“ರಾಜ್ಯ ರಾಜಧಾನಿ ಬೆಂಗಳೂರಿನ 60ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು 27 ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಏಪ್ರಿಲ್ನಲ್ಲಿ ಇದೇ ರೀತಿಯ 6 ಪ್ರಕರಣ ದಾಖಲಾಗಿದ್ದವು. ಆಗ ಕೆಲವು ಬಾಲಾಪರಾಧಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳ ನಡುವಿನ ಸಾಮ್ಯತೆ ಬಗ್ಗೆ ತನಿಖಾಧಿಕಾರಿಗಳ ಜತೆಗೆ ಸಭೆ ನಡೆಸಿ ತನಿಖೆಯ ಪ್ರಗತಿಯ ಕುರಿತು ಚರ್ಚಿಸಿದ್ದೇವೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ಈ ಕುರಿತು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಆಯಾ ಸರ್ವಿಸ್ ಪ್ರೊವೈಡರ್ ಕಂಪನಿಗಳಿಂದ ಮಾಹಿತಿ ಕೇಳಲಿದ್ದೇವೆ. ಸಿಬಿಐ, ಇಂಟರ್ಪೋಲ್ಗಳಿಗೂ ಈ ಕುರಿತು ಮಾಹಿತಿ ನೀಡಲಾಗುವುದು” ಎಂದರು.
“ಶಾಲೆಗಳಿಗೆ ಬಂದ ಇಮೇಲ್ ಬೆದರಿಕೆ ಎಲ್ಲಿಂದ ಬಂದಿದೆ ಎಂದು ಈಗಲೇ ಕಂಡು ಹಿಡಿಯುವುದು ಕಷ್ಟ. ಹಾಗಾಗಿ ತಜ್ಞರುಗಳನ್ನೊಳಗೊಂಡು ವಿಶ್ಲೇಷಣೆ ಮಾಡಿಸುವ ಕೆಲಸ ಮಾಡುತ್ತಿದ್ದೇವೆ. ಇಂತಹ ಇಮೇಲ್ ಬೆದರಿಕೆಗಳು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಜಮೈಕಾ, ಮಲೇಷ್ಯಾ ಸೇರಿದಂತೆ ನಾನಾ ರಾಷ್ಟ್ರಗಳಲ್ಲಿ ವರದಿಯಾಗಿವೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೊಲೀಸ್ ವೇಷ ಧರಿಸಿ ಉದ್ಯಮಿ ಮನೆಯಲ್ಲಿ ದರೋಡೆ: ದೂರು ದಾಖಲು
“beeble.comನ ನಾನಾ ಇಮೇಲ್ ಐಡಿಗಳಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ಕೋರಿ ಸಿಬಿಐನ ಇಂಟರ್ಪೋಲ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಡಿಸೆಂಬರ್ 1 ರಂದು ಬೆಂಗಳೂರಿನ 48 ಶಾಲೆಗಳು ಮತ್ತು ನೆರೆಯ ತಾಲೂಕುಗಳ 20 ಶಾಲೆಗಳಿಗೆ ಬೆದರಿಕೆ ಇಮೇಲ್ಗಳು ಬಂದಿದ್ದವು” ಎಂದು ಹೇಳಿದರು.