ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ನೆರೆಯ ತೆಲಂಗಾಣದಲ್ಲಿ ಸಾಥ್ ನೀಡಿದ ಪರಿಣಾಮ ಜನರು ಕಾಂಗ್ರೇಸ್ ಗೆ ಆಶೀರ್ವಾದ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಐಟಿಎಫ್ ಕಲಬುರಗಿ ಫೈನಲ್ ಪಂದ್ಯ ವೀಕ್ಷಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತೆಲಂಗಾಣದಲ್ಲಿ ಭರವಸೆ ನೀಡಿದ ಆರು ಗ್ಯಾರಂಟಿ ಯೋಜನೆಗಳಿಗೆ ಒಪ್ಪಿಕೊಂಡು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಇದೇ ಜನಪರ ಯೋಜನೆ ಹಾಗೂ ಆರ್ಥಿಕ ಸ್ಥಿರತೆ ನಿರ್ಮಾಣ ಮಾಡುವ ಯೋಜನೆಗಳನ್ನು ಇಟ್ಟುಕೊಂಡೇ ನಾವು ಛತ್ತೀಸ್ ಗಡ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪ್ರಣಾಳಿಕೆ ತಯಾರಿಸಲಾಗಿತ್ತು. ಆದರೆ ಹಿನ್ನಡೆ ಆಗಿರುವುದು ನಿಜವಾದರೂ, ಪೂರ್ಣ ಫಲಿತಾಂಶದ ಬಳಿಕ ಪಕ್ಷದ ವರಿಷ್ಠರು ಕುಳಿತು ಪರಾಮರ್ಶೆ ನಡೆಸಲಿದ್ದಾರೆ” ಎಂದು ನುಡಿದರು.
“ತೆಲಂಗಾಣದಲ್ಲಿ ಬಿ.ಆರ್.ಎಸ್ ಸರ್ಕಾರದ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದಿಂದ ಹಿನ್ನಡೆಯಾಗಿದೆ. ನಾನು ಚುನಾವಣೆ ಪ್ರಚಾರಕ್ಕೆ ಹೋಗಿದ್ದೇನೆ, ಕಳೆದ ಹತ್ತು ವರ್ಷದ ಕೆಸಿಆರ್ ಆಡಳಿತದಲ್ಲಿ 10 ಹಗರಣಗಳಲ್ಲಿ 10 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಕಾಲೇಶ್ವರಂ ನೀರಾವರಿ ಯೋಜನೆ ಒಂದೇ 1.50 ಲಕ್ಷ ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಮತದಾರರು ತೆಲಂಗಾಣ ಉಳಿಯಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವೆಂದು ಪಣತೊಟ್ಟು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ನಮ್ಮದು ಜನಪರ ನಿಲುವು, ಆದರೆ ಬಿಜೆಪಿ ಜಾತಿ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ. ಅವರ ಒಂದೇ ಒಂದು ಜನಪರ ಹಾಗೂ ಆರ್ಥಿಕ ಸಬಲತೆ ಮೂಡಿಸುವ ಕಾರ್ಯಕ್ರಮಗಳು ಇಲ್ಲ” ಎಂದು ಹರಿಹಾಯ್ದರು.
“ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೂ ಬಿಜೆಪಿ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೇರಿತು. ಕರ್ನಾಟಕದಲ್ಲಿ ಮಾಡಿದಂತೆಯೇ ಮಧ್ಯಪ್ರದೇಶಲ್ಲಿ ಬಿಜೆಪಿಯವರು ಅಪರೇಷನ್ ಮೂಲಕ ಅಧಿಕಾರ ನಡೆಸಿದರು. ಕಾಂಗ್ರೇಸ್ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆಯಿಟ್ಟಿರುವ ಪಕ್ಷ, ನಾವು ಬಿಜೆಪಿಯವರಂತೆ ಅಪರೇಶನ್ ಮಾಡುವುದಿಲ್ಲ” ಎಂದರು.
ಪಂಚರಾಜ್ಯ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ:
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ನುಡಿದರು. .
ಈ ಸುದ್ದಿ ಓದಿದ್ದೀರಾ? ದೇಶವನ್ನು ಆಳುವ ನಾಯಕತ್ವ ಇರುವುದು ಬಿಜೆಪಿಗೆ ಮಾತ್ರ: ಯಡಿಯೂರಪ್ಪ
“ಆಯಾ ರಾಜ್ಯಗಳ ಚುನಾವಣೆಯೇ ಬೇರೆ. ರಾಷ್ಟ್ರೀಯ ಚುನಾವಣೆ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಫಲಿತಾಂಶ ದಿಕ್ಸೂಚಿ ಅಲ್ಲ ಎಂದರು. ಅಪರೇಶನ್ ಕಮಲ ಶುರು ಮಾಡಿದ್ದೇ ಬಿಜೆಪಿ, ಅಧಿಕಾರಕ್ಕಾಗಿ ಅವರು ರಂಗೋಲಿ ಕೆಳಗೂ ನುಗ್ಗುತ್ತಾರೆ. ಆದರೆ ನಮಗೆ ಯಾವುದೇ ಅಪರೇಷನ್ ಬಗ್ಗೆ ಭಯವಿಲ್ಲ. ಬಿಜೆಪಿ ಅವರು ತೋಳ್ಬಲ, ಹಣ ಬಲ, ಸಿಬಿಐ, ಇ.ಡಿ ಬಳಕೆ ಮಾಡುತ್ತಾರೆ, ಹೀಗಾಗಿ ನಮ್ಮ ಶಾಸಕರನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಬೇಕಿದೆ” ಎಂದು ಟೀಕಿಸಿದರು.