ಸರ್ವಾಧಿಕಾರಿ ವಿರುದ್ಧ ಸ್ಪಷ್ಟ ನಿಲುವು ಪ್ರದರ್ಶಿಸಿ, ಜಗತ್ತು ಜಿಂಬಾಬ್ವೆಯತ್ತ ನೋಡುವಂತೆ ಮಾಡಿದ ಹೆನ್ರಿ ಒಲಾಂಗ

Date:

Advertisements
ಸರ್ವಾಧಿಕಾರಿ ರಾಬರ್ಟ್ ಮುಗಾಬೆಯ ವಿರುದ್ಧ ಕ್ರಿಕೆಟಿಗ ಹೆನ್ರಿ ಒಲಾಂಗ ತೆಗೆದುಕೊಂಡ ನಿಲುವು ಜಿಂಬಾಬ್ವೆಯತ್ತ ಜಗತ್ತು ನೋಡುವಂತೆ ಮಾಡಿದ್ದಂತೂ ನಿಜ… ನಿರಂಕುಶ ಪ್ರಭುತ್ವದ ವಿರುದ್ಧ ಎದೆಯೊಡ್ಡಿ ನಿಂತ ಒಲಾಂಗ, ಇವತ್ತಿಗೂ ಹೀರೋ...

ನಮ್ಮ ಪೀಳಿಗೆಯ ಕ್ರಿಕೆಟ್ ಪ್ರೇಮಿಗಳು ಎಂದೆಂದಿಗೂ ಹೆನ್ರಿ ಒಲಾಂಗ ಎನ್ನುವ ಜಿಂಬಾಬ್ವೆ ವೇಗಿಯನ್ನು ಮರೆಯಲಾರರು. ಅದು 1998ರ ಕೋಕಾಕೋಲ ಕಪ್ ಪಂದ್ಯಾವಳಿ. ಶಾರ್ಜಾದಲ್ಲಿ ಆಯೋಜಿಸಲಾಗಿದ್ದ ಭಾರತ, ಶ್ರೀಲಂಕಾ ಮತ್ತು ಜಿಂಬಾಬ್ವೆ ದೇಶಗಳ ತ್ರಿಕೋನ ಸರಣಿಯದು. ತೊಂಬತ್ತರ ದಶಕದಲ್ಲಿ ಕೋಕಾಕೋಲ ಮತ್ತು ಪೆಪ್ಸಿ ಕಂಪನಿಗಳು ದಕ್ಷಿಣ ಏಷ್ಯಾದ ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುತ್ತಿದ್ದ ಕಾಲವದು. ಈ ಬಹುರಾಷ್ಟ್ರೀಯ ಕಂಪನಿಗಳ ಪೈಪೋಟಿ ಇಂತಹ Non- consequential ತ್ರಿಕೋನ ಸರಣಿಯ ರೂಪ ಪಡೆಯುತ್ತಿತ್ತು!

ಈ ತ್ರಿಕೋಣ ಸರಣಿಯಲ್ಲಿ ಶ್ರೀಲಂಕಾ ತಂಡ ತೀರಾ ಕಳಪೆ ಪ್ರದರ್ಶನ ನೀಡಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಸೋಲುಂಡಿತ್ತು. ಜಿಂಬಾಬ್ವೆ ತಂಡವನ್ನು ಸುಲಭವಾಗಿ ಮಣಿಸಿ ಭಾರತ ಕಪ್ ತನ್ನದಾಗಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ನಮ್ಮೆಲ್ಲರಲ್ಲಿತ್ತು. ಆದರೆ ಜಿಂಬಾಬ್ವೆಯನ್ನು ಲಘುವಾಗಿ ಪರಿಗಣಿಸುವ ತಪ್ಪನ್ನು ನಾವೆಲ್ಲರೂ ಮಾಡಿದ್ದೆವು ಅನ್ನುವುದು ಪಂದ್ಯಾವಳಿ ಶುರುವಾದ ಮೇಲೆ ತಿಳಿಯಿತು. ಜಿಂಬಾಬ್ವೆ ತಂಡದಲ್ಲಿ ಪ್ರತಿಭೆಗೇನು ಕೊರತೆ ಇರಲಿಲ್ಲ. ಆಲಿಸ್ಟರ್ ಕ್ಯಾಂಪೆಲ್, ಫ್ಲವರ್ ಸಹೋದರರು, ನೀಲ್ ಜಾನ್ಸನ್, ಹೀತ್ ಸ್ಟ್ರೀಕ್‌ನಂತಹ ಆಟಗಾರರು ಯಾವುದೇ ದೇಶದ ವಿರುದ್ಧ ಎಂತಹದೇ ಪಿಚ್‌ನಲ್ಲಿ ಕೂಡ ಅದ್ಭುತವಾಗಿ ಆಡಿ ತಂಡವನ್ನು ಗೆಲ್ಲಿಸುವ ಕ್ಷಮತೆ ಇದ್ದವರು.

1998ರ ಕೋಕಾಕೋಲ ಕಪ್ ಪಂದ್ಯಾವಳಿಯ ಐದನೇ ಪಂದ್ಯದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ ಕೇವಲ 205 ರನ್ನುಗಳ ಸಾಧಾರಣ ಮೊತ್ತ ದಾಖಲಿಸಿತು. ಇಂತಹ ಸಾಧಾರಣ ಮೊತ್ತದ ಬೆನ್ನಟ್ಟಿದ ಭಾರತ ತಂಡ ಅನಾಯಾಸವಾಗಿ ಗೆಲ್ಲುತ್ತದೆ ಎಂದು ನಾವೆಂದುಕೊಂಡಿದ್ದೆವು. ನಮಗೆ ತೀವ್ರ ಆಘಾತ ಕಾದಿತ್ತು. ಅಂದು ಭಾರತ ತಂಡವನ್ನು ಕಾಡಿದವ ಹೆನ್ರಿ ಒಲಾಂಗ. ನಾಲ್ಕು ವಿಕೆಟ್ ಕಬಳಿಸಿದ ಒಲಾಂಗ ಭಾರತವನ್ನು 192ಕ್ಕೆ ಆಲೌಟ್ ಮಾಡಿದ್ದ!

ಇದನ್ನು ಓದಿದ್ದೀರಾ?: ಆರ್‌ ಅಶ್ವಿನ್ | ಸಾಧಾರಣ ಕುಟುಂಬದ ಹುಡುಗ ಸ್ಟಾರ್‌ ಕ್ರಿಕೆಟಿಗನಾದ ಕತೆ

ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆದಾಗ ಒಲಾಂಗ ಸಂಭ್ರಮಿಸಿದ ರೀತಿ ಕಂಡು ನಮ್ಮೆಲ್ಲರಲ್ಲೂ ಅಸಹನೀಯ ಸಿಟ್ಟು ಮೂಡಿತ್ತು. ಫೈನಲ್ ಪಂದ್ಯದಲ್ಲಿ ಸಚಿನ್ ತಕ್ಕ ಉತ್ತರ ನೀಡಲೇಬೇಕೆಂದು ಇಡೀ ಭಾರತ ಕಿಚ್ಚಿನಿಂದ ಕಾದಿತ್ತು. ಫೈನಲ್ ಪಂದ್ಯದಲ್ಲಿ ಸಚಿನ್ ನಮ್ಮನ್ನು ನಿರಾಶೆಗೊಳಿಸಲಿಲ್ಲ. ನಿರ್ದಿಷ್ಟವಾಗಿ ಒಲಾಂಗ ಅವರನ್ನು ಗುರಿಯಾಗಿಸಿದ ಸಚಿನ್ ಶತಕ ಸಿಡಿಸಿದರು. ಕಪ್ ಭಾರತದ್ದಾಯಿತು.

ಸಚಿನ್ ಒಲಾಂಗ ಸಮರದಲ್ಲಿ ಅಂತಿಮ ನಗು ಸಚಿನದ್ದೇ ಆಗಿತ್ತು ಎಂದು ಹಲವರು ಹೇಳಬಹುದು. ಆದರೆ 1999ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಲಾಂಗ ಮಾರಕ ಬೌಲಿಂಗ್ ಭಾರತ ತಂಡವನ್ನು ಪಂದ್ಯಾವಳಿಯಿಂದಲೇ ಹೊರಹಾಕಿತ್ತು ಅನ್ನುವುದನ್ನು ಬಹಳಷ್ಟು ಮಂದಿ ಮರೆತು ಬಿಡುತ್ತಾರೆ(ತಂದೆಯ ಅಂತ್ಯಸಂಸ್ಕಾರಕ್ಕೆ ಭಾರತಕ್ಕೆ ಮರಳಿದ್ದ ಸಚಿನ್ ಭಾರತ ಜಿಂಬಾಬ್ವೆ ಪಂದ್ಯದಲ್ಲಿ ಆಡಿರಲಿಲ್ಲ).

ಒಲಾಂಗ ಕುರಿತಾದ ಮತ್ತೊಂದು ರೋಚಕ ಕತೆಯಿದೆ. ಜಿಂಬಾಬ್ವೆ ದೇಶವನ್ನು ರಾಬರ್ಟ್ ಮುಗಾಬೆ 1980ರಿಂದ ಆಳಿದ್ದ. ಜಿಂಬಾಬ್ವೆ ದೇಶದ ರಾಷ್ಟ್ರಪತಿಯಾಗುವ ಮುನ್ನ ಪ್ರಾಧ್ಯಾಪಕನಾಗಿದ್ದ ಮುಗಾಬೆ, ಗಾಂಧಿ ಮತ್ತು ನೆಹರೂ ಅವರನ್ನು ತನ್ನ ಆದರ್ಶವೆಂದು ಹೇಳಿಕೊಳ್ಳುತ್ತಿದ್ದ. ಬಿಳಿಯರ ಆಳ್ವಿಕೆಯಲ್ಲಿ ವರ್ಣಭೇದ ನೀತಿಯ ಕರಾಳ ಯುಗವನ್ನು, ಯಾತನೆಯನ್ನು ಅನುಭವಿಸಿದ್ದ ಸೌಥ್ ರೊಡೇಶಿಯಾ ಮುಂದೆ ಜಿಂಬಾಬ್ವೆಯಾಗಿ ಬದಲಾಗಿತ್ತು. ವಸಾಹತೋತ್ತರ ಕಾಲದ ಸ್ವತಂತ್ರ ಜಿಂಬಾಬ್ವೆಯ ಪ್ರಧಾನಿಯಾದ ರಾಬರ್ಟ್ ಮುಗಾಬೆಗೆ ಸಮಾಜವಾದ, ಮಾರ್ಕ್ಸ್ ವಾದ, ಗಾಂಧಿ, ನೆಹರೂ ಮರೆತು ಸರ್ವಾಧಿಕಾರಿಯಾಗಲು ಹೆಚ್ಚು ಕಾಲ ಬೇಕಾಗಲಿಲ್ಲ.

ವಸಾಹತೋತ್ತರ ಜಿಂಬಾಬ್ವೆಯಲ್ಲಿ ಉಳಿದುಕೊಂಡಿದ್ದ ಅಲ್ಪಸಂಖ್ಯಾತ ಬಿಳಿಯರ ವಿರುದ್ಧ ದ್ವೇಷ ಉಗುಳಲು ಶುರು ಮಾಡಿಕೊಂಡಿದ್ದ ಮುಗಾಬೆಯ ಜನಪ್ರಿಯತೆ ಆಗಸದೆತ್ತರಕ್ಕೆ ಏರಿತ್ತು. ಆತ ಅಪರಿಮಿತ ಅಧಿಕಾರದ ರಾಷ್ಟ್ರಪತಿಯಾದ. ಅಧಿಕಾರದ ಮದ ಏರುತ್ತಾ ಹೋದಂತೆಲ್ಲಾ ಮುಗಾಬೆ ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ. ತನ್ನ ಜನಪ್ರಿಯತೆ ಹಳ್ಳ ಹಿಡಿದಾಗಲೆಲ್ಲ ದೇಶದ ಅಲ್ಪಸಂಖ್ಯಾತ ಬಿಳಿಯರನ್ನು ದೂಷಿಸುತ್ತಿದ್ದ. ದೇಶದ ದುಸ್ಥಿತಿಗೆ ಅವರೇ ಕಾರಣರೆಂದು ಹೇಳಿ ತನ್ನ ಅಸಮರ್ಥ ಆಡಳಿತವನ್ನು ಮರೆಮಾಚಿಸುತ್ತಿದ್ದ.

ಸ್ವಾತಂತ್ರ್ಯ ಸಮಯದಲ್ಲಿ ಭೂಮಿ ಮರುವಿತರಣೆ ಮಾಡುತ್ತೇನೆ ಎಂದು ಬಹುಸಂಖ್ಯಾತ ಕಪ್ಪು ವರ್ಣದ ಜಿಂಬಾಬ್ವೆ ಪ್ರಜೆಗಳಿಗೆ ಭರವಸೆ ನೀಡಿದ್ದ ಮುಗಾಬೆ ಅದನ್ನು ದಶಕಗಳ ಕಾಲ ಈಡೇರಿಸಿಯೇ ಇರಲಿಲ್ಲ. ಕೊನೆಗೊಂದು ದಿನ ಆತನ ದುರಾಡಳಿತದಿಂದ ಜನಪ್ರಿಯತೆ ತಳ ಮುಟ್ಟಿದಾಗ ಬಿಳಿಯರ ಭೂಮಿಯನ್ನು ಕಸಿದುಕೊಳ್ಳಿ, ಅವರು ಒಪ್ಪದಿದ್ದರೆ ಒತ್ತಾಯಪೂರ್ವಕವಾಗಿ ಕಸಿದುಕೊಳ್ಳಿ, ಹಿಂಸೆ ಒಪ್ಪಿತ ಎಂದು ಘೋಷಿಸಿದ!

ವಸಾಹತು ಕಾಲದಿಂದಲೂ ಬೇಸಾಯ ಮಾಡಿಕೊಂಡು ಬಂದಿದ್ದ ಸುಮಾರು ಮೂರು ಮಿಲಿಯನ್ ಬಿಳಿಯರ ಜಮೀನುಗಳನ್ನು ಕಸಿದುಕೊಳ್ಳಲಾಯಿತು. ಕಪ್ಪು ವರ್ಣದವರಿಗೆ ಭೂಮಿ ಏನೋ ಸಿಕ್ಕಿತು, ಆದರೆ ಅವರಿಗೆ ಬೇಸಾಯ ಮಾಡಲು ಬರುತ್ತಿರಲಿಲ್ಲ. ಬೆಳೆ ಇಲ್ಲದೆ ಇಡೀ ಜಿಂಬಾಬ್ವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಮುಗಾಬೆ ದರ್ಪ ಹುಚ್ಚುತನ ಉತ್ತುಂಗ ಮುಟ್ಟಿತ್ತು. ಕ್ರಿಕೆಟ್ ತಂಡದ ಆಯ್ಕೆಯಲ್ಲೂ ವರ್ಣಭೇದ ನೀತಿಯನ್ನು ಆತ ಜಾರಿಗೆ ತಂದಿದ್ದ. ಕಪ್ಪು ವರ್ಣದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪಕ್ಕೆ ಮಿತಿಯೇ ಇಲ್ಲದಂತಾಗಿತ್ತು. ಇಂತಹ ಸಮಯದಲ್ಲೇ 2003ರ ಕ್ರಿಕೆಟ್ ವಿಶ್ವಕಪ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಯಲ್ಲಿ ಆಯೋಜಿಸಲಾಯಿತು.

00e9147e robert gabriel mugabe 1924 2019 a tragedy in three acts

ಫೆಬ್ರುವರಿ 10, 2003. ಜಿಂಬಾಬ್ವೆ ನಮೀಬಿಯಾ ತಂಡವನ್ನು ಎದುರಿಸಲಿತ್ತು. ಪಂದ್ಯಕ್ಕೆ ಹರಾರೆ ಸ್ಪೋರ್ಟ್ಸ್ ಕ್ಲಬ್ ಸಜ್ಜಾಗಿತ್ತು. ಅಂದು ಮುಗಾಬೆಯ ಸರ್ವಾಧಿಕಾರವನ್ನು ವಿರೋಧಿಸಿ ಕಪ್ಪು ತೋಳ್ಪಟ್ಟಿ ಕಟ್ಟಿಕೊಂಡು ಪಂದ್ಯವನ್ನಾಡಲು ಒಲಾಂಗ ಮತ್ತು ಫ್ಲವರ್ ನಿರ್ಧರಿಸಿದ್ದರು. “ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿದೆ, ಆ ಶೋಕ ವ್ಯಕ್ತಪಡಿಸಲು ಕಪ್ಪು ತೋಳ್ಪಟ್ಟಿ ಕಟ್ಟಿಕೊಂಡು ವಿಶ್ವಕಪ್ ಪಂದ್ಯಾವಳಿಯನ್ನು ಆಡುತ್ತೇವೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. “ನಮ್ಮ ದೇಶದ ಘನತೆ ಮತ್ತು ವಿವೇಕ ಮರುಸ್ಥಾಪಿಸಲು, ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ನಮ್ಮದೊಂದು ಶಾಂತಿಯುತ ಮತ್ತು ಮೌನದ ಪ್ರತಿಭಟನೆಯಿದು” ಎಂದು ಒಲಾಂಗ ಹೇಳಿಕೆ ನೀಡಿದ.

ಇದನ್ನು ಓದಿದ್ದೀರಾ?: ನುಡಿಜಾತ್ರೆಯ ಮರೆತು ಸಿ.ಟಿ.ರವಿ ಹಿಂದೆ ಬಿದ್ದ ಮಾಧ್ಯಮಗಳು; ಜನಾಕ್ರೋಶ

ಅಂದು ಪಂದ್ಯ ನಡೆಯುವಾಗ ಕ್ರೀಡಾಂಗಣವನ್ನು ಬಂದೂಕುಧಾರಿಗಳು ಸುತ್ತುವರೆದರು. ಮುಂದುವರೆದು ಇಂಗ್ಲೆಂಡ್ ತಂಡ ಜಿಂಬಾಬ್ವೆಯಲ್ಲಿ ಪಂದ್ಯವನ್ನಾಡಲು ನಿರಾಕರಿಸಿತು. ಒಲಾಂಗ ಅಂದು ತೆಗೆದುಕೊಂಡ ನಿಲುವಿಗೆ ತನ್ನ ಆಸ್ತಿ, ಸಂಪತ್ತನ್ನು ಕಳೆದುಕೊಳ್ಳಬೇಕಾಯಿತು. ಪ್ರಿಯತಮೆ ಆತನನ್ನು ತೊರೆದಳು. ಒಲಾಂಗ ದೇಶ ಬಿಟ್ಟು ಇಂಗ್ಲೆಂಡ್ ದೇಶಕ್ಕೆ ವಲಸೆ ಹೋಗಬೇಕಾಯಿತು.

ಸರ್ವಾಧಿಕಾರಿಯ ವಿರುದ್ಧ ಹೆನ್ರಿ ಒಲಾಂಗ ತೆಗೆದುಕೊಂಡ ನಿಲುವಿಗೆ ಭಾರಿ ಬೆಲೆಯನ್ನೇ ತೆತ್ತಿದ್ದಾನೆ. ಕ್ರಿಕೆಟ್ ಪ್ರೇಮಿಗಳು ಆ ಘಟನೆಯನ್ನು ಮರೆತು ಮುಂದೆ ಸಾಗಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ತಂಡದ ಸದಸ್ಯರ ಆಯ್ಕೆಯಲ್ಲೂ ಹಸ್ತಕ್ಷೇಪ ಮಾಡುತ್ತಿದ್ದ ಮುಗಾಬೆ ಸತ್ತು ಮಣ್ಣಾಗಿದ್ದಾನೆ. ಜಿಂಬಾಬ್ವೆಯ ಹಲವು ಪ್ರತಿಭಾನ್ವಿತ ಆಟಗಾರರ ವೃತ್ತಿಜೀವನ ಅಂತ್ಯವಾಗಿದೆ. 2004ರಲ್ಲೇ ಇಡೀ ತಂಡವನ್ನು ವಿಸರ್ಜಿಸಲಾಯಿತು ಕೂಡ!

ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಒಲಾಂಗ ಹಾಡುಗಾರನಾಗಿ, ಚಿತ್ರಕಾರನಾಗಿ ಬದುಕು ಕಟ್ಟಿಕೊಂಡಿದ್ದಾನೆ. ಆದರೆ ಜಿಂಬಾಬ್ವೆಗೆ ಮರಳಲು ಮಾತ್ರ ಮನಸ್ಸು ಮಾಡಿಲ್ಲ. ಮುಗಾಬೆ ನಂತರದ ಜಿಂಬಾಬ್ವೆ ಕೂಡ ಸುರಕ್ಷಿತವೆಂದು ಆತನಿಗೆ ಅನ್ನಿಸಿಲ್ಲ. ತೆಗೆದುಕೊಂಡ ನಿಲುವು ಜಿಂಬಾಬ್ವೆಯತ್ತ ಜಗತ್ತು ನೋಡುವಂತೆ ಮಾಡಿದ್ದಂತೂ ನಿಜ… ನಿರಂಕುಶ ಪ್ರಭುತ್ವದ ವಿರುದ್ಧ ಎದೆಯೊಡ್ಡಿ ನಿಂತ ಒಲಾಂಗ ಮಾತ್ರ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾನೆ.

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

3 COMMENTS

  1. Sir, Firstly thanking you being as a mentor rather than a lecturer 🙌 I hope this bond would contineu for future and a Special note ”i have boundlessly being disciplined by your word and like to learn something till my date comes.
    -Yours Devotee(ekalavya)

  2. Sir, Firstly thanking you for being as a mentor rather than a lecturer 🙌 I hope this bond would contineu for future and a personal note ”i have boundlessly being disciplined by your word and like to learn something till my date comes.
    -Yours Devotee(ekalavya)

    • ನಿದ೯ರಿತ ಸಮಯದಲ್ಲಿ ಭಾಷಣ ಮುಗಿಸಲಿಕ್ಕೆ ಹೋಗಿ ತಮಾಷೆ ಕೂಡ ಮಾಡಿದಿರಿ, ತುಂಬಾ ಚೆನ್ನಾಗಿತ್ತು, ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

Download Eedina App Android / iOS

X