ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯ ಮತ್ತು ಆಕ್ರಮಣವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ. ಶುಕ್ರವಾರ ನಡೆದ ಕದನ ವಿರಾಮ ಮಾತುಕತೆಯಲ್ಲಿ ಟ್ರಂಪ್ ಅವರು 20 ಅಂಶಗಳ ಯೋಜನೆಯನ್ನು ಮಂಡಿಸಿದ್ದಾರೆ. ಆ ಯೋಜನೆಗಳಲ್ಲಿ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಸಮ್ಮತಿಸಿದ್ದು, ಉಳಿದ ಅಂಶಗಳ ಕುರಿತು ಚರ್ಚೆ ನಡೆಸಬೇಕೆಂದು ಹೇಳಿರುವುದಾಗಿ ವರದಿಯಾಗಿದೆ.
ತಾವು ಮಂಡಿಸಿರುವ ಅಂಶಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಹಮಾಸ್ಗೆ ಭಾನುವಾರದವರೆಗೆ ಗಡುವು ನೀಡಿರುವುದಾಗಿ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಈ ಯೋಜನೆಯನ್ನು ಒಪ್ಪಿಕೊಳ್ಳದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಮಂಡಿಸಿದ 20 ಅಂಶಗಳಲ್ಲಿ ಹಮಾಸ್ ನಿಶಸ್ತ್ರೀಕರಣಕ್ಕೆ ಒಪ್ಪಿಕೊಳ್ಳಬೇಕು ಎಂಬ ಷರತ್ತು ಕೂಡ ಇದೆ. ಆದರೆ, ಈ ಷರತ್ತಿಗೆ ಹಮಾಸ್ ಸ್ಪಷ್ಟ ಉತ್ತರ ನೀಡಿಲ್ಲ.
“ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು, ಒತ್ತೆಯಾಳುಗಳ ವಿನಿಮಯವನ್ನು ಜಾರಿಗೆ ತರಲು ಹಾಗೂ ಮಾನವೀಯ ನೆರವು ಒದಗಿಸಲು ಅರಬ್, ಇಸ್ಲಾಮಿಕ್ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ” ಎಂದು ಹಮಾಸ್ ಹೇಳಿದೆ.
ಹಮಾಸ್-ಇಸ್ರೇಲ್ ಅಧೀನದಲ್ಲಿರುವ ಪರಸ್ಪರರ ಒತ್ತೆಯಾಳುಗಳನ್ನು ವಿನಿಯಮ ಮಾಡಿಕೊಳ್ಳುವ ವಿಚಾರವಾಗಿ ಮಧ್ಯವರ್ತಿಗಳ ಮೂಲಕ ಮಾತುಕತೆ ನಡೆಸಲು ನಾವು ಸಿದ್ದವಿದ್ದೇವೆ. ಫ್ಯಾಲೆಸ್ತೀನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರಬ್-ಇಸ್ಲಾಮಿಕ್ ಬೆಂಬಲದೊಂದಿಗೆ ಗಾಝಾದ ಆಡಳಿತವನ್ನು ಪ್ಯಾಲೆಸ್ತೀನ್ನ ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಲು ನಾವು ಸಿದ್ದ ಎಂದು ಹಮಾಸ್ ತಿಳಿಸಿದೆ.