ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಹೊರ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬಂದು, ಅವರಿಗೆ ಮೂಲಭೂತ ಸೌಲಭ್ಯ ಒದಗಿಸದೇ ದುಡಿಸಿಕೊಳ್ಳಲಾಗುತ್ತಿದೆ. ಕಾನೂನು ಬಾಹಿರವಾಗಿ ಕಡಿಮೆ ದುಡ್ಡು ನೀಡಿ ದುಡಿಸಿಕೊಳ್ಳುತ್ತಿರುವ ಮಾಲೀಕರ ಮೇಲೆ ಮತ್ತು ಕಾರ್ಮಿಕ ಅಧಿಕಾರಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ಪ್ರಭುಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಕಟ್ಟಡ ಕಾರ್ಮಿಕರು ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಅಸಂಘಟಿತ ವಲಯದಲ್ಲಿ ಹೊರ ರಾಜ್ಯದವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಅಂತವರ ಜಾಡನ್ನು ಸರ್ಕಾರ ಗುರುತಿಸಬೇಕಾಗಿದೆ. ಹೊರ ರಾಜ್ಯದ ಕಾರ್ಮಿಕರ ನುಸುಳುವಿಕೆಯನ್ನು ತಡೆಗಟ್ಟುವಲ್ಲಿ ಕಾರ್ಮಿಕ ಇಲಾಖೆಯು ಸಂಪೂರ್ಣ ವಿಫಲವಾಗಿದೆ. ಇಂತಹ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರು ಮೌನವಹಿಸಿದ್ದಾರೆ. ಅವರು ಮೌನ ವಹಿಸಿದ್ದರ ಫಲವಾಗಿ ಇಂದು ಇಂತಹ ದುಷ್ಕೃತ್ಯಗಳು ನಡೆದಿವೆ” ಎಂದಿದ್ದಾರೆ.
ಈಗಾಗಲೇ ಹೊರ ರಾಜ್ಯದ ಕಾರ್ಮಿಕರನ್ನು ಮೆಕ್ಕೆಜೋಳ ಸಂಗ್ರಹಿಸಿಟ್ಟದ್ದ ಕಬ್ಬಿಣದ ಮೇಲ್ಪಟ್ಟ ಕುಸಿದು ಬಿದ್ದು ಕಳೆದ ರಾತ್ರಿಯಿಂದ ಜೀವನ್ಮರಣದಲ್ಲಿ ನರಳುತ್ತಿದ್ದ ಬಿಹಾರದ ಎಂಟು ಕಾರ್ಮಿಕರ ಪೈಕಿ, ಏಳು ಜನ ಕಾರ್ಮಿಕರು ದಾರುಣ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಗರದ ಹೊರ ಭಾಗದ ಕೈಗಾರಿಕಾ ಪ್ರದೇಶದ ರಾಜಗುರು ಫುಡ್ಸ್ ಗೋದಾಮಿನಲ್ಲಿ ನಡೆದಿದೆ. ಅದರಂತೆ ಇನ್ನು ಅನೇಕ ಘಟನೆಗಳು ಕೈಗಾರಿಕೆಗಳಲ್ಲಿ ಘಟನೆಗಳು ಸಂಭವಿಸಿರಬಹುದು. ಅವುಗಳು ಬೆಳಕಿಗೆ ಬರದಂತೆ ಮಾಲೀಕರು ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಇಂತಹ ಘಟನೆ ಮರುಕಳಿಸಬಾರದು ಎಂದರೆ ಕಾರ್ಮಿಕರ ಸುರಕ್ಷತಾ ಕ್ರಮದ ಜಾಗೃತಿ, ಕಾರ್ಮಿಕರ ಹಕ್ಕುಗಳ, ಕರ್ತವ್ಯ, ಸೌಲಭ್ಯಗಳ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು. ಪ್ರತಿ ತಿಂಗಳಿಗೊಮ್ಮೆ ಕಾರ್ಮಿಕ ಕುಂದು ಕೊರತೆ ಸಭೆ ನಡೆಸಬೇಕು. ಅದರಂತೆ ಕಾರ್ಮಿಕ ಅಧಿಕಾರಿಗಳ ಮೇಲೆ ಹಾಗೂ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು. ಕಾರ್ಮಿಕರ ಕುಟುಂಬಕ್ಕೆ ಹೆಚ್ಚು ಪರಿಹಾರ ಧನ ನೀಡಬೇಕೆಂದು ಪಾಟೀಲ್ ಆಗ್ರಹಿಸಿದ್ದಾರೆ.