ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದಿದೆ. ಆರಂಭದ ಆರು ತಿಂಗಳ ಆಡಳಿತದಲ್ಲಿ ಹಲವು ಹಳವಂಡಗಳು, ಹಗರಣಗಳು ಬಯಲಾಗಿವೆ. ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಸಿಕ್ಕ ಸುವರ್ಣ ಅವಕಾಶವನ್ನು ವಿಪಕ್ಷ ಬಿಜೆಪಿ ಬಳಸಿಕೊಂಡು ಆಳುವ ಸರ್ಕಾರಕ್ಕೆ ಚಳಿ ಬಿಡಿಸುತ್ತದೋ, ಇಲ್ಲ ಎಂದಿನಂತೆ ಇಲ್ಲೂ ಕೂಗಾಡಿ, ಅರಚಾಡಿ ಸುದ್ದಿ ಮಾಡಿ ಸುಮ್ಮನಾಗುತ್ತದೋ… ನೋಡಬೇಕು.
ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಹದಿನೈದು ದಿನಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಡಿಸೆಂಬರ್ ಚಳಿಯಲ್ಲೂ ಬೆವರಿಳಿಸುವಂತೆ ಮಾಡಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಸ್ತ್ರ-ಹತಾರಗಳೊಂದಿಗೆ ಸಿದ್ಧವಾಗಿ ನಿಂತಿರುವಂತೆ ಕಾಣುತ್ತಿವೆ.
ಇದಕ್ಕೆ ಕುಮ್ಮಕ್ಕು ಕೊಡುವಂತೆ ಇಂದೇ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ನಾಲ್ಕರಲ್ಲಿ ಮೂರು ರಾಜ್ಯಗಳಲ್ಲಿ- ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢಗಳಲ್ಲಿ- ಬಿಜೆಪಿ ಜಯಭೇರಿ ಬಾರಿಸಿದೆ. ಇದು ಸಹಜವಾಗಿಯೇ ಸೋತು ಸೊರಗಿರುವ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು, ಹುಮ್ಮಸ್ಸಿಗೆ ಕಾರಣವಾಗಿದೆ. ಆರು ತಿಂಗಳಲ್ಲಿ ಅಳೆದು ಸುರಿದು ವಿರೋಧ ಪಕ್ಷದ ನಾಯಕನಾಗಿರುವ ಆರ್. ಅಶೋಕ್ ರಿಗೆ ಸಿಕ್ಕ ಅಪೂರ್ವ ಅವಕಾಶವಾಗಿದೆ. ಜೊತೆಗೆ ಜೆಡಿಎಸ್ನ ಎಚ್.ಡಿ ಕುಮಾರಸ್ವಾಮಿ ಕೂಡ ಕೈ ಜೋಡಿಸಲಿದ್ದಾರೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದಿದೆ. ಆರಂಭದ ಆರು ತಿಂಗಳ ಆಡಳಿತದಲ್ಲಿ ಹಲವು ಹಳವಂಡಗಳು, ಹಗರಣಗಳು- ವರ್ಗಾವಣೆ ದಂಧೆಯ ರೂಪ ಪಡೆದಿರುವುದು; ಕೋಟ್ಯಂತರ ರೂ.ಗಳ ವ್ಯಯಿಸಿಯೂ ಕಾವೇರಿ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿರುವುದು; ಆಡಳಿತ ಯಂತ್ರಾಂಗ ಸ್ಥಗಿತಗೊಂಡಿರುವುದನ್ನು ಸಾಬೀತುಪಡಿಸಲು ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮಕ್ಕೆ ಜನ ಸಾಗರೋಪಾದಿಯಲ್ಲಿ ಹರಿದು ಬಂದಿರುವುದು; ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಈ ಸರ್ಕಾರವೂ ಕಮಿಷನ್ ದಂಧೆಗಿಳಿದಿದೆ ಎಂದು ದಾಖಲೆಗಳ ಸಮೇತ ತನಿಖಾ ಆಯೋಗಕ್ಕೆ ದೂರು ಸಲ್ಲಿಸಿರುವುದು; ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಿಫ್ಯಾಕ್ಟೋ ಸಿಎಂ ಆಗಿ ದರ್ಬಾರು ನಡೆಸುತ್ತಿರುವುದು; ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ದಾಳಿಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಿಗೆ ಸೇರಿದ ಮನೆಯಲ್ಲಿ 94 ಕೋಟಿ ರೂಪಾಯಿ ನಗದು ಸಿಕ್ಕಿರುವುದು; ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಕಾಂಗ್ರೆಸ್ ಸರ್ಕಾರ ಇದು ಸಾಂವಿಧಾನಿಕ ಮತ್ತು ಪ್ರಜಾತಂತ್ರದ ಮೇಲಿನ ಸವಾರಿ ಎಂದು ವಾಪಸ್ ಪಡೆದಿರುವುದು; ಬೆಂಗಳೂರಿನ ಹೊರವಲಯದ ಕೆರೆ ಅಂಗಳದ ಬಹುಕೋಟಿ ಮೌಲ್ಯದ ಜಮೀನನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಒತ್ತುವರಿ ಮಾಡಿಕೊಂಡಿರುವುದು; ಐದು ಗ್ಯಾರಂಟಿಗಳ ಪೈಕಿ ಎರಡು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ಮೀನಮೇಷ ಎಣಿಸುತ್ತಿರುವುದು; ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸದಿರುವುದು; ಆರು ತಿಂಗಳ ಸರ್ಕಾರದ ಸಾಧನೆಯನ್ನು ಸಾರಲು ಸುದ್ದಿ ಮಾಧ್ಯಮಗಳಿಗೆ 140 ಕೋಟಿ ರೂ.ಗಳ ಜಾಹೀರಾತು ನೀಡಿರುವುದು; ಬರಗಾಲದ ಬಗ್ಗೆ ಪರಿಹಾರಕ್ಕಿಂತ ಹೆಚ್ಚಾಗಿ ಕೇಂದ್ರ ದೂಷಣೆಯೇ ಹೆಚ್ಚಾಗಿರುವುದು- ಒಂದಾ ಎರಡಾ?
ಇವೆಲ್ಲವೂ ವಿರೋಧ ಪಕ್ಷಗಳ ಗಮನದಲ್ಲಿವೆ. ಕೆಲವು ಸುದ್ದಿ ಮಾಧ್ಯಮಗಳಲ್ಲಿ ಬಯಲಾಗಿವೆ. ರಾಜ್ಯದಾದ್ಯಂತ ಸದ್ದು ಮಾಡಿವೆ. ಸರ್ಕಾರ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯನ್ನು ಸೃಷ್ಟಿಸಿವೆ. ಇದು ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬೇಕಾದ ಅಸ್ತ್ರವಾಗಿ- ಹತಾರವಾಗಿ ಕೈಗೆ ಸಿಕ್ಕಿದೆ, ಬಳಸಿಕೊಂಡು ಬೆಳೆಯುವಂತಹ ವಾತಾವರಣವನ್ನು ಸೃಷ್ಟಿಸಿದೆ.
ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಿಜಕ್ಕೂ ಜನಪರವಾಗಿದ್ದರೆ, ಈ ನಾಡಿನ ಜನರ ಬಗ್ಗೆ ಕಾಳಜಿ-ಕಳಕಳಿ ಇರುವ ಪಕ್ಷಗಳೇ ಆಗಿದ್ದರೆ, ಈ ಚಳಿಗಾಲದ ಅಧಿವೇಶನ ಸಂವಿಧಾನ ಕಲ್ಪಿಸಿಕೊಟ್ಟಿರುವ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಯಾವ ಮುಲಾಜಿಗೂ ಒಳಗಾಗದೆ ಪ್ರಶ್ನಿಸುವ ಧಮ್ಮು-ತಾಕತ್ತು ತೋರಬೇಕಾಗಿದೆ. ಸರ್ಕಾರದಿಂದ ಉತ್ತರ ಪಡೆಯಬೇಕಿದೆ. ಜನರ ಮುಂದೆ ಇಟ್ಟು ಜನ ಮನ ಗೆಲ್ಲಬೇಕಾಗಿದೆ.
ವಿಪರ್ಯಾಸವೋ ಏನೋ, ಇದೇ ಸಂದರ್ಭದಲ್ಲಿ, ರಾಜ್ಯ ರಾಜಧಾನಿಯಿಂದ ಹೊರಗೆ ನಡೆಯುವ, ಅದರಲ್ಲೂ ಉತ್ತರ ಕರ್ನಾಟಕದ ಭಾಗವಾದ ಬೆಳಗಾವಿಯಲ್ಲಿ ನಡೆಯುವ ಈ ಅಧಿವೇಶನ ಸಂದರ್ಭದಲ್ಲಿ ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಬೇರೆ ಬೇರೆ ಸಂಘಟನೆಗಳು ಸುವರ್ಣ ವಿಧಾನಸೌಧದ ಮುಂದೆ ನೆರೆಯುತ್ತವೆ. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ, ಸತ್ಯಾಗ್ರಹ, ಪ್ರತಿಭಟನೆ ನಡೆಸುವ ಮೂಲಕ ಇಡೀ ಅಧಿವೇಶನದ ಗಮನ ಬೇರೆಡೆಗೆ ತಿರುಗುತ್ತದೆ. ಆಳುವ ಸರ್ಕಾರ ಪರಿಸ್ಥಿತಿಯ ಲಾಭ ಪಡೆಯುತ್ತದೆ. ಸದನದ ಒಳಗೆ ಮತ್ತು ಹೊರಗೆ ನಡೆಯುವ ಪ್ರತಿಭಟನೆ, ಧರಣಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬಚಾವಾಗುತ್ತದೆ. ಹಾಗೆಯೇ ಅಧಿಕಾರದಲ್ಲಿರುವ ಪಕ್ಷದ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡ ವಿರೋಧ ಪಕ್ಷದ ನಾಯಕರು, ಒಬ್ಬರನ್ನೊಬ್ಬರು ಮೆಚ್ಚಿ, ಹಗರಣಗಳನ್ನು ಮುಚ್ಚಿ, ಬೆಚ್ಚಗಾಗುವುದು ನಡೆದುಕೊಂಡೇ ಬಂದಿದೆ. ನಾಡಿನ ಜನತೆ ನರಳುವುದು, ನಲುಗುವುದು ಮಾಮೂಲಾಗಿದೆ.
ಇದು ಇಲ್ಲಿಯವರೆಗೂ ನಡೆದುಕೊಂಡು ಬಂದ ಅಧಿವೇಶನಗಳ ಸತ್ಸಂಪ್ರದಾಯ. ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಸಿಕ್ಕ ಸುವರ್ಣ ಅವಕಾಶವನ್ನು ಬಿಜೆಪಿ ಬಳಸಿಕೊಂಡು ಆಳುವ ಸರ್ಕಾರಕ್ಕೆ ಚಳಿ ಬಿಡಿಸುತ್ತದೋ, ಇಲ್ಲ ಎಂದಿನಂತೆ ಇಲ್ಲೂ ಕೂಗಾಡಿ, ಅರಚಾಡಿ ಸುದ್ದಿ ಮಾಡಿ ಸುಮ್ಮನಾಗುತ್ತದೋ… ನೋಡಬೇಕು.
