ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಅಮೆರಿಕ 50% ಸುಂಕ ವಿಧಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಸುಂಕ ನೀತಿಯನ್ನು ಆರ್‌ಬಿಐ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ಅವರು ‘ಪವರ್ ಪ್ಲೇ’ (ಶಕ್ತಿ ಆಟ) ಎಂದು ಬಣ್ಣಿಸಿದ್ದಾರೆ. ಇದು, ವ್ಯಾಪಾರ ಆರ್ಥಿಕತೆಯನ್ನು ಮೀರಿ ರಾಜಕೀಯ ಮತ್ತು ಆರ್ಥಿಕ ಶಕ್ತಿಯನ್ನು ಮತ್ತೊಬ್ಬರ ಮೇಲೆ ಹೇರುವ ದುರುದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಹೌದು, ಆಗಸ್ಟ್ 27ರಂದು ‘ಬ್ಯುಸಿನೆಸ್ ಟುಡೆ’ ಸುದ್ದಿವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದ ರಘುರಾಮ್ ರಾಜನ್ ಹಲವು ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ. ಟ್ರಂಪ್ ಸುಂಕ ಹೇರಿಕೆಯ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದು ಸಾರ್ವಭೌಮತ್ವದ ವಿಚಾರವೇ ಅಥವಾ ದೇಶದ ಬೃಹತ್ ಬಂಡವಾಳ ಶಕ್ತಿಗಳಿಗೆ ಅನುಕೂಲ ಮಾಡುವ ಉದ್ದೇಶವಾ ಎಂಬ ಬಗ್ಗೆ ಅವರು ಹೆಚ್ಚು ಮಾತನಾಡಿದ್ದಾರೆ.
“ಅಮೆರಿಕದ ಬೆದರಿಕೆಯ ನಡುವೆಯೂ ಭಾರತವು ರಷ್ಯದಿಂದ ತೈಲ ಖರೀದಿಯನ್ನು ಮುಂದುವರೆಸಿದೆ. ಇದರಿಂದ ಯಾರಿಗೆ ಉಪಯೋಗ, ಯಾರು ಲಾಭ ಪಡೆಯುತ್ತಾರೆ. ಸಾಮಾನ್ಯ ಜನರೇ? ಅಥವಾ ಅಂಬಾನಿ ರಿಲಯನ್ಸ್ ನಂತಹ ತೈಲ ಕಂಪನಿಗಳೇ? ರಿಲಯನ್ಸ್, ನಾಯರಾ ಎನರ್ಜಿ, ಇಂಡಿಯನ್ ಆಯಿಲ್ ರೀತಿಯ ರಿಫೈನರ್‌ಗಳು ರಷ್ಯನ್ ತೈಲ ಖರೀದಿಯಿಂದ ಅತಿಯಾದ ಲಾಭ ಪಡೆಯುತ್ತಿವೆ. ಇದರಿಂದ, ದೇಶದ ಜನರಿಗೆ ಲಾಭವಾಗುತ್ತಿದೆಯೇ?” ಎಂದು ರಾಜನ್ ಪ್ರಶ್ನಿಸಿದ್ದಾರೆ.
“ಈಗ, ಟ್ರಂಪ್ ಭಾರತದ ಮೇಲೆ 50% ತೆರಿಗೆ ವಿಧಿಸಿದ್ದಾರೆ. ಇದರಿಂದ, ಜವಳಿ, ಕೈಷಿ ಹಾಗೂ ಆಭರಣ ಕ್ಷೇತ್ರಗಳು ಹೆಚ್ಚು ಹೊಡೆತ ಅನುಭವಿಸಲಿವೆ. ಜೊತೆಗೆ, ಅಮೆರಿಕಗೆ ಜವಳಿ, ಕೃಷಿ ಹಾಗೂ ಆಭರಣ ಉತ್ಪನ್ನಗಳನ್ನು ರಫ್ತು ಮಾಡುವ ಸಣ್ಣ ರಫ್ತುದಾರರು ಭಾರೀ ನಷ್ಟ ಮತ್ತು ಹೊರೆ ಅನುಭವಿಸಲಿದ್ದಾರೆ. ರಷ್ಯಾದ ತೈಲದಿಂದ ಲಾಭ ಪಡೆಯುವವರು ತಮ್ಮ ಲಾಭದಲ್ಲಿ ನಷ್ಟ ಎದುರಿಸುತ್ತಿರುವ ಸಣ್ಣ ರಫ್ತುದಾರರಿಗೆ ಪಾಲು ಹಂಚುವರೇ” ಎಂದು ಕೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
“ಭಾರತವು ರಷ್ಯದಿಂದ ತೈಲ ಖರೀದಿರುವ ವಿಚಾರವನ್ನು ‘ಸಾರ್ವಭೌಮತ್ವ’ ವಿಚಾರ ಎನ್ನುತ್ತಿದೆ. ಆದರೆ, ಅದು ಸಾರ್ವಭೌಮತ್ವದ ಪ್ರಶ್ನೆಯಲ್ಲ. ಬದಲಿಗೆ ‘ಸ್ಮಾರ್ಟ್ ಪಾಲಿಸಿ ಮೇಕಿಂಗ್’ (ಬುದ್ಧಿವಂತ ನೀತಿ ರಚನೆ)ಗೆ ಸಂಬಂಧಿಸಿದ್ದಾಗಿದೆ. ನಾವು ಯಾವುದೇ ಒಂದು ದೇಶದ ಮೇಲೆ ಹೆಚ್ಚು ಅವಲಂಬಿತರಾಗಬಾರದು. ಈ ಸುಂಕವು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. 8-8.5% ಅಭಿವೃದ್ಧಿ ಸಾಧಿಸಲು ದೇಶವು ನಾನಾ ಸುಧಾರಣೆಗಳನ್ನು ತರಬೇಕು” ಎಂದು ಹೇಳಿದ್ದಾರೆ.
ಇದೇ ವಿಚಾರವನ್ನು ಲಿಂಕ್ಡ್ ಇನ್‌ನಲ್ಲಿ ಪೋಸ್ಟ್ ಮಾಡಿರುವ ರಾಜನ್, “ರಷ್ಯನ್ ತೈಲದಿಂದ ಲಾಭ ಪಡೆಯುತ್ತಿರುವ ರಿಫೈನರ್‌ಗಳು ತಮ್ಮ ಲಾಭದಲ್ಲಿ ಸುಂಕದಿಂದ ನಷ್ಟ ಎದುರಿಸುತ್ತಿರುವ ರಫ್ತುದಾರರಿಗೆ ಸಹಾಯ ಮಾಡಬೇಕು. ಸರ್ಕಾರವು ರಷ್ಯನ್ ತೈಲ ಖರೀದಿಯ ಮೇಲೆ ವಿಂಡ್‌ಫಾಲ್ ಟ್ಯಾಕ್ಸ್ (ಅಧಿಕ ಲಾಭ ತೆರಿಗೆ) ವಿಧಿಸಿ, ಅದನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಂಚಬೇಕು” ಎಂದು ಸಲಹೆ ನೀಡಿದ್ದಾರೆ.
ರಘುರಾಮ್ ರಾಜನ್ ಅವರ ಮಾತುಗಳು ಭಾರತದ ಆರ್ಥಿಕ ನೀತಿಯನ್ನು ಪುನರ್‌ವಿಮರ್ಶೆ ಮಾಡಲು ಕರೆ ಕೊಡುತ್ತವೆ.