ಮಧ್ಯಪ್ರದೇಶ: ಗೆಲ್ಲುವ ಅವಕಾಶ ಕೈಚೆಲ್ಲಿದ ಕಾಂಗ್ರೆಸ್‌

Date:

Advertisements

ಚುನಾವಣೆ ತಂತ್ರಗಾರಿಕೆ ಮಾಡದ ಕಾಂಗ್ರೆಸ್‌ ನೀರಸ ಪ್ರದರ್ಶನ ತೋರಿ, ಮಧ್ಯಪ್ರದೇಶದಲ್ಲಿ ಮಕಾಡೆ ಮಲಗಿದೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಗಳಿಸಿದ ಬಳಿಕ ಇತರ ರಾಜ್ಯಗಳಲ್ಲೂ ಭಾರೀ ಸಂಚಲನ ಉಂಟು ಮಾಡಿದ್ದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್‌ ಡೋಸ್‌ನಂತೆ ಕರ್ನಾಟಕ ಫಲಿತಾಂಶ ಒದಗಿಬಂದಿತ್ತು. ಅಂತೆಯೇ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉತ್ಸಾಹ ತೋರಿದ್ದರು. ಆದರೆ ಚುನಾವಣೆ ಬರುವ ವೇಳೆಗೆ ಬಿಜೆಪಿಯ ತಂತ್ರಗಾರಿಕೆಯ ಮುಂದೆ ಕಾಂಗ್ರೆಸ್‌ ನಾಯಕರ ನಿಷ್ಕ್ರಿಯತೆ ತೋರಿದ್ದು, ಈಗ ಕಾಂಗ್ರೆಸ್‌ ಭಾರೀ ಹಿನ್ನಡೆ ಅನುಭವಿಸುತ್ತಿರುವಲ್ಲಿ ಸ್ಪಷ್ಟವಾಗುತ್ತಿದೆ. 230 ಕ್ಷೇತ್ರಗಳ ಪೈಕಿ 155ರಲ್ಲಿ ಬಿಜೆಪಿ, 72ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಮಧ್ಯಾಹ್ನ 12.30ರ ವೇಳೆಯ ಅಂಕಿ-ಅಂಶಗಳು ತೋರಿಸುತ್ತಿವೆ.

ಸ್ಥಳೀಯ ನಾಯಕತ್ವವನ್ನು ಮೂಲೆಗೆ ತಳ್ಳಿ ಕರ್ನಾಟಕದಲ್ಲಿ ಸೋತಿದ್ದರಿಂದ ಕಂಗಾಲಾಗಿದ್ದ ಬಿಜೆಪಿಯ ಕೇಂದ್ರ ನಾಯಕರು, ರಾಜ್ಯ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವವೇ ಪ್ರಮುಖ ಎಂಬುದನ್ನು ಮನಗಂಡಿದ್ದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ವರದಾನವಾಗಿತ್ತು. “ಕರ್ನಾಟಕದ ಫಲಿತಾಂಶಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಇದು ಮಧ್ಯಪ್ರದೇಶ. ಇಲ್ಲಿ, ನಾವು ಭಾರಿ ಅಬ್ಬರದೊಂದಿಗೆ ದಾಖಲೆಯ ವಿಜಯವನ್ನು ದಾಖಲಿಸುತ್ತೇವೆ. ಅವರ ಬಳಿ (ಕಾಂಗ್ರೆಸ್) ಏನಿದೆ? ನಮ್ಮಲ್ಲಿ ನರೇಂದ್ರ ಮೋದಿ ಇದ್ದಾರೆ. ಹಗಲಿರುಳು ಶ್ರಮಿಸುವ ಪಕ್ಷದ ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಗೆಲುವಿನ ಹತ್ತಿರಕ್ಕೂ ಬರುವುದಿಲ್ಲ. ನನ್ನ ಕೈಯಲ್ಲಿ ಇನ್ನೂ ಅನೇಕ ಕಾರ್ಡ್‌ಗಳಿವೆ” ಎಂದಿದ್ದರು ಶಿವರಾಜ್ ಸಿಂಗ್ ಚೌವ್ಹಾಣ್. ಆದರೆ ಅವರಿಗೂ ಭಯ ಇದ್ದದ್ದು ಸುಳ್ಳಲ್ಲ. ಸುದೀರ್ಘ ಆಡಳಿತದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನೂ ಹೊಂದಿತ್ತು.

Advertisements

ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಬಿಜೆಪಿಯ ಜೊತೆ ಹೋದ ಜ್ಯೋತಿರಾಧಿತ್ಯ ಸಿಂಧಿಯಾ ಬಣದ ಮೇಲೆ ಬಿಜೆಪಿಯೊಳಗೆಯೇ ವಿರೋಧವಿತ್ತು. ಬಿಜೆಪಿಯು ವಿಂಧ್ಯಾ ಭಾಗದಲ್ಲಿ ಹಲವು ಸ್ಥಾನಗಳನ್ನು ಗೆದ್ದರೂ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದ ಕಾರಣ ಬಿಜೆಪಿಯಲ್ಲಿ ಅಸಮಾಧಾನವಿತ್ತು. ಎಲ್ಲ ಕಾರಣಗಳಿಂದ ಬಿಜೆಪಿಯಲ್ಲಿ ಕೊಂಚ ಭಿನ್ನಾಭಿಪ್ರಾಯ, ಒಡಕು ಮೂಡಿತ್ತು. ಹೀಗೆ ಬಿಜೆಪಿ ತತ್ತರಿಸುತ್ತಿರುವಾಗ, ಕರ್ನಾಟಕದ ಫಲಿತಾಂಶಗಳು ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಗಿತ್ತು. ಕಾಂಗ್ರೆಸ್‌ನಲ್ಲಿ ಆರಂಭದಲ್ಲಿ ಹೆಚ್ಚಿದ ಉತ್ಸಾಹವು ಬಿಜೆಪಿಗೆ ಹೊಸ ಸವಾಲನ್ನು ತಂದೊಡ್ಡಿತ್ತು. ನಿರಂತರ ಆಡಳಿತದ ವಿರೋಧಿ ಅಲೆಯೂ ಬಿಜೆಪಿಯ ಎದುರಿಗಿತ್ತು. ಅಲ್ಲದೆ ಪರಿಶಿಷ್ಟ ಪಂಗಡಗಳ ಮತಗಳು ಕೈತಪ್ಪುವ ಭಯವನ್ನು ಶಿವರಾಜ್ ಸಿಂಗ್‌ ಚೌವ್ಹಾಣ್ ಎದುರಿಸುತ್ತಿದ್ದರು.  ಇದೆಲ್ಲವನ್ನು ಮೆಟ್ಟಿನಿಂತ ಬಿಜೆಪಿ ಅವರು ಸುಲಭವಾಗಿ ಕಾಂಗ್ರೆಸ್‌ ಪಕ್ಷವನ್ನು ಸದೆಬಡಿದಿದ್ದಾರೆ. 

ಘರ್ ಘರ್ ಕಮಲ್ ನಾಥ್ ಎಂಬುದು 2018ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌‌ ಘೋಷಣೆಯಾಗಿತ್ತು. ಆಗ ಕಮಲನಾಥನನ್ನು ಗೆಲ್ಲಿಸಿದ್ದರು ಮಧ್ಯಪ್ರದೇಶದ ಜನರು. ಈಗ ಕಮಲ ಗೆದ್ದಿದೆ. ನಾಥ ಸೋತಿದ್ದಾರೆ. ಮೆದು ಹಿಂದುತ್ವ ಅನುಸರಿಸಿದ್ದು ಕೂಡ ಕಮಲನಾಥ್ ಪಾಲಿಗೆ ಮುಳುವಾಗಿದೆ. ಮಧ್ಯಪ್ರದೇಶದಲ್ಲಿ ಜಾತಿಜನಗಣತಿಯ ಅಸ್ತ್ರಕ್ಕೆ ದೃಢವಾಗಿ ನಿಲ್ಲದೆ ಇರುವುದೂ ಕಾಂಗ್ರೆಸ್ ಸೋಲಿಗೆ ಕಾರಣವಾಗಿ ಕಾಣುತ್ತಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತಾಕತ್ತು ಆದಿವಾಸಿ ದಲಿತ ಮುಸ್ಲಿಮ್. ಈ ಬ್ಯಾಂಕನ್ನು ಒಡೆಯುವ ಬಿಜೆಪಿ ತಂತ್ರ ಯಶಸ್ವಿಯಾಗಿದೆ. ಮುಸ್ಲಿಮ್- ಬಿಎಸ್ಪಿ ಆದಿವಾಸಿ ಸಂಘಟನೆ ಆಗಿ ಮೂರನೆಯ ಫ್ರಂಟ್ ಏರ್ಪಾಡಾಗುವಂತೆ ನೋಡಿಕೊಂಡಿತು ಬಿಜೆಪಿ. ಶೇ.5ರಷ್ಟು ಮತಗಳು ಕಾಂಗ್ರೆಸ್ಸಿನಿಂದ ಹಾರಿ ಹೋಗಿವೆ.

ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಗಳು ಹೆಚ್ಚಿರುವ ಬುರ್ಹಾನ್‌ಪುರ್, ಖಾರ್ಗೋನ್, ಖಾಂಡ್ವಾ ಮತ್ತು ಬರ್ವಾನಿಯಂತಹ  ಜಿಲ್ಲೆಗಳಿಗೆ ಭೇಟಿ ನೀಡಿ ಎಸ್‌ಟಿ ಸಮುದಾಯವನ್ನು ಸಂಪರ್ಕಿಸಿದ್ದರು. ಕರ್ನಾಟಕದ 15 ಎಸ್‌ಟಿ ಸ್ಥಾನಗಳ ಪೈಕಿ ಒಂದರಲ್ಲಿಯೂ ಬಿಜೆಪಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದು ಬಿಜೆಪಿಯ ಚಿಂತೆಗೆ ಕಾರಣವಾಗಿತ್ತು. ಅತಿಹೆಚ್ಚು ಪರಿಶಿಷ್ಟ ಪಂಗಡದ ಸಮುದಾಯವಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. 230 ಸದಸ್ಯರ ಮಧ್ಯಪ್ರದೇಶ ವಿಧಾನಸಭಾ ಕ್ಷೇತ್ರಗಳಲ್ಲಿ, 20% ಅಂದರೆ 47 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. ರಾಜ್ಯದ ಸುಮಾರು 70 ರಿಂದ 80 ಕ್ಷೇತ್ರಗಳಲ್ಲಿ ಎಸ್‌ಟಿ ಮತದಾರರ ಪ್ರಾಬಲ್ಯವಿದೆ.

2003ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಲು ಎಸ್‌ಟಿ ಸಮುದಾಯದ ಪಾತ್ರ ದೊಡ್ಡದಿತ್ತು. ನಂತರದ ಎರಡು ಚುನಾವಣೆಗಳಲ್ಲಿ ಎಸ್‌ಟಿ ಸಮುದಾಯದ ಬೆಂಬಲವನ್ನು ಬಿಜೆಪಿ ಮುಂದುವರೆಸಿತು ಮತ್ತು ಅಧಿಕಾರದಲ್ಲಿ ಉಳಿಯಿತು. ಆದರೆ 2018ರಲ್ಲಿ ಪಲ್ಲಟಗಳಾದವು. 2013ರಲ್ಲಿ 31 ಎಸ್‌ಟಿ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2018ರಲ್ಲಿ 16 ಸ್ಥಾನಗಳಿಗೆ ಕುಸಿಯಿತು. ಕಾಂಗ್ರೆಸ್‌ನ ಗೆಲುವು 15 ರಿಂದ 30ಕ್ಕೆ ಏರಿಕೆಯಾಯಿತು. ಹೀಗಾಗಿ ಕಾಂಗ್ರೆಸ್ ಸರ್ಕಾರ ರಚಿಸಲು ‌ಅವಕಾಶ ದೊರಕಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ 109 ಮತ್ತು ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಗೆಲುವಿನ ಅಂತರ ತೀರಾ ಕಡಿಮೆಯಾಗಿದ್ದು, ಎಸ್‌ಟಿ ಮತದಾರರು ಬಿಜೆಪಿ ಪರ ಒಲವು ತೋರಿದ್ದರೆ ಸರ್ಕಾರ ರಚನೆ ಬಿಜೆಪಿಗೆ ಸುಲಭವಾಗುತ್ತಿತ್ತು.

ಎಸ್‌ಟಿ ಮತದಾರರು ಎಷ್ಟು ನಿರ್ಣಾಯಕ ಎಂಬುದನ್ನು ಬಿಜೆಪಿ ಅರಿತುಕೊಂಡಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಾಜಕೀಯವು ಎಸ್‌ಟಿ ಕೇಂದ್ರಿತವಾಗಿತ್ತು. ಪರಿಶಿಷ್ಟ ಪಂಗಡ ಸಮುದಾಯಗಳು ಆಯೋಜಿಸುವ ವಿವಿಧ ಹಬ್ಬಗಳಲ್ಲಿ ಕೇಂದ್ರದ ಮೂರು ಪ್ರಮುಖ ನಾಯಕರು (ಪ್ರಧಾನಿ, ಗೃಹ ಸಚಿವರು ಮತ್ತು ರಾಷ್ಟ್ರಪತಿ) ಈ ಅವಧಿಯಲ್ಲಿ  ಭಾಗವಹಿಸುತ್ತಿದ್ದರು.

ದೇಶದಾದ್ಯಂತ ಇರುವ ವಿವಿಧ ಎಸ್‌ಟಿ ಸಮುದಾಯಗಳನ್ನು ಒಲಿಸಿಕೊಳ್ಳಲು ಬುಡಕಟ್ಟು ಮಹಿಳೆಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಕೂಡ ಒಂದು ಮಹತ್ವದ ಹೆಜ್ಜೆ ಎಂದು ರಾಜಕೀಯ ವಿಶ್ಲೇಷಕರು ನೋಡುತ್ತಾರೆ. ಇಂತಹ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದ ಎಲ್ಲಾ ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಬಿಜೆಪಿ ಸೋತಿತು. ಹೀಗಾಗಿ ಅತಿ ಹೆಚ್ಚು ಎಸ್‌ಟಿ ಜನಸಂಖ್ಯೆಯನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಸ್ವಾಭಾವಿಕವಾಗಿ ಬಿಜೆಪಿ ಆತಂಕಗೊಳ್ಳಲು ಕಾರಣವಾಗಿತ್ತು.

ನವೆಂಬರ್ 5 ರಂದು ಮಧ್ಯಪ್ರದೇಶದ ಮಹಾಕೌಶಲ್ ಪ್ರದೇಶದ ಸಿಯೋನಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿಯವರು, “ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಯಿತು. ಆದಿವಾಸಿಗಳು ರಾಮನ ಆರೈಕೆ ಮಾಡಿದವರು” ಎಂದರು. ಆ ಮೂಲಕ ಹಿಂದುತ್ವದೊಂದಿಗೆ ಆದಿವಾಸಿಗಳನ್ನು ಕೂಡಿಸುವ ಪ್ರಯೋಗ ಮಾಡಿದರು.

ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಾಗ ಶಿವರಾಜ್ ಸಿಂಗ್‌ ಚೌಹಾಣ್‌, ಸಂತ್ರಸ್ತ ಯುವಕನ ಪಾದ ತೊಳೆದು ಗಮನ ಸೆಳೆದರು. ಯಾರೋ ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತೇನೆ ಎಂಬ ಸಂದೇಶವನ್ನು ನೀಡಿದರು. ಆದಿವಾಸಿ ಮತದಾರರು ಕೈತಪ್ಪಿ ಹೋಗದಂತೆ ಏನೆಲ್ಲ ಮಾಡಬೇಕೋ ಆ ಎಲ್ಲ ತಂತ್ರಗಳನ್ನು ಬಿಜೆಪಿ ಮಾಡಲಾರಂಭಿಸಿತು. ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮತದಾರರನ್ನು ಮುಖ್ಯವಾಗಿಟ್ಟುಕೊಂಡು ಜಾರಿಗೆ ತಂದ ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳಿಂದ ಎಚ್ಚೆತ್ತುಕೊಂಡ ಶಿವರಾಜ್ ಸಿಂಗ್, ‘ಲಾಡ್ಲಿ ಬೆಹನಾ’ ಯೋಜನೆಯನ್ನು ರೂಪಿಸಿ ರಾಜ್ಯ ಸರ್ಕಾರದಿಂದ ತಿಂಗಳಿಗೆ 1,250 ರೂ.ಗಳನ್ನು ಮಹಿಳೆಯರಿಗೆ ನೀಡಿದರು. ಇದು ಕೂಡ ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಯಾವುದೇ ಚುನಾವಣೆ ತಂತ್ರಗಾರಿಕೆ ಮಾಡದ ಕಾಂಗ್ರೆಸ್‌ ನೀರಸ ಪ್ರದರ್ಶನ ತೋರಿ, ಮಧ್ಯಪ್ರದೇಶದಲ್ಲಿ ಮಕಾಡೆ ಮಲಗಿದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X