ರಾಯಚೂರಿನ ಎಪಿಎಂಸಿ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಖರೀದಿಯಲ್ಲಿ ರೈತರಿಗೆ ಮೋಸವಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದು ಆಗ್ರಹಿಸಿ ಮತ್ತು ನಾನಾ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಡಿ.6ರಂದು ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧರಿಸಿದೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷಮಣಗೌಡ ಕಡಗಂದೊಡ್ಡಿ, “ಹತ್ತಿ ಮಾರುಕಟ್ಟೆಯಲ್ಲಿ ರೈತರ ಹತ್ತಿಯನ್ನು ಟೆಂಡರ್ ಮೂಲಕ ಖರೀದಿಸದೇ ನೇರವಾಗಿ ಮಿಲ್‌ಗಳಿಗೆ ಸಾಗಿಸಲಾಗುತ್ತಿದೆ. ಲೇಬರ್ ಚಾರ್ಜ ಎಂದು 150 ರೂ, ಅನ್‌ಲೋಡಿಂಗ್ ಚಾರ್ಜ್ 15 ರೂ. ಸೇರಿ ಪ್ರತಿ ಕ್ವಿಂಟಾಲ್ ಹತ್ತಿಯಿಂದ 3 ರೂ. ಕಡಿತಗೊಳಿಸಲಾಗುತ್ತಿದೆ. ಹತ್ತಿ ಬೆಲೆ ಕುಸಿತವಾಗಿರುವ ಕಾರಣ ಇಲ್ಲಸಲ್ಲದ ಶುಲ್ಕಗಳನ್ನು ರೈತರ ಮೇಲೆ ಹೇರಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಎಪಿಎಂಸಿಯಿಂದಲೇ ನಾಲ್ಕ ವೇಬ್ರೀಡ್ಜ್ ಸ್ಥಾಪಿಸಬೇಕು. ಖಾಸಗಿ ವೇಬ್ರೀಡ್ಜ್‌ಗಳಿಂದ ರೈತರಿಗೆ ತೂಕದಲ್ಲಿ ಅನ್ಯಾಯವಾಗುತ್ತಿದೆ. ಈರುಳ್ಳಿ ಖರೀದಿಯಲ್ಲಿ ಸ್ಯಾಂಪಲ್ ಸಂಗ್ರಹಿಸುವ ನೆಪದಲ್ಲಿ 2 ಕೆ.ಜಿ ಅನಧಿಕೃತವಾಗಿ ಸಂಗ್ರಹಿಸಲಾಗುತ್ತಿದೆ. ತೊಗರಿಯಲ್ಲೂ ಇದೇ ರೀತಿ ನಡೆಯುತ್ತಿದೆ” ಎಂದು ದೂರಿದ್ದಾರೆ.
“ಎಪಿಎಂಸಿಯಲ್ಲಿ ನಡೆಯುತ್ತಿರುವ ಅನ್ಯಾಯದ ಕುರಿತ ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಸಂತೆ ಬಜಾರಿನಲ್ಲಿ ಕುಡಿಯುವ ನೀರು, ಸ್ವಚ್ಚತೆಯೇ ಇಲ್ಲದಂತಾಗಿದೆ. ಪ್ರತಿವಾರ ಜಾನುವಾರು ಸಂತೆ ನಡೆಯುತ್ತದೆ. ಆ ಜಾಗವನ್ನು ಸ್ವಚ್ಚಗೊಳಿಸುತ್ತಿಲ್ಲ. ರೈತರ ತರಕಾರಿ ಮಾರುಕಟ್ಟೆಯಲ್ಲಿ ಶೆಡ್‌ಗಳಿಲ್ಲ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ” ಎಂದು ಕಿಡಿಕಾರಿದ್ದಾರೆ.
ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬುಧವಾರ ಎಪಿಎಂಸಿ ಮಾರುಕಟ್ಟೆಯ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಮಜೀದ್ ಸಾಬ, ರಮೇಶ ಗಾಣಧಾಳ, ನರಸಪ್ಪ ಹೊಕ್ರಾಣ , ಹಂಪಣ್ಣ, ಪ್ರಾಣೇಶ ಗಾಣಧಾಳ ಉಪಸ್ಥಿತರಿದ್ದರು.
ವರದಿ : ಹಫೀಜುಲ್ಲ