ಬಲಪಂಥೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖ್‌ದೇವ್ ಸಿಂಗ್ ಗೊಗಮೆಡಿಯನ್ನು ಭೀಕರವಾಗಿ ಗುಂಡಿಟ್ಟು ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ, ನಾವು ಹತ್ಯೆ ಮಾಡಿರುವುದಾಗಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ.
ನಿನ್ನೆ ರಾಜಸ್ಥಾನದ ಜೈಪುರದಲ್ಲಿ ಭೇಟಿಯ ನೆಪ ಹೇಳಿ ಸುಖದೇವ್ ಮನೆಗೆ ಆಗಮಿಸಿದ್ದ ನಾಲ್ವರು ಅಪರಿಚಿತರು, ಮಾತುಕತೆ ನಡೆಸುತ್ತಿದ್ದಂತೆಯೇ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಜೊತೆಗೆ ಸುಖ್‌ದೇವ್ ಪಕ್ಕದಲ್ಲಿದ್ದವರ ಮೇಲೂ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದರು. ಸುಖದೇವ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
#SukhdevSinghGogamedi Murder | Crowd gathers on Agra Road Highway in Bassi, protesting the murder of a prominent Rajput leader.
Traffic is impacted, with police personnel on-site. #Rajasthan pic.twitter.com/8vvK7S4p9U
— NDTV (@ndtv) December 6, 2023
ಸುಖ್‌ದೇವ್ ಹತ್ಯೆಯ ಸಿಸಿಟಿವಿ ವಿಡಿಯೋ ಈಗಾಗಲೇ ಬಹಿರಂಗವಾಗಿದ್ದು, ಹತ್ಯೆಗೈದವರನ್ನು ರಾಜಸ್ಥಾನ ಪೊಲೀಸರು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
शेरगढ़ के चाबा गांव में टायर जला कर रोड़ को किया जाम
भाजपा राज की झलक 🥺😭 pic.twitter.com/LKsRmvhzEG
— Deepak Purohit (@Dviratpurohit23) December 6, 2023
ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಗೊಗಮೆಡಿ ನಾಯಕ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದಲೂ ಬೆದರಿಕೆ ಎದುರಿಸಿದ್ದರು. ಇದೀಗ ಗೋಲ್ಡಿ ಬ್ರಾರ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ.
ರಾಜಸ್ಥಾನ ಬಂದ್‌ಗೆ ಕರೆ
ಗೊಗಮೆಡಿ ಅವರ ಹತ್ಯೆ ಘಟನೆ ಬೆನ್ನಲ್ಲೇ ರಾಜಸ್ಥಾನದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿದ್ದು, ಇಂದು ರಾಜಸ್ಥಾನ ಬಂದ್‌ಗೆ ಕರ್ಣಿ ಸೇನೆ ಕರೆ ನೀಡಿದೆ. ಗೊಗಮೆಡಿ ಬೆಂಬಲಿಗರು ಜೈಪುರದ ಆಸ್ಪತ್ರೆಯ ಹೊರಭಾಗದಲ್ಲಿ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟಿಸಿದ್ದಾರೆ. ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ.
‘ಆರೋಪಿಗಳ ಅಡಗು ತಾಣಗಳ ಮೇಲೆ ದಾಳಿ ನಡೆಸಿ ಶೀಘ್ರವಾಗಿ ಬಂಧಿಸಲಾಗುವುದು. ಯಾರೂ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು. ಎಲ್ಲರೂ ಶಾಂತಿ ಕಾಪಾಡುವಂತೆ’ ರಾಜಸ್ಥಾನದ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ಮನವಿ ಮಾಡಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಕಂಡ ಬಳಿಕ ಇದೀಗ ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.
VIDEO | “This incident is condemnable. This is the result of complete deterioration of law and order in Rajasthan under Congress’ rule,” says Union Law minister @arjunrammeghwal on murder of Rashtriya Rajput Karni Sena chief Sukhdev Singh Gogamedi in Jaipur. pic.twitter.com/Xw0rMNS7tS
— Press Trust of India (@PTI_News) December 6, 2023
ಬಿಜೆಪಿಯ ವಕ್ತಾರ ಶೆಹಝಾದ್ ಪೂನಾವಾಲಾ, ಸುಖದೇವ್ ಸಿಂಗ್ ಗೊಗಮೆಡಿ ಈ ಮೊದಲು ಮಾತನಾಡಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಹಿಂದಿನ ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಭದ್ರತೆಯನ್ನು ಕಡಿತಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದರು.
ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮತ್ತು ಆರ್‌ಜೆಡಿಯ ರಾಜ್ಯವರ್ಧನ್ ರಾಥೋಡ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ನಾಯಕರು ಹತ್ಯೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ, ‘ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರಾಜಸ್ಥಾನ ಜಂಗಲ್ ರಾಜ್‌ಗೆ ಮರಳಿದೆ’ ಎಂದು ಕಿಡಿಕಾರಿದ್ದಾರೆ.
‘ಪದ್ಮಾವತ್’ ಸಿನಿಮಾದ ವಿರುದ್ಧ ಪ್ರತಿಭಟಿಸಿದ್ದ ಸುಖ್‌ದೇವ್ ಸಿಂಗ್ ಗೊಗಮೆಡಿ
ಹತ್ಯೆಯಾಗಿರುವ ಸುಖದೇವ್ ಸಿಂಗ್ ಗೊಗಮೆಡಿ, ಮೊದಲು ಲೋಕೇಂದ್ರ ಸಿಂಗ್ ಕಲ್ವಿಯವರ ರಜಪೂತ್ ಕರ್ಣಿ ಸೇನೆಯ ಭಾಗವಾಗಿದ್ದರು. ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದರು. ಆನಂತರ ಆಂತರಿಕ ಗಲಾಟೆಯಿಂದ ಗೊಗಮೆಡಿ ತಮ್ಮದೇ ಪ್ರತ್ಯೇಕ ಕರ್ಣಿ ಸೇನೆಯನ್ನು ಕಟ್ಟಿದ್ದರು. ಗ್ಯಾಂಗ್‌ಸ್ಟರ್ ಆನಂದ್‌ಪಾಲ್ ಎನ್‌ಕೌಂಟರ್ ಪ್ರಕರಣದ ನಂತರ ರಾಜಸ್ಥಾನದಲ್ಲಿ ಗೊಗಮೆಡಿ ಬಲಪಂಥೀಯ ಗುಂಪಿನ ನಾಯಕನಾಗಿ ಗುರುತಿಸಿಕೊಂಡರು.
ಕಳೆದ ವರ್ಷ ಇದೇ ಕರ್ಣಿ ಸೇನಾ ಸಂಘಟನೆ ಸದಸ್ಯ ರೋಹಿತ್ ಸಿಂಗ್ ರಜಪೂತ್ (28) ಅವರನ್ನು ಸಾರ್ವಜನಿಕವಾಗಿ ಮೂವರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ಇಟಾರ್ಸಿ ಪಟ್ಟಣದ ಕರ್ಣಿಸೇನಾ ಕಾರ್ಯದರ್ಶಿಯಾಗಿದ್ದ ರೋಹಿತ್‌ನನ್ನು ಪಟ್ಟಣ ಪಂಚಾಯತ್ ಕಚೇರಿಯ ಎದುರಿನಲ್ಲೇ ಕೊಲೆ ಮಾಡಲಾಗಿತ್ತು. ಕೊಲೆಯನ್ನು ತಡೆಯಲು ಬಂದ ರೋಹಿತ್ ಸ್ನೇಹಿತ ಸಚಿನ್ ಪಟೇಲ್‌ಗೂ ಚಾಕುವಿನಿಂದ ಇರಿಯಲಾಗಿತ್ತು.