ಹೂವಿನ ಬೆಲೆ ಭಾರಿ ಕುಸಿತಕಂಡಿದ್ದು,ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ಬೆಳೆ ಹೊಲದಲ್ಲೇ ಕಮರುತ್ತಿದೆ. ಸೇವಂತಿ ಕೆ.ಜಿಗೆ 15ರಿಂದ 20 ರೂ. ಚೆಂಡು ಹೂವು ಕೆ.ಜಿಗೆ 10ರೂ.ಗೆ ಇಳಿದರೆ, ಗುಲಾಬಿ ಒಂದು ಕಟ್ಟಿಗೆ 60ರೂಗೆ ಕುಸಿದಿದೆ. ಆದರೆ, ಮಾರುಕಟ್ಟೆಗೆ ಹೂವು ಹೆಚ್ಚು ಬರುತ್ತಿದೆ.
ಬೆಳೆಗಾರರು 25 ಕೆ.ಜಿ ಸೇವಂತಿ ಚೀಲಕ್ಕೆ 200ರೂ. ಚೆಂಡು ಹೂವು ರೂ.100ಕ್ಕೆ ಹರಾಜು ಕೂಗಿದರೂ ಖರೀದಿಗೆ ಖರೀದಿಗೆ ಮುಂದೆ ಬರುತ್ತಿಲ್ಲ. ದೀಪಾವಳಿ ಸಮಯದಲ್ಲಿ ಕೆ.ಜಿ ಸೇವಂತಿ 60ರಿಂದ 80ರೂಪಾಯಿ, ಚೆಂಡು ಹೂವು 50ರಿಂದ 60ರೂ. ಇತ್ತು. ಗುಲಾಬಿ ಕಟ್ಟಿಗೆ ₹100 ಇತ್ತು.
ಧಾರವಾಡ ತಾಲೂಕಿನ ಕುರುಬಗಟ್ಟಿ, ಗೋವನಕೊಪ್ಪ, ಚಂದನಮಟ್ಟಿ, ಜಿರಿಗವಾಡ, ಹಳ್ಳಿಗೇರಿ ಭಾಗದಲ್ಲಿ ರೈತರು ಹೂವು ಬೆಳೆದಿದ್ದಾರೆ. ಈ ಬಾರಿ ಮಳೆ ಕೈಕೊಟ್ಟಿದೆ. ನೀರಾವರಿ ಪ್ರದೇಶಗಳ ಹಲವು ರೈತರು ಹೂವು ಬೆಳೆದಿದ್ದಾರೆ. ಫಸಲು ಚೆನ್ನಾಗಿದೆ. ಆದರೆ, ಬೆಲೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಹಬ್ಬ, ಪೂಜೆ, ಗೃಹಪ್ರವೇಶ, ಮದುವೆ, ಸಭೆ-ಸಮಾರಂಭಗಳಿಗೆ ಜನರು ಹೂವು ಖರೀದಿಸುತ್ತಾರೆ. ಈ ಭಾಗದ ರೈತರು ಹುಬ್ಬಳ್ಳಿ, ಧಾರವಾಡ ಮಾರುಕಟ್ಟೆಗೆ ಒಯ್ಯುತ್ತಾರೆ.
ನಾಲ್ಕು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ಈವರೆಗೆ 2ಲಕ್ಷ ರೂ. ಖರ್ಚಾಗಿದೆ. ಬೆಳೆ ಚೆನ್ನಾಗಿದೆ. ಕಟಾವು ಮಾಡಲು ತಲಾ 300ರೂ. ಕೂಲಿ ಇದೆ. ಒಮ್ಮೆ ಕಟಾವು ಮಾಡಿದರೆ 7ರಿಂದ 8ಕ್ವಿಂಟಲ್ ಹೂವು ಸಿಗುತ್ತದೆ. ಈಗಿನ ಬೆಲೆಗೆ ಮಾರಾಟ ಮಾಡಿದರೆ ಸಾಗಣೆ, ಕೂಲಿ ವೆಚ್ಚವೂ ಗಿಟ್ಟಲ್ಲ ಎನ್ನುತ್ತಾರೆ ಹೂವು ಬೆಳೆದ ರೈತರು.
‘ಪಾವಳಿ ಹಬ್ಬದಲ್ಲಿ ಎರಡು ದಿನ ಹೂವಿಗೆ ಬೆಲೆ ಚೆನ್ನಾಗಿತ್ತು. ನಂತರ ಕುಸಿದಿದೆ. ಹೊರ ರಾಜ್ಯಗಳಿಗೆ ಕೊಂಡೊಯ್ದು ಮಾರಾಟ ಮಾಡುವುದು ಕಷ್ಟ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಹೂವಿನ ಬೆಳೆಗಾರರ ಸ್ಥಿತಿ ಎಂದು ತಮ್ಮ ಬೇಸರ ಹೊರಹಾಕುತ್ತಿದ್ದಾರೆ.
ಹೂವು ಖರೀದಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಬೇಕು. ಇಲ್ಲಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಸಾಗಿಸುವ ವ್ಯವಸ್ಥೆ ಮಾಡಬೇಕು, ಸರ್ಕಾರ ಹೂವು ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.