ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗಲಾಗಿದ್ದಾರೆ. ಮತ್ತೊಂದಡೆ ಅಳಿದು ಉಳಿದಿರುವ ಬೆಳೆಗೆ ಬೆಲೆಯೂ ಸಿಗದೆ ರೈತರು ನಷ್ಟ ಅನುಭವಿಸಿದ್ದಾರೆ. ರೈತರು ಸಂಕಷ್ಟ ಎದುರಿಸುತ್ತಿದ್ದು, ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು. “ಸಂಕಷ್ಟ ಸಮಯದಲ್ಲಿ ಬ್ಯಾಂಕುಗಳು ರೈತರಿಗೆ ಸಾಲಕಟ್ಟಿ ಹಾಗೂ ಸಾಲ ನವೀಕರಣ ಮಾಡಿಕೊಳ್ಳಬೇಕೆಂದು ರೈತರಿಂದ ಕಾಲಿ ಪತ್ರದಲ್ಲಿ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರು ಭಯಭೀತರಾಗಿ ಆತ್ಮಹತ್ಯೆ ದಾರಿಯನ್ನು ಹಿಡಿಯುವ ಆಂತಕವಿದೆ” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, “ಈಗಾಗಲೇ ಕೈ ಸಾಲ ಮಾಡಿಕೊಂಡು ರೈತರು ಜಮೀನುಗಳ ಮೇಲೆ ಬಂಡವಾಳ ಹಾಕಿದ್ದರು. ಆದರೆ ಹಾಕಿದ್ದ ಪಸಲು ಕೈಗೆ ಸಿಗದೆ ನಷ್ಟ ಅನುಭವಿಸಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಂಕುಗಳಿಗೆ ಸಾಲ ಕಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ, ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಮಧ್ಯಪ್ರದೇಶಿಸಿ, ರೈತರಿಗೆ ಬ್ಯಾಂಕುಗಳು ನೋಟೀಸ್ ನೀಡುವುದು, ಸಾಲ ವಸೂಲಿ ಮಾಡುವುದನ್ನು ತಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಲಕ್ಷ್ಮಿಪುರ ವೆಂಕಟೇಶ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಕಮಲಮ್ಮ, ಮುಖಂಡರುಗಳಾದ ವಾಜಮಂಗಲ ಮಾದೇವು ದೊಡ್ಡ ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ಮಾರ್ಬಳ್ಳಿ ನೀಲಕಂಠಪ್ಪ, ಸಾತಗಳ್ಳಿ ಬಸವರಾಜು, ಚುಂಚರಾಯನಹುಂಡಿ ಪ್ರಕಾಶ್ ಸೇರಿದಂತೆ ಹಲವರು ಇದ್ದರು.