ನಾನು ಸಾಯಲು ಬಯಸುತ್ತೇನೆ. ನನ್ನ ಸಾವು ಇತರರಿಗೆ ಪ್ರೇರಣೆಯಾಗುತ್ತದೆ. ನನ್ನ ಮತ್ತು ನನ್ನ ಸಹವರ್ತಿಗಳ ಸಾವುಗಳು ವ್ಯರ್ಥವಾಗುವುದಿಲ್ಲ. ನನ್ನ ಜೀವನದಲ್ಲಿ ಬದುಕುವುದಕ್ಕಿಂತ ಹೆಚ್ಚು ಕಾಲ ಹುತಾತ್ಮನಾಗಿದ್ದೇನೆ ಎಂದಿದ್ದ ನೆಲ್ಸನ್ ಮಂಡೇಲಾರ ಜನ್ಮದಿನ ಇಂದು...
ನಮ್ಮ ದೇಶದಂತೆಯೇ ದಕ್ಷಿಣ ಆಫ್ರಿಕಾ ಕೂಡ ಬಿಳಿಯರ ಆಡಳಿತದಲ್ಲಿ ಸಿಕ್ಕಿಕೊಂಡಿತ್ತು. ನೆದರ್ಲ್ಯಾಂಡ್ (1652-1795 ಮತ್ತು 1803-1806) ಮತ್ತು ಗ್ರೇಟ್ ಬ್ರಿಟನ್ (1795-1803 ಮತ್ತು 1806-1961) ಆಡಳಿತ ನಡೆಸಿತ್ತು. 1910ರಲ್ಲಿ ದಕ್ಷಿಣ ಆಫ್ರಿಕಾ ತನ್ನದೇ ಆದ ಬಿಳಿಯರ ಸರ್ಕಾರದೊಂದಿಗೆ ಒಕ್ಕೂಟವಾಯಿತು, ಆದರೆ 1961ರವರೆಗೆ ದೇಶವನ್ನು ಬ್ರಿಟನ್‌ನ ವಸಾಹತು ಎಂದು ಪರಿಗಣಿಸಲಾಯಿತು. 1961ರಲ್ಲಿ ಗಣರಾಜ್ಯವಾದರೂ 1984ರವರೆಗೂ ಹೊಸ ಸಂವಿಧಾನ ಜಾರಿಗೆ ಬರುವವರೆಗೆ ಬಿಳಿಯರು ದಕ್ಷಿಣ ಆಫ್ರಿಕಾ ಗಣರಾಜ್ಯ ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿದಿದ್ದರು.
ಯೂರೋಪ್/ಬಿಳಿಯ ಜನರು ದಕ್ಷಿಣ ಆಪ್ರಿಕಾದ ಕಪ್ಪು ಜನರ ಮೇಲೆ ಶತಮಾನಗಳ ಕಾಲ ನಡೆಸಿದ ದಬ್ಬಾಳಿಕೆಗಳ ಮುಖಗಳನ್ನೆಲ್ಲ ಆಫ್ರಿಕಾದ ಇತಿಹಾಸದಲ್ಲಿ ನೋಡಬಹುದಾಗಿದೆ. ಅದು ಆಫ್ರಿಕಾ, ಏಷ್ಯಾ, ಭರತ ಖಂಡ, ಜಗತ್ತಿನ ಇನ್ನಾವುದೇ ದೇಶವಾಗಿರಬಹುದು. ಒಂದು ಜನಾಂಗ ಇನ್ನೊಂದು ಜನಾಂಗವನ್ನು ತುಳಿಯುತ್ತಲೇ ಬಂದಿರುವುದು, ಬರುತ್ತಿರುವುದು ಇಂದಿಗೂ ಕೊನೆಗೊಂಡಿಲ್ಲ. ಬಿಳಿಯ ಕರಿಯ, ಮೇಲೂ ಕೀಳೂ, ಉಚ್ಚ ನೀಚ, ಮೇಲ್ಜಾತಿ ಕೆಳಜಾತಿ, ವರ್ಣಭೇದ ಅಸ್ಪೃಶ್ಯತೆ ಇತ್ಯಾದಿ ತಾರತಮ್ಯಗಳು ಇನ್ನೂ ಮನುಷ್ಯ ಜನಾಂಗಗಳ ನಡುವೆ ನಡೆಯುತ್ತಿವೆ.
ಭಾರತದಲ್ಲಿ ಮಹಾತ್ಮ ಗಾಂಧಿ, ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ, ಅಮೆರಿಕಾದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಬಿಳಿಯರ ಸರ್ಕಾರಗಳ ವಿರುದ್ಧ ನಡೆಸಿದ ಅಹಿಂಸೆ ಆಂದೋಲನಗಳಿಂದ ಲಕ್ಷಾಂತರ ಜನರ ಪ್ರಾಣ ಉಳಿಸಿದರು ಎನ್ನುವುದು ಸತ್ಯ. ಶೂದ್ರ, ಅತಿಶೂದ್ರರ ವಿರುದ್ಧ ಸವರ್ಣೀಯ ಹಿಂದೂಗಳು; ಕರಿಯರ ವಿರುದ್ಧ ಬಿಳಿಯರು; ಜರ್ಮನ್ ನಾಝಿಗಳು ಯೆಹೂದಿಗಳ ಮೇಲೆ ನಡೆಸಿದ ದಬ್ಬಾಳಿಕೆಗಳು ಕೇವಲ ಕೆಲವು ಉದಾಹರಣೆಗಳು ಮಾತ್ರ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳ ಪ್ರಮಾಣ ಕಡಿಮೆಯೇನೂ ಇಲ್ಲ. ಆದರೆ ಪರಿಸ್ಥಿತಿ ಕಾಲಕಾಲಕ್ಕೆ ಒಂದಷ್ಟು ಬದಲಾವಣೆಗಳನ್ನು ಕಾಣುತ್ತಾ ಬಂದಿದೆ.

ಝೋಸಾ ಬುಡಕಟ್ಟಿನ ಥೆಂಬು ರಾಜಮನೆತನಕ್ಕೆ ಸೇರಿದ ಮಂಡೇಲಾಗೆ ಆತನ ತಂದೆ ದಯಪಾಲಿಸಿದ ಹೆಸರು ರೋಲಿಹ್ಲಾಲಾ; ಝೋಸಾ ಭಾಷೆಯಲ್ಲಿ ‘ರೋಲಿಹ್ಲಾಲಾ’ ಎಂದರೆ ಮರದಿಂದ ಬೇರ್ಪಡಿಸಿದ ಕೊಂಬೆ. ಮಂಡೇಲಾ ದಕ್ಷಿಣ ಆಫ್ರಿಕಾದ ಟ್ರಾನ್ಸ್ಕೀ ಎಂಬ ಪ್ರದೇಶದ ಎಂಬ ಸಣ್ಣ ಮೆವೆಜೊ ಹಳ್ಳಿಯಲ್ಲಿ 1918 ಜುಲೈ 18ರಂದು ಜನಿಸಿದರು. ಮೊಬೆಷೆ ನದಿಯ ದಡದಲ್ಲಿರುವ ಈ ಹಳ್ಳಿ ಉಮ್ಟಾಟಾ ಜಿಲ್ಲೆಯ ಟ್ರಾನ್ಸ್ಕೀ ರಾಜಧಾನಿಗೆ ಸೇರಿದೆ. ಮಂಡೇಲಾ ಹುಟ್ಟಿದ ಆ ವರ್ಷ ಮೊದಲ ಮಹಾಯುದ್ಧದ ಕೊನೆಯ ವರ್ಷ. ಅದೇ ವರ್ಷ ಇನ್‌ಫ್ಲುಯೆಂಝಾ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಕಾಣಿಸಿಕೊಂಡು ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಟ್ರಾನ್ಸ್ಕೀ ಪ್ರಾಂತ್ಯದಲ್ಲಿ ಝೋಸಾ ಜನಸಂಖ್ಯೆ ಮತ್ತು ಅಲ್ಪಸಂಖ್ಯಾತರಾದ ಬಸೊಥೊಸ್ ಮತ್ತು ಬಿಳಿಯರಿದ್ದರು. ಇದು ಥೆಂಬು ಜನರ ನೆಲೆಯಾಗಿತ್ತು.
ಮಂಡೇಲಾನ ತಂದೆ ಗಡ್ಲಾ ಹೆನ್ರಿ ಮೆಫಾಕಾನಿಸ್ವಾ, ಥೆಂಬು ಜನಾಂಗಕ್ಕೆ ಸೇರಿದ್ದು, ಥೆಂಬು ರಾಜನು ಮಂಡೇಲಾ ತಂದೆಯನ್ನು ಮೆವೆಜೊನ ಮುಖ್ಯಸ್ಥನಾಗಿ ನೇಮಿಸಿದ್ದನು. ಬ್ರಿಟಿಷರು ಇತನನ್ನು ಸ್ಥಳೀಯ ನ್ಯಾಯಾಧೀಶ ಎಂದು ಗುರುತಿಸಿ ಮುಂದುವರಿಸಿದ್ದರು. ಕಾರಣ ಈತ ಸ್ಟೆಪಂಡ್‌ಗೆ ಅರ್ಹನಾಗಿದ್ದು ಜೊತೆಗೆ ಸಮುದಾಯದ ಜಾನುವಾರುಗಳಿಗೆ ಲಸಿಕೆ ಹಾಕಿ ಹುಲ್ಲು ಮೇಯಿಸುತ್ತಿದ್ದರಿಂದ ಇನ್ನಷ್ಟು ಹಣ ದೊರಕುತ್ತಿತ್ತು. ಇವರು ಮೂಲದಲ್ಲಿ ಪರ್ವತಗಳ ತಪ್ಪಲುಗಳಲ್ಲಿ ವಾಸಿಸುತ್ತಿದ್ದು, 16ನೇ ಶತಮಾನದಲ್ಲಿ ಕರಾವಳಿಯ ಕಡೆಗೆ ವಲಸೆಬಂದು ಝೋಸಾ ರಾಷ್ಟ್ರಕ್ಕೆ ಸೇರಿಕೊಂಡರು. ಝೋಸಾ ಜನರು ಮೂಲ ನಿನಿ ಜನಾಂಗಕ್ಕೆ ಸೇರಿದ್ದು, ಮೊದಲಿಗೆ ಸಮೃದ್ಧ ಸಮಶೀತೋಷ್ಣ ದಕ್ಷಿಣ ಆಫ್ರಿಕಾದ ಆಗ್ನೇಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತ ಮೀನು ಹಿಡಿದು ಬದುಕುತ್ತಿದ್ದರು. ಇಲ್ಲಿನ ಜನರನ್ನು ಮುಖ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 1. ಉತ್ತರದ ಝುಲು ಮತ್ತು ಸ್ವಾಜಿ. 2. ದಕ್ಷಿಣದ ನಾಲ್ಕಾರು ಗುಂಪುಗಳ ಜೊತೆಗೆ ಥೆಂಬು ಜನರೂ ಸೇರಿ ಝೋಸಾ ರಾಷ್ಟ್ರವಾಯಿತು.
ಝೋಸಾ ಜನರು ಕಾನೂನು, ಶಿಕ್ಷಣ ಮತ್ತು ಸೌಜನ್ಯದ ಪ್ರಾಮುಖ್ಯತೆಯೊಂದಿಗೆ ತಮ್ಮ ಅಭಿವ್ಯಕ್ತಿ, ಉತ್ಸಾಹಪೂರ್ಣ ಭಾಷೆಗಳ ಪೋಷಕರಾಗಿದ್ದಾರೆ. ಝೋಸಾ ಸಮಾಜದ ಪ್ರತಿಯೊಬ್ಬ ಮಹಿಳೆ ಮತ್ತು ಗಂಡಸು ತಮ್ಮ ಸ್ಥಾನದ ಬಗ್ಗೆ ಅರಿವಿದ್ದು, ಸಾಮಾಜಿಕ ಬದ್ಧತೆಯೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳುತ್ತಾರೆ. ಪ್ರತಿಯೊಂದು ಝೋಸಾವು ಒಂದು ಕುಲಕ್ಕೆ ಸೇರಿದ್ದು, ಅದು ಹಿಂದಿನ ತಲೆಮಾರಿನವರಿಂದ ಬಂದಿದೆ. ಮಂಡೇಲಾ ತಂದೆಗೆ ಬರೆಯಲು, ಓದಲು ಬರುತ್ತಿರಲಿಲ್ಲವಾದರೂ ಪ್ರೇಕ್ಷಕರನ್ನು ಆಕರ್ಷಿಸುವ ರೀತಿಯಲ್ಲಿ ಭಾಷಣಗಳನ್ನು ಮಾಡುತ್ತಿದ್ದು, ಎಲ್ಲವನ್ನು ತಿಳಿಹೇಳುತ್ತಿದ್ದನು ಮತ್ತು ರಾಜರಿಗೆ ಸಲಹೆಗಾರರಾಗಿದ್ದಲ್ಲದೆ ರಾಜರನ್ನು ಬೆಳೆಸುವ ರಾಜನಾಯಕನು ಆಗಿದ್ದನು.
ಮಂಡೇಲಾ ತಂದೆಗೆ ನಾಲ್ವರು ಪತ್ನಿಯರಿದ್ದು, ಮಂಡೇಲಾನ ತಾಯಿ ಮೂರನೇ ಪತ್ನಿ ನೊಸೆಕೆನಿ ಫ್ಯಾನಿ. ಈಕೆ ಝೋಸಾದ ಅಮೆಮೆಂಬಾ ವಂಶದ ನಿಕೆದಾ ಅವರ ಮಗಳು. ನಾಲ್ವರು ಪತ್ನಿಯರಲ್ಲಿ ಬಲಗೈ ಮನೆಗೆ ಸೇರಿದ ಶ್ರೇಷ್ಠ ಪತ್ನಿ ಮಂಡೇಲಾ ತಾಯಿಯಾಗಿದ್ದಳು. ಇವರ ಸಣ್ಣಸಣ್ಣ ಮನೆಗಳು ಬೇಲಿಗಳಿಂದ ಸುತ್ತುವರಿದಿದ್ದು, ಆವರಣದಲ್ಲಿ ಬೆಳೆ ಬೆಳೆಯುವ ಪ್ರದೇಶ ಮತ್ತು ಜಾನುವಾರುಗಳು ಇರುತ್ತಿದ್ದವು. ನಾಲ್ಕು ಪತ್ನಿಯರ ಮನೆಗಳು ಮೈಲಿಗಳ ಅಂತರದಲ್ಲಿದ್ದು, ಮಂಡೇಲಾ ತಂದೆ ಈ ಮನೆಗಳ ಮಧ್ಯೆ ಓಡಾಡುತ್ತಿದ್ದರು. ಆತನಿಗೆ ಒಟ್ಟು 13 ಮಕ್ಕಳಿದ್ದವು. 4 ಗಂಡು ಮಕ್ಕಳು ಮತ್ತು 9 ಹೆಣ್ಣು ಮಕ್ಕಳು. ಮಂಡೇಲಾ ಬಲಗೈ ಮನೆಯ ಹಿರಿಯ ಮಗನಾಗಿದ್ದು, ಅವನ ತಂದೆ ತನ್ನ ಪತ್ನಿಯರ ನಡುವೆ ಓಡಾಡುತ್ತಿದ್ದಾಗ ಒಂದು ತಿಂಗಳಿಗೆ ಒಮ್ಮೆ ಮಂಡೇಲಾನ ತಾಯಿ ಮನೆಯ ಸರದಿ ಬಂದು ಒಂದು ವಾರ ಇರುತ್ತಿದ್ದನು.

ತಂದೆ ತೀರಿಕೊಂಡ ಮೇಲೆ ಒಂದು ದಿನ ಮಂಡೇಲಾನ ತಾಯಿ ಗಂಟುಮೂಟೆ ಕಟ್ಟಿಕೊಂಡು ಮಂಡೇಲಾ ಕೈಹಿಡಿದು ಪಶ್ಚಿಮದ ಕಡೆಗೆ ಹೊರಟಳು. ಮಂಡೇಲಾನಿಗೆ ತನ್ನ ತಂದೆಯ ಸಾವಿಗಿಂತ ಹೆಚ್ಚಾಗಿ ತನ್ನ ಹಳ್ಳಿಯ ಜಗತ್ತನ್ನು ಬಿಟ್ಟುಹೋಗುವ ದುಃಖ ಹೆಚ್ಚು ಕಾಡುತ್ತಿತ್ತು. ಕುನುಹಳ್ಳಿ ಅವನಿಗೆ ರ‍್ವಸ್ವವೂ ಆಗಿತ್ತು. ಬೆಟ್ಟದ ಮೇಲಿಂದ ಹಳ್ಳಿಯನ್ನೊಮ್ಮೆ ಕೊನೆಯದಾಗಿ ನೋಡಿ ಕಣ್ಣುಗಳ ತುಂಬ ತುಂಬಿಕೊಂಡನು. ಮರುದಿನ ಮಧ್ಯಾಹ್ನದ ಹೊತ್ತಿಗೆ ಕಣಿವೆಯ ತಪ್ಪಲಲ್ಲಿ ಮರಗಳ ಮಧ್ಯೆ ಇರುವ ಒಂದು ಹಳ್ಳಿಯನ್ನು ತಲುಪಿದರು. ಹಳ್ಳಿಯ ಮಧ್ಯದಲ್ಲಿ ಎರಡು ಆಯತಾಕಾರದ ಮನೆಗಳ ಜೊತೆಗೆ ಏಳು ಗಟ್ಟಿಯಾದ ಗುಡಿಸಿಲುಗಳು ಬಿಳಿ ಸುಣ್ಣ ಬಳಿದುಕೊಂಡು ಹೊಳೆಯುತ್ತಿದ್ದವು. ಜೊಂಗಿನ್ಟಾಬಾ, ಮಂಡೇಲಾ ಗಾರ್ಡಿಯನ್ ಆಗಲು ಒಪ್ಪಿಕೊಂಡನು. ಎರಡು ದಿನಗಳಾದ ಮೇಲೆ ಮಂಡೇಲಾನನ್ನು ಮಖೆಕ್ವೆಜ್ವೆನಿಯಲ್ಲಿ ಬಿಟ್ಟ ಅವನ ತಾಯಿ ಒಬ್ಬಳೆ ವಾಪಸ್ ಹೊರಟಳು. ಮಂಡೇಲಾನ ತಂದೆ ಜೊಂಗಿನ್ಟಾಬಾ ರಾಜಪ್ರತಿನಿಧಿಯಾಗಲು ಕಾರಣರಾಗಿದ್ದಕ್ಕೆ ಮಂಡೇಲಾಗೆ ಅವರ ಮನೆಯಲ್ಲಿ ಅವಕಾಶ ದೊರಕಿತ್ತು. ಜೊಂಗಿನ್ಟಾಬಾ ಅವರ ಮಕ್ಕಳ ಜೊತೆಗೆ ಮಂಡೇಲಾನನ್ನೂ ಒಬ್ಬ ಮಗನಂತೆ ಪೋಷಣೆ ಮಾಡತೊಡಗಿದರು. ಜೊಂಗಿನ್ಟಾಬಾ ಮನೆಯಲ್ಲಿ ಎಲ್ಲಾ ಅನುಕೂಲತೆಗಳೂ ಇದ್ದವು. ಮಂಡೇಲಾನ ತಾಯಿ ಅವನನ್ನು ಬೀಳ್ಕೊಡುವ ಮುಂಚೆ ಯಾವುದೇ ರೀತಿಯಾದ ದುಃಖವನ್ನು ತೋರಲಿಲ್ಲ. ಮಂಡೇಲಾ ಚೆನ್ನಾಗಿ ಓದಬೇಕೆಂಬ ಆಸೆಯಿಂದ ಅವನನ್ನು ಅಲ್ಲಿ ಬಿಟ್ಟುಹೋಗಿದ್ದಳು.
ಅಲ್ಲಿಯೇ ಶಾಲೆ ಪ್ರಾರಂಭ ಮಾಡಿದ ಮಂಡೇಲಾ ಫೋರ್ಟ್ ಹೇರ್ ವಿಶ್ವವಿದ್ಯಾಲಯದಲ್ಲಿ ಕಾಲೇಜು ಮತ್ತು ವಿಟ್ಟಾವಾಟರ್ಸ್ರಾಂಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು ಮತ್ತು 1942ರಲ್ಲಿ ಕಾನೂನು ಪದವಿ ಪಡೆದರು. ನಂತರ ಜೊಂಗಿನ್ಟಾಬಾ ಮಗನು ಮತ್ತು ಮಂಡೇಲಾ ಇಬ್ಬರಿಗೂ ಮದುವೆ ನಿಶ್ಚಯ ಮಾಡಿದಾಗ ಮನೆ ಬಿಟ್ಟು ಜೋಹನ್ಸ್‌ಬರ್ಗ್‌ಗೆ ಓಡಿಹೋದರು. 1952ರಲ್ಲಿ ಕಮ್ಯುನಿಸ್ಟ್ ಒಡೆತನದ ಬಾಸ್ನರ್ ಕಾನೂನು ಸಂಸ್ಥೆಯಲ್ಲಿ ಮಂಡೇಲಾ ಕೆಲಸ ಮಾಡಲು ಪ್ರಾರಂಭಿಸಿದರು. ಈ ನಡುವೆ ಮಂಡೇಲಾ ಮತ್ತು ಜೊಂಗಿನ್ಟಾಬಾ ಮಗ ಜೋಹನ್ಸ್‌ಬರ್ಗ್‌ನಲ್ಲಿ ಪ್ರೀತಿ-ಪ್ರೇಮ ಗಣಿಯಲ್ಲಿ ಕೆಲಸ, ಹುಡುಗಾಟಗಳಲ್ಲಿ ತೊಡಗಿಕೊಂಡಿದ್ದರು. ಇದೇ ವೇಳೆ ಮದುವೆಯಾಗಿ ಮಂಡೇಲಾಗೆ ಮಕ್ಕಳಾಗಿದ್ದರು. ಕುಟುಂಬದ ಜೊತೆಗೆ ಸರಿಯಾಗಿ ಕಾಲಕಳೆಯದೆ ಬೇರೆಬೇರೆ ಸಂಘಸಂಸ್ಥೆಗಳ ನಾಯಕರ ಜೊತೆಗೂಡಿ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯಕ್ಕೆ ಓಡಾಡತೊಡಗಿದ್ದರು. ವರ್ಣಭೇದ ನೀತಿಯ ವಿರುದ್ಧ ದಂಗೆ ಎದ್ದು ದಕ್ಷಿಣ ಆಫ್ರಿಕಾದ ಜನರು ತಮ್ಮೊಂದಿಗೆ ಸೇರಲು ಕರೆ ನೀಡಿದರು. ಪೊಲೀಸರಿಂದ ತಪ್ಪಿಸಿಕೊಂಡು ಹಲವಾರು ವೇಷಗಳು, ಕೆಲಸಗಳನ್ನು ಮಾಡುತ್ತ ಬಿಳಿಯರ ವಿರುದ್ಧ ಆಂದೋಲನ ನಡೆಸಲು ಜನರನ್ನು ಸಂಘಟಿಸತೊಡಗಿದರು. ಈ ನಡುವೆ ಮಂಡೇಲಾರನ್ನು ಕೊನೆಯದಾಗಿ ಹಿಡಿದು ರಾಬಿನ್ ದ್ವೀಪಕ್ಕೆ ಕಳುಹಿಸುವುದಕ್ಕೆ ಮುಂಚೆ, ಪೋಲ್ಸ್ಮೂರ್ ಮತ್ತು ವಿಕ್ಟರ್ ಜೈಲುಗಳಲ್ಲಿ ಬಂಧಿಸಲಾಗಿತ್ತು.
ಅಟ್ಲಾಂಟಿಕ್ ಸಮುದ್ರದ ನಡುವಿನ ರಾಬಿನ್ ದ್ವೀಪದಲ್ಲಿ ಮಂಡೇಲಾ ತನ್ನ ಆತ್ಮಕತೆ ಬರೆದು ಹೊರಗೆ ಕಳುಹಿಸುವುದೇ ಒಂದು ರೋಚಕ ಕತೆಯಾಗಿದೆ. ಅದೇ ದ್ವೀಪದಲ್ಲಿ ಸುಣ್ಣದ ಕಲ್ಲಿನ ಕ್ವಾರಿಗಳಲ್ಲಿ ರಣಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು, ಮಂಡೇಲಾ ಮತ್ತು ಆತನ ಸಹವರ್ತಿಗಳ ಮೈ-ಮುಖಗಳೆಲ್ಲ ಸುಣ್ಣ ತುಂಬಿಕೊಂಡು ಸಾಯಂಕಾಲ ತಣ್ಣನೆ ನೀರಿನಲ್ಲಿ ಸ್ನಾನ ಮಾಡುವಾಗ ಮೈ ಬೆಂಕಿಯಂತೆ ಉರಿಯುತ್ತಿತ್ತು. ಜೊತೆಗೆ ಕಣ್ಣುಗಳ ದೃಷ್ಟಿಯೂ ಅಪಾಯಕ್ಕೆ ಸಿಲುಕಿಕೊಂಡಿತ್ತು. ಅನತಿದೂರದಲ್ಲಿ ಕಾವಲುಗಾರರು ಬಂದೂಕುಗಳನ್ನು ಹಿಡಿದುಕೊಂಡು ಕಾವಲು ಕಾಯುತ್ತಿದ್ದರೆ ಕೈದಿಗಳೆಲ್ಲ ತಲೆ ಬಗ್ಗಿಕೊಂಡು ಕೆಲಸ ಮಾಡುತ್ತ ಜುಲು ಇತರ ಭಾಷೆಗಳಲ್ಲಿ ಪಿಸುಧ್ವನಿಯಲ್ಲಿ ಮಾತನಾಡುತ್ತಾ ಒಳಗೊಳಗೆ ನಗುತ್ತಿದ್ದರು. ಮಧ್ಯಾಹ್ನ ಡ್ರಮ್‌ಗಳಲ್ಲಿ ಗಂಜಿ ಬರುತ್ತಿದ್ದು, ಅದರಲ್ಲಿ ಒಂದಷ್ಟು ತರಕಾರಿ ಪೀಸುಗಳು, ಅಪರೂಪಕ್ಕೆ ಒಂದೊಂದು ಮೀನು ಇರುತ್ತಿತ್ತು. ಬಿಳಿಯರು ಮತ್ತು ಭಾರತೀಯರಿಗೆ ಪ್ಯಾಂಟ್ ಮತ್ತು ಚಪ್ಪಲಿ ದೊರಕುತ್ತಿದ್ದರೆ, ನೀಗ್ರೋಗಳಿಗೆ ಟೈರ್ ಚಪ್ಪಲಿ ಮತ್ತು ಅರ್ಧ ನಿಕ್ಕರ್‌ಗಳನ್ನು ಕೊಡುತ್ತಿದ್ದರು. ಬಿಳಿಯರು ಮತ್ತು ಭಾರತೀಯರಿಗೆ ಒಂದು ಚಮಚ ಸಕ್ಕರೆ ಮತ್ತು ಕಾಫಿ ಡಿಕಾಕ್ಷನ್ ಸಿಗುತ್ತಿತ್ತು; ನೀಗ್ರೋಗಳಿಗೆ ಸಕ್ಕರೆ ಕೊಡುತ್ತಿರಲಿಲ್ಲ. ಜೈಲಿನಲ್ಲಿ ಏನೇ ತಪ್ಪು ಮಾಡಿದರೂ ಬಟ್ಟೆ ಬಿಚ್ಟಿ ಬೆತ್ತದಿಂದ ಹೊಡೆಯುತ್ತಿದ್ದರು. ಅದು ಮಂಡೇಲಾಗೂ ತಪ್ಪುತ್ತಿರಲಿಲ್ಲ.
ಇದನ್ನು ಓದಿದ್ದೀರಾ?: ಡಾ. ಬಿ.ಆರ್. ಅಂಬೇಡ್ಕರ್ ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ದೇಕೆ?
ಜಗತ್ತು ಕಾಯುತ್ತಿದ್ದ ರಿವೋನಿಯಾ ಟ್ರಯಲ್‌ನಲ್ಲಿ ಮಂಡೇಲಾಗೆ ಗಲ್ಲು ಶಿಕ್ಷೆಯಾಗುತ್ತದೆ ಎಂದು ಜಗತ್ತೇ ಎದುರು ನೋಡುತ್ತಿತ್ತು. ಅವರ ನ್ಯಾಯವಾದಿಗಳು ಸುಳ್ಳು ಹೇಳುವಂತೆ ನೆಲ್ಸನ್ ಮಂಡೇಲಾಗೆ ಪದೆಪದೇ ವಿನಂತಿಸಿಕೊಂಡರು. ಅದಕ್ಕೆ ಮುಂಚೆ ಮಂಡೇಲಾ ಭೂಗತ ಜಗತ್ತಿನಲ್ಲಿ ಓಡಾಡುತ್ತಾ ‘ಬ್ಲಾಕ್ ಪಿಮ್ಪರ್ನಲ್’ ಹೆಸರಿನಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರನ್ನು ಆಗಾಗ ಎದುರುಗೊಳ್ಳುವ ನೀಗ್ರೋ ಅಧಿಕಾರಿಗಳು ಸೆಲ್ಯೂಟ್ ಹೊಡೆದು ಮುಂದಕ್ಕೆ ಹೋಗಿಬಿಡುತ್ತಿದ್ದರು. ಮಂಡೇಲಾ ತನ್ನ ತಾಯಿ ಸತ್ತಾಗಲೂ ಹೋಗಲು ಆಗಲಿಲ್ಲ. ಅವರ ಸಮಾಧಿಯನ್ನು ನೋಡಲು ಒಬ್ಬರೇ ವೇಷ ಮರೆಸಿಕೊಂಡು ಕಾಡುಮೇಡೆನ್ನದೆ ಕಾರಿನಲ್ಲಿ ಹೋಗಿದ್ದರು. ದಾರಿಯಲ್ಲಿ ಅನೇಕ ಕಡೆ ಭೂಗತ ಜಗತ್ತಿನ ಗೆಳೆಯರನ್ನು ಸಂಧಿಸಿ ಕತ್ತಲ ರಾತ್ರಿಗಳಲ್ಲಿ ಸಭೆಗಳನ್ನು ನಡೆಸಿದ್ದರು. ಅಲ್ಲಿಂದ ಹಿಂದಿರುಗುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಮಂಡೇಲಾ ಪ್ಲಾನ್ (ಎಂ.ಪ್ಲಾನ್) ಮೂಲಕ ನೀಗ್ರೋ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಬಿಳಿಯರು ಮತ್ತು ಅವರ ಸಂಸ್ಥೆಗಳ ಮೇಲೆ ಆಕ್ರಮಣ ನಡೆಸುತ್ತಿದ್ದರು. ಆಫ್ರಿಕಾದಿಂದ ಭೂಗತವಾಗಿದ್ದ ನೆಲ್ಸನ್ ಮಂಡೇಲಾ ಈಜಿಪ್ಟ್, ಇಥಿಯೋಪಿಯಾ, ಆಲ್ಜೀರಿಯಾ, ಘಾನಾ, ಟುನಿಸ್ ಹಲವಾರು ದೇಶಗಳನ್ನು ಸುತ್ತುತ್ತಾ ಹಲವಾರು ನಾಯಕರನ್ನು ಸಂಧಿಸಿ ತಮ್ಮ ದೇಶದ ಮುಕ್ತಿಗಾಗಿ ಹಣ ಮತ್ತು ಯುದ್ಧ ಸಾಮಗ್ರಿಗಳನ್ನು ಸಹಾಯ ಕೋರಿ ಕೊನೆಗೆ ತನ್ನ ದೇಶಕ್ಕೆ ಹಿಂದಿರುಗಿದ್ದರು. ಇದೆಲ್ಲವನ್ನು ನ್ಯಾಯಾದೀಶರ ಮುಂದೆ ಚಾಚೂ ತಪ್ಪದೇ ಒಪ್ಪಿಕೊಂಡುಬಿಟ್ಟರು. ಕೊನೆಯದಾಗಿ ‘…ಯುವರ್ ಆನರ್, ನಾನು ಸಾಯಲು ಬಯಸುತ್ತೇನೆ. ನನ್ನ ಸಾವು ಇತರರಿಗೆ ಪ್ರೇರಣೆಯಾಗುತ್ತದೆ. ನನ್ನ ಮತ್ತು ನನ್ನ ಸಹವರ್ತಿಗಳ ಸಾವುಗಳು ವ್ಯರ್ಥವಾಗುವುದಿಲ್ಲ. ನನ್ನ ಜೀವನದಲ್ಲಿ ಬದುಕುವುದಕ್ಕಿಂತ ಹೆಚ್ಚು ಕಾಲ ಹುತಾತ್ಮನಾಗಿ ಬದಕುತ್ತೇವೆ’ ಎಂದು ತನ್ನ ದೀರ್ಘ ಭಾಷಣ ಮುಗಿಸಿ ಕುರ್ಚಿಯಲ್ಲಿ ಕುಸಿದು ಕುಳಿತುಕೊಂಡರು. ಮಂಡೇಲಾ ಜೊತೆಗೆ ಇನ್ನೂ ಏಳು ಜನ ಮುಖ್ಯ ಕೈದಿಗಳಿದ್ದರು.
ಪ್ರೇಕ್ಷಕರ ಗ್ಯಾಲರಿಯಲ್ಲಿ ಮಂಡೇಲಾ ತಾಯಿ ಮತ್ತು ಪತ್ನಿ ವಿನ್ನಿ ಇದ್ದರು. ಇಡೀ ಪ್ರೇಕ್ಷಕರ ಗ್ಯಾಲರಿ ರೋದನೆಯಿಂದ ಮುಳುಗಿಹೋಗಿತ್ತು. ಜೈಲಿನ ಹೊರಗೆ ಕೆಲವು ಲಕ್ಷಗಳ ಜನರು ಕಾಯುತ್ತಿದ್ದರು ಮತ್ತು ಪೊಲೀಸರ ದಂಡೆ ರಕ್ಷಣೆಯ ಗೋಡೆಗಳನ್ನು ಕಟ್ಟಿಕೊಂಡಿತ್ತು. ಕೊನೆಗೆ ನ್ಯಾಯಾದೀಶರು ಮಂಡೇಲಾಗೆ ಗಲ್ಲು ಶಿಕ್ಷೆಯ ಬದಲಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿಬಿಟ್ಟರು. ಇದನ್ನು ಕೇಳಿದ ಪ್ರೇಕ್ಷಕರಿಗೆ ಒಂದೂ ಅರ್ಥವಾಗಲಿಲ್ಲ. ಜನರು ಜೋರಾಗಿ ಅಳತೊಡಗಿದರು. ಮಂಡೇಲಾ ತನ್ನ ತಾಯಿ, ಪತ್ನಿಯ ಕಡೆಗೆ ನೋಡುತ್ತ ಮುಷ್ಟಿ ಮೇಲೆತ್ತಿ ‘ಅಮಂಡ್ಲಾ! ಅಮಂಡ್ಲಾ!’ ಎಂದು ಕೋಗಿದರು. ನಂತರ ಸುತ್ತಲಿನ ಪ್ರೇಕ್ಷಕರ ಕಡೆಗೆ ನೋಡಿ ಹಾಗೇ ಹೇಳಿದರು. ಇಡೀ ಜನಸಮೂಹ ಮುಷ್ಟಿ ಎತ್ತಿ ‘ಅಮಂಡ್ಲಾ! ಅಮಂಡ್ಲಾ!’ ಎಂದು ಕೂಗಿತು. ಪೊಲೀಸರು ಅವರನ್ನು ನ್ಯಾಯಾಲಯದ ನೆಲಮಾಳಿಗೆಯಿಂದ ಹೊರಕ್ಕೆ ಕರೆತಂದು ವ್ಯಾನ್‌ಗಳಲ್ಲಿ ಪೊಲೀಸರ ಬೆಂಗಾವಲಿನಲ್ಲಿ ಜೈಲಿನ ಕಡೆಗೆ ಹೊರಟರು. ಜನರು ವ್ಯಾನ್‌ಗಳ ಹಿಂದೆ ಒಂದೇ ಓಟದಲ್ಲಿ ಓಡುತ್ತಿದ್ದರು. ಇದರ ನಂತರ ಮಂಡೇಲಾ 27 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.

ವಿಪರ‍್ಯಾಸವೆಂದರೆ ನೆಲ್ಸನ್ ಮಂಡೇಲಾ ಮತ್ತು ಆಫ್ರಿಕಾದ ಕುಖ್ಯಾತ ಬಿಳಿಯ ಕೊನೆ ಅಧ್ಯಕ್ಷ ಎಫ್.ಡಬ್ಲೂ. ಡೀ ಕ್ಲರ್ಕ್ ಒಟ್ಟಾಗಿ 1993ರಲ್ಲಿ ನೊಬೆಲ್ ಪಾರಿತೋಷಕವನ್ನು ಒಂದೇ ವೇದಿಕೆಯಲ್ಲಿ ಸ್ವೀಕರಿಸಿದರು. 1995ರಲ್ಲಿ ಮಂಡೇಲಾ ಭಾರತಕ್ಕೆ ಬಂದು ಹಿಂದಿರುಗುವಾಗ ಪತ್ರಕರ್ತರು ‘ಭಾರತದಿಂದ ಏನನ್ನು ತೆಗೆದುಕೊಂಡು ಹೋಗುತ್ತಿದ್ದೀರಿ?’ ಎಂದು ಕೇಳಿದ ಪ್ರಶ್ನೆಗೆ ಮಂಡೇಲಾ, ‘ಭಾರತದಿಂದ ನನ್ನ ದೇಶಕ್ಕೆ ಏನನ್ನಾದರೂ ತೆಗೆದುಕೊಂಡು ಹೋಗಬಹುದಾದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರೇಷ್ಠ ಭಾರತೀಯ ಸಂವಿಧಾನ ಮಾತ್ರ’ ಎಂದಿದ್ದರು.
(ಮಂಡೇಲಾ ಕುರಿತ ಹೆಚ್ಚಿನ ಓದಿಗಾಗಿ ‘Long walk to the freedom’ by Nelson Mandela ಮತ್ತು ಡಾ.ಎಂ.ವೆಂಕಟಸ್ವಾಮಿ ಅವರ ‘ನೆಲ್ಸನ್ ಮಂಡೇಲಾ’, ಪ್ರ: ನವಕರ್ನಾಟಕ ಪಬ್ಲಿಕೇಶನ್)

ಡಾ ಎಂ ವೆಂಕಟಸ್ವಾಮಿ
ಭೂವಿಜ್ಞಾನಿ, ಲೇಖಕ