- ಆರಂಭಿಕ ಹಂತದಲ್ಲಿ ಮುನ್ನಡೆಯಲ್ಲಿದ್ದ ಕಾಂಗ್ರೆಸ್ಗೆ ತೀವ್ರ ಮುಖಭಂಗ
- 53 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ಶುರುವಾದ ನಂತರ ಛತ್ತೀಸ್ಗಡದಲ್ಲಿ ನಿರಂತರ ಮುನ್ನಡೆ ಕಾಯ್ದು ಕೊಂಡಿದ್ದ ಕಾಂಗ್ರೆಸ್ 10 ಗಂಟೆಯ ವೇಳೆಗೆ ಸ್ವಲ್ಪ ಹಿನ್ನೆಡೆ ಅನುಭವಿಸಿತ್ತು. ಕಾಂಗ್ರೆಸ್ ಗಿಂತ ಐದಾರು ಸೀಟುಗಳ ಮುನ್ನಡೆಯನ್ನು ಬಿಜೆಪಿ ಪಡೆದಿತ್ತು. 10:20ರ ವೇಳೆಗೆ 45ಸ್ಥಾನ ಪಡೆದು ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲದಲ್ಲಿ ನಿಂತಿದ್ದವು. ನಂತರ ಕಾಂಗ್ರೆಸ್ ಮುನ್ನಡೆಯತ್ತ ಹೆಜ್ಜೆ ಹಾಕಿತ್ತು.
ಹತ್ತೂವರೆಯ ನಂತರ ಬಿಜೆಪಿ ಚೇತರಿಕೆ ಕಂಡಿದೆ. ಹಾವು ಏಣಿ ಆಟದ ತರ ಒಮ್ಮೆ ಆ ಕಡೆ, ಒಮ್ಮೆ ಈ ಕಡೆ ಮುನ್ನಡೆ ತೋರಿಸುತ್ತಿತ್ತು. ಹನ್ನೊಂದು ಗಂಟೆಗೆ ಬಿಜೆಪಿ 48 ಕಾಂಗ್ರೆಸ್ 40 ಮುನ್ನಡೆಯಲ್ಲಿದ್ದವು.
ಮತದಾನೋತ್ತರ ಸಮೀಕ್ಷೆಯಲ್ಲಿ ಛತ್ತೀಸ್ಗಡ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಸುಲಭದ ವಿಜಯ ಸ್ಪಷ್ಟ ಬಹುಮತ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು. ಮಧ್ಯಪ್ರದೇಶದಲ್ಲಿ ಸಮ ಬಲದ ಹೋರಾಟ ಎಂದಿದ್ದವು. ಆದರೆ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಮುನ್ನಡೆ ತೋರಿಸುತ್ತಿದೆ.
ಆದರೆ ಛತ್ತೀಸ್ಗಡದಲ್ಲಿ 11:45ರ ವೇಳೆಗೆ ಬಿಜೆಪಿ ಕಾಂಗ್ರೆಸ್ಗಿಂತ ಐದಾರು ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು. 12 ಗಂಟೆಯ ವೇಳೆಗೆ ಆ ಅಂತರ ಹದಿನೈದು ಸ್ಥಾನಗಳಿಗೆ ಏರಿಕೆಯಾಗಿದೆ. ಬಿಜೆಪಿ 53 ಕಾಂಗ್ರೆಸ್ 37ರಲ್ಲಿ ಮುನ್ನಡೆಯಲ್ಲಿವೆ. ಸ್ಥಾನಗಳಲ್ಲಿ ಇತರರು ಇದ್ದಾರೆ. ಅಲ್ಲಿಗೆ ನಾಲ್ಕು ರಾಜ್ಯಗಳ ಫಲಿತಾಂಶ 2:2 ಹೋಗಿ 3:1 ಆಗುವ ಲಕ್ಷಣ ಕಾಣುತ್ತಿದೆ.
ಛತ್ತೀಸ್ಗಡದಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ 1,181 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2 ಹಂತಗಳಲ್ಲಿ ಮತದಾನವಾಗಿತ್ತು. ಮೊದಲ ಹಂತದಲ್ಲಿ ನ.7ರಂದು 20 ಸ್ಥಾನಗಳಿಗೆ ಮತದಾನ ನಡೆದಿತ್ತು ಮತ್ತು 2ನೇ ಹಂತದಲ್ಲಿ ನ.17ರಂದು 70 ಸ್ಥಾನಗಳಿಗೆ ಮತದಾನ ನಡೆದಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ 68 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಪಡೆದಿತ್ತು. ಬಿಜೆಪಿ ಕೇವಲ 15 ಕ್ಷೇತ್ರಗಳ ಜಯಗಳಿಸಿ ಹೀನಾಯ ಸೋಲು ಕಂಡಿತ್ತು. ಈ ಬಾರಿ ಮತ್ತೆ ಛತ್ತೀಸ್ಗಡದಲ್ಲಿ ಕಮಲ ಅರಳುವ ಲಕ್ಷಣ ಗೋಚರಿಸಿದೆ. ಎಸ್ಟಿ ಸಮುದಾಯವೇ ಬಹುಸಂಖ್ಯಾತರು ಇರುವ ಇಲ್ಲಿ 10 ಎಸ್ಸಿ, 29 ಎಸ್ಟಿ ಸೀಟುಗಳು ನಿರ್ಣಾಯಕ. ಆದಿವಾಸಿ ಸಮುದಾಯಗಳ ಮತಗಳು ಕಾಂಗ್ರೆಸ್ ಪರವಾಗಿವೆ ಎಂದೇ ನಂಬಲಾಗಿತ್ತು. ಹಾಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ ಅವರ ವರ್ಚಸ್ಸಿನ ಬಗ್ಗೆಯೂ ಉತ್ತಮ ಅಭಿಪ್ರಾಯವೇ ಇತ್ತು. ಅವರ ವರ್ಚಸ್ಸು ಬಹುಮತ ತರುವಲ್ಲಿ ಕೆಲಸ ಮಾಡಿಲ್ಲ ಅನ್ನಿಸುತ್ತದೆ.