ಸ್ವಂತ ಕಟ್ಟಡವಿಲ್ಲದ ಅಂಗನವಾಡಿ, ಇವತ್ತೋ ನಾಳೆಯೋ ಬೀಳುವ ಹಂತದಲ್ಲಿರುವ ಹಳೆಯ ಕೊಠಡಿಯೊಂದರಲ್ಲಿ ಕಲಿಯುತ್ತಿರುವ ಪುಟ್ಟ ಮಕ್ಕಳು, ಮಳೆ ಬಂದರೆ ಸೋರುವ ಅಂಗನವಾಡಿ ಕೇಂದ್ರ, ಇಂತಹ ಪರಿಸ್ಥಿತಿಯಲ್ಲೇ ಪಾಠ ಮಾಡಬೇಕಾಗಿದ್ದು ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯ ಅನಿವಾರ್ಯ.
ಕಲಬುರಗಿ ದಕ್ಷಿಣ ಕ್ಷೇತ್ರದ ಹಾಡಿಗಿಲ ಆರತಿ ತಾಂಡಾದ ಅಂಗನವಾಡಿ ಕೇಂದ್ರ-1ರಲ್ಲಿ ಕಲಿಯುವ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೆ ಪರದಾಡುವಂತಾಗಿದೆ, ಏನಾದರೂ ಅವಘಡ ಸಂಭವಿಸಿದರೆ ಮಕ್ಕಳ ಗತಿ ಏನಾಗುತ್ತಿತ್ತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನೂತನ ಅಂಗನವಾಡಿ ಕಟ್ಟಡ ನಿರ್ಮಿಸಿ ಮಕ್ಕಳ ಸುರಕ್ಷತೆ ಜತೆಗೆ ಸಮರ್ಪಕ ಸೌಲಭ್ಯ ಒದಗಿಸಬೇಕೆಂಬುದು ತಾಂಡಾ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಈದಿನ. ಕಾಮ್ ಜೊತೆ ಮಾತನಾಡಿ, “2011 ರಿಂದ ಈ ಅಂಗನವಾಡಿ ಕೇಂದ್ರದಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವೆ, ಅಂದಿನಿಂದ ಸ್ವಂತ ಕಟದ ಇಲ್ಲದೆ ಬಾಡಿಗೆ ಮನೆಯಲ್ಲಿಯೇ ಅಂಗನವಾಡಿ ಕೇಂದ್ರ ನಡೆಸಿದ್ದೇನೆ. 2019-20ರಲ್ಲಿ ಸಿಡಿಪಿಐ ಅವರು ಪರಿಶೀಲನೆಗೆ ಬಂದಾಗ ಬಾಡಿಗೆ ಮನೆಯಲ್ಲಿ ಅಂಗನವಾಡಿ ನಡೆಸುವುದು ಬೇಡ, ಸರಕಾರಿ ಶಾಲೆಯಲ್ಲಿ ಅಂಗನವಾಡಿ ನಡೆಸುವಂತೆ ಸೂಚಿಸಿ ಸರ್ಕಾರಿ ಶಾಲೆಯಲ್ಲಿ ಅಂಗನವಾಡಿ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಅನುಮತಿ ಕೊಡಿಸಿ ಅನುವು ಮಾಡಿಕೊಟ್ಟಿದ್ದರು” ಎಂದು ಹೇಳಿದರು.
“ಸಂಪೂರ್ಣ ಶಿಥಿಲಗೊಂಡ ಈ ಕೋಣೆ ಬೀಳುವ ಹಂತದಲ್ಲಿದೆ. ಮಳೆಗಾಲದಲ್ಲಿ ಪುಟ್ಟ ಮಕ್ಕಳಿಗೆ ಸುರಕ್ಷತೆಯಿಂದ ಕಾಪಾಡುವುದು ಸವಾಲಿನ ಕೆಲಸವಾಗಿದೆ. ಅಂಗನವಾಡಿ ರೇಷನ್ ಶೇಖರಣೆ ಸೇರಿದಂತೆ ಮಕ್ಕಳಿಗೆ ಕುಳಿತುಕೊಳ್ಳಲುಸ ಜಾಗದ ಕೊರೆತೆಯಿದೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?
ಅಂಗನವಾಡಿ ಸಹಾಯಕಿ ವಿಮಲಬಾಯಿ ಮಾತನಾಡಿ, “ಅಂಗನವಾಡಿಗೆ ಎಲ್ಲಾ ರೀತಿಯ ಸೌಲಭ್ಯವಿದ್ದರೆ ಮಾತ್ರ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ ಇಲ್ಲಿನ ಮಕ್ಕಳಿಗೆ ಕನಿಷ್ಠ ಸೌಲಭ್ಯವಿಲ್ಲ, ಕೂಡಲೇ ನಮಗೆ ಸ್ವಂತ ಅಂಗನವಾಡಿ ಕಟ್ಟಡ ನಿರ್ಮಿಸಿಕೊಡಬೇಕು” ಎಂದು ಮನವಿ ಮಾಡಿದರು.