡಪಕ್ಷಗಳ ರಾಷ್ಟ್ರೀಯ ಸಮಿತಿಗಳ ಕರೆಯ ಮೇರೆಗೆ ಎಡ ಪಕ್ಷಗಳ ನೇತೃತ್ವದಲ್ಲಿ ಇಂದು ದಾವಣಗೆರೆ ಜಯದೇವ ಸರ್ಕಲ್ ನಲ್ಲಿ ನಡೆದ ರಾಷ್ಟ್ರೀಯ ಸೌಹಾರ್ದತಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಜಾದಲ್ಲಿ ನಡೆದ ಇಸ್ರೇಲ್ ದಾಳಿಯ ಮಾನವ ಹತ್ಯೆ ಖಂಡಿಸಿ ಪ್ಯಾಲೆಸ್ತೇನಿಗೆ ಬೆಂಬಲಿಸಿ ಮಾತನಾಡಿದ ಅವರು, “ಬಲಾಢ್ಯ ದೇಶಗಳ ಲಾಭಕೋರತನಕ್ಕೆ ಕುತಂತ್ರಗಳಿಂದ ನಡೆಯುವ ಈ ಯುದ್ಧಗಳು ಮಾನವ ಕುಲವನ್ನು ನಾಶ ಮಾಡುವತ್ತ ಹೊರಟಿವೆ” ಎಂದು ವಿಷಾದ ವ್ಯಕ್ತಪಡಿಸಿದರು.
ಸಿ ಪಿ ಐ ಎಂ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಎಚ್ ಆನಂದರಾಜ್ ಮಾತನಾಡಿ “ದೇಶ ದೇಶಗಳ ಮಧ್ಯೆ ನಡೆಯುವ ಈ ಯುದ್ಧಗಳು ಮಾನವೀಯತೆಯನ್ನು ಮರೆತು, ರಾಕ್ಷಸರಂತೆ ವರ್ತಿಸುವ ಮನೋಭಾವ ಕೈಬಿಡಬೇಕು ಎಂದು ಒತ್ತಾಯಿಸಿದರು.

ಎಸ್ ಯು ಸಿ ಐ ನ ಜಿಲ್ಲಾ ಕಾರ್ಯದರ್ಶಿ ಕೈದಾಳೆ ಮಂಜುನಾಥ್ ಮಾತನಾಡಿ “ಯುದ್ಧಗಳು ಅಗತ್ಯ ಇಲ್ಲದಿದ್ದರೂ ಅಮೇರಿಕಾದಂತಹ ಬಲಾಢ್ಯ ದೇಶಗಳು ಜಗತ್ತನ್ನು ತಮ್ಮ ಕೈಗೊಂಬೆಯಾಗಿರಿಸಿಕೊಂಡು ತಾವು ತಯಾರಿಸುವ ಯುದ್ಧ ಸಾಮಗ್ರಿಗಳನ್ನು ಮಾರಾಟ ಮಾಡುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತಿವೆ” ಎಂದು ಆರೋಪಿಸಿದರು.
“ತಮ್ಮ ಹುಚ್ಚಾಟಗಳಿಗಾಗಿ ನಡೆಸುವ ಈ ಯುದ್ಧಗಳು ಒಟ್ಟಾರೆ ಅಮಾಯಕ ಜನರನ್ನು ಬಲಿ ಪಡೆಯುತ್ತಿವೆ” ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್ ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ಘೇರಾವ್ ಹಾಕಿದ ರೈತರು; ಅಹವಾಲು ಸಲ್ಲಿಸುವ ವೇಳೆ ಘಟನೆ
ರಾಷ್ಟ್ರೀಯ ಸೌಹಾರ್ದತೆ ದಿನಾಚರಣೆಯಲ್ಲಿ ಮುಖಂಡರುಗಳಾದ, ಕುಕ್ಕವಾಡ ಮಂಜುನಾಥ್, ಅಣಬೇರು ತಿಪ್ಪೇಸ್ವಾಮಿ, ಕೆ ಜೆ ಎಸ್ ನ ಪವಿತ್ರ, ಮಹಮದ್ ರಫೀಕ್, ಜಿ ಎಲ್ಲಪ್ಪ, ಈ ಶ್ರೀನಿವಾಸ, ನರೇಗಾ ರಂಗನಾಥ್, ಶ್ರೀನಿವಾಸಮೂರ್ತಿ, ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸರೋಜಾ, ರುದ್ರಮ್ಮ, ಐರಣಿ ಚಂದ್ರು, ಟಿವಿಎಸ್ ರಾಜು ಭಾರತಿ ಕೆ,ಅನಿಲ್ ಕುಮಾರ್, ಸತೀಶ್ ಅರವಿಂದ, ವಿ ಲಕ್ಷ್ಮಣ, ಏ ತಿಪ್ಪೇಶ್, ಹೆಚ್ ಎಸ್ ಚಂದ್ರು ,ಈ ಎಸ್ ಉಮೇಶ್, ಶೇಖರ ನಾಯಕ, ಶಿವಾಜಿ ರಾವ್ ,ಸುಷ್ಮಾ, ಚಿನ್ನಪ್ಪ, ಯರಗುಂಟೆ ಸುರೇಶ್, ಗಜೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.