ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಶುಭ ಕೋರಿದ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರನ್ನು ಭಾನುವಾರ ಚುನಾವಣಾ ಆಯೋಗ ಅಮಾನತುಗೊಳಿಸಿದೆ.
ರೇವಂತ್ ರೆಡ್ಡಿಯನ್ನು ಭೇಟಿ ಮಾಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಾದ ಸಂಜಯ್ ಜೈನ್, ಮಹೇಶ್ ಭಾಗವತ್ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಮತ್ತು ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೇ 50ರಷ್ಟು ಮಹಿಳಾ ಮುಖ್ಯಮಂತ್ರಿಗಳು!- ಹೇಳಿಕೆಯಾಗೇ ಉಳಿಯದಿರಲಿ, ಅನುಷ್ಠಾನಕ್ಕೂ ಬರಲಿ
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ ಡಿಜಿಪಿ ಅಂಜನಿ ಕುಮಾರ್ ರೇವಂತ್ ರೆಡ್ಡಿಯವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸುತ್ತಿರುವುದು ಕಂಡುಬಂದಿದೆ.
ನೂತನ ಡಿಜಿಪಿ ನೇಮಕವಾಗುವವರೆಗೂ ಹಿರಿಯ ಶ್ರೇಣಿಯ ಐಪಿಎಸ್ ಅಧಿಕಾರಿ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮ ಸೇರಿದಂತೆ ಉಳಿದ ಕಾನೂನು ಸುವ್ಯವಸ್ಥೆ ಕಾರ್ಯಗಳನ್ನು ನೆರವೇರಿಸಬೇಕೆಂದು ಆಯೋಗ ತಿಳಿಸಿದೆ.
119 ವಿಧಾನಸಭಾ ಕ್ಷೇತ್ರಗಳ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 65 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಸರಳ ಬಹುಮತದತ್ತ ಸಾಗುತ್ತಿದೆ. ಆಡಳಿತರೂಢ ಬಿಆರ್‌ಎಸ್ 39 ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿ 8 ಹಾಗೂ ಎಐಎಂಐಎಂ 7 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.