ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣವನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವು ವಹಿಸಿಕೊಳ್ಳಬೇಕು. ಲಾಲಾ ಲಜಪತ್ ರಾಯ್ ಅವರು ಹೇಳಿರುವಂತೆ, ‘ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಸರ್ಕಾರಿ ಖಜಾನೆಯ ಮೊದಲ ಆದ್ಯತೆಯಾಗಬೇಕು’ ಎಂದು ಎಐಡಿಎಸ್‌ಒ ಒತ್ತಾಯಿಸಿದೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕದಲ್ಲಿ ಜನಪರ ಶಿಕ್ಷಣ ನೀತಿಯನ್ನು ರೂಪಿಸುವ ಕುರಿತು ರಾಜ್ಯ ಶಿಕ್ಷಣ ನೀತಿ ಆಯೋಗ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಪ್ರತಿನಿಧಿಗಳು ಭಾವಹಿಸಿ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ಎನ್‌ಇಪಿ-2020ಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ನೀಲಿನಕ್ಷೆಯಾಗಿರುವ ಎನ್‌ಇಪಿ-2020ನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಈಗಾಗಲೇ ಅನುಷ್ಠಾನಗೊಳಿಸಿರುವ, ಆರ್ಥಿಕ ಸ್ವಾಯತ್ತ ಸಂಸ್ಥೆಗಳನ್ನು ಕೊನೆಗಾಣಿಸಬೇಕು. ವಿಲೀನೀಕರಣದ ಹೆಸರಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಮುಚ್ಚುವಿಕೆಯನ್ನು ಕೈಬಿಡಬೇಕು” ಎಂದು ಆಗ್ರಹಿಸಿದ್ದಾರೆ.
“ಕೌಶಲ್ಯ ಅಭಿವೃದ್ಧಿಯ ಹೆಸರಿನಲ್ಲಿ ಒದಗಿಸಲಾಗುವ ವೃತ್ತಿ ಶಿಕ್ಷಣವು ಶಿಕ್ಷಣದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಕಲಿಯಬೇಕೆಂಬ ಬಣ್ಣದ ಮಾತಿನೊಂದಿಗೆ, ಕಲಾವಿಭಾಗದ ವಿದ್ಯಾರ್ಥಿಯು ಕಡ್ಡಾಯವಾಗಿ ವಿಜ್ಞಾನದ ವಿಷಯವನ್ನು, ವಿಜ್ಞಾನದ ವಿದ್ಯಾರ್ಥಿಯು ಕಡ್ಡಾಯವಾಗಿ ವಾಣಿಜ್ಯ ವಿಭಾಗದ ವಿಷಯವನ್ನು ಕಲಿಯಲು ಒತ್ತಾಯಪಡಿಸುವ ಬಹು ಶಿಸ್ತೀಯ ಪದ್ದತಿಯನ್ನು ಹೇರಲಾಗುತ್ತಿದೆ. ಇದು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಪೂರಕ ವಾತಾವರಣವನ್ನು ನಿರ್ಮಿಸುವ ಬದಲು, ಕಾಲೇಜನ್ನು ತೊರೆಯಲು ಉತ್ತೇಜನ ನೀಡುತ್ತದೆ. ಆ ಪದ್ದತಿಯನ್ನು ಕೈಬಿಡಬೇಕು” ಎಂದು ಒತ್ತಾಯಿಸಿದ್ದಾರೆ.
“ಮೂಲಭೂತವಾಗಿ, ಸರ್ಕಾರವು ಸಾರ್ವಜನಿಕ ಶಿಕ್ಷಣಗಳು ಸಂಸ್ಥೆಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಜನರ ತೆರಿಗೆ ದುಡ್ಡನ್ನು, ಶಿಕ್ಷಣಕ್ಕಾಗಿ ಆದ್ಯತೆಯ ಮೇರೆಗೆ ವಿನಿಯೋಗಿಸಬೇಕು. ಪಠ್ಯಕ್ರಮದ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ-ಧರ್ಮನಿರಪೇಕ್ಷ ಅಂಶಗಳನ್ನು ಬಲಪಡಿಸಬೇಕು. ಪ್ರತಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಧ್ಯಾಪಕರು ಸೇರಿದಂತೆ ಕಟ್ಟಡ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದೆ.
ಸಭೆಯಲ್ಲಿ ಸಂಘಟನೆಯ ಸುಭಾಷ್, ಚಂದ್ರಕಲಾ ಹಾಗೂ ನಿತಿನ್ ಭಾಗವಹಿಸಿದ್ದರು.