ವಿಸಿಟಿಂಗ್ ಅಥವಾ ಬೇರೆ ಯಾವುದೇ ರೀತಿಯ ವೀಸಾ ಹೊಂದಿರುವವರು ಕೂಡ ಪವಿತ್ರ ಉಮ್ರಾ ಯಾತ್ರೆಯನ್ನು ನಿರ್ವಹಣೆ ಮಾಡಬಹುದು ಎಂದು ಸೌದಿ ಅರೇಬಿಯಾದ ಹಜ್ಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ವಿಸಿಟಿಂಗ್ ವೀಸಾ ಹೊಂದಿರುವವರು ಉಮ್ರಾ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವಾಲಯವು, ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಉಮ್ರಾ ಸಚಿವಾಲಯದ ಅಧಿಕಾರಿಗಳು ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು, ಬಿಝಿನೆಸ್ ವೀಸಾ ಇರಲಿ ಅಥವಾ ವಿಸಿಟಿಂಗ್ ವೀಸಾವೇ ಇರಲಿ. ಏನೂ ಸಮಸ್ಯೆಗಳಿಲ್ಲ. ಯಾವುದೇ ರೀತಿಯ ವೀಸಾ ಹೊಂದಿರುವವರು ಉಮ್ರಾ ಮಾಡಬಹುದು ಎಂದು ಒತ್ತಿ ಹೇಳಿದೆ.
ಹಜ್ ಮತ್ತು ಉಮ್ರಾ ಸಚಿವಾಲಯವು ಸೌದಿ ಅರೇಬಿಯಾದಲ್ಲಿ ವೈಯಕ್ತಿಕ ಮತ್ತು ಕುಟುಂಬ ಭೇಟಿ ವೀಸಾಗಳು, ಇ-ಪ್ರವಾಸಿ ವೀಸಾಗಳು, ಸಾರಿಗೆ ವೀಸಾಗಳು, ಕೆಲಸದ ವೀಸಾಗಳು ಮತ್ತು ಇತರ ವೀಸಾ ಪ್ರಕಾರಗಳು ಸೇರಿದಂತೆ ವಿವಿಧ ರೀತಿಯ ವೀಸಾಗಳನ್ನು ಹೊಂದಿರುವವರು ಉಮ್ರಾ ಮಾಡಬಹುದು ಎಂದು ದೃಢಪಡಿಸಿದೆ.
ಕೆಲವು ಪತ್ರಿಕೆಗಳು ಹಾಗೂ ಸಾಮಾಜಿಕ ತಾಣಗಳಲ್ಲಿ ವಿಸಿಟಿಂಗ್ ವೀಸಾ ಹೊಂದಿರುವವರು ಉಮ್ರಾ ನಿರ್ವಹಿಸಲು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಪ್ರಕಟಿಸಿದ್ದವು. ಈ ಸುದ್ದಿಗಳು ಸತ್ಯಕ್ಕೆ ದೂರವಾಗಿರುತ್ತದೆ. ಸಚಿವಾಲಯದ ಈ ಹೊಸ ಹೇಳಿಕೆಯು ಅಂತಹ ಕಳವಳಗಳು ಆಧಾರ ರಹಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ವರದಿ: ಎಸ್ ಎ ರಹಿಮಾನ್, ಮಿತ್ತೂರು
