ಶಿವಮೊಗ್ಗ ನಗರದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಇದೆ ಮೊದಲ ಬಾರಿಗೆ ಬೃಹತ್ ಸ್ವದೇಶಿ ಮೇಳ ಆಯೋಜಿಸಲಾಗಿದೆ. ಡಿ.6ರಿಂದ 10ರವರೆಗೆ ಈ ಮೇಳ ನಡೆಯಲಿದೆ. ಸ್ವದೇಶಿ ಜಾಗರಣ ಮಂಚ್ ದೇಶೀಯ ವಸ್ತುಗಳ ಪರಿಚಯ ಮತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲು ಈ ಮೇಳ ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.
ಡಿಸೆಂಬರ್ 6ರಂದು ಸಂಜೆ, 6.30ಕ್ಕೆ ಬೃಹತ್ ಮೇಳದ ಉದ್ಘಾಟನೆಯನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಭಾಗವಹಿಸುವರು. ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ.
ಈ ಮೇಳದಲ್ಲಿ 250ಕ್ಕೂ ಹೆಚ್ಚು ಸ್ವದೇಶಿ ಮಳಿಗೆಗಳು ಭಾಗವಹಿಸಲಿವೆ. ವೈವಿಧ್ಯಮಯ ದೇಶೀಯ ಆಹಾರಗಳು, ದೇಶೀಯ ಕ್ರೀಡೆಗಳು, ಜಾನಪದ ಕಲಾ ವೈಭವ, ಯಕ್ಷಗಾನ, ಬಾನ್ಸುರಿ ವಾದನ, ನೃತ್ಯ ರೂಪಕ, ಜಾದೂ ಪ್ರದರ್ಶನ ಸೇರಿದಂತೆ 16 ಕ್ಕೂ ಹೆಚ್ಚು ಶಿಬಿರ ಹಾಗೂ ತರಬೇತಿ ಕಾರ್ಯಾಗಾರಗಳು ನಡೆಯಲಿವೆ.
ಡಿಸೆಂಬರ್ 6ರ ರಾತ್ರಿ 8.30ಕ್ಕೆ ಜಾನಪದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭದ್ರಾವತಿ ತಾಲೂಕು ಎಮ್ಮೆಹಟ್ಟಿಯ ಶ್ರೀ ಗಜಾನನ ಡೊಳ್ಳು ಮತ್ತು ಸಾಂಸ್ಕೃತಿಕ ಕಲಾ ತಂಡ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾನಪದ ಕಲಾ ತಂಡ, ವೀರಭದ್ರ ಕುಣಿತ ಮತ್ತು ವೀರಗಾಸೆ ಪ್ರದರ್ಶನ ಮಾಡಲಿದೆ.
ಆಹಾರ ಪ್ರಿಯರಿಗಾಗಿ ವಿವಿಧ ಖಾದ್ಯ ಸವಿಯಲು ಅವಕಾಶವಿದೆ. ಮೇಲುಕೋಟೆ ಪುಳಿಯೋಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿಯ ಗಿರಮಿಟ್, ಸಿರಿಧಾನ್ಯಗಳ ರೊಟ್ಟಿ (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿ ಹೀಗೆ ನೂರಾರು ರೀತಿಯ ತರೇವಾರಿ ಆಹಾರ ಪದಾರ್ಥ, ತಿಂಡಿ, ತಿನಿಸು ಲಭ್ಯವಿದೆ.