ಅಂಬೇಡ್ಕರ್‌ವಾದ ಮುನ್ನಡೆಸುವವರು ಯಾರು?

Date:

Advertisements

ಬಾಬಾ ಸಾಹೇಬರನ್ನು ಅರ್ಥೈಸಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕು? ಅವರು ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದವರು ಯಾರು?

“ಯಾರಾದರೂ ನಿಮ್ಮನ್ನು ಅರಮನೆಗೆ ಆಹ್ವಾನಿಸಿದರೆ ಖಂಡಿತ ಹೋಗಿ. ಆದರೆ ಅದಕ್ಕಾಗಿ ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಹೋಗಬೇಡಿ. ಒಂದು ವೇಳೆ ಆ ದೊರೆಯು ನಿಮ್ಮೊಡನೆ ಜಗಳ ಮಾಡಿ, ಬೈದು, ಅವನ ಅರಮನೆಯ ಜಗ್ಗುಲಿಯಿಂದ ಹೊರಗೆ ಹಾಕಿದರೆ ನೀವು ಎಲ್ಲಿಗೆ ಹೋಗುವಿರಿ? ನೀವು ನಿಮ್ಮನ್ನೇ ಮಾರಾಟ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಿ. ಆದರೆ ಅದಕ್ಕಾಗಿ ನಿಮ್ಮ ಸಂಘಟನೆಯನ್ನು, ಸಮುದಾಯವನ್ನು ನಾಶ ಮಾಡಬೇಡಿ. ನನಗೆ ಹೊರಗಿನವರಿಂದ ಅಪಾಯ ಕಾಣುತ್ತಿಲ್ಲ, ಬದಲಿಗೆ ನಮ್ಮದೇ ಜನರಿಂದ ಅಪಾಯವಿದೆ” ಎಂದಿದ್ದರು ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್.

ಇಂದು ಬಾಬಾ ಸಾಹೇಬರ ಮಹಾಪರಿನಿಬ್ಬಾಣದ ದಿನ. ಬಾಬಾ ಸಾಹೇಬರು ನಮ್ಮನ್ನಗಲಿ 67 ವರ್ಷಗಳು ಗತಿಸಿದವು. ಈ ದೇಶದಲ್ಲಿ ಇಡೀ ವಿಶ್ವದಲ್ಲಿ ತಮ್ಮ ಜ್ಞಾನ ಮತ್ತು ವಿಚಾರಗಳಿಂದ ಅವರು ಜೀವಂತವಾಗಿದ್ದಾರೆ. ಇದರರ್ಥ ಬಾಬಾಸಾಹೇಬರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ ಹೊರತು ವಿಚಾರಗಳಿಂದ ಅವರು ಸದಾ ನಮ್ಮ ಜೊತೆಗಿದ್ದಾರೆ. ಈ ಸಂದರ್ಭದಲ್ಲಿ ಬಾಬಾ ಸಾಹೇಬರು ನಮಗೆ ನೀಡಿ ಹೋದ ಕರ್ತವ್ಯಗಳೇನು? ಅವರು ದೇಶದ ಸರ್ವ ಸಮುದಾಯಗಳಿಗೂ ವಿಮೋಚನೆಗೈದು, ಅದಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ ಕೊನೆಗಾಲದಲ್ಲಿ ನಮಗೆ ನೀಡಿದ ಎಚ್ಚರಿಕೆಯ ಸಂದೇಶಗಳೇನು? ಎನ್ನುವ ಅನೇಕ ವಿಚಾರಗಳನ್ನು ಇಂದು ನಾವು ಮರು ಅವಲೋಕನ ಮಾಡಿಕೊಳ್ಳಬೇಕಾಗಿದೆ.

Advertisements

ಇಂದು ಅಂಬೇಡ್ಕರರ ಹೆಸರಿನಲ್ಲಿ ಸಾವಿರಾರು, ಲಕ್ಷಾನುಗಟ್ಟಲೆ ಸಂಘ, ಸಂಸ್ಥೆಗಳು ಕಟ್ಟಿಕೊಂಡು ನಮಗೆ ಬೇಕಾದ ಸರ್ಕಾರಿ ಹುದ್ದೆಗಳನ್ನು ಪಡೆದು, ನಮ್ಮ ಮನಸ್ಸಿಗೆ ಬಂದಂತೆ ಸ್ವತಂತ್ರವಾಗಿ, ನಿರ್ಭಯವಾಗಿ ಜೀವಿಸುತ್ತಿದ್ದೇವೆ. ಬಂಗಲೆಗಳಲ್ಲಿ ವಾಸಿಸುತ್ತಿದ್ದೇವೆ. ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇವೆ ಎನ್ನುವುದಾದರೆ ಅದು ನಮ್ಮೆಲ್ಲರಿಗೂ ಈ ದೇಶದ ಭಾರತ ಭಾಗ್ಯವಿದಾತ ಬಾಬಾ ಸಾಹೇಬರು ನೀಡಿದ ಭಿಕ್ಷೆ. ಅವರ ಋಣ, ಅವರ ತ್ಯಾಗ, ಬಲಿದಾನ ಮತ್ತು ಅವರ ವಿಚಾರಗಳನ್ನು ಮರೆತರೆ ಭಾರತಕ್ಕೂ ಮತ್ತು ಭಾರತೀಯರಿಗೂ ಭವಿಷ್ಯವಿಲ್ಲ; ಇದು ಸಾರ್ವಕಾಲಿಕ ಸತ್ಯ.

ಈ ದಿನ ಎಲ್ಲವನ್ನೂ ಅವರಿಂದ ಪಡೆದ ನಾವು, ಅವರಿಗಾಗಿ ಮಾಡಿದ್ದೇನು? ಅವರ ಹಾದಿಯಲ್ಲಿ ನಡೆದಿದ್ದೇವೆಯೇ? ಅವರು ಹೇಳಿದ ಹಾಗೆ ಬದುಕಿದ್ದೇವೆಯೇ? ಎಂಬ ಹಲವಾರು ಪ್ರಶ್ನೆಗಳನ್ನು ಇಂದು ನಮ್ಮನ್ನೇ ನಾವು ಕೇಳಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಎಂದರೆ ಯಾರು? ಎಂದು ನಮಗೆಲ್ಲರಿಗೂ ಗೊತ್ತು. ಆದರೆ ಅಂಬೇಡ್ಕರ್ ಎಂದರೆ ಏನು ಎಂಬುದು ನಮಗೆ ಗೊತ್ತಿಲ್ಲ. ಇದು ಬಹುಜನ ಸಮಾಜದ ಬಹುದೊಡ್ಡ ದುರಂತ. ಅವರು ತಮ್ಮ ಜೀವನ ಪರ್ಯಂತ ಏತಕ್ಕಾಗಿ ಶ್ರಮಿಸಿದರು ಎಂಬುದನ್ನು ಎಲ್ಲಾ ಶೋಷಿತ ಸಮುದಾಯಗಳು ಇಂದು ಮರೆತು, ಅವರು ಏನನ್ನು ಮಾಡಬೇಡಿರಿ ಎಂದಿದ್ದರೋ ಅದನ್ನೇ ಶಿರಸಾವಹಿಸಿ ಪಾಲಿಸುತ್ತಿವೆ. ಇದೇನಾ ನಾವು ಬಾಬಾ ಸಾಹೇಬರಿಗೆ ಕೊಡುತ್ತಿರುವ ಗೌರವ?

ಬಾಬಾ ಸಾಹೇಬರು ಜಲಂಧರ್‌‌ನಲ್ಲಿ ದಿನಾಂಕ 27.10.1951ರಲ್ಲಿ ಭಾಷಣ ಮಾಡುತ್ತಾ, “ನನ್ನ ಅಂತರಾಳದ ನೋವು ಮತ್ತು ದುಃಖವನ್ನು ನೀವು ಅರಿಯಲಾರಿರಿ. ನನ್ನ ಜನ ರಾಜಕೀಯ ಅಧಿಕಾರವನ್ನು ಬೇರೆ ಸಮುದಾಯದರೊಡನೆ ಸಮನಾಗಿ ಹಂಚಿಕೊಂಡು ಆಳುವ ವರ್ಗವಾಗುವುದನ್ನು ನಾನು ನನ್ನ ಜೀವಿತದಲ್ಲಿ ಕಣ್ಣಾರೆ ನೋಡಬೇಕೆಂದು ಇಚ್ಛಿಸಿದೆ. ಆದರೆ ಅದು ಸಾಧ್ಯವಾಗದು ಎನಿಸುತ್ತಿದೆ. ನನ್ನ ಹೋರಾಟದ ಫಲವನ್ನು ಕೆಲವೇ ಮಂದಿ ಅನುಭವಿಸುತ್ತಾ ಸಮುದಾಯದ ಹಿತವನ್ನು ಮರೆತಿದ್ದಾರೆ. ನನ್ನ ಅವಿದ್ಯಾವಂತ ಸಮುದಾಯದ ಗತಿ ಏನೆಂದು ನೆನೆದು ನೊಂದಿದ್ದೇನೆ. ನಾನು ಈವರೆಗೆ ಏನನ್ನು ಸಾಧಿಸಿದ್ದೇನೊ ಅವೆಲ್ಲವನ್ನು ಘೋರವಾದ ನೋವು ಮತ್ತು ಕೊನೆಯಿಲ್ಲದ ಕಷ್ಟಗಳ ಹಾದಿಯಲ್ಲಿ ಜೀವತದುದ್ದಕ್ಕೂ ವಿರೋಧಿಗಳೊಡನೆ ಹೋರಾಡುತ್ತಾ ಸಾಧಿಸಿದ್ದೇನೆ. ತುಂಬಾ ಶ್ರಮವಹಿಸಿ ಈ ವಿಮೋಚನಾ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಎಷ್ಟೇ ಅಪಾಯ ಅಡೆ, ತಡೆಗಳು ಬಂದರೂ ಅದು ಹಾಗೆ ಮುಂದೆ ಸಾಗಲಿ. ಒಂದು ವೇಳೆ ಮುಂದಕ್ಕೆಳೆಯಲು ಶಕ್ತಿ ಇಲ್ಲದಿದ್ದರೆ, ಅಲ್ಲಿಯೇ ಬಿಟ್ಟು ಬಿಡಿ. ಆದರೆ ಯಾವುದೇ ಕಾರಣಕ್ಕೋ ಹಿಂದಕ್ಕೆ ತಳ್ಳಬೇಡಿ” ಎಂದಿದ್ದರು. ಬಾಬಾ ಸಾಹೇಬರ ಈ ನೋವಿನ ಮಾತು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ? ಹಾಗಾದರೆ ಬಾಬಾ ಸಾಹೇಬರು ಎಳೆದು ತಂದಿರುವ ವಿಮೋಚನಾ ರಥವಾದರೂ ಯಾವುದು ಎಂಬುದು ನಮಗೆ ತಿಳಿದಿದೆಯೇ? ಅದನ್ನು ಮುನ್ನಡೆಸುವ ವಿಚಾರದಲ್ಲಿ ಸಾಧ್ಯವಾದರೆ ಮುಂದಕ್ಕೆಳಿಯಿರಿ ಎಂಬ ಸಂಶಯ ಬಾಬಾ ಸಾಹೇಬರನ್ನು ಕಾಡಿದ್ದೇಕೆ?- ಈ ವಿಚಾರಗಳನ್ನು ಪ್ರಸ್ತುತ ವಿದ್ಯಮಾನದಲ್ಲಿಯೂ ನಾವುಗಳು ಚಿಂತಿಸಬೇಕು.

ಬಾಬಾಸಾಹೇಬರು ಕಣ್ಣೀರಿಡುತ್ತಾ ಕೊನೆ ಉಸಿರುಳೆದಿದ್ದು ಏಕೆ? ಸಂತೋಷದಿಂದ ತಮ್ಮ ಅನುಯಾಯಿಗಳ ಕೈಗೆ ವಿಮೋಚನಾ ರಥದ ಜವಾಬ್ದಾರಿ ನೀಡಿ ನೆಮ್ಮದಿಯಿಂದ ಏಕೆ ಅವರು ಪರಿನಿಬ್ಬಾಣ ಹೊಂದಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಕಂಡುಕೊಂಡರೆ ಅಂಬೇಡ್ಕರವಾದ ಅಂದರೇನು? ಅಂಬೇಡ್ಕರ್ ಅವರನ್ನು ನಿಜವಾಗಿ ಯಾವ ದೃಷ್ಟಿಯಲ್ಲಿ ನೋಡಬೇಕು, ಅರ್ಥೈಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಇಲ್ಲದಿದ್ದರೆ ಅಂಬೇಡ್ಕರ್ ಎಂದರೆ ಹೀಗೆ ಎನ್ನುವ ಒಣ ಜಿಜ್ಞಾಸೆ ಮತ್ತು ಚರ್ಚೆಯಲ್ಲಿಯೇ ಕಾಲ ಕಳಿಯಬೇಕಾಗುತ್ತದೆ.

ಅಂಬೇಡ್ಕರ್ ವಿಚಾರವಾಗಿ ಬಹುಜನರೊಳಗೆ ಕವಿದಿರುವ ಮೌಢ್ಯ ಆದಷ್ಟು ಬೇಗ ಹೊರಹೋಗಬೇಕು. ಅಂಬೇಡ್ಕರ್ ಅವರನ್ನು ಪಡೆದ ನಾವೆಲ್ಲರೂ ಧನ್ಯರು ಎಂದು ಹೇಳುವ ನಾವುಗಳು, ನಮ್ಮನ್ನು ಪಡೆದ ಆ ಮಹಾ ಚೇತನ ಬಾಬಾಸಾಹೇಬರು ಧನ್ಯರಾಗಿದ್ದಾರೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಬಾಬಾ ಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಈ ದೇಶದ ಸಮಸ್ತ ಶೋಷಿತ ಸಮುದಾಯಕ್ಕಾಗಿ ನೀಡಿದ ಸಂದೇಶವೆಂದರೆ- “ನನ್ನ ಜೀವನವೇ ನಾನು ನಿಮಗೆ ನೀಡುವ ನನ್ನ ಸಂದೇಶ” ಎಂಬುದಾಗಿದೆ. ಭೀಕರ ಕಷ್ಟಗಳನ್ನು ಲೆಕ್ಕಿಸದೆ ಬಾಬಾ ಸಾಹೇಬರು ಹೋರಾಡಿದರು. ಇದರಿಂದ ಮಾತ್ರ, ಅಂದರೆ ಹೋರಾಟದಿಂದ ಮಾತ್ರ ಶೋಷಿತರು ವಿಮೋಚನೆ ಹೊಂದಲು ಸಾಧ್ಯ. ಈ ವಿಚಾರವನ್ನು ಇಂದು ನಾವು ಎಷ್ಟರಮಟ್ಟಿಗೆ ಎಚ್ಚರದಿಂದ ಪಾಲಿಸುತ್ತಿದ್ದೇವೆ?

ಮುಂದುವರಿದು ಬಾಬಾಸಾಹೇಬರು, “ಹೋರಾಟ ಎಂದರೆ ನನ್ನ ದೃಷ್ಟಿಯಲ್ಲಿ, ಸ್ವತಂತ್ರ ರಾಜ್ಯಾಧಿಕಾರ ಹಿಡಿಯುವುದೇ ಆಗಿದೆ. ಇದನ್ನು ಹೊರತುಪಡಿಸಿ ಇನ್ಯಾವ ಮಾರ್ಗದಿಂದಲೂ ಬಹುಜನರ ವಿಮೋಚನೆ ಅಸಾಧ್ಯ” ಎನ್ನುತ್ತಾರೆ. ಸಾಹೇಬರ ಈ ಸಂದೇಶಗಳನ್ನು ನಾವೆಷ್ಟು ಜನ ಅರಿತಿದ್ದೇವೆ? ಅನುಸರಿಸಿದ್ದೇವೆ? ಬರೀ ನಾವು ಬಾಬಾ ಸಾಹೇಬರ ಸಮುದಾಯದಲ್ಲಿ ಜನಿಸಿದ ಮಾತ್ರಕ್ಕೆ, ಬಾಬಾ ಸಾಹೇಬರ ಮಕ್ಕಳಾಗಲು ಸಾಧ್ಯವಿಲ್ಲ. ಅವರು ಹೇಳಿದಂತೆ, ಬದುಕಿ ಅವರ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅನುಸರಣೆಗೆ ತಂದು, ವ್ಯಕ್ತಿ ಪೂಜಿತರಾಗದೆ ವಿಚಾರಗಳಿಗೆ ತಲೆಬಾಗಿ ಬದುಕಿದರೆ ಮಾತ್ರ ನಾವು ಬಾಬಾ ಸಾಹೇಬರ ಮಕ್ಕಳಾಗಲು, ಅನುಯಾಯಿಗಳಾಗಲು ಸಾಧ್ಯ.

ನಾವೆಲ್ಲರೂ ಒಂದೇ ಮಾರ್ಗದಲ್ಲಿ ನಡೆಯಲು, ಬಾಬಾ ಸಾಹೇಬರನ್ನು ಅರ್ಥೈಸಿಕೊಳ್ಳಲು ಇನ್ನೆಷ್ಟು ವರ್ಷಗಳು ಬೇಕು? ಅವರು ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದವರು ಯಾರು? ನಾವೆಲ್ಲರೂ ಒಂದು, ನಾವು ಬಹುಜನ ಭಾರತದ ಬಂಧುಗಳು ಎನ್ನುವವರಿಗೆ ಯಾರು ಶತ್ರುವಾಗಿದ್ದಾರೆ? ನಾವು ಯಾರ ಮಾರ್ಗ ಅನುಸರಿಸಿ ನಮಗೆ ನಾವೇ ಶತ್ರುಗಳಾಗುತ್ತಿದ್ದೇವೆ ಎನ್ನುವ ಸತ್ಯ ಅರಿಯಬೇಕಾಗಿರುವುದು ಬಹಳ ಜರೂರಾಗಿದೆ.

ಇದೆಲ್ಲದರ ಮಧ್ಯದಲ್ಲಿ ಅಂಬೇಡ್ಕರವಾದ ಮುನ್ನಡೆಸುವವರು ಯಾರು ಎಂಬ ಗೊಂದಲಮಯ ವಾತಾವರಣ ನಮ್ಮಲ್ಲಿಯ ಸೃಷ್ಟಿಯಾಗುತ್ತಿದೆ. ಈ ಗೊಂದಲಕ್ಕೆ ಕಾರಣ ಬಹುಜನರಾದ ನಾವು ಒಗ್ಗಟ್ಟಿನಿಂದ ಅಂಬೇಡ್ಕರವಾದದ ಹಾದಿಯಲ್ಲಿ ನಡೆಯದೇ ಇರುವುದು. ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು ಜುಲೈ 31, 1956 ರಂದು ನಾನಕ್ ಚಂದು ರತ್ತು ಅವರೊಂದಿಗೆ, “ನಾನು ಭರವಸೆ ಇಟ್ಟಿದ್ದು ವಿದ್ಯಾರ್ಥಿಗಳು, ರಾಜಕಾರಣಿಗಳು, ನೌಕರರ ಮೇಲೆ. ಆದರೆ ಅವರು ನನಗೆ ಮೋಸ ಮಾಡಿದ್ದಾರೆ” ಎಂದಿರುವ ಸತ್ಯ ಇವತ್ತಿಗೂ ಪ್ರಸ್ತುತವೆನಿಸುತ್ತಿದೆ.

ಅಂದ ಹಾಗೆ ಇಂದು ನಾವು ಎಚ್ಚರವಾಗಿ ಸತ್ಯವನ್ನು ಅರಿತು, ಅಂಬೇಡ್ಕರ್ ವಾದವನ್ನು ಮುನ್ನಡೆಸಲು, ವಿದ್ಯಾರ್ಥಿಗಳು, ನೌಕರರು, ರಾಜಕಾರಣಿಗಳು ಸನ್ನದ್ಧರಾಗಬೇಕಿದೆ. ಬಾಬಾ ಸಾಹೇಬರ ಕನಸಿನ ಭಾರತ ಕಟ್ಟುವ ಮೂಲಕ, ಸಾಮಾಜಿಕ ಪರಿವರ್ತನಾ ಚಳವಳಿಯ ಮಹಾನ್ ಪುರುಷರ ಕನಸು ನನಸಾಗಿಸಬೇಕಿದೆ. ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಇನ್ನಾದರೂ ನಾವುಗಳು ನಮ್ಮ ನಮ್ಮ ನಡುವಿನ ವೈರುಧ್ಯಗಳನ್ನು ಬದಿಗಿಟ್ಟು, ಬಾಬಾಸಾಹೇಬರ ಮಾರ್ಗದಲ್ಲಿ ಬದುಕೋಣ.

pandita b madagunaki
ಪಂಡಿತ ಬಿ.ಮದಗುಣಕಿ
+ posts

ಲೇಖಕರು, ಕಲಬುರಗಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪಂಡಿತ ಬಿ.ಮದಗುಣಕಿ
ಪಂಡಿತ ಬಿ.ಮದಗುಣಕಿ
ಲೇಖಕರು, ಕಲಬುರಗಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X