ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಕರ್ನಾಟಕದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಲಿಂಗಾನುಪಾತದ ಸಮತೋಲನವನ್ನು ಕಾಪಾಡುವುದು ‘ಭ್ರೂಣ ಹತ್ಯೆ ನಿಷೇಧ’ ಕಾಯ್ದೆಯ ಮೂಲ ಉದ್ದೇಶ. ಆದರೂ, ರಾಜ್ಯದ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿ ಹತ್ಯೆ ಮಾಡುವ ಗ್ಯಾಂಗ್‌ವೊಂದು ಸಕ್ರಿಯವಾಗಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯ ನರ್ಸ್‌ವೊಬ್ಬರನ್ನು ಬಂಧಿಸಿದ್ದಾರೆ.
ಉಷಾರಾಣಿ ಬಂಧಿತ ಆರೋಪಿ. ಬೈಯ್ಯಪ್ಪಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಕೆಯ ಬಂಧನದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಭ್ರೂಣ ಹತ್ಯೆ ಮಾಡುವ ವಿಚಾರ ಬೆಳಕಿಗೆ ಬಂದ ನಂತರ ಉಷಾರಾಣಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಬಿಟ್ಟು, ಬೇರೆ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಈಕೆ ಗರ್ಭಪಾತ ಮಾಡಿಸುತ್ತಿದ್ದರು. ಜತೆಗೆ, ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಉಷಾರಾಣಿ ಈ ಪ್ರಕರಣದ ಮತ್ತೋರ್ವ ಆರೋಪಿ ಬ್ರೋಕರ್ ಪುಟ್ಟರಾಜು ಅವರ ಸಂಬಂಧಿಯಾಗಿದ್ದಾರೆ. ಪುಟ್ಟರಾಜು ಹೇಳಿದ ಹಾಗೆ ಈಕೆ ಕೆಲಸ ನಿರ್ವಹಿಸುತ್ತಿದ್ದರು.
ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಸದ್ಯ ಪುಟ್ಟರಾಜು ಜಾಮೀನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ
ಸದ್ಯ ಉಷಾರಾಣಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.