ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ, ಉತ್ತರ ಕರ್ನಾಟಕದ ಪ್ರದೇಶಗಳ ಜನರ ಕಲ್ಯಾಣಕ್ಕಾಗಿ ರಾಜ್ಯ ಮಟ್ಟದ 9 ಕಚೇರಿಗಳನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ತೆರೆಯಲು 2019ರಲ್ಲಿಯೇ ಗೆಜೆಟ್ ಹೊರಡಿಸಲಾಗಿದೆ. ಆದರೂ, ಕಚೇರಿಗಳನ್ನು ಸ್ಥಳಾಂತರಿಸಿಲ್ಲ. ಕೂಡಲೇ ಕಚೇರಿಗಳನ್ನು ಸುವರ್ಣಸೌಧದಲ್ಲಿ ತೆರೆಯಬೇಕು ಎಂದು ಬೆಳಗಾವಿ ಜಿಲ್ಲೆಯ ಮಾಹಿತಿ ಹಕ್ಕು ಹೋರಾಟಗಾರ ಶ್ರೀನಿವಾಸಗೌಡ ಪಾಟಿಲ್ ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಅವರು, “ಕರ್ನಾಟಕ ಸರ್ಕಾರವು 9 ಕಚೇರಿಗಳಲ್ಲಿ 3 ಕಚೇರಿಗಳನ್ನು ಈಗಾಗಲೇ ಸ್ಥಳಾಂತರಿಸಿದೆ. 3 ಕಚೇರಿಗಳು ಈಗಲೇ ಸ್ಥಳಾಂತರಗೊಳ್ಳುತ್ತಿವೆ. ಇನ್ನು 3 ಕಚೇರಿಗಳನ್ನು 6 ತಿಂಗಳ ಕಾಲಾವಧಿಯಲ್ಲಿ ಸ್ಥಳಾಂತರಿಸಲಾಗುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು 2020ರಲ್ಲಿಯೇ ಹೈಕೋರ್ಟ್ ತಿಳಿಸಿದ್ದರು. ಆದರೆ, ಈವರೆಗೆ ಕಚೇರಿಗಳು ಸ್ಥಳಾಂತರವಾಗಿಲ್ಲ” ಎಂದು ದೂರಿದ್ದಾರೆ.
“ಹಿಂದಿನ ಸರ್ಕಾರ ತನ್ನ ಮಾತಿನಂತೆ ನಡೆದುಕೊಳ್ಳದೆ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುವ ಭ್ರಷ್ಟ ಮಂತ್ರಿಗಳು, ಭ್ರಷ್ಟ ಶಾಸಕರು, ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು” ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
“ಸುವರ್ಣಸೌಧದಲ್ಲಿ ರಾಜ್ಯ ಮಟ್ಟದ ಕಚೇರಿಗಳನ್ನು ತೆರೆಯುವ ಬಗ್ಗೆ ಯಾವೊಬ್ಬ ಶಾಸಕರು, ಸಚಿವರು ಇಲ್ಲಿವರೆಗೂ ಧ್ವನಿ ಎತ್ತುತ್ತಿಲ್ಲ. ಭ್ರಷ್ಟಾಚಾರಕ್ಕೆ ಮಾತ್ರ ಸೀಮಿತವಾಗಿರುವ, ಐಷಾರಾಮಿ ಜೀವನ ಬಯಸುತ್ತಿರುವ ಜನಪ್ರತಿನಿಧಿಗಳು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
438 ಕೋಟಿ ರೂ. ವೆಚ್ಚ ಮಾಡಿ ಸುವರ್ಣಸೌಧವನ್ನು ಕಟ್ಟಲಾಗಿದೆ. ಆದರೆ, ಅದು ಖಾಲಿ ಉಳಿದಿದೆ. ಅದರ ನಿರ್ವಹಣೆಗೆ ಪ್ರತಿ ವರ್ಷ ಕೋಟ್ಯಾಂತರ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಘೋಷಿಸಿ, ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಅರ್ಧ ಇಲಾಖೆಗಳ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ಆ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ, ಅನುಮೋದಿಸಬೇಕು” ಎಂದು ಆಗ್ರಹಿಸಿದ್ದಾರೆ.