ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಚೆಕ್ ಅನ್ನು ಅವರ ಕುಟುಂಬದ ಸದಸ್ಯರಿಗೆ ಅಧಿಕಾರಿಗಳ ಮೂಲಕ ಸರ್ಕಾರದ ವತಿಯಿಂದ ನೀಡಲಾಯಿತು. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ಚೆಕ್ ಅನ್ನು ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ”ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ ‘ಕ್ಯಾಪ್ಟನ್ ಎಂ.ವಿ.ಪ್ರಾಂಜಲ್’ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ. ಯೋಧರ ಸಾವು – ನೋವು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು ನಾವಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಸುದ್ದಿ ಸೃಷ್ಟಿಸಿ ಅಪಪ್ರಚಾರ ಮಾಡುವುದರಲ್ಲಿಯೇ ವಿಕೃತ ಆನಂದ ಪಡುತ್ತಿದ್ದಾರೆ. ಅಂತಹವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದಷ್ಟೇ ಹಾರೈಸಬಲ್ಲೆ” ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ “ಕ್ಯಾಪ್ಟನ್ ಎಂ.ವಿ.ಪ್ರಾಂಜಲ್” ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ.
ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ.
ಯೋಧರ ಸಾವು – ನೋವು… pic.twitter.com/I7Zf7B3YnG
— CM of Karnataka (@CMofKarnataka) December 5, 2023
ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ ಕರ್ನಾಟಕದ ವೀರ ಯೋಧ ಪ್ರಾಂಜಲ್ ಮೃತಪಟ್ಟಿದ್ದರು. ಯೋಧನ ಮನೆಯ ಆವರಣದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಸಂಸ್ಕಾರ ನಡೆದಿತ್ತು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಅಲ್ಲಿಗೆ ಭೇಟಿ ನೀಡಿ, ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದಿದ್ದರು. ಸಂಬಂಧಿಕರು ಹಾಗೂ ಸಹಸ್ರಾರು ಸಾರ್ವಜನಿಕರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆದಿತ್ತು.
ಪರಿಹಾರ ವಿತರಣೆ ವಿಚಾರದಲ್ಲಿ ಗೊಂದಲ
ಹುತಾತ್ಮ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಹೆಸರನ್ನು ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತ ಹಾಗೆ ಮಾತನಾಡಿದ್ದರು. ಅಲ್ಲದೇ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಕುಟುಂಬಕ್ಕೆ ಪರಿಹಾರದ ಕಾಲಮಿತಿ ಕುರಿತು ಪತ್ರಕರ್ತರು ಕೇಳಿದಾಗ, ಪರಿಹಾರವನ್ನು ಯಾರು, ಯಾವಾಗ ಘೋಷಿಸಿದರು ಎಂದು ಸಿದ್ದರಾಮಯ್ಯ ಸುದ್ದಿಗಾರರನ್ನು ಕೇಳಿದ್ದರು. ಇದನ್ನೇ ಬಳಸಿಕೊಂಡಿದ್ದ ಬಿಜೆಪಿ, ‘ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ಹಿಂದೆಂದೂ ನಡೆದುಕೊಂಡಿಲ್ಲ. ಯೋಧನ ಸಾವಿನ ವಿಚಾರದಲ್ಲಿ ತಮ್ಮ ಹೀನ ಮನಸ್ಥಿತಿಯನ್ನು ತೋರಿಸಿದ್ದಾರೆ’ ಎಂದು ದೂರಿತ್ತು.
ಆ ಬಳಿಕ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 (ಐವತ್ತು ಲಕ್ಷ) ಪರಿಹಾರ ಧನವನ್ನು ಸಿಎಂ ಸಿದ್ದರಾಮಯ್ಯ ಮಂಜೂರು ಮಾಡಿರುವುದಾಗಿ ತಿಳಿಸಿದ್ದರು. ಮಂಜೂರಾತಿ ಆದೇಶ ಪ್ರತಿಯನ್ನೇ ಸಿಎಂ ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಲ್ಲದೇ, ಡಿ.5ರಂದು 50 ಲಕ್ಷ ಪರಿಹಾರದ ಚೆಕ್ ಅನ್ನು ಯೋಧನ ಕುಟುಂಬಕ್ಕೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದರು. ಅದರಂತೆಯೇ ಇಂದು ರಾಜ್ಯ ಸರ್ಕಾರ 25 ಲಕ್ಷ ರೂಪಾಯಿಗಳ ಎರಡು ಚೆಕ್ ಅನ್ನು ವಿತರಿಸಿದೆ.