ನಗರದ ಅತ್ಯಂತ ಜನಪ್ರಿಯ ಆಹಾರ ಮೇಳಗಳಲ್ಲಿ ಒಂದಾದ ಅವರೆಬೇಳೆ ಮೇಳಕ್ಕೆ ಸಿದ್ಧತೆಗಳು ಪ್ರಾರಂಭವಾಗಿದೆ. ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ಮೇಳವು ಜನವರಿ 5 ರಿಂದ 9 ರವರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಮೇಳದ 24ನೇ ಆವೃತ್ತಿ ಇದಾಗಿದ್ದು, ಅವರೆಬೇಳೆಯಿಂದ ತಯಾರಿಸಿದ ವಿಶಿಷ್ಟ ಆಹಾರ ಉತ್ಪನ್ನಗಳಾದ ಅವರೆ ದೋಸೆ, ಪಾಯಸ, ವಡೆ, ಮಂಚೂರಿಯನ್, ಪಫ್, ಹಲ್ವಾ, ಅವರೆ ಐಸ್‌ಕ್ರೀಂ ಸೇರಿದಂತೆ ನೂರಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿರುತ್ತವೆ.
ವಿವಿ ಪುರಂನಲ್ಲಿರುವ ಫುಡ್ ಸ್ಟ್ರೀಟ್ ಇಷ್ಟು ದಿನ ಮೇಳದ ಸ್ಥಳವಾಗಿತ್ತು, ಕಳೆದ ವರ್ಷ ಫುಡ್ ಸ್ಟ್ರೀಟ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಜತೆಗೆ ಹೆಚ್ಚಿನ ಜನಸಂದಣಿಯ ಕಾರಣ ಈ ಮೇಳವನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.
ಕಳೆದ ವರ್ಷದ ಮೇಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗಿತ್ತು. ಅಲ್ಲದೇ, ಹೆಚ್ಚಿನ ಸರತಿ ಸಾಲು ಇದ್ದ ಕಾರಣ ಅನೇಕ ಜನರು ತಮಗೆ ಬೇಕಾದ ಆಹಾರವನ್ನು ಪಡೆಯಲು ಸಾಧ್ಯವಾಗಲಿಲ್ಲ. ಐದು ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರು. ಆದರೆ, ಈ ವರ್ಷ ಅಂತಹ ಸಂದರ್ಭಗಳು ಮರುಕಳಿಸದಂತೆ ತಪ್ಪಿಸಲು ಆಯೋಜಕರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.
“ಕಳೆದ ವರ್ಷ ನಿರೀಕ್ಷೆ ಮಾಡದಷ್ಟು ಜನರು ಅವರೆ ಬೇಳೆ ಮೇಳಕ್ಕೆ ಬಂದಿದ್ದರು. ಆಗ ನಾವು ಸಂಪೂರ್ಣವಾಗಿ ಸಿದ್ಧರಾಗಿರಲಿಲ್ಲ. ಈ ವರ್ಷ ಮೇಳವನ್ನು ಸವಿಯದೆ ಯಾರೂ ಮನೆಗೆ ಹೋಗದಂತೆ ಉತ್ತಮ ತಯಾರಿ ನಡೆಸುತ್ತಿದ್ದೇವೆ. ಅದಕ್ಕಾಗಿ ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಇರುವ ನ್ಯಾಷನಲ್ ಕಾಲೇಜ್ ಮೈದಾನವನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎಂದು ಶ್ರೀ ವಾಸವಿ ಕಾಂಡಿಮೆಂಟ್ಸ್ ಮಾಲೀಕರು ಸ್ವಾತಿ ಕೆ.ಎಸ್. ಹೇಳಿದ್ದಾರೆ.
“ಕಳೆದ ವರ್ಷ (ನವೀಕರಣ ಕಾರ್ಯದ ಕಾರಣ) ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿತ್ತು. ಈ ವರ್ಷ ಸಂಪೂರ್ಣ ಪ್ರದೇಶವನ್ನು ಬಳಸಿಕೊಳ್ಳುಬಹುದು. ಜತೆಗೆ ಆವರಣದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಕಳೆದ ವರ್ಷ ಅವರೆಬೇಳೆ ಮೇಳದಲ್ಲಿ ಸುಮಾರು 40 ಸ್ಟಾಲ್‌ಗಳಿದ್ದವು. ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಲ್ಲಿರುವ ವಸ್ತುಗಳಿಗೆ ಸುಮಾರು ಐದು ಕೌಂಟರ್‌ಗಳು ಇರುತ್ತವೆ” ಎಂದು ಅವರು ಹೇಳಿದರು.
“ಈ ವರ್ಷ ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ಜತೆಗೆ, ನಿಗದಿತ ಆಸನ ಗೊತ್ತುಪಡಿಸಲಾಗಿದೆ. ಇದಕ್ಕಾಗಿ ಟಿಕೆಟ್‌ಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ₹100 ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಕುಟುಂಬ ಮತ್ತು ಮಕ್ಕಳೊಂದಿಗೆ ಬರುವ ಜನರಿಗೆ ಮತ್ತು ಸರದಿಯಲ್ಲಿ ನಿಲ್ಲಲು ಬಯಸದವರಿಗೆ, ಕುಳಿತುಕೊಳ್ಳುವ ಸ್ಥಳದಲ್ಲಿ ಪ್ರತ್ಯೇಕ ಕೌಂಟರ್‌ಗಳಿರುತ್ತವೆ” ಎಂದು ಅವರು ಹೇಳಿದರು.
“ಗ್ರಾಹಕರು ತಮ್ಮ ಆಹಾರವನ್ನು ಮೇಳದಲ್ಲಿ ತಿನ್ನಬಹುದು. ಜತೆಗೆ, ಅವರೆಕಾಯಿ, ಅವರೆಕಾಳು ಮತ್ತು ಹಿತುಕಿದ ಅವರೆಬೇಳೆಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಅದನ್ನು ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಕರ್ನಾಟಕದಲ್ಲಿ ಅವರೆ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ, ಮೇಳಕ್ಕೆ ರಾಜ್ಯದ ಚಿಂತಾಮಣಿ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಇತರ ಭಾಗಗಳಿಂದ ಹೆಚ್ಚಾಗಿ ಪೂರೈಕೆಯಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಸಿಯೂಟ ಯೋಜನೆಗೆ ಶಾಲಾ ಶಿಕ್ಷಕರ ಬಳಕೆಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ: ರಮೇಶ್ ಬಾಬು
ಕರ್ನಾಟಕದಲ್ಲಿ ಅವರೆಕಾಯಿ ಬೆಳೆ ವಿಫಲ
ಹವಾಮಾನ ವೈಪರೀತ್ಯದಿಂದ ಕರ್ನಾಟಕದಲ್ಲಿ ಸತತ ಎರಡನೇ ವರ್ಷವೂ ಅವರೆಕಾಯಿ ಬೆಳೆ ವಿಫಲವಾಗಿದೆ. ಮಾರುಕಟ್ಟೆಗೆ ಬಂದಿರುವ ಸ್ಟಾಕ್ ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
“ಸದ್ಯ ಮಳೆಯ ಅಭಾವ ಮತ್ತು ಹಠಾತ್ ಚಳಿಯಿಂದಾಗಿ ಅವರೆಕಾಯಿಯ ಗುಣಮಟ್ಟ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿದ್ದೇವೆ. ಅವರೆಕಾಯಿ ಬೆಲೆ ಸದ್ಯ ಕೆ.ಜಿ.ಗೆ ₹60ರಿಂದ ₹80ರ ಆಸುಪಾಸಿನಲ್ಲಿದೆ ಎಂದು ಮಲ್ಲೇಶ್ವರದ ವ್ಯಾಪಾರಿಯೊಬ್ಬರು ಹೇಳಿದರು.