ಕಸದಲ್ಲಿ ಮೀನಿನ ಮಾರುಕಟ್ಟೆಯೋ ಅಥವಾ ಮಾರುಕಟ್ಟೆಯಲ್ಲಿ ಕಸವೋ ಎಂದು ಅರ್ಥವಾಗದ ಸ್ಥಿತಿಯಲ್ಲಿದೆ ಹಟ್ಟಿ ಚಿನ್ನದ ಗಣಿಯ ಮೀನು ಮಾರುಕಟ್ಟೆ. ಮಳಿಗೆಗಳು, ಶೌಚಾಲಯಗಳೆಲ್ಲವೂ ಶಿಥಿಲಗೊಂಡಿವೆ. ಗಬ್ಬೆದ್ದು ನಾರುತ್ತಿವೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಹಟ್ಟಿ ಚಿನ್ನದ ಗಣಿ ಇದೆ. ಭಾರತದಲ್ಲಿಯೇ ಚಿನ್ನ ದೊರೆಯುವ ಪ್ರಮುಖ ಪ್ರದೇಶವಿದು. ಚಿನ್ನ ದೊರೆಯುವ ಊರಿನಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಮೀನು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ, ಬಳಕೆಗೆ ಯೋಗ್ಯವಿಲ್ಲದ ರೀತಿಯಲ್ಲಿ ಹಾಕು ಬಿದ್ದಿವೆ.
ಹಟ್ಟಿಯ ಮೀನು ಮಾರುಕಟ್ಟೆ ಮಾತ್ರವಲ್ಲದೆ, ತರಕಾರಿ ಮಾರುಕಟ್ಟೆ, ಮಳಿಗೆಗಳು ಹಾಗೂ ಸಾರ್ವಜನಿಕ ಶೌಚಾಲಯ ಹಾಗೂ ದಾರುವಾಲ್ ಕ್ರೀಡಾಂಗಣ ಮೈದಾನದ ಸುತ್ತಮುತ್ತಲೂ ಅನೈರ್ಮಲ್ಯ ಎದ್ದುಕಾಣುತ್ತಿದೆ.
ಮೀನು ಮಾರುಕಟ್ಟೆಯಲ್ಲಿ 2009-10ರಲ್ಲಿ ಹಲವಾರು ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಹೆಚ್ಚಿನ ಮಳಿಗೆಗಳನ್ನು ಸುಮಾರು ವರ್ಷಗಳ ಕಾಲ ಬಳಸದೆ ಕಸದ ಗೂಡುಗೆ ಪರಿವರ್ತನೆಯಾಗಿವೆ. ನಾಯಿ, ಹಂದಿಗಳ ವಾಸ ತಾಣವಾಗಿವೆ. ಚಿನ್ನದ ಗಣಿ ಕಂಪನಿ ಆಡಳಿತ ಟೆಂಡರ್ ಕರೆದರೂ ಆ ಮಳಿಗೆಗಳು ಈಗ ಬಳಸುವ ಸ್ಥಿತಿಯಲ್ಲಿಲ್ಲ. ಅಲ್ಲಲ್ಲಿ ಬಿರುಕು ಬಿಟ್ಟು, ಬೀಳುವ ಪರಿಸ್ಥಿತಿಯಿದೆ. ಈಗ ಅವುಗಳು ಬಳಕೆಗೆ ಯೋಗ್ಯವಲ್ಲ ಎನ್ನುತ್ತಾರೆ ಸ್ಥಳೀಯರು.
ಹಟ್ಟಿಯ ದಾರುವಲ್ ಕ್ರೀಡಾಂಗಣ ಮೈದಾನವು ಜಿಲ್ಲೆಯ ಪ್ರಮುಖ ಮೈದಾನಗಳಲ್ಲಿ ಒಂದು. ಆಗಾಗ್ಗೆ ಇಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್ ನಡೆಸುತ್ತದೆ. ನಾನಾ ಜಿಲ್ಲೆಗಳ ಕ್ರಿಡಾಪಟುಗಳು ಟೂರ್ನಮೆಂಟ್‌ಗೆ ಬರುತ್ತಾರೆ. ಅವರಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲದಂತಾಗಿದೆ. ಕಲ್ಯಾಣ್ ಮಂಟಪ, ಪದವಿ ಪೂರ್ವ ಕಾಲೇಜುಗಳಲ್ಲಿರು ಶೌಚಾಲಯಗಳನ್ನು ಬಳಸುವ ದುಃಸ್ಥಿತಿ ಇದೆ.
ಹಟ್ಟಿಯಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಯುವ ಹೋರಾಟಗಾರ ಲಾಲ್ ಪೀರ್, “ಚಿನ್ನದ ಗಣಿ ನಾಡಿನಲ್ಲಿ ಮೀನು ಮಾರುಕಟ್ಟೆ, ಮಳಿಗೆಗಳು ಶೌಚಾಲಯ ವ್ಯವಸ್ಥೆ ನೋಡಿದರೆ ಅಸಹ್ಯವಾಗುವ ರೀತಿಯಲ್ಲಿದೆ. ಅಧಿಕಾರಿಗಳು, ಗುತ್ತಿಗೆದಾರರು ಹೆಸರಿಗೆ ಮಾತ್ರ ಕಟ್ಟಡ ನಿರ್ಮಾಣ ಮಾಡಿ, ಬಿಲ್ ಮಾಡಿಕೊಂಡು ಜೇಜು ತುಂಬಿಸಿಕೊಂಡಿದ್ದಾರೆಯೇ ಎಂಬ ಅನುಮಾನಗಳಿವೆ” ಎಂದು ಹೇಳಿದ್ದಾರೆ.
“ಕಂಪನಿ ದುಡ್ಡು ಯಾರ ಅಪ್ಪನ ಆಸ್ತಿ ಅಲ್ಲ. ಇದು ಎಲ್ಲರ ಆಸ್ತಿ. ಮೀನು ಮಾರುಕಟ್ಟೆ ನಿರ್ಮಿಸಿ ಸುಮಾರು 15 ವರ್ಷ ಕಳೆದರೂ ಇಲಾಖೆಯವರು ಗಮನಿಸಿಲ್ಲ. ಕಂಪನಿ ಆಡಳಿತ ಬೇಕಾಬಿಟ್ಟಿ ಕರ್ತವ್ಯ ನಿರ್ವಹಿಸುತ್ತಿರುವುದು ಎದ್ದು ಕಾಣುತ್ತಿದೆ” ಎಂದಿದ್ದಾರೆ.
“ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕರು ಧ್ವಜಾರೋಹಣಕ್ಕೆ, ಸಭೆಗಳಿಗೆ ಮಾತ್ರ ಈಕಡೆ ಬರುತ್ತಾರೆ. ಉಳಿದ ಸಮಯಗಳಲ್ಲಿ ಅವರ ಸುಳಿವೇ ಇರುವುದಿಲ್ಲ. ಇಲ್ಲಿ ಮೂಲಭೂತ ಸೌಕರ್ಯ ಬಗ್ಗೆ ಯಾರಿಗೆ ಕೇಳಬೇಕೆಂಬ ಗೊಂದಲ ಸಾರ್ವಜನಿಕರಲ್ಲಿದೆ” ಎಂದು ತಿಳಿಸಿದ್ದಾರೆ.
“ಇಲ್ಲಿನ ಸಮಸ್ಯೆಗಳ ಬಗ್ಗೆ ಕೆಲವು ಅಧಿಕಾರಿಗಳ ಮನಕ್ಕಿದ್ದರೂ, ಅವರು ಮೇಲಾಧಿಕಾರಿಗಳ ಗಮನಕ್ಕೆ ತರುವುದಿಲ್ಲ. ಬೇಜವಾಬ್ದಾರಿ ಧೋರಣೆ ಹೊಂದಿರುವ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಳು ಬಿದ್ದಿರುವ ಕಟ್ಟಡಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, “ಹಟ್ಟಿ ಚಿನ್ನದ ಗಣಿಯು ಲೂಟಿಕೋರರ ಬೀಡಾಗಿದೆ. ಇಲ್ಲಿ ಸಾಕಷ್ಟು ಹಣ ಖರ್ಚು ವೆಚ್ಚು ಮಾಡಿ ಕಟ್ಟಡಗಳನ್ನು ನಿರ್ಮಿಸಿದ್ದರೂ, ಅವುಗಳು ಈವರೆಗೆ ಉದ್ಘಾಟನೆಯಾಗಿಲ್ಲ. ಟೆಂಡರ್ ಕರೆಯದ ಕಾರಣ, ಮಳಿಗೆಗಳು ಹಾಳು ಬಿದ್ದಿವೆ. ಸಂತೆಯ ದಿನ ರಸ್ತೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತವೆ. ಕೆಲವೊಮ್ಮೆ ಜನ ದಟ್ಟಣೆಯಿಂದ ವಾಹನ ಚಾಲಕರು ಮತ್ತು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯುತ್ತವೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದ್ದಾರೆ.