ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನತ್ತ ಸಾಗುತ್ತಿದೆ. ಬಹುತೇಕ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಮತ ಎಣಿಕೆ ಅಂತಿಮ ಹಂತ ತಲುಪಿದೆ. ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಇದೀಗ ನಿಜವಾಗುವಂತಿದ್ದು, ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸುತ್ತಿದೆ.
ತೆಲಂಗಾಣದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ 60 ಮ್ಯಾಜಿಕ್ ನಂಬರ್ ಅನ್ನು ಕಾಂಗ್ರೆಸ್ ದಾಟಿ ಮುನ್ನುಗ್ಗುತ್ತಿದೆ. ಎರಡು ವರ್ಷಗಳ ಕಾಲ ತೆಲಂಗಾಣವನ್ನು ಆಳಿದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಭದ್ರಕೋಟೆಯನ್ನು ಕಾಂಗ್ರೆಸ್ ಧ್ವಂಸಗೊಳಿಸಿದೆ. ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸುತ್ತಿದ್ದಾರೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಸೇರಿದಂತೆ ಹಲವು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕೊಡಂಗಲ್‌ನಲ್ಲಿ ಬಿಆರ್‌ಎಸ್ ಪಟ್ನಂ ನರೇಂದ್ರ ರೆಡ್ಡಿ ಅವರನ್ನು ಸೋಲಿಸಿ ರೇವಂತ್ ಗೆದ್ದಿದ್ದಾರೆ. ಅಶ್ವರಾವ್ ಪೇಟೆ ಮತ್ತು ರಾಮಗುಂಡಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಆದಿನಾರಾಯಣ ಮತ್ತು ರಾಜ್ ಠಾಕೂರ್ ಗೆಲುವು ಸಾಧಿಸಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಗೆಲುವಿನ ನಗೆ ಬೀರಿದ್ದಾರೆ.
ಬಿಆರ್‌ಎಸ್ ಈ ಸೋಲನ್ನು ಒಪ್ಪಿಕೊಂಡಿದೆ. ಎರಡು ಬಾರಿ ಅಧಿಕಾರ ನೀಡಿದ ತೆಲಂಗಾಣದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ಫಲಿತಾಂಶವನ್ನು ಪಾಠವಾಗಿ ಪರಿಗಣಿಸುತ್ತೇವೆ. ಮತ್ತೆ ಮೇಲೇರುತ್ತೇವೆ ಎಂದು ಬಿಆರ್‌ಎಸ್ ಮುಖಂಡರು ತಿಳಿಸಿದ್ದಾರೆ.
ಈಗಾಗಲೇ, ಕೆಸಿಆರ್ ಸಂಪುಟದ ಆರು ಸಚಿವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ಅವರು ಸ್ವಂತ ವಾಹನದಲ್ಲಿ ರಾಜಭವನಕ್ಕೆ ತೆರಳಿದ್ದಾರೆ. ಕೆಸಿಆರ್ ಯಾವುದೇ ಸಂಚಾರ ನಿಯಮಗಳಿಲ್ಲದೆ ಸಾಮಾನ್ಯ ವ್ಯಕ್ತಿಯಂತೆ ಪ್ರಗತಿ ಭವನದಿಂದ ರಾಜಭವನಕ್ಕೆ ತೆರಳಿ, ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲ ತಮಿಳಿಸೈ ಸೌಂದರ್ ರಾಜನ್ ಅವರಿಗೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪ್ರಮಾಣ ವಚನ ಸ್ವೀಕರಿಸುವ ಕುರಿತು ಚರ್ಚೆ: ಡಿಜಿಪಿ
ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಇದೀಗ ಪ್ರಮಾಣ ವಚನ ಸ್ವೀಕಾರದ ಕುರಿತು ರೇವಂತ್ ಅವರೊಂದಿಗೆ ಚರ್ಚಿಸಿರುವುದಾಗಿ ಡಿಜಿಪಿ ಅಂಜನಿಕುಮಾರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಸಿಎಂ ಸಿದ್ಧರಾಮಯ್ಯ ಪ್ರಚಾರ ನಡೆಸಿದ್ದ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ
“ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ನಾಳೆಯಿಂದ 9ರವರೆಗೆ ಎಲ್ಲ ಕ್ಷೇತ್ರಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ರೇವಂತ್ ಹೇಳಿದರು. ಎಲ್.ಬಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ” ಎಂದು ಡಿಜಿಪಿ ತಿಳಿಸಿದ್ದಾರೆ.