2014ರಲ್ಲಿ ತೆಲಂಗಾಣ ರಾಜ್ಯವನ್ನು ರಚಿಸಿದ ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್, ಈಗ ಫೀನಿಕ್ಸ್‌ನಂತೆ ಎದ್ದು ನಿಂತಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಆಡಳಿತರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೋಲುಂಡಿದೆ. ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆದುಕೊಂಡ ಕಾಂಗ್ರೆಸ್, ಬಿಆರ್‌ಎಸ್‌ನ ಸಾಂಪ್ರದಾಯಿಕ ಮತಗಳಿರುವ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಗೆಲುವಿಗೆ ಕಾರಣವಾದ ಆರು ಅಂಶಗಳು
1. ಆರು ಗ್ಯಾರಂಟಿಗಳು
ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಆರು ಪ್ರಮುಖ ಗ್ಯಾರಂಟಿಗಳನ್ನು ಮತದಾರರಿಗೆ ನೀಡಿತು. 1. ಮಹಾಲಕ್ಷ್ಮಿ (ಮಹಿಳಾ ಕೇಂದ್ರಿತ ಕಲ್ಯಾಣ ಕಾರ್ಯಕ್ರಮ) 2. ರೈತು ಭರೋಸಾ (ರೈತರು ಮತ್ತು ಕೃಷಿ ಕಾರ್ಮಿಕರನ್ನು ಉದ್ದೇಶಿಸಿರುವ ಕಾರ್ಯಕ್ರಮ) 3. ಇಂದಿರಮ್ಮ (ಬಡವರಿಗೆ ಕಡಿಮೆ ಹಣದಲ್ಲಿ ಮನೆಗಳನ್ನು ನೀಡುವ ಭರವಸೆ). 4. ಗೃಹಜ್ಯೋತಿ (ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮ). 5. ಯುವ ವಿಕಾಸಂ (ಆರ್ಥಿಕವಾಗಿ ಹಿಂದುಳಿದ ಮನೆಗಳ ಮಕ್ಕಳಿಗೆ ಶಿಕ್ಷಣ ಭರವಸೆ). 6. ಚೆಯುತಾ- (ಆರೋಗ್ಯ ವಿಮೆ ಮತ್ತು ಪಿಂಚಣಿ ಕಾರ್ಯಕ್ರಮ). ಈ ಆರು ಗ್ಯಾರಂಟಿಗಳನ್ನು ಘೋಷಿಸಿದ್ದರಿಂದ ತೆಲಂಗಾಣದ ಬಡ ಮತದಾರರು ಕಾಂಗ್ರೆಸ್‌ನತ್ತ ವಾಲಿದರು. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದು ತೆಲಂಗಾಣದಲ್ಲಿ ಪ್ರಭಾವ ಬೀರಿದೆ.
2. ಅಲ್ಪಸಂಖ್ಯಾತರ ಮತಗಳು
ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್‌ನತ್ತ ತಿರುಗಿದಂತೆ ಕಾಣುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತುಕೊಡುವ ಘೋಷಣೆಯನ್ನು ಕಾಂಗ್ರೆಸ್ ಮಾಡಿತು. ಎಐಎಂಐಎಂ ಪಾಲಾಗುತ್ತಿದ್ದ ಮತಗಳು ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿವೆ. ಬಿಆರ್‌ಎಸ್ ಪಕ್ಷವು ಬಿಜೆಪಿಯ ಬಿ ಟೀಮ್ ಎಂಬ ಪ್ರಚಾರವನ್ನು ಕಾಂಗ್ರೆಸ್ ಮಾಡಿತು.
3. ದುರ್ಬಲಗೊಂಡ ಬಿಜೆಪಿ ನಾಯಕತ್ವ
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಂಡಿ ಸಂಜಯ್ ಅವರನ್ನು ಕೆಳಗಿಳಿಸಿ ಜಿ ಕಿಶನ್ ರೆಡ್ಡಿ ಅವರನ್ನು ಬಿಜೆಪಿ ನೇಮಿಸಿತು. ಆ ಮೂಲಕ ಬಿಜೆಪಿ ತನ್ನ ರಾಜ್ಯ ಘಟಕವನ್ನು ದುರ್ಬಲ ಮಾಡಿತು. ಇದು ಪಕ್ಷವನ್ನು ಅಸ್ಥಿರಗೊಳಿಸಿದಂತಿದೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯ ವಿರೋಧ ಪಕ್ಷವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿತು.
4. ಭ್ರಷ್ಟಾಚಾರದ ಆರೋಪಗಳು
ದೋಷಪೂರಿತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿರುವ ಸಂಬಂಧ ಕೆ ಚಂದ್ರಶೇಖರ ರಾವ್ ಅವರ ವಿರುದ್ಧ ಭಾರೀ ಪ್ರಚಾರವನ್ನು ಕಾಂಗ್ರೆಸ್ ಮಾಡಿತು. ಜುಲೈ- ನವೆಂಬರ್ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತು. ಇವುಗಳನ್ನು ಎದುರಿಸುವಲ್ಲಿ ಬಿಆರ್‌ಎಸ್ ಅಸಮರ್ಥವಾಯಿತು.
5. ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರಚಾರ
ಚುನಾವಣಾ ತಂತ್ರಗಾರ ಸುನಿಲ್ ಕಣುಗೋಲು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮಗಳ ಮೂಲಕ ಯಶಸ್ವಿಯಾಗಿ ಜನರನ್ನು ತಲುಪಿದೆ. ಆಫ್‌ಲೈನ್ ಹೋರಾಟದ ಜೊತೆಗೆ ಆನ್‌ಲೈನ್ ಮೂಲಕ ಕಾಂಗ್ರೆಸ್ ಹರಿಯಬಿಟ್ಟ ವಿಡಿಯೊಗಳು, ಮೀಮ್‌ಗಳು, ಪೋಸ್ಟರ್‌ಗಳು, ಜಿಫ್ ಫೈಲ್‌ಗಳು ಆಡಳಿತ ವಿರೋಧಿ ಅಲೆಯ ಮೇಲೆ ಮಹಾಪ್ರಹಾರವನ್ನೇ ನಡೆಸಿದವು.
6. ಭಾರತ್ ಜೋಡೋ ಯಾತ್ರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ’ಭಾರತ ಜೋಡೋ ಯಾತ್ರೆ’ಯನ್ನು ಹಮ್ಮಿಕೊಂಡು ಜನರ ಗಮನ ಸೆಳೆದರು. ತೆಲಂಗಾಣದಲ್ಲಿ ಪಾದಯಾತ್ರೆಯು ಸಾಗಿದಾಗ ಲಕ್ಷಾಂತರ ಜನರು ರಾಹುಲ್ ಗಾಂಧಿಯವರಿಗೆ ಬೆಂಬಲ ನೀಡಿದರು. ಇದು ಚುನಾವಣೆಯ ಮೇಲೆ ಪ್ರಭಾವಿಸಿದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ತಾಳಿದ್ದಾರೆ.